ಅರಿವಿನ ಹರಿಗೋಲ ಮೀಟಿ
ಅಂಗಳದ ನೆನಪೊಂದು ಅಂಗಾತಬಿದ್ದು ಕಣ್ಣೆದುರಾದರೂ ನಿನ್ನ ಸ್ಮರಿಸಬೇಕಿತ್ತು
ಆ ಏಕಾಂತದಲೊಂದು ಪದ್ಯ ಬರೆದು ಅದಕಾದರೂ ನಿನ್ನ ಹೆಸರಿಡಬೇಕಿತ್ತು
ಖಾಲಿ ಕೊಳದಿ ಕಲ್ಲೆಸೆದು ಒಂದರ ಹಿಂದೆ ನೂರು ಅಲೆಗಳು ಏಳುವಾಗ
ನೂರು ಹಾಳೆಗಳ ಹರಿದು ಮತ್ತೊಂದರಲಾದರೂ ನಿನ್ನ ಹಿಡಿಯಬೇಕಿತ್ತು
ಒಂದು ಭಾವಕೆ ಸಾವಿರ ನೆನಪು ನಿಂತು ಕಣ್ಣೆದುರೆ ಹೀಗೆ ಕಾಡುವಾಗ
ಪುಟ್ಟ ಮೌನದ ಹಣತೆ ಹಚ್ಚಿ ಎದುರಿಗಿಟ್ಟಾದರೂ ನಿನ್ನ ನೋಡಬೇಕಿತ್ತು
ಇಳಿಸಂಜೆ ತೀರದಲಿ ನಿನ್ನೆದೆಯ ಬಿಸಿಯುಸಿರು ಹಗುರುರಾಗಿ ತಾಗುವಾಗ
ಮನದ ರೆಪ್ಪೆ ಮಿಡಿತಕೆ ಕಾರಣ ಏನೆಂದೆಂದಾದರೂ ನಿನ್ನ ಕೇಳಬೇಕಿತ್ತು
ಹರಿವ ಕನಸಿಗೆ ಮೈಯೆಲ್ಲ ಕಾಲು ಕೋಡೆ ಕಟ್ಟುವ ಮರುಳ ನಾನು
‘ಅಂಕುರ’ನ ಅರಿವ ಹರಿಗೋಲನು ಮೀಟಿಯಾದರೂ ನಿನ್ನ ಸೇರಬೇಕಿತ್ತು
ಇರುಳು ಕರಗಿಹೋಯಿತು
ಎಷ್ಟೊ ಸಂಜೆಗಳ ಧ್ಯಾನಿಸಿ ಹಡೆದ ಇರುಳು ಕರಗಿಹೋಯಿತು
ಎಷ್ಟೋ ಹಗಲನು ಧಾವಿಸಿ ನಡೆದ ಇರುಳು ಕರಗಿಹೋಯಿತು
ಯಾರ ಪಾಲಿನ ನೆನಪುಂಡು ಹೀಗೆ ಬಿಕ್ಕಳಿಸುತಿದೆ ಈ ಸಂಜೆ
ಪಡುವಣದ ರವಿಯ ಮಾತ ಕೇಳದ ಇರುಳು ಕರಗಿಹೋಯಿತು
ರೆಕ್ಕೆಯಿಲ್ಲದ ಹಕ್ಕಿಯೊಂದು ಮುಗಿಲಲಿ ತೇಲಿ ಹಾರಿದಂತೆ ಕನವರಿಕೆ
ಧ್ರುವತಾರೆ ನಕ್ಷತ್ರಗಳ ಒಂಟಿಮಾಡಿ ಜಾರಿದ ಇರುಳು ಕರಗಿಹೋಯಿತು
ಮುಂಜಾವ ಮಡಿಲಲಿ ಪಾರಿಜಾತ ಉದುರಿಸಿದ ನೆನಪುಗಳ ಕುರುಹಿಗೆ
ಬೊಗಸೆಯಲಿ ಸಾಕ್ಷಿಗಳ ಹೆಕ್ಕುತ ಸೊರಗಿದ ಇರುಳು ಕರಗಿಹೋಯಿತು
ಇಳೆಯಲೊಬ್ಬ ತಾಯಿ ಚಂದಮಾಮನ ತೋರಿ ಕೂಸಿಗೆ ತುತ್ತಿಡುವಾಗ
ನೀಲಾಂಬರದಿ ಚಂದಮನ ಚಾಡಿಮಾತ ಕೇಳಿದ ಇರುಳು ಕರಗಿಹೋಯಿತು
ತುಂಬು ಸಂಸಾರದ ಗರಿಕೆಯೊಂದು ಮಿಸುಕಿ ಚಿಗುರುವ ಸಮಯದಲಿ
ಗೌತಮನ ಹೆಜ್ಜೆಯನೆ ಅನುಸರಿಸಿ ನಡೆದ ಇರುಳು ಕರಗಿಹೋಯಿತು
ತೋಳತೆಕ್ಕೆಯಲಿ ಮುಂಜಾವ ಹೂಗನಸು ಕೂಸಂತೆ ಮಲಗಿರಲು
‘ಅಂಕುರ’ದ ಕನಸೊಂದ ಬಿತ್ತಿ ನಿದ್ದೆಗೆಡಿಸಿದ ಇರುಳು ಕರಗಿಹೋಯಿತು
ರಟ್ಟೀಹಳ್ಳಿ ರಾಘವಾಂಕುರ ಮೂಲತಃ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಗ್ರಾಮದವರು.
ಸಧ್ಯ ಕನ್ನಡ ವಿಶ್ವವಿದ್ಯಾಲಯದ ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದಲ್ಲಿ ಪಿಎಚ್.ಡಿ ಅಧ್ಯಯನ.
ಪ್ಲಾಟ್ ಫಾರಂ ನಂ 3(ಕಿರುಕಾದಂಬರಿ) ಹಾಗೂ ಹಿಂಗಂದ್ರ ಹ್ಯಾಂಗ(ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು.
ಫೋಟೋಗ್ರಫಿ, ಸಾಹಿತ್ಯ, ಸಿನಿಮಾ ಆಸಕ್ತಿ ಕ್ಷೇತ್ರಗಳು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ