“ಇಂದಿನ ಸ್ತ್ರೀಯರು ಯಾತನೆ, ಶೋಷಣೆ, ಹಿಂಸೆಗಳನ್ನು ಸುಮ್ಮನೆ ಬಾಯಿಮುಚ್ಚಿಕೊಂಡು ಸಹಿಸಲಾರರು ಎನ್ನುವುದು ಸ್ಪಷ್ಟವಾಗಿಯೇ ಕಾಣುತ್ತದೆ. ರಾಮಾಯಣವನ್ನು ಮೇಲ್ಜಾತಿಗಳು ಸ್ತ್ರೀಯರ ದಮನಕ್ಕೆ ಅಸ್ತ್ರವೆಂಬಂತೆ ಶತಶತಮಾನಗಳಿಂದಲೂ ಬಳಸುತ್ತಲೇ ಬಂದಿರುತ್ತವೆ. ಗಂಡಸರಿಗೆ ಅವರ ಬಲ ಪ್ರದರ್ಶನಕ್ಕೆ, ಅಹಂಕಾರ ಬೆಳೆಸಲಿಕ್ಕೆ, ಯುದ್ಧ ದಾಹಕ್ಕೆ, ರಾಜಕೀಯ ಅಧಿಕಾರಕ್ಕೆ ಎಲ್ಲಕ್ಕೂ ಹೆಣ್ಣಿನ ದೇಹ ಒಂದು ಉಪಕರಣವಾಗಿ ಹೇಗೆ ಬಳಕೆಯಾಗುತ್ತದೆ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಸಲು ಪುರಾಣ ಕಥೆಗಳು ನೆರವಾಗಬಲ್ಲವು.”
ಅಜಯ್ ವರ್ಮಾ ಅಲ್ಲುರಿ ಅನುವಾದಿಸಿದ ತೆಲುಗು ಲೇಖಕಿ ಓಲ್ಗಾ ಅವರ ‘ವಿಮುಕ್ತೆ’ ಕೃತಿಗೆ ಬಿ.ಎನ್.ಸುಮಿತ್ರಾಬಾಯಿ ಬರೆದ ಮುನ್ನುಡಿ
‘ವಿಮುಕ್ತೆ’ ಎಂಬ ಈ ಕಥಾಸಂಕಲನ ಓಲ್ಗಾ ಎನ್ನುವ ಕಾವ್ಯನಾಮದಿಂದ ಸುಪರಿಚಿತರಾಗಿರುವ ಆಂಧ್ರದ ಪ್ರಸಿದ್ಧ ಲೇಖಕಿ ಪೋಪೂರಿ ಲಲಿತಕುಮಾರಿ ಅವರ ‘ವಿಮುಕ್ತ’ ಎಂಬ ತೆಲುಗು ಕೃತಿಯ ಕನ್ನಡಾನುವಾದ. ಈ ಸಂಕಲನಕ್ಕೆ ದೆಹಲಿಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿರುವುದರಿಂದ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳೆಲ್ಲಕ್ಕೂ ಅದು ನಿಯಮಿತವಾಗಿಯೇ ಅನುವಾದಗೊಂಡಿರುತ್ತದೆ. ಆದರೆ ಯುವ ಬರಹಗಾರರಾದ ಅಜಯ್ ವರ್ಮಾ ಅಲ್ಲೂರಿಯವರು ಮೂಲದ ಕಥೆಗಳ ಸೊಗಸಿಗೆ ಮನಸೋತು ಅದನ್ನು ಕನ್ನಡದಲ್ಲೂ ಹಿಡಿದುಕೊಡುವ ಆಸಕ್ತಿಯಿಂದ ಈ ಅನುವಾದ ಮಾಡಿರುತ್ತಾರೆ. ಈ ಕಥೆಗಳೆಲ್ಲ ಕನ್ನಡದಲ್ಲಿಯೇ ರಚಿತವಾದವು ಎನ್ನುವಷ್ಟು ಸಹಜವಾಗಿ ಕಾವ್ಯಗುಣವುಳ್ಳ ಭಾಷೆಯನ್ನು ಧ್ವನಿಪೂರ್ಣವಾಗಿ ಬಳಸಿರುವುದು ಅಲ್ಲೂರಿಯವರ ಅನುವಾದವನ್ನು ಮಹತ್ವದ್ದಾಗಿಸಿರುತ್ತದೆ.
ಓಲ್ಗಾ ಅವರನ್ನು ಕನ್ನಡಿಗರು ಕಂಡಿರುವುದು ಒಬ್ಬ ಸ್ತ್ರೀವಾದಿ ಲೇಖಕಿ ಮತ್ತು ಸೋಷಿಯಲ್ ಆಕ್ಟಿವಿಸ್ಟ್ ಎಂದೇ ಆಗಿದೆ. ಮೊದಲ ಹಂತದ ಸ್ತ್ರೀವಾದದ ವಿಚಾರಗಳನ್ನು ನಂಬುವ ವೋಲ್ಗಾ ‘ಸೋದರಿತ್ವ’ವೇ ಮಹಿಳೆಯರ ವಿಮೋಚನೆಯ ಪರಿಣಾಮಕಾರಿ ವಿಧಾನ ಎಂದು ದೃಢವಾಗಿ ನಂಬುವವರು. ಈ ಸಂಕಲನದ ಕಥೆಗಳ ಪ್ರಧಾನ ತಾತ್ವಿಕ ತಳಹದಿ ಕೂಡ ಅದೇ ಆಗಿದೆ ಎನ್ನುವುದನ್ನು ಕಾಣಬಹುದು.
ರಾಮಾಯಣದ ಕೆಲವು ಅಪ್ರಮುಖ ಮಹಿಳಾ ಪಾತ್ರಗಳಾದ ಶೂರ್ಪನಖಿ, ಅಹಲ್ಯೆ, ರೇಣುಕೆ, ಊರ್ಮಿಳೆ ಹಾಗೂ ಒಂದು ಮುಖ್ಯಪಾತ್ರ ಮಂಡೋದರಿ- ಇವರುಗಳ ಸುತ್ತಲೂ ಇಲ್ಲಿಯ ಕಥೆಗಳು ಹಬ್ಬಿರುತ್ತವೆ. ರಾಮ-ಸೀತೆಯರ ಚರಿತ್ರೆಯ ಬೇರೆ ಬೇರೆ ಸಂದರ್ಭಗಳಲ್ಲಿ ಬರುವ ಈ ಮಹಿಳೆಯರೆಲ್ಲರನ್ನೂ ಒಂದು ಬಲವಾದ ಪಿತೃಪ್ರಧಾನ ಸಂಸ್ಕೃತಿಯು ಆವರಿಸುತ್ತದೆ. ಅದರ ನಿರೀಕ್ಷಿತ ಪತ್ನೀಧರ್ಮ, ಮಾತೃಧರ್ಮಗಳನ್ನು ತಮ್ಮದಾಗಿಸಿಕೊಂಡು ಗಂಡ, ಮಕ್ಕಳು, ಕುಟುಂಬಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ಇವರೆಲ್ಲರೂ ಅದೇ ಸಂಬಂಧಗಳ ಮೂಲಕವೇ ಅಪಮಾನ, ಹಿಂಸೆ, ಸಂಕಟಗಳಿಗೆ ಒಳಗಾದವರೂ ಹೌದು. ಈ ಅಂಶಕ್ಕೆ ಒತ್ತುಕೊಟ್ಟು ಓಲ್ಗಾ ಗೌಣ ಪಾತ್ರಗಳನ್ನು ಕತೆಗಳ ಕೇಂದ್ರಕ್ಕೆ ತಂದು ಅವರನ್ನು ವ್ಯಕ್ತಿಗಳನ್ನಾಗಿ ಅವರದೇ ನಿಟ್ಟಿನಿಂದ ಅವರ ಬದುಕಿನ ರೂಪವನ್ನು ಆಧುನಿಕ ಹೆಣ್ಣಿನ ಪ್ರಜ್ಞೆಯಿಂದ ಪರಿಶೀಲಿಸುತ್ತಾರೆ.
ಈ ಪರಿಶೀಲನೆ ನಡೆದಿರುವುದು ಸೀತೆಯ ಮನದಾಳದಿಂದ ಮೇಲೆದ್ದು ಬರುವ ಸ್ಮೃತಿಗಳ ಮೂಲಕ, ಅವಳ ಅಂತರಂಗದಲ್ಲಿ ಎಂಬುದು ಇಲ್ಲಿನ ಮುಖ್ಯ ತಂತ್ರವಾಗಿದೆ. ಅಯೋಧ್ಯೆಯಿಂದ ರಾಮ ಅವಳನ್ನು ಹೊರದೂಡಿದ. ಅವಳು ಈಗ ವಾಲ್ಮೀಕಿ ಆಶ್ರಮದಲ್ಲಿ ಮಕ್ಕಳನ್ನು ಹಡೆದು ಅವರನ್ನು ಬೆಳೆಸುತ್ತಾ ಬದುಕುತ್ತಿದ್ದಾಳೆ. ಈ ಮಕ್ಕಳು ಈಗ ತಮ್ಮ ತಂದೆಯ ಬಗೆಗೆ ತಿಳಿಯಲು, ಆತನನ್ನು ಕಾಣಲು ತವಕಿಸುವ ಹಂತಕ್ಕೆ ಬಂದಿದ್ದು ಅವರು ಇನ್ನು ತನ್ನಲ್ಲಿ ಉಳಿಯಲಾರರು ಎನ್ನುವ ಅರಿವು ಅವಳಿಗೆ ಇದೆ. ಈಗ ಅವಳು ತನ್ನ ಬದುಕನ್ನು ಮತ್ತೆ ಮತ್ತೆ ಚಿಂತಿಸಿ ವಿಮರ್ಶಿಸತೊಡಗಿದ್ದಾಳೆ. ಈ ಮನೋಮಂಥನದಲ್ಲಿ ಹಿಂದೆ ರಾಮನೊಂದಿಗೆ ವನವಾಸದ ಕಾಲದಲ್ಲಿ ತಾನು ಭೇಟಿಯಾಗಿದ್ದ ಅಹಲ್ಯೆ, ರೇಣುಕೆಯಂತ ಸ್ತ್ರೀಯರು ಮನದಾಳದಿಂದ ಮೇಲೆದ್ದು ಬರುತ್ತಾರೆ. ಎಂದೋ ಅವರನ್ನು ಕಂಡಾಗ ಅವರ ಬಾಳಿನಲ್ಲಿ ಕಂಡುಂಡ ಮಾತಿನ ಸತ್ಯ ಅವಳಿಗೆ ಅರ್ಥವಾಗದಿದ್ದರೂ ಈಗ ಎಲ್ಲವೂ ತಿಳಿಯಾಗಿ ಸ್ಪಷ್ಟವಾಗಿ ಅರಿವಾಗುತ್ತದೆ.
ಅಗ್ನಿಪರೀಕ್ಷೆಯ ಅವಮಾನ, ರಾಮನ ಬದುಕಿನಿಂದಲೇ ಹೊರದೂಡಿಸಿಕೊಂಡ ಕ್ರೂರತೆಗಳಿಂದ ಯಾತನೆಗೆ ಒಳಗಾಗಿರುವ ಈ ಹೊತ್ತಿಗೆ ಸೀತೆಗೆ ಪತ್ನೀಧರ್ಮ, ಮಾತೃಧರ್ಮ, ಪಾತಿವ್ರತ್ಯಗಳು ಗಂಡಸರ ಹಿತಕ್ಕಾಗಿ ಕಟ್ಟಲಾಗಿರುವ ಮೌಲ್ಯಗಳಷ್ಟೇ. ನಿಜವೆಂದರೆ ಹೆಣ್ಣಿನ ಶೀಲದ ಶುದ್ದಿಯ ಬಗೆಗಿನ ಅಪನಂಬಿಕೆ ಅಹಲ್ಯೆ, ರೇಣುಕೆಯರಿಗಷ್ಟೇ ಅಲ್ಲದೆ ತನ್ನ ಸಂಕಟಕ್ಕೆ ಮೂಲವಾಗುತ್ತದೆ ಎನ್ನುವ ಸತ್ಯ ತಿಳಿಯುತ್ತದೆ. ಈಗ ಅವಳು ತನ್ನ ಇರುವಿಕೆಯ ಅರ್ಥವೇನೆಂದು, ತಾನೇ ತಾನಾಗಿರುವುದೆಂದರೆ ಏನೆಂದು ಚಿಂತಿಸುತ್ತಾಳೆ.
ಯಾರಿಗಾಗಿ ತಾನು ಬದುಕುತ್ತಿದ್ದೇನೆ ಎಂದು ತಿಳಿದಿದ್ದಳೋ, ಯಾರಿಂದ ತನಗೆ ಜನಕರಾಜನ ಮಗಳು, ರಾಜ ರಾಮಚಂದ್ರನ ಧರ್ಮಪತ್ನಿ, ಮತ್ತೀಗ ರಾಜಕುಮಾರರಾದ ಲವ-ಕುಶರ ಮಾತೆ ಎಂಬ ಅಂಕಿತಗಳಿವೆಯೆಂದು ಹೆಮ್ಮೆ ಪಟ್ಟಿದ್ದಳೋ ಅವು ಯಾವುವೂ ತನ್ನದೇ ಗುರುತುಗಳಲ್ಲ. ಅವೆಲ್ಲವನ್ನೂ ಮೀರಿದ, ತಾನು ತಾನೇ ಆಗಿರುವ ನೆಲೆಯೆಂದರೆ ತಾನು ಮೂಲಭೂತವಾಗಿ ‘ಭೂಪುತ್ರಿ’ ಎನ್ನುವುದೇ ಎಂಬ ಅರಿವಾಗುತ್ತದೆ. ಈ ಹೊಸದಾದ ಅರಿವನ್ನು ಸೀತೆಯೊಳಗೆ ಹೊಳೆಯಿಸಲು ಆ ಎಲ್ಲಾ ಹಿಂದಿನ ಮಹಿಳೆಯರ ಅನುಭವ, ವಿಚಾರಗಳು ದಾರಿದೀಪವಾಗುವಂತೆ ಕಲ್ಪಿಸುತ್ತಾರೆ ಲೇಖಕಿ. ಈ ಸ್ತ್ರೀಯರು ಅವಳಲ್ಲಿ ಸ್ನೇಹ ಅಂತಃಕರಣಗಳಿಂದ ತಿಳಿಹೇಳುವುದನ್ನು ಕಾಣುತ್ತೇವೆ. ಸೀತೆಯ ಓರಗೆಯವರೇ ಆದ ಶೂರ್ಪನಖಿ ಮತ್ತು ಊರ್ಮಿಳೆಯರು ನೇರವಾಗಿಯೇ ಅವಳಿಗೆ ಈಗ ತಮ್ಮ ಅನುಭವವನ್ನು ತಿಳಿಸುವ ಸನ್ನಿವೇಶಗಳು ಇಲ್ಲಿವೆ. ಆ ಒಬ್ಬೊಬ್ಬರ ನಿಜವೂ ಹೊಳೆಯುತ್ತಿರುವ ಹಾಗೆ ಸೀತೆಯೂ ಒಳಗಿನಿಂದ ದೃಢವಾಗುತ್ತಾ ಬೆಳೆಯುವುದನ್ನು ಓಲ್ಗಾ ಅವರು ತುಂಬಾ ಕಲಾತ್ಮಕವಾಗಿ ಪ್ರತ್ಯಕ್ಷೀಕರಿಸುವ ಬಗೆ ಮಹತ್ವದ್ದಾಗಿದೆ. ಪರಂಪರೆ ಹೇಳುವ ಸಹೋದರತ್ವಕ್ಕೆ ಪರ್ಯಾಯವಾಗಿ ಸೋದರಿತ್ವವನ್ನು ಹೀಗೆ ಹೆಣ್ಣಿನ ಬಿಡುಗಡೆಗೆ ದಾರಿಯಾಗಿ ಕಥೆಗಳ ಒಳಗಿನಿಂದಲೇ ಧ್ವನಿ ಪಡೆಯುತ್ತದೆ.
ಇಲ್ಲಿ ಬರುವ ವಿಮುಕ್ತೆಯರ ಸ್ವರೂಪವೇನೆಂದು ನೋಡೋಣ-
ಪರಂಪರೆಯು ಹೇಳುವ ಶೂರ್ಪನಖಿ ಒಬ್ಬ ರಕ್ಕಸಿ, ಸುಂದರಿಯ ರೂಪದಲ್ಲಿ ಬಂದು ರಾಮ ಲಕ್ಷ್ಮಣರನ್ನು ಕಾಮಿಸಲು ಯತ್ನಿಸಿದ ಕುತ್ಸಿತ ಹೆಣ್ಣು. ಅವಳ ಈ ಉದ್ಧಟತನಕ್ಕಾಗಿ ಲಕ್ಷ್ಮಣ ಅವಳ ಕಿವಿಮೂಗುಗಳನ್ನು ಕತ್ತರಿಸಿ ದಂಡಿಸಿ ತನ್ನ ಸಂಯಮವನ್ನು ಮೆರೆಸುವವನು. ಆದರೆ ಓಲ್ಗಾ ಕಥೆಯ ನಾಯಕಿ ಶೂರ್ಪನಖಿ ತುಂಬು ಹರೆಯವೇ ಸೌಂದರ್ಯವಾಗಿದ್ದು ಬದುಕಿನ ಸವಿಯನ್ನು ಅನುಭವಿಸಲು ಹಾತೊರೆದು ಆ ಕಾರಣಕ್ಕಾಗಿ ಕಿವಿಮೂಗುಗಳೇ ಇರದ ಕುರೂಪಿತನದಲ್ಲಿ ಹೇಗೆ ಬದುಕಿರಬಹುದು ಎಂಬುದರ ಅವಳ ಕಥೆಯನ್ನು ಎತ್ತಿಕೊಳ್ಳುತ್ತಾರೆ. ಪ್ರಕೃತಿ ಸಹಜವಾಗಿದ್ದ ರೂಪ ಕಳೆದು ಹೋಗುವುದರ ಜೊತೆಗೇ ಯಾರಿಗೂ ಬೇಡದವಳಾಗಿ, ಎಲ್ಲರ ಅಪಹಾಸ್ಯದ ಗುರಿಯಾಗಿ, ತನ್ನ ಬಗೆಗೆ ತಾನೂ ಹೇಸುವಂತಾದ ಅಪಾರವಾದ ದುಃಖ, ಅವಮಾನಗಳಿಂದ ಹೊರಬರಲು ನಿರಂತರವಾಗಿ ಅವಳು ನಡೆಸಿದ ಮನೋಮಂಥನವೇ ಕಾರಣವಾಗುತ್ತದೆ. ಶೂರ್ಪಣಖಿಯ ಈ ಯಾತನೆಯ ಚಿತ್ರಣವೇ ಮನೋವೇದಕ. ಆದರೆ ಅದನ್ನು ಗೆದ್ದು ಅಸಾಧಾರಣ ಪ್ರಕೃತಿ ಪ್ರೇಮಿಯಾಗಿ ಸಾವಿರಾರು ಸುಂದರ ಹೂಗಳ ತೋಟ ಬೆಳೆಸಿ ಆತ್ಮ ಸೌಂದರ್ಯದಿಂದ ಬೆಳಗುವ ಶೂರ್ಪಣಖಿ, ಹೆಣ್ಣಿಗೆ ದೇಹ ಸೌಂದರ್ಯವೇ ಸರ್ವಸ್ವವೆನ್ನುವ ದೃಷ್ಟಿಕೋನವನ್ನೇ ಪಲ್ಲಟಗೊಳಿಸುತ್ತಾಳೆ!
ಅವಳು ಈಗ ವಾಲ್ಮೀಕಿ ಆಶ್ರಮದಲ್ಲಿ ಮಕ್ಕಳನ್ನು ಹಡೆದು ಅವರನ್ನು ಬೆಳೆಸುತ್ತಾ ಬದುಕುತ್ತಿದ್ದಾಳೆ. ಈ ಮಕ್ಕಳು ಈಗ ತಮ್ಮ ತಂದೆಯ ಬಗೆಗೆ ತಿಳಿಯಲು, ಆತನನ್ನು ಕಾಣಲು ತವಕಿಸುವ ಹಂತಕ್ಕೆ ಬಂದಿದ್ದು ಅವರು ಇನ್ನು ತನ್ನಲ್ಲಿ ಉಳಿಯಲಾರರು ಎನ್ನುವ ಅರಿವು ಅವಳಿಗೆ ಇದೆ. ಈಗ ಅವಳು ತನ್ನ ಬದುಕನ್ನು ಮತ್ತೆ ಮತ್ತೆ ಚಿಂತಿಸಿ ವಿಮರ್ಶಿಸತೊಡಗಿದ್ದಾಳೆ.
ಅಹಲ್ಯೆಯ ಕಥೆಯಾದ ‘ಮೃಣ್ಮಯನಾದ’, ರೇಣುಕೆಯ ಕಥೆ ಹೇಳುವ ‘ಮರಳ ಮಡಕೆ’ ಹೆಸರುಗಳೇ ಮಹತ್ವದ ಧ್ವನಿಹೊಂದಿವೆ. ಎರಡೂ ಮಣ್ಣನ್ನು ಸೂಚಿಸುತ್ತವೆ. ಇವರಿಬ್ಬರ ಕಥೆಗೂ ತಳಹದಿಯಾಗಿರುವುದು ಹೆಣ್ಣಿನ ಲೈಂಗಿಕನಿಷ್ಠೆಯ ಬಗೆಗೆ ಯುಗಯುಗಗಳಿಂದಲೂ ಗಂಡು ಬೆಳೆಸಿಕೊಂಡು ಬಂದಿರುವ ಅಪನಂಬಿಕೆಯೇ. ಅಹಲ್ಯೆ ತನ್ನ ತಪ್ಪಿಲ್ಲವಾದರೂ, ತನ್ನ ಒಪ್ಪಿಗೆಯೂ ಇಲ್ಲದಿದ್ದರೂ ಪರಗಂಡಸೊಬ್ಬನು ವಂಚಿಸಿ ಕೂಡಿ ಹೋದದ್ದಕ್ಕಾಗಿ ಗೌತಮನಿಂದ ದೂಷಿತೆಯಾಗಿ ಲೋಕದ ದೃಷ್ಟಿಗೆ ಕಲ್ಲಾಗಿ ಕಾಡಿನೊಳಗೆ ಹೋಗಿರುವವಳು.
ರೇಣುಕೆಯು ಕರಕುಶಲ ಕಲೆಯಲ್ಲಿ ನುರಿತಿದ್ದವಳು. ಪರಮ ಏಕಾಗ್ರತೆಯಲ್ಲಿ ಮರಳಲ್ಲೂ ಮಡಕೆ ಮಾಡುವ ನಿಪುಣೆ. ಹಾಗೆ ಮರಳ ಮಡಿಕೆ ಮಾಡುವಾಗ ಒಬ್ಬ ಗಂಡಸಿನತ್ತ ನೋಡಿದುದೆ ಗಂಡನಿಗೆ ದಂಡನಾರ್ಹ ಅಪರಾಧವಾಗಿ ಕಾಣುತ್ತದೆ. ಕೃದ್ಧನಾದ ಅವನು ರೇಣುಕೆಯ ತಲೆ ಕಡಿಯುವಂತೆ ಮಗನಿಗೆ ಆಜ್ಞೆ ಮಾಡಿದರೆ, ಪರಶುರಾಮ ಅವಿಚಾರವಾಗಿ ಕೊಡಲಿಯೆತ್ತಿ ಕೊರಳಿಗೆ ಹೊಡೆದೂ ಬಿಡುತ್ತಾನೆ. ಗಂಡನ ಕೋಪವಿಳಿದಾಗ ಮಗನಿಗೆ ತಲೆ ಕಡಿಯದಿರಲು ಹೇಳಿದರೂ ಅರ್ಧ ಸೀಳಿದ್ದ ಕೊರಳಿನಿಂದ ಸಾಯ ತೊಡಗಿದ್ದ ರೇಣುಕೆಗೆ ಬೇರೆ ಸ್ತ್ರೀಯರು ಮಾಡಿದ ಚಿಕಿತ್ಸೆಯಿಂದ ಅವಳು ಬದುಕಿಕೊಳ್ಳುತ್ತಾಳೆ. ಈ ಮೃಣ್ಮಯ ಹೆಣ್ಣುಗಳಿಗೂ ನೆಲದ ಮಗಳೇ ಆಗಿರುವ ಸೀತೆಗೂ ಮಣ್ಣಿನ ಸಂಬಂಧವಷ್ಟೇ ಅಲ್ಲ ಇರುವುದು, ಲೈಂಗಿಕವಾದ ಅಪವಿತ್ರತೆಯ ದೋಷಾರೋಪಕ್ಕೆ ಸೀತೆಯೂ ಇವರಂತೆಯೇ ಕಾಲಾಂತರದಲ್ಲಿ ಗುರಿಯಾಗುತ್ತಾಳೆ. ಇವರೆಲ್ಲರೂ ಒಂದೇ ವ್ಯವಸ್ಥೆಯ ಒಂದೇ ಬಗೆಯ ಮೌಲ್ಯಗಳಿಂದಾಗಿ ಅವಮಾನ, ಸಂಕಟಗಳಿಗೆ ಒಳಗಾಗಿರುವುದೂ ಎದ್ದು ಕಾಣುವ ಸಂಗತಿ. ಆದರೆ ಓಲ್ಗಾ ಹೆಣ್ಣುಗಳನ್ನು ವ್ಯವಸ್ಥೆಯ ಬಲಿಪಶುಗಳೆಂದು ತೋರಿಸುತ್ತಿಲ್ಲ. ಬದಲಾಗಿ ಆ ಹೆಣ್ಣುಗಳು ಅನುಮಾನಿಸುವವರ ಪರಂಪರೆಯ ಸಂಕೋಲೆಗಳಿಂದ ಮುಕ್ತರಾಗಿ ತಮಗೆ ತಾವೇ ಆಗಿ ಹೊಸ ಜೀವನಗಳನ್ನು ನಡೆಸಬಲ್ಲ ಸ್ವಾಯತ್ತ ನೆಲೆಗಳಲ್ಲಿರುವುದನ್ನು ಮುನ್ನೆಲೆಗೆ ತಂದಿರುತ್ತಾರೆ.
ಮೇಲೆ ಪ್ರಸ್ತಾಪಿಸಿರುವ ‘ಬಂಧನದಿಂದ ಬಿಡುಗಡೆಗೆ’ ಎನ್ನುವ ರೀತಿಯ ಮಾದರಿಗೆ ವೈದೃಶ್ಯದ ಹಾಗಿರುವ ಇನ್ನೆರಡು ಕಥೆಗಳ ಬಗೆಗೆ ಕೊಂಚ ಹೇಳಲೆಬೇಕು. ‘ಅಶೋಕ’ ಮತ್ತು ‘ಬಂಧಿತ’ ಎಂಬ ಕಥೆಗಳಲ್ಲಿ ಮೊದಲಿನದು ಮಂಡೋದರಿಯನ್ನೂ ಎರಡನೆಯದು ರಾಮನನ್ನು ಕುರಿತದ್ದಾಗಿವೆ. ‘ಅಶೋಕ’ ಎನ್ನುವ ಹೆಸರು ಕೇವಲ ರಾವಣನು ಹೆಂಡತಿಗೆ ಕಾಣಿಕೆಯಾಗಿ ಕೊಟ್ಟ ಉದ್ಯಾನವನದ ಹೆಸರು ಅಲ್ಲ. ಅದು ಮಂಡೋದರಿಯ ಸಮಗ್ರ ವ್ಯಕ್ತಿತ್ವಕ್ಕೇ ಕೊಟ್ಟಿರುವ ಧ್ವನಿಪೂರ್ಣ ಹೆಸರು. ಈ ಮಂಡೋದರಿ ಸೀತೆಯಂಥ ಆರ್ಯಮೌಲ್ಯದೊಳಗೆ ಉಳಿಯುವ ಸ್ತ್ರೀ ಮಾದರಿಯಲ್ಲ. ಇವಳು ಓಲ್ಗಾ ಅವರ ಕೈಯಲ್ಲಿ ಅಪ್ಪಟ ದ್ರಾವಿಡ ಮಹಿಳೆ ಮಾತ್ರವಲ್ಲದೆ ತನ್ನ ಆ ಸಂಸ್ಕೃತಿಯನ್ನೇ ದೃಢವಾಗಿ ಅಭಿಮಾನದಿಂದ ಎತ್ತಿ ಹಿಡಿಯುವ ವಿಚಾರವಾದಿಯೂ ಆಗಿದ್ದಾಳೆ!
ಆರ್ಯರ ಸಂಸ್ಕೃತಿಯ ಮುಖ್ಯ ಲಕ್ಷಣವೆಂದರೆ ಹೆಣ್ಣನ್ನು ಶೋಷಿಸುವುದು ಮತ್ತು ಪ್ರಕೃತಿಯನ್ನು ನಾಶ ಮಾಡುವುದು ಎಂದು ನಂಬಿರುವ ಅವಳಿಗೆ ತನ್ನ ಗಂಡ ಆರ್ಯರನ್ನು ಸದೆಬಡಿಯಲೆಂದು ಅವರಂತೆಯೇ ತಾನೂ ಕಾಡುಗಳನ್ನು ಕಡಿದು ಲಂಕೆಯಂಥ ನಗರ ಸಂಸ್ಕೃತಿ ಮರೆಸುವುದು ಮೂರ್ಖತನವಾಗಿ ಕಾಣುತ್ತದೆ. ತನ್ನದೇ ಆದ ಸ್ವಾತಂತ್ರಜಾಗ ಎಂದುಕೊಂಡಿದ್ದ ಅಶೋಕವನದೊಳಗೂ ಹೆಣ್ಣೊಬ್ಬಳ ಅಳು ಕೇಳತೊಡಗುವುದು, ಲಂಕೆಗೆ ಹಚ್ಚಿದ ಬೆಂಕಿ ಅಶೋಕವನಕ್ಕೂ ಸೋಂಕುವುದು ತಮ್ಮ ದ್ರಾವಿಡ ಸಂಸ್ಕೃತಿಯ ವಿನಾಶದ ಸಂಕೇತವಾಗಿ ಮಂಡೋದರಿಗೆ ಭಾಸವಾಗುತ್ತದೆ. ಅದು ಸತ್ಯವೇ ಆಗಿ, ರಾವಣ ಯುದ್ಧದಲ್ಲಿ ಹತನಾದಾಗ ಅವಳು ಆರ್ಯ ವಿಧವೆಯರ ರೀತಿ ತನ್ನ ಮಂಗಳದ ಅಲಂಕಾರಗಳನ್ನು ತೊರೆಯಲು ಒಪ್ಪುವುದಿಲ್ಲ. ತಮ್ಮ ಸಂಪ್ರದಾಯದಂತೆ ರಾವಣನ ದೇಹವನ್ನು ಕಾಡಿಗೆ ಅರ್ಪಿಸಬೇಕೆಂದೂ, ಅಗ್ನಿಸಂಸ್ಕಾರ ಮಾಡಕೂಡದೆಂದೂ ವಿರೋಧಿಸುತ್ತಾಳೆ.
ನಿತ್ಯವೂ ತನ್ನನ್ನೂ, ತನ್ನ ಅರಮನೆಯನ್ನೂ, ಇಡೀ ಆವರಣವನ್ನೂ ಬಗೆಬಗೆಯ ಪುಷ್ಪಾಲಂಕಾರಗಳಿಂದ ಸುಂದರವೂ ಪರಿಮಳಭರಿತವೂ ಆಗುವಂತೆ ಮಾಡುವ ಕಲೆ ತಿಳಿದಿರುವ ಈಕೆಗೆ ರಾವಣನೊಂದಿಗೆ ಸಂಗೀತ ಸಾಧನೆಯಲ್ಲಿ, ಪಾನಗೋಷ್ಠಿಯಲ್ಲಿ ಸಂಭ್ರಮಸುವುದರಲ್ಲಿಯೇ ಬದುಕಿನ ಸಕಲ ಸಾರವನ್ನು ಹೀರುವ ಸಂತೋಷ ಸಿಗಬಲ್ಲದು. ಬಹುಶಃ ಓಲ್ಗಾ ಅವರ ಕಲ್ಪನೆಯ ಪೂರ್ಣ ವಿಮುಕ್ತ ಮಹಿಳೆಯ ನೆಲೆ ಇದೇನೋ ಎನ್ನುವ ಅನುಮಾನ ಬಂದರೆ ಅಚ್ಚರಿಯಿಲ್ಲ. ಏಕೆಂದರೆ ಅಷ್ಟು ತನ್ಮಯತೆಯಿಂದ ಅವರು ಈ ಪಾತ್ರವನ್ನು ಕಡೆದಿರುತ್ತಾರೆ.
ಈ ಸಂಕಲನ ಕಟ್ಟಿಕೊಡುವ ವಿಮುಕ್ತಿಯ ಚಿತ್ರಕ್ಕೆ ವೈದೃಶ್ಯವಾಗಿರುವುದು ‘ಬಂಧಿತ’ ಕಥೆಯ ರಾಮನ ಚಿತ್ರ.ಪಿತೃಪ್ರಾಧಾನ್ಯದ, ಆರ್ಯ ಧರ್ಮದ, ರಾಜತ್ವದ, ಪುರುಷಾಧಿಕಾರದ ಎಲ್ಲ ಮೌಲ್ಯಗಳ ಪರಮ ರಕ್ಷಕನಾಗುವ ಹಠದಲ್ಲಿ ರಾಮನು ಕೌಟುಂಬಿಕವಾದ ಪ್ರೀತಿಯ ಸಂಬಂಧಗಳಿಂದ, ಮಾನವೀಯ ಅಂತಃಕರಣದಿಂದಲೂ ಮುಕ್ತನಾಗಿಬಿಡುವ ಮತ್ತು ತಾನೇ ಕಟ್ಟಿಕೊಂಡ ದುಃಖ ಮತ್ತು ಪಶ್ಚಾತಾಪಗಳ ಕೋಟೆಯಲ್ಲಿ ಬಂಧಿತನಾಗಿರುವ ಬಗೆಯನ್ನು ಮರುಕ ಮತ್ತು ವಿಡಂಬನೆಗಳಿಂದ ಮುಂದಿಡುತ್ತದೆ ಈ ಕಥೆ. ರಾಮನ ಈ ಬಂಧಿತ ಅವಸ್ಥೆ ಇಡೀ ಪುರುಷಕುಲಕ್ಕೊಂದು ಎಚ್ಚರಿಕೆಯೂ ಆಗಬಲ್ಲದು. ಇದರಲ್ಲಿ ಸೀತೆಯು ಹೇಳುವ ನುಡಿಯು ಮನನೀಯವಾಗಿದೆ- “ನಾನು ಭೂಪುತ್ರಿ ರಾಮಾ! ನಾನು ಯಾರೆಂದು ಈಗ ಅರಿತುಕೊಂಡಿದ್ದೇನೆ. ಈ ಇಡೀ ಲೋಕವೆಲ್ಲ ನನ್ನದೇ. ಯಾವ ಕೊರತೆಯೂ ಇಲ್ಲ ನನಗೆ.”
ಮಂಡೋದರಿಯ ಕಥೆ ಬರೆದಾಗ ಓಲ್ಗಾಗೆ ಆ ರೀತಿ ಪುರಾಣ ಪಾತ್ರಗಳನ್ನು ಬದಲಾಯಿಸಕೂಡದು ಎಂದು ಅನೇಕ ನಿಟ್ಟಿನ ಬೆದರಿಕೆಗಳು ಬಂದಿದ್ದವಂತೆ. ಅಂತಹ ಬೆದರಿಕೆಗಳಿಗೆ ಜಗ್ಗದೆ ಅವರು ಬರೆದು ಪ್ರಕಟಿಸಿದರು. ಒಂದು ಸಂದರ್ಶನದಲ್ಲಿ ಅವರು ತಮ್ಮ ನಿಲುವನ್ನು ವಿವರಿಸಿಯೂ ಇದ್ದಾರೆ- “ಇಂದಿನ ಸ್ತ್ರೀಯರು ಯಾತನೆ, ಶೋಷಣೆ, ಹಿಂಸೆಗಳನ್ನು ಸುಮ್ಮನೆ ಬಾಯಿಮುಚ್ಚಿಕೊಂಡು ಸಹಿಸಲಾರರು ಎನ್ನುವುದು ಸ್ಪಷ್ಟವಾಗಿಯೇ ಕಾಣುತ್ತದೆ. ರಾಮಾಯಣವನ್ನು ಮೇಲ್ಜಾತಿಗಳು ಸ್ತ್ರೀಯರ ದಮನಕ್ಕೆ ಅಸ್ತ್ರವೆಂಬಂತೆ ಶತಶತಮಾನಗಳಿಂದಲೂ ಬಳಸುತ್ತಲೇ ಬಂದಿರುತ್ತವೆ. ಗಂಡಸರಿಗೆ ಅವರ ಬಲ ಪ್ರದರ್ಶನಕ್ಕೆ, ಅಹಂಕಾರ ಬೆಳೆಸಲಿಕ್ಕೆ, ಯುದ್ಧ ದಾಹಕ್ಕೆ, ರಾಜಕೀಯ ಅಧಿಕಾರಕ್ಕೆ ಎಲ್ಲಕ್ಕೂ ಹೆಣ್ಣಿನ ದೇಹ ಒಂದು ಉಪಕರಣವಾಗಿ ಹೇಗೆ ಬಳಕೆಯಾಗುತ್ತದೆ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಸಲು ಪುರಾಣ ಕಥೆಗಳು ನೆರವಾಗಬಲ್ಲವು. ಇವತ್ತಿನ ಪರಿಸ್ಥಿತಿಯಲ್ಲಿ ಪುರಾಣಗಳನ್ನು, ರಾಮಾಯಣದಂತಹ ಪಾರಂಪರಿಕ ಬಲವುಳ್ಳ ಗ್ರಂಥಗಳನ್ನು ಪುನಃಶೋಧಿಸುವುದು ಅಗತ್ಯವಿದೆ.”
ರಾಮಾಯಣವು ಎಲ್ಲಾ ಕಾಲಕ್ಕೂ ಪುನಃಶ್ಚಿಂತನೆಗಳಿಗೆ ಆಕರವಾಗುತ್ತಲೇ ಬಂದಿರುತ್ತದೆ. ಕನ್ನಡದಲ್ಲಿ, ಕಳೆದ ಶತಮಾನದಲ್ಲಿ ಕುವೆಂಪು ಅವರು ಸಮಾಜಶಾಸ್ತ್ರ, ಮನೋವಿಜ್ಞಾನಿಗಳನ್ನು ಬಳಸಿಕೊಂಡು ತಮ್ಮ ವಿಚಾರಗಳನ್ನು ರಾಮನ ಕಥೆಯ ಮೂಲಕ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಹೇಳಿರುತ್ತಾರೆ. ಎಚ್.ವಿ.ಸಾವಿತ್ರಮ್ಮ ಅವರು ಇಡೀ ರಾಮಾಯಣವನ್ನು ಅದರ ಸ್ತ್ರೀಪಾತ್ರಗಳ ಅನುಭವಗಳ ದೃಷ್ಟಿಯಿಂದ ಮರುವ್ಯಾಖ್ಯಾನಿಸುವ ‘ಸೀತೆ ರಾಮ ರಾವಣ’ ಮತ್ತು ‘ವಿಮುಕ್ತಿ’ ಎನ್ನುವ ಎರಡು ಸ್ತ್ರೀವಾದಿ ಕಾದಂಬರಿಗಳನ್ನು ಕನ್ನಡಿಗರಿಗೆ ನೀಡಿರುತ್ತಾರೆ.
ಬಹಳ ಹಿಂದೆಯೇ ಮುಪ್ಪಾಳ್ಳ ರಂಗನಾಯಕಮ್ಮನವರು ತೆಲುಗಿನಲ್ಲಿ ರಚಿಸಿದ ‘ರಾಮಾಯಣ ವಿಷವೃಕ್ಷಮು’ ಎನ್ನುವ ಮಾರ್ಕ್ಸವಾದಿ ಕೃತಿಯು ದೇಶದುದ್ದಗಲಕ್ಕೂ ವಿವಾದಗಳನ್ನು ಎಬ್ಬಿಸಿದ್ದುದು ಸುಪರಿಚಿತ. ಇಂತಹ ವೈಚಾರಿಕ ಪರಂಪರೆಗೆ ಸೇರುವ ಅತ್ಯಂತ ಸಮಕಾಲೀನ ಔಚಿತ್ಯವಲ್ಲ ‘ವಿಮುಕ್ತೆ’ ಯನ್ನು ರಚಿಸಿರುವ ಓಲ್ಗಾ ಅವರಂತೆಯೇ ಅದನ್ನು ಸೊಗಸಾಗಿ ಕನ್ನಡಕ್ಕೆ ತಂದುಕೊಟ್ಟ ಅಜಯ್ ವರ್ಮಾ ಅಲ್ಲೂರಿಯವರೂ ಅಭಿನಂದನಾರ್ಹರಾಗಿದ್ದಾರೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ