ಊರು ನಿಶ್ಯಬ್ದವಾದ ಹೊತ್ತಲ್ಲಿ ಹಾಡಿಕೆ ಶುರುವಾಯಿತು. ಮೊದಲ ಘಟ್ಟದಲ್ಲಿ ಬಸುದೇವದಾಸ್ ಏಕತಾರವನ್ನು ನುಡಿಸುತ್ತ ಕುಳಿತು ಹಾಡಲು ಆರಂಭಿಸಿದರು. ಸೌಮ್ಯವಾದ ಪಳಗಿದ ದನಿ. ಹಾಡಿಂದ ಹಾಡಿಗೆ ಮಾಧುರ್ಯ ಹೆಚ್ಚುತ್ತಿತ್ತು. ಆದರೂ ಅದರ ಗತಿ ಮಂದವಾಗಿತ್ತು. ನಾದದ ಪ್ರವಾಹವೊಂದು ಎದ್ದು ಅದರಲ್ಲಿ ಶೋತೃಗಳನ್ನು ಸೆಳೆದೊಯ್ಯುವ ರಭಸ ಕಾಣಲಿಲ್ಲ. ಆದರೆ ಅದು ಮುಂದಿನ ಅವಸ್ಥೆಗೆ ಮನಸ್ಸನ್ನು ಹದಗೊಳಿಸುವ ಬುನಾದಿಯೆಂದು ನಂತರ ತಿಳಿಯಿತು. ಐದಾರು ಹಾಡುಗಳ ಬಳಿಕ ಬಸುದೇವ್ ವಿಶ್ರಮಿಸಿದರು.
ಈಗ ಚಹ ಮತ್ತು ಹಾಲು ಸರಬರಾಜು ಆಯಿತು. ಚಹ ನಮಗೆ. ಹಾಲು ಹಾಡುಗಾರರಿಗೆ. ಹಾಲೊಳಗೆ ಏನಿತ್ತೊ ಕಾಣೆ.
ಎರಡನೇ ಘಟ್ಟದಲ್ಲಿ ಸೊಂಟದೊಳಗೆ ಡಗ್ಗಿ ಎಂಬ ಚರ್ಮವಾದ್ಯವನ್ನು ಬಾರಿಸುತ್ತಿದ್ದ ಬಸುದೇವರ ಶಿಷ್ಯ ಹಾಡಲು ಎದ್ದನು. ಆತನ ಹೆಸರು ನರೋತ್ತಮದಾಸ್. 25ರ ಹರೆಯದ ಆತ ಕಾಲಿಗೆ ಗೆಜ್ಜೆಕಟ್ಟಿದ್ದನು. ನಡುವಿಗೆ ರುಮಾಲು ಬಿಗಿದಿದ್ದನು. ಏಕತಾರಿಯನ್ನು ಕೊರಳಿಗೆ ನಾರದನಂತೆ ನೇತುಹಾಕಿಕೊಂಡು ನುಡಿಸುತ್ತ ಹಾಡಲಾರಂಭಿಸಿದನು. ಅವನಲ್ಲಿ ಬಸುದೇವರ ಮಾಧುರ್ಯವಿರಲಿಲ್ಲ. ಬದಲಿಗೆ ತಾರುಣ್ಯದ ಗಡಸುತನವಿತ್ತು. ಕಸುವಿತ್ತು. ಹಾಡುವಾಗ ಕಣ್ಮುಚ್ಚಿಕೊಂಡು ತನ್ಮಯನಾಗಿ ಬುಗುರಿಯಂತೆ ತಿರುಗುತ್ತಿದ್ದನು. ಬಾವುಲ್ ಗಾಯಕರು ಸಾಮಾನ್ಯವಾಗಿ ಕಣ್ಮುಚ್ಚಿಕೊಂಡು ಅಂತರ್ಮುಖಿಗಳಾಗಿ ಹಾಡುತ್ತಾರೆ. ಸೂಫಿಗಳ ಸಮಾ ಸಂಗೀತದಲ್ಲಿ ಆನಂದಾತಿರೇಕದಲ್ಲಿ ಶೋತೃಗಳು ಮೈದುಂಬಿದರೆ, ಬಾವುಲರಲ್ಲಿ ಸ್ವತಃ ಗಾಯಕರೇ ಆವೇಶಕ್ಕೆ ಒಳಗಾಗುತ್ತಾರೆ. ಅದರಲ್ಲೂ ಅವರು ಪುಟ್ಟಪುಟ್ಟ ಕುಣಿಹೆಜ್ಜೆ ಹಾಕುತ್ತ ಚಿಕ್ಕವರ್ತುಲದಲ್ಲಿ ನರ್ತಿಸುವುದು ಬಹಳ ಆಕರ್ಷಕ.
ವಿಶೇಷವೆಂದರೆ, ನರೋತ್ತಮದಾಸನ ಜತೆ ನರ್ತಿಸುತ್ತಿದ್ದ ಭೋಲನಾಥ್ ಎಂಬ ಬಸುದೇವನ ಮತ್ತೊಬ್ಬ ಶಿಷ್ಯನದು. ಕೊಂಚ ವಯಸ್ಸಾಗಿದ್ದ ಈತನು ತೆಳ್ಳಗೆ ಕೋಲಿನಂತಿದ್ದನು. ಮುಂದಿನೆರಡು ಹಲ್ಲುಬಿದ್ದು ನಕ್ಕರೆ ಮಗುವಿನಂತೆ ತೋರುತ್ತಿದ್ದನು. ಈತ ಪ್ರಧಾನ ಗಾಯಕನ ಗಂಭೀರ ನಿಲುವಿನ ಸುತ್ತ ದುಂಬಿಯಂತೆ ಸುತ್ತ್ತುತ್ತ, ಬಳ್ಳಿಯಂತೆ ಬಳುಕುತ್ತ ಕೃಷ್ಣನ ಜತೆಯಲ್ಲಿರುವ ರಾಧೆಯಂತೆ ವರ್ತಿಸುತ್ತ ಆನಂದಲಹರಿ ನುಡಿಸುತ್ತಿದ್ದನು. ಸವದತ್ತಿ ಎಲ್ಲಮ್ಮನ ಜೋಗಪ್ಪನಂತೆ ಕಾಣುತ್ತಿದ್ದ ಭೋಲಾನಾಥ್ ಬಹುಶ: ನಪುಂಸಕನಿರಬೇಕು. ಈತ ಚೌಡಿಕೆಯಂತಿರುವ ಆನಂದಲಹರಿಯನ್ನು ಬಾರಿಸುವಾಗ ಹೊಟ್ಟೆಯೊಳಗೆ ಅಡಗಿದ್ದ ನಾದದ ಕರುಳನ್ನು ಬಗೆದು ಹೊರಗೆ ಹಾಕುತ್ತಿದ್ದಾನೊ ಎಂಬಂತಿತ್ತು. ಅವನ ಕುಣಿತದ ಭಂಗಿ ಮತ್ತು ಮುಖ್ಯ ಗಾಯಕನ ಮುಖವನ್ನು ನೋಡುವ ಬಗೆ, ಲೈಂಗಿಕ ಪ್ರಚೋದನೆಯ ರಸಿಕ ಚೇಷ್ಟೆಗಳನ್ನು ಒಳಗೊಂಡಿತ್ತು. ಬಾವುಲರು ತಮ್ಮ ದೇಹಚಲನೆಯಲ್ಲೇ ಮಾದಕತೆಯನ್ನು ಹೊಮ್ಮಿಸುತ್ತಾರೆ. ಅವರು ತಮ್ಮ ಹಾಡು ಕುಣಿತಗಳಿಂದ ಸ್ತ್ರೀಯರನ್ನು ಮರುಳುಮಾಡಿ ಎಬ್ಬಿಸಿಕೊಂಡು ಹೋಗುತ್ತಾರೆಂಬ ಮಿತ್ ಸಹ ಬಂಗಾಳದಲ್ಲಿದೆ. ನಮ್ಮಲ್ಲಿ ಜೋಗಿಗಳನ್ನು ಕುರಿತು ಇಂಥ ಕತೆಗಳಿವೆಯಷ್ಟೆ. ಇದಕ್ಕೆ ತಕ್ಕಂತೆ ಅನೇಕ ಬಾವುಲರು ಸಂಸಾರಸ್ಥರಲ್ಲ. ಸಂಗಾತಿಯನ್ನು ಹುಡುಕಿಕೊಂಡು ಒಟ್ಟಿಗೆ ಹಾಡುತ್ತ ಊರೂರು ತಿರುಗಿಕೊಂಡು ಇರುತ್ತಾರೆ. ಶಾಕ್ತಪಂಥದ ಪ್ರಭಾವವುಳ್ಳ ಬಾವುಲರಲ್ಲಿ ಅನೇಕ ಗುಪ್ತಸಾಧನೆಗಳಿವೆ. ಅವುಗಳಲ್ಲಿ ಕೆಲವು ಕಾಮಕ್ಕೂ ಸಂಬಂಧಿಸಿವೆ. ಕಾರಣ, ಅವರ ಪ್ರಕಾರ ಮಾನವ ದೇಹವು ಒಂದು ಪವಿತ್ರ ವಸ್ತು ಮಾತ್ರವಲ್ಲ ಒಂದು ತತ್ವಕೂಡ. ಸಮಸ್ತ ಸತ್ಯಗಳ ಆವಾಸಸ್ಥಾನ ಅದು. ಅದರ ಮೂಲಕವೇ ದೈವಿಕ ಅನುಭವ ದೊರಕಬೇಕು. ಶಾಕ್ತರ ಮತ್ತು ತಾಂತ್ರಿಕರ ಪ್ರಭಾವವುಳ್ಳ ಬಾವುಲರಿಗೆ ಕಾಮವು ಸತ್ಯವನ್ನು ಕಾಣಲು ಇರುವ ಒಂದು ಸಾಧನ. ಬಾವುಲರು ಗಂಡುಹೆಣ್ಣಿನ ದೈಹಿಕ ಮಿಲನದ ಮೂಲಕ ಅಲೌಕಿಕ ಅನುಭವ ಪಡೆಯಬೇಕು ಎಂದು ನಂಬಿದವರು.
ಮೂರನೆಯ ಹಂತದಲ್ಲಿ ಭೋಲಾನಾಥನು ಕುಣಿಯುತ್ತ ಹಾಡಲಾರಂಭಿಸಿದನು. ಅವನ ದನಿಯಲ್ಲಿ ತುಸು ಗೊಗ್ಗರುತನವಿತ್ತು. ಹಾಡಿಹಾಡಿ ನುರಿತ ಕಾರಣ, ಅದರ ಒಡಕಲ್ಲೂ ವಿಚಿತ್ರ ಇಂಪಿತ್ತು. ಗಾಯಕರೇ ಹಾಗೆ. ಹಾಡುವ ಮುನ್ನ ಸಾಮಾನ್ಯ ವ್ಯಕ್ತಿಗಳಂತೆ ಕಾಣುತ್ತಾರೆ; ಹಾಡನ್ನು ಹುಟ್ಟಿಸತೊಡಗಿದ ಕೂಡಲೇ ಮುಖದಲ್ಲಿ ವಿಚಿತ್ರ ತೇಜಸ್ಸು ಸ್ಫುರಿಸುತ್ತ ಜಗತ್ತಿನ ಅತಿಸುಂದರ ವ್ಯಕ್ತಿಗಳಾಗಿ ರೂಪಾಂತರಗೊಳ್ಳುತ್ತಾರೆ. ತಮ್ಮ ಶಿಷ್ಯರು ಒಬ್ಬೊಬ್ಬರಾಗಿ ಹಾಡುತ್ತ ಕುಣಿವಾಗ ಬಸುದೇವ್ ಮೂಲೆಯಲ್ಲಿ ಕುಳಿತು, ಸಂತೋಷದಿಂದ ಕಣ್ಣನ್ನು ಹೊಳೆಸುತ್ತ ತಾಳ ಹಾಕುತ್ತ ಇದ್ದರು.
ಶಿಷ್ಯರಿಬ್ಬರ ಪಾಳಿ ಮುಗಿದ ಬಳಿಕ ಕೊನೆಯ ಘಟ್ಟದಲ್ಲಿ ಬಸುದೇವ್ ಹಾಡಿಕೆ ಆರಂಭವಾಯಿತು. ಮೊದಲಿಗಿರದ ಮಾಧುರ್ಯ ಈಗ ಕಾಣಿಸತೊಡಗಿತು. ಮಾದಕತೆ ಅಲೆಅಲೆಯಾಗಿ ಹೊಮ್ಮತೊಡಗಿತು. ಸಣ್ಣಗೆ ಮಳೆಬಂದು ತೋಯಿಸಿದಂತೆ, ತಣ್ಣನೆಯ ಗಾಳಿಯು ಮೈಮನವನ್ನು ಆವರಿಸಿಕೊಂಡಂತೆ, ಹಿತವಾಗಿ ಯಾರೊ ಹಿಂದಿನಿಂದ ಬಂದು ಅಪ್ಪಿದಂತೆ ಸುಖದ ಅನುಭವವಾಗುತ್ತಿತ್ತು. ಆತ ದೊಡ್ಡಗಾಯಕ ಎನ್ನುವುದು ಈಗ ಮನವರಿಕೆಯಾಯಿತು. ಹಿಂದೂಸ್ತಾನಿ ಸಂಗೀತದಲ್ಲಾಗಲಿ, ಸೂಫಿಗಳ ಮೆಹಫಿಲೆ ಸಮಾದಲ್ಲಾಗಲಿ ಸಂಗೀತಾನುಭವದಲ್ಲಿ ಪರವಶದ ಅನುಭವ ಆಗುವುದು ಕೊನೆಯ ಘಟ್ಟದಲ್ಲಿಯೇ. ಬಸುದೇವ್ ಕೊರಳಿಂದ ಒಂದಕ್ಕಿಂತ ಒಂದು ಮೋಹಕ ಗೀತೆಗಳು ಬರತೊಡಗಿದವು. ಅವುಗಳಲ್ಲಿ `ಮಾನುಷ್ ಭಜ ಮಾನುಷ್ ಪೂಜ’ ಹಾಡು ಬಹಳ ಇಷ್ಟವಾಯಿತು. ಸಂಸ್ಕೃತ ಜನ್ಯ ಬಂಗಾಳಿ ಶಬ್ದಗಳ ಮೂಲಕ ಹಾಡಿನ ಅರ್ಥವನ್ನು ನಾನು ಚೂರುಚೂರಾಗಿ ಊಹಿಸುತ್ತಿದ್ದೆ. ಆದರೆ ಅರ್ಥದ ಹಂಗಿಲ್ಲದೆಯೂ ನಾದವು ಮನಸ್ಸನ್ನು ತುಂಬಿಕೊಂಡು ಉನ್ಮತ್ತಗೊಳಿಸುತ್ತಿತ್ತು. ಪ್ರತಿ ಹಾಡು ಮುಗಿದಾಗ, ಯಜಮಾನರು `ಬಾ’ ಎಂದು ಶಹಬಾಸ್ ಗಿರಿ ಕೊಡುತ್ತಿದ್ದರು. ಬಸುದೇವ್ ಹಾಡಿದ ಹಾಡುಗಳಲ್ಲಿ ಟಾಗೂರರ `ಏಕಲಚಲೊ’ ರಚನೆ ಕೂಡ ಇತ್ತು. “ಅಮಿ ಕೊಥಾಯ್ ಪಾಬೊ ತಾರೆ, ಅಮಾರ್ ಮನೇರ್ ಮಾನುಶ್ ಜೇರೆ” ಹಾಡಂತೂ ಜೇನಿನಂತೆ ಸಿಹಿಯಾಗಿತ್ತು. ಇದರರ್ಥವೇನೆಂದು ಯಜಮಾನರಿಗೆ ಪಿಸುನುಡಿಯಲ್ಲಿ ಕೇಳಿದೆ. `ಮಾನವ ಹೃದಯ ನನ್ನಲ್ಲಿದೆ. ಅದರೊಳಗೆ ಬೆಳಕಿದೆ. ಎತ್ತನೋಡಿದರೂ ಆ ಬೆಳಕು ನೆಲೆಸಿದೆ’ ಎಂದೇನೊ ಹೇಳಿದರು. ಸೂಫಿಗಳ ಅನಲ್ ಹಖ್ ತತ್ವವೂ, ಅದ್ವೈತಿಗಳ ಅಹಂ ಬ್ರಹ್ಮಾಸ್ಮಿ ದರ್ಶನವೂ ಇದನ್ನೇ ಹೇಳುತ್ತದೆ ತಾನೇ?
ಬಾವುಲರು ಸಾಮಾನ್ಯವಾಗಿ ಹಾಡುವುದು ಲಾಲುನ್ ಫಕೀರನ ರಚನೆಗಳನ್ನು. ಲಾಲುನ್ ಒಳಗೊಂಡಂತೆ ಮಧ್ಯಕಾಲದ ಕಬೀರ, ಏಕನಾಥ, ಶಿಶುನಾಳ, ನಾನಕ- ಎಲ್ಲ ಸಂತರು ಧರ್ಮದ ಹೆಸರಲ್ಲಿ ಜನರನ್ನು ವಿಭಜಿಸುವ ತತ್ವಗಳನ್ನು ನಿರಾಕರಿಸಿದವರು. ಫಕೀರ್ ಬಾವುಲರೆಂದು ಕರೆಯಲಾಗುವ ಲಾಲುನ್ ಅನುಯಾಯಿಗಳು ಬಾಂಗ್ಲಾದಲ್ಲಿದ್ದಾರೆ. ಬಾಂಗ್ಲಾ ಬಾವುಲರು ಬಿಳಿಬಟ್ಟೆ ಧರಿಸಿದರೆ ಬಂಗಾಳದ ಬಾವುಲರು ಕಾವಿ ಮತ್ತು ತುಳಸಿಮಾಲೆ ಧರಿಸುತ್ತಾರೆ. ಬಾಂಗ್ಲಾ ಬಾವುಲರು ಸೂಫಿ ಗಜಲುಗಳನ್ನು ಹಾಡಿದರೆ, ಬಂಗಾಳದ ಬಾವುಲರು ಹೆಚ್ಚಾಗಿ ವೈಷ್ಣವೀ ಗೀತೆ ಹಾಡುವರು. ಇಬ್ಬರೂ ಉದ್ದನೆಯ ಕೂದಲು ಬಿಡುತ್ತಾರೆ. ಭಿಕ್ಷಾಟನೆ ಮಾಡುತ್ತಾರೆ. ತಿರುಗಾಟ ನಡೆಸುತ್ತಾರೆ. ಬಂಗಾಳವು ರಾಜಕೀಯವಾಗಿ ಲಾರ್ಡ್ ಕರ್ಝನನಿಂದ ಎರಡು ತುಂಡಾಯಿತು. ಆದರೆ ಅವನ್ನು ಕೂಡಿಸುವ ಮೂರು ಸಾಂಸ್ಕೃತಿಕ ತಾರುಗಳು ಹರಿಯಲಿಲ್ಲ. ಅವುಗಳಲ್ಲಿ ಒಂದು ಬಂಗಾಳಿ ಭಾಷೆಯದು. ಎರಡನೆಯದು ಟಾಗೂರರದು. ಮೂರನೆಯದು ಬಾವುಲರದು.
ಬಂಗಾಳಿ ಸಂಸ್ಕೃತಿಯ ಇಬ್ಬರು ಆಧುನಿಕ ಕವಿಗಳಾದ ಟಾಗೂರ್ ಮತ್ತು ಖಾಜಿ ನಜರುಲ್ ಇಸ್ಲಾಂರ ಮೇಲೆ ಬಾವುಲರ ಗಾಢ ಪ್ರಭಾವವಿದ್ತೆ. ಬಹುಶಃ ಬಂಗಾಳಿ ಕಾವ್ಯ ಮತ್ತು ಸಂಗೀತಗಳನ್ನು ಬಾವುಲರನ್ನು ಬಿಟ್ಟು ಚರ್ಚಿಸುವಂತೆಯೇ ಇಲ್ಲ. ಬಾವುಲರು ಬಂಗಾಳಿ ಸಂಸ್ಕೃತಿಯ ಆಳದಲ್ಲಿ ಬೆರೆತುಹೋಗಿದ್ದಾರೆ. ಹಳ್ಳಿಗಳಲ್ಲಿ ರೈತರು ನದಿಗಳಲ್ಲಿ ನಾವಿಕರು ಬಾವುಲರ ಹಾಡುಗಳನ್ನು ಹಾಡುತ್ತಾರಂತೆ. ನಮಗೆ ಕೇಳಸಿಗಲಿಲ್ಲ. ಆದರೆ ಅನೇಕ ಮನೆಗಳ ಮೇಲೆ ಬಾವುಲರ ಭಿತ್ತಿಚಿತ್ರಗಳನ್ನಂತೂ ಕಂಡೆವು. ನೂರಾರು ಚಿತ್ರಗಳನ್ನು ನೋಡಿದೆವು. ಬಂಗಾಳದ ಕಲಾವಿದರು ಕಾಳಿಯನ್ನು ಬಿಟ್ಟರೆ ಅತಿಹೆಚ್ಚು ಚಿತ್ರಿಸಿರುವುದು ಬಾವುಲರನ್ನೇ ಎಂದು ಕಾಣುತ್ತದೆ.
ಹಿಂದೆ ನಬಿನಿದಾಸ್ ಬಾವುಲ್ ಬಂಗಾಳ ಕಂಡ ದೊಡ್ಡಗಾಯಕ. ಈಗ ಪೂರ್ಣದಾಸ್. ಕಲ್ಕತ್ತೆಯಲ್ಲಿರುವ ಪೂರ್ಣದಾಸರೂ ಅವರ ಮಕ್ಕಳೂ ಈಗ ಬಂಗಾಳದ ಜನರ ಕೈಗೇ ಸಿಗದಷ್ಟು ಫಾರಿನ್ ಟೂರುಗಳಲ್ಲಿ ಬಿಜಿಯಾಗಿದ್ದಾರೆ. ಅವರ ಸಿಡಿಗಳು ಜನಪ್ರಿಯವಾಗಿವೆ. ಪೂರ್ಣದಾಸ್ 60ರ ದಶಕದಲ್ಲಿ ಯೂರೋಪಿನಲ್ಲಿ ಇದರ ರುಚಿಯನ್ನು ಹರಡಿದವರು. ಅವರ ಮಕ್ಕಳು ಬಾವುಲ್ ಸಂಗೀತವನ್ನು ಅಮೆರಿಕದ ರಾಕ್ ಜಾಝ್ ಸಂಗೀತದ ಜತೆ ಬೆರೆಸಿರುವರು- ಕಾರಂತರು ಬ್ಯಾಲೆ ಜತೆ ಯಕ್ಷಗಾನ ಬೆರೆಸಿರುವಂತೆ. ನನಗೆ ಕುತೂಹಲ ಇದ್ದುದು ಈ ಪಾಶ್ಚಾತ್ಯೀಕರಣದ ಪ್ರಯೋಗದಲ್ಲಿ ಅಲ್ಲ. ನೆರೆಯಲ್ಲಿರುವ ಬಾಂಗ್ಲಾದೇಶದ ಫಕೀರ್ ಬಾವುಲರ ಹಾಡಿಕೆಯಲ್ಲಿ. ಅದರಲ್ಲೂ ಕಿಸ್ಮತಲಿ ಫಕೀರ್ ಹಾಗೂ ಅನ್ಸಾದ್ ಶೇಕರ ಗಾಯನದಲ್ಲಿ. ಇಸ್ಲಾಮಿಕ್ ಮೂಲಭೂತವಾದವು ಹೆಚ್ಚಿಕೊಂಡಿರುವ ಹೊತ್ತಲ್ಲಿ, ಅದನ್ನು ಮೆಟ್ಟಿ ಬಾವುಲ್ ಪರಂಪರೆ ಹೇಗೆ ಬದುಕುಳಿದಿದೆಯೊ ಹೋಗಿ ಕಾಣಬೇಕು ಅನಿಸುತ್ತಿತ್ತು.
ರಾತ್ರಿ ಸರಿಯುತ್ತಿತ್ತು. ಚಳಿಯು ಆಕ್ರಮಿಸುತ್ತಿತ್ತು. ಬಸುದೇವ್ ಹಾಡಿನ ಮೇಲೆ ಹಾಡುತ್ತ ಸಭೆಯನ್ನು ಉತ್ಕಟ ಸ್ಥಿತಿಗೆ ಒಯ್ಯತೊಡಗಿದರು. ಶಿಷ್ಯನ ಕಸುವು ಇಲ್ಲದಿದ್ದರೂ ತನ್ಮಯಗೊಳಿಸುವ ಯಾವುದೊ ಶಕ್ತಿ ಅವರ ಸಂಗೀತಕ್ಕಿತ್ತು. ಕೊನೆಯ ಹಾಡು ಮುಸ್ಲಿಮರಿಗೆ ಪೀರ್ ಹಿಂದೂಗಳಿಗೆ ಗುರುವಾಗಿರುವವನು ಒಬ್ಬನೇ ಎಂಬ ಅರ್ಥವನ್ನು ಒಳಗೊಂಡಿತ್ತು. ಬಸುದೇವ್ ಇದನ್ನು ನಾನಿದ್ದೇನೆಂದು ಹಾಡಿದರೆ? ನಾದದ ಗುಂಗು ಅಮಲಿನಂತೆ ತಲೆಯಲ್ಲಿ ತುಂಬಿಕೊಂಡು ಯಾಕೊ ಸಾಕಪ್ಪಾ ಅನಿಸತೊಡಗಿತು. ಗೋಷ್ಠಿ ಮುಗಿದಾಗ ರಾತ್ರಿ 1 ಗಂಟೆಯಿರಬೇಕು. ವರಾಂಡದ ಕೆಳಗೆ ಕುಳಿತಿದ್ದ ಕೆಲಸಗಾರರೆಲ್ಲ ಒಬ್ಬೊಬ್ಬರೇ ಮಾಯವಾಗಿ, ಮನೆಯ ಹಿಂದೆ ಊಟಕ್ಕೆ ಹೋಗಿದ್ದರು. ಯಜಮಾನರು ಎದ್ದು “ಹೇಗಿತ್ತು ಗೋಷ್ಠಿ?” ಎಂದರು. ನಾನು ಚೆನ್ನಾಗಿತ್ತು ಎಂದರೆ ಕೃತಕವಾಗಬಹುದು ಎಂದು ಸುಮ್ಮನೆ ಮುಗುಳ್ನಕ್ಕು ಗೋಣನಲ್ಲಾಡಿಸಿದೆ. ಅಡಿಗೆ ಸಿದ್ಧವಾಗಿಟ್ಟುಕೊಂಡು ಒಳಗೆ ಸೇವಕರು ಯಜಮಾನರ ಸನ್ನೆಗಾಗಿ ಕಾಯುತ್ತಿದ್ದರು. ಬಹುಶಃ ಇದು ಮನೆಯೊಡೆಯನು ಕಲಾವಿದರ ಜತೆ ಕೂರುವ ಪಂಕ್ತಿ. ಮುಖ್ಯ ಅತಿಥಿಯೆಂದು ಘೋಷಿಸಲ್ಪಟಿರುವ ನನ್ನನ್ನು ಬಿಟ್ಟು ಉಣ್ಣಲಾರರು ಎಂಬ ಅಚಲ ನಂಬಿಕೆ ನನಗೆ. ಮಾಂಸದ ಸಾರಿನ ಗಮಲು ಹಾಡಿಗಿಂತಲೂ ತೀಕ್ಷ್ಣವಾಗಿ ಬಂದು ಮೂಗಿನ ಮೂಲಕ ಹೊಕ್ಕು ಚೈತನ್ಯವನ್ನೆಲ್ಲ ವ್ಯಾಪಿಸಿಕೊಂಡಿತ್ತು. ಚಳಿಗೆ ಹೊಟ್ಟೆ ಮತ್ತಷ್ಟು ಹಸಿದು ಹುಲಿ ಒಳಗೆ ಹಾ ಎಂದು ಬಾಯಿಕಳೆದು ಕುಳಿತಿತ್ತು.
ಅಷ್ಟರಲ್ಲಿ ಯಜಮಾನರು ಬಂದು ನನ್ನ ಕೈಗಳನ್ನು ಬೊಗಸೆಯಲ್ಲಿ ಹಿಡಿದು “ಪ್ರೊಫೆಶರ್, ನೀವು ಗೋಷ್ಠಿಗೆ ಬಂದಿದ್ದು ಬಹಳ ಆನಂದವಾಯಿತು. ಇನ್ನೊಮ್ಮೆ ಬಂಗಾಳಕ್ಕೆ ಬನ್ನಿ. ಕಲ್ಕತ್ತೆಯ ನಮ್ಮ ಮನೆಗೆ ಬನ್ನಿ. ಅಲ್ಲೂ ಬಾವುಲ ಗೋಷ್ಠಿ ಮಾಡೋಣ. ಈಗ ನಮ್ಮ ಡ್ರೈವರ್ ನಿಮಗೆ ಗೆಸ್ಟ್ ಹೌಸಿಗೆ ಬಿಟ್ಟುಬರುತ್ತಾನೆ” ಎಂದು ಕೈಮುಗಿದರು. ಅಯ್ಯೋ ನನ್ನ ಖೊಟ್ಟಿ ನಸೀಬೇ. ಈ ಪಾಪಿಗಳು ಭಂಗಿರಸ ಇತ್ಯಾದಿ ಮಾದಕ ಪದಾರ್ಥಗಳ ಸೇವನೆಯಿದ್ದುದರಿಂದ ನನ್ನನ್ನು ಸಾಗಹಾಕಿದರೇ? ಅಲೌಕಿಕತೆಯ ಗುಂಗಿನಿಂದ ಜರ್ರನೆ ನೆಲಕ್ಕಿಳಿದುಹೋದೆ. ಕಣ್ಣು ಕತ್ತಲೆಕಟ್ಟಿತು. ಡ್ರೈವರ್ ಗಾಡಿ ಸ್ಟಾರ್ಟು ಮಾಡಿ, ಒಮ್ಮೆ ಹಾರ್ನ್ ಮಾಡಿದ. ಯಜಮಾನರಿಗೂ ಗಾಯಕರಿಗೂ ನನ್ನೆರಡೂ ಹೆಬ್ಬೆರಳು ಹಣೆಗೆ ತಾಕುವಂತೆ ಕೈಮುಗಿದು, ಚಳಿಯಲ್ಲಿ ನಡುಗುತ್ತ ವಿಧಿಯನ್ನು ಶಪಿಸುತ್ತ ಮರಳಿ ಬಂದೆ. ಕಾಯುತ್ತಿದ್ದ ಬಾನು ಗಾಯನ ಹೇಗಿತ್ತು ಎಂದಳು. ಬಹಳ ಚೆನ್ನಾಗಿತ್ತು ಎಂದೆ. ಹೊಟ್ಟೆ ಉರಿಸಿಕೊಂಡಳು. ಊಟಹಾಕದೆ ಕಳಿಸಿದರು ಎಂದೆ. ಅವಳಿಗೆ ಹಾಲುಕುಡಿದಷ್ಟು ಸಂತೋಷವಾಯಿತು.
ಶಾಂತಿನಿಕೇತನದಲ್ಲಿ ನಾವಿರುವಷ್ಟು ದಿನವೂ ಅನೇಕ ಬಾವುಲರು ಬೀದಿಯಲ್ಲಿ ಹಾಡುತ್ತ ಹೋಗುತ್ತಿದ್ದುದನ್ನು ನೋಡಿದೆವು. ನಮ್ಮ ಜನಪದ ಮಂಟೆಸ್ವಾಮಿ ಗಾಯಕರಂತೆ ಚೌಡಿಕೆ ಕಲಾವಿದರಂತೆ, ಖವಾಲಿ ಹಾಡುವ ಫಕೀರರಂತೆ ಇವರು ಧಾರ್ಮಿಕ ಭಿಕ್ಷುಕರು. ಅಂಗಡಿ ಮುಂಗಟ್ಟುಗಳ ಮುಂದೆ ನಿಂತು ಅವರು ಹಾಡುವಾಗ ಯಾರೂ ಗಮನವಿಟ್ಟು ಕೇಳುತ್ತಿರಲಿಲ್ಲ. ಗುಡಿಗಳ ಮುಂದೆ ಬಾವುಲರು ಭಿಕ್ಷುಕರ ಸಾಲಿನಲ್ಲಿ ಕುಳಿತು ಹಾಡುವಾಗ ಕಾಸು ಕೊಡುತ್ತಿದ್ದರು. ಪೂರ್ಣದಾಸರ ಪ್ರಭಾವದಿಂದ ಸಣ್ಣಪುಟ್ಟ ಊರಲ್ಲಿರುವ ಬಾವುಲರು ತಮ್ಮ ಹಾಡುಗಳ ಸಿಡಿ ಮಾಡಿಸಿಕೊಂಡಿರುವುದುಂಟು. ತಾರಾಪೀಠದಲ್ಲಿ ಭಿಕ್ಷೆಬೇಡುತ್ತಿದ್ದ ಒಬ್ಬ ಬಾವುಲನು ತನ್ನ ಹಾಡಿನ ಸಿಡಿಗಳನ್ನೂ ಮಾರುತ್ತಿದ್ದನು. ನಾನೊಂದು ಕೊಂಡುಕೊಂಡೆ. ಮನೆಗೆ ಬಂದು ಹಾಕಿದಾಗ ಖಾಲಿಸಿಡಿಯಾಗಿತ್ತು. ಅನುಭಾವದಲ್ಲಿ ಶೂನ್ಯವೂ ಒಂದು ತತ್ವ ತಾನೇ?
ಬಸುದೇವ್ ಕೂಡ ಭಾರತದ ಅನೇಕ ಕಡೆ ಹೋಗಿಬಂದಿದ್ದಾರೆ. ಆದರೂ ಅವರು ಇರುವುದು ಗುಡಿಸಲಿನಲ್ಲಿ. ಸೈಕಲ್ ಇಟ್ಟುಕೊಳ್ಳುವಷ್ಟು ಸ್ಥಿತಿವಂತರು ಎನ್ನಬಹುದು. ನಮ್ಮ ಧಾರ್ಮಿಕ ಕಲೆಗಳಿಗೂ ಬಡತನಕ್ಕೂ ಯಾವುದೊ ಒಂದು ಬಗೆಯ ಸಂಬಂಧವಿದೆ. ಕಲೆಗಳು ಆನುಭಾವಿಕವಾಗಿವೆ. ಆದರೆ ಅವಕ್ಕೆ ಸಾಮಾಜಿಕ ನಿಕೃಷ್ಟತೆಯಿಂದ ತಪ್ಪಿಸಿಕೊಳ್ಳಲು ಆಗಿಲ್ಲ. ನಮ್ಮ ಮಂಟೆಸ್ವಾಮಿ, ಎಲ್ಲಮ್ಮ, ಮಾದೇಶ್ವರ, ಜುಂಜಪ್ಪ, ಫಕೀರರ ಹಾಡಿಕೆಗೂ ಇದೇ ಅವಸ್ಥೆ ತಾನೇ? ಬೆಂಗಳೂರಿಗೆ ಬರುವಾಗ, ರೈಲಿನಲ್ಲಿ ನಮ್ಮ ಆಸುಪಾಸು ಐಟಿಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಬಂಗಾಳಿ ತರುಣರಿದ್ದರು. ಅವರು ತಮ್ಮ ಲ್ಯಾಪ್ ಟಾಪುಗಳಲ್ಲಿ ಬಂಗಾಳಿ ಸಿನಿಮಾಗಳನ್ನು ನೋಡುತ್ತಿದ್ದರು. ಇಯರ್ ಫೋನು ಹಾಕಿಕೊಂಡು ಯಾವುದೊ ಸಂಗೀತ ಕೇಳುತ್ತಿದ್ದರು. ಅವರ ಜತೆ ನಾನು ಕೇಳಿದ ಬಾವುಲ್ ಸಂಗೀತದ ಸುದ್ದಿತೆಗೆದೆ. ಅವರು ಈ ಬಗ್ಗೆ ಹೆಚ್ಚು ಉತ್ಸಾಹ ತೋರಲಿಲ್ಲ.
ಬೆಳಿಗ್ಗೆಯೇ ಎದ್ದು ಬಸುದೇವರ ಮನೆಗೆ ಹೋದೆವು. ಬೆಳಗಿನ ಭೇಟಿಯಲ್ಲಿ ಬಾವುಲ್ ಹಾಡಿಕೆ ಕೇಳುವ ಆಸೆಯಿತ್ತು ಬಾನುಗೆ. ಬಸುದೇವ್ ಇನ್ನೂ ಮನೆಯಿಂದ ಬಂದಿಲ್ಲ ಎಂದು ಜವಾಬು ಬಂತು. ಅವರ 12 ವರ್ಷದ ಮಗ ನಮಗೆ ಏಕತಾರ ನುಡಿಸಿ ತೋರಿಸಿದನು. ಬಸುದೇವರ ಮಡದಿ ಆನಂದಲಹರಿ ನುಡಿಸಿ ತೋರಿದರು. ಕಡೆಯಲ್ಲಿ ಮೆತ್ತಗೆ “ದಾದಾ ದಾದಾ, ನಮ್ಮನ್ನು ಬೆಂಗಳೂರಿಗೆ ಆಹ್ವಾನಿಸಿದರೆ ನಾನೂ ಬರುತ್ತೇನೆ. ನನಗೆ ಕರೆತರುವಂತೆ ಅವರಿಗೆ ಒಂದು ಮಾತು ಹೇಳು. ಕೇರಳಕ್ಕೆ ಹೋದಾಗ ಅವರು ನನ್ನನ್ನು ಬಿಟ್ಟುಹೋಗಿದ್ದರು” ಎಂದು ಆಕೆ ಹೇಳಿದರು. `ನನ್ನ ಮಗ ದೊಡ್ಡವನಾಗಲಿ, ಅವನ ಹಿಂದೆ ನಾನೂ ದೇಶ ತಿರುಗಿ ಬರುತ್ತೇನೆ’ ಎಂದು ಸೇರಿಸಿದಳು.
ಬಿಸಿಲೇರುವ ಹೊತ್ತಿಗೆ ಸೈಕಲ್ಲಿನಲ್ಲಿ ಬಸುದೇವರ ಸವಾರಿ ಬಂತು. ಕೈಲೊಂದು ಮೀನು. ಕೈಚೀಲದಲ್ಲಿ ಮಸಾಲೆ ಸಾಮಾನು. ನಮ್ಮನ್ನು ನೋಡಿ ಯಾಕೊ ಬಸುದೇವರ ಮುಖ ಅರಳಲಿಲ್ಲ. ಬಹುಶಃ ನಿದ್ದೆಯಿನ್ನೂ ಮುಗಿದಂತೆ ಕಾಣಲಿಲ್ಲ. ಒಣಗಿದ ದನಿಯಲ್ಲಿ “ದಾದಾ ಕ್ಷಮಿಸಿ, ಇವತ್ತು ನಿಮಗೆ ಹಾಡಲಾರೆ. ದಣಿವಾಗಿದೆ. ನನಗೆ ವಿಶ್ರಾಂತಿ ಬೇಕು” ಎಂದರು. ನಾವು ಕೂಡ ಶಾಕ್ತಕ್ಷೇತ್ರವಾದ ತಾರಾಪೀಠಕ್ಕೆ ರೈಲನ್ನು ಹಿಡಿಯಬೇಕಿತ್ತು. ಅವರಿಗೆ ನನ್ನ ವಿಳಾಸ ಕೊಟ್ಟು ಏನಾದರೂ ಬೆಂಗಳೂರಿಗೆ ಕರೆಬಂದರೆ ದಯವಿಟ್ಟು ಬನ್ನಿ ಎಂದೆ. ಅವರ ಮಡದಿ ಓರೆನೋಟದಲ್ಲಿ ನನ್ನನ್ನೇ ನೋಡುತ್ತಿದ್ದುದನ್ನು ಕಂಡು, `ಅಕ್ಕನನ್ನು ಕರೆದುಕೊಂಡು ಬನ್ನಿ’ ಎಂದು ಸೇರಿಸಿದೆ. ಬಸುದೇವ್ `ಆಗಲಿ ಆಗಲಿ’ ಎಂದು ಹೇಳಿ ತಮ್ಮ ಮಡದಿಗೆ ಮೀನು ಕೊಟ್ಟು ಅಡಿಗೆ ಮಾಡು ಎಂದರು. ಅಷ್ಟುಹೊತ್ತಿಗೆ ಅವನ ಸೋದರ ಎಲ್ಲೊ ಕಾರ್ಯಕ್ರಮಕ್ಕೆ ಹೋದವನು ಸೈಕಲ್ ಹತ್ತಿ ಬಂದ. ನಾನು ರಾತ್ರಿಯ ಹಾಡುಗಾರಿಕೆ ಬಗ್ಗೆ ಮಾತಾಡಲು ಹೋದೆ. ಬಸುದೇವ್ ಅದನ್ನು ಕಣ್ಣುಮಿಟುಕಿಸಿ ತಡೆದರು. ಬಹುಶಃ ರಾತ್ರಿ ಕಾರ್ಯಕ್ರಮವನ್ನು ತಮ್ಮನಿಂದ ಬಚ್ಚಿಡಬಯಸಿದ್ದರೋ ಏನೊ? ನಾವು ಹೊರಡಬಹುದು ಎಂಬುದಕ್ಕೆ ಬೇಕಾದಷ್ಟು ಸೂಚನೆ ಸಿಕ್ಕವು. ಬಸುದೇವರಿಗೆ ಏನಾದರೂ ಸಂಭಾವನೆಯನ್ನು ಕೊಡಲೇ, ಎಷ್ಟು ಕೊಡಲಿ, ಕೊಟ್ಟರೆ ಭಿಕ್ಷೆಯೆಂದು ಎಲ್ಲಿ ತಿಳಿದುಕೊಳ್ಳುವರೊ ಎಂದೆಲ್ಲ ಒಳಗೇ ಪರಿತಪಿಸುತ್ತ, ನಮಸ್ಕಾರ ಮಾಡಿದೆ.
ತನ್ನನ್ನೂ ಬೆಂಗಳೂರಿಗೆ ಕರೆದುಕೊಂಡು ಬರಲು ಹೇಳೆಂದು ಬಗೆಬಗೆಯಲ್ಲಿ ಸನ್ನೆಮಾಡುತ್ತಿದ್ದ ಬಸುದೇವರ ಮಡದಿ, ಗಂಡ ಕೆಕ್ಕರಿಸಿದೊಡನೆ ತಣ್ಣಗೆ ಮೀನು ಇಸಿದುಕೊಂಡು, ಅಲ್ಲೇ ಅಂಗಳದಲ್ಲಿ ಕೂತು, ಈಳಿಗೆಮಣಿ ಮೆಟ್ಟಿಕೊಂಡು ಅದರ ಸಿಪ್ಪೆಯನ್ನು ಹೆರೆಯತೊಡಗಿದಳು. ಆಕೆಗೂ ನಮಸ್ಕರಿದೆವು. ಆಗಲಿ, ಹೋಗಿಬನ್ನಿ ಎಂದಳು. ಆಕೆಯ ದನಿಯಲ್ಲಿ ಉಲ್ಲಾಸವಿರಲಿಲ್ಲ.
(ಚಿತ್ರಗಳು: ಲೇಖಕರವು)
ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.