ಕರವಸ್ತ್ರದ ಅನನ್ಯತೆ ತಿಳಿಯುವುದು ಹಿಂದಿನ ಸಂಕಲನಗಳಲ್ಲಿನ ಭಾಷೆ-ಬಂಧ-ಪ್ರತಿಮೆಗಳಲ್ಲಿಂದ ಬಿಡುಗಡೆ ಹೊಂದದೆ ಇಂದಿಗೆ ತೆರೆದುಕೊಂಡಿರುವ ತೀವ್ರವಾದ ಭಾವದ ಅಭಿವ್ಯಕ್ತಿಯ ಸ್ಥಿತಿಗೆ ಬಾಯಾಗುವ ಹಂಬಲದಿಂದ. ಎಲ್ಲ ಕಾವ್ಯಗಳೂ ತೀವ್ರವಾದ ಭಾವದ ಅಭಿವ್ಯಕ್ತಿಗೆ ತುಡಿಯುತ್ತಿದ್ದರೂ ಒಂದು ಸಂಕಲನದಿಂದ ಮತ್ತೊಂದು ಸಂಕಲನಕ್ಕೆ ಬೆಳೆದಿರುವ ಇವರ ಕಟ್ಟುವಿಕೆಯಿಂದ. ಈ ಬಹುದೊಡ್ಡ ಪಲ್ಲಟ ಆಗಿರುವುದಕ್ಕೆ ‘ಅಲೆ ತಾಕಿದರೆ ದಡ’ಕ್ಕಿಂತ ಹಿಂದೆ ಬಿಡುಗಡೆ ಆಗಿರುವ “ವಿರಕ್ತರ ಬಟ್ಟೆಗಳು” ಸಂಕಲನದ ಕೊನೆಯ ಕಾವ್ಯ “ಸಂತೆ ಬಯಲಿನ ಹಾಡು” ಇಂದ ಎಂದು ನನ್ನ ಗ್ರಹಿಕೆ.
ವಾಸುದೇವ ನಾಡಿಗ್ ಅವರ “ಅವನ ಕರವಸ್ತ್ರ” ಕವನ ಸಂಕಲನಕ್ಕೆ ಆರ್ .ದಿಲೀಪ್ ಕುಮಾರ್ ಬರೆದ ಮುನ್ನುಡಿ
ಕನ್ನಡ ಕಾವ್ಯಪರಂಪರೆ ಕಾಲದಿಂದ ಕಾಲಕ್ಕೆ ಶಕ್ತಿತ್ರಯಗಳಿಗೆ ಸಿಕ್ಕು ಇತ್ಯಾತ್ಮಕ ನೇತ್ಯಾತ್ಮಕವಾಗಿ ಪ್ರತಿಸ್ಪಂದಿಸುತ್ತಲೇ ಬಹುದೊಡ್ಡ ಪಲ್ಲಟ ಘಟಿಸಿದೆ. ಕಾವ್ಯ ಪ್ರಕಾರದಲ್ಲಿನ ಭಾಷೆ, ಬಂಧ, ಸತ್ವದ, ಅನಾವರಣದ, ಅಭಿವ್ಯಕ್ತಿಯ ಮಟ್ಟದಲ್ಲಿಯಂತೂ ಇದು ಸಾಕ್ಷಿಯಾಗಿ ನಿಂತಿರುವುದು ಸಾಹಿತ್ಯದ ಓದುಗನಿಗೆ ತಿಳಿದಿರುವುದೇ ಆಗಿದೆ. 1991ರ ನಂತರದ ನವ್ಯೋತ್ತರ ಕಾಲಘಟ್ಟವಂತೂ ಅತೀಸಂಕೀರ್ಣವಾದ ಸಂವೇದನೆಗಳ ಮಹಾಪೂರವಾಗಿದೆ.
ಕಾಲವೊಂದರಲ್ಲಿ ನಿಂತು ಸೂಕ್ಷ್ಮ ಕುಸುರಿ ಕೆಲಸದಿಂದ ಅತೀ ಸಶಕ್ತವಾಗಿ ನಡೆದು ತೊಡಗಿಕೊಂಡೇ ಕಾಲಾತೀತವಾಗಿ ನಿಂತು ಮಾತನಾಡಿಸುವ ಹಿಂದಿನ ಕಾವ್ಯಗಳೊಂದಿಗೆ ತಮ್ಮನ್ನು ಕಾವ್ಯಗಳ ಮೂಲಕ ಸೇರಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯ ಕಾಲಘಟ್ಟವಿದು. ಈ ಮಹತ್ವಾಕಾಂಕ್ಷೆಯ ಸಿದ್ದಿಯ ಹಿಂದೆ ಸಾಧನೆಯ ದಾರಿ ಕಡಿದಾದದ್ದೆಂದು ಮತ್ತು ಕೇವಲ ಓದು-ಬರಹಗಳಿಂದ ಮಾತ್ರ ಸಾಧ್ಯವಾಗದೆ ಅದಾಗದೇ ಘಟಿಸುವಲ್ಲಿ ಪ್ರತಿಭೆಯ ಮತ್ತು ನೈತಿಕ ಕೆಡುಕನ್ನು ಗುರುತಿಸಿ ಹೊರಹಾಕುವಲ್ಲಿ ಮನುಷ್ಯನ ಪ್ರಜ್ಞೆಯ ಪಾತ್ರ ಕಾರ್ಯ ಮಹತ್ತರವಾದದ್ದು. ಅದರ ಸಾಕಾರಕ್ಕೆ ಹಾದಿ ಪೂರ್ವಸೂರಿಗಳ ಕಾವ್ಯದೊಂದಿಗಿನ ಅನುಸಂಧಾನದಂತೆ ಸದ್ಯದಲ್ಲಿ ಜೀವಂತವಾಗಿರುವುದು ಭೂಮಿ ಕಣ್ಣು-ಮಣ್ಣುಗಳಲ್ಲಿ ನಿರಂತರವಾಗಿ ನೆಟ್ಟ ದೃಷ್ಟಿಯಿಂದ ಕಾವ್ಯ ಸೃಷ್ಟಿಯ ಸಾಧ್ಯತೆಯಿದೆ.
ಸಮಕಾಲೀನ ಕನ್ನಡ ಸಾಹಿತ್ಯದ ಕಾವ್ಯಕಥೆ ಪ್ರಕಾರಗಳೆರಡರಲ್ಲೂ ಪ್ರತಿಭಾವಂತ ಎನಿಸಿಕೊಂಡಿರುವ ಹಾಗೇ ಯುವ ತಲೆಮಾರಿನ ತಲ್ಲಣಗಳಿಗೆ ಸ್ಪಂದಿಸುತ್ತಿರುವವರಲ್ಲಿ ಶ್ರೀವಾಸುದೇವ ನಾಡಿಗರೂ ಪ್ರಮುಖರು. ಕಾವ್ಯದಿಂದಲೇ ಜೀವಂತಿಕೆಯ ಇರುವನ್ನು ಸ್ಥಾಪಿಸಿರುವ ಎಲ್ಲವನೂ ಕಾವ್ಯವಾಗಿಸುವ ಮಹತ್ವಾಕಾಂಕ್ಷೆಯ ಕವಿ. ಹಿಂದಿನ ನವೋದಯ – ನವ್ಯ ಚಳವಳಿಯ ಕಾವ್ಯದ ಮಾದರಿ-ಸಾಧ್ಯತೆಯನ್ನು ನೋಡಿ ಅದರೊಂದಿಗೆ ಅನುಸಂಧಾನ ಮಾಡುತ್ತಲೇ ಮತ್ತೊಂದು ಪರ್ಯಾಯ ದಾರಿಯನ್ನು ಕಾವ್ಯದ ಮೂಲಕ ಹುಡುಕುತ್ತಿರುವವರು. ನವೋದಯದಲ್ಲಿನ ಸೂಕ್ಷ್ಮತೆ, ಅಡಿಗರಲ್ಲಿನ ಪ್ರತಿಮೆ ಮತ್ತು ನೆಲಕ್ಕೆ ನೆಟ್ಟ ಕಣ್ಣು ಇವರ ಕಾವ್ಯಕ್ಕೆ ಪ್ರಭಾವಬೀರಿದೆ. ಮತ್ತಿದಕ್ಕೆ ಇವರ ಕಾವ್ಯಗಳೇ ಸಾಕ್ಷಿಯಾಗಿದೆ.
ಕಾವ್ಯದಲ್ಲಿ ಜೀವಂತಿಕೆಯ ಇರುವು ಸಾಕಾರಗೊಳ್ಳುವುದು ಕವಿಯೊಬ್ಬ ಸದ್ಯ ಶಾಶ್ವತಕ್ಕೆ ಬಾಯಾಗಿ ಮಾತಾಡುತ್ತಲೇ ತನ್ನೊಂದಿಗೆ ಎಲ್ಲವನೂ ಎಲ್ಲರನೂ ಕರೆದುಕೊಂಡು ಹೋಗುವುದರಿಂದ. ಸದ್ಯದ ಅಲೆಗಳು ಧಡಕ್ಕೆ ಹೊತ್ತೊಯ್ಯುತ್ತಿದ್ದರೂ ಅನಂತದ ಕಡೆಗಿನ ಚಲನೆಯ ಹಂಬಲ ಪ್ರತಿಕ್ಷಣದ ನೌಕಾಯಾನವನ್ನು ಕ್ರಿಯಾಶೀಲ-ಸೃಜನಶೀಲವಾಗಿಡುವಲ್ಲಿ ತೊಡಗಿಸುತ್ತದೆ. ಈ ತೊಡಗುವಿಕೆ ಕಾವ್ಯದ ಆವಿರ್ಭಾವಕ್ಕೆ ಕಾರಣವಾದಂತೆ ಸಮುದ್ರಯಾನದ ನೌಕೆಯ ಚಲನೆಗೆ ಕಾರಣವಾದ ಅಲೆಗಳಂತೆ ಕಾವ್ಯ ನಿತ್ಯವಿನೂತನವೂ ಹೌದು.
ಈ ನಿತ್ಯ ಸತ್ಯದ ದಾರಿಯ ಪಯಣದಲ್ಲಿ ಹಲವಾರು ಸೃಜನಶೀಲ ಪ್ರತಿಭೆಗಳು ಇಂದಿಗೆ ಕಾರ್ಯೋನ್ಮುಖವಾಗಿದ್ದರೂ ಅದರ ಸಾಕಾರ ಯಶಸ್ವಿಯ ಚಿಹ್ನೆಗಳು ಓದುಗನಲ್ಲಿರುವ ಎದೆನೆಲದ ಪಸೆಯಲ್ಲಿ ಗರಿಕೆಚಿಗುರಿದಾಗಲೇ. ಅಂತಹ ಕಾರ್ಯಮಾಡುತ್ತಿರುವವರಲ್ಲಿ ಇವರೂ ಒಬ್ಬರು. ಹೊರ ನಾಡಿಗರಾಗಿ ಕಳೆದ ಕಾಲದಲ್ಲಿ ಜೊತೆಗಿದ್ದುದು ತಮ್ಮ ವೃತ್ತಿಯೊಂದಿಗೆ ಅಕ್ಷರಗಳ ಸಾಸತ್ಯದ ಮತ್ತು ಎನ್ನುವುದು ಹತ್ತಿರದಿಂದ ಬಲ್ಲ ಎಲ್ಲರಿಗೂ ತಿಳಿದೇ ಇದೆ. ಪ್ರತಿಸಾಲುಗಳಲ್ಲಿಯೂ ಸಿಕ್ಕಿರುವುದು ಮತ್ತೂ ಸೂಜಿಗವೇ ಸರಿ.
ಸಹಜವಾಗಿ ಪ್ರಾರಂಭವಾಗುವ ಕಾವ್ಯ ಕೊನೆಯಲ್ಲಿ ಧುತ್ತೆಂದು ಘಟಿಸುವ ಕಾವ್ಯ ತೆರೆದು ತೋರುವ ಹಾದಿ ಪರಂಪರೆಯನ್ನು ನೆನಪಿಸುತ್ತಲೇ ನಡೆದ ನೆಲವನ್ನು ನೆನಪಿಸುವ ಕಾರ್ಯ ಅದ್ಭುತವೆನಿಸುತ್ತದೆ. ವ್ಯಕ್ತಿಗತವಾಗಿ ಕಂಡುಕೊಂಡ ಸತ್ಯಕ್ಕೆ ನಿಷ್ಟವಾಗಿ ಅಭಿವ್ಯಕ್ತಿಗೆ ತರುವಾಗಿನ ಮಾರ್ಗ ಕಡಿದಾದರೂ ಶ್ರಮ ಬೇಡುವಂತಹದ್ದು. ಅದರಲ್ಲಿ ಯಶಸ್ವಿಯ ನಡಿಗೆಯಲ್ಲಿದ್ದಾರೆನ್ನುವುದಕ್ಕೆ ಈ ಸಂಕಲನವೇ ಸಾಕ್ಷಿ. ತನ್ನನ್ನು ಅಲ್ಲೆ ಗುರುತಿಸಿಕೊಳ್ಳುತ್ತಲೇ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಕೇವಲ ಬಾಯಾರಿಕೆಯ ಬಾಟಲಿ ನೀರಾಗಿರದೆ ಕಾವ್ಯ ಎಲ್ಲವನು ತೊಳೆದು ಕಳೆವ ಗಂಗೆಯಾದಾಗ ಜೀವದ ನಿರಂತ ಯಾನದ ಹಸಿವೆಯ ಇಂಗಿಸುತ್ತದೆ.
ಕಾವ್ಯದಲ್ಲಿ ಭಾಷೆಯ ಬಳಕೆ ಮುಖ್ಯವಾದ ಅಭಿವ್ಯಕ್ತಿಯ ಅಂಶ. ಇವುಗಳಲ್ಲಿ ಒಂದು ಕಾಲಘಟ್ಟದ, ಮನಸ್ಥಿತಿಯ, ಅಭಿವ್ಯಕ್ತಿಯ ಉದ್ದೇಶದಿಂದ ಬಳಕೆಯಾಗಿದೆ. ಪೂರ್ಣದೃಷ್ಟಿಯೆಂದು ಹೇಳಲು ಸಾಧ್ಯವಿಲ್ಲದೇಹೋದರೂ ತಕ್ಷಣದ ಸಣ್ಣ ಅನುಭವವನ್ನೂ ಪ್ರವಾಹದೋಪಾದಿಯ ಜೀವನದ ಮುಂದೆ ಮುಖ್ಯ-ಅಮುಖ್ಯವೆಂದು ಪರಿಗಣಿಸದೆ ಒಂದು ಔಚಿತ್ಯದಲ್ಲಿ ಓದುಗರ ಮುಂದೆ ಹಿಡಿದಿಡುವಾಗ ಭಾಷೆಯಲ್ಲಿನ ಹೊಸತನ, ತೀವ್ರತೆಗೆ ಸಹಕಾರಿಯಾಗುವ ಪದಗಳನ್ನು ಕಡೆದು ನಿಲ್ಲಿಸುವ ಕ್ರಿಯೆಯಲ್ಲಿನ ಭಾಷೆಯ ಸಾಧ್ಯತೆ ಮರು ಓದನ್ನು ಕೇಳುತ್ತಲೇ ಶಾಶ್ವತವಾಗುವ ದಾರಿಯನ್ನ ಹಿಡಿದಿದೆ. ಎಲ್ಲಾ ಕಾಲದಲ್ಲಿಯೂ ತನ್ನಿರುವಿಕೆಯನ್ನ ಸಾಧಿಸುವಲ್ಲಿ ಕೆಲಸ ಮಾಡಿರುವ ಪ್ರಜ್ಞೆಯ ಬಗೆಗೆ ನಿಜವಾಗಿ ಬೆರಗಾಗಿಸುತ್ತಲೇ ಅನುಮಾನವನ್ನೂ ಮೂಡಿಸುತ್ತದೆ. ಇಲ್ಲಿನ ಕಾವ್ಯಗಳು ಬದುಕಿನ ಕೆಲವು ಘಟನೆಗಳನ್ನು ಪರಿಶೀಲಿಸಿ ನೋಡಿಕೊಳ್ಳುವ ಕ್ರಿಯೆಗೆ ತೆರೆದುಕೊಳ್ಳುವ ಕಿಟಕಿಯಂತೆ ಕೆಲಸ ಮಾಡುತ್ತಿವೆ. ಇದು ಪೂರ್ಣವೂ ಹೌದು-ಖಂಡವೂ ಹೌದು. ಹೀಗೆ ಸದ್ಯ ಶಾಶ್ವತಕ್ಕೆ ಬಾಯಾಗುವಲ್ಲಿ ಕವಿಯಲ್ಲಿನ ಕಸುಬುದಾರಿಕೆ ಕಲಾಕುಸುರಿತನಗಳು ನವೀನತೆಯಿಂದ ಕೂಡಿದೆ. ಈ ಕಾಲ ಮತ್ತು ಮನಸ್ಥತಿಯ ಮಿತಿಗೆ ಒಳಪಟ್ಟು ನಿಲುಗಡೆಯನ್ನು ಬಯಸುತ್ತಲೇ ಸೂಕ್ಷ್ಮವಾಗಿ ಓದುಗರಿಗೆ-ವಿಮರ್ಶಕನಿಗೆ ಸವಾಲೆಸೆಯುವ ಗುಣವೂ ಇವುಗಳಲ್ಲಿದೆ. ಸದ್ಯದ ಸಂಚಲನದಲ್ಲಿ ಮುಕ್ತತೆಯ ಹೆಸರಿನಲ್ಲಿ ನಡೆಯುತ್ತಿರುವ ಅಶ್ಲೀಲ-ಹೊಲಸುಗಳ ನಡುವೆ ಇದು ಉತ್ತಮವಾದ ಜೀವಪರವಾದ ಕಾಳಜಿಯಿಂದಲೂ, ಹಿಂದಿನ ಪರಂಪರೆಯ ನಡೆಯ ಬಗೆಗೆ ಪ್ರೀತಿಯೊಂದಿಗೆ ಅನುಮಾನವನ್ನು ಇಟ್ಟುಕೊಂಡು ಅರಸುತ್ತಾ ಗಮಿಸುತ್ತಿರುವ ಕಾವ್ಯಗಳಾಗಿದೆ.
ಹಿಂದಿನ ನವೋದಯ – ನವ್ಯ ಚಳವಳಿಯ ಕಾವ್ಯದ ಮಾದರಿ-ಸಾಧ್ಯತೆಯನ್ನು ನೋಡಿ ಅದರೊಂದಿಗೆ ಅನುಸಂಧಾನ ಮಾಡುತ್ತಲೇ ಮತ್ತೊಂದು ಪರ್ಯಾಯ ದಾರಿಯನ್ನು ಕಾವ್ಯದ ಮೂಲಕ ಹುಡುಕುತ್ತಿರುವವರು. ನವೋದಯದಲ್ಲಿನ ಸೂಕ್ಷ್ಮತೆ, ಅಡಿಗರಲ್ಲಿನ ಪ್ರತಿಮೆ ಮತ್ತು ನೆಲಕ್ಕೆ ನೆಟ್ಟ ಕಣ್ಣು ಇವರ ಕಾವ್ಯಕ್ಕೆ ಪ್ರಭಾವಬೀರಿದೆ. ಮತ್ತಿದಕ್ಕೆ ಇವರ ಕಾವ್ಯಗಳೇ ಸಾಕ್ಷಿಯಾಗಿದೆ.
ವಾಸ್ತವದ ಹೊಲಸಿನಿಂದ ಬಿಡುಗಡೆ ಬಯಸಿರುವವರು ಇಲ್ಲಿ ನೆಲೆ ಕಾಣುವ ಸಾಧ್ಯತೆ ಇದ್ದೇಇದೆ. ಹಾಗೆಂದ ಮಾತ್ರಕ್ಕೆ ಇಲ್ಲಿ ಸಮಸ್ಯೆಗಳೇ ಇಲ್ಲವೆಂದಲ್ಲ; ಹೊಸ ಹೊಸ ಪದಗಳನ್ನು ಕಾವ್ಯದಲ್ಲಿ ಬಳಸಿದಾಗ ತೆರೆವ ದಾರಿ ಕೆಲವೊಮ್ಮೆ ಬೆರಗಾದಂತೆ ಅನುಮಾನವನ್ನೂ ಹುಟ್ಟು ಹಾಕುತ್ತದೆ. ಸತ್ವದೊಂದಿಗೆ ಆ ಪದಗಳು ಕೂಡುವಾಗಿನ ಸಮಯದಲ್ಲಿ ಕೆಲಸ ಮಾಡುವ ಕಟ್ಟುವ ಪ್ರಜ್ಞೆ ಅನುಮಾನಗಳಿಂದ ಬಿಡುಗಡೆಗೆ ಜೀವನಾನುಭವದ ಪರಿಧಿಯನ್ನು ಓದುಗ ಗ್ರಹಿಸುತ್ತಲೇ ಕಾವ್ಯದೊಂದಿಗಿನ ಅನುಸಂಧಾನಕ್ಕೆ ತಯಾರಾದಲ್ಲಿ ಇದು ಸರಳವಾಗಿ ದೊಡ್ಡ ತತ್ವವನ್ನು ನಮ್ಮ ಮುಂದೆ ಇಡುತ್ತದೆ. ನಾವೀನ್ಯತೆ-ಕುತೂಹಲ-ಮಾರ್ದವತೆ-ಓದುಗನೊಂದಿಗೆ ಸಂಬಂಧ ಬೆಸೆಯುವಲ್ಲಿ ಪ್ರಮುಖ ಪಾತ್ರ ಭಾಷೆಯ ಮೂಲಕವೇ ವಹಿಸುತ್ತಿದೆ.
ಕರವಸ್ತ್ರದ ಅನನ್ಯತೆ ತಿಳಿಯುವುದು ಹಿಂದಿನ ಸಂಕಲನಗಳಲ್ಲಿನ ಭಾಷೆ-ಬಂಧ-ಪ್ರತಿಮೆಗಳಲ್ಲಿಂದ ಬಿಡುಗಡೆ ಹೊಂದದೆ ಇಂದಿಗೆ ತೆರೆದುಕೊಂಡಿರುವ ತೀವ್ರವಾದ ಭಾವದ ಅಭಿವ್ಯಕ್ತಿಯ ಸ್ಥಿತಿಗೆ ಬಾಯಾಗುವ ಹಂಬಲದಿಂದ. ಎಲ್ಲ ಕಾವ್ಯಗಳೂ ತೀವ್ರವಾದ ಭಾವದ ಅಭಿವ್ಯಕ್ತಿಗೆ ತುಡಿಯುತ್ತಿದ್ದರೂ ಒಂದು ಸಂಕಲನದಿಂದ ಮತ್ತೊಂದು ಸಂಕಲನಕ್ಕೆ ಬೆಳೆದಿರುವ ಇವರ ಕಟ್ಟುವಿಕೆಯಿಂದ. ಈ ಬಹುದೊಡ್ಡ ಪಲ್ಲಟ ಆಗಿರುವುದಕ್ಕೆ ‘ಅಲೆ ತಾಕಿದರೆ ದಡ’ಕ್ಕಿಂತ ಹಿಂದೆ ಬಿಡುಗಡೆ ಆಗಿರುವ “ವಿರಕ್ತರ ಬಟ್ಟೆಗಳು” ಸಂಕಲನದ ಕೊನೆಯ ಕಾವ್ಯ “ಸಂತೆ ಬಯಲಿನ ಹಾಡು” ಇಂದ ಎಂದು ನನ್ನ ಗ್ರಹಿಕೆ. ಅಲ್ಲಿಯವರೆವಿಗೂ ಇದ್ದ ಅಭಿವ್ಯಕ್ತಿಯ ಕ್ರಮ ಅದರ ಪೋಷಕ ಅಂಶಗಳು ಅಲ್ಲಿಂದ ಮುಂದಕ್ಕೆ ಚಲನಶೀಲವಾಗಿದೆ ಎನ್ನುವುದಾದರೆ ಅದು ಕರವಸ್ತ್ರದಲ್ಲಿ. ಸಂತೆ ಬಯಲಿನ ಹಾಡು ಕಾವ್ಯದ ಭಾವವೇ ಇಂದಿನ ಕಾವ್ಯದ ನಿರ್ಮಾಣಕ್ಕೆ ಕಾರಣೀಭೂತವಾಗಿದೆ ಎಂದರೆ ಅಚ್ಚರಿಯಲ್ಲ. ಅದರೆ ಅದು ಕೇವಲ ಮುಂದುವರಿಕೆಯಾಗದೆ ಪಲ್ಲಟಗೊಳ್ಳುತ್ತಲೇ ಹಿಂದಿನದಕ್ಕೂ ಇಂದಿನದಕ್ಕೂ ಸಂಬಂಧ ಕಲ್ಪಿಸಿಕೊಳ್ಳುತ್ತಿದೆ. ಆ ಕಾವ್ಯ ಸಹಜವಾಗಿ ಪ್ರಾರಂಭವಾಗಿ ತನ್ನಲ್ಲಿ ಸಣ್ಣ ಸಣ್ಣ ಪದಗಳ ಮುಖಾಂತರ ಸೃಜಿಸಿಕೊಳ್ಳುವ ಅರ್ಥವೈಶಾಲ್ಯತೆ – ಪರಂಪರೆಯೊಂದಿಗೆ ಸಾಧಿಸುವ ಸಹಜ ಸಂಬಂಧದ ಕ್ರಮ ಇಲ್ಲಿ ಇನ್ನೂ ಹೆಚ್ಚಾಗಿದೆ ಮತ್ತು ವಿನೂತನವಾಗಿದೆ.
ಪ್ರತಿಮೆಗಳ ಭರಾಟೆ ಕಾಲಘಟ್ಟವಿದು, ಕರವಸ್ತ್ರದ ಕಾವ್ಯಗಳ ಯಶಸ್ಸಿಗೆ ದಾರಿ ಮಾಡುವ ಅತೀ ಸಶಕ್ತ ಶಬ್ಧಚಿತ್ರಗಳ ನಿರಂತರ ಪ್ರವಾಹದ ಚಲನೆ ಕಾವ್ಯದ ಉದ್ದೇಶವನ್ನ ಯಶಸ್ವಿಗೊಳಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತಿದೆ. ಅದರಂತೆ ಓದುಗನು ಗೊಂದಲಗೊಳ್ಳುವ ಸಾಧ್ಯತೆಯೂ ಇದೆ. ಪ್ರತಿಭೆಯನ್ನ ಗುರುತಿಸುವಲ್ಲಿ ಪರಂಪರೆಯನ್ನ ನೆನಪಿಸುತ್ತಲೇ ಅದರಿಂದ ಬಿಡುಗಡೆಹೊಂದಿ ಸದ್ಯಕ್ಕೆ ಬಯಲಾಗುವದಾರಿ ಸೂಕ್ಷ್ಮವಾಗಿದೆ. ಮೇಲು ನೋಟಕ್ಕೆ ಸರಳ ಎನಿಸಿದರೂ ಹೆಚ್ಚು ತಲ್ಲೀನತೆಯನ್ನ ಮತ್ತು ಸೂಕ್ಷ್ಮತೆಯನ್ನ ಓದುಗನಿಂದ ಬೇಡುತ್ತದೆ. ಕೆಲವೊಮ್ಮೆ ಪ್ರತಿಮೆಗಳ ಭರಾಟೆ ಗಂಭೀರ ವಿಮರ್ಶೆಗೆ ಅಪಾಯವನ್ನೂ, ಸೋಮಾರಿ ವಿಮರ್ಶಕನಿಗೆ ಸಹಜ ಸಂವಹನಕ್ಕೆ ದಾರಿ ಮಾಡಿಕೊಡುವಲ್ಲಿ ಮಹತ್ತರ ಪಾತ್ರವಹಿಸಿದೆ. ಭ್ರಮೆಯನ್ನು ಸೃಜಿಸಿಬಿಡುವರೇನೋ ಎಂದು ನೋಡು ನೋಡುತ್ತಿದ್ದಂತೆ ಹೊಸಹೊಳಹನ್ನು ಕಟ್ಟಿಕೊಡುವ ಕವನಗಳೂ ಈ ಸಂಕಲನದಲ್ಲಿದೆ. ಈ ವಿಮರ್ಶಾ ಅಪಾಯದಿಂದ ಬಿಡುಗಡೆಹೊಂದಲು ಒಂದು ಅಂತರವನ್ನು ಕಾಯ್ದುಕೊಳ್ಳುವ ಅಗತ್ಯತೆಯಂತೂ ಓದುಗನ ಜವಾಬ್ದಾರಿಯಾಗಿದೆ. ಕಾವ್ಯದ ಗಮ್ಯದ ಕಡೆಗೆ ಓದುಗ ಚಲಿಸುವಲ್ಲಿ ಗಮನಿಸಬೇಕಾದ, ವಹಿಸಬೇಕಾದ ಜಾಗರೂಕತೆ – ಕಾವ್ಯಕ್ಕೆ ಕೊಡುವ ಒತ್ತು ಇವರನ್ನು ವಿಭಿನ್ನವಾಗಿ ನೋಡುವ ಮಾದರಿಗಳನ್ನು ತಾನೇ ಸೃಜಿಸುತ್ತದೆ. ಕಾವ್ಯ ಜೀವದ್ರವ್ಯದ ಬಹುಮುಖೀ ವ್ಯಾಖ್ಯಾನದ ಸಾಧ್ಯತೆಯ ದಾರಿಯೆಂದು, ಗಮ್ಯವೆಂದೂ ಪ್ರತಿಮೆಗಳು ಅನಿಸಿಬಿಡುತ್ತದೆ. ನಿಲ್ಲದ ಕಾಲಕ್ಕೊಂದಿಷ್ಟು ನಿಲುಗಡೆಯ ತಾಣವಾಗಿ ನಕ್ಕುಬಿಡುವ ಪ್ರತಿಮೆಗಳು ಓದುಗನನ್ನು ಸೆಳೆದು ಮಾತನಾಡಿಸಿಬಿಡುತ್ತದೆ ಬೇಡವೆಂದರೂ.
ಸರಳ – ಸಂಕೀರ್ಣ – ಅಮೂರ್ತ – ವಿರಳ ಪ್ರತಿಮೆಗಳ ಸಶಕ್ತ ಅಭಿವ್ಯಕ್ತಿ ದಾರಿ ಕವನಸಂಕಲನದಲ್ಲಿದ್ದು, ಕೆಲವುಕಡೆ ಒಡೆದ ಸ್ಥತಿಯಲ್ಲಿ ಪ್ರತಿಮೆಗಳು ರಚನೆಯಾದರೂ ಕಾವ್ಯದ ಇತರ ಅಂಗಗಳೊಂದಿಗೆ ಸಾಧಿಸುವ ಸಾಹಚರ್ಯದಿಂದ ಕಾವ್ಯದ ದಿಕ್ಕು ವಿಭಿನ್ನ ಅನಿಸುವುದರ ಜೊತೆಗೆ – ಕೆಲವೊಂದು ಕಡೆ ಉದ್ದೇಶದ ಸಶಕ್ತ ಅಭಿವ್ಯಕ್ತಿಯಲ್ಲಿ ಸಮಸ್ಯೆ ಅನಿಸುವಷ್ಟು ಮಟ್ಟದಲ್ಲಿ ಕಾವ್ಯದ ಹರಿವಿದೆ. ಅಭಿಜ್ಞಾನ, ದ್ವೈತ, ಬೀಗ, ಚಪ್ಪಲಿಗಳು, ನದಿ ಇವುಗಳು ಉತ್ತಮ ಉದಾಹರಣೆಯೊಂದಿಗೇ ಓದುಗನಲ್ಲಿ ವ್ಯುತ್ಪತ್ತಿ – ಶ್ರಮ ಬೇಡುತ್ತವೆ.
ಇಂದ್ರಿಯ ಗ್ರಹಿಕೆಯ ಪ್ರತಿಮೆಗಳು ಸಮಕಾಲೀನ ಕಾವ್ಯಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದ್ದು ಅದರಿಂದ ಬಿಡುಗಡೆಹೊಂದಿದ ವಿರಳಾತಿವಿರಳ ಪ್ರತಿಮೆಗಳು ಕಾವ್ಯದಲ್ಲಿ ನಿರ್ಮಿಸುವ ಪರಿಸರದೊಂದಿಗೆ ಓದುಗನ ಮೇಲೆ ಬೀರುವ ಪ್ರಭಾವವನ್ನು ಸೂಕ್ಷ್ಮವಿವೇಚನೆಯ ಮೂಲಕ ಅರ್ಧೈಸುವ ಸಾಧ್ಯತೆ ಕರವಸ್ತ್ರದಲ್ಲಿದೆ. ಇದು ಯಶಸ್ವಿ ದಾರಿಯಾಗಿಯೂ ಕೆಲಸ ಮಾಡುತ್ತಿದೆ.
ಕಾವ್ಯದ ಓದುಗನು ತನ್ನ ಗ್ರಹಿಕೆಯನ್ನು ಸಾಕ್ಷಾತ್ಕರಿಸುವಲ್ಲಿ ಇವರು ಕಟ್ಟಿಕೊಡುವ ರೂಪಕಗಳು ಪರಂಪರೆಯೊಂದಿಗೆ ಸಂವಾದಿಸುತ್ತಲೇ ಅದರಿಂದ ಬಿಡುಗಡೆಹೊಂದಿ ಭಾವನಾತ್ಮಕ ಸಂಬಂಧ ಸೃಜಿಸಿಕೊಳ್ಳುವಲ್ಲಿ ಯಶಸ್ವಿ ಮಾಧ್ಯಮವಾಗಿ ರೂಪಕ ಬಳಕೆಯಾಗಿದೆ. ಪರಂಪರೆಯನ್ನ ಒಪ್ಪಿ ಅದನ್ನು ಮೀರುವಲ್ಲಿ ಕವಿ ವಹಿಸುವ ಜಾಗರೂಕತೆ ಪ್ರತಿಭೆಯ ವಿಭಿನ್ನತೆ – ಸದ್ಯದ ದಾರಿಯನ್ನು ಶೋಧಿಸುವಲ್ಲಿನ ನಿರಂತರ ತುಡಿತ ಅತಿಯಾಗಿದೆ.
ಎಲ್ಲಿಯೂ ರೂಕ್ಷ ಅನ್ನಿಸದ ಮಟ್ಟದಲ್ಲಿರುವ ಈ ಕಾವ್ಯಗಳನ್ನು ಧೇನಿಸುವ ಸಮಯ ಇದು. ಇದರಲ್ಲಿನ ಮೃದುತ್ವ ಮತ್ತು ಓದುಗನೊಂದಿಗೆ ಸಂವಹಿಸುವ ಕಾವ್ಯದ ಬಗೆಗೆ ಏನೇ ಮಾತಾಡಿದರೂ ಅದು ಆ ಕ್ಷಣದಲ್ಲಿ ಹೊಳೆವ ಹೊಳಹುಗಳು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಆ ಕಾರ್ಯವನ್ನು ಕೆಲವು ಮಾತುಗಳ ಮುಖಾಂತರ ಆಡುವ ಪ್ರಯತ್ನ ಮಾಡಿದ್ದೇನೆ. ಇದಲ್ಲದೆ ಕಾವ್ಯ ನಿಮ್ಮೊಂದಿಗೆ ಮಾತನಾಡಿದರೆ ಅದಕ್ಕೆ ಸಂಪೂರ್ಣ ಕಾವ್ಯವೇ ಜವಾಬ್ದಾರಿ. ಕಾವ್ಯದೊಂದಿಗೆ ಓದುಗರು ಸ್ಪಂದಿಸಿದರೆ ಅದಕ್ಕಿಂತ ಬಹುದೊಡ್ಡ ಪ್ರಶಸ್ತಿ ಮತ್ತೊಂದಿಲ್ಲ.
ಈ ಕವನ ಸಂಕಲನಕ್ಕೆ ಮುನ್ನುಡಿಯ ರೂಪದಲ್ಲಿ ಕೆಲವು ಮಾತುಗಳನ್ನು ನನ್ನಿಂದ ಆಡಿಸುವ ಧೈರ್ಯಕ್ಕೆ ಮೆಚ್ಚಲೇಬೇಕು. ಅವರ ಎಲ್ಲಾ ಸಂಕಲನಕ್ಕೆ ಸ್ಪಂದಿಸಿದಂತೆ ಇದಕ್ಕೂ ಸ್ಪಂದನೆ ದೊರೆಯಲಿ. ಮುನ್ನುಡಿಯನ್ನು ಬಿಟ್ಟು ಕಾವ್ಯ ಗೆಲ್ಲಲಿ-ಉಳಿಯಲಿ-ಉಲಿಯಲಿ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಪದ್ಯಗಳಲಿಲ್ಲದ ಕ್ಲಿಷ್ಟ
ಪಾರಿಭಾಷಿಕ ಪದಗಳು
ವಿಮರ್ಶೆಯಲ್ಲಿ ಬಂದು ಹೆದರಿಕೆ ಹುಟ್ಟಿಸುವಲ್ಲಿ ಸಫಲತೆ ಕಂಡಿದೆ