ನಾನು ಹುಟ್ಟಿದ ಹಳ್ಳಿ ಮನೆಯಲ್ಲಿ ಎರಡು ದೊಡ್ಡ ವಾಡೆಗಳಿದ್ದವು. ವಾಡೆಗಳು ಎಂದರೆ ಮಣ್ಣಿನಿಂದ ಮಾಡಿದ ಎದೆಯುದ್ದದ ಬೃಹದಾಕಾರದ ಮಡಕೆಗಳು. ಕೆಳಗೆ ನೆಲದ ಮೇಲೆ ಕೂರಲು ರೊಟ್ಟಿಯಗಲದ ಸಪಾಟಾದ ತಳ. ತಳದಿಂದ ಹಿರಿದಾಗುತ್ತಾ ಮೇಲೆ ಹೊರಟು ನಡುವೆ ಬಸುರಿ ಹೆಂಗಸಿನಂತೆ ಉಬ್ಬಿ ಮತ್ತೆ ಎದೆಯ ಬಳಿ ಕಿರಿದಾಗುತ್ತಾ ಕಂಠದ ಬಳಿ ಇದ್ದಕ್ಕಿದ್ದಂತೆ ಅತಿ ಕಿರಿದಾಗಿ ದುಂಡನೆಯ ಮುದ್ದಾದ ಬಾಯಿ. ಉದ್ದನೆಯ ಹೂಜಿಯ ಆಕಾರವನ್ನು ಇವು ಹೋಲುತ್ತವೆಯೆನ್ನಬಹುದು. ಅಂಗೈ ದಪ್ಪ ಇರುವ ಇವು ಹಾಗೆ ಬೇಗ ಒಡೆಯುವುದಿಲ್ಲ. ವಾಡೆಯನ್ನು ಒಬ್ಬರು ಎತ್ತುವುದು ಕಷ್ಟ. ಖಾಲಿ ವಾಡೆಯನ್ನು ಕೈಬೆರಳ ಹಿಂಗಂಟುಗಳಿಂದ ಬಾರಿಸಿದರೆ ಧಂಧಂ ಮಧುರನಾದ ಹೊರಡುತ್ತದೆ.
ಕುಂಬಾರರು ಒಂದು ದೊಡ್ಡ ಮಣ್ಣಿನ ಗುಡ್ಡದಿಂದಲೇ ವಾಡೆಗಳನ್ನು ಮಾಡುತ್ತಾರೆ. ಅಷ್ಟು ದೊಡ್ಡ ಮಣ್ಣಿನ ಮುದ್ದೆಯನ್ನು ಹೇಗೆ ಕುಲಾಲ ಚಕ್ರದ ಮೇಲಿಟ್ಟು ಆಡಿಸುತ್ತಾರೆ, ಒಳಗೆ ಕೈಯಿಟ್ಟು ಹಲಗೆಯಿಂದ ಹೇಗೆ ತಟ್ಟುತ್ತಾರೆ, ಆವಿಗೆಯಲ್ಲಿಟ್ಟು ಹೇಗೆ ಬೇಯಿಸುತ್ತಾರೆ -ನನಗಿನ್ನೂ ಸೋಜಿಗ. ಒಂದೊಂದು ವಾಡೆಯಲ್ಲಿ ನೂರರಿಂದ ನೂರೈವತ್ತು ಸೇರು ಕಾಳು ತುಂಬಬಹುದು. ಕಾಳು ತುಂಬಿದ ಬಳಿಕ, ಅವುಗಳ ಬಾಯಿಯ ಮೇಲೆ ಸರಿಯಾಗುವಂತಹ ಒಂದು ಮಡಕೆಯನ್ನು ಬೋರಲು ಹಾಕಿ, ಸಗಣಿಯಿಂದ ಸೀಲ್ ಮಾಡಲಾಗುತ್ತದೆ. ನಮ್ಮ ಸೀಮೆಯ ಸಣ್ಣಪುಟ್ಟ ರೈತರ ಮನೆಗಳಲ್ಲಿ ಬೇಸಿಗೆಯಲ್ಲಿ ಕಾಳುಕಡಿ ಸಂಗ್ರಹಿಸುವುದಕ್ಕೆ ಇವು ಉಳಿದಿರಬಹುದೋ ಏನೋ? ಬಹುಶ: ಇದನ್ನು ಬಳಸುವವರೂ ಮಾಡುವ ಕಲೆಗಾರರೂ ಈಗ ಕಡಿಮೆಯಾಗಿರಬಹುದು. ಯಾಕೆಂದರೆ ಅವು ಈಗ ನೋಡಲು ಸಿಗುತ್ತಿಲ್ಲ.
ನಮ್ಮ ಮನೆಯಲ್ಲೂ ಎರಡು ದೊಡ್ಡ ವಾಡೆಗಳಿದ್ದವು. ಅಮ್ಮ ಅವನ್ನು ನಮ್ಮೂರ ಪಕ್ಕದ ಬೆಟ್ಟತಾವರೆಕೆರೆಯ ಕುಂಬಾರರಿಗೆ ಒಂದು ಪಲ್ಲ ರಾಗಿ ಕೊಟ್ಟು ಮಾಡಿಸಿದ್ದಳು. ಮನೆಯ ತುಸು ಕತ್ತಲಿರುವ ಒಂದು ಒಳಗಿನ ಕೋಣೆಯಲ್ಲಿ ಗೋಡೆಯ ಮಗ್ಗುಲಿಗೆ ಸಣ್ಣಕಟ್ಟೆಯ ಮೇಲೆ, ಅವನ್ನು ಸಾಲಾಗಿ ಇಡಲಾಗಿತ್ತು. ಅವಕ್ಕೆ ಸುಣ್ಣ ಹೊಡೆಯುತ್ತಿದ್ದರಿಂದ ಅವು ಗೋಡೆಯೇ ಹಡೆದು ತನ್ನ ಕಾಲಡಿ ಕಾವಿಗಿಟ್ಟುಕೊಂಡಿರುವ ಮೊಟ್ಟೆಗಳಂತೆ ಕಾಣಿಸುತ್ತಿದ್ದವು. (ನಮ್ಮ ದಾಯಾದಿಗಳ ಮನೆಯಲ್ಲಿ ಅವನ್ನು ಗೋಡೆ ಕಟ್ಟುವಾಗಲೇ ಗೋಡೆಯೊಳಗೆ ಸೇರಿಸಿ ಕಟ್ಟಿದ್ದರು.) ಅವುಗಳಲ್ಲಿ ಅಮ್ಮ ಒಂದರಲ್ಲಿ ರಾಗಿಯನ್ನೂ, ಇನ್ನೊಂದರಲ್ಲಿ ಹೊಲದ ಭತ್ತವನ್ನೂ ತುಂಬಿ ಇಡುತ್ತಿದ್ದಳು. ಜಡಿ ಮಳೆ ಹಿಡಿದಾಗ ವಾಡೆಗಳ ಸೀಲನ್ನು ಒಡೆದು ಅಷ್ಟಷ್ಟೇ ಕಾಳನ್ನು ಜೋಪಾನವಾಗಿ ಹೊರತೆಗೆದು ಮಿಶನ್ನಿಗೆ ಹಾಕಿಸಿ ಮುಂದಿನ ಸುಗ್ಗಿಯವರೆಗೆ ದಿನವನ್ನು ದೂಡುತ್ತಿದ್ದಳು. ಕೆಲವೊಮ್ಮೆ ಆಲೆಮನೆಯ ಸೀಜನ್ನಿನಲ್ಲಿ ಬೆಲ್ಲದುಂಡೆಗಳನ್ನು ಅದರಲ್ಲಿ ಇಡುತ್ತಿದ್ದಳು. ಒಮ್ಮೆ ತಳದಲ್ಲಿದ್ದ ಬೆಲ್ಲವನ್ನು ಬಗ್ಗಿ ತೆಗೆದುಕೊಳ್ಳಲು ಹೋಗಿ, ಪಾತಾಳದಲ್ಲಿ ಪಾಪಚ್ಚಿಯಂತೆ ತಲೆಕೆಳಗಾಗಿ ಬಿದ್ದು, ಕಪ್ಪು ಕತ್ತಲೆ ತುಂಬಿದ ಗುಹೆಯಂತಹ ಅದರ ತಳದಲ್ಲಿ ಉಸಿರುಗಟ್ಟಿ ಕಿರಿಚಾಡಿಕೊಂಡಿದ್ದೆ; ಅಪ್ಪ ಬಂದು ಕಾಲು ಹಿಡಿದು ಮೇಲೆಕ್ಕೆತ್ತಿ ಸರಿಯಾಗಿ ಬೆನ್ನಿಗೆ ಇಕ್ಕಡಿಸಿದ್ದನು.
ಮನೆಯಲ್ಲಿ ಅನ್ನದಾತರ ಗೌರವ ಸಂಪಾದಿಸಿದ್ದ ಈ ವಿಚಿತ್ರ ಜೀವಿಗಳಿಗೆ ಹೊಸ ಆಪತ್ತು ಬಂತು. ಹಳ್ಳಿಯಲ್ಲಿದ್ದ ನಾವು ಇದ್ದ ಹೊಲವನ್ನು ಮಾರಿ ಕುಲುಮೆ ಕೆಲಸ ಮಾಡುತ್ತಿದ್ದ ಅಪ್ಪನ ಹಿಂದೆ ಪಕ್ಕದ ತರೀಕೆರೆ ಪಟ್ಟಣಕ್ಕೆ ವಲಸೆ ಬರಬೇಕಾಯಿತು. ಆಗ ಅನೇಕ ವಸ್ತುಗಳನ್ನು ಹಳ್ಳಿಯಲ್ಲೇ ಬಟವಾಡೆ ಮಾಡಿದೆವು. ಉದಾಹರಣೆಗೆ ದನಕ್ಕೆ ಹುಲ್ಲುಹಾಕಿ ಮೇಯಿಸುತ್ತಿದ್ದ ಹುಲ್ಲಿನ ಬಾನಿಯನ್ನು ಚಿಕ್ಕಪ್ಪನಿಗೆ ಕೊಟ್ಟೆವು. ನೊಗ, ಪಟಗಣ್ಣಿ, ನೇಗಿಲು ಅಮ್ಮನ ತಮ್ಮನಿಗೆ. ಆದರೆ ವಾಡೆಗಳದ್ದೇ ಸಮಸ್ಯೆಯಾಯಿತು. ಪೇಟೆಗೆ ಒಯ್ಯಬೇಕೊ ಬೇಡವೊ ಬಗೆಹರಿಯಲಿಲ್ಲ. ಬಡವಿಯಾಗಿದ್ದ ಚಿಕ್ಕಮ್ಮ ಕೇಳಿದಳು. ಆದರೆ ಅಮ್ಮ ಕೊಡಲು ಒಪ್ಪಲಿಲ್ಲ. ಅವಳು ಅವನ್ನು ನಮಗಿಂತ ಹೆಚ್ಚು ಪ್ರೀತಿಸುತ್ತಿರುವಂತೆ ಕಂಡಿತು. ಹಠಮಾರಿ ಅಮ್ಮನಿಗೆ ಕೊಂಚ ಅಂಜುತ್ತಿದ್ದ ಅಪ್ಪ “ಅಲ್ಲಿಗೆ ಇವ್ಯಾಕೆ? ಅಲ್ಲಿರುವುದು ಸಣ್ಣಮನೆ. ಇಲ್ಲೇ ಯಾರಿಗಾದರೂ ಕೊಟ್ಟುಬಿಡೋಣ” ಎಂದು ಗೊಣಗಿದ. ಅವನ ಮಾತಲ್ಲಿ ವಾಸ್ತವಾಂಶವಿತ್ತು. ಕುಲುಮೆಯ ವರಮಾನದಲ್ಲಿ ಕಾಕಾ ಅಂಗಡಿಯಿಂದ ರೇಶನ್ನು ತಂದು ಅಂದಂದಿನ ಹಸಿವು ಚುಕ್ತಾ ಮಾಡಬೇಕಾದ ಸ್ಥಿತಿಯಲ್ಲಿ, ವರ್ಷಕ್ಕೆ ಬೇಕಾಗುವ ಕಾಳು ತಂದು ವಾಡೆಗಳಲ್ಲಿ ತುಂಬುವ ಸಾಧ್ಯತೆ ಕಡಿಮೆಯಿತ್ತು. ಆದರೂ ಅಮ್ಮ ಅಪ್ಪನ ಸಲಹೆಯನ್ನು ಖಂಡಿತವಾಗಿ ತಿರಸ್ಕರಿಸಿದಳು. ‘ಈಗ ಮಾಡಿಸಬೇಕು ಅಂದರೆ ಆಗಲ್ಲ. ಎಲ್ಲಿಯಾದರೂ ಜಾಸ್ತಿ ರಾಗಿಗೀಗಿ ಕೊಂಡರೆ ತುಂಬೋಕೆ ಬೇಕಾಗಬಹುದು’ ಎಂದಳು. ರಾಗಿಹುಲ್ಲಿನ ಮೆತ್ತೆಮಾಡಿ ಗಾಡಿಗೆ ಹಾಸಿ ಅವನ್ನು ಮಲಗಿಸಿಕೊಂಡು ಅತ್ತಿತ್ತ ಕಣಿಗೆಗಳಿಗೆ ತಾಗಿ ಒಡೆಯದಂತೆ ಗೋಣಿತಾಟಿನ ದಿಂಬುಗಳನ್ನು ಇಟ್ಟು, ಅವನ್ನು ಪ್ರತ್ಯೇಕ ಗಾಡಿ ಮಾಡಿಕೊಂಡು ಗಣಪತಿ ಮೆರವಣಿಗೆಯಂತೆ ಅವುಗಳ ನಡುವೆ ತಾನೇ ಕೂತು ನಿಧಾನವಾಗಿ ಗಾಡಿ ಹೊಡೆಸಿಕೊಂಡು ತಂದಳು.
ಹೊಸಮನೆಗೆ ಬಂದಕೂಡಲೆ ಯಾವ್ಯಾವ ವಸ್ತುವನ್ನು ಎಲ್ಲೆಲ್ಲಿ ಇಡಬೇಕು ಎಂಬ ತಲೆಬಿಸಿ ಶುರುವಾಯಿತು. ಹಳ್ಳಿಯಿಂದ ಬಂದ ಅನೇಕ ವಸ್ತುಗಳಿಗೆ ಹೊಸಮನೆಯಲ್ಲಿ ಜಾಗವಿರಲಿಲ್ಲ. ಜೊತೆಗೆ ಪಟ್ಟಣದ ಬದುಕಿನಲ್ಲಿ ಅವಕ್ಕೆ ಕೆಲಸವೂ ಇರಲಿಲ್ಲ. ಹಾಗೆ ನಿರುದ್ಯೋಗಕ್ಕೆ ಒಳಗಾದವರಲ್ಲಿ ವಾಡೆಗಳು ಮುಖ್ಯವಾಗಿದ್ದವು. ದೊಡ್ಡಕ್ಕ ಗಂಡನ ಜೊತೆ ಬಂದರೆ ಎಂದು ಒಂದು ಮೂಲೆಯಲ್ಲಿ ಭಾಗದಲ್ಲಿ ಸಾಮಿಲ್ಲಿನಿಂದ ಹಲಗೆ ತಂದು ಹೊಡೆದು ‘ರೂಂ’ ನಿರ್ಮಿಸಲಾಯಿತು. ನನಗೆ ಪುಸ್ತಕಗಳ ಟ್ರಂಕಿಟ್ಟುಕೊಂಡು ಓದಲು ಒಂದು ಮೂಲೆ ಮಂಜೂರಾತಿ ಆಯಿತು. ಇನ್ನೊಂದು ಮೂಲೆಯಲ್ಲಿ ಕುಲುಮೆ ಕೆಲಸದ ಕಬ್ಬಿಣದ ಸಾಮಾನುಗಳು. ಇನ್ನೊಂದು ಮೂಲೆಗೆ ಅಡಿಗೆ ಮನೆ ಬಚ್ಚಲು. ಕಡೆಗೂ ವಾಡೆಗಳಿಗೆ ಸೂಕ್ತ ಜಾಗ ಸಿಗಲಿಲ್ಲ. ಅವು ನಿರಾಶ್ರಿತರಂತೆ ಕೂರಿಸಿದ ಕಡೆ ಕೂರುತ್ತ, ಕೂತಕಡೆ ಹೊಂದಿಕೆಯಾಗದೆ ಕಿರಿಕಿರಿ ಮಾಡುತ್ತ ಮನೆಯಲ್ಲಿ ಜಗಳ ಹುಟ್ಟಿಸಿದವು. ಅವನ್ನು ಎಲ್ಲಿಡಲು ಹೋದರೂ ಏನಾದರೊಂದು ಆಕ್ಷೇಪ ಬರುತ್ತಿತ್ತು. ‘ಎಲ್ಲಾದರೂ ಇಡಿ, ಅಡಿಗೆ ಮನೆಯಲ್ಲಿ ಬೇಡ’ ಎಂದು ಚಿಕ್ಕಕ್ಕ ನಿಷ್ಠುರವಾಗಿ ಹೇಳಿದಳು. ಅವಳು ತನ್ನ ತಟ್ಟೆ ಸ್ಟ್ಯಾಂಡನ್ನು ಗೋಡೆಗೆ ಬಡಿದು, ಹಲಗೆ ಹೊಡೆದು ಪಾತ್ರೆಗಳನ್ನು ಬೆಳಗಿ ಸಾಲಾಗಿಟ್ಟು, ನೀರಿನ ಹಂಡೆಗೆ ಹಳೇ ಲಂಗವನ್ನು ಉಡಿಸಿ, ಅದನ್ನೊಂದು ಶೋರೂಂ ಮಾಡಿಕೊಳ್ಳುತ್ತಿದ್ದಳು. ಇನ್ನು ಬಾಕಿ ಉಳಿದಿದ್ದು ನಡುಮನೆ. ಅಲ್ಲಿಟ್ಟರೆ ಊಟ ಮಾಡುವುದು ಮಲಗುವುದು ಎಲ್ಲಿ? “ಎಲ್ಲಿ ಕೇಳ್ತೀಯಾ ನನ್ನ ಮಾತು? ಇಕ್ಕಟ್ಟಾದ ಮನೆಗೆ ಅಳಿಮಯ್ಯ ಬಂದಂಗಾಯ್ತು” ಎಂದು ಅಪ್ಪ ಸಿಡುಕುತ್ತಿದ್ದ. ಆ ಮನೆಗೆ ಅಡಕೆ ದಬ್ಬೆಗಳಿಂದ ಮಾಡಿದ ಸಣ್ಣ ಅಟ್ಟವಿತ್ತು. ಅಲ್ಲಿಟ್ಟರೆ ಹೇಗೆ ಎಂಬ ಆಲೋಚನೆ ಬಂತು. ಖಾಲಿ ಇಡಲು ತೊಂದರೆಯಿಲ್ಲ. ಆದರೆ ಏನಾದರೂ ತುಂಬಿಟ್ಟರೆ ಅಟ್ಟಮುರಿದು ಕೆಳಗೆ ಬೀಳುವುದು ಗ್ಯಾರಂಟಿ. ಅದೂ ಮಲಗಿದವರ ಮೇಲೆ ಬಿದ್ದರೆ ಎರಡು ಸಾವು ಖಂಡಿತ ಎಂದು ಯಾರೊ ಹೇಳಿದರು. ಇದನ್ನು ಎಲ್ಲರೂ ಒಪ್ಪಿದರು.
ಕಡೆಗೆ ಅಮ್ಮ ಎಲ್ಲರಲ್ಲೂ ಅರ್ಧ ಬೇಡಿಕೊಂಡು, ಅರ್ಧ ಹುಕುಮು ಚಲಾಯಿಸಿ, ಅವನ್ನು ನಡುಮನೆಯಲ್ಲೇ ಇರಿಸಿದಳು. ನಾನು ನನ್ನ ಪುಸ್ತಕದ ಟ್ರಂಕನ್ನು ಓದುವ ಕೆಲಸ ಮುಗಿದ ಬಳಿಕ ಖಾಲಿ ವಾಡೆಯ ಬಾಯಿ ಮೇಲಿಡಲು ಅನುಮತಿ ನೀಡಿದಳು. ಅವುಗಳಲ್ಲಿ ಸಂದರ್ಭ ಬಂದಾಗ ಕೌದಿ ತಲೆದಿಂಬು ಹೊಲೆಯಲು ಬೇಕಾದ ಹಳೆಯ ಚಿಂದಿ ಬಟ್ಟೆಗಳನ್ನು ಹಾಕತೊಡಗಿದೆವು. ಆದರೆ ಅವುಗಳಿಂದ ಅಪಮಾನವಾಗುವುದು ಮಾತ್ರ ತಪ್ಪಲಿಲ್ಲ. ನನ್ನ ಕ್ಲಾಸ್‌ಮೇಟುಗಳು ಬಂದಾಗ ‘ಇವೆಂಥವೊ? ದೊಡ್ಡ ಗುಡಾಣಗಳಂತಿವೆ. ಇವನ್ನು ಯಾತಕ್ಕೆ ಮಾಡಿಸಿದಿರಿ’ ಎಂದು ಕೇಳುತ್ತಿದ್ದರು. ಪೇಟೆಯ ಕೆಲವರು ಬಂದಾಗ ಅವರ ಕಣ್ಣು ಹಾಲಿನಲ್ಲಿ ದೆವ್ವಗಳಂತೆ ಕೂತಿದ್ದ ಅವುಗಳ ಮೇಲೆ ಸಹಜ ಹೋಗುತ್ತಿತ್ತು. ಚಿಕ್ಕಕ್ಕನನ್ನು ನೋಡಲು ಯಾರೊ ಬಂದದಿನ ಇವು ಮರ್ಯಾದೆ ಕಳೆಯುತ್ತವೆ ಎಂದು ಅವುಗಳ ಮೇಲೆ ಬೆಡ್‌ಶೀಟ್ ಹೊದೆಸಿದ್ದೆವು. ಇವು ಕಾಯಿಲೆ ಬಿದ್ದು ಮೂಲೆಯಲ್ಲಿ ಕುಳಿತ ಮುದುಕರಂತೆ ನಮ್ಮೆಲ್ಲರ ಮೇಲೆ ಮುಜುಗರದ ಭಾರವನ್ನು ಹೇರಿದ್ದವು.
ಒಮ್ಮೆ ನಾನೂ ಅಕ್ಕನೂ ಸೇರಿ ಇವನ್ನು ಏನಾದರೂ ಮಾಡಿ ಮನೆಯಿಂದ ಹೊರ ಹಾಕಬೇಕು ಎಂದು ಸಂಚು ಹೂಡಿದೆವು. ಆಕಸ್ಮಿಕವೆಂಬಂತೆ ಮಾಡಿ ಗಟ್ಟಿ ವಸ್ತುತಾಗಿಸಿ ಒಡೆದರೆ ಹೇಗೆ ಎಂಬ ಆಲೋಚನೆ ಬಂತು. ಆಗ ಅಕ್ಕ ‘ಹ್ಞೂ ಕಣೊ, ಒಡೆದ ಕೆಳಭಾಗದಲ್ಲಿ ಮಣ್ಣುಹಾಕಿ ಪುದೀನ ಬೆಳೆಸಬಹುದು. ಮೇಲ್ಭಾಗ ಒಳಕಲ್ಲಿಗೆ ಕುದುರಾಗುತ್ತದೆ’ ಎಂದು ಹೇಳಿದಳು. ಒಮ್ಮೆ ಹಬ್ಬಕ್ಕೆ ಮನೆಸುಣ್ಣ ಹೊಡೆಯುವ ಸಂದರ್ಭ ಬಂದಾಗ, ವಸ್ತುಗಳನ್ನು ಅಂಗಳಕ್ಕೆ ಇಡಬೇಕಾಯಿತು. ಆಗ ನಾನು ಒಂದು ವಾಡೆಯನ್ನು ಅಂಗಳದ ನೆಲದ ಮೇಲೆ ಉರುಳಿಸಿಕೊಂಡು ಹೊರಗೊಯ್ದೆ. ನಾಲ್ಕು ಉರುಳು ಉರುಳುವಷ್ಟರಲ್ಲಿ ಖರಕ್ ಎಂಬ ಶಬ್ದ ಬಂತು. ಭೂಕಂಪನಕ್ಕೆ ಬಿರುಕು ಬಿಡುವ ಭೂಮಿಯಂತೆ ನಡುಭಾಗದಲ್ಲಿ ಸಣ್ಣಗೆ ಕೂದಲುಗೆರೆ ಬಿಟ್ಟುಕೊಂಡು ಅದು ಸದ್ದಾಯಿತು. ಮೊದಲು ಬಾರಿಸಿದಾಗ ಬರುತ್ತಿದ್ದ ಸುನಾದದ ಬದಲು ಗಗ್ಗರದ ಒಡಕು ಸದ್ದು ಕೇಳಿಬರತೊಡಗಿತು. ಅದು ಆರ್ತನಾದದಂತಿತ್ತು. ವಾಡೆ ಒಡೆದ ಸುದ್ದಿ ತಿಳಿದು ಹಾರಿಬಂದ ಅಮ್ಮ ‘ಅಯ್ಯೋ ದುಶ್ಮನರಾ, ನಾನು ಮದುವೆಯಾದ ಹೊಸತರಲ್ಲಿ ಮಾಡಿಸಿದವು ಅವು. ಒಡೆದು ಹಾಕಿದರಲ್ಲೊ’ ಎಂದು ನೋವಿನಿಂದ ಕೂಗಿಕೊಂಡಳು.
ಮನೆಯೆಲ್ಲ ಸಾರಣೆಯಾದ ಮೇಲೆ ಹೊರಗೆ ಬಂದಿದ್ದ ವಸ್ತುಗಳು ಒಳಗೆ ಪ್ರಯಾಣ ಹೊರಟವು. ಆಗ ಅಪ್ಪ ವಾಡೆಗಳನ್ನು ನೋಡಿ ‘ಇವನ್ಯಾಕೆ ಒಳಗೆ ತಗೊಂಡು ಹೋಗ್ತೀರೊ? ಹಿತ್ತಲ ಕಡೆ ಇಡಿ’ ಎಂದ. ಅಮ್ಮ ಮಾತಾಡಲಿಲ್ಲ. ಒಡೆದ ವಾಡೆಯನ್ನು ಎರಡು ಭಾಗ ಮಾಡಿ ಒಂದರಲ್ಲಿ ಅಕ್ಕ ಮೂಲೆಯಲ್ಲಿಟ್ಟು ಗುಲಾಬಿ ಕಡ್ಡಿಯನ್ನೂ ಅದರ ಬುಡಕ್ಕೆ ಪುದಿನ ಬೇರುಗಳನ್ನೂ ನೆಟ್ಟಳು. ಅದರ ಬಾಯಿಯ ಭಾಗವನ್ನು ಹಿತ್ತಿಲವರೆ ಚಪ್ಪರದ ಗೂಟಕ್ಕೆ ಹಾರ ಹಾಕಿದಂತೆ ಬೆರ್ಚಪ್ಪ ಮಾಡಿಟ್ಟೆವು. ಚೆನ್ನಾಗಿದ್ದ ಇನ್ನೊಂದನ್ನು ಹಿತ್ತಲಲ್ಲಿ ಸೂರಿನ ಗೋಡೆಗೆ ತಾಗಿಸಿ ಇಟ್ಟೆವು. ವಾಡೆಗಳು ಮನೆಬಿಟ್ಟು ಹೋಗಿದ್ದರಿಂದ, ಮನೆ ವಿಶಾಲವಾಗಿ ಕಾಣತೊಡಗಿತು.
ಒಂದು ದಿನ ಮಳೆಗಾಲ. ರಾತ್ರಿ. ಥಂಡಿ ಹವೆ ಬೀಸುತ್ತಿತ್ತು. ಊಟಕ್ಕೆ ಕುಳಿತಿದ್ದೆವು. ಧುಪ್ ಎಂದು ಹಿತ್ತಲಲ್ಲಿ ಸದ್ದಾಯಿತು. ಏನಾಯ್ತೆಂದು ಹಿತ್ತಿಲಕಡೆ ಓಡಿಹೋದೆವು. ಎರಡನೇ ವಾಡೆ ಒಡೆದು ಹೋಗಿತ್ತು. ಸೂರಿನ ನೀರು ಬಿದ್ದುಬಿದ್ದು ತುಂಬಿ, ಕೆಳಗಿನ ನೆಲ ಜರಿದು ಅದು ಆಯತಪ್ಪಿ ಕೆಳಕ್ಕೆ ಉರುಳಿಕೊಂಡಿತ್ತು. ಅಮ್ಮ ‘ನಿಮಗೆಲ್ಲ ಸಮಾಧಾನವಾಯ್ತಲ್ಲ’ ಎಂಬಂತೆ ನಮ್ಮನ್ನೂ ಅಪ್ಪನನ್ನೂ ನೋಡಿಕೊಂಡು ಒಳಗೆ ಹೋದಳು. ಅವಳು ಅವತ್ತು ಊಟ ಮಾಡಿದ ನೆನಪಿಲ್ಲ.
ಆಮೇಲೆ ಅಮ್ಮ ಹೊಸ ಪರಿಸರಕ್ಕೆ ಹೊಂದಿಕೊಂಡು ವಾಡೆಗಳನ್ನು ಮರೆತಂತೆ ಕಂಡಳು. ಆದರೂ ಸಾಯುವ ತನಕ ‘ಚೆನ್ನಾಗಿದ್ದ ವಾಡೆಗಳನ್ನು ಪೇಟೆಗೆ ತಂದು ಹಾಳುಮಾಡಿದೆ. ನನ್ನ ತಂಗಿ ಕೇಳಿದಳು. ಅವಳಿಗಾದರೂ ಕೊಟ್ಟುಬಂದಿದ್ದರೆ ಬಳಸುತ್ತಿದ್ದಳು’ ಎಂದು ಮರುಗುತ್ತಲೆ ಇದ್ದಳು. ಅವುಗಳ ಜೊತೆ ಅವಳಿಗೆ ಯಾವೆಲ್ಲ ನೆನಪುಗಳಿದ್ದವೊ?
ಕೆಲವು ದಿನಗಳ ಹಿಂದೆ ಮೈಸೂರಿನ ಹಳೇ ಅರಮನೆಯಲ್ಲಿ ಸ್ಥಾಪನೆಯಾಗಿರುವ ಜಾನಪದ ಮ್ಯೂಸಿಯಮ್ಮಿನಲ್ಲೊ, ಮತ್ತೆಲ್ಲೊ ಒಂದು ವಾಡೆಯನ್ನು ಕಂಡೆ. ಮುಪ್ಪಿನ ಮುದುಕರನ್ನು ದೂಡಿಕೊಂದ ಅಪರಾಧಿ ಭಾವ ನನ್ನನ್ನು ಬಂದು ಮುತ್ತಿಕೊಂಡಿತು. ಅವನ್ನು ಮುಖಾಮುಖಿ ನೋಡಲು ಜೀವ ಅಳುಕಿತು.
ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.