ನಾನು ಹುಟ್ಟಿದ ಹಳ್ಳಿಯಲ್ಲಿ ಒಂದು ಉರ್ದು ಶಾಲೆಯಿತ್ತು. ಅದು ಮೊಹರಂ ಬಂದಾಗ ದೇವರು ಇಡುವ ಜಾಗವಾಗುತ್ತಿತ್ತು; ರಂಜಾನ್ ಬಂದಾಗ ನಮಾಜು ಮಾಡುವ ಮಸೀದಿಯಾಗುತ್ತಿತ್ತು. ಉಳಿದಂತೆ ಶಾಲೆ. ಅದೂ ಸರಿಯಾಗಿ ನಡೆಯುತ್ತಿರಲಿಲ್ಲ. ಗೌರವಧನದ ಮೇಲೆ ಕೆಲಸ ಮಾಡುತ್ತಿದ್ದ ಉರ್ದು ಪಂಡಿತರೊಬ್ಬರು ಮೂರು ಮೈಲಿ ದೂರದ ತರೀಕೆರೆಯಿಂದ ವಾರಕ್ಕೆರಡು ಸಲ ಬಂದು ಮಕ್ಕಳ ಮುಖ ನೋಡಿ ಹೋಗುತ್ತಿದ್ದರು. ಉಳಿದಂತೆ ವಿದ್ಯಾರ್ಥಿಗಳು ನಿರಂಕುಶಮತಿಗಳಾಗಿ ಕೆರೆಯಲ್ಲಿ ಈಜಾಡುವುದು, ಅಡಿಗೆ ಆಟ ಮಾಡುವುದು, ಹುಣಿಸೆ ಮರಕ್ಕೆ ಕಲ್ಲುಹೊಡೆಯುವುದು, ಬೆಲ್ಲದಹಣ್ಣು ಆರಿಸಲು ಹೋಗುವುದು- ಇತ್ಯಾದಿ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದರು. ಗುರುಗಳು ಬಂದದಿನ ಎಲ್ಲರೂ ಒಟ್ಟಾಗಿ ಪದ್ಯ ಮತ್ತು ಮಗ್ಗಿಯ ‘ಘೋಷ್’ ಮಾಡುತ್ತಿದ್ದರು. ಶಾಲೆಯ ಪಕ್ಕವೇ ಕೆರೆಯಿದ್ದುದು ವರವೂ ಶಾಪವೂ ಆಗಿತ್ತು. ಕೆರೆಯಲ್ಲಿ ಹಾಪುಕಸ ಬೆಳೆದು ಮೀನುಗಳು ಚೆನ್ನಾಗಿ ಕೊಬ್ಬಿದ್ದವು. ಗುರುಗಳು ಕೊಂಚ ಗಟ್ಟಿಮುಟ್ಟಾದ ಹುಡುಗರನ್ನು ಕರೆದುಕೊಂಡು ಕೆರೆ ಕೆಳಗಿನ ಗದ್ದೆಯನ್ನು ಅಗೆಸಿ ಎರೆಹುಳ ತೆಗೆಸುತ್ತಿದ್ದರು. ಬಳಿಕ ಗಾಳ ಹಾಕಿ ಮೀನು ಹಿಡಿಯುವ ತರಬೇತಿ ಕೊಡುತ್ತಿದ್ದರು. ಹಿಡಿದ ಮೀನನ್ನು ಉಜ್ಜಿ ಸ್ವಚ್ಛಮಾಡುವುದು ವಿದ್ಯಾರ್ಥಿನಿಯರ ಕೆಲಸ. ನನ್ನಕ್ಕ ಈ ಕೆಲಸದಲ್ಲಿ ಅಪಾರ ಪರಿಣತಿ ಪಡೆದಿದ್ದಳು. ಸಾರಿಗಾಗುವಷ್ಟು ಮೀನಾದ ಕೂಡಲೆ ಮೇಷ್ಟ್ರು ಬ್ಯಾಗಿಗೆ ಹಾಕಿಕೊಂಡು ತರೀಕೆರೆಯತ್ತ ಓಟ ಕೀಳುತ್ತಿದ್ದರು.
ಇದನ್ನೆಲ್ಲ ಗಮನಿಸುತ್ತಿದ್ದ ಅಪ್ಪನಿಗೆ ಏನನಿಸಿತೋ ಏನೋ, ಲಿಂಗಾಯತರ ಬೀದಿಯಲ್ಲಿದ್ದ ಕನ್ನಡ ಶಾಲೆಗೆ ನನ್ನನ್ನು ಹಾಕಿದನು. ಅದು ನನ್ನ ಜೀವನದಲ್ಲಿ ನಿರ್ಣಾಯಕವಾದ ವಿದ್ಯಮಾನವಾಗಿತ್ತೆಂದು ಈಗನಿಸುತ್ತಿದೆ. ಅದೊಂದು ನಾಲ್ಕು ಇಯತ್ತೆಗಳಿದ್ದ ಸರ್ಕಾರಿ ಶಾಲೆ. ದೂರದ ಬೆಟ್ಟದಹಳ್ಳಿಯಿಂದ ಐನೋರ ಪೈಕಿ ಒಬ್ಬ ಮೇಷ್ಟ್ರು ಬರುತ್ತಿದ್ದರು. ಕೆಂಪಗೆ ತೆಳ್ಳಗೆ ಉದ್ದಕ್ಕೆ ಇದ್ದ ಅವರ ಹೆಸರು ನೆನಪಿಲ್ಲ. ಮೇಷ್ಟ್ರು ಅಂತಷ್ಟೆ ಗೊತ್ತು. ಅವರು ಗೇಟಿಗಿಳಿದು ಒಂದೂವರೆ ಮೈಲಿ ನಡೆದು ಶಾಲೆಗೆ ಬರುತ್ತಿದ್ದರು. ನಮ್ಮ ಹೊಲದೊಳಗಿಂದ ಕಾಲುಹಾದಿ ಹೋಗಿತ್ತು. ಮೇಷ್ಟರು ಹೊಲದೊಳಗಿಂದ ಹಾಯುವಾಗ ಅಮ್ಮ ಮೇಷ್ಟರ ಬ್ಯಾಗಿಗೆ ಹೊಲದಲ್ಲಿದ್ದ ತಟುಗಣಿಕಾಯಿ, ಶೇಂಗಾ, ಹೀರೆಕಾಯಿ, ಮೆಣಸಿನಕಾಯಿ ಇತ್ಯಾದಿಯನ್ನು ಬಿಡಿಸಿ ಹಾಕಿ, ‘ನಮ್ಮ ಹುಡುಗನಿಗೆ ಚೆನ್ನಾಗಿ ನೋಡ್ಕೊಳ್ರಿ ಸಾರ್’ ಎನ್ನುವಳು. ಅದಕ್ಕವರು ‘ಆಗಲಮ್ಮ. ಅದಕ್ಕೇನಂತೆ’ ಎನ್ನುವರು.
ಇಡೀ ಶಾಲೆಯಲ್ಲಿ ನಾನೊಬ್ಬನೇ ಮುಸ್ಲಿಂ ವಿದ್ಯಾರ್ಥಿ. ಹೆಚ್ಚಿನವರು ಲಿಂಗಾಯತ ಹುಡುಗರು. ಇಲಾಖೆಯಿಂದ ಯಾರಾದರೂ ಇನ್ ಸ್ಪೆಕ್ಷನ್ನಿಗೆ ಬಂದರೆ ಅಥವಾ ಊರ ಮುಖಂಡರು ಶಾಲೆಯತ್ತ ಬಂದರೆ, ಮೇಷ್ಟ್ರು ಹುಡುಗರ ಪರವಾಗಿ ನನ್ನನ್ನೂ, ಹುಡುಗಿಯರ ಪರವಾಗಿ ಚಂದ್ರಮ್ಮನನ್ನೂ ನಿಲ್ಲಿಸಿ ಪಾಠ ಓದಿಸುತ್ತಿದ್ದರು. ನಾವು ಅರ್ಥದ ಹಂಗನ್ನು ತೊರೆದು, ಮೊದಲೇ ಗಟ್ಟಿಮಾಡಿದ್ದ ಪಾಠವನ್ನು ಬಡಬಡ ಓದುತ್ತಿದ್ದೆವು. ಒಮ್ಮೊಮ್ಮೆ ಅಪ್ಪನೂ ಶಾಲೆಯತ್ತ ಬರುತ್ತಿದ್ದನು. ನನ್ನ ವಿದ್ಯಾಭ್ಯಾಸ ನೋಡಲು ಅಲ್ಲ. ಶಾಲೆಯ ಮುಂದಿನ ಬಸರಿಮರದಲ್ಲಿ ಹಕ್ಕಿಶಿಕಾರಿಗೆ. ಬೃಹದಾಕಾರವಾಗಿ ಬೆಳೆದಿದ್ದ ಈ ಮರಗಳಲ್ಲಿ ಕೆಂಪನೆಯ ಹಣ್ಣುತಿನ್ನಲು ಹಸಿರುರೆಕ್ಕೆಯ ದೊಡ್ಡಹಕ್ಕಿಗಳು ಬರುತ್ತಿದ್ದವು. ಅವನ್ನು ಸಣ್ಣಛರೆ ತುಂಬಿದ ಕೋವಿಯಿಂದ ಆತ ಶಿಕಾರಿ ಮಾಡುತ್ತಿದ್ದನು.
ನಾನು ನಾಲ್ಕು ಪಾಸಾಗಿ ಐದಕ್ಕೆ ತರೀಕೆರೆಗೆ ಹೋಗಬೇಕಾಯಿತು. ಆಗ ಅವರು ಟಿಸಿ ಕೊಡುತ್ತ, ನನ್ನ ತಲೆಯ ಮೇಲೆ ಕೈಯಿಟ್ಟು ‘ಚೆನ್ನಾಗಿ ಓದು’ ಎಂದು ಹರಸಿದರು. ಬೆಂಚಿನಮೇಲೆ ಕೂತಾಗ, ಕಾಲುಗಳನ್ನು ಗಾಳಿಯಲ್ಲಿ ಹಿಂದುಮುಂದು ತೂಗಾಡಿಸುವುದು ನನಗೊಂದು ಕಾಯಿಲೆ. ‘ಇದನ್ನು ಅಲ್ಲಿ ಮಾಡಬೇಡ’ ಎಂದು ಬುದ್ದಿ ಹೇಳಿದರು. ನನಗೆ ಕಲಿಯುವುದರಲ್ಲಿ ಆಸಕ್ತಿ ಹುಟ್ಟಿಸಿದ ಮೊದಲ ಗುರು ಅವರು. ಅವರು ಬಹಳ ದೊಡ್ಡ ವಿದ್ಯೆಯನ್ನೇನು ಕಲಿಸಿದರು ಅನಿಸಲಿಲ್ಲ. ಆದರೆ ಶಾಲೆಯನ್ನು ಸೆರೆಮನೆ ಮಾಡಲಿಲ್ಲ. ಕಲಿಕೆಯನ್ನು ಹಿಂಸೆ ಮಾಡಲಿಲ್ಲ. ತಾಯ ಪ್ರೀತಿಯಿಂದ ಉತ್ತೇಜನ ಕೊಟ್ಟರು. ಅವರು ನನಗೆಂದೂ ಹೊಡೆದ ನೆನಪಿಲ್ಲ. ನಂತರ ಅವರನ್ನು ಭೇಟಿಮಾಡಲು ಆಗಲೇ ಇಲ್ಲ. ಆಗಲೇ ವಯಸ್ಸಾಗಿದ್ದ ಅವರು ಇದ್ದರೆ ಈಗ ತೊಂಬತ್ತು ವರ್ಷದವರಾಗಿರಬಹುದು ಇಲ್ಲವೇ ತೀರಿಕೊಂಡಿರಬಹುದು. ಆದರೆ ಅವರ ವಾತ್ಸಲ್ಯ ತುಂಬಿದ ಹೊಳಪಿನ ಕೋಲುಮುಖದ ಬಿಂಬ ಮನಸ್ಸಿನ ಪರದೆಯ ಮೇಲೆ ಹಾಗೇ ಉಳಿದಿದೆ.
ಯಾವುದೇ ವಿದ್ಯಾರ್ಥಿಯ ಜೀವನದಲ್ಲಿ ಮೂವತ್ತು ನಲವತ್ತು ಗುರುಗಳು ಹಾಯುತ್ತಾರೆ. ಅವರಲ್ಲಿ ಅನೇಕರು ಸಹಜ ಮರವೆಗೆ ಸಲ್ಲುತ್ತಾರೆ. ಕೆಲವರು ತಮ್ಮ ಕೆಟ್ಟತನದಿಂದ ನೆನಪಿನಲ್ಲುಳಿಯುತ್ತಾರೆ. ಮತ್ತೆ ಕೆಲವರು ಕೃತಜ್ಞತೆಯಿಂದ ನೆನಕೆಗೆ ಒಳಗಾಗುತ್ತಲೇ ಇರುತ್ತಾರೆ. ಅಂತಹವರ ಸಂಖ್ಯೆ ಸಾಮಾನ್ಯವಾಗಿ ಕಡಿಮೆ. ನನ್ನ ಬಾಳಲ್ಲಿ ಅಂತಹ ಐದಾರು ಗುರುಗಳಿದ್ದಾರೆ. ಅವರಲ್ಲಿ ಗೋವಿಂದರಾಜು ಮೇಷ್ಟರನ್ನು ಕುರಿತು ನಿವೇದಿಸಿಕೊಳ್ಳಬಹುದು. ಅವರು ಪಿಯುಸಿಯಲ್ಲಿದ್ದಾಗ ನನ್ನಲ್ಲಿ ಸಾಹಿತ್ಯದ ಆಸಕ್ತಿ ಮೂಡಿಸಿದವರು. ವಿಚಿತ್ರವೆಂದರೆ ಅವರು ಸಾಹಿತ್ಯದ ಅಧ್ಯಾಪಕರಲ್ಲ. ಚರಿತ್ರೆಯ ಅಧ್ಯಾಪಕರು. ಅವರೀಗ ಎಲ್ಲಿದ್ದಾರೋ ಏನೋ ತಿಳಿಯದು. ಬಹುಶಃ ಎಲ್ಲೋ ನಿವೃತ್ತ ಜೀವನ ನಡೆಸುತ್ತಿರಬೇಕು. ಗೋವಿಂದರಾಜು ಕ್ಷೌರಿಕ ಸಮುದಾಯದಿಂದ ಬಂದವರಾಗಿದ್ದರು. ನೋಡಲು ಕಪ್ಪಗಿದ್ದರು. ಸಾಂಪ್ರದಾಯಕ ಮಾನದಂಡಗಳ ಪ್ರಕಾರ ಅವರು ‘ಸುಂದರ’ವಾಗಿರಲಿಲ್ಲ. ಆದರೆ ಅವರಿಗೆ ಒಳ್ಳೆಯ ಸಂವೇದನಶೀಲ ಮನಸ್ಸಿತ್ತು. ಬಡತನ ಹಸಿವು ಜನರ ಕಷ್ಟ ಎಂದರೆ ಅವರು ಕರಗುತ್ತಿದ್ದರು. ಸಂದರ್ಭ ಸೃಷ್ಟಿಸಿಕೊಂಡು ಅವರು ನಮ್ಮ ಸಮಾಜದ ಕೇಡುಗಳ ಬಗ್ಗೆ ಮಾತಾಡುತ್ತಿದ್ದರು. ಅವರು ಕೊಂಚ ಅತಿ ಎನಿಸುವಷ್ಟು ಸೂಕ್ಷ್ಮದವರಾಗಿದ್ದರೋ ಏನೊ? ಕೊಂಚ ಅಶಿಸ್ತಾದರೂ ಸಹಿಸುತ್ತಿರಲಿಲ್ಲ. ಅವರಿಂದ ಶಿಕ್ಷೆಗೆ ಒಳಗಾಗುತ್ತಿದ್ದ ಕೆಲವು ನನ್ನ ‘ರೌಡಿ’ ಕ್ಲಾಸುಮೇಟುಗಳು, ಅವರ ಬಣ್ಣ, ರೂಪ ಮತ್ತು ಜಾತಿಯ ಬಗ್ಗೆ ಕೆಟ್ಟದಾಗಿ ಮಾತಾಡುತ್ತಿದ್ದರು. ಒಮ್ಮೆ ಅವರ ಕುರಿತು ಬೋರ್ಡಿನ ಮೇಲೆ ಏನೇನೊ ಬರೆದಿದ್ದರು. ಅದನ್ನು ಓದಿದ ಮೇಷ್ಟ್ರು ಅವತ್ತು ಬಹಳ ನೋವಿನಿಂದ ಮಾತಾಡಿದರು. ಆಗ ಅವರ ಕಣ್ಣು ಒದ್ದೆಯಾಯಿತೊ ಏನೋ? ಬೋರ್ಡನ್ನು ಒರೆಸದೆ ಹಾಗೇ ಬಿಟ್ಟುಹೋದರು.
ನನಗೆ ಅವರೂ ಅವರ ತರಗತಿಗಳೂ ಎಂದರೆ ತುಂಬ ಪ್ರಿಯವಾಗುತ್ತಿತ್ತು. ಅವರು ಬಿಳಿಯ ಶುಭ್ರವಾದ ತುಂಬುದೋಳಿನ ಶರಟು ತೊಟ್ಟು, ಪಾಲಿಶ್ ಮಾಡಿದ ಶೂಧರಿಸಿ, ನೀಟಾಗಿ ಬರುತ್ತಿದ್ದರು. ಯಾವುದೇ ವಿಷಯವನ್ನು ಪರಿಣಾಮಕಾರಿಯಾಗಿ ವಿವರಿಸುತ್ತಿದ್ದರು. ಅವರು ಬಳಸುತ್ತಿದ್ದ ಭಾಷೆ ತುಂಬ ಸೃಜನಶೀಲವಾಗಿರುತ್ತಿತ್ತು. ಅವರು ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿದ್ದರು. ಯಾವುದೇ ಚೀಟಿ ಅಥವಾ ಪುಸ್ತಕದ ನೆರವಿಲ್ಲದೆ ನಿರರ್ಗಳವಾಗಿ ಪಾಠ ಮಾಡುತ್ತಿದ್ದರು. ತರಗತಿಯಲ್ಲಿ ಅತ್ತಿಂದಿತ್ತ ತಿರುಗುತ್ತ ಚಿಂತನೆ ಮಾಡುತ್ತ ನೋಟ್ಸ್ ಬರೆಸುತ್ತಿದ್ದರು. ಅದು ಓದುವುದಕ್ಕೆ ಕಥೆ-ಕಾದಂಬರಿಯಷ್ಟು ಚೆನ್ನಾಗಿ ಇರುತ್ತಿತ್ತು. ಚರಿತ್ರೆಯಲ್ಲಿ ಬಹುಶಃ ನಾನು ಹೆಚ್ಚು ಅಂಕಗಳಿಸುತ್ತಿದ್ದೆ. ಇದಕ್ಕೆ ಕಾರಣ ಅವರ ಪಾಠ. ಅವರು ಪಾಠಮಾಡುವಾಗ ಏನಾದರೂ ನೆಪಮಾಡಿ ನನಗೆ ಪ್ರಶ್ನೆ ಕೇಳುತ್ತಿದ್ದರು. ನಾನು ಅವರ ತರಗತಿಗಳಲ್ಲಿ ಸ್ವತಂತ್ರವಾಗಿ ಆತ್ಮವಿಶ್ವಾಸದಿಂದ ಮಾತಾಡುತ್ತಿದ್ದೆ. ಅವರು ನನಗೆ ಹೆಚ್ಚು ಪ್ರೀತಿ ಕೊಡುತ್ತಿದ್ದರು ಎನಿಸುತ್ತದೆ. ನನ್ನ ಪಾಲಿಗೆ ಅವರೊಬ್ಬ ಆದರ್ಶವಾಗಿದ್ದರು. ನನಗೂ ಅಧ್ಯಾಪಕನಾಗಬೇಕು, ನೀಟಾಗಿ ಡ್ರೆಸ್ ಮಾಡಬೇಕು, ತರಗತಿಯಲ್ಲಿ ಶತಪಥ ತಿರುಗುತ್ತ ವಿಚಾರಗಳನ್ನು ಆಹ್ವಾನಿಸಿಕೊಂಡು ಸರಾಗವಾಗಿ ಮಾತಾಡಬೇಕು, ಎಂದು ಆಸೆ ಹುಟ್ಟುತ್ತಿತ್ತು. ನಾನು ಪಿಯು ಪಾಸಾದಾಗ, ಅವರು ನನ್ನನ್ನು ಕರೆದು ‘ಶಿವಮೊಗ್ಗಕ್ಕೆ ಹೋಗು. ಕನ್ನಡ ಸಾಹಿತ್ಯ ಓದು. ನಿನ್ನ ಭಾಷೆ ಚೆನ್ನಾಗಿದೆ’ ಎಂದು ಹೇಳಿದರು. ನಾನು ಶಿವಮೊಗ್ಗಕ್ಕೆ ಹೋಗಿ ಪ್ರಸಿದ್ಧ ಸಹ್ಯಾದ್ರಿ ಕಾಲೇಜಿಗೆ ಸೇರಿಕೊಂಡು ಕನ್ನಡ ಸಾಹಿತ್ಯ ತೆಗೆದುಕೊಂಡೆ. ಆದರೆ ನನಗೆ ಪ್ರಿಯವಾಗಿದ್ದ ಚರಿತ್ರೆ ವಿಷಯವನ್ನು ಕನ್ನಡದ ಜತೆ ತೆಗೆದುಕೊಳ್ಳುವ ಅವಕಾಶ ಅಲ್ಲಿರಲಿಲ್ಲ. ಹೀಗಾಗಿ ಚರಿತ್ರೆ ಅಧ್ಯಾಪಕನಾಗುವ ನನ್ನ ಕನಸೂ ಈಡೇರಲಿಲ್ಲ. ಆದರೆ ಚರಿತ್ರೆಯಲ್ಲಿ ಇವತ್ತಿಗೂ ನನ್ನಲ್ಲಿ ಸಾಹಿತ್ಯದಷ್ಟೇ ಆಸಕ್ತಿ ಉಳಿದಿರಲು ಅವರೇ ಕಾರಣ.
ನಾನು ಏಕಾಂತದಲ್ಲಿ ನನ್ನ ಓದಿನ ದಿನಗಳನ್ನು ನೆನೆಯುವಾಗ ನನಗೆ ಕಲಿಸಿದ ಅನೇಕ ಮೇಷ್ಟರು ನೆನಪಾಗುತ್ತಾರೆ. ಅವರಲ್ಲಿ ತಪ್ಪದೇ ಗೋವಿಂದರಾಜು ಮೇಷ್ಟ್ರು ನೆನಪಾಗುತ್ತಾರೆ. ಅವರಿಗೆ ನನ್ನ ಹೆಸರು ನೆನಪಿದೆಯೊ ಇಲ್ಲವೊ? ಸರ್ಕಾರಿ ಕಾಲೇಜುಗಳಲ್ಲಿದ್ದು ಊರೂರು ವರ್ಗವಾಗುತ್ತ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮೇಷ್ಟರಿಗೆ ಯಾರೊ ಒಬ್ಬ ನೆನಪಿರುವುದು ಸಾಧ್ಯವಿಲ್ಲ. ಆದರೆ ನನ್ನಂತಹ ಅನೇಕರನ್ನು ಅವರು ಪ್ರಭಾವಿಸಿದರು.
[ಚಿತ್ರಗಳು-ರಶೀದ್ ಮತ್ತು ಸಂಗ್ರಹದಿಂದ]
ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.