ಹುಲಿಮುನಿಸು

ಅವಳದ್ದು
ಚಂದ್ರ ಮುಖ,
ಕೂಡುವಾಗಂತೂ
ಹುಲಿಮುನಿಸು;
ಬಣ್ಣಕ್ಕೆ ಬಣ್ಣ ಸೇರಿಸಿ
ಬಿಡಿಸಿದ ಚಿತ್ರಗಳಲ್ಲೆಲ್ಲಾ
ನೀಲಿ ಮೀನುಗಳ ಹರಿದಾಟ

ಚಳಿಗಾಲದ ತೋಟದಲ್ಲಿ
ಕಟ್ಟಿದ ಗುಬ್ಬಚ್ಚಿ ಗೂಡಿಗೆ
ಸೂರ್ಯನಿಲ್ಲ,
ಕೆಂಪು ನಕ್ಷತ್ರಗಳೆಲ್ಲಾ
ಉಜ್ಜಿ ತೀಡಿ ತೆಗೆದ
ಎಣ್ಣೆಯಲ್ಲಿ ಮಿಂಚು
ಹುಳುಗಳು ದೀಪ ಹಚ್ಚುತಿವೆ

ಗೆರೆ ಎಳೆದು
ಪದ ಬರೆದು
ಬೊಬ್ಬೆ ಹೊಡೆದು
ಸಿಕ್ಕ ನಿಲ್ದಾಣವೆಲ್ಲಾ
ತೊಯ್ದು ಒದ್ದೆಯಾಗಿದ್ದವು

ಮೈಯಿ ಮೆದುಳನ್ನು
ಆವರಿಸುವ ಮಳೆ
ಮೋಡಗಳು,
ಜೋತುಹೋಗಿ ಹೇಳುತ್ತವೆ
ರಸ ಸಿದ್ಧಾಂತದ ಪಾಠ

ಇನ್ನೂ ಕನಸುಗಳಿಗೆ
ಕಿಟಕಿ ತೊಡಿಸಿದ
ದಾರಿಯಲ್ಲಿ ನಿಂತ ಒಂಟಿ
ಕಂಬದ ಇರುವೆಗೆ ಸಮುದ್ರ
ಸುತ್ತುವಾಗ ಸಿಕ್ಕಿದ್ದೆಲ್ಲವೂ
ಸೀಗಡಿ, ಕಪ್ಪೆ ಚಿಪ್ಪುಗಳಷ್ಟೆ:

ಮಹಾಂತೇಶ್ ಆಧುನಿಕ್ ಆನೇಕಲ್ ನ ಹಾರಗದ್ದೆಯವರು. ಈಗ ಬೆಂಗಳೂರು ನಗರ ವಾಸಿ.
ಈಗಷ್ಟೆ ಕನ್ನಡ ಎಂ ಎ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದಾರೆ.
ಪದ್ಯ ರಚನೆ ಮತ್ತು ವಾಚನ, ಫೊಟೊಗ್ರಫಿ, ಚಾರಣ ಮತ್ತು ಚರ್ಚೆ ಇವರ ಹವ್ಯಾಸಗಳು