ನಾನು ಯಾವುದಾದರೂ ಊರಿಗೆ ಹೋದರೆ, ಸಾಮಾನ್ಯವಾಗಿ ಅಲ್ಲಿನ ಸೂಫಿಗಳ ದರ್ಗಾಗಳಿಗೆ ಭೇಟಿ ಕೊಡುತ್ತೇನೆ. ಸಾಧ್ಯವಾದರೆ ಅಲ್ಲೇ ವಸತಿ ಮಾಡುತ್ತೇನೆ. ಇದಕ್ಕೆ ಕಾರಣ, ನಾನು ಮಸೀದಿ ಸಂಸ್ಕೃತಿಗಿಂತ ಹೆಚ್ಚಾಗಿ ದರ್ಗಾ ಸಂಸ್ಕೃತಿಯಲ್ಲಿ ಬೆಳೆದಿರುವುದೂ ಇರಬಹುದು; ಎಲ್ಲರಿಗೂ ತಿಳಿದಿರುವಂತೆ ದರ್ಗಾಗಳಿಗೆ ಎಲ್ಲ ಮುಸ್ಲಿಮರು ಬರುವುದಿಲ್ಲ. ಸೂಫಿ ಸಂಸ್ಕೃತಿಯವರಷ್ಟೆ ಬರುತ್ತಾರೆ. ವಿಶೇಷವಾಗಿ ಮಹಿಳೆಯರು ಬರುತ್ತಾರೆ. ಎಲ್ಲ ಧರ್ಮದ ಜನರೂ ಬರುತ್ತಾರೆ. ಹೀಗಾಗಿಯೇ ದರ್ಗಾಗಳು ಸಂಪ್ರದಾಯವಾದಿಗಳ ಕಣ್ಣಲ್ಲಿ ಮಲಿನ ಲೋಕಗಳು. ಆದರೆ ಈ ಮಲಿನ ಲೋಕದಲ್ಲಿ ಸೂಫಿ ಸಂಗೀತವಿದೆ. ಕಾವ್ಯವಿದೆ. ದರ್ಶನವಿದೆ. ಅನುಭಾವವಿದೆ. ಜತೆಗೆ ಆಯಾ ಸೀಮೆಯ ಬಡತನ, ದುಗುಡ, ಚೈತನ್ಯ, ಮೌಢ್ಯ ಢಾಂಬಿಕತೆಗಳೆಲ್ಲವೂ ಸೇರಿಕೊಂಡಿವೆ. ಇಂತು ದರ್ಗಾಗಳು ದಮನಿತ, ನಿಷಿದ್ಧ ಮತ್ತು ಸೃಜನಶೀಲ ಧಾರೆಗಳು ಸಂಗಮಿಸುವ ರಂಗಭೂಮಿಗಳಿದ್ದಂತೆ; ಅಲ್ಲಿ ಶೃಂಗಾರ ರೌದ್ರ ಕರುಣ ರಸದ ಅನೇಕ ಪಾತ್ರಗಳು ಬಂದು ಅಭಿನಯಿಸುತ್ತವೆ. ನಮ್ರ ಪ್ರೇಕ್ಷಕನಾಗಿ ನಾನು ಕುಳಿತು ಅವನ್ನು ದರ್ಶಿಸುತ್ತೇನೆ.
ನಾನು ದೆಹಲಿಗೆ ಹೋದಾಗಲೆಲ್ಲ ಅಲ್ಲಿನ ಪ್ರಸಿದ್ಧ ನಿಜಾಮುದ್ದೀನ್ ದರ್ಗಾಕ್ಕೆ ತಪ್ಪದೇ ಹೋಗುತ್ತೇನೆ. ಅದೊಂದು ದೊಡ್ಡ ಸಂಕೀರ್ಣ. ಅಲ್ಲಿ ತನ್ನ ಗುರುವಿನ ಸನ್ನಿಧಿಯಲ್ಲೇ ಇರಬೇಕೆಂದು ಹಠಹಿಡಿದು ಮಲಗಿದಂತಿರುವ ಅಮೀರ್ ಖುಸ್ರೂನ ಸಮಾಧಿಯಿದೆ. (ಖುಸ್ರೂ ಹಿಂದೂಸ್ತಾನಿ ಸಂಗೀತದ ಪಿತಾಮಹ.) ಅಲ್ಲಿಂದ ಮಾರು ದೂರದಲ್ಲಿ ಉರ್ದುವಿನ ಪ್ರಸಿದ್ಧ ಕವಿ ಗಾಲಿಬನ ಸಮಾಧಿಯಿದೆ. ಅಲ್ಲೇ ಸಮೀಪದಲ್ಲಿ ಆಧುನಿಕ ಸೂಫಿ ದಾರ್ಶನಿಕ ಹಾಗೂ ಸಂಗೀತಗಾರ ಹಜರತ್ ಇನಾಯತ್ ಖಾನರ ಸಮಾಧಿಯಿದೆ. ಹೀಗೆ ಸಂತರು, ಸಂಗೀತಗಾರರು, ಕವಿಗಳು, ದಾರ್ಶನಿಕರು, ವಿದ್ವಾಂಸರು ಒಟ್ಟಿಗೇ ಸ್ಮಾರಕಗಳಾಗಿ ನೆಲೆಸಿರುವ ತಾಣವಿದು.
ಮೊಗಲರ ಕಾಲದ ವಿಶಿಷ್ಟ ಇಸ್ಲಾಮಿಕ್ ಸಂಸ್ಕೃತಿಯ ವಾಸನೆಯುಳ್ಳ ಅನೇಕ ಜಾಗಗಳು ದಿಲ್ಲಿಯಲ್ಲಿವೆ. ಅವುಗಳ ಲಕ್ಷಣವೆಂದರೆ-ಇಕ್ಕಟ್ಟಾದ ಗಲ್ಲಿಗಳು; ನುಸುಳಿ ನುಗ್ಗುವ ಸೈಕಲ್ ರಿಕ್ಷಾಗಳು; ಕಾಶ್ಮೀರಿ ಕಬಾಬ್ ಮಾಡುವ, ರೊಟ್ಟಿ, ಅತ್ತರು, ಟೋಪಿ, ಶ್ಯಾವಿಗೆ ಮಾರುವ ಅಂಗಡಿಗಳು; ಒಳಗೆ ವಿರಾಮದಲ್ಲಿ ಕುಳಿತು ಹರಟುವ ದಪ್ಪಹೊಟ್ಟೆಯ ದಾಡಿಬಿಟ್ಟ ವಯಸ್ಕರು. ಇವನ್ನೆಲ್ಲ ನೋಡುತ್ತಿದ್ದರೆ ಮಧ್ಯಕಾಲವು ಬದಲೇ ಆಗಿಲ್ಲವೇನೊ ಅನಿಸುತ್ತದೆ. ಜಾಮಿಯಾ ಮಸೀದಿ, ಚಿರಾಗೆದೆಹಲಿ, ನಿಜಾಮುದ್ದೀನ್ ದರ್ಗಾ ಇವೆಲ್ಲ ಇಂತಹ ಜಾಗಗಳು. ನಿಜಾಮುದ್ದೀನ್ ದರ್ಗಾ ಇರುವಿಕೆಯಂತೂ ತೀರ ಹತ್ತಿರ ಹೋಗುವವರೆಗೂ ಗೊತ್ತೇ ಆಗುವುದಿಲ್ಲ. ಸಕ್ಕರೆ ತುಂಡಿಗೆ ಇರುವೆ ಮುತ್ತಿಕೊಂಡಂತೆ ಸುತ್ತಮುತ್ತ ಮನೆಗಳೂ ಅಂಗಡಿಗಳೂ ಆವರಿಸಿಕೊಂಡಿವೆ. ಹಾದಿಯ ಎರಡೂ ಬದಿಯಲ್ಲಿ ಹೂವು, ಸಕ್ಕರೆ, ಬೂಂದಿ, ಅತ್ತರ್, ಮಣಿಸರ, ಊದುಬತ್ತಿ, ಧೂಪ, ಪುಸ್ತಕ ಮಾರುವ ಅಂಗಡಿಗಳಿವೆ. ಗುಲಾಬಿ ಪಕಳೆಗಳನ್ನು ಹಗುರವಾಗಿ ಬಿಡಿಸಿ ಬಿದಿರಿನ ತಟ್ಟೆಯಲ್ಲಿ ಇಟ್ಟುಕೊಂಡು ಮಂಚಿಕೆಯ ಮೇಲೆ ಕುಳಿತ ಹೂವಾಡಿಗರು ‘ಭೈಸಾಬ್, ಯಹ್ಞಾ ಆಯಿಯೆ’ ಎಂದು ಪೀಡಿಸುತ್ತಾರೆ. ಹೂವಿನಂಗಡಿಗಳಲ್ಲಿ ಇಳಿಬಿದ್ದ ಹಾರಗಳಿಗೆ ಸುತ್ತಿದ ನಕ್ಕಿ ಗಾಳಿಯಲ್ಲಾಟಕ್ಕೆ ಮಿನುಗುತ್ತಿರುತ್ತದೆ. ಜೀವಮಾನದಲ್ಲಿ ಹೂದೋಟವನ್ನು ಕಂಡೇ ಇಲ್ಲವೇನೊ ಎಂಬಂತೆ ಸೋಮಾರಿ ದುಂಬಿಗಳು ಮಾಲೆಗಳ ಮೇಲೆ ಮುಕುರಿಕೊಂಡಿರುತ್ತವೆ. ಅಂಗಡಿಕಾರರ ಕಾಟದಿಂದ ತಪ್ಪಿಸಿಕೊಂಡು ಇಕ್ಕಟ್ಟಾದ ಅರೆಗತ್ತಲಿನ ಸಂದಿಯಲ್ಲಿ ನುಸುಳಿ ಹೋದರೆ, ತುಸು ತಗ್ಗಿನಲ್ಲಿ ತಟ್ಟನೆ ಆಗಸಕಾಣುವಂತೆ ತೆರೆದ ಬಯಲು ಪ್ರತ್ಯಕ್ಷವಾಗುತ್ತದೆ; ಅದರಲ್ಲಿ ದೀಪಗಳಿಂದ ಅಲಂಕರಿಸಿದ ಝೂಮರು ತೂಗುಬಿಟ್ಟಿರುವ ಅರಮನೆಯ ತುಂಡಿನಂತಿರುವ ದರ್ಗಾ ಝಗಝಗಿಸುತ್ತ ಮೈದೋರುತ್ತದೆ. ನಿಜಾಮುದ್ದೀನರ ದರ್ಗಾ ಅರಮನೆಯಂತಿದೆ. ಆದರೆ ಜೀವಿಸಿದ್ದಾಗ ಈಸಂತ ಅರಮನೆಗೆ ವಿರುದ್ಧವಾಗಿದ್ದವನು. ಅದಿರಲಿ.
ದರ್ಗಾದ ಪಡಸಾಲೆಯಲ್ಲಿ ಸಮಾಧಿಗೆ ಮಣಿಯುತ್ತಿರುವ, ಮೂಲೆ ಹಿಡಿದು ಜಪಮಣಿ ಎಣಿಸುತ್ತಿರುವ, ಕಣ್ಮುಚ್ಚಿ ಧ್ಯಾನಿಸುತ್ತಿರುವ, ಆರ್ತ ಮುಖಭಾವದಲ್ಲಿ ಬೇಡುತ್ತಿರುವ, ಸಕ್ಕರೆ ಉತ್ತತ್ತಿ ಬೂಂದಿಯನ್ನು ಅಲ್ಲಿದ್ದವರಿಗೆ ಸಂಭ್ರಮದಲ್ಲಿ ಹಂಚುತ್ತಿರುವ-ಬಗೆಬಗೆಯ ಜನರು; ಚೆಲ್ಲಿದ ಸಕ್ಕರೆಗೆ ಮುತ್ತುವ ಸುತ್ತುವ ನೊಣಗಳು; ಕುಳಿತವರಿಗೆ ಕೇಳದಿದ್ದರೂ ಕುಡಿನೀರನ್ನು ಮಣ್ಣಿನ ಲೋಟಗಳಲ್ಲಿ ತಂದುಕೊಡುವ ಪರಿಚಾರಕರು; ದರ್ಗಾದ ನೇರ ಅಭಿಮುಖಕ್ಕೆ ಕುಳಿತು ಎಷ್ಟೋ ಹೊತ್ತಿನಿಂದ ಹಾಡುತ್ತಿರುವ ಖವಾಲರು; ಅವರ ಇಕ್ಕೆಲಗಳಲ್ಲಿ ತುಂಬಿಕೊಂಡು ಹರಡಿ ಕುಳಿತು ಗಾನಾಸ್ವಾದ ಮಾಡುತ್ತಿರುವ, ನಡುನಡುವೆ ಖವಾಲರಿಗೆ ನಜರು ಒಪ್ಪಿಸುವ ರಸಿಕರು; ಮೂಲೆಗಳಲ್ಲಿ ತಮ್ಮ ಗಂಟುಮೂಟೆಗಳ ಸಮೇತ ಕುಳಿತು ಕಣ್ಣುಬಾಯಿ ಬಿಟ್ಟುಕೊಂಡು ನೋಡುತ್ತಿರುವ ಪರಸ್ಥಳದ ಹಳ್ಳಿಗರು; ಎಲ್ಲವನ್ನು ಹದ್ದುಗಣ್ಣಲ್ಲಿ ನೋಡುವ ಮೊಕ್ತೇಸರರು; ತಮ್ಮ ಪುಟ್ಟಕ್ಯಾಮೆರಾ ತೆಗೆದು ದೃಶ್ಯಾವಳಿಯನ್ನು ಕ್ಲಿಕ್ಕಿಸುವ ವಿದೇಶಿಯರು-ಹೀಗೆ ಬಗೆಬಗೆಯ ನೋಟಗಳು ಅಲ್ಲಿ ಕಾಣಸಿಗುತ್ತವೆ.
ಇದರಲ್ಲೆಲ್ಲ ಚಾಮರಧಾರಿ ಫಕೀರನೊಬ್ಬ ಭಕ್ತರಿಗೆ ಗಾಳಿಬೀಸುವ ದೃಶ್ಯ ಸೆಳೆಯುತ್ತದೆ. ೪೦ ವರ್ಷ ಪ್ರಾಯದ ಈತ ಕುಳಿತವರಿಗೆ ಗಾಳಿಬೀಸುವ ಕಾಯಕದವನು. ದೊಡ್ಡದೊಡ್ಡ ಕಟ್ಟಡಗಳು ದರ್ಗಾವನ್ನು ಅಡ್ಡಗಟ್ಟಿರುವ ಕಾರಣ, ಗಾಳಿಯೆನ್ನುವುದು ಅಲ್ಲಿಗೆ ಕಷ್ಟಪಟ್ಟು ಬರುವಂತಾಗಿ, ಈ ಚಾಮರದವನು ಅನಿವಾರ್ಯವಾಗಿದ್ದಾನೆ. ಈತ ಎಲ್ಲರಿಗೂ ಗಾಳಿ ಹಾಕುತ್ತಾನಾದರೂ ದೊಡ್ಡಮನುಷ್ಯರಿಗೆ ಕೊಂಚ ಹೆಚ್ಚು ಹಾಕುತ್ತಾನೆ. ಚಾಮರ ಬೀಸಿಬೀಸಿ ಅವನೂ ಚಾಮರದ ದಂಡದಂತೆ ತೆಳುವಾಗಿ ಹೋಗಿದ್ದಾನೆ. ಗಾಳಿ ಬೀಸುವಾಗ ಚಾಮರವನ್ನು ಅವನು ಬೀಸುತ್ತಿದ್ದಾನೊ, ಚಾಮರವೇ ಅವನನ್ನು ಬೀಸುತ್ತಿದೆಯೊ ಎಂಬ ಶಂಕೆ ಬರುವಂತೆ ದಂಡದ ಜತೆ ಬಳುಕಾಡುತ್ತಾನೆ. ಹಾಗೆ ಬಳುಕುವಾಗ ಅವನ ಕೊರಳಲ್ಲಿರುವ ದಪ್ಪನೆಯ ಬಣ್ಣಬಣ್ಣದ ಮಣಿಗಳ ಹಾರವು ಕಡಗಡ ಶಬ್ದಮಾಡುತ್ತದೆ. ಝಗಮಗಿಸುವ ದರ್ಗಾದಲ್ಲಿ ಹರಕು ಬಟ್ಟೆಹಾಕಿಕೊಂಡು ಗಾಳಿಬೀಸುವ ಈ ಬಳ್ಳಿಯಂತಹ ಮನುಷ್ಯ ಪಾದರಸದಂತೆ ಅತ್ತಿಂದಿತ್ತ ಓಡಾಡುತ್ತಾನೆ. ಕಾಸಿಗೆ ಕಾಡುವುದಿಲ್ಲ. ಬೀಸಿದ ಗಾಳಿಗೆ ತೃಪ್ತರಾದ ಭಕ್ತರು ಕಾಸುಕೊಟ್ಟರೆ, ನಿಲುವಂಗಿಯ ದೊಗಳೆ ಜೇಬಿಗೆ ಇಳಿಬಿಡುತ್ತಾನೆ.
ದರ್ಗಾದ ಪಾರುಪತ್ಯೇದಾರರು-ಸಂತನ ವಂಶಜರು- ಬಿಳಿಯ ಜುಬ್ಬ ಪಾಯಿಜಾಮ ಧರಿಸಿ, ತಲೆಗೆ ಹಳದಿ ಬಣ್ಣದ ಚೂಪನೆಯ ಚಿಸ್ತಿ ಟೋಪಿಯಿಟ್ಟು, ಸುಖಜೀವನದಿಂದ ಬಂದ ತೋರವಾದ ಮೈಯನ್ನು ದರ್ಗಾದ ಕಂಬಗಳಿಗೆ ಒರಗಿಸಿ, ಕಾಣಿಕೆಯ ರಶೀದಿ ಪುಸ್ತಕ ತಿರುವಿ ಹಾಕುತ್ತ, ಆಗಾಗ್ಗೆ ನೋಟೆಣಿಸುತ್ತ, ಕಾಣಿಕೆಗಳನ್ನು ವಿಂಗಡಿಸುತ್ತ, ಅವನ್ನು ಸಂಬಂಧಪಟ್ಟ ಅಂಗಡಿಗೆ ಸಾಗಿಸುತ್ತ ಬಿಜಿಯಾಗಿರುತ್ತಾರೆ. ಬಡವರು ಬಂದರೆ ನಿರ್ಲಿಪ್ತರಾಗಿರುವ ಇವರು ದೊಡ್ಡವರು ಬಂದಾಗ ಬಹಳ ಉಪಚಾರ ಮಾಡುತ್ತಾರೆ. ನಾನಿರುವಾಗ ಒಮ್ಮೆ ಒಬ್ಬ ವಿದೇಶಿ ರಾಯಭಾರಿ ಬಂದ. ಅವನ ಹಿಂದೆ ಅಧಿಕಾರಿಗಳು. ಅಂಗರಕ್ಷಕರು. ಅವನ ಮಡದಿ ವಿಸ್ಮಯದಿಂದ ದರ್ಗಾ ನೋಡುತ್ತಿದ್ದಳು. ಮಲಗಿದ್ದ ಸೂಫಿಸಂತನನ್ನು ಬಿಟ್ಟು ಉಳಿದವರೆಲ್ಲ ಎದ್ದು ಅವನಿಗೆ ಉಪಚಾರ ಮಾಡುವಂತೆ ದರ್ಗಾದಲ್ಲಿ ಸಂಚಲನ ಕಂಡಿತು. ಅಂದು ಅವನಿಗಾಗಿ ವಿಶೇಷ ಗಾಯಕರಿಂದ ಖವಾಲಿ ಏರ್ಪಡಿಸಲಾಗಿತ್ತು.
ದರ್ಗಾ ಸಂಸ್ಕೃತಿ ಇಂದಿಗೂ ಜೀವಂತವಾಗಿ ಉಳಿದಿದ್ದರೆ ಅದಕ್ಕೆ ಮುಖ್ಯ ಕಾರಣ, ಮಹಿಳೆಯರು. ಆದರೆ ಸಂತನ ಸಮಾಧಿಯಿರುವ ಕೋಣೆಯೊಳಗೆ ಅವರಿಗೇ ಪ್ರವೇಶವಿಲ್ಲ. ಅವರಿಗಾಗಿ ಸಮಾಧಿ ನೋಡಲು ಮೂರುಕಡೆ ಕಿಂಡಿಗಳಿರುವ ಅಮೃತಶಿಲೆಯ ಜಾಲರಿ ಮಾಡಿದೆ. ಅವರು ಅಲ್ಲಿಂದಲೇ ಸಮಾಧಿಯತ್ತ ಕಣ್ಣುನೆಟ್ಟು ಏನನ್ನೋ ಬೇಡುತ್ತ ಕುಳಿತಿರುತ್ತಾರೆ. ಕೆಲವು ಕುಲೀನ ಮಹಿಳೆಯರು ಕಟ್ಟಿದ ತೆರೆಯ ಹಿಂದೆ ಕುಳಿತು ಗಾಯನ ಕೇಳುತ್ತಾರೆ. ಅವರಲ್ಲಿ ಕೆಲವರಿಗೆ ಮೈದುಂಬುವುದುಂಟು. ಆಗವರು ತಲೆಗೂದಲನ್ನು ಬಿಚ್ಚಿಕೊಂಡು ಸಮಾಧಿಯೊಳಗೆ ಮಲಗಿದ ಸಂತನಿಗೆ ತಲೆಗೂದಲಿನಿಂದಲೇ ಚವರಿ ಬೀಸುವಂತೆ ಕೊರಳನ್ನು ಗರಗರ ಸುತ್ತುತ್ತ, ಆವೇಶದಿಂದ ‘ಯಾ ಬಾಬಾ’ ಎಂದು ಕೂಗುತ್ತಾರೆ. ಅಕ್ಕಪಕ್ಕದವರು ಅವರ ಬಟ್ಟೆ ಸರಿಪಡಿಸುತ್ತ, ಆವೇಶ ಶಮನ ಮಾಡುತ್ತ ಇರುತ್ತಾರೆ. ವಜ್ದ್ ಎನ್ನಲಾಗುವ ಈ ಉತ್ಕಟಾವಸ್ಥೆಗೆ ಸೂಫಿಪಂಥದಲ್ಲಿ ದೊಡ್ಡ ಸ್ಥಾನವಿದೆ. ಆದರೆ ಮತ್ತೂ ಕೆಲವು ಭಾವಾವೇಶಗಳಿವೆ. ಅವಕ್ಕೆ ಸಂಗೀತದ ಹಂಗೇಬೇಡ. ದರ್ಗಾಕ್ಕೆ ಎರಡು ಪ್ರದಕ್ಷಿಣೆ ಹಾಕುವಷ್ಟರಲ್ಲಿ ಒಳಗಿನ ‘ಗಾಳಿ’ ಹೊರಬರಲು ಚಡಪಡಿಸುತ್ತ ಮಾತಾಡಲು ಆರಂಭಿಸುತ್ತದೆ. ಕರ್ನಾಟಕದಲ್ಲಿ ಗಾಳಿಬಿಡಿಸುವ ಕಾಯಕವನ್ನೇ ಕೈಗೊಂಡಿರುವ ಕರೋಶಿ, ಮುರುಗಾಮಲೈ, ಲಕ್ಷ್ಮೇಶ್ವರ, ಎಳ್ಳಾರತಿಯ ದರ್ಗಾಗಳಲ್ಲಿ ‘ಗಾಳಿ’ ಹಿಡಿದವರ ಚೀತ್ಕಾರಗಳು ನೋಡಿಯೇ ಅರಿಯಬೇಕು.
ಭಾರತದಲ್ಲಿ ದರ್ಗಾಗಳು ಬಗೆಬಗೆಯ ತಿಂಡಿಗಳಿಗೂ ಖ್ಯಾತವಾಗಿವೆ. ನಿಜಾಮುದ್ದೀನ್ ದರ್ಗಾದಲ್ಲಿ ಲೋಬಾನದ ಹೊಗೆಗಿಂತ, ಹೆಚ್ಚಾಗಿ ಸುತ್ತಮುತ್ತಲಿನ ಅಂಗಡಿಗಳಿಂದ ಮಾಂಸ ಹುರಿವ ವಾಸನೆ ಮತ್ತು ಹೊಗೆ ಸುತ್ತಿಕೊಂಡಿರುತ್ತದೆ. ಎಣ್ಣೆಯಲ್ಲಿ ಕರೆವ ಕಬಾಬ್, ಸಲಾಕಿಗಳಿಗೆ ಕೈಮಾ ಮೆತ್ತಿ ಕೆಂಡದ ಮೇಲಿಟ್ಟು ಚುರುಚುರು ಸುಡುವ ತಂದೂರಿಶೀಕ್, ದೊಡ್ಡ ಹೆಂಚಿನ ಮೇಲೆ ಹುರಿಯುವ ಟಿಕ್ಕಾ- ಹುರಿದ ಮಾಂಸದ ತಿನಿಸುಗಳನ್ನು ತಿನ್ನಬೇಕಾದರೆ, ನಿಜಾಮುದ್ದೀನ್ ದರ್ಗಾಕ್ಕೆ ಹೋಗಬೇಕು. ಮುಂಬೈ ಕಲ್ಯಾಣದ ದರ್ಗಾದಲ್ಲಿ ಬೃಹದಾಕಾರದ ರುಮಾಲಿ ರೊಟ್ಟಿ ಮಾಡುತ್ತಾರೆ. ಜತೆಗೆ ಕ್ಯಾರೆಟ್ ಹಲವಾ.
ನಿಜಾಮುದ್ದೀನ್ ದರ್ಗಾದ ಆಕರ್ಷಣೆಯೆಂದರೆ, ಪ್ರತಿಸಂಜೆ ನಡೆಯುವ ಸೂಫಿ ಗಾಯನ. ಆಸ್ಥಾನ ಗಾಯಕರು ಮೇಳ ಕಟ್ಟಿಕೊಂಡು ಖವಾಲಿ ಹಾಡುವರು. ಭಕ್ತರ ಗಜಿಬಿಜಿ ಸದ್ದಿನೊಳಗೂ ದನಿಯೆತ್ತರಿಸಿ ಹಾಡುವುದು ಅವರಿಗೆ ಅಭ್ಯಾಸವಾಗಿದೆ. ಹೆಚ್ಚಿನ ದರ್ಗಾಗಳಲ್ಲಿ ಕ್ಯಾಸೆಟ್ ಅಂಗಡಿಯವರು ದೊಡ್ಡ ದನಿಯಲ್ಲಿ ಖವಾಲಿಗಳನ್ನು ಹಾಕಿ ಧ್ಯಾನಕ್ಕೆ ಬೇಕಾದ ಮೌನವನ್ನೇ ಕದಡುತ್ತಾರೆ. ಆದರೆ ಮುಂಬೈನ ಕಡಲೊಳಗಿರುವ ಹಾಜಿಅಲಿ ಮತ್ತು ಹೈದರಾಬಾದಿನ ನಾಂಪಲ್ಲಿ ದರ್ಗಾಗಳಲ್ಲಿ ಒಳ್ಳೇ ಗಾಯಕರಿದ್ದಾರೆ. ನಾನು ಕೇಳಿದ ಅತ್ಯುತ್ತಮ ದರ್ಗಾ ಗಾಯನ ಫತೇಪುರ ಸಿಕ್ರಿಯದು. ಅಲ್ಲಿನ ಸಲೀಂ ಚಿಸ್ತಿ ದರ್ಗಾದಲ್ಲಿ ಇಬ್ಬರು ಕುರುಡರಿದ್ದಾರೆ. ಅವರು ಬಂದುಹೋಗುವವವರ ಪರಿವೆ ಇಲ್ಲದಂತೆ ಹಕ್ಕಿಗಳಂತೆ ನಿರಂತರ ಹಾಡುತ್ತಿರುತ್ತಾರೆ. ಅದೃಷ್ಟವಿದ್ದರೆ ದರ್ಗಾಗಳಲ್ಲಿ ಮೆಹಫಿಲೆ ಸಮಾ ಕೂಡ ಸಿಗಬಹುದು. ಸಮಾ ಎಂದರೆ ಭಾವಸಮಾಧಿಯ ಮೂಲಕ ಆನುಭಾವಿಕ ಸ್ತರಗಳಿಗೆ ಏರಲು ಸಾಧಕರಿಗೆ ಏರ್ಪಡಿಸುವ ಸೂಫಿ ಗಾಯನದ ರಾತ್ರಿಸಭೆ.
ದರ್ಗಾಗಳಲ್ಲಿ ಸಂಗೀತ ಸಾಹಿತ್ಯದಂತಹ ಕಲೆಗಳ ಜತೆಗೆ ಅಧೋಲೋಕವೊಂದು ಸೇರಿಕೊಂಡಿರುತ್ತದೆ. ದರ್ಗಾಕ್ಕೆ ಬರುವ ಭಕ್ತರು ಸಾರ್ವಜನಿಕರಿಗೆ ಉಣಿಸುವ ಪದ್ಧತಿಯಿದೆಯಷ್ಟೆ. ಹೀಗಾಗಿ ಅಲ್ಲಿ ಭಿಕ್ಷುಕರ ಬಡವರ ಹಿಂಡು; ಇದಕ್ಕೆ ಹೊಂಚು ಹಾಕಿರುವಂತೆ ದರ್ಗಾ ಬಾಗಿಲಲ್ಲಿ ಹೋಟೆಲುಗಳಿರುತ್ತವೆ. ಇದೊಂದು ದಂಧೆ. ಕೆಲವರು ಉಣ್ಣುವುದಕ್ಕಾಗಿಯೆ ಬಡವರೂ ಭಿಕ್ಷುಕರೂ ಆಗಿದ್ದಾರೋ ಏನೊ? ಅವರಲ್ಲಿ ಕೆಲವರು ಕುಸ್ತಿಯಾಡಲು ಕಳಿಸುವಷ್ಟು ಗಟ್ಟಿಗರಾಗಿರುತ್ತಾರೆ.
ಮುಂಬೈನ ಹಾಜಿಅಲಿಯಲ್ಲಿ ಭಿಕ್ಷುಕರು ಒಟ್ಟಿಗೆ ಬಿಸಿಲಲ್ಲಿ ಬಿದ್ದುಕೊಂಡು ‘ಯಾಅಲ್ಲಾ’ ಎಂದು ಲಯಬದ್ದವಾಗಿ ಕಿರುಚುತ್ತ ವಿಲವಿಲ ಒದ್ದಾಡುವರು. ಇವರ ಜತೆಗೆ ಸುತ್ತಮುತ್ತ ಚೆಲ್ಲಾಡುವ ರೊಟ್ಟಿ ಬಿರಿಯಾನಿ ತಿನ್ನಲು ಕಾಗೆ ನಾಯಿಗಳ ಹಿಂಡು. ನಿಜಾಮುದ್ದೀನ್ ದರ್ಗಾದ ವಿಶೇಷವೆಂದರೆ, ಚೆಲ್ಲುವ ಪ್ರಸಾದ ತಿನ್ನಲು ಮೇಕೆ ಮತ್ತು ಕುರಿಗಳೂ ಸ್ಪರ್ಧೆ ಮಾಡುವುದು. ಕೆಲವು ಕುರಿಗಳಂತೂ ರೊಟ್ಟಿ ತಿಂದು ತಿಂದು ಕೊಬ್ಬಿ, ಆನೆಯ ಮರಿಗಳಂತೆ ಕುಂಡೆಗಳನ್ನು ಹೊರಲಾರದೆ ಹೊರುತ್ತ ಓಡಾಡಿಕೊಂಡಿರುತ್ತವೆ. ಬಹುಶಃ ನಿಜವಾಗಿಯೂ ಸೂಫಿಗಳ ಇಷ್ಕ್ ತತ್ವವನ್ನು ಅನುಭವಿಸುವರು, ಅಲ್ಲಿಗೆ ಬರುವ ಪ್ರೇಮಿಗಳೋ ಏನೊ? ಅವರು ಜನಜಂಗುಳಿಯಲ್ಲಿ ಮೈಮೈ ತಾಗಿಕೊಂಡು ಕೈಕೈ ಹಿಡಿದು ಹಕ್ಕಿಗಳಂತೆ ವಿಹರಿಸುತ್ತಿರುತ್ತಾರೆ.
ನಿಜಾಮುದ್ದೀನರ ಶಿಷ್ಯನೂ, ಗುಲಬರ್ಗೆಯ ಬಂದೇನವಾಜರ ಗುರುವೂ ಆದ ನಾಸಿರುದ್ದೀನ್ ದರ್ಗಾ ಚಿರಾಗೆ ದೆಹಲಿಯಲ್ಲಿದೆ. ಚಿರಾಗೆ ದೆಹಲಿ ಎಂದರೆ ದೆಹಲಿಯ ದೀಪ ಎಂದರ್ಥ. ಅದೊಂದು ಕಸತುಂಬಿದ ಜಾಗದಲ್ಲಿದೆ. ತಮ್ಮ ದರ್ಗಾಗಳಿಗೆ ಜಗತ್ತಿನ ಮೂಲೆಗಳಿಂದ ಜನ ಬರುತ್ತಾರೆ ಎಂಬ ಖಬರೂ ಅಲ್ಲಿನವರಿಗಿಲ್ಲವಲ್ಲ ಎಂದು ಕಸಿವಿಸಿಯಾಗುತ್ತದೆ. ವಿಚಿತ್ರವೆಂದರೆ, ಆ ಕಸದ ರಾಶಿಯಲ್ಲಿ ಆಡುವ ನವಿಲುಗಳು. ಅವು ಕೋಳಿಗಳ ಹಾಗೆ ಮೇಯುತ್ತ ಅಲ್ಲಿನ ಮರಗಳ ಮೇಲೆ ಕುಳಿತುಕೊಳ್ಳುತ್ತವೆ. ನಾಸಿರುದ್ದೀನ್ ದರ್ಗಾದ ಮುಂದೆ ನಿಂತಿದ್ದಾಗ ಎರಡು ನವಿಲುಗಳು ಬಿಸಿಲು ಕಾಸುತ್ತ ಏನನ್ನೋ ನೋಟು ಪುಸ್ತಕದಲ್ಲಿ ಬರೆಯುತ್ತಿದ್ದ ಭಿಕ್ಷುಕನ ಬಳಿ ಹೋಗಿ ಸತಾಯಿಸುತ್ತಿದ್ದವು. ಒಂದು ತೀರ ಹತ್ತಿರಕ್ಕೆ ಹೋಗಿ ‘ಏನು ಬರೆಯುತ್ತಿದ್ದೀಯಾ ತೋರಿಸು’ ಎಂದು ಇಣುಕಿತು. ಅವನು ತಪ್ಪಿಸಿಕೊಳ್ಳಲು ಪಕ್ಕಕ್ಕೆ ಹೊರಳಿ ಕಡೆಗೆ ಕಂಗಾಲಾಗಿ ನೋಡತೊಡಗಿದ. ಜಾಗದ ಮಹಿಮೆ. ನವಿಲಿಗೂ ಜನರನ್ನು ಕಾಡುವ ಗುಣ ಬಂದಂತಿದೆ.
ಆದರೆ ನಿಜಾಮುದ್ದೀನ್ ದರ್ಗಾದ ಹಿಂದೆ ಹೋದರೆ, ಅಲ್ಲಿ ಇನಾಯತಖಾನರ ದರ್ಗಾಯಿದೆ. ಟಿಪ್ಪುವಿನ ಮರಿಮೊಮ್ಮಗನಾಗಿದ್ದ ಇನಾಯತಖಾನ್ ಪ್ರಸಿದ್ಧ ಸೂಫೀ ದಾರ್ಶನಿಕ. ಸ್ವತಃ ಸಂಗೀತಗಾರರೂ ಆಗಿದ್ದ ಅವರು ಯೂರೋಪು ಅಮೆರಿಕೆಯಲ್ಲಿ ಸೂಫಿದರ್ಶನ ಹರಡಿದವರು. ಅಮೆರಿಕೆಯ ಹೆಣ್ಣನ್ನು ಲಗ್ನವಾದವರು. ಇನಾಯತ್ ಖಾನರು ತೀರಿಕೊಂಡ ಬಳಿಕ, ಅವರ ಮಗಳು ನೂರುನ್ನೀಸಾ, ಎರಡನೇ ಮಹಾಯುದ್ಧ ಕಾಲದಲ್ಲಿ ಬ್ರಿಟಿಶ್ ಮಿಲಿಟರಿ ಗೂಢಚಾರಿಣಿಯಾಗಿದ್ದು, ನಾಜಿಗಳಿಂದ ಪ್ಯಾರಿಸ್ಸಿನಲ್ಲಿ ಸೆರೆಸಿಕ್ಕು, ಕುಪ್ರಸಿದ್ಧ ಡಕಾವ್ ಕಾನ್ಸಂಟ್ರೇಶನ್ ಕ್ಯಾಂಪಿನಲ್ಲಿ ಕೊಲೆಯಾದಳು. ಅದೊಂದು ದೊಡ್ಡಕತೆ.
ಇನಾಯತ್ ಖಾನರ ದರ್ಗಾದಲ್ಲಿ ನಿಜಾಮುದ್ದೀನ್ ದರ್ಗಾದ ಕೊಳಚೆಯಿಲ್ಲ; ನಾಸಿರುದ್ದೀನ್ ದರ್ಗಾದ ಕಸವಿಲ್ಲ. ಕಾಡುವ ನೊಣ ಕಾಗೆ ನಾಯಿ ಮೇಕೆ ಭಿಕ್ಷುಕರಿಲ್ಲ. ಮೂಗಿನೊಳಗೆ ನುಗ್ಗುವ ಮಾಂಸ ಹುರಿವ ಸಿನುಗು ವಾಸನೆಯಿಲ್ಲ. ರಸೀದಿ ಪುಸ್ತಕ ಹಿಡಿದು ನಿಂತ ಪಾರುಪತ್ಯೇದಾರರಿಲ್ಲ. ಅನೂಹ್ಯವಾದ ನಿರ್ಜನತೆಯಿದೆ. ಮೌನವಿದೆ. ಇಲ್ಲಿಗೆ ಬರುವುದು ಎಂದರೆ ರುದ್ರಾನುಭವ ಕೊಡುವ ವೈತರಣಿ ನದಿಯನ್ನು ದಾಟಿ ಸ್ವರ್ಗಕ್ಕೆ ಬಂದಂತೆ. ದರ್ಗಾದಲ್ಲಿ ಸ್ಟಾರ್ ಹೋಟೆಲಿನಲ್ಲಿರುವವಂತೆ ಮಂದವಾದ ದೀಪಗಳನ್ನು ಹಾಕಿ ಒಳಗೆ ಕುಂಡದಲ್ಲಿ ಗಿಡಗಳನ್ನು ಬೆಳೆಸಿದ್ದಾರೆ. ಕೂರಲು ಮೆತ್ತೆ ಹಾಕಿದ ಆಸನಗಳಿವೆ. ಶುಭ್ರವಾದ ದಿರಿಸು ಧರಿಸಿದ ಸೇವಕರು ಮೆಲುದನಿಯಲ್ಲಿ ಮಾತಾಡುತ್ತ ಇಡೀ ಕಟ್ಟಡವನ್ನು ತೋರಿಸುತ್ತಾರೆ. ಇಲ್ಲಿ ಗ್ರಂಥಾಲಯವಿದೆ. ಕುಳಿತು ಅಧ್ಯಯನ ಮಾಡಬಹುದು. ಕೆಲವು ಬಿಳಿಯರು ಹಾಗೆ ಅಧ್ಯಯನ ಮಾಡುವುದನ್ನು ನೋಡಬಹುದು. ಧ್ವನಿಮದ್ರಿಕೆಗಳಿವೆ. ಸಂಗೀತ ಕೇಳಬಹುದು. ಇನಾಯತ್ ಖಾನರ ಟ್ರಸ್ಟಿನಿಂದ ಇದರ ಉಸ್ತುವಾರಿ. ಹಿಂದೊಂದು ಕಾಲಕ್ಕೆ ಜನ ವಿದ್ಯೆಕಲಿಯಲು, ಆನುಭಾವಿಕ ಸಾಧನೆ ಮಾಡಲು, ವಿನಯದಿಂದ ಶ್ರದ್ಧೆಯಿಂದ ಸೂಫಿಸಂತರ ಆಶ್ರಮಕ್ಕೆ ಬರುತ್ತಿದ್ದರಂತೆ. ಅಂತಹ ಕಾಲಕ್ಕೆ ಹೋದಂತಾಗಿ ಮನಸ್ಸು ನಿರುಮ್ಮಳವಾಗುತ್ತದೆ.
ಆದರೆ ಇಲ್ಲಿ ಬಹಳ ಹೊತ್ತು ಕೂರಲಾಗುವುದಿಲ್ಲ. ಮೌನ ಮತ್ತು ಏಕಾಂತಗಳು ಉಸಿರುಗಟ್ಟಿಸತೊಡಗುತ್ತವೆ. ಮುಖ್ಯವೆಂದರೆ ಇಲ್ಲಿ ಜನರೇ ಬರುವುದಿಲ್ಲ. ಇಲ್ಲಿ ಖವಾಲರ ಗಾಯನವಿಲ್ಲ. ಬೀಸಣಿಗೆಯವನಿಲ್ಲ. ನೀರುಕೊಡುವವರಿಲ್ಲ. ಮಾನುಷವಾದ ಚಟುವಟಿಕೆಗಳಿಲ್ಲ. ಜೀವಂತಿಕೆ ತುಂಬಿದ ಗಲೀಜುಗದ್ದಲ ಅಥವಾ ನಿರ್ಜೀವ ಮೌನ ಮತ್ತು ಸ್ವಚ್ಛತೆ -ಎರಡರಲ್ಲಿ ಯಾವುದಾದರೂ ಒಂದನ್ನು ಆರಿಸಿಕೊ ಎಂಬಂತೆ ಎರಡು ದರ್ಗಾಗಳು ಅಕ್ಕಪಕ್ಕದಲ್ಲಿವೆ-ನರಕಸ್ವರ್ಗಗಳಂತೆ; ಸಾವುಬದುಕಿನಂತೆ; ಪೂರ್ವಪಶ್ಚಿಮಗಳಂತೆ; ಗತವರ್ತಮಾನಗಳಂತೆ; ಹಗಲು ರಾತ್ರಿಗಳಂತೆ ಅಥವಾ ಹುಲಿಹುಲ್ಲೆಗಳಂತೆ. ಇವು ನಮ್ಮ ಅಗ್ನಿಪರೀಕ್ಷೆ ಕೊಳ್ಳುತ್ತಿವೆಯೇ? ಇಲ್ಲಿನ ಏಕಾಂತ ಅಲ್ಲಿನ ಗದ್ದಲವನ್ನೂ ಅಲ್ಲಿನ ಗಲೀಜು ಇಲ್ಲಿನ ಸ್ಚಚ್ಛತೆಯನ್ನೂ ಎತ್ತಿ ತೋರಿಸುತ್ತದೆ. ಒಂದನ್ನೇ ನೋಡಿದರೆ ಅದರ ಮಹತ್ವ ಕೊರತೆ ಎರಡೂ ತಿಳಿಯುವುದಿಲ್ಲ. ಇನ್ನೊಂದರ ಕನ್ನಡಿಯಲ್ಲಿ ಅದನ್ನು ಮತ್ತೆ ನೋಡಬೇಕು. ಎಂತಲೇ ಎರಡೂ ದರ್ಗಾಗಳು ಒಂದೇ ಸಂಕೀರ್ಣದಲ್ಲಿದ್ದಂತಿವೆ. ಅಲ್ಲಮ ಹೇಳುವಂತೆ ಕತ್ತಲೆಯೂ ಅದೆ. ಬೆಳಗೂ ಅದೆ. ಒಂದರೊಳಗೊಂದಿದೆ.
ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.