ಮಿರೋಸ್ಲಾವ್ ಹೋಲುಬ್ (1313 ಸೆಪ್ಟೆಂಬರ್ 1923 – 14 ಜುಲೈ 1998) ಚೆಕ್ (Czech) ಕವಿ ಮತ್ತು ಇಮ್ಯುನೋಜಸ್ಟ್ (‘ರೋಗನಿರೋಧಕ ತಜ್ಞ’), ಅರ್ಥಾತ್ ಕವಿ ಮತ್ತು ವಿಜ್ಞಾನಿ. ಇಂತಹ ಸಂದರ್ಭದಲ್ಲಿ ನಡೆಯುವಂತೆ, ಹೋಲುಬ್ ನನ್ನು ಕವಿಯೆಂದು ಬಲ್ಲವರಿಗೆ ಅವನೊಬ್ಬ ವಿಜ್ಞಾನಿಯೆಂದು ಗೊತ್ತಿರುವುದಿಲ್ಲ, ವಿಜ್ಞಾನಿಯೆಂದು ಗೊತ್ತಿರುವವರಿಗೆ ಕವಿಯೆಂದು ಗೊತ್ತಿರುವುದಿಲ್ಲ. ತಾನು ಸಾಮಾನ್ಯವಾಗಿ ಒಬ್ಬ ವಿಜ್ಞಾನಿಯೆನ್ನುವುದನ್ನು ಕವಿಗಳ ಎದುರೂ, ಒಬ್ಬ ಕವಿಯೆನ್ನುವುದನ್ನು ವಿಜ್ಞಾನಿಗಳ ಎದುರೂ ಹೇಳಿಕೊಳ್ಳುವುದಿಲ್ಲ ಎನ್ನುತ್ತಾನೆ ಹೋಲುಬ್. ವಿಜ್ಞಾನವನ್ನು ವೃತ್ತಿಯಾಗಿಯೂ ಕವಿತೆಯನ್ನು ಪ್ರವೃತ್ತಿಯಾಗಿಯೂ ಅವನು ತೆಗೆದುಕೊಂಡಿದ್ದ. ಇವೆರಡರ ನಡುವೆ ಅವನೊಂದು ಸಮನ್ವಯವನ್ನು ಕೂಡ ಸಾಧಿಸಿಕೊಂಡಿದ್ದಂತೆ ಕಾಣುತ್ತದೆ. ಅವನು ಕವಿತೆ ಬರೆಯುವುದಕ್ಕೆ ನೆರವಾಗಲೆಂದು ಎರಡು ವರ್ಷಗಳ ಮಟ್ಟಿಗೆ ಪೂರ್ತಿ ಆರ್ಥಿಕ ಸಹಾಯ ಮಾಡಲು ಚೆಕ್ ಲೇಖಕರ ಸಂಘ ಮುಂದೆ ಬಂದಿತ್ತು; ಹೋಲುಬ್ ಅದನ್ನು ಸ್ವೀಕರಿಸಲಿಲ್ಲ. ಅವನಂದುದು: ‘ಕವಿತೆ ಬರೆಯಲು ನನಗೆ ಪೂರ್ತಿ ಕಾಲಾವಕಾಶವಿರುತ್ತಿದ್ದರೆ, ನಾನು ಏನನ್ನೂ ಬರೆಯುತ್ತಿರಲಿಲ್ಲ.’ ಅವನು ವಿಜ್ಞಾನವನ್ನು ಪ್ರೀತಿಸುತ್ತಿದ್ದ; ಕವಿತೆಯನ್ನೂ ಅಷ್ಟೇ ಬಯಸುತ್ತಿದ್ದ. ವಿಜ್ಞಾನದಿಂದ ಕವಿತೆಗೆ ರೂಪಕಗಳನ್ನು ಪಡೆಯುತ್ತಿದ್ದ. ಒಂದನ್ನು ಅನುಸರಿಸುವುದಕ್ಕೆ ಇನ್ನೊಂದನ್ನು ಬಿಡಬೇಕೆಂದು ಅವನಿಗೆ ಅನಿಸಿರಲಿಲ್ಲ. ಅಂತಹ ಅನಿಸಿಕೆಯಿರುವುದು ಜನಸಾಮಾನ್ಯರ ಕಲ್ಪನೆಯಲ್ಲಿ.
ಚೆಕ್ ಕಾವ್ಯಕ್ಷೇತ್ರದಲ್ಲಿ ಮಿರೋಸ್ಲಾವ್ ಹೋಲುಬ್ ಗೆ ವಿಶಿಷ್ಟ ಸ್ಥಾನವಿದೆ. ಅವನು ತನ್ನ ದೇಶದ ಹೊರಗೂ ಸಾಕಷ್ಟು ಪ್ರಸಿದ್ಧನೇ. ಅವನ ಕೆಲವು ಕವಿತೆಗಳ ಕನ್ನಡ ಭಾಷಾಂತರಗಳು ಇಲ್ಲಿವೆ.
1. ಪಾಠ
ಮರವೊಂದು ಪ್ರವೇಶಮಾಡುತ್ತದೆ, ಶಿರ ಬಾಗಿ ಹೇಳುತ್ತದೆ:
ನಾನೊಂದು ಮರ.
ಕಪ್ಪು ಹನಿಯೊಂದು ಆಕಾಶದಿಂದ ಬಿದ್ದು ಹೇಳುತ್ತದೆ:
ನಾನೊಂದು ಹಕ್ಕಿ.
ಕೆಳಗಡೆಯೊಂದು ಜೇಡನ ಬಲೆ
ಪ್ರೀತಿಯಂತಹದು
ಹತ್ತಿರ ಬಂದು
ಹೇಳುತ್ತದೆ:
ನಾನು ಮೌನ.
ಆದರೆ ಕಪ್ಪು ಹಲಗೆಯ ಸಮೀಪ ಹರಡುತ್ತದೆ
ಒಂದು ರಾಷ್ಟ್ರೀಯ ಜನತಂತ್ರದ
ಕುದುರೆ ತನ್ನ ವೇಸ್ಟ್ ಕೋಟಿನಲ್ಲಿ
ಹಾಗೂ ಪುನರುಚ್ಚರಿಸುತ್ತದೆ
ಎಲ್ಲ ಕಡೆ ಕಿವಿನಿಮಿರಿಸಿ,
ಹೇಳಿದ್ದನ್ನೆ ಹೇಳುತ್ತದೆ
ನಾನು ಚರಿತ್ರೆಯ ಯಂತ್ರ
ಮತ್ತು
ನಾವೆಲ್ಲರೂ
ಪ್ರೀತಿಸುತ್ತೇವೆ
ಪುರೋಗಮನವನ್ನು
ಮತ್ತು ಧೈರ್ಯವನ್ನು
ಮತ್ತು
ಹೋರಾಟದ ಕ್ರೋಧವನ್ನು
ತರಗತಿಯ ಬಾಗಿಲ ಕೆಳಗೆ
ಹನಿಯುತ್ತದೆ
ನೆತ್ತರ ಒಂದು ತೆಳ್ಳಗಿನ ಹಳ್ಳ.
ಯಾಕೆಂದರೆ ಇಲ್ಲಿ ಸುರುವಾಗುತ್ತದೆ
ಮುಗ್ಧರ
ನರಮೇಧ.
2. ಒಬ್ಬ ಹುಡುಗನ ತಲೆ
ಅದರೊಳಗೊಂದು ಆಕಾಶನೌಕೆಯಿದೆ
ಹಾಗೂ ಒಂದು ಯೋಜನೆ
ಪಿಯಾನೊ ಪಾಠಗಳ ತಪ್ಪಿಸುವುದಕ್ಕೆ.
ಮತ್ತು ನೋವಾನ
ನೌಕೆಯಿದೆ,
ಅದೇ ಆರಂಭದ್ದು.
ಮತ್ತು ಅದರೊಳಗಿದೆ
ಸಂಪೂರ್ಣ ಹೊಸತಾದ ಒಂದು ಹಕ್ಕಿ,
ಸಂಪೂರ್ಣ ಹೊಸತಾದ ಒಂದು ಮೊಲ,
ಸಂಪೂರ್ಣ ಹೊಸತಾದ ಒಂದು ದುಂಬಿ.
ಒಂದು ನದಿಯಿದೆ
ಅದು ಕೆಳಗಿಂದ ಮೇಲಕ್ಕೆ ಹರಿಯುತ್ತದೆ.
ಒಂದು ಗಣಿತ ಕೋಷ್ಟಕವಿದೆ.
ಪ್ರತಿವಸ್ತುವಿದೆ.
ಹಾಗೂ ಅದನ್ನು ಕತ್ತರಿಸಿ ಸರಿಮಾಡುವಂತಿಲ್ಲ.
ನನಗನಿಸುತ್ತದೆ ಕತ್ತರಿಸಿ ಸರಿಮಾಡಲಾರದ್ದೇ
ತಲೆ.
ಇಷ್ಟೊಂದು ತಲೆಗಳಿವೆ
ಎಂಬ ಸನ್ನಿವೇಶದಲ್ಲಿ
ಬಹಳಷ್ಟು ಭರವಸೆಯು ಇದೆ.
3. ಬಾಗಿಲು
ಹೋಗಿ ಬಾಗಿಲು ತೆಗಿ
ಇರಬಹುದು ಹೊರಗೆ
ಒಂದು ಮರ, ಅಥವ ಒಂದು ಕಾಡು,
ಒಂದು ತೋಟ,
ಅಥವ ಒಂದು ಮಾಯಾನಗರಿ.
ಹೋಗಿ ಬಾಗಿಲು ತೆಗಿ
ಒಂದು ನಾಯಿ ಅದೇನೋ ಕೆದಕುತ್ತಿರಬಹುದು.
ಒಂದು ಮುಖವ ನಿನಗೆ ಕಾಣಿಸಲು ಬಹುದು,
ಅಥವಾ ಒಂದು ಕಣ್ಣು,
ಅಥವಾ ಚಿತ್ರದ
ಒಂದು ಚಿತ್ರ.
ಹೋಗಿ ಬಾಗಿಲು ತೆಗಿ.
ಮಂಜಿದ್ದರೆ
ಅದು ತಿಳಿಯಾದೀತು.
ಹೋಗಿ ಬಾಗಿಲು ತೆಗಿ.
ಅಲ್ಲಿ ಬರೀ ಕತ್ತಲು
ಟಿಕ್ ಟಿಕ್ ಎನ್ನುತ್ತಿದ್ದರೂ,
ಬರೀ ಭಣ ಗಾಳಿ-
ಯಿದ್ದರೂ
ಏನೇ
ಇರದಿದ್ದರೂ
ಅಲ್ಲಿ,
ಹೋಗಿ ಬಾಗಿಲು ತೆಗಿ.
ಏನಿಲ್ಲದಿದ್ದರೂ
ಅಲ್ಲೊಂದು
ಗಾಳಿಯ ಸೆಲೆಯಿದ್ದೀತು.
4. ಹೋಮರ್
ಏಳು ಪಟ್ಟಣಗಳು ಪೈಪೋಟಿ ನಡೆಸಿವೆ ಅವನ ತೊಟ್ಟಿಲು ತೂಗಿದೆಯೆನ್ನುವುದಕ್ಕೆ
ಸ್ಮಿರ್ನಾ, ಕಿಯೋಸ್, ಕೊಲೋಫೋನ್,
ಇತಾಕ, ಪೈಲೋಸ್, ಆರ್ಗೋಸ್,
ಅಥೆನೆ.
ಕುರಿಮರಿಯಂತೆ ತಿರುಗಾಡುತ್ತಾನೆ
ಸಮುದ್ರತೀರದ ಹುಲ್ಲುಗಾವಲುಗಳ ಮೇಲೆ,
ಯಾರಿಗೂ ತೋರದೆ, ಶವಸಂಸ್ಕಾರವೂ ಆಗದೆ,
ಉತ್ಖನನವಾಗದೆ, ಜೀವನ ಚರಿತ್ರೆಯ
ಯಾವುವೇ ನೆರಳು ಬೀಳದೆ.
ಅಧಿಕಾರಿಗಳಿಂದ ಎಂದಾದರೂ ತೊಂದರೆಯಾಗಿತ್ತೆ ಅವನಿಗೆ?
ಎಂದೂ ಕಂಠಪೂರ್ತಿ ಕುಡಿದಿರಲಿಲ್ವೆ? ಯಾರೂ ಅವನ ಕದ್ದು ಕೇಳಿರಲಿಲ್ವೆ,
ಅವನು ಹಾಡುವಾಗಲು ಕೂಡ?
ಯಾವತ್ತೂ ಅವನು ಬೇಟೆನಾಯಿಗಳ, ಬೆಕ್ಕುಗಳ,
ಅಥವ ಸಣ್ಣ ಹುಡುಗರ ಪ್ರೀತಿಸಿರ್ಲಿಲ್ವೆ?
ಇನ್ನೂ ಎಷ್ಟು ಚೆನ್ನಾಗಿರಬಹುದು ಈಲಿಯಡ್
ಅಗಮೆಮ್ನೋನ್ ಗೆ ಅವನದೇ ಚಹರೆಯಿತ್ತೆಂದು
ಸಿದ್ಧವಾದರೆ ಅಥವ ಹೆಲೆನಳ ಜೀವಶಾಸ್ತ್ರ
ಸಮಕಾಲೀನ ವಾಸ್ತವಗಳ ಪ್ರತಿಬಿಂಬಿಸಿದರೆ.
ಇನ್ನೂ ಎಷ್ಟು ಚೆನ್ನಾಗಿರಬಹುದು ಒಡಿಸ್ಸಿ
ಅವನಿಗೆ ಎರಡು ತಲೆಗಳಿರುತ್ತಿದ್ದರೆ,
ಒಂದು ಕಾಲು,
ಅಥವಾ ಅವನು ತನ್ನ ಪ್ರಕಾಶಕನ ಜತೆ
ಒಂದೆ ಹೆಣ್ಣನ್ನು ಹಂಚಿಕೊಂಡಿದ್ದರೆ.
ಅದು ಹೇಗೋ ಅದೆಲ್ಲವನ್ನೂ ಅವನು ಕಡೆಗಣಿಸಿಬಿಟ್ಟಿದ್ದ
ತನ್ನ ಅಂಧತ್ವದಲ್ಲಿ.
ಹಾಗೂ ಸಾಹಿತ್ಯಚರಿತ್ರೆಯಲ್ಲಿ
ಎತ್ತರ ನಿಂತಿದ್ದಾನೆ
ಒಂದು ಮುನ್ನೆಚ್ಚರಿಕೆಯ ಸಾದೃಶ್ಯದಂತೆ
ಅಯಸ್ವಿಯಾದೊಬ್ಬ ಲೇಖಕನಿಗೆ—ಎಷ್ಟೆಂದರೆ
ಆತ ಬಹುಶಃ ಇದ್ದಿರ್ಲೆ ಇಲ್ಲ.
5. ನೆಪೋಲಿಯನ್
ಮಕ್ಕಳೇ, ನೆಪೋಲಿಯನ್ ಬೋನಪಾರ್ಟೆ
ಹುಟ್ಟಿದ್ದು ಯಾವಾಗ
ಎನ್ನುತ್ತಾಳೆ ಟೀಚರ್.
ಒಂದು ನೂರು ವರ್ಷ ಹಿಂದೆ, ಎನ್ನುತ್ತಾವೆ ಮಕ್ಕಳು
ಒಂದು ಸಾವಿರ ವರ್ಷ ಹಿಂದೆ, ಎನ್ನುತ್ತಾವೆ ಮಕ್ಕಳು
ಕಳೆದ ವರ್ಷ, ಎನ್ನುತ್ತಾವೆ ಮಕ್ಕಳು
ಯಾರಿಗೂ ಗೊತ್ತಿಲ್ಲ
ಮಕ್ಕಳೇ, ಏನ್ಮಾಡ್ದ ನೆಪೋಲಿಯನ್ ಬೊನಪಾರ್ಟೆ
ಎನ್ನುತ್ತಾಳೆ ಟೀಚರ್.
ಯುದ್ಧ ಗೆದ್ದ, ಎನ್ನುತ್ತಾವೆ ಮಕ್ಕಳು
ಯುದ್ಧ ಸೋತ, ಎನ್ನುತ್ತಾವೆ ಮಕ್ಕಳು
ಯಾರಿಗೂ ಗೊತ್ತಿಲ್ಲ.
ನಮ್ಮ ಕಸಾಯಿಗೊಂದು ನಾಯಿ ಇತ್ತು,
ನೆಪೋಲಿಯನ್ ಅಂತ ಅದರ ಹೆಸರು,
ಅನ್ನುತ್ತಾನೆ ಫ್ರಾಂಟಿಸೆಕ್.
ಅದನ್ನು
ಹೊಡೆದು ಬಡಿದು ಮಾಡುತ್ತಿದ್ದ,
ಹಸಿವಿನಿಂದ ಸತ್ತಿತು ಅದು.
ಈಗ ಎಲ್ಲಾ ಮಕ್ಕಳೂ ಮರುಗುತ್ತಾರೆ
ನೆಪೋಲಿಯನಿಗೋಸ್ಕರ.
ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು.
ತುಂಬ ಇಷ್ಟವಾದವು…