ಒಳಗೆ ಯಾರೊಬ್ಬರೂ ಇಲ್ಲ
ಅವಳು ಬೆನ್ನು ಹಾಕಿ ಕುಳಿತಿದ್ದಳು
ಚಿಗುರು ಎಲೆಯಂತೆ ಹಸಿಯಾಗಿದ್ದಳು
ಭೂಪಟದ ಹಿಂಭಾಗದಂತೆ ವಿಸ್ತರಿಸಿದ್ದಳು
ಭೂಮಿಯ ಒತ್ತುವರಿ ಪ್ರದೇಶಗಳು
ನನಗೆ ಗೋಚರಿಸಲಿಲ್ಲ
ಅವನು ‘ಬಾರೆ’ ಎಂದಾಗ
ಕರಿಮಣಿಯ ಸಪ್ಪಳವೂ ಕೇಳಿಸಲಿಲ್ಲ!
ನದಿಯ ಆಚೆ ಅವರ ಮನೆ
ಅದಕೂ ಮುಂಚೆ ಬರುವ ಗಾಢ ಕಾಡು
ಆ ಮನೆಯ ಎದುರು ಅಂಗಳ
ಅಂಗಳದ ಮೂಲೆಗೆ ಕೋಳಿಗೂಡು
ಮನೆಗೆ ಹೊದೆಸಿದ ಹೆಂಚಿನ ಮಾಡು
ಆ ಮಾಡಿನ ಮೇಲೆ ಬೋಳು ಆಕಾಶ
ಆಕಾಶದಡಿ ಸೂರ್ಯನ ಅಡಗಿಸಿಟ್ಟ ಗುಡ್ಡ
ಆ ಮನೆಯ ಎಡಗಡೆ ದನದ ಕೊಟ್ಟಿಗೆ
ಕೊಟ್ಟಿಗೆಯ ಬಲಗಡೆ ಗೊಬ್ಬರದ ಹೊಂಡ
ಆ ಮನೆಯ ಒಳಗಿನ ಮಾತು ಹೇಳಲು
ಯಾರೊಬ್ಬರೂ ಇಲ್ಲ…..
ಅಕ್ಷಯ ಕಾಂತಬೈಲು ತರುಣ ಕವಿ.
ಎಂಜಿನಿಯರಿಂಗ್ ಪದವಿಯ ನಂತರ ಅಪ್ಪನಿಗೆ ಕೃಷಿಯಲ್ಲಿ ಸಹಾಯ ಮಾಡುತ್ತಿರುವವರು.
ಸಾಹಿತ್ಯ, ಕೃಷಿ ಇಷ್ಟದ ವಿಷಯಗಳು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ