ರಕ್ತ ಚಂದ್ರ

ನಿನ್ನ ಅಂಗಳದ ಮುತ್ತುಗಳ
ಆಯಬಂದವಳಿಗೆ ಮುದ್ದಾಡಿದೆ ಮುತ್ತಿಕ್ಕಿ
ಚಿತ್ತ ಚೈತ್ರ ಚಿಗುರಿ
ಅಂಗಳದ ಕಪ್ಪು ಗುಡಿಸಿದೆ ಒಂದೇ ಸಮನೆ

ಅವಳ ಪ್ರೇಮಧಾರೆಗೆ ಅಗ್ನಿದೇವ
ಕುದಿಯುತ್ತಿದ್ದಾನೆ ಕತಕತನೆ
ಎಲ್ಲವೂ ನೀನೇ ಅಂದವಳಿಗೆ
ಬೂದಿಗುರುತು ಉಳಿಯದಂತೆ
ಸಾರಿಸಿದ್ದಾನೆ ಅಂಗೈಯಿಂದ

ಎಂದಿನಂತೆ ಆಕಾಶದ ಮೈ ಇಂದಿಲ್ಲ
ಬಿಳಿಯಾಗಿ, ಹಳದಿಯಾಗಿ, ಕೆಂಪಾಗಿದೆ
ಅಸಲಿ ಮೈ ಗುರುತಿಗೆ ಅಂಟಿದ ಉರಿ
ಅಳಿಸಲಿಲ್ಲ; ಈಗ ಅವನ ರಕ್ತಚಂದ್ರ

ಮುಣುಗಿರುವನು ಉಸಿರುಗಟ್ಟಿ ಒದ್ದಾಡುತ್ತಿರುವನು
ದೂರದಿಂದಲೇ ಅಸಹಾಯಕ ಕಣ್ಣಿನಿಂದ ನೋಡಿ
ಕಣ್ಣೀರ ಹರಿಸುತ್ತಿರುವನು ಅವನದು ರಕ್ತಕಣ್ಣೀರು
ಸುರಿಸಿದಷ್ಟು ಕಣ್ಣೀರು ನೆಲ ಸುಟ್ಟು ಭಸ್ಮ!
ಸಾಯುತ್ತದೆ ಬಿತ್ತುವ ಬೀಜ ವಿಷಕಾರುತ್ತದೆ ಬೆಳೆದ ಬೆಳೆ
ರಕ್ತ ಕಾರುತ್ತಾರೆ ತಿಂದವರೆಲ್ಲ.

ಇನ್ನೂ ನಿನಗೆ ತಿಳಿಯಲೇಯಿಲ್ಲ
ಪಾದರಸದಂತ ಅವಳ ಪ್ರೀತಿ
ನಿನಗಾಗಿ ಕಾತು ಕೂತ ಕಲ್ಲು ಸೊರಗಿಹೋಯಿತು
ಬಂದಾಗಲೆಲ್ಲ ನಿನ್ನ ಹೊಟ್ಟೆ ತುಂಬಿಸಿ
ಕಣ್‍ತುಂಬಿಸಿ ಪ್ರಶಾಂತ ಸಾಗರವಾಗಿಸುವ ನಿನಗೆ
ಅವಳ ಒಡಲ ಪ್ರಕ್ಷುಬ್ದ ಧ್ವನಿಸಲೇ ಇಲ್ಲ
ತುದಿ ಮೂಗ ಮೇಲೆ ನಿನ್ನ ತೇಲಿಸುವ
ಆಕೆಗೆ ಅದೆಷ್ಟು ಮೋಹ ನಿನ್ನದೇ ಬೆಳಕಿಗೆ
ಬಣ್ಣ ಬರಬೇಕಿತ್ತು ನಿನ್ನದೇ
ದ್ವೇಷಿಸುತ್ತಿದೆ ನಿನ್ನ ರಕ್ತ
ಬಿಡುಗಡೆಗೆ ಹಾತೊರೆದು ನಿನ್ನಿಂದ
ಹರಿಯುತ್ತಿದೆ ನೀನೂ ಕಾಣದಂತೆ
ಇರಬಹುದೇನೋ ಹೌದು!
ಮೈಗಂಟದ ಅವಳ ರಕ್ತ ನಿನ್ನ ಬಣ್ಣ ಬದಲಿಸಿದೆ
ಈಗ ನೀನು ಬರೀ ಚಂದ್ರನಲ್ಲ
ರಕ್ತಚಂದ್ರ… ರಕ್ತಚಂದ್ರ

——————–

ಬನದ ಹೋರಿ

ಬತ್ತಿದ ಮೊಲೆಗಳ
ಕಿತ್ತುತಿಂದು ರಕ್ತ ಕುಡಿಯುತ್ತಿವೆ
ಸ್ಮಶಾನದ ಅಸ್ತಿಗಳು
ಸಮಾಧಿಯ ಹೂ ಕೇಕೆಹಾಕಿ
ನೆಲತೊಳೆದು ಬಾಯಿ ಒರೆಸಿದಂತೆ
ಕಣ್ಣು ಉಕ್ಕಿ ಹಾಲು ಹರಿಯುವುದ ಕಂಡು
ಹೊಟ್ಟೆ ತಿಂಬಿಸಿಕೊಂಡಿವೆ
ಬನದ ಹೋರಿಗಳು

ಸತ್ತ ಹೆಣಗಳ ಕಿತ್ತು ತಿನ್ನುವ
ನಾಯಿಗೆ ರುಚಿಸದು ಹೋಳಿಗೆ
ಬೀಜಕ್ಕೆ ಮಣ್ಣ ಹುರಿಗೊಳಿಸಿ
ಉಸಿರು ಹಂಚಿಕೆಯಾಗಿದೆ
ಶತಮಾನದಿಂದಿನ ಪಿಂಡಾಂಗಗಳಿಗೆ
ಅಕ್ಕಡಿಕಾಳಿಗೆ ಬನದ ಹೋರಿಗಳು
ಹದಗೊಳಿಸಿದ ಮಣ್ಣು
ನನ್ನಪ್ಪ, ಅಜ್ಜ, ಮುತ್ತಜ್ಜರ ನೆನಪಿಗೆ
ಒಕ್ಕಲು ಮಕ್ಕಳ ಕಣ್ಣು ತಂಪಾಗಿಸಿದೆ

ಗುಪ್ತಾಂಗದ ನಕಾಶೆಗೆ
ಯೋನಿಮಾರ್ಗ ಅಪಾಯಕಾರಿ
ಬಾಯಿ ಮೂಗಿನ ಗಾಳಿ
ಎದೆಯಕೊಂಡಿ ಕಳಚಿ
ಬಸಿದ ದೇಹ ನೆಕ್ಕಲು
ಮಣ್ಣಹುಳುಗಳು
ನುಂಗಿವೆ, ಕುಕ್ಕಿವೆ

ಕೊಟ್ಟಿಗೆಯ ಕರುಗಳು
ಸುಡುಗಾಡು ಸುತ್ತಿ
ಬನದ ಹೋರಿಗೆ
ಅವ್ವನ ನೆನಪ ಹೇಳಿದೆ
ತುಂಬುಕೆಚ್ಚಲು ಸಮಾಧಿಯಿಂದೆದ್ದು
ಹೊಟ್ಟೆತುಂಬಿಸಿವೆ ಮಕ್ಕಳ

ಸುಟ್ಟು ಹೂಳಿದ ಅಸ್ತಿಗಳ
ಆರಿಸಿ ಆರಿಸಿ ಮಾಟಗಾರನ
ಹೊಟ್ಟೆಗೆ ಹಿಡಿ ಅನ್ನ ಉಣಿಸಿದೆ
ಮಸಣಕ್ಕೆ ಮರ್ಯಾದೆಯಿಲ್ಲ
ಎಲ್ಲವೂ ಸಮತಲ
ಇಷ್ಟು ಸಾಕಲ್ಲವೆ
ಸುಡುಗಾಡ ತಿರುಗಲು
ಬನದ ಹೋರಿಗೆ

——-

ಹೊಕ್ಕಳ ಹೂವು

ರಾತ್ರಿಗಳೇ ಇರದ ಹಗಲುಗಳು
ಮರಗಟ್ಟಿವೆ ರೆಪ್ಪೆಯ ಹಾದಿತಪ್ಪಿಸಿ
ಹೆಗಲಮೇಲಿನ ಅಂಗಿಗೆ ಉಸಿರುಬಿಡಲು ಆಯಾಸವಾಗಿ
ಗೋಡೆಎದೆಗೆ ಕೂಗಿ ಕರೆದಿದೆ
ಓಡುವಂತಾಗಿದೆ ದಣಿದ ಹಿಮ್ಮಡಿಗಳು
ಮತ್ತೆ ಅಂಬೇಗಾಲಿಟ್ಟು
ಬಳಲಿದ ಬೆರಳುಗಳು
ಮತ್ತೆ ಮತ್ತೆ ಅದುಮುತ್ತಿವೆ ನೆಲವ
ಸಾಕಾಗಿದೆ ಹಗಲಿಗೆ
ಇದು ದರ್ವಾಸಮುನಿಯ ಶಾಪವೇ!
ಬೆಳಕಿನ ಕಾವಿಗೆ ಬಾಡುವ ಬಿಜಕ್ಕೆ
ಹೊಕ್ಕಳೊಂದೇ ಹೆಬ್ಬಾಗಿಲು
ಹೊಕ್ಕಳ ಹೂ ಘಮಿಸಲಿ ಇನ್ನಾದರೂ ರಾತ್ರಿಗೆ

 

ಭಾಗ್ಯಜ್ಯೋತಿ ಹಿರೇಮಠ ಹುಬ್ಬಳ್ಳಿಯ ಕೆ.ಎಲ್.ಇ. ಪಿ.ಸಿ.ಜಾಬೀನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿ
ಕೆ.ಎಲ್.ಇ. ಧ್ವನಿ 90.4 ಎಫ್ ಎಂ ರೇಡಿಯೋದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಕಾರ್ಯಕ್ರಮ ನಿರ್ವಹಣೆ.
ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಿನಿಮಾ ಹಾಡುಗಳ ಗೀತ ಮೀಮಾಂಸೆ ಎಂಬ ವಿಷಯದ ಕುರಿತು ಸಂಶೋಧನೆಯನ್ನು ಕೈಗೊಂಡಿದ್ದಾರೆ.
ಇವರಿಗೆ 2018ರ ಸಂಕ್ರಮಣ ಕಾವ್ಯ ಪ್ರಶಸ್ತಿ ಲಭಿಸಿದೆ.