ಸ್ತ್ರೀವಾದಿ ಎನ್ನುವುದರ ಅರ್ಥ ಸ್ತ್ರೀವಾದಿ ಅಂತ ಮಾತ್ರ ಅಷ್ಟೇಸ್ತ್ರೀವಾದಿ ಎಂದರೆ ಪುರದ ದ್ವೇಷಿ ಎಂದಲ್ಲ. ಎಂದಾಗಬೇಕಾಗೂ ಇಲ್ಲ. ಭಾವದ ಅದೆಷ್ಟೋ ಚಿಂತಕಿಯರು ನಮ್ಮ ನಡುವಿದ್ದಾರೆ. ಅವರ ಯೋಚನೆಗಳ ಮೂಲ ಪ್ರಚೋದನೆ ಏನೇ ಇರಲಿ ಇಂದಿಗೂ ತಮ್ಮ ಬದುಕನ್ನು ಹಂಚಿಕೊಂಡ ಪುರುಷರನ್ನು ದ್ವೇಷಿಸಿ ಸ್ತ್ರೀವಾದವನ್ನು ಕಟ್ಟಬೇಕೆಂದು ಪ್ರಚೋದಿಸಿದವರನ್ನು ಕಾಣುವುದು ಕಷ್ಟ. ಮತ್ತದು ತನ್ನದೇ ಗರ್ಭಕ್ಕೆಹೆರುವುದಾದರೆ ಹೆಣ್ಣನ್ನು ಮಾತ್ರ ಹೆರಬೇಕು, ಗಂಡನ್ನಾದರೆ ಬೇಡವೇ ಬೇಡ..” ಎಂದು ಹೇಳುವಷ್ಟೇ ಹಾಸ್ಯಾಸ್ಪದ ಎನಿಸಿಬಿಡುತ್ತದೆ. ಬಗೆಯ ಚಿಂತಕಿ ಕಮಲಾದಾಸ್. ಅವರ ಪ್ರಶ್ನೆ, ಸ್ತ್ರೀವಾದ ಎಲ್ಲವೂ ಮಾನವತ್ವದ ಆಧಾರದ ಮೇಲೆ ನೆಲೆಸಿತ್ತು.
ಆಶಾ ಜಗದೀಶ್ ಬರೆಯುವ ಅಂಕಣ

 

ನಾನು ಬಹಳ ಕುತೂಹಲ ಕೆರಳಿ ರೂಪದರ್ಶಿ ಹಾಗೂ ನೃತ್ಯಪಟುವಾಗಿದ್ದ ಪ್ರೋತಿಮಾ ಬೇಡಿಯವರ ಬಗ್ಗೆ ಓದಿದ್ದೆ. ಅವರು ವಿಲಕ್ಷಣ ಎನ್ನುವುದಕ್ಕಿಂತ ತಮ್ಮ ಬದುಕನ್ನು ತಮ್ಮದಷ್ಟೇ ಎನ್ನುವ ಹಾಗೆ ತೀವ್ರವಾಗಿ ಬದುಕಿದ ರೀತಿಯಿಂದಲೂ ಅವರನ್ನು ಇನ್ನಷ್ಟು ತಿಳಿಯಬೇಕು ಅನಿಸಿತ್ತು. ಅವರ ಆತ್ಮವೃತ್ತಾಂತವನ್ನು ಓದುವಾಗ ಕೆಲವು ಪ್ರಸಂಗಗಳು ಬೆಚ್ಚಿ ಬೀಳಿಸಿದ್ದವು. ಆದರೆ ಹೆಣ್ಣೊಬ್ಬಳು ತನ್ನ ಎಲ್ಲವನ್ನೂ ಹೇಳಿಕೊಂಡು ಬರಿದಾಗಬಹುದಾ ಅಂತ (ಅವಳಿಗೂ ಅದು ಬಿಡುಗಡೆಯ ಮಾರ್ಗವೇ…) ಅಚ್ಚರಿ ಎನಿಸಿತ್ತು. ಆದರೆ ಓದುವ ಮುಂಚೆಗೂ ಓದಿನಾಚೆಗೂ ಅವರ ಬಗ್ಗೆ ನನಗಿದ್ದ ಭಾವದಲ್ಲಿ ಎಳ್ಳಷ್ಟೂ ವ್ಯತ್ಯಾಸವಾಗಲಿಲ್ಲ.

ಅದೇ ರೀತಿ ನಾನು ಇಷ್ಟಪಟ್ಟು ಓದಿದ್ದು ಕಮಲಾದಾಸರ ಬರಹ ಮತ್ತು ಆತ್ಮವೃತ್ತಾಂತವನ್ನು… ಬಹುಶಃ ನಾನು ಕಮಲಾದಾಸರಿಗೆ ಆಕರ್ಷಿತಳಾಗಿದ್ದು ಅವರ ಹದಿವಯಸ್ಸಿನ ಆತ್ಮವೃತ್ತಾಂತದ ಕನ್ನಡದ ಆವೃತ್ತಿ ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರತೊಡಗಿದಾಗ ಅನಿಸುತ್ತದೆ. ಅದನ್ನು ಕನ್ನಡದ ಹೆಸಾರಾಂತ ಲೇಖಕಿ ಪಾರ್ವತಿ ಜಿ. ಐತಾಳರು ಅನುವಾದಿಸಿದ್ದರು. ಪಾರ್ವತಿಯವರ ಅನುವಾದ ಅದೆಷ್ಟು ಸಮರ್ಥವಾಗಿತ್ತೆಂದರೆ ಮಲಯಾಳದ ಮೂಲ ಕಥಾನಕ ಇನ್ನೆಷ್ಟು ಚಂದವಿರಬಹುದು ಎಂದು ಬಾರಿಬಾರಿಗೂ ಚಕಿತಗೊಳ್ಳುತ್ತಿದ್ದೆ. ತದನಂತರ ನನ್ನ ಕುತೂಹಲ ತಣಿಸಿಕೊಳ್ಳಲು ಎಲ್ಲೇ ಅವರ ಕಥೆ ಕವಿತೆ ಆತ್ಮಕಥೆ ಕಣ್ಣಿಗೆ ಬಿದ್ದರೂ ಅದಕ್ಕೇ ಹಸಿದವಳಂತೆ ಓದುತ್ತಿದ್ದೆ.

(ಪ್ರೋತಿಮಾ ಬೇಡಿ)

“….you cannot believe, darling
can you, that I lived in such a house and
Was proud, and loved…. l who have lost
My way and beg now at strangers doors to
Receive love at least in small change?”
(My grandmother’s house, by Kamala das)

“I am Indian very brown born in Malabar
I speak three languages write in
Two dream in one”

“Be Amy or be kamala. Or better
still be Madhavi kutty. It is time to
Choose a name, a role….”

“I met a man, loved him. Call
Him not by any name, he is every man
Who wants a woman, just as I am every
woman who seeks love. In him…
The hungry haste of rivers
In me… the oceans tireless waiting
Who are you, I ask each and everyone,
the answer is, it is I”
(An introduction, by Kamala das)

ಹೀಗೆ ಬರೆದ ಕಮಲಾರನ್ನು ಪ್ರೀತಿಸದೆ ಇರಲು ನನ್ನಿಂದ ಸಾಧ್ಯವಾಗಲಿಲ್ಲ. ಅವರಿಲ್ಲದೆ ಭಾರತೀಯ ಇಂಗ್ಲೀಷ್ ಸಾಹಿತ್ಯವನ್ನು ಓದುವುದು ಸಾಧ್ಯವಿರಲಿಲ್ಲ. ತಮ್ಮ ತೀವ್ರ ಭಾವದ ಕಥೆಗಳಿಂದ ಓದುಗರನ್ನು ಸಾದ್ಯಂತ ಪರವಶಗೊಳಿಸಿದ ಕಮಲಾ ಓದುಗರ ಮನಸಲ್ಲಿ ಪ್ರತಿಷ್ಠಾಪಿತರಾಗಿಬಿಟ್ಟರು. ಅವರ ಆತ್ಮ ಕಥೆ “ಎಂಡ ಕಥ” (My story) ಬಹು ಚರ್ಚಿತ ಮತ್ತು ಸಂಚಲನ ಉಂಟುಮಾಡಿದ ಪುಸ್ತಕ. ಸುಮಾರು ಹದಿನೈದು ಭಾಷೆಗಳಿಗೆ ತರ್ಜುಮೆಗೊಂಡ ಕೀರ್ತಿ ಇದರದ್ದು.

ಮಲಯಾಳ ಸಾಹಿತ್ಯದ ಸ್ತ್ರೀವಾದಿ ಚಿಂತನೆಗಳು ಬಲಗೊಳ್ಳಲಿಕ್ಕೆ ಕಾರಣರಾದವರು ಕಮಲಾ ದಾಸ್. ಒಂದು ಕಡೆ ಕಮಲಾ ಹೇಳುತ್ತಾರೆ; “ಪಾಶ್ಚಾತ್ಯರ ಸ್ತ್ರೀವಾದಕ್ಕೂ ನನ್ನ ಸ್ತ್ರೀವಾದಕ್ಕೂ ಬಹಳ ವ್ಯತ್ಯಾಸವಿದೆ. ಅವರಂತೆ ನಾನು ಪುರುಷ ದ್ವೇಷಿಯಲ್ಲ. ನಾನು ನನ್ನ ಗಂಡ ಮಕ್ಕಳನ್ನು ಪ್ರೀತಿಸುತ್ತೇನೆ..” ಎಂದು.
(ಕೇರಳ ಕಾಂತ ಸಮ್ಮಿತ)

(ಕಮಲಾ ದಾಸ್)

ಹೌದಲ್ಲ… ಸ್ತ್ರೀವಾದಿ ಎನ್ನುವುದರ ಅರ್ಥ ಸ್ತ್ರೀವಾದಿ ಅಂತ ಮಾತ್ರ ಅಷ್ಟೇ… ಸ್ತ್ರೀವಾದಿ ಎಂದರೆ ಪುರದ ದ್ವೇಷಿ ಎಂದಲ್ಲ. ಎಂದಾಗಬೇಕಾಗೂ ಇಲ್ಲ. ಈ ಭಾವದ ಅದೆಷ್ಟೋ ಚಿಂತಕಿಯರು ನಮ್ಮ ನಡುವಿದ್ದಾರೆ. ಅವರ ಯೋಚನೆಗಳ ಮೂಲ ಪ್ರಚೋದನೆ ಏನೇ ಇರಲಿ ಇಂದಿಗೂ ತಮ್ಮ ಬದುಕನ್ನು ಹಂಚಿಕೊಂಡ ಪುರುಷರನ್ನು ದ್ವೇಷಿಸಿ ಸ್ತ್ರೀವಾದವನ್ನು ಕಟ್ಟಬೇಕೆಂದು ಪ್ರಚೋದಿಸಿದವರನ್ನು ಕಾಣುವುದು ಕಷ್ಟ. ಮತ್ತದು ತನ್ನದೇ ಗರ್ಭಕ್ಕೆ “ಹೆರುವುದಾದರೆ ಹೆಣ್ಣನ್ನು ಮಾತ್ರ ಹೆರಬೇಕು, ಗಂಡನ್ನಾದರೆ ಬೇಡವೇ ಬೇಡ..” ಎಂದು ಹೇಳುವಷ್ಟೇ ಹಾಸ್ಯಾಸ್ಪದ ಎನಿಸಿಬಿಡುತ್ತದೆ.

ಈ ಬಗೆಯ ಚಿಂತಕಿ ಕಮಲಾದಾಸ್. ಅವರ ಪ್ರಶ್ನೆ, ಸ್ತ್ರೀವಾದ ಎಲ್ಲವೂ ಮಾನವತ್ವದ ಆಧಾರದ ಮೇಲೆ ನೆಲೆಸಿತ್ತು. ಅವರ ಕಥೆಗಳಂತೂ ಒಂದಕ್ಕಿಂತ ಒಂದು ಕಲಕಿಬಿಟ್ಟ ಕಥೆಗಳು. ಎಲ್ಲೇ ಕಮಲಾರ ಕಥೆ (ಅನುವಾದ) ಪ್ರಕಟವಾಗಿದ್ದರೂ ಹುಡುಕಿ ಓದುತ್ತಿದ್ದೆ. ಅವರಿಂದಾಗಿಯೇ ಮಲಯಾಳ ಸಾಹಿತ್ಯವನ್ನು ಓದಬೇಕೆನ್ನುವ ಹುಚ್ಚು ನನಗೆ ಹಿಡಿದದ್ದು. ಅದಕ್ಕೆ ಪೂರಕವಾಗಿ ಎಂಬಂತೆ ಇತ್ತೀಚೆಗೆ ಒಂದು ಅತ್ಯುತ್ತಮ ಪುಸ್ತಕವನ್ನು ಓದುವಂತಾಯಿತು. ಅದು ಕಮಲಾ ಹೆಮ್ಮಿಗೆಯವರ ಕೇರಳ ಕಾಂತಾಸಮ್ಮಿತ.

ಮಲೆಯಾಳದ ಮಹತ್ವದ ಮಹಿಳಾ ಲೇಖಕಿಯರ ಮೂವತ್ತೊಂಭತ್ತು ಕಥೆಗಳನ್ನು ತೆಗೆದುಕೊಂಡು ಕನ್ನಡಕ್ಕೆ ಅನುವಾದಿಸಿರುವ ಪುಸ್ತಕವಿದು. ಮನೋಹರ ಗ್ರಂಥ ಮಾಲಾ ಅದನ್ನು ಪ್ರಕಟ ಮಾಡಿದೆ. ಮಲೆಯಾಳಮ್ಮಿನ ಪ್ರಮುಖ ಲೇಖಕಿಯರು ಎಂದ ಮೇಲೆ ಆ ಸಾಲಿನಲ್ಲಿ ಕಮಲಾದಾಸರು ಇರಲೇಬೇಕಲ್ಲ…. ಅವರ ಮೂರು ಕಥೆಗಳು ಇದರಲ್ಲಿ ಸೇರಿವೆ ಎನ್ನುವುದೇ ಓದುವಂತೇ ಟೆಮ್ಟ್ ಮಾಡಿತ್ತು. ಕಮಲಾ ದಾಸರ ಇಲ್ಲಿನ ಮೂರೂ ಕತೆಗಳೂ ವಿಶಿಷ್ಟವಾಗಿವೆ. ಕಮಲಾ ಹೆಮ್ಮಿಗೆ ರವರ ಅನುವಾದವೂ ಅಷ್ಟೇ ಚಂದಾಗಿ ಮೂಡಿಬಂದಿದೆ.

ಮಲಯಾಳ ಸಾಹಿತ್ಯದ ಸ್ತ್ರೀವಾದಿ ಚಿಂತನೆಗಳು ಬಲಗೊಳ್ಳಲಿಕ್ಕೆ ಕಾರಣರಾದವರು ಕಮಲಾ ದಾಸ್. ಒಂದು ಕಡೆ ಕಮಲಾ ಹೇಳುತ್ತಾರೆ; “ಪಾಶ್ಚಾತ್ಯರ ಸ್ತ್ರೀವಾದಕ್ಕೂ ನನ್ನ ಸ್ತ್ರೀವಾದಕ್ಕೂ ಬಹಳ ವ್ಯತ್ಯಾಸವಿದೆ. ಅವರಂತೆ ನಾನು ಪುರುಷ ದ್ವೇಷಿಯಲ್ಲ. ನಾನು ನನ್ನ ಗಂಡ ಮಕ್ಕಳನ್ನು ಪ್ರೀತಿಸುತ್ತೇನೆ..” ಎಂದು.

ಶುರುವಿಗೆ ರಾಘವೇಂದ್ರ ಪಾಟೀಲರ ಬಹು ಚಂದದ ಮುನ್ನುಡಿ ಈ ಪುಸ್ತಕಕ್ಕಿದೆ. ಸಮಕಾಲೀನ ಸಾಹಿತ್ಯದ ಬೆಳವಣಿಗೆ, ಅದರ ಚಳವಳಿಗಳು, ಸವಾಲುಗಳ ಜೊತೆಗೆ ತನ್ನದೇ ಪ್ರಾದೇಶಿಕ ಸಮಸ್ಯೆಯ ತಾಕಲಾಟಗಳ ನಡುವೆಯೇ ಸಾಹಿತ್ಯವೊಂದು ಹುಟ್ಟಿ ಬೆಳೆಯುವುದನ್ನು ಸಮಕಾಲೀನ ಸಾಹಿತ್ಯದ ತುಲನೆಯೊಂದಿಗೆ ಬಹಳ ಚಂದ ಬರೆಯುತ್ತಾರೆ ರಾಘವೇಂದ್ರ ಪಾಟೀಲರು. ಈ ಮುನ್ನುಡಿ ಕಥಾಸಂಕಲನಕ್ಕೆ ಬಹಳ ಒಳ್ಳೆಯ ಪ್ರವೇಶಿಕೆಯಾಗಿದೆ. ಮತ್ತು ಕಮಲಾ ಹೆಮ್ಮಿಗೆಯವರು ಸಂಕಲನದ ತಮ್ಮ ಮಾತುಗಳನ್ನು ದಾಖಲಿಸುವಾಗ ಈ ಸಂಕಲನದ ಅವಶ್ಯಕತೆ ಹೇಗೆ ಅಗತ್ಯವಿತ್ತು ಎನ್ನುವುದನ್ನು ಚಾರಿತ್ರಿಕ ಹಿನ್ನೆಲೆಯೊಂದಿಗೆ ವಿವರಿಸಿರುವುದು ಆ ನಿಟ್ಟಿನಲ್ಲಿ ಚಿಂತನೆ ನಡೆಯಬೇಕಾದುದರ ಅಗತ್ಯತೆಯನ್ನು ಮನಗಾಣಿಸುತ್ತದೆ. ಅದರಲ್ಲೂ ಅವರು ಕೆಲವು ಅತ್ಯಂತ ಆಘಾತಕಾರಿ ಅಂಶಗಳನ್ನು ದಾಖಲಿಸುತ್ತಾರೆ…

“ದೇವರ ನಾಡಲ್ಲಿ (ಕೇರಳ) ಹೆಣ್ಣುಮಕ್ಕಳು ತಮ್ಮ ಸ್ತನದ ಗಾತ್ರಕ್ಕೆ ತಕ್ಕಂತೆ ಕರ ಕಟ್ಟಬೇಕಿತ್ತು… ಒಮ್ಮೆ ಒಬ್ಬ ಮಹಿಳೆ ತನ್ನ ಸ್ತನಗಳನ್ನು ಬಚ್ಚಿಟ್ಟುಕೊಂಡದ್ದಕ್ಕೆ ಆ ರಾಜ್ಯದ ರಾಣಿ ಅವಳ ಸ್ತನಗಳನ್ನು ಕೊಯ್ಯುವ ಶಿಕ್ಷೆಯನ್ನು ನೀಡುತ್ತಾಳೆ…”

“ದೇಶದಲ್ಲೇ ಅತಿ ಹೆಚ್ಚು ಸಾಕ್ಷರತೆ ಹೊಂದಿದ್ದ ರಾಜ್ಯದಲ್ಲೂ ಹೆಣ್ಣುಮಕ್ಕಳ ಸ್ಥಿತಿಯಲ್ಲಿ ಹೆಚ್ಚು ವ್ಯತ್ಯಾಸವಿರಲಿಲ್ಲ…”

ಇದು ದಿಗ್ಭ್ರಾಂತಿ ಹುಟ್ಟಿಸುತ್ತದೆ. ಇದರೊಂದಿಗೆ ಹತ್ತೊಂಬತ್ತು ಇಪ್ಪತ್ತನೇ ಶತಮಾನದ ವೇಳೆ ಕರ್ನಾಟಕದಲ್ಲಿ ಯಾವ ಬಗೆಯ ಪರಿಸ್ಥಿತಿ ಇತ್ತು ಎನ್ನುವುದು ಗೊತ್ತಿರುತ್ತದೆ ನಮಗೆ. ಅದೇ ವೇಳೆ ಪಕ್ಕದ ರಾಜ್ಯದ ಹೆಣ್ಣುಮಕ್ಕಳು ಹೆಚ್ಚೂಕಡಿಮೆ ಅದೇ ಪರಿಸ್ಥಿತಿಯಲ್ಲಿದ್ದರು ಎಂಬುದೂ ಸಹ ತೌಲನಿಕವಾಗಿ ತಿಳಿದುಬರುತ್ತದೆ. ಈ ಬಗೆಯ ಹೋಲಿಕೆ ವ್ಯತ್ಯಾಸಗಳ ಗುರುತಿಸುವಿಕೆಯೂ ಸಹ ಸಾಹಿತ್ಯ ಬೆಳೆದು ಬಂದ ಹಾದಿಯನ್ನು ಅರ್ಥೈಸಿಕೊಳ್ಳಲಿಕ್ಕೆ ಅನುವಾಗುತ್ತವೆ. ಇಪ್ಪತ್ತನೇ ಶತಮಾನದ ಆದಿಯಿಂದ ಇಲ್ಲಿಯವರೆಗಿನ ಹದಿಮೂರು ಲೇಖಕಿಯರ ಆಯ್ದ ಮೂಮೂರು ಕತೆಗಳನ್ನು ಇಲ್ಲಿ ಅನುವಾದಿಸಿ ನಮ್ಮ ಸಮಗ್ರ ಓದಿಗೆ ನೀಡಿದ್ದಾರೆ ಕಮಲಾರವರು…

ಕಮಲಾದಾಸರ ಹಲವಾರು ಕತೆಗಳನ್ನು ಈ ಮುಂಚೆಯೇ ಓದಿದ್ದರಿಂದ ಅದೇ ಕಾತುರತೆಯಲ್ಲಿ ಅವರ ಕಥೆಗಳನ್ನ ಮೊದಲು ಮಾಡಿಕೊಂಡು ಪುಸ್ತಕ ಓದಲು ಶುರುಮಾಡಿದೆ. ಇಲ್ಲಿ ಅವರ ಪತಿವ್ರತೆ, ಅಜ್ಜನೂ.. ಪರಿಚಾರಿತೆಯರೂ… ಮತ್ತು ಪಾರತಂತ್ರ್ಯ ಎನ್ನುವ ಮೂರು ಕಥೆಗಳಿವೆ.

“ಪತಿವ್ರತೆ” ಕಥೆಯ ಶೀರ್ಷಿಕೆಯೇ ಒಂದು ವಿಡಂಬನೆ. ಗಂಡನ ಅತಿ ಆಸೆ, ಏಳಿಗೆ ಮತ್ತು ಅವನ ಒತ್ತಾಯಕ್ಕೆ ಮಣಿದು ಅವನ ಮೇಲಧಿಕಾರಿಯೊಂದಿಗೆ ಮಲಗುವ ಇವಳು ಮಹಾ ಪತಿವ್ರತೆ. ಈ ಗುಟ್ಟು ಬಯಲಾದಾಗ ಸಮಾಜ ಇವಳನ್ನು ಹೀಗಳೆಯುತ್ತಲೇ ಅವಳ ಗಂಡನನ್ನು ಅನುಕಂಪದಿಂದ ನೋಡುತ್ತದೆ. ಎಂತಹಾ ದೊಡ್ಡ ಮನುಷ್ಯ ಈಗಲೂ ಇವಳೊಂದಿಗೆ ಬಾಳುತ್ತಿದ್ದಾನೆ ಎನ್ನುತ್ತದೆ… ಆಗಲಾದರೂ ಆ ದುರ್ಬಲ (ಎಲ್ಲ ಬಗೆಯಲ್ಲೂ) ಗಂಡನಿಗೆ ಸತ್ಯವನ್ನು ಹೇಳುವ ಧೈರ್ಯವಾಗುವುದಿಲ್ಲ. ಬದಲಾಗಿ ಅದನ್ನು ಖುಷಿಯಿಂದ ಸ್ವೀಕರಿಸಿಬಿಡುತ್ತಾನೆ. ಅವಳು ಮಾತ್ರ ಏನೊಂದೂ ಹೇಳುವುದಿಲ್ಲ. ಬದಲಾಗಿ ಕನಸು ಕಾಣತೊಡಗುತ್ತಾಳೆ… ತಾನು ಒಬ್ಬ ಸಾಧಾರಣ ಉಪನ್ಯಾಸಕನನ್ನು ಮದುವೆಯಾಗಿದ್ದಿದ್ದರೆ… ಕನಿಷ್ಠ ಅವನು ತನ್ನ ಹೆಡ್ ಮಾಸ್ತರನೊಂದಿಗೆ ಮಲಗು ಎಂದು ತನಗೆ ಹೇಳುತ್ತಿರಲಿಲ್ಲ… ಎಂದು ಯೋಚಿಸುತ್ತಾಳೆ. ಈ ಈ ಕ್ಷಣ ಅವಳು ನಿಜಕ್ಕೂ ಪತಿವ್ರತೆಯೇ ಎನಿಸಿಬಿಡುತ್ತದೆ ಮತ್ತೆ ಅವಳ ಆ ಗಂಡ ನಪುಂಸಕನೆನ್ನಿಸಿಬಿಡುತ್ತದೆ. ಈ ಕಥೆ ಓದುಗರನ್ನು ತೀವ್ರವಾಗಿ ತಟ್ಟುತ್ತದೆ.

(ಕಮಲಾ ಹೆಮ್ಮಿಗೆ)

ಕಮಾಲಾ ದಾಸರ ಎರಡನೇ ಕಥೆ “ಅಜ್ಜನೂ ಪರಿಚಾರಿಕೆಯರೂ…” ಎನ್ನುವ ಕಥೆ. ಈ ಕಥೆ ಇವತ್ತಿಗೂ ಪ್ರಸ್ತುತ. ಓದು ವಿದ್ಯೆ ಹಣ ಸ್ಟೇಟಸ್ ಎಂದು ಅದರ ಹಿಂದೆ ಓಡುವ (ಓಡಿಸುವ ಅಂತಲೂ ಆಗಬಹುದು… ಕಾರಣ ತಂದೆ ತಾಯಂದಿರೂ ಅದನ್ನು ಬಯಸಿರುತ್ತಾರಲ್ಲ… ಸ್ವಯಂಕೃತ ಅಪರಾಧ ಎಂದುಬಿಟ್ಟರೆ ಯಾವ ತಂದೆ ತಾಯಂದಿರು ಇದನ್ನು ಮಾಡಲಾರರು. ಮಾಡಲಿ… ಆದರೆ ಧಾವಂತದ ನಡುವೆಯೂ ಮೌಲ್ಯಗಳ ಕಲಿಸುವ ಅಗತ್ಯವಿರುತ್ತದೆ…) ಮಕ್ಕಳು ಇಳಿವಯಸ್ಸಿನ ತಂದೆ ತಾಯಂದಿರನ್ನು ಅದೆಷ್ಟು ನಿಷ್ಠುರವಾಗಿ ತಬ್ಬಲಿಗಳನ್ನಾಗಿಸಿಬಿಡುತ್ತಾರೆ!

ಇಲ್ಲಿ ಬರುವ ವೃದ್ಧರೂ ಹಾಗೆ ತಬ್ಬಲಿಯಾದ ಒಬ್ಬ ತಂದೆ. ಆತನಿಗೆ ಮೂವರು ಮಕ್ಕಳು. ದೊಡ್ಡ ದೊಡ್ಡ ಉದ್ಯೋಗಲ್ಲಿದ್ದಾರೆ. ಆದರೆ ಯಾರಿಗೂ ಈ ಮುದುಕ ಬೇಕಾಗಿಲ್ಲ. ಇವ ಮಾತ್ರ ನಿತ್ಯ ಅವರಿಗಾಗಿ ಹಂಬಲಿಸುತ್ತಾನೆ. ಇವನಲ್ಲಿ ಹಣವಿಲ್ಲ, ಹಾಗಾಗಿ ಅವರು ಹಾಕುವ ಔದಾರ್ಯದ (!?) ಅನ್ನಕ್ಕೆ ಇವ ಎಲ್ಲ ಮುಚ್ಚಿಕೊಂಡು ಬಿದ್ದಿರಬೇಕಾದ ಅನಿವಾರ್ಯತೆಯಲ್ಲಿದ್ದಾನೆ. ಅವರಿಗೆ ಇವನ ಜೀವ ಬೇಕಾಗಿಲ್ಲ. ಹಾಗಾಗಿ ಅದು ಇರುವವರೆಗೂ ಅವರಿಲ್ಲಿಗೆ ಬರುವುದಿಲ್ಲ. ಯಾವಾಗ ಈ ಮುದುಕ ಸತ್ತ ಎನ್ನುವ ಸುದ್ದಿ ತಿಳಿಯುತ್ತದೋ ಸೊಸೆ ಓಡಿ ಬಂದು ತನಗೆ ಬೇಕಾದ ಒಂದಷ್ಟು ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೊರಟುಬಿಡುತ್ತಾಳೆ. ಉಳಿದದ್ದನ್ನು ಯಾರಾದರೂ ತೆಗೆದುಕೊಳ್ಳಲಿ, ಅದು ಅವಳಿಗೆ ಬೇಡದ ವಿಷಯ (ಅವನ ಹೆಣಕ್ಕೆ ಸದ್ಗಿತಿ ಕೊಡಿಸಲಿಕ್ಕೂ ಹಣ ಚೆಲ್ಲಿದರೆ ಆಳು ಸಿಗುತ್ತಾರೆ…). ಅಲ್ಲಿಗೆ ಅವನ ಸಂಬಂಧ ಮುಗಿಯಿತು..! ಇದು ಮುಗಿಯದ ಕಥೆ ಅನಿಸುತ್ತದೆ… ಪೀಳಿಗೆಯಿಂದ ಪೀಳಿಗೆಗೂ ಇದು ಸಾಗುತ್ತಿದೆ!

ಮೂರನೇ ಕಥೆ “ಪಾರತಂತ್ರ್ಯ”. ಇಲ್ಲಿ ಒಂದು ಟಿಪಿಕಲ್ ಗಂಡ ಹೆಂಡತಿ ಬರುತ್ತಾರೆ. ಗಂಡನನ್ನು ಸರಿ ದಾರಿಗೆ ತರುವ ಹೆಂಡತಿಯೊಬ್ಬಳು ಇಲ್ಲಿದ್ದಾಳೆ. ಆದರೆ ಈ ಗಂಡನಿಗೋ ನೂರಾರು ಗೆಳತಿಯರು. ಅವರೆಲ್ಲರ ಗುಣಗಾನವನ್ನೂ ಇವನು ಮಾಡುತ್ತಾನೆ, ಆದರೆ ಇವನ ದೃಷ್ಟಿಯಲ್ಲಿ ಹೆಂಡತಿ ಮಾತ್ರ ಸಣ್ಣ ಬುದ್ಧಿಯವಳು. ಇವನ ಜಂಭ ಕೊಚ್ಚುವಿಕೆ ತಾರಕಕ್ಕೇರುತ್ತದೆ. ಕೊನೆಗೆ ಅವನ ಗುಣಗಾನ ಕೇಳಿ ಕೇಳಿ ಹೆಂಡತಿ ಹನಿಗಣ್ಣಾಗುತ್ತಾಳೆ. ವಿಪರ್ಯಾಸ ಎಂದರೆ ಗಂಡ ಯಾರನ್ನು ಇಷ್ಟೊತ್ತೂ “ತನ್ನನ್ನು ದೇವರೆಂದು ಪೂಜಿಸುತ್ತಾಳೆ” ಎಂದು ಕೊಚ್ಚಿಕೊಳ್ಳುತ್ತಿದ್ದನೋ ಅವಳು ತಲೆ ಕೆದರಿಕೊಂಡು ಹುಚ್ಚಿಯಂತೆ “ಪ್ರೇಮಾ ನಂಗೆ ಸಾಕಾಗಿದೆಯಪ್ಪಾ ಈ ಬಾಳು!” ಎಂದು ಓಡುವುದರೊಂದಿಗೆ ಕಥೆ ಮುಗಿಯುತ್ತದೆ. ಹೆಂಡತಿಯನ್ನಂತೂ ಲೆಕ್ಕಿಸುತ್ತಿಲ್ಲ, ಕನಿಷ್ಟ ಆ ಹೆಣ್ಣನ್ನಾದರೂ ಇವ ಚಂದ ನೋಡಿಕೊಳ್ತಿದಾನಾ ಎಂದರೆ ಅದೂ ಇಲ್ಲ! ಈ ಇಬ್ಬರೂ ಹೆಣ್ಣುಮಕ್ಕಳು ಒಂದೊಂದು ರೀತಿಯಲ್ಲಿ ಶೋಷಿತರೇ.. ಪುರುಷ ಪ್ರಾಬಲ್ಯ ಸಮಾಜದಲ್ಲಿ ಹೆಣ್ಣು ಶೋಷಿಸಲ್ಪಡುವ ನಾನಾ ಮುಖಗಳಿಗೆ ಹಿಡಿದ ಕನ್ನಡಿಯಂತೆ ಈ ಕಥೆ ಮೂಡಿಬಂದಿದೆ.

ಕಮಲಾ ದಾಸರ ಕಥೆಗಳ ವೈಶಿಷ್ಟ್ಯವೆಂದರೆ ಒಂದು ಸಣ್ಣ ಮಾನವಿಕ ಎಳೆಯನ್ನು ಮನಮುಟ್ಟುವಂತೆ ಹೇಳುವ ರೀತಿ. ಇವರ ಅತಿ ಸಣ್ಣ ಕಥೆಗಳು ಹುಟ್ಟಿಸುವ ತಲ್ಲಣ ಜುಂ ಎನ್ನಿಸುವಿಕೆ ಸದಾ ನನ್ನಲ್ಲಿ ಬೆರಗುವಹುಟ್ಟಿಸುವಂಥದ್ದು….

(ಮುಂದುವರಿಯುತ್ತದೆ…)