ತ್ರಿಭಂಗಿಯಲ್ಲಿ ನಿಂತ ಭೈರವನ ಕೊರಳಿಗೆ ಸರ್ಪದ ಆಭರಣ. ಸುತ್ತಲಿನ ಪ್ರಭಾವಳಿಯಲ್ಲಿ ಮಕರಗಳೂ ಗಣದೇವತೆಗಳೂ ಕಂಡುಬರುತ್ತವೆ. ಸಪ್ತಮಾತೃಕೆಯರನ್ನು ಅವರವರ ವಾಹನಗಳೊಡನೆ ಚಿತ್ರಿಸಿರುವುದು ಗಮನಾರ್ಹ. ದ್ವಿಭುಜಗಳಿಂದ ಕೂಡಿದ ಸೂರ್ಯನ ವಿಗ್ರಹವು ಚಿಕ್ಕದಾಗಿದ್ದರೂ ಗಮನಸೆಳೆಯುತ್ತದೆ. ಎರಡೂ ಕೈಗಳಲ್ಲಿ ಕಮಲವನ್ನು ಧರಿಸಿದ ಸೂರ್ಯನ ಕಿರೀಟವು ಕೊಳಗದ ಆಕಾರದಲ್ಲಿದೆ. ಚಕ್ರ, ಶಂಖ, ಗದಾಧಾರಿಯಾದ ವಿಷ್ಣುವಿನ ಬಿಂಬವನ್ನು ದೊಡ್ಡಶಿಲೆಯ ಮೇಲೆ ಕೆತ್ತಲಾಗಿದೆ. ಆಯುಧಗಳಲ್ಲದೆ, ಯಜ್ಞೋಪವೀತ, ಕಂಕಣಗಳನ್ನು ಮಾತ್ರವೇ ಧರಿಸಿರುವಂತೆ ಕೆತ್ತಿರುವ ಈ ಸರಳಶಿಲ್ಪವೂ ಸೂರ್ಯನ ವಿಗ್ರಹವೂ ಪ್ರಾಚೀನತೆಯ ದೃಷ್ಟಿಯಿಂದ ಮಹತ್ವಪಡೆದಿವೆ. ಇಲ್ಲಿಯೇ ಇರಿಸಿರುವ ನೀಳಸೊಂಡಿಲಿನ ಗಣಪತಿಯ ವಿಗ್ರಹವೊಂದು ಮುದ್ದಾಗಿದೆ.
ಟಿ.ಎಸ್ ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಹದಿನಾಲ್ಕನೆಯ ಕಂತು
ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನಲ್ಲಿರುವ ಮೂಗೂರು ಹಲವು ಪುರಾತನ ದೇವಾಲಯಗಳಿರುವ ಪ್ರಸಿದ್ಧ ಕ್ಷೇತ್ರ. ಮೈಸೂರಿನಿಂದ 43 ಕಿ.ಮೀ. ದೂರವಿರುವ ಮೂಗೂರನ್ನು ತಾಲ್ಲೂಕು ಕೇಂದ್ರವಾದ ಟಿ. ನರಸೀಪುರದಿಂದ ಹದಿನೇಳು ಕಿ.ಮೀ. ದೂರ ಕ್ರಮಿಸಿ ತಲುಪಬಹುದು.
ಹೊಯ್ಸಳ ಸಾಮ್ರಾಜ್ಯದ ಹಿರಿಯನಾಡಿಗೆ ಸೇರಿದ ಮೋಗೂರು ಎಂಬ ಹೆಸರಿನಿಂದ ಇತಿಹಾಸದಲ್ಲಿ ದಾಖಲಾಗಿರುವ ಈ ಊರಿನ ಬಗ್ಗೆ ಹತ್ತನೆಯ ಶತಮಾನದಿಂದಲೂ ಶಾಸನಗಳಲ್ಲಿ ಉಲ್ಲೇಖವಿದೆ. ಇಲ್ಲಿನ ತ್ರಿಪುರಸುಂದರಿ ದೇವಾಲಯ ನಾಡಿನ ಪ್ರಸಿದ್ಧ ದೇಗುಲಗಳಲ್ಲೊಂದು. ತಿಬ್ಬಾದೇವಿ ಎಂಬ ಹೆಸರಿನಿಂದಲೂ ಪರಿಚಿತಳಾಗಿರುವ ಈ ದೇವತೆಯು ಶಂಖಚಕ್ರಧಾರಿಣಿಯಾಗಿದ್ದು, ಸಪ್ತಮಾತೃಕೆಯರಲ್ಲೊಬ್ಬಳಾದ ವೈಷ್ಣವಿಯ ರೂಪವೆಂದು ಭಾವಿಸಲಾಗಿದೆ. ಹದಿಮೂರನೆಯ ಶತಮಾನದ ಹೊಯ್ಸಳ ವೀರನರಸಿಂಹನ ಕಾಲದಲ್ಲೂ ಮುಂದೆ ವಿಜಯನಗರದ ಅರಸರಿಂದಲೂ ಈ ದೇಗುಲದ ಜೀರ್ಣೋದ್ಧಾರ ನಡೆದಿದೆ.
ಇಷ್ಟೇ ಪುರಾತನವಾದ ಇನ್ನೂ ಹಲವು ಗುಡಿಗಳನ್ನು ಮೂಗೂರಿನಲ್ಲಿ ಕಾಣಬಹುದಾಗಿದ್ದು , ಅವುಗಳಲ್ಲಿ ಎಲ್ಲಕ್ಕಿಂತ ದೊಡ್ಡದಾದ ದೇಗುಲವೆಂದರೆ ದೇಶೇಶ್ವರ ದೇವಾಲಯ. ಪ್ರಾಯಶಃ ಚೋಳರ ಕಾಲದಲ್ಲಿ ಕಟ್ಟಲಾದ ಶಿವನ ಗುಡಿಯನ್ನು ಹದಿಮೂರನೆಯ ಶತಮಾನದಲ್ಲಿ ಹೊಯ್ಸಳ ಅರಸನಾಗಿದ್ದ ಮೂರನೆಯ ನರಸಿಂಹನು ವಿಸ್ತರಿಸಿ ದೊಡ್ಡದೇವಾಲಯ ಸಂಕೀರ್ಣವಾಗಿ ಮಾರ್ಪಡಿಸಿದನಂತೆ. ನರಸಿಂಹನ ಅಧಿಕಾರಿಯಾದ ಸಂಕಣ್ಣನೆಂಬುವನು ಈ ದೇವಾಲಯವನ್ನು ನಿರ್ಮಿಸಿ ಹೊಸ ಅಗ್ರಹಾರವೊಂದನ್ನು ಕಟ್ಟಿಸಿದನೆಂದು 1277ರಲ್ಲಿ ಬರೆಯಿಸಿದ ದೊಡ್ಡಶಾಸನದಲ್ಲಿ ಹೇಳಲಾಗಿದೆ. ಅಲ್ಲದೆ, ಮೋಗೂರನ್ನು ಮಾರುಕಟ್ಟೆಯ ಪಟ್ಟಣವಾಗಿ ಪರಿವರ್ತಿಸಿ ಸಂತೆಜಾತ್ರೆಗಳನ್ನು ನಡೆಸಲು ಅನುಮತಿಸಿದ ವಿವರಗಳಿವೆ.
ದೊಡ್ಡದೊಂದು ಧ್ವಜಸ್ತಂಭದೆದುರಿಗೆ ವಿಜಯನಗರದ ಕಾಲದಲ್ಲಿ ನಿರ್ಮಿಸಿದ ರಾಜಗೋಪುರವು ದೇಶೇಶ್ವರ ದೇಗುಲಕ್ಕೆ ನಿಮ್ಮನ್ನು ಸ್ವಾಗತಿಸುತ್ತದೆ. ಪ್ರವೇಶದ್ವಾರದ ಇಕ್ಕೆಲಗಳಲ್ಲಿ ಹೂಬಳ್ಳಿಗಳನ್ನು ಆಧರಿಸಿ ನಿಂತ ಶಿಲಾಸುಂದರಿಯರು. ಅಲ್ಲಿಯೇ ಕಂಬಕ್ಕೆ ಒರಗಿ ಕೈಮುಗಿದು ನಿಂತ ರಾಜಪ್ರಮುಖನು ಈ ಗುಡಿಯ ನಿರ್ಮಾತೃವಾದ ಸಂಕಣ್ಣನಿರಬಹುದು. ದೇಗುಲದ ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ನವರಂಗದಲ್ಲಿ ಸೂರ್ಯ, ವಿಷ್ಣು, ಸಪ್ತಮಾತೃಕೆಯರೇ ಮೊದಲಾದ ದೇವತೆಗಳ ವಿಗ್ರಹಗಳಿವೆ. ಇವು ಗಂಗರ ಕಾಲದ ಶಿಲ್ಪಗಳೆಂದು ತೋರುತ್ತವೆ. ಇವುಗಳಲ್ಲದೆ, ನವರಂಗದಲ್ಲಿ ಕಂಡುಬರುವ ವಿಗ್ರಹಗಳಲ್ಲಿ ಕಾಲಭೈರವನ ಶಿಲ್ಪವು ಸೊಗಸಾಗಿದೆ. ಸೂಕ್ಷ್ಮಕೆತ್ತನೆಗಳನ್ನುಳ್ಳ ಕಾಲಭೈರವನ ವಿಗ್ರಹವು ಹೊಯ್ಸಳಶಿಲ್ಪದ ಉತ್ತಮ ಮಾದರಿಗಳಲ್ಲೊಂದು.
ತ್ರಿಭಂಗಿಯಲ್ಲಿ ನಿಂತ ಭೈರವನ ಕೊರಳಿಗೆ ಸರ್ಪದ ಆಭರಣ. ಸುತ್ತಲಿನ ಪ್ರಭಾವಳಿಯಲ್ಲಿ ಮಕರಗಳೂ ಗಣದೇವತೆಗಳೂ ಕಂಡುಬರುತ್ತವೆ. ಸಪ್ತಮಾತೃಕೆಯರನ್ನು ಅವರವರ ವಾಹನಗಳೊಡನೆ ಚಿತ್ರಿಸಿರುವುದು ಗಮನಾರ್ಹ. ದ್ವಿಭುಜಗಳಿಂದ ಕೂಡಿದ ಸೂರ್ಯನ ವಿಗ್ರಹವು ಚಿಕ್ಕದಾಗಿದ್ದರೂ ಗಮನಸೆಳೆಯುತ್ತದೆ. ಎರಡೂ ಕೈಗಳಲ್ಲಿ ಕಮಲವನ್ನು ಧರಿಸಿದ ಸೂರ್ಯನ ಕಿರೀಟವು ಕೊಳಗದ ಆಕಾರದಲ್ಲಿದೆ. ಚಕ್ರ, ಶಂಖ, ಗದಾಧಾರಿಯಾದ ವಿಷ್ಣುವಿನ ಬಿಂಬವನ್ನು ದೊಡ್ಡಶಿಲೆಯ ಮೇಲೆ ಕೆತ್ತಲಾಗಿದೆ. ಆಯುಧಗಳಲ್ಲದೆ, ಯಜ್ಞೋಪವೀತ, ಕಂಕಣಗಳನ್ನು ಮಾತ್ರವೇ ಧರಿಸಿರುವಂತೆ ಕೆತ್ತಿರುವ ಈ ಸರಳಶಿಲ್ಪವೂ ಸೂರ್ಯನ ವಿಗ್ರಹವೂ ಪ್ರಾಚೀನತೆಯ ದೃಷ್ಟಿಯಿಂದ ಮಹತ್ವಪಡೆದಿವೆ. ಇಲ್ಲಿಯೇ ಇರಿಸಿರುವ ನೀಳಸೊಂಡಿಲಿನ ಗಣಪತಿಯ ವಿಗ್ರಹವೊಂದು ಮುದ್ದಾಗಿದೆ.
ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಅದಕ್ಕೆ ಅಭಿಮುಖವಾಗಿ ಚಿಕ್ಕದೊಂದು ನಂದಿಯಿದೆ. ದೇಗುಲದ ಹೊರಗಿನ ಮಂಟಪದಲ್ಲಿರುವ ಸಾಲಂಕೃತ ನಂದಿಯು ಆಕಾರದಲ್ಲಿ ತೀರಾ ದೊಡ್ಡದಲ್ಲವಾದರೂ ಆಕರ್ಷಕವಾಗಿದೆ. ಗುಡಿಯ ಪ್ರವೇಶದ್ವಾರವನ್ನು ಮರದಿಂದ ಮಾಡಿದ್ದು ಅದರ ಮೇಲಿನ ಶಿಲ್ಪಗಳು ಗಮನಿಸತಕ್ಕವು. ನಂದಿ, ಶಿವಲಿಂಗ, ಋಷಿಗಳಲ್ಲದೆ ಹಲವು ಮಿಥುನಶಿಲ್ಪಗಳನ್ನೂ ಇಲ್ಲಿ ಕಾಣಬಹುದು. ಅಮ್ಮನವರ ಗುಡಿಯ ಬಾಗಿಲಲ್ಲಿ ಟಗರುಕಾಳಗ, ಆನೆಯ ಮೇಲೆ ಹೊರಟ ರಾಜಪ್ರಮುಖರು, ಹುಲಿಯೊಡನೆ ಹೋರಾಟ ಮೊದಲಾದವನ್ನು ಚಿತ್ರಿಸಿರುವುದು ಸ್ವಾರಸ್ಯಕರವಾಗಿದೆ. ದೇವಾಲಯದ ಪ್ರಾಕಾರದಲ್ಲಿ ಆಂಜನೇಯ, ಚಂಡಿಕೇಶ್ವರ ಮೊದಲಾದ ದೇವತೆಗಳ ಚಿಕ್ಕ ಗುಡಿಗಳೂ ಇವೆ.
ಮೂಗೂರಿನಲ್ಲಿರುವ ಇತರ ಪ್ರಾಚೀನಗುಡಿಗಳಲ್ಲಿ ವೃಷಭನಾಥನ ಬಸದಿ, ನಾರಾಯಣ ದೇವಾಲಯ, ವೀರಭದ್ರಗುಡಿಗಳು ಸೇರಿವೆ. ಮೂಗೂರಿಗೆ ಬರುವವರು ಸಮೀಪದ ಟಿ.ನರಸೀಪುರದ ಗುಂಜಾನರಸಿಂಹ ದೇವಾಲಯವನ್ನೂ ಮುಂದೆ ಕೆಲವೇ ಕಿಲೋಮೀಟರುಗಳ ಅಂತರದಲ್ಲಿರುವ ತಿರುಮಕೂಡಲು, ಸೋಸಲೆ, ಶ್ರೀರಂಗರಾಜಪುರ, ಹಾಗೂ ಸೋಮನಾಥಪುರಗಳನ್ನೂ ನೋಡಿಕೊಂಡು ಬರಲು ಅವಕಾಶವಿದೆ.
ತಿರು ಶ್ರೀನಿವಾಸಾಚಾರ್ಯ ಗೋಪಾಲ್ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನದ ಕುರಿತು ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ ‘ಕಾಡು ಕಲಿಸುವ ಪಾಠ’ ಕೃತಿಗೆ ವಿಜ್ಞಾನ ವಿಷಯದಲ್ಲಿ ೨೦೧೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.