ಹೊರಗಿನಿಂದ ಆ ಬಡ ಜನರ ಗಲಾಟೆ ಇನ್ನೂ ಅವನಿಗೆ ಕೇಳಿಸುತ್ತಿತ್ತು. ಆದರೆ ಅವರ ಮೇಲಿದ್ದ ಅವನ ಕೋಪವೂ ತಾತ್ಸಾರವೂ ಈಗ ಬಹಳ ಮಟ್ಟಿಗೆ ಕಡಿಮೆಯಾದುವು. ಅವರಲ್ಲೊಬ್ಬರಿಗೆ ಒಂದೊಂದು ಅರ್ಧಪಾವು ಅಕ್ಕಿ ಹಾಕಿ ಅವರನ್ನೆಲ್ಲ ಕಳುಹಿಸಿಬಿಡಲೇ ಎಂದು ಆಲೋಚಿಸಿದನು. ಆದರೆ ಅವರ ಗೋಳು ಭಿಕ್ಷೆಯನ್ನೆತ್ತುವುದಕ್ಕಲ್ಲ, ಅಕ್ಕಿಯ ಧಾರಣೆಯನ್ನು ಕಡಿಮೆ ಮಾಡುವುದಕ್ಕೆ ಎಂದು ಅವನು ಚೆನ್ನಾಗಿ ತಿಳಿದಿದ್ದನು. ಅದು ಅವನ ನೆನಪಿಗೆ ಬರುತ್ತಲೆ ಮೆಲ್ಲಮೆಲ್ಲನೆ ದ್ರವಿಸುತ್ತಿರುವ ಅವನ ಹೃದಯ ಪುನಃ ಗಟ್ಟಿಯಾಗಲಿಕ್ಕೆ ಪ್ರಾರಂಭಿಸಿತು. ಕೂಡಲೇ ಅವರಿಗೆ ಭಿಕ್ಷೆ ಹಾಕುವ ಆಲೋಚನೆಯನ್ನು ಕೂಡ ದೂರಮಾಡಿದನು.
ಡಾ. ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನಕಾಲದ ಕಥಾಸರಣಿಯಲ್ಲಿ ಪಡುಕೋಣೆ ರಮಾನಂದರಾವ್ ಬರೆದ ಕತೆ “ವಿಮೋಚನೆ”

 

ಓದೋಣವೆಂದರೆ ಕತ್ತಲಾಗಿತ್ತು. ದೀಪ ಹಚ್ಚೋಣವೆಂದರೆ ಬೆಳಕಿತ್ತು. ತಿರುಗಾಡಲಿಕ್ಕೆ ಹೋಗೋಣವೆಂದರೆ ಹೊತ್ತು ಮೀರಿತ್ತು. ರಾಗದ ಪೆಟ್ಟಿಗೆಯನ್ನಾದರೂ ಬಾರಿಸಿ ಕಾಲಹರಣ ಮಾಡೋಣವೆಂದರೆ ಕೇಸರಿ ಆಗಲೇ ಆ ಕರಕರೆ ಈಗ ಬೇಡ ಎಂದು ಆಜ್ಞಾಪಿಸಿದ್ದಳು. ಹೀಗಾಗಿ ಏನು ಮಾಡಬೇಕೆಂದು ತೋಚದೆ ಕುರ್ಚಿಯಲ್ಲಿ ಚಡಪಡಿಸುತ್ತಾ ಕುಳಿತಿದ್ದೆನು. ಕೇಸರಿಯಾದರೋ ಸ್ವಲ್ಪ ದೂರದಲ್ಲಿ ತನ್ನ ಕೆನ್ನೆಯನ್ನು ಕೈಯಲ್ಲಿ ಆನಿಸಿ ಕುಳಿತುಕೊಂಡು, ಕಿಟಕಿಯ ಬಳಿಯಲ್ಲಿರುವ ಮಾವಿನ ಮರಕ್ಕೆ ಎಷ್ಟು ಎಲೆಗಳಿವೆ ಎಂದು ಲೆಕ್ಕಹಾಕುವುದರಲ್ಲಿ ಮಗ್ನಳಾಗಿದ್ದಳು.

ಅಷ್ಟರೊಳಗೆ ನಾಗಣ್ಣ ಬಂದೇಬಿಟ್ಟನು. ದಾರಿಯಲ್ಲಿ ನಮ್ಮ ಸರ್ವೋತ್ತಮ ನಾಯಕನು ಸಿಕ್ಕಿದನು…. ಎಂದ ನಾಗಣ್ಣ.

“ನಮ್ಮ ಸರ್ವೋತ್ತಮ ನಾಯಕನು! ಯಾರಪ್ಪಾ, ಅದು?”

“ಏನು, ನಮ್ಮೂರಿನ ಸರ್ವೋತ್ತಮ ನಾಯಕನ ಹೆಸರನ್ನು ಕೇಳಿಲ್ಲವೆ? ಇದು ನಿಜವಾಗಿಯೂ ಆಶ್ಚರ್ಯ! ಅವನಂತಹ ಸದ್ಗುಣಶಾಲಿಯಾದ ಬೇರೊಬ್ಬ ಮನುಷ್ಯನನ್ನು ನಾನು ಇನ್ನೂ ನೋಡಬೇಕಷ್ಟೇ –”

“ಮನೆಯ ಗುಡಾಣಗಳಲ್ಲಿ ಹಣ ತುಂಬಿಸಿದವರಲ್ಲೊಬ್ಬರೆಂದು ಕಾಣುತ್ತದೆ” ಎಂದು ಕೇಸರಿಯನ್ನು ನೋಡಿ ಹೇಳಿದೆನು.

“ಹೌದು, ಆದರೆ ಧನಾಢ್ಯನಾದರೇನು? ಗರೀಬನಾದ ನನ್ನಂಥವರ ಪರಮ ಮಿತ್ರನು. ಅಂತಹ ಸದ್ಗುಣಶಾಲಿಯ ಕೂಡ ಲಕ್ಷ್ಮೀದೇವಿಯೂ ಕೂಡಿದರೆ ಬಂಗಾರಕ್ಕೆ ಒಪ್ಪೆ ಹಾಕಿದಂತಾಗುವುದಿಲ್ಲವೆ?”

ನಾಗಣ್ಣ ಮುಂದುರಿಸಿದನು, “ಸರ್ವೋತ್ತಮನಾಯಕನು ಯಾವಾಗಲೂ ಹೀಗಿರಲಿಲ್ಲ. ಎಂಟು ವರ್ಷಗಳ ಕೆಳಗೆ ಅವನು ಕಡುಲೋಭಿಯೆಂದು ಎಲ್ಲರ ಅವಹೇಳನೆಗೆ ಪಾತ್ರನಾಗಿದ್ದನು. ಹೆಚ್ಚೇಕೆ, ಎಂಟು ವರ್ಷಗಳ ಕೆಳಗೆ ಬಡಜನರ ರಕ್ತವನ್ನೇ ಹೀರಿಕೊಂಡು ಬಾಳುವ ಒಂದು ಕೊಬ್ಬಿದ ತಗಣೆಯೆಂದು ನಾನೇ ಅವನನ್ನು ಎಷ್ಟೋ ಸಾರಿ ದೂಷಿಸಿದ್ದೇನೆ. ಆದರೆ ಮನುಷ್ಯ ವ್ಯವಹಾರ ವಿಚಿತ್ರವಾದುದು. ಎಂಟು ವರ್ಷಗಳ ಕೆಳಗೆ ಇದ್ದ ಸವೋತ್ತಮ ನಾಯಕನೂ ಎಂಟು ವರ್ಷಗಳಿಂದೀಚೆಗೆ ಅದೇ ಜಡದೇಹದಲ್ಲಿರುವ ಸವೋತ್ತಮ ನಾಯಕನೂ ಬೇರೆ ಬೇರೆ ಪುರುಷರು. ಇದರಲ್ಲಿ ವಿಚಿತ್ರವೇನು?”

ನಾನು ಕೇಳಿದೆ, “ಎಂಟು ವರ್ಷಗಳ ಕೆಳಗೆ ಬಡಜನರ ರಕ್ತವನ್ನೇ ಹೀರಿಕೊಂಡು ಕೊಬ್ಬಿದ ತಗಣೆಯಾಗಿದ್ದ ನಿನ್ನ ಅಲ್ಲ, ನಮ್ಮ ಸರ್ವೋತ್ತಮ ನಾಯಕರಿಗೆ ಯಾರು ಪುನರ್ಜನ್ಮ ಕೊಟ್ಟರು?”

“ಅದನ್ನು ಕೇಳುತ್ತಿಯೋ? ಸನ್ 1919 ರಲ್ಲು ನಮ್ಮ ಜಿಲ್ಲೆಯಲ್ಲಿ ಅಕ್ಕಿಗೆ ಒದಗಿದ ಘೋರ ಬರಗಾಲ! ಮತ್ತು ಆಗ್ಗೆ ಇನ್ನೂ ಮೊಳಕೆಯಲ್ಲಿದ್ದ ಏಳು ವರ್ಷದ ಒಬ್ಬ ಬಾಲಿಕೆ!”

“ಪರಶುರಾಮನ ಸೃಷ್ಟಿಯಾದ ನಮ್ಮ ಜಿಲ್ಲೆಯಲ್ಲಿ ಬರಗಾಲವೇ? ಮತ್ತೇನು ಹೇಳುತ್ತೀ, ನಾಗಣ್ಣ?”

“ಕೇಸರಿ! ಕಲಿಯುಗದಲ್ಲಿ ಜನರ ನೆನಪು ಕ್ಷೀಣವಾಗುತ್ತಾ ಬರುವುದು ಕಲಿಯುಗದೊಂದು ವಿಶೇಷವಾದ ಲಕ್ಷಣ. ಹೀಗಿರುವಾಗ್ಗೆ ಎಂಟು ವರ್ಷಗಳ ಕೆಳಗೆ ಈ ಜಿಲ್ಲೆಯಲ್ಲಿ ಸಂಭವಿಸಿದ ಘೋರ ಬರಗಾಲದ ನೆನಪು ನಿಮಗಿರುವುದು ಹೇಗೆ?”

“ನಾಗಣ್ಣ , ನೀನು ಕೇಸರಿಯನ್ನು ದೂರಿ ಪ್ರಯೋಜನವಿಲ್ಲ. ಆಗ್ಗೆ ನಾವಿಬ್ಬರೂ ಮದ್ರಾಸಿನಲ್ಲಿದ್ದೆವು. ದಕ್ಷಿಣ ಕನ್ನಡದ ಗಂಧಗಾಳಿ ಕೂಡ ನಮಗೆ ಸೋಂಕಿದ್ದಿಲ್ಲ. ನಾನಾದರೋ ವಾರ್ತಾಪತ್ರಿಕೆಗಳಿಂದ ಈ ಜಿಲ್ಲೆಯಲ್ಲೊಂದು ಅಪರೂಪವಾದ ಬರಗಾಲ ಸಂಭವಿಸಿತೆಂದು ಓದಿ ತಿಳಿದಿದ್ದೆನು. ಅಷ್ಟಾದರೂ ಪ್ರತಿವರ್ಷವೂ ಅನಂತಪುರ, ಬಳ್ಳಾರಿ ಮೊದಲಾದ ಜಿಲ್ಲೆಗಳಲ್ಲಿ ಸಂಭವಿಸುತ್ತಿರುವ ಬರಗಾಲದ ಪರಿಣಾಮ ಈ ಜಿಲ್ಲೆಯಲ್ಲಿ ಮುಟ್ಟಲಿಲ್ಲವೆಂತಲೇ ಭಾವಿಸಿದ್ದೆನು…

“ಪರಿಣಾಮ ಗಿರಿಣಾಮ – ನನಗೇನೂ ತಿಳಿಯದು. ಅಲ್ಪಕಾಲದಲ್ಲಿಯೇ ಜಿಲ್ಲೆಯೊಳಗೆಲ್ಲಾ ಕ್ಷಾಮದೇವತೆ ಅತ್ಯಂತ ಭಯಂಕರಳಾಗಿ ವ್ಯಾಪಿಸಿಕೊಂಡಳು. ಐದಾರು ರೂಪಾಯಿಗೆ ಸಿಗುತ್ತಿದ್ದ ಅಕ್ಕಿಮುಡಿಯೊಂದು ಇಪ್ಪತ್ತು ರೂಪಾಯಿ ಕೊಟ್ಟರೂ ಸಿಗಲಾರದೆ ಹೋಯಿತು. ಯುದ್ಧದ ದೆಸೆಯಿಂದ ನಾಗಾಲೋಟದಿಂದ ಏರಿದ ಜಿನಸು ದವಸಗಳ ಕ್ರಯ ನಾಲ್ಕು ಬಾರಿಯಾಗಿ ಏರಿತು. ಹುಟ್ಟಿದಾರಭ್ಯದಿಂದ ಕ್ಷಾಮವೆಂದರೇನೆಂದರಿಯದ ನನ್ನಂಥವರಿಗೆ ಕ್ಷಾಮದೇವತೆಯ ಅತ್ಯಂತ ಗೆಳೆತನ ಲಭಿಸಿತು. ದಿನಕ್ಕೆ ಒಂದುಬಾರಿ ಊಟಮಾಡುವುದು ಕಷ್ಟವಾಯಿತು. ಹೀಗಿರುವಾಗ ದಿನಗೂಲಿಯವರ ಪಾಡೇನು? ನನ್ನಂತಹ ಮುದಿಗೂಬೆಗಳ ಪಾಡೇನು? ದೊಡ್ಡ ದೊಡ್ಡ ಕುಟುಂಬಗಳನ್ನು ಬೆಳೆಯಿಸಿಕೊಂಡು ತಿಂಗಳಿಗೆ ಹತ್ತಿಪ್ಪತ್ತು ರೂಪಾಯಿಯೊಳಗೆ ಜೀವಿಸಬೇಕಾಗಿದ್ದ ಬಡ ಗೃಹಸ್ಥರ ಪಾಡೇನು? ಅರವಿಂದಾ, ನೀನೇ ಆಲೋಚಿಸು!”

ಆಲೋಚಿಸಲಿಕ್ಕೆ ಕೇಸರಿ ನನಗೆ ಆಸ್ಪದವನ್ನು ಕೊಡಲಿಲ್ಲ. ಬರಗಾಲದ ಕಾರಣವನ್ನೇ ಅವಳು ನಾಗಣ್ಣನ ಕೂಡೆ ಕೇಳಿದಳು.

“ಕಾರಣವೇ? ಕಾರಣವೇನು – ದೈವ ಇಚ್ಛೆಯೇ! ಮತ್ತೇನು! ಅಕ್ಕಿಯ ಬೆಳೆಗೆ ಅತಿ ಪ್ರಾಮುಖ್ಯವಾದ ಮಳೆಯೇ ಕ್ಲಪ್ತ ಸಮಯದಲ್ಲಿ ಬಾರದಿದ್ದರೆ ರೈತರು ಬೆಳೆಯನ್ನು ಮಾಡುವುದರಲ್ಲಿ ಎಷ್ಟು ಚುಟುವಟಿಕೆಯುಳ್ಳವರಾದರೂ ಪ್ರಯೋಜನವೇನು? ಸಾಗುವಳಿಯ ಕೆಲಸ ಯೋಗ್ಯ ರೀತಿಯಲ್ಲಿ ಕೈಗೂಡಿಬರುವಂತೆ ಮಳೆಗಾಲದ ನೀರನ್ನು ಒಟ್ಟುಗೂಡಿಸುವಂತಹ ದೊಡ್ಡ ದೊಡ್ಡ ಕೆರೆಗಳೂ, ಕಾಲುವೆಗಳೂ ನಮ್ಮ ಜಿಲ್ಲೆಯಲ್ಲಿ ಇನ್ನೂ ಇಲ್ಲವಷ್ಟೇ?

ಕ್ಲಪ್ತಸಮಯದಲ್ಲಿ ಮಳೆ ಬಾರದೆ ಇದ್ದುದನ್ನು ನೋಡಿ ನಾವೆಲ್ಲರೂ ಹತಾಶರಾದೆವು. ಆಗಲೇ ಕ್ಷಾಮದೇವತೆ ತನ್ನ ಭೀಕರವಾದ ನೋಟವನ್ನು ನಮ್ಮ ಕಡೆಗೆ ತಿರುಗಿಸಿದಂತೆ ತೋರಿಬಂತು. ರೈತರಿಗಾದರೋ ಕ್ಷಾಮ ದೇವತೆಯೊಂದಿಗೆ ಇನ್ನೊಂದು ಭೀಕರವಾದ ದೇವತೆಯೂ ತೋರಿಬಂದಳು. ಅವಳ್ಯಾರಂದರೆ – ಕಂದಾಯ ದೇವತೆಯೇ!

ಕ್ಷಾಮದೇವತೆಯನ್ನು ಒಲಿಸುವುದಕ್ಕೆ ದೈವ ಸಹಾಯವಲ್ಲದೆ ಲೌಕಿಕ ಸಹಾಯ ಅಷ್ಟೊಂದು ಆಗಲಾರದು. ಅದರ ಕಂದಾಯ ದೇವತೆಯನ್ನಾದರೂ ಸರಕಾರ ದೇವರಿಗೂ ಪೂಜಾರಿಗೂ ಯಥೋಚಿತ ಪ್ರಾರ್ಥನೆ ಕಾಣಿಕೆಗಳನ್ನರ್ಪಿಸಿ ತೃಪ್ತಿಪಡಿಸಬಹುದಲ್ಲವೇ? ಆದುದರಿಂದ ಕಂದಾಯ ದೇವತೆಗಾಗಿ ಸರಕಾರ ದೇವರಿಗೆ ಕೂಡಲೇ ಮಂತ್ರೋಚ್ಛಾರಣೆಗಳೂ, ಪ್ರಾರ್ಥನೆಗಳೂ ನೆರವೇರಿದುವು. ಸರಕಾರ ದೇವರು ಪ್ರತ್ಯಕ್ಷರಾದರು – ಅದೂ ಒಂದು ಆಶ್ಚರ್ಯ – ಮತ್ತು ಕಂದಾಯ ದೇವತೆಗಾಗಿ ಅಭಯವನ್ನಿತ್ತರು.

ಇದಾದ ಕೂಡಲೇ ರೈತರು ಕ್ಷಾಮ ದೇವತೆಗಾಗಿ ಮಾತ್ರ ಮೊರೆಯಿಟ್ಟು ತಮ್ಮ ತಮ್ಮ ಬೆಳವಣಿಗೆಯ ಕೆಲಸವನ್ನು ಸಾಕಷ್ಟು ಉತ್ಸಾಹದಿಂದ ಕೈಗೊಳ್ಳುವವರಾದರು. ಅವರ ಪ್ರಯತ್ನಗಳು ಅನೇಕ ಮಟ್ಟಿಗೆ ಸಫಲವಾದುವೆಂತಲೇ ಹೇಳಬಹುದು. ನಮ್ಮ ಜಿಲ್ಲೆಯಲ್ಲಿ ಇತರ ವರ್ಷಗಳಲ್ಲಿ ಆಗುವಷ್ಟು ಬೆಳೆ ಈ ವರ್ಷದಲ್ಲಿ ಆಗದಿದ್ದರೂ ಸಂತೋಷ ಪಟ್ಟೆವು. ನಮ್ಮನ್ನು ತೃಪ್ತಿಪಡಿಸಿ ಇತರ ಜಿಲ್ಲೆಗಳಿಗೆ ಕಳುಹಿಸಲಿಕ್ಕೆ ಮಾತ್ರ ಬೇಕಾದಷ್ಟು ಬೆಳೆಯಾಗಿರಲಿಲ್ಲ. ಆದರೆ ಅದರಿಂದ ನಮಗೇನು? ನಮ್ಮ ಉಪಯೋಗಾರ್ಥವಾಗಿ ತಕ್ಕಷ್ಟು ಬೆಳೆಯಾಯಿತಲ್ಲವೇ? ಅಂತೇ ನಮ್ಮ ಸಂತುಷ್ಟಿ …”

“ಆದರೂ ಕ್ಷಾಮ ಒದಗಿತೇ?”

“ಹೌದು, ಕೇಸರಿ ನಮ್ಮ ಸಂತೋಷ ಅಲ್ಪಕಾಲವೇ ಬಾಳುವಂತಾಗಿತ್ತು. ನಮಗೆಲ್ಲರಿಗೆ ಬೇಕಾಗುವಷ್ಟು ಬೆಳೆಯಾಗಿದೆಯೆಂದು ತಿಳಿದುಕೊಂಡು ಸರಕಾರ ಕಂದಾಯ ದೇವತೆಗಾಗಿ ಅಭಿಯವನ್ನಿತ್ತ ತನ್ನ ಪ್ರತಿಜ್ಞೆಯನ್ನು ಹಿಂತೆಗೆದು ಕಂದಾಯವನ್ನು ಎಂದಿನಂತೆ ತೆರೆಬೇಕೆಂತಲೇ ನಿರ್ಧರಿಸಿತು.”

“ಸರಕಾರವು ಹಾಗೆ ಮಾಡಬಹುದಿತ್ತೇ?”

“ಕೇಳುವವರ್ಯಾರು? ಸರಕಾರ ಹೊಡೆದ ಈ ಅಂತರ್ಲಾಗದ ನ್ಯಾಯಾ ನ್ಯಾಯಗಳನ್ನು ವಿಚಾರಿಸಲಿಕ್ಕೆ ನಾನು ಅರ್ಹನಲ್ಲ. ಆದರೆ ಸರಕಾರ ಕಂದಾಯವನ್ನು ತೆರಬೇಕೆಂದು ಪುನಃ ನಿರ್ಧರಿಸುವಾಗಲೇ ಅಕ್ಕಿ ನಮ್ಮ ಜಿಲ್ಲೆಯಿಂದ ಇತರ ಪ್ರದೇಶಗಳಿಗೆ ಹೋಗದಿರುವಂತೆ ನೋಡಿಕೊಂಡಿದ್ದರೆ ಎಲ್ಲವೂ ಸರಿಯಾಗುತ್ತಿತ್ತು. ನಾವು ಆ ವರ್ಷ ಬರಗಾಲದಿಂದ ಅಷ್ಟು ಕಷ್ಟ ಪಡಬೇಕಾಗಿರಲಿಲ್ಲ. ಆದರೆ ಸರಕಾರ ಎಂದಿನಂತೆ ತಾನು ಮಾಡಬಾರದುದನ್ನೇ ಮಾಡಿಬಿಟ್ಟಿತು. ಇತ್ತ ಕಂದಾಯ ತಗಾದೆಗೆ ಪ್ರಾರಂಭಿಸಿತು. ಅತ್ತ ಜಿಲ್ಲೆಯೊಳಗಣ ಅಕ್ಕಿಯೆಲ್ಲ ಇತರ ಪ್ರದೇಶಗಳಿಗೆ ರಫ್ತಾಗುವುದನ್ನೂ ತನ್ನ ಅರೆನೋಟದಿಂದ ನೋಡಿ ತಟಸ್ಥವಾಯಿತು. ಇದರಿಂದ ನನ್ನಂತಹ ಬಡಜನರಿಗೆ ಘೋರ ಶನಿದಶೆ ಪ್ರಾಪ್ತವಾಯಿತು. ಆದರೆ ಬೆಳೆ ಕಟಾವಾದ ಕೂಡಲೇ ಜಿಲ್ಲೆಯೊಳಗಣ ಅಕ್ಕಿಯನ್ನೆಲ್ಲ ಶೇಖರಿಸಿಟ್ಟಿದ್ದ ಸಾಹುಕಾರರಿಗೆ ಬುಧದೆಶೆ ಪ್ರಾರಂಭವಾಗಿ ‘ಗಜಕೇಸರಿ ಯೋಗ’ ಬಂತು.

“ಸರಕಾರವೇನೋ ಮಾಡಬಾರದುದನ್ನೇ ಮಾಡಿಬಿಟ್ಟಿತು. ಆದರೆ ಸಾಹುಕಾರರಾದರೋ ತಮ್ಮ ವೃತ್ತಿಸ್ವಭಾವವನ್ನು ಅನುಸರಿಸಿಯೇ ತಮ್ಮ ಲಾಭದ ಕಾರ್ಯವನ್ನು ಸಾಗಿಸಿದರು. ಆದುದರಿಂದ ಸಾಹುಕಾರರ ಕೂಡೆಯೂ ನನಗೆ ಜಗಳವಿಲ್ಲ. ಆದರೆ ಗುಂಡಪ್ಪನ ಮತ್ತು ಕಲ್ಲಪ್ಪನ ನಡುವೆ ಸಿಕ್ಕಿ ಮೆಣಸಪ್ಪ, ಪುಡಿ, ಹಾಗೆಯೇ ಸರಕಾರ ಸಾಹುಕಾರರ ಮಧ್ಯೆ ನಮ್ಮ ಜಿಲ್ಲೆಯ ಬಡ ಮನುಷ್ಯರು ಪುಡಿಪುಡಿಯಾದರು.

“ಯಾವ ದೇಶದಲ್ಲಿಯಾದರೂ ಸರಿ. ಕ್ಷಾಮದೇವತೆ ಒಮ್ಮೆ ತನ್ನ ಮುಖವನ್ನು ತೋರಿಸಿದೊಡನೆಯೇ ಅಲ್ಲಿಯ ಜನರು ಅಲ್ಲಿಂದ ಗುಂಪು ಗುಂಪಾಗಿ ಪಲಾಯನ ಮಾಡಿ ಇತರ ಪ್ರದೇಶಗಳಿಗೆ ಹೋಗಿ ಅಲ್ಲಿ ಹರಿನಾಮ ಸ್ಮರಣೆ ಮಾಡುತ್ತಾ ಬೇಡಿ ಜೀವಿಸುವುದುಂಟು. ಆದರೆ ನಮ್ಮ ಜನರು ಸಾಧಾರಣವಾಗಿ ಬೇಡುವುದೆಂದರೆ ತುಂಬಾ ಅಸಹ್ಯಪಡುವರು. ಹೀಗಾಗಿ ಆ ವರ್ಷ ನಮ್ಮ ಜಿಲ್ಲೆಯಲ್ಲಿ ಕ್ಷಾಮದೇವತೆ ಕಾಲುಗಳನ್ನು ಉದ್ದವಾಗಿ ಚಾಚಿ ನೆಲವನ್ನು ಊರಿ ಕುಳಿತುಕೊಂಡಿದ್ದರೂ ನಮ್ಮ ಜನರು ತಮ್ಮ ತಮ್ಮ ಸ್ಥಾನದಿಂದ ಸ್ವಲ್ಪವಾದರೂ ಕದಲಲಾರದೆ ಹೋದರು. ಆಶ್ಚರ್ಯವಲ್ಲ. ಜಿಲ್ಲೆಯಲ್ಲಿ ಕ್ಷಾಮವಿದ್ದರೇನು? ನಮ್ಮ ಸಾಹುಕಾರರ ಭಂಡಸಾಲೆಗಳಲ್ಲಿ ನಮಗೆಲ್ಲರಿಗೆ ಬೇಕಾಗುವಷ್ಟು ಅಕ್ಕಿ ಇದ್ದಿತಲ್ಲವೇ?”

“ಹಾಗಾದರೆ ಇದೊಂದು ನಿಜವಾಗಿಯೂ ಸೋಜಿಗದ ಬರಗಾಲವು!”

“ನಿಜ, ಅರವಿಂದಾ; ಆದರೆ ಅದರ ಸೋಜಿಗತನ ನಮಗೆ ಆಗಾಗ್ಗೆ ಅಷ್ಟೊಂದಾಗಿ ಹೊಳೆಯಲಿಲ್ಲ.”

“ಅದಂತಿರಲಿ ನಾಗಣ್ಣ! ನಿನ್ನ ಕಥೆಯೆಲ್ಲಿ?”

“ಕಥೆಯೇ? ನಿನಗೆ ಕಥೆ ಬೇಕೇ? ಹಾಗಾದರೆ ಕೇಳು” ಎಂದು ನಾಗಣ್ಣ ಮುಂದುವರಿಸಿದನು :

“ಬರಗಾಲದ ದೆಶೆಯಿಂದ ಬುಧದೆಶೆ ಪ್ರಾಪ್ತವಾದ ನಮ್ಮ ಮಂಗಳೂರಿನ ಸಾಹುಕಾರರಲ್ಲಿ ಸರ್ವೋತ್ತಮ ನಾಯಕನು ಒಬ್ಬನಾಗಿದ್ದನು. ಇತರ ಜಿಲ್ಲೆಗಳಲ್ಲಿ ಕಳುಹಿಸಲಿಕ್ಕೆಂದು ಅಕ್ಕಿಯನ್ನು ಹೇರಳವಾಗಿ ಶೇಖರಿಸಿದವರಲ್ಲಿ ಅವನೇ ಅದ್ವಿತೀಯನಾಗಿದ್ದನು. ನಮ್ಮೂರಿನ ಇತರ ಸಾಹುಕಾರರೆಲ್ಲರೂ ಸಾಧಾರಣವಾಗಿ ಅವನನ್ನೇ ಮಾದರಿಯಾಗಿಟ್ಟುಕೊಂಡು ತಮ್ಮ ತಮ್ಮ ವಹಿವಾಟುಗಳನ್ನು ನಡೆಸುತ್ತಿದ್ದರು. ಪ್ರಾಯದಲ್ಲಿ ನಾಯಕನೇನೂ ಮುದುಕನಲ್ಲ. ಯೌವನಸ್ಥನೇ. ಆದರೆ ವ್ಯಾಪಾರದಲ್ಲಿ ಬಹಳ ಚತುರನೂ ಅನುಭವಶಾಲಿಯೂ ಆಗಿರುವನು. ಸರಕಾರ ಕಂದಾಯವನ್ನು ತೆರಬೇಕೆಂದು ಪುನಃ ನಿರ್ಧರಿಸಿದಾಗ ಇತರ ಸಾಹುಕಾರರಾದರೋ ಅಕ್ಕಿ ಮುಡಿ ಒಂದಕ್ಕೆ 12 ರೂಪಾಯಿಯ ಮೇಲೆ ಬೆಲೆ ಏರಿಸಲಿಕ್ಕೆ ಧೈರ್ಯಪಡುತ್ತಿದ್ದಿಲ್ಲ. ಆದರೆ ನಾಯಕನಾದರೋ ಲಾಭದ ಮೇಲೆ ದೂರದೃಷ್ಟಿಯನ್ನಿಟ್ಟು ಅಕ್ಕಿಯ ಧಾರಣೆಯನ್ನು ಇಪ್ಪತ್ತು ರೂಪಾಯಿಗೆ ಏರಿಸಿಯೇಬಿಟ್ಟನು; ಮಾತ್ರವಲ್ಲ , ಗೋಣಿ ಗೋಣಿಗಳಿಂದ ಅಕ್ಕಿಯನ್ನು ಮಲಬಾರಿಗೆ ಮಂಜಿಗಳಲ್ಲಿ ಕಳುಹಿಸಲುದ್ಯುಕ್ತನಾದನು.

“ಇತ್ತ ಸಾಕಷ್ಟು ಅಕ್ಕಿ ಸಿಗದೆ ಉಪವಾಸದಲ್ಲಿರುವ ಬಡ ಜನರ ಗಲಾಟೆ ತೀಕ್ಷ್ಣತೆಯನ್ನು ಹೊಂದುತ್ತಾ ಬಂತು. ಮೊತ್ತ ಮೊದಲು ಹಸಿವೆಯಿಂದ ದೀನರಾಗಿ ಅಕ್ಕಿ ಸಾಹುಕಾರರ ಕಾಲಡಿಗೆ ಬಂದುಬಿಟ್ಟರು. ‘ಅಕ್ಕಿಯನ್ನು ಬೇಡಲಿಕ್ಕೆ ನಾವು ಬಂದಿಲ್ಲ. ಮುಡಿ ಒಂದಕ್ಕೆ ಬೇಕಾದರೆ ಆರು ರೂಪಾಯಿಯಷ್ಟು ಮಾಡಿ. ನಾವು ಮರುಗುವುದಿಲ್ಲ’ ಎಂದು ಅವರು ಹಲವು ವಿಧವಾಗಿ ಬೇಡಿಕೊಂಡರು. ಆದರೆ ಅವರ ಪ್ರಾರ್ಥನೆಗಳಿಗೆ ಸಾಹುಕಾರರು, ‘ನಾವು ಅಕ್ಕಿಯ ಧಾರಣೆಯನ್ನು ತಗ್ಗಿಸಿದರಾಯಿತೆ? ಸರ್ವೋತ್ತಮ ನಾಯಕರನ್ನು ನೋಡಿ. ಅವರು ಮುಡಿ ಒಂದಕ್ಕೆ ಇಪ್ಪತ್ತು ರೂಪಾಯಿಗೆ ಏರಿಸಿ ಎಷ್ಟು ಹಣವನ್ನು ಶೇಖರಿಸುತ್ತಿದ್ದಾರೆ! ಸರ್ವೋತ್ತಮ ನಾಯಕರು ಧಾರಣೆಯನ್ನು ತಗ್ಗಿಸುವುದಾದರೆ ನಾವೂ ಯಥಾಪ್ರಕಾರ ತಗ್ಗಿಸುವೆವು’ ಎಂದರು. ಸರ್ವೋತ್ತಮನಾದರೆ ಧಾರಣೆ ತಗ್ಗಿಸುವನೆ? ‘ನೀವು ಬೇಡಲಿಕ್ಕೆ ಬರುವುದಾದರೆ ಶನಿವಾರ ಬನ್ನಿ. ನಿಮಗೆಂದಿನಂತೆಯೇ ಒಂದೊಂದು ಮುಷ್ಟಿ ಅಕ್ಕಿಯನ್ನು ಹಾಕುವೆನು. ಆದರೆ ಅಕ್ಕಿಯ ಧಾರಣೆಯನ್ನು ತಗ್ಗಿಸಬೇಕೆಂದು ಮಾತ್ರ ನನ್ನೊಡನೆ ಕೇಳಬೇಡಿ. ನಾನು ಅಕ್ಕಿಯ ಭಂಡಸಾಲೆಯನ್ನು ಇಟ್ಟದ್ದು ಧರ್ಮ ಮಾಡಲಿಕ್ಕಲ್ಲ. ಸಾಧ್ಯವಿದ್ದಾಗ ಆದಷ್ಟು ದುಡ್ಡು ಮಾಡಲಿಕ್ಕೆ! ತಿಳಿಯಿತೇನು?’ ಎಂಬ ಪ್ರತ್ಯುತ್ತರವೇ ಆ ಬಡ ಪಾಪಿಗಳಿಗೆ ಅವನಿಂದ ದೊರಕುತ್ತಿತ್ತು. ಎಂತಹ ಪಾಪಿಷ್ಠನಯ್ಯ!

“ಜನರ ಗಲಾಟೆ ಹೆಚ್ಚೆಚ್ಚಾಗುತ್ತಾ ಬಂತು. ಸವಿನಯ ನುಡಿಗಳಿಗೆ ಕೇಳಲಾರದ ಸರ್ವೋತ್ತಮನನ್ನು ಜನರೆಲ್ಲರೂ ಕಲ್ಲೆದೆಯವನೆಂದು ಶಪಿಸತೊಡಗಿದರು. ಬಾಕಿ ಸಾಹುಕಾರರೆಲ್ಲರೂ ಸರ್ವೋತ್ತಮನನ್ನು ಅನುಸರಿಸಿ ತಮ್ಮ ತಮ್ಮ ಲಾಭದ ಕಾರ್ಯದಲ್ಲಿ ತಲ್ಲೀನರಾದರು. ಮನೆಯಲ್ಲಿ ಅಲ್ಪಸ್ವಲ್ಪ ರೊಕ್ಕವಿದ್ದವರು ಮುಡಿಗೆ ಇಪ್ಪತ್ತು ರೂಪಾಯಿ ಆದರೂ ಕೊಟ್ಟು ಎಂದಿನಂತೆಯೇ ಉಂಡು ತಿಂದು ಸುಖವಾಗಿದ್ದರು. ಕಲೆಕ್ಟರ್ ಸಾಹೇಬರಂತೂ ಊರಲ್ಲಿ ಬರಗಾಲವಿಲ್ಲವೆಂತಲೇ ತಿಳಿದುಕೊಂಡು ತಟಸ್ಥರಾದರು. ಹೀಗಾಗಿ ಬರಗಾಲದ ಘೋರ ಪರಿಣಾಮ ಬಡವರಾದ ನಮ್ಮ ಮೇಲೆ ಯಥೇಷ್ಟವಾಗಿ ಬಂದಿಳಿಯಿತು. ಊರಿನ ಒಬ್ಬಿಬ್ಬರು, ಉದಾರ ಮನಸ್ಸಿನವರು, ಲೋಕೋಪಕಾರಿಗಳು ಅಲ್ಲಲ್ಲಿ ಧರ್ಮಸಹಾಯದ ಠಾಣ್ಯಗಳನ್ನು ಸ್ಥಾಪಿಸುವುದಕ್ಕೆ ಬಹಳವಾಗಿ ಪ್ರಯತ್ನಪಟ್ಟರು. ಆದರೆ ಸಾಹುಕಾರರ ಸಹಕಾರವಿಲ್ಲದೆ ಅವರ ಈ ಪ್ರಯತ್ನಗಳೇ ಹೆಚ್ಚಿನ ಮಟ್ಟಿಗೆ ನಿಷ್ಪಲವಾದುವು.

“ಆದರೂ ಹೊಟ್ಟೆಗಿಲ್ಲದ ಬಡಜನರು ಸರ್ವೋತ್ತಮ ನಾಯಕನ ಮನೆಯನ್ನೂ ಭಂಡಸಾಲೆಯನ್ನೂ ಕಾಯುವುದನ್ನು ಬಿಡಲಿಲ್ಲ. ಒಂದೊಂದು ಬಾರಿ ನಾಯಕನು ದೊಡ್ಡ ಮನಸ್ಸು ಮಾಡಿ ಅವರಲ್ಲಿ ಪ್ರತಿ ಒಬ್ಬರಿಗೂ ಒಂದೊಂದು ಪಾವು ಅಕ್ಕಿಯಂತೆ ಕೊಟ್ಟು ಬಿಡುತ್ತಿದ್ದನು. ಆದರೆ ಜನರ ಗೋಳಾಟ ಭಿಕ್ಷೆಯನ್ನೆತ್ತುವುದಕ್ಕಲ್ಲ, ಅಕ್ಕಿಯ ಬೆಲೆಯನ್ನು ತಗ್ಗಿಸುವುದಕ್ಕೆ! ‘ಮಹಾಸ್ವಾಮೀ, ನಮಗೆ ನಿಮ್ಮ ಭಿಕ್ಷೆ ಬೇಕಾದ್ದಿಲ್ಲ. ನಮ್ಮ ಕೈಕಾಲುಗಳು ನೆಟ್ಟಗಿವೆ. ನಿಮ್ಮ ಅಕ್ಕಿಯ ಭಿಕ್ಷೆ ಬೇಡ, ನಮಗೆ ಅಕ್ಕಿಯ ಧಾರಣೆಯನ್ನು ಮಾತ್ರ ತಗ್ಗಿಸಿರಿ! ಅದನ್ನೇ ನಾವು ಬೇಡುವುದು!’ ಎಂದು ನಾಯಕನನ್ನು ಮೊರೆಯಿಟ್ಟರು. ಆದರೆ ಇದನ್ನು ಕೇಳಿದೊಡನೆ ನಾಯಕನು ರೇಗಿಕೊಂಡು ಅವರಿಗೆಂದು ತಂದ ಭಿಕ್ಷೆಯನ್ನು ಕೂಡ ಒಳಗೆ ಕಳುಹಿಸುತ್ತಿದ್ದನು.

“ಹೀಗೆಯೇ ಹಲವು ದಿನಗಳು ಕಳೆದುಹೋದುವು. ಜಿಲ್ಲೆಯಲ್ಲಿ ದುರ್ಭಿಕ್ಷ ಹೆಚ್ಚೆಚ್ಚಾಗುತ್ತಾ ಬಂತು. ಅನೇಕ ಕಡೆಗಳಲ್ಲಿ ಜನರು ಹತಾಶರಾಗಿ ದೂರಾಲೋಚನೆಗಳಲ್ಲಿ ಪ್ರವೃತ್ತರಾದರು. ಜೀವನಕ್ಕೆ ಬೇರೆ ಉಪಾಯವಿಲ್ಲದೆ ಸುಲಿಗೆ, ದಂಗೆ ಮೊದಲಾದವುಗಳಿಗೆ ಕೈಹಾಕತೊಡಗಿದರು. ಆದರೂ ಜಿಲ್ಲಾಧಿಕಾರಿಗಳು ಬಡಜನರ ಸಂಕಷ್ಟ ನಿವಾರಣೆಗಾಗಿ ಯಾವ ಹೆಜ್ಜೆಯನ್ನಾದರೂ ತೆಗೆಯಲಾರದೆ ಹೋದರು.

“ಆದರೆ ಮಂಗಳೂರಿನ ವಾರ್ತಾಪತ್ರಿಕೆಗಳು ಸುಮ್ಮನಿರಲಿಲ್ಲ. ಜಿಲ್ಲೆಯ ನಿಜಸ್ಥಿತಿಯನ್ನು ಕೂಲಂಕುಷವಾಗಿ ತಿಳಿಸುವಂತೆ ಅವುಗಳು ಕೂಡಲೇ ಸೊಂಟಕಟ್ಟಿದುವು. ಜಿಲ್ಲೆಯೊಳಗೆ ಘೋರವಾದೊಂದು ಬರಗಾಲವಿದೆ ಎಂಬ ಸಂಗತಿಯನ್ನು ಅವುಗಳು ಗಂಟಲು ಒಣಗುವವರೆಗೆ ಕೂಗಲಾರಂಭಿಸಿದುವು. ಕಟ್ಟಕಡೆಗೆ ಹೇಗಾದರೂ ಅವುಗಳ ಕೂಗು ಮದ್ರಾಸಿನವರೆಗೆ ಮುಟ್ಟಿ, ಅಲ್ಲಿಯ ಮೇಲಧಿಕಾರಿಗಳು ಅಲ್ಪಸ್ವಲ್ಪ ಎಚ್ಚರಾಗಲಿಕ್ಕೆ ಪ್ರಾರಂಭಿಸಿದರು. ಮದ್ರಾಸು ಸರಕಾರದ ರೆವಿನ್ಯು ಮೆಂಬರರು ತಾನು ಸ್ವತಃ ಮಂಗಳೂರಿಗೆ ಬಂದು ಜಿಲ್ಲೆಯ ಪರಿಸ್ಥಿತಿಯನ್ನು ನೋಡುವೆನೆಂದು ತಿಳಿಸಿದರು.”

ನಾಗಣ್ಣ ತನ್ನ ನಸ್ಯದ ಬುರುಡೆಯಿಂದ ಅರೆವಾಸಿ ಪಾಲು ನಸ್ಯವನ್ನು ತನ್ನ ಮೂಗಿನ ಎರಡು ರಂಧ್ರಗಳೊಳಗೂ ತುರುಕಿಸಿಕೊಂಡು ಸ್ವಲ್ಪ ಸಮಯದ ಮೇಲೆ ಹೀಗೆ ಮುಂದರಿಸಿದನು :

“ಪ್ರಾತಃಕಾಲ ಒಂಭತ್ತುವರೆ ಗಂಟೆ. ಕಣ್ಣಾನೂರಿನಲ್ಲಿ ಮುಂಚಿನ ದಿನ ಬಂದು ಇಳಿದ ರೆವಿನ್ಯೂ ಮೆಂಬರರು ಅಂದಿನ ಪ್ರಾತಃಕಾಲದ ರೈಲು ಬಂಡಿಯಲ್ಲಿ ಮಂಗಳೂರಿಗೆ ಬರುವರೆಂದು ತಂತೀವಾರ್ತೆ ಬಂದಿತ್ತು. ಆದುದರಿಂದ ಊರೆಲ್ಲ ಗದ್ದಲ. ಅವರ ಬರುವಿಕೆಯನ್ನು ನೀರೀಕ್ಷಿಸಿ ರೈಲ್ವೆ ಸ್ಟೇಷನ್ನಿನಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಮೋಟಾರ್ ಕಾರುಗಳೂ, ಜಟ್ಕಾ ಗಾಡಿಗಳೂ ಒಂದರ ಹಿಂದೆ ಮತ್ತೊಂದು ಎಡೆಬಿಡದೆ ಬರಲಿಕ್ಕೆ ತೊಡಗಿದುವು. ಕೆಂಪು ಟೊಪ್ಪಿಗೆಗಳಿಗೆ ತುಂಬಾ ಕೆಲಸವಾಯಿತು. ಅವರ ಉತ್ಸಾಹಕ್ಕೆ ಮಿತಿಯೇ ಇಲ್ಲದಂತೆ ತೋರಿತು. ರೈಲು ಬಂಡಿಯಲ್ಲಿ ಬರುವ ಮಹಾನುಭಾವರನ್ನು ಸ್ಟೇಶನಿನಲ್ಲಿ ಎದುರುಗೊಳ್ಳಲಿಕ್ಕೆಂದು ಕಲೆಕ್ಟರ್ ಸಾಹೇಬರೂ, ಡಿಸ್ಟ್ರಿಕ್ಟ್ ಬೋರ್ಡು ಪ್ರೆಸಿಡೆಂಟರೂ, ಮಂಗಳೂರು ತಾಲ್ಲೂಕು ಬೋರ್ಡು ಪ್ರೆಸಿಡೆಂಟರೂ, ಮ್ಯುನಿಸಿಪಾಲಿಟಿಯ ಚೇರ್ ಮೇನರೂ ಮೊದಲಾದ ದೊಡ್ಡ ದೊಡ್ಡ ಹುದ್ದೇಗಾರರೂ ಸ್ಟೇಶನಿನೊಳಗೆ ಚಿತ್ತೈಸಿದ್ದರು. ಜನರ ಪರವಾಗಿ ಊರಿನ ಕೆಲವು ಮಂದಿ ಮುಖಂಡರೂ ಅಲ್ಲಿ ಸೇರಿದ್ದರು. ಅದಲ್ಲದೆ ಮಂಗಳೂರು ಡಿವಿಜನಲ್ ಆಫೀಸರರೂ, ತಹಶಿಲ್ದಾರರೂ, ಮೆಜಿಸ್ಟ್ರಟರೂ ಮೊದಲಾದ ಮಹನೀಯರಿಂದ ಕೂಡಿದ ಕಲೆಕ್ಟರ ಸಾಹೇಬರ ಇಡೀ ಪರಿಹಾರವೇ ಅಲ್ಲಿ ಕೂಡಿತ್ತು. ತಹಶೀಲ್ದಾರರು ಬೆಳ್ಳಿಯ ಹರಿವಾಣದಲ್ಲಿ ಬಂಗಾರದ ತಂತಿಗಳಿಂದ ಹೆಣೆದ ಹೂಮಾಲೆಯನ್ನು ಹಿಡಿದುಕೊಂಡು ನಿಂತುದನ್ನು ಒಬ್ಬಿಬ್ಬರು ನೋಡಿದುದೂ ಉಂಟು.

“ರೈಲುಬಂಡಿ ಬಂದೇಬಿಟ್ಟಿತು. ಸ್ಟೇಶನಿನಲ್ಲಿ ಬಂದು ನಿಂತೇ ಬಿಟ್ಟಿತು. ಡಿವಿಜನಲ್ ಆಫೀಸರರ ಹೃದಯ ಡಬಡಬ ಎಂದು ಹೊಡೆಯಲಾರಂಭಿಸಿತು. ತಹಸಿಲ್ದಾರರ ಕೈ ಕೂಡಲೇ ಹರಿವಾಣದಲ್ಲಿದ್ದ ಹೂಮಾಲೆಯನ್ನು ಹುಡುಕಿಕೊಂಡು ಹೋಯಿತು. ಕಲೆಕ್ಟರ್ ಸಾಹೇಬರು ಮತ್ತು ಡಿಸ್ಟ್ರಿಕ್ಟ್ ಬೋರ್ಡು ಪ್ರೆಸಿಡಂಟರು ರೈಲುಬಂಡಿಯ ಕಡೆಗೆ ನುಗ್ಗಿದರು. ಅವರೊಂದಿಗಿದ್ದ ಊರಿನ ಇತರ ಮುಖಂಡರೂ ಅವರನ್ನು ಹಿಂಬಾಲಿಸಿದರು. ಕಲೆಕ್ಟರ್ ಸಾಹೇಬರು ತಮ್ಮ ಹುಬ್ಬುಗಳನ್ನು ತುರಿಸಿಕೊಳ್ಳಲಿಕ್ಕೆ ಪ್ರಾರಂಭಿಸಿದರು. ರೆವಿನ್ಯೂ ಮೆಂಬರರು ಬರಬಹುದಾದ ಸ್ಪೆಶ್ಯಲ್ ಗಾಡಿ ಅವರ ಕಣ್ಣಿಗೆ ಬೀಳದೆ ಹೋಯಿತು! ಒಡನೆಯೇ ಫಸ್ಟ್ ಕ್ಲಾಸ್ ಕಂಪಾರ್ಟುಮೆಂಟುಗಳಲ್ಲಿ ನುಗ್ಗಿದರು. ಅವುಗಳಲ್ಲಿಯೂ ರೆವಿನ್ಯು ಮೆಂಬರರು ಇದ್ದಿಲ್ಲ!

“ಇಲ್ಲ, ರೆವಿನ್ಯು ಮೆಂಬರರು ಬಂದಿರಲಿಲ್ಲ ! ಅವರಿಗೆ ಕಣ್ಣಾನೂರಿನಲ್ಲಿ ಅಗತ್ಯವಾದ ಕೆಲಸವಿದ್ದುದರಿಂದ ಆ ಬಂಡಿಗೆ ಬರಲು ಅವರಿಗೆ ಸಾಧ್ಯವಾಗಲಿಲ್ಲವೆಂತಲೂ, ಆ ದಿನದ ಸಂಜೆಯ ‘ಮೇಲು’ ಬಂಡಿಯಲ್ಲಿಯೇ ಬರುವರೆಂದೂ ಮಾತು ಹರಡಿತು. ಅವರನ್ನು ಎದುರುಗೊಳ್ಳಲಿಕ್ಕೆಂದು ಸ್ಟೇಷನಿನೊಳಗೆ ಬಂದವರೆಲ್ಲರ ಕುತೂಹಲವೂ, ಉತ್ಸಾಹವೂ ನಿಷ್ಪ್ರಯೋಜಕವಾಯಿತು! ತಾವು ಪಟ್ಟ ಆಶಾಭಂಗವನ್ನು ದೊಡ್ಡ ಸ್ವರಗಳಲ್ಲಿ ಪ್ರಕಟಗೊಳಿಸುತ್ತಾ ಬಂದವರೆಲ್ಲರೂ ಸ್ಟೇಷನಿನ ಹೊರಗೆ ಗುಂಪುಗುಂಪಾಗಿ ಹೋಗಲಿಕ್ಕೆ ಪ್ರಾರಂಭಿಸಿದರು.

“ರೆವಿನ್ಯು ಮೆಂಬರರೇನೋ ಬರಲಿಲ್ಲ. ಆದರೆ ರೈಲು ಬಂಡಿಯ ಯಾವುದೋ ಒಂದು ಎಡೆಯಿಂದ ಒಂದು ಮೃದುವಾದ ಸ್ವರ ಕೂಲಿಯನ್ನು ಪದೇಪದೇ ಕರೆಯುವುದು ಆ ಗಲಭೆಯಲ್ಲಿ ಕೇಳಿಬಂತು. ಕೂಲಿ ಆಳುಗಳಲ್ಲಿ ಹೆಚ್ಚಿನವರು ರೆವಿನ್ಯು ಮೆಂಬರರ ಸಾಮಾನನ್ನು ಒಯ್ಯಲಿಕ್ಕೆ ಸಿದ್ಧರಾಗಿದ್ಧವರು. ಇಬ್ಬರು ಕೂಲಿಗಳು ಅವರು ಬಾರದೆ ಇದ್ದುದನ್ನು ನೋಡಿ ಖಿನ್ನಮನಸ್ಕರಾಗಿದ್ದರು. ಅವರಲ್ಲಿ ಒಬ್ಬನು ಆ ಧ್ವನಿಯನ್ನು ಕೇಳುತ್ತಲೇ ನೀರಿನಲ್ಲಿ ಮುಳುಗಿ ಸಾಯಲಿಕ್ಕಾದ ಮನುಷ್ಯನು ಒಂದು ಹುಲ್ಲುಕಡ್ಡಿಯನ್ನು ಕೂಡ ಹಿಡಿಯಲಿಕ್ಕೆ ಹೋಗುವಂತೆ ಆ ಧ್ವನಿ ಹೊರಟಿದ್ದ ಕಂಪಾರ್ಟುಮೆಂಟಿಗೆ ಓಡಿ ಹೋದನು.

ದೊಡ್ಡದಾದ ಆ ಇಡೀ ಕಂಪಾರ್ಟುಮೆಂಟಿನಲ್ಲಿ ಏಳು ವರ್ಷದ ಕೋಮಲವಾದ ಬಾಲಿಕೆಯೊಬ್ಬಳು ಒಂದು ಸಣ್ಣ ಪೆಟ್ಟಿಗೆಯ ಹತ್ತಿರ ಚಡಪಡಿಸುತ್ತಾ ನಿಂತಿದ್ದಳು.

ಕೂಲಿಯಾಳುಗಳನ್ನು ನೋಡಿದ ಕೂಡಲೇ ಬಾಲಿಕೆ ಹಸನ್ಮುಖಿಯಾದಳು. ‘ನೋಡು, ಸಣ್ಣ ಪೆಟ್ಟಿಗೆ, ಹಗುರವೂ ಉಂಟು. ನೀನು ಬಂದುದು ಒಳ್ಳೇದಾಯಿತು. ಯಾರೂ ಬರಲಿಕ್ಕಿಲ್ಲವೆಂದು ತಿಳಿದಿದ್ದೆನು. ಎಷ್ಟು ಜನರು! ಅಮ್ಮ ಕೂಲಿ ಆಳಿಗೆ ಕೊಡಬೇಕೆಂದು ಒಂದಾಣೆ ಪಾವಲಿ ಕೊಟ್ಟಿದ್ದಾರೆ. ಇದೋ ನೋಡು’ ಎಂದು ಹೇಳಿದಳು.

ಏಳು ವರ್ಷದ ಹುಡುಗಿ ಮತ್ತು ಒಂದು ಸಣ್ಣ ಪೆಟ್ಟಿಗೆ ಹತ್ತಿರ ದೊಡ್ಡವರ್ಯಾರೂ ಇರಲಿಲ್ಲ. ಇದನ್ನು ನೋಡಿ ಆ ಟೊಣಪನಿಗೆ ಆಶ್ಚರ್ಯವಾಯಿತು. ಆಶ್ಚರ್ಯದಿಂದ ತನ್ನ ತಲೆಯನ್ನು ತುರಿಸಿಕೊಳ್ಳಲಾರಂಭಿಸಿದನು.
‘ಎಲ್ಲಿಂದ ಬರುವುದಮ್ಮಾ?’ ಎಂದು ಕೇಳಿದನು.
‘ಕಾಸರಗೋಡಿನಿಂದ’ ಎಂದು ಹುಡುಗಿ ಉತ್ತರಕೊಟ್ಟಳು.
‘ನಿಮ್ಮ ಸಂಗಡ ದೊಡ್ಡವರ್ಯಾರೂ ಇಲ್ಲವೇ?’

‘ಇಲ್ಲ, ಯಾಕೆ? ಅಮ್ಮ ಕಾಸರಗೋಡು ಸ್ಟೇಶನಿನಲ್ಲಿ ನನ್ನನ್ನು ರೈಲುಬಂಡಿಯಲ್ಲಿ ಕುಳ್ಳಿರಿಸುವಂತೆ ಮಾಡಿದರು. ಭಯವೇನೂ ಇಲ್ಲವೆಂದು ಹೇಳಿದರು. ನಾನು ಮಂಗಳೂರಿಗೆ ಈ ಮೊದಲು ಅನೇಕ ಸಾರಿ … ಅಪ್ಪ … ಅಪ್ಪನೊಂದಿಗೆ ಬಂದಿದ್ದೇನೆ.”

ಟೊಣಪನು – ಅವನ ಹೆಸರು ಸೋಮನೆಂದಾಗಿದ್ದಿರಬಹುದು ಅಥವಾ ದೂಮನೆಂದಾಗಿದ್ದಿರಬಹುದು, ಆದರೆ ಟೊಣಪನೆಂಬ ಹೆಸರು ಅವನಿಗೆ ಚೆನ್ನಾಗಿ ಒಪ್ಪುತ್ತಿತ್ತು. ಹುಡುಗಿಯ ಪೆಟ್ಟಿಗೆಯನ್ನು ಕಂಪಾರ್ಟುಮೆಂಟಿನಿಂದ ಕೆಳಗೆ ತಂದಿಟ್ಟಿದ್ದನು.

“ನಿನಗೆ ಅಪ್ಪನಿರುವನೇ?” ಎಂದು ಹುಡುಗಿ ಕೇಳಿದ ಪ್ರಶ್ನೆಗೆ ದಿಗಿಲುಬಿದ್ದನು. “ಇಲ್ಲ ಯಾಕೆ?” ಎಂದು ಕೇಳಿದನು.

“ಹೀಗೆಯೇ ನನ್ನ …. ಅಪ್ಪ …. ಇವತ್ತು ….. ತೀರಿಹೋದರು …. ನನಗೆ ಅಳು … ಬರುತ್ತದೆ.”

ಇದನ್ನು ಕೇಳಿದಕೂಡಲೇ ಆ ಟೊಣಪನ ಕಲ್ಲೆದೆಯಲ್ಲಿ, ಏನೋ ಫಕ್ಕನೆ ಚಲಿಸಿದಂತೆ ತೋರಿತು. ಅವನ ಗಂಟಲೊಳಗೆ ಫಕ್ಕನೆ ಏನೋ ಒಂದು ಗುಳ್ಳೆ ಬಂದಂತಾಯಿತು. ಏನು ಹೇಳಬೇಕೆಂದು ತೋರದೆ ಬಾಯಿ ತೆರೆದು ಹುಡುಗಿಯನ್ನು ನೋಡುತ್ತಾ ನಿಂತನು.

‘ಅಮ್ಮ, ನೀವು ಹೋಗುವುದಾದರೂ ಯಾರಲ್ಲಿಗೆ?’ ಎಂದು ಕಟ್ಟಕಡೆಗೆ ಕೇಳಿದನು.

‘ನನ್ನ ಸೋದರಮಾವನಾದ ಸರ್ವೋತ್ತಮ ನಾಯಕರಲ್ಲಿಗೆ’

‘ನೀವು ಈಗ ಬರುತ್ತೀರೆಂದು ಅವರಿಗೆ ಗೊತ್ತಿಲ್ಲವೆ?’

‘ಇಲ್ಲವೆಂದು ಕಾಣುತ್ತದೆ. ಅಮ್ಮ ನನಗೆ ಅಳಬಾರದೆಂದು ಹೇಳುತ್ತಿದ್ದರು. ಆದರೆ ಅವರು ಅಳುತ್ತಲೇ ಇದ್ದರು. ನನ್ನನ್ನು ರೈಲುಬಂಡಿಯಲ್ಲಿ ಕುಳ್ಳಿರಿಸುವಾಗ್ಗೆ.
‘ನೀನು ಮಂಗಳೂರಿನಲ್ಲಿರುವ ನಿನ್ನ ಸೋದರಮಾವನಾದ ಸರ್ವೋತ್ತಮ ನಾಯಕರಲ್ಲಿಗೆ ಹೋಗು’ ಎಂದರು. ನಾನು ಯಾರ ಸಂಗಡ ಹೋಗಲಿ ಎಂದು ಕೇಳಿದೆ. ಮಂಗಳೂರು ಸ್ಟೇಷನ್ನಿನಲ್ಲಿ ಯಾರಾದರೂ ಪುಣ್ಯಾತ್ಮರು ನಿನ್ನನು ಅವರಿದ್ದಲ್ಲಿಗೆ ಕರಕೊಂಡು ಹೋಗುವರು’ ಎಂದರು…. ನೀನು ಒಬ್ಬ ಪುಣ್ಯಾತ್ಮನೇ?’

‘ನನಗೆ ಗೊತ್ತಿಲ್ಲಮ್ಮಾ!’

‘ಹಾಗಾದರೆ ನೀನು ನನ್ನನ್ನು ನನ್ನ ಸೋದರ ಮಾವನಿದ್ದಲ್ಲಿಗೆ ಕರಕೊಂಡು ಹೋಗಲಾರೆಯಾ?’

ಟೊಣಪನು, ‘ಅಮ್ಮ ನಾನವರನ್ನು ಇದುವರೆಗೆ ನೋಡಿದ್ದಿಲ್ಲವಲ್ಲ!’ ಎಂದು ಹೇಳಿ ಆ ಬಾಲಿಕೆಯ ಪೆಟ್ಟಿಗೆಯನ್ನು ಒಂದು ಕೈಯಿಂದ ತನ್ನ ಹೆಗಲ ಮೇಲಿಟ್ಟು, ಇನ್ನೊಂದು ಕೈಯಿಂದ ಅವಳ ಕೈಯನ್ನು ಹಿಡಿದುಕೊಂಡು ಸ್ಟೇಶನ್ನಿನ ಹೊರಗೆ ಬಂದನು.

‘ಸಾಹುಕಾರ ಸವೋತ್ತಮ ನಾಯಕರಲ್ಲಿ ನೆಟ್ಟಗೆ ಹೋಗು’ ಎಂದು ಗಾಡಿಯವನಿಗೆ ಹೇಳಿದನು.

“ಅತ್ತ ಸರ್ವೋತ್ತಮನಾಯಕ (ನಾಗಣ್ಣ ಮುಂದುರಿಸಿದನು) ಸರಿಯಾಗಿ ತನ್ನ ಭಂಡ ಸಾಲೆಯ ಬಾಗಿಲನ್ನು ಎಂದಿನಂತೆ ತೆರೆದಿದ್ದನು. ಕೂಡಲೇ ಎಂದಿನಂತೆ ನೂರಾರು ಬಡಜನರು ಅವನ ಭಂಡಸಾಲೆಯನ್ನು ಮುತ್ತಿಗೆ ಹಾಕಿದರು. ಇಂದು ಸರ್ವೋತ್ತಮ ನಾಯಕನ ಮನಸ್ಸಿನಲ್ಲಿ ಸುಖವಿರಲಿಲ್ಲ. ಸರಕಾರದವರು ಅಕ್ಕಿಯ ಧಾರಣೆಯನ್ನು ತಗ್ಗಿಸಬೇಕೆಂದು ತನ್ನನ್ನು ಬಲಾತ್ಕರಿಸುವವರೆಗೆ ತಾನು ಅಕ್ಕಿಯ ಧಾರಣೆಯನ್ನು ತಗ್ಗಿಸಲಿಕ್ಕಿಲ್ಲವೆಂದು ಅವನು ನಿಶ್ಚೈಸಿದ್ದನು. ಆದರೆ ಇಂದು ಪ್ರಾತಃಕಾಲದ ರೈಲು ಬಂಡಿಯಲ್ಲಿ ಮದ್ರಾಸಿನ ರೆವಿನ್ಯು ಮೆಂಬರು ಇಲ್ಲಿಯ ಅಕ್ಕಿಯ ಧಾರಣೆಯ ವಿಚಾರಕ್ಕಾಗಿ ಬರುವರೆಂದು ಅವನು ತಿಳಿದಿದ್ದನು. ಅವರು ಬಂದು ಏನೆಲ್ಲ ಮಾಡುವರೋ, ಅಕ್ಕಿಯ ಧಾರಣೆಗೆ ಜನರು ಕೇಳುವಂತೆ ಸರಕಾರಿ ನಿರ್ಬಂಧವಿರುವಂತೆ ಮಾಡಿಬಿಡುತ್ತಾರೋ ಎಂಬ ಭೀತಿ ಅವನ ಎದೆಗೆ ಅಂಟಿಕೊಂಡಿತ್ತು. ಅಷ್ಟು ಮಾತ್ರವಲ್ಲ. ಅವನ ಭಂಡಸಾಲೆಯನ್ನು ಮುತ್ತಿದ್ದ ಜನರ ಗಲಾಟೆಯು ವಿಪರೀತವಾಗುತ್ತ ಬಂತು.

ಬರಗಾಲದ ಘೋರ ಪರಿಣಾಮ ಬಡವರಾದ ನಮ್ಮ ಮೇಲೆ ಯಥೇಷ್ಟವಾಗಿ ಬಂದಿಳಿಯಿತು. ಊರಿನ ಒಬ್ಬಿಬ್ಬರು, ಉದಾರ ಮನಸ್ಸಿನವರು, ಲೋಕೋಪಕಾರಿಗಳು ಅಲ್ಲಲ್ಲಿ ಧರ್ಮಸಹಾಯದ ಠಾಣ್ಯಗಳನ್ನು ಸ್ಥಾಪಿಸುವುದಕ್ಕೆ ಬಹಳವಾಗಿ ಪ್ರಯತ್ನಪಟ್ಟರು. ಆದರೆ ಸಾಹುಕಾರರ ಸಹಕಾರವಿಲ್ಲದೆ ಅವರ ಈ ಪ್ರಯತ್ನಗಳೇ ಹೆಚ್ಚಿನ ಮಟ್ಟಿಗೆ ನಿಷ್ಪಲವಾದುವು.

ಹೆಂಗಸರು ಮತ್ತು ಮಕ್ಕಳು ಗೋಳಿಡಲಾರಂಭಿಸಿದರು. ಯುವಕರು ಭಂಡಸಾಲೆಯನ್ನು ಸುಲಿಗೆ ಮಾಡುವೆವೆಂದು ಬೆದರಿಸಲಾರಂಭಿಸಿದರು. ಮುದುಕರು ನಾಯಕನನ್ನು ಬಾಯಿ ತುಂಬ ಶಪಿಸತೊಡಗಿದರು. ಮೊನ್ನೆ ತಾನೆ ನಾಯಕನ ಸ್ನೇಹಿತನಾದ ರಾಮ ಮಲ್ಯರ ಭಂಡಸಾಲೆಯನ್ನು ಮಾಪಿಳ್ಳೆಯವರು ಸುಲಿಗೆ ಮಾಡಿದ್ದರು. ರಾಮ ಮಲ್ಯರ ಅಕ್ಕಿಗೆ ಪ್ರಾಪ್ತವಾದ ಗತಿಯೇ ತನ್ನ ಅಕ್ಕಿಗೂ ಪ್ರಾಪ್ತವಾಗುವುದೋ ಎಂಬ ಭೀತಿಯೂ ಸರ್ವೋತ್ತಮ ನಾಯಕನನ್ನು ಆವರಿಸಿಕೊಂಡಿತು. ತನ್ನ ಮುಂದಿರುವ ಜನರ ವರ್ತನೆಯನ್ನು ನೋಡಿ ಕೋಪದಿಂದ ಕಿಡಿಕಿಡಿಯಾದನು. ‘ನಿಮಗೆ ಅಕ್ಕಿ ಬೇಕಾದರೆ ಕ್ರಯಕೊಟ್ಟು ತಕ್ಕೊಳ್ಳಿ. ಇಲ್ಲವಾದರೆ ಇಲ್ಲಿಂದ ಹೋಗಿ, ಗಲಾಟೆಯನ್ನೆಬ್ಬಿಸಿದರೆ ಪೋಲೀಸರನ್ನು ಕರೆಯುವೆನು!’ ಎಂದು ಕೂಗಿ ಹೇಳಿದನು. ಇದನ್ನು ಕೇಳಿ ಕಲಹಪ್ರಿಯನಾದ ಒಬ್ಬ ಪುಂಡ ಯುವಕನು, ‘ಪೋಲೀಸರನ್ನೋ? ಬೇಗನೇ ಕರೆಯಿರಿ! ಬಂದಿಖಾನೆಯಲ್ಲಾದರೂ ನಮಗೊಂದಿಷ್ಟು ಅನ್ನ ಸಿಕ್ಕೀತು’ ಎಂದನು. ಇದನ್ನು ಕೇಳುತ್ತಲೇ ಅಲ್ಲಿದ್ದ ಕೆಲವರು ಗಟ್ಟಿಯಾಗಿ ನಕ್ಕುಬಿಟ್ಟರು. ‘ಪೋಲೀಸರನ್ನು ಕರೆಯುವಿರೇ? ಬೇಗನೇ ಕರೆದುಬಿಡಿ! ಈಗಲೇ ಕರೆದುಬಿಡಿ!’ ಎಂಬ ಬೊಬ್ಬೆ ಹರಡಲಾರಂಭಿಸಿತು.

ಗಲಾಟೆ ಹೆಚ್ಚಾಗುತ್ತಾ ಬಂತು. ಭಂಡಸಾಲೆಯ ಬಾಗಿಲನ್ನು ಇನ್ನು ತೆರೆದಿರುವುದು ವಿಹಿತವಲ್ಲವೆಂದು ನಾಯಕನು ತಿಳಿದುಕೊಂಡನು. ಕೋಪದಿಂದ ಕೆಂಪಗಾದನು. ಭಯದಿಂದ ಬಿಳುಪೇರಿದನು. ಆದದ್ದಾಗುತ್ತದೆ. ಆದರೆ ತನ್ನ ಪ್ರತಿಜ್ಞೆಯನ್ನು ಹಿಂತೆಗೆಯೆನು ಎಂದು ತನ್ನೊಳಗೆ ಹೇಳುತ್ತಾ ಭಂಡಸಾಲೆಯನ್ನು ಮುಚ್ಚಲಿಕ್ಕೆ ತನ್ನ ಆಳಿಗೆ ಆಜ್ಞೆ ಕೊಟ್ಟನು. ಭಂಡಸಾಲೆಯ ಬಾಗಿಲು ಹಾಕುವಾಗಲೆಲ್ಲ ಅಲ್ಲಿ ಕೂಡಿದ್ದ ಜನರು ಹಾಸ್ಯ ಮಾಡತೊಡಗಿದರು. ಗೊಳ್ಳೆಂದು ನೆಗಾಡಿದರು. ಭಂಡಸಾಲೆಯನ್ನು ಸುಲಿಗೆ ಮಾಡುವೆವು ಎಂದು ನಾಯಕನನ್ನು ಮೊದಲು ಬೆದರಿಸಿದವರು ಈಗ ಅವನನ್ನು ನೋಡಿ, ‘ಸ್ವಾಮಿ ಸರ್ವೋತ್ತಮನಾಯಕರೇ, ನೀವು ನಮಗೆ ಹೆದರಿ ಭಂಡಸಾಲೆಯ ಬಾಗಿಲನ್ನು ಮುಚ್ಚಬೇಕೆಂತಿಲ್ಲ. ನಾವೇನು ನಿಮ್ಮ ಅನ್ನವನ್ನು ತೆಗೆಯಲಿಕ್ಕೆ ಬಂದವರಲ್ಲ!’ ಎಂದು ಹಾಸ್ಯಮಾಡಿದರು.

ನಾಯಕನು ಮನಸ್ಸಿನೊಳಗೇ ರೇಗಿಕೊಂಡನು. ಏನು ಮಾಡಬೇಕೆಂದು ಅವನಿಗೆ ತಿಳಿಯಲಿಲ್ಲ. ಭಂಡಸಾಲೆಯ ಬಾಗಿಲನ್ನು ಮುಚ್ಚಿಯೇಬಿಟ್ಟನು. ಕೋಪದಿಂದ ಕಂಪಿಸುತ್ತಾ ತನ್ನ ಮನೆಗಾಗಿ ಹೊರಟನು. ಆದರೆ ಊಟಕ್ಕಿಲ್ಲದೆ ಹತಾಶರಾದ ಆ ಜನರು ಅವನನ್ನು ಬಿಡುವರೇ? ಕೂಡಲೇ ಅಲ್ಲಿಂದ ಗುಂಪುಗುಂಪಾಗಿ ಅವನ ಹಿಂದೆಯೇ ಹೋದರು. ಅವನ ಭಂಡಸಾಲೆಯನ್ನು ಮೊದಲು ಮುತ್ತಿಗೆ ಹಾಕಿದವರು ಈಗ ಅವನ ಮನೆಯನ್ನೇ ಮುತ್ತಿಗೆ ಹಾಕಿದರು.

ಕೊಂಚ ಸಮಯದಲ್ಲೇ ಅವನು ತನ್ನ ಕೋಣೆಯಲ್ಲಿ ಪಂಜರದಲ್ಲಿ ಹಾಕಿದ ಸಿಂಹದಂತಾದನು. ಹೊರಗಿನಿಂದ ಜನರ ಗದ್ದಲ ಅವನ ಕಿವಿಯಲ್ಲಿ ಬೀಳುತ್ತಲೇ ಇತ್ತು. ಒಂದು ಸಲ ಹೆಂಗಸರ ಗೋಳು, ಮತ್ತೊಂದು ಸಲ ಮಕ್ಕಳ ಕೂಗು, ಇನ್ನೊಂದು ಸಲ ಮುದುಕರ ಕರ್ಕಶವಾದ ಧ್ವನಿ, ಮಗದೊಂದು ಸಲ ಹರೆಯದವರ ಹಾಸ್ಯ ಇವುಗಳೆಲ್ಲ ಆಗಾಗ್ಗೆ ಅವನ ಲಕ್ಷ್ಯವನ್ನು ಎಳೆಯುತ್ತಲೇ ಇದ್ದುವು. ಸರ್ವೋತ್ತಮ ನಾಯಕ ಬೇರೊಬ್ಬನಾಗಿದ್ದರೆ ಅವನ ಮನಸ್ಸು ಆಗಲೇ ಕರಗಿ ತನ್ನ ಒಂದು ಮಾತಿನಿಂದ ಅಲ್ಲಿ ಕೂಡಿದವರೆಲ್ಲರ ಮನಸ್ಸನ್ನು ಸಂತೋಷಪಡಿಸಿ ಅವರನ್ನು ಆಗಲೇ ಕಳುಹಿಸಿಬಿಡುತ್ತಿದ್ದನು. ಆದರೆ ಸರ್ವೋತ್ತಮ ನಾಯಕ ಸರ್ವೋತ್ತಮ ನಾಯಕನೇ. ಹಟವಾದಿ, ಕಲ್ಲೆದೆಯವ, ಕೋಪಿಷ್ಠ. ತಾನಿದ್ದೆಡೆಗೆ ಬರಲಿಕ್ಕೆ ಯಾರನ್ನೂ ಬಿಡಬಾರದೆಂದು ತನ್ನ ಆಳಿಗೆ ಆಜ್ಞಾಪಿಸಿ, ಅವನನ್ನು ತನ್ನ ಕೋಣೆಯ ಬಾಗಲಿನಲ್ಲಿ ಕಾವಲಾಗಿ ಕುಳ್ಳಿರಿಸಿದನು.

“ಅಷ್ಟರೊಳಗೆ ತನ್ನ ಮನೆಯ ಮುಂದೆ ಗಾಡಿ ಬಂದು ನಿಂತ ಶಬ್ದವನ್ನು ಕೇಳಿದನು. ಕೊಂಚ ಸಮಯದಲ್ಲಿಯೇ ಅವನ ಕೋಣೆಯ ಬಾಗಿಲು ತೆರೆಯಲ್ಪಟ್ಟಿತು. ಸರ್ವೋತ್ತಮ ನಾಯಕ ಕೋಪದಿಂದ ತನ್ನ ಕುರ್ಚಿಯಿಂದೆದ್ದು ಬಾಗಿಲಿನ ಕಡೆಗೆ ನೋಡಿದನು. ಏಳು ವರ್ಷದ ಕೋಮಲವಾದ ಬಾಲಿಕೆ ಅವನ ಕಣ್ಣಿಗೆ ಬಿದ್ದಳು. ದೊಡ್ಡವರು ಯಾರೇ ಆಗಿದ್ದರೂ ನಾಯಕನು ಕೂಡಲೇ ಅವರ ಮೇಲೆ ರೇಗಿ ಹಾಯಲಿಕ್ಕೆ ಹೋಗುತ್ತಿದ್ದನೆಂಬುದರಲ್ಲಿ ಸಂಶಯವಿಲ್ಲ. ಆದರೆ ಬಂದವಳು ಬರೇ ಒಬ್ಬಳು ಹುಡುಗಿ. ಅವಳನ್ನು ನೋಡಿ ಅವನ ಕೋಪ ತಾತ್ಸಾರ ರೂಪವಾಗಿ ಮಾರ್ಪಟ್ಟಿತು.

“ಯಾರೇ ನೀನು?” ಎಂದು ಅವಳನ್ನು ಕೇಳಿದನು. ಅವನ ಸ್ವರವನ್ನು ಕೇಳಿ ಹುಡುಗಿ ಬಾಗಿಲಿನಲ್ಲೇ ನಿಂತುಬಿಟ್ಟಳು.

‘ನಾನು ಕಮಲೆ.’

‘ನೀನಿಲ್ಲಿ ಬಂದದ್ದು ಯಾಕೆ?’

‘ನನಗೆ ಗೊತ್ತಿಲ್ಲ. ನನಗಿಲ್ಲಿ ಬರಲಿಕ್ಕೆ ಮನಸ್ಸು ಇರಲಿಲ್ಲ. ಆದರೆ ಅಮ್ಮ ಒತ್ತಾಯ ಮಾಡಿ ನನ್ನನ್ನು ಕಳುಹಿಸಿದರು. ಅಮ್ಮನನ್ನು ಬಿಟ್ಟು ಬಂದುದಕ್ಕೆ ನನಗೆ ಈಗ ಅಳು ಬರುತ್ತಿದೆ… ನಾನು ಇಲ್ಲೇ ನಿಲ್ಲಬೇಕೆಂದು ಅಮ್ಮ ಹೇಳಿದ್ದಾರೆ.’

‘ಇಲ್ಲೇ ನಿಲ್ಲಬೇಕೆಂದು! ಇದೇನು ಛತ್ರವೆಂದು ನಿನ್ನ ಅಮ್ಮ ತಿಳಿದುಕೊಂಡಿದ್ದಾಳೋ?’

‘ನನಗೆ ಗೊತ್ತಿಲ್ಲ… ಅಪ್ಪ… ಇಂದು…. ಬೆಳಿಗ್ಗೆ ತೀರಿಹೋದರು….’
ಇದನ್ನು ಕೇಳಿ ಸರ್ವೋತ್ತಮ ನಾಯಕ ಒಂದು ಕ್ಷಣಕ್ಕೆ ಸುಮ್ಮನಾದನು.

‘ನಿನ್ನಪ್ಪ ತೀರಿ ಹೋದರೆ ನಿನ್ನಮ್ಮ ನಿನ್ನನ್ನು ಇಲ್ಲಿಗೆ ಕಳುಹಿಸಬೇಕೆ?’

‘ನಾನು ಇಲ್ಲಿಯೇ ನಿಲ್ಲಬೇಕೆಂದು ಅಮ್ಮ ನನ್ನನ್ನು ಕಳುಹಿಸಿದ್ದಾರೆಂದು ಹೇಳಿದ್ದೇನಲ್ಲವೇ?’

‘ನಿನ್ನ ಅಮ್ಮ ಭಲಾ ಹೆಂಗಸು! ಛತ್ರ – ಅಲ್ಲ ತಪ್ಪಾಯಿತು – ಅನಾಥಾಲಯವೆಂದು ನಿಮ್ಮ ಅಮ್ಮ ತಿಳಿದುಕೊಂಡಿರುವಂತೆ ಕಾಣುತ್ತದೆ. ಇರಲಿ, ನೀನು ಇಲ್ಲಿಂದ ಬಂದ ಹಾಗೆ ಹೋಗಿ, ಇದೊಂದು ಛತ್ರವಲ್ಲ, ಮುಸಾಫರ್ ಖಾನೆಯೂ ಅಲ್ಲವೆಂದು ನಿನ್ನ ಅಮ್ಮನ ಕೂಡೆ ಹೇಳು; ಹೋಗು!’

“ಕಮಲೆಯ ಕಣ್ಣುಗಳಲ್ಲಿ ನೀರು ತುಂಬಿತು. ತನ್ನಲ್ಲಿ ಉಕ್ಕಿ ಉಕ್ಕಿ ಬರುವ ಅಳುವನ್ನು ನಿಲ್ಲಿಸಲಿಕ್ಕೆ ಶತಪ್ರಯತ್ನಗಳನ್ನು ಮಾಡಿದಳು. ಗದ್ಗದ ಕಂಠದಿಂದ ನಾಯಕನನ್ನು ‘ಮಾವಯ್ಯ!’ ಎಂದು ಕರೆದಳು. ಇದನ್ನುಕೇಳಿ ಸರ್ವೋತ್ತಮನಾಯಕ ಬೆಚ್ಚಿಬಿದ್ದನು. ‘ಮಾವಯ್ಯಾ! ನಾನು ನಿನ್ನ ಮಾವಯ್ಯಾ! ನಾನು ನಿನ್ನನ್ನು ಇದುವರೆಗೆ ನೋಡಲಿಲ್ಲವಲ್ಲ!’

‘ಮಾವಯ್ಯಾ, ನಾನೂ ನಿಮ್ಮನ್ನು ಇದುವರೆಗೆ ನೋಡಲಿಲ್ಲ!’

‘ಹಾಗಾದರೆ ನಾನು ನಿನ್ನ ಮಾವಯ್ಯನೆಂದು ನಿನಗೆ ಯಾರು ಹೇಳಿದರು?’

‘ನನ್ನ ಅಮ್ಮ ಹೇಳಿದರು.’

ಹುಡುಗಿ ಏನೋ ತನ್ನನ್ನು ಮಾವನೆಂದು ಕರೆಯುತ್ತಿರುವಳು. ಅದರಿಂದೇನು? ಪಾಪ, ತನ್ನನ್ನು ಬೇಕಾದ ಹಾಗೆ ಕರೆಯಲಿ ಎಂದು ಸರ್ವೋತ್ತಮ ನಾಯಕ ತಿಳಿದುಕೊಂಡನು. ಆದರೂ ಅವಳನ್ನು ತನ್ನ ಮನೆಯಲ್ಲಿಟ್ಟುಕೊಂಡು ಸಾಕಿ ಸಲಹುವ ಆಲೋಚನೆಯನ್ನು ಅವನು ಕ್ಷಣಮಾತ್ರಕ್ಕೂ ಮಾಡಲಿಲ್ಲ. ಅವಳನ್ನು ಆ ದಿನದ ಸಂಜೆಯ ‘ಶಟ್ಲಿ’ನಲ್ಲೇ ಕಾಸರಗೋಡಿಗೆ ಕಳುಹಿಸಬೇಕೆಂದು ನಿರ್ಧರಿಸಿದನು. ಅವಳನ್ನು ಒಳಗೆ ಕರಕೊಂಡು ಹೋಗಿ ಅವಳಿಗೆ ಅನ್ನ ಬಡಿಸುವಂತೆ ಮಾಡಿ, ಪುನಃ ತನ್ನ ಭೈಠಕ್ ಕೋಣೆಗೆ ಬಂದನು. ಹೊರಗಿನಿಂದ ಆ ಬಡ ಜನರ ಗಲಾಟೆ ಇನ್ನೂ ಅವನಿಗೆ ಕೇಳಿಸುತ್ತಿತ್ತು. ಆದರೆ ಅವರ ಮೇಲಿದ್ದ ಅವನ ಕೋಪವೂ ತಾತ್ಸಾರವೂ ಈಗ ಬಹಳ ಮಟ್ಟಿಗೆ ಕಡಿಮೆಯಾದುವು. ಅವರಲ್ಲೊಬ್ಬರಿಗೆ ಒಂದೊಂದು ಅರ್ಧಪಾವು ಅಕ್ಕಿ ಹಾಕಿ ಅವರನ್ನೆಲ್ಲ ಕಳುಹಿಸಿಬಿಡಲೇ ಎಂದು ಆಲೋಚಿಸಿದನು. ಆದರೆ ಅವರ ಗೋಳು ಭಿಕ್ಷೆಯನ್ನೆತ್ತುವುದಕ್ಕಲ್ಲ, ಅಕ್ಕಿಯ ಧಾರಣೆಯನ್ನು ಕಡಿಮೆ ಮಾಡುವುದಕ್ಕೆ ಎಂದು ಅವನು ಚೆನ್ನಾಗಿ ತಿಳಿದಿದ್ದನು. ಅದು ಅವನ ನೆನಪಿಗೆ ಬರುತ್ತಲೆ ಮೆಲ್ಲಮೆಲ್ಲನೆ ದ್ರವಿಸುತ್ತಿರುವ ಅವನ ಹೃದಯ ಪುನಃ ಗಟ್ಟಿಯಾಗಲಿಕ್ಕೆ ಪ್ರಾರಂಭಿಸಿತು. ಕೂಡಲೇ ಅವರಿಗೆ ಭಿಕ್ಷೆ ಹಾಕುವ ಆಲೋಚನೆಯನ್ನು ಕೂಡ ದೂರಮಾಡಿದನು. ಪುನಃ ತನ್ನ ಲೆಕ್ಕಾಚಾರದ ಪುಸ್ತಕಗಳನ್ನು ತೆಗೆದುಕೊಂಡು ತನ್ನ ಲಾಭ – ನಷ್ಟದ ಲೆಕ್ಕ ಹಾಕುವುದರಲ್ಲಿ ಮಗ್ನನಾದನು.

ಅಷ್ಟರೊಳಗೆ ಕಮಲೆ ಊಟಮಾಡಿಕೊಂಡು ಅವನಿದ್ದೆಡೆಗೆ ಪುನಃ ಬಂದಳು. ತನ್ನ ಪೆಟ್ಟಿಗೆಯ ಬಾಗಿಲನ್ನು ತೆರೆದು ಒಂದು ಪುಸ್ತಕವನ್ನು ಹೊರಗೆ ತೆಗೆದಳು.

‘ಮಾವಯ್ಯ ಈ ಪುಸ್ತಕವನ್ನು ನೋಡಿದಿರಾ?’

‘ಇಲ್ಲ ಮತ್ತೆ ನೋಡುವೆನು. ಈಗ ನನಗೆ ಕೆಲಸ ಉಂಟು’ ಎಂದು ನಾಯಕನು ತಲೆಯನ್ನು ಕೂಡ ಎತ್ತದೆ ಹೇಳಿದನು.
ಕಮಲೆ ಪುಸ್ತಕವನ್ನು ತೆಗೆದುಕೊಂಡು ಅವನ ಹತ್ತಿರ ಹೋದಳು.

‘ಮಾವಯ್ಯ, ನೋಡಿ ಅಮ್ಮ ಇದನ್ನು ನನಗೆ ಕಲಿಸುತ್ತಿದ್ದರು. ಇದು ನಿಮ್ಮ ಪುಸ್ತಕವಂತೆ… ನೀವು ಅಮ್ಮನೂ ಒಟ್ಟುಗೂಡಿ ಕಲಿತ ಪುಸ್ತಕವಂತೆ …’

ಕಮಲೆಯ ಈ ಮಾತು ಅವನ ಮನಸ್ಸನ್ನು ಅವಳು ಹಿಡಿದಿದ್ದ ಪುಸ್ತಕದ ಕಡೆಗೆ ಸೆಳೆಯಿತು. ಪುಸ್ತಕವನ್ನು ನೋಡಿದನು. ಬಹಳ ಹಳೆದಾದ ಪುಸ್ತಕವಾಗಿತ್ತು. ಕುರ್ಚಿಯಿಂದ ತಟಕ್ಕನೇ ಎದ್ದನು.

‘ಏನು, ಏನು? ನೀನು ಹೇಳಿದ್ದೇನು?’ ಎಂದು ತವಕದಿಂದ ಕೇಳಿದನು.

ಕಮಲೆ ಕೂಡಲೇ ನೆಲದ ಮೇಲೆ ಕೂತುಕೊಂಡು ಪುಸ್ತಕದ ಹಾಳೆಗಳನ್ನು ಮಗುಚಿದಳು. ನಾಯಕನು ಅವಳ ಹಿಂದೆಯೇ ಬಗ್ಗಿಕೊಂಡು ನಿಂತು ಅವಳ ತಲೆಯ ಮೇಲಿನಿಂದ ಪುಸ್ತಕವನ್ನು ನೋಡಿದನು.

‘ನೋಡಿ ಮಾವಯ್ಯ, ಇದು ನೀವು ಬರೆದ ನಿಮ್ಮ ಹೆಸರೆಂದು ಅಮ್ಮ ಹೇಳುತ್ತಿದ್ದರು. ನೋಡಿ, ಇದರ ಕೆಳಗೇನೇ ಅಮ್ಮ ಬರೆದ ಅವರ ಹೆಸರು … ಇದು ನೀವು ಮಾಡಿದ ಗುರುತು ಅಂತೆ…’

ನಾಯಕನು ಮೈಮರೆತನು. ಕೂಡಲೇ ಹುಡುಗಿಯಿಂದ ಆ ಪುಸ್ತಕವನ್ನು ಕಿತ್ತುಕೊಂಡು ಅಲುಗಾಡುವ ಬೆರಳುಗಳಿಂದ ಅದರ ಹಾಳೆಗಳನ್ನು ಮಗುಚಿದನು… ಕೂಡಲೇ ಒಂದು ದೊಡ್ಡ ಅರಚನ್ನು ಹಾಕಿ ಪುಸ್ತಕವನ್ನು ಕೆಳಗೆ ಬಿಟ್ಟುಬಿಟ್ಟನು … ಪುಸ್ತಕ ನೆಲದ ಮೇಲೆ ದೊಪ್ಪನೆ ಬಿತ್ತು… ನಾಯಕನು ರೆಪ್ಪೆಗೆ ರೆಪ್ಪೆಯನ್ನು ತಾಗಿಸದೆ ಕಮಲೆಯನ್ನು ದೀರ್ಘ ಸಮಯದವರೆಗೆ ನೋಡಿದನು. ಹತ್ತು ವರ್ಷಗಳ ದಪ್ಪವಾದ ಪದರುಗಳು ಅವನ ಕಣ್ಣುಗಳನ್ನು ಮುಚ್ಚಿದ್ದುವು. ಅವುಗಳೆಲ್ಲ ಈಗ ಫಕ್ಕನೆ, ಒಂದೇ ಸವನೆ ಉದುರಿ ಬಿದ್ದುವು…. ಕಮಲೆ ಕೂತಲ್ಲಿಂದ ಏಳದೆ ನಾಯಕನ ಈ ಭಾವಾಂತರವನ್ನು ನೋಡಿ ಅವನನ್ನು ಆಶ್ಚರ್ಯದಿಂದ ನೋಡುತ್ತಾ ಕೂತುಕೊಂಡಳು…

‘ಕಮಲೆ… ಕಮಲೆ….’ ಎಂದು ನಾಯಕನು ಮೆಲ್ಲ ಮೆಲ್ಲಗೆ ಹೇಳಿದನು.

‘ಏನು ಮಾವಯ್ಯ?’ ಎಂದು ಕಮಲೆ ಕೇಳಿದಳು.

‘ನಾನು… ನಾನು ನಿಜವಾಗಿಯೂ ನಿನ್ನ ಸೋದರಮಾವ.’

‘ನಿನಗೆ ಸಂಶಯವಿತ್ತೇ?… ನಾನು ಮೊದಲೇ ಹೇಳಿಲ್ಲವೇ?’ ಎಂದು ಕಮಲೆ ಹೇಳಿದಳು.

ನಾಯಕನು ಉತ್ತರ ಕೊಡಲಿಲ್ಲ… ಹೊರಗೆ ಜನರ ಗಲಾಟೆ ಇನ್ನೂ ನಿಂತಿರಲಿಲ್ಲ. ಆದರೆ ಅದಕ್ಕೆಲ್ಲ ನಾಯಕನು ಈಗ ಕಿವುಡಾದನು. ಹತ್ತು ವರ್ಷ! ಹತ್ತು ವರ್ಷಗಳ ಕೆಳಗೆ ನಾಯಕನು ಅವನ ತಂಗಿ ರುಕ್ಕುವೂ ಎಂತಹ ಅನ್ಯೋನ್ಯದಲ್ಲಿದ್ದರು! ಹತ್ತು ವರ್ಷಗಳ ಕೆಳಗೆ ಅವನ ತಂಗಿ ರುಕ್ಕು ತನ್ನ ತವರುಮನೆಯಲ್ಲಿ ನಿಲ್ಲಬೇಕೆಂದು ಬಂದಿದ್ದಳು…. ಒಂದು ತಿಂಗಳು ಅಂತ್ಯವಾಗುವಷ್ಟರಲ್ಲಿಯೇ ಯಾವುದೋ ಒಂದು ಚಿಕ್ಕ ಸಂಗತಿ ಅವರೊಳಗೆ ಮನಃಕ್ಲೇಶವನ್ನು ಎಬ್ಬಿಸಿತು. ಸಂಗತಿಯೇನೋ ಅಲ್ಪವಾಗಿತ್ತು. ಆದರೆ ಅದರಿಂದುದ್ಭವಿಸಿದ ಪರಿಣಾಮ ಘೋರವಾಯಿತು. ನಾಯಕನು ತನ್ನ ತಂಗಿಯನ್ನು ತನಗೆ ಜೀವವಿರುವವರೆಗೆ ನೋಡಲಾರೆನೆಂದು ಶಪಥ ಹಾಕಿಕೊಂಡನು. ರುಕ್ಕುವು ತನಗೆ ಪ್ರಾಣವಿರುವವರೆಗೆ ತನ್ನಣ್ಣನ ಮನೆಯಲ್ಲಿ ಕಾಲಿಡಲಾರೆ ಎಂದು ಅಣೆ ಹಾಕಿಕೊಂಡಳು. ಆ ದಿನವೇ ರುಕ್ಕುವು ತವರುಮನೆಯಿಂದ ಗಂಡನ ಮನೆಗೆ ಹೊರಟಿದ್ದಳು!…

ಹತ್ತು ವರ್ಷ! ಹತ್ತು ವರ್ಷಗಳು ಮನುಷ್ಯನ ಜೀವಮಾನದಲ್ಲಿ ಅಲ್ಪವಾದ ಸಮಯವಲ್ಲ! ಆದರೆ ನಾಯಕನು ಹಟವಾದಿ ಎಂದು ನಾನು ಮೊದಲೇ ಹೇಳಲಿಲ್ಲವೇ? ರುಕ್ಕುವು ಅವನ ತಂಗಿ. ಅದರಲ್ಲಿಯೂ ಹೆಂಗಸು. ಅವಳೂ ಹಟವಾದಿಯಾದುದರಲ್ಲಿ ಆಶ್ಚರ್ಯವೇನು? ಈ ಹತ್ತು ವರ್ಷಗಳ ಪರ್ಯಂತವೂ ಅಣ್ಣ – ತಂಗಿಯರು ತಮ್ಮ ತಮ್ಮ ಪ್ರತಿಜ್ಞೆಯನ್ನು ಪಾಲಿಸಿಕೊಂಡೇ ಬಂದಿದ್ದರು. ನಾಯಕನಾದರೊ ಧನವನ್ನು ಶೇಖರಿಸುವುದರಲ್ಲಿ ರುಕ್ಕುವನ್ನು ಕೂಡಲೇ ಮರೆತುಬಿಟ್ಟಿದ್ದನು. ತೀರಾ ಮರೆತುಬಿಟ್ಟಿದ್ದನು. ಈ ಹತ್ತು ವರ್ಷಗಳಲ್ಲಿಯೂ ಅವಳು ಜೀವನದಲ್ಲಿದ್ದಳೋ ಇಲ್ಲವೋ ಎಂಬುದನ್ನು ಕೂಡ ಅವನು ಅರಿಯದಿದ್ದನು. ಈ ಹತ್ತು ವರ್ಷಗಳಲ್ಲಿಯೂ ಅವನ ಹೃದಯದಿಂದ ರುಕ್ಕುವು ತೀರಾ ಮಾಯವಾಗಿ ಹೋಗಿದ್ದಳು.

ಆದರೆ, ಹತ್ತು ವರ್ಷಗಳ ಕೆಳಗೆ! – ಹತ್ತು ವರ್ಷಗಳ ಕೆಳಗೆ ಅವರೊಳಗಿದ್ದ ಮಮತೆ ಅಷ್ಟಿಷ್ಟಾಗಿರಲಿಲ್ಲ! ಕಮಲೆಯ ಕೈಯಲ್ಲಿದ್ದ ಆ ಹಳೇ ಪುಸ್ತಕವೇ ಅವರೊಳಗಿದ್ದ ಮಮತೆಯ ಮೂಕ ಸಾಕ್ಷಿಯಾಗಿತ್ತು… ಪ್ರತಿಜ್ಞೆ…. ಹಾಳಾಗಿ ಹೋಗಲಿ! ರುಕ್ಕು ಸಂಕಷ್ಟದಲ್ಲಿರುವಳು! ಅವಳ ಸರ್ವಸ್ವವಾದ ಅವಳ ಪತಿ ಈಗ ಅವಳ ಕೈಯನ್ನು ಬಿಟ್ಟು ಹೋಗಿರುವನು! ಅವಳೀಗ ಅನಾಥೆಯಾಗಿರುವಳು! ಮರಣದ ಎದುರಿಗೆ ಆ ಹಾಳು ಪ್ರತಿಜ್ಞೆಯೇ? ರುಕ್ಕುವು ಸಂಕಷ್ಟದ ಸಮಯದಲ್ಲಿ ತನ್ನನ್ನು ಮರೆಯಲಿಲ್ಲ! ತನ್ನ ಪ್ರತಿಜ್ಞೆಯನ್ನು ಭಂಗಮಾಡಿಕೊಂಡಳು! ಕಮಲೆಯನ್ನು ಕೂಡಲೇ ತಾನಿದ್ದೆಡೆಗೆ ಕಳುಹಿಸಿದಳು! ತಾನು ಈಗ ಹೇಡಿಯಾಗಬಹುದೆ? ಇದೇ ರೀತಿಯಲ್ಲಿ ನಾಯಕನು ಆಲೋಚಿಸತೊಡಗಿದನು.
ಹೊರಗಿನ ಗಲಾಟೆ ಇನ್ನೂ ನಿಂತಿರಲಿಲ್ಲ. ಕಮಲೆ ಅದನ್ನು ಕೇಳಿ ಸ್ವಲ್ಪ ಬೆದರಿದಳು. ‘ಮಾವಯ್ಯ, ಹೊರಗೆ ಕೂಡಿದ ಜನರು ಯಾರು?’ ಎಂದು ಕೇಳಿದಳು.

‘ಬೇಡುವವರು.’
‘ಇವತ್ತು ಶನಿವಾರ ಅಲ್ಲವಲ್ಲ?’
‘ಅವರಿಗೆ ಎಲ್ಲಾ ದಿನಗಳು ಶನಿವಾರವೇ.’

‘ಅದೇನು ಮಾವಯ್ಯ, ಅವರು ಬಹಳ ಬಡವರೇ? ಪಾಪ ಮಕ್ಕಳು ಹೇಗೆ ಅಳುತ್ತವೆ! ಹಸಿವೆಯಾಗಿದೆಯೋ ಏನೋ…’

ನಾಯಕನು ತನ್ನ ತುಟಿಗಳನ್ನು ಕಚ್ಚಿಕೊಂಡನು. ಕಮಲೆ ತನ್ನ ಕೈಯಲ್ಲಿದ್ದ ಪುಸ್ತಕದ ಹಾಳೆಗಳನ್ನು ಮಗುಚಿದಳು.

‘ಮಾವಯ್ಯ’

‘ಏನು ಮಗು?’

‘ಅಮ್ಮ… ನನ್ನನ್ನು ಇಲ್ಲಿ ಕಳಿಸುವಾಗ್ಗೆ ನನ್ನನ್ನು ಇನ್ನು ನೋಡಲಾರಳೆಂದು ಹೇಳಿದ್ದರು…. ಮಾವಯ್ಯ, ನನಗೆ ಅಳು ಬರುತ್ತದೆ….’

ಇದನ್ನು ಕೇಳಿ ನಾಯಕನು ದಿಗಿಲುಬಿದ್ದನು. ಒಂದು ಘೋರವಾದ ಸಂಶಯ ಅವನ ಮನಸ್ಸಿಗೆ ಹತ್ತಿತು. ಅವನ ದೇಹ ಕಂಪಿಸಲಿಕ್ಕೆ ಪ್ರಾರಂಭಿಸಿತು. ತನ್ನ ಲೆಕ್ಕಚಾರದ ಪುಸ್ತಕವೊಂದರ ಖಾಲಿ ಕಾಗದವೊಂದನ್ನು ಹರಿದು ಅದರಲ್ಲಿ ಅಲುಗಾಡುತ್ತಿರುವ ತನ್ನ ಬೆರಳುಗಳಿಂದ ಏನೋ ಗೀಚಿದನು. ಕೂಡಲೇ ತನ್ನ ಆಳನ್ನು ಕರೆದು ಅವನೊಡನೆ ಆ ಕಾಗದವನ್ನು ಒಂದು ಐದು ರೂಪಾಯಿಯ ನೋಟನ್ನೂ ಕೊಟ್ಟು ಆ ಕ್ಷಣವೇ ಅವನನ್ನು ತಂತೀ ಆಫೀಸಿಗೆ ಕಳುಹಿಸಿದನು.

ತನ್ನ ತಂತಿಗೆ ಜವಾಬು ಬರುವವರೆಗೆ ತಾನು ಊಟ ಮಾಡುವುದಿಲ್ಲವೆಂದು ಒಳಗೆ ಹೇಳಿ ಕಳುಹಿಸಿದನು.

‘ಕಮಲೆ.’

‘ಏನು, ಮಾವಯ್ಯ?’

‘ನಿನಗೆ ಪುಣ್ಯವಿದ್ದರೆ…. .ಪುಣ್ಯವಿದ್ದರೆ…..’ ನಾಯಕನಿಗೆ ಮಾತು ಮುಂದುವರಿಸಲಿಕ್ಕಾಗಲಿಲ್ಲ.

ಹೊರಗಿನಿಂದ ಜನರ ಗಲಾಟೆ ಇನ್ನೂ ಕೇಳಿಬರುತ್ತಿತ್ತು.

“ಎರಡು ತಾಸುಗಳು ಕಳೆದುವು. (ನಾಗಣ್ಣ ಮುಂದುವರಿಸಿದನು) ನಾಯಕನು ಈ ಎರಡು ತಾಸುಗಳವರೆಗೂ ಕುರ್ಚಿಯಲ್ಲಿ ಕದಲದೆ ಕುಳಿತಿದ್ದನು. ಪ್ರತಿ ಒಂದು ಕ್ಷಣ ಬಾಗಿಲಿನ ಕಡೆಗೆ ತವಕದಿಂದ ನೋಡುತ್ತಿದ್ದನು. ಕಮಲೆ ನೆಲದ ಮೇಲೆ ಕುಳಿತುಕೊಂಡು ಗಿಳಿಯಂತೆ ಮಾತಾಡುತ್ತಿದ್ದಳು. ಅವಳ ನಿರ್ಮಲವಾದ ಮಾತುಗಳು ಅವನ ಹೃದಯದಲ್ಲಿ ಉರಿಯುತ್ತಿರುವ ಜ್ವಾಲೆಯನ್ನು ಸ್ವಲ್ಪಮಟ್ಟಿಗಾದರೂ ತಣ್ಣಗೆ ಮಾಡುತ್ತಿದ್ದುವು. ಕಟ್ಟಕಡೆಗೆ ಅವರಿದ್ದ ಕೊಠಡಿಯ ಬಾಗಿಲು ತೆರೆಯಿತು. ತಂತೀ ಜವಾನನು ಬಾಗಿಲ ಬಳಿಯಲ್ಲಿ ನಿಂತ. ಸರ್ವೋತ್ತಮನಾಯಕ ಕೂಡಲೇ ಅವನಿದ್ದಲ್ಲಿಗೆ ಹೋಗಿ ಅವನು ಹಿಡಿದಿದ್ದ ಲಕೋಟೆಯನ್ನು ಅವನ ಕೈಯಿಂದ ಎಳೆದುಕೊಂಡನು. ಉತ್ಸುಕತೆಯಿಂದ ಅಲುಗಾಡುತ್ತಿರುವ ಬೆರಳುಗಳಿಂದ ಲಕೋಟೆಯನ್ನು ಹರಿದು ತನ್ನ ತಂತಿಗೆ ಬಂದ ಜವಾಬನ್ನು ಓದಿ ನೋಡಿದನು….

ನಾಯಕನಿಗೆ ತಲೆಗೆ ಸಿಡಿದು ಬಡಿದಂತಾಯಿತು. ಎಲ್ಲವೂ ಅಂಧಕಾರಮಯವಾಯಿತು. ‘ಕಮಲೆ… ಕಮಲೆ!’ ಎಂದು ಕರೆದನು. ಕಮಲೆಯು ಅವನ ಹತ್ತಿರ ಓಡಿ ಹೋದಳು. ಅವಳನ್ನು ಬಿಗಿದಾಗಿ ಅಪ್ಪಿಕೊಂಡನು. `ನಾನು ಪಾಪಿಷ್ಠ! ನನ್ನಷ್ಟು ಪಾಪಿಷ್ಠ ಈ ಲೋಕದಲ್ಲಿ ಬೇರೆ ಯಾರೂ ಇಲ್ಲ!’ ಎಂದು ತನ್ನ ಹಣೆಯನ್ನು ಬಡಿದುಕೊಳ್ಳಲಾರಂಭಿಸಿದನು. ತನ್ನ ಕೈಗಳಿಂದ ಮುಖವನ್ನು ಮುಚ್ಚಿಕೊಂಡು ಮಕ್ಕಳಂತೆ ಅತ್ತನು. ತನ್ನ ಮಾವನ ಅವಸ್ಥೆಯನ್ನು ನೋಡಿ ಕಮಲೆಯ ಕಣ್ಣುಗಳಲ್ಲಿಯೂ ನೀರು ತುಂಬಿತು. ಆದರೂ ಅವನನ್ನು ಸಂತೈಸಲಿಕ್ಕೆ ಪ್ರಯತ್ನಿಸಿದಳು.

‘ಮಾವಯ್ಯ, ಅಮ್ಮ, ಇಲ್ಲಿ ಬರುವುದಿಲ್ಲವೇ?’

‘ಇಲ್ಲ , ಮಗು….’

‘ಎಂದಾದರೂ ಬರಲಿಕ್ಕಿಲ್ಲವೇ?’

‘ಇಲ್ಲ ಮಗು, ಅವಳು ನಿನ್ನ ಅಪ್ಪನ ಹಿಂದೆಯೇ ಹೋಗಿರುವಳು.’

‘ಮಾವಯ್ಯ …. ಮಾವಯ್ಯ …. ನನ್ನನ್ನೂ ಕರಕೊಂಡು ಹೋಗಬಹುದಿತ್ತಲ್ಲವೇ?…. ಅಮ್ಮ!….ಅಪ್ಪ! …..’

ಆ ಬಾಲೆ ಶೋಕಿಸುವುದನ್ನು ನೋಡಿ ನಾಯಕನ ಎದೆಗೆ ಶೂಲವನ್ನು ಹಾಕಿದಂತಾಯಿತು. ತಾನು ಪಡುವ ದುಃಖವನ್ನು ಬಿಗಿದಾಗಿ ತಡೆದುಕೊಂಡು, ಅವಳ ತಲೆಯನ್ನು ತನ್ನ ಹೃದಯಕ್ಕೆ ಒತ್ತಿಕೊಂಡು ಅವಳ ಹಣೆಗೆ ಮುದ್ದಿಟ್ಟನು.

ಹೊರಗಿನಿಂದ ಜನರ ಗಲಾಟೆ ಇನ್ನೂ ಕೇಳಿಬರುತ್ತಿತ್ತು.

ಅದನ್ನು ಕೇಳಿದ ಕೂಡಲೇ ನಾಯಕನ ಮುಖದಲ್ಲಿ ನೂತನವಾದ ಪ್ರಕಾಶವೊಂದು ಹೊಳೆಯಲಾರಂಭಿಸಿತು. ಕಮಲೆಯನ್ನು ಬಿಗಿಯಾಗಿ ಅಪ್ಪಿಕೊಂಡು ಅವಳ ಕಣ್ಣುಗಳಲ್ಲಿ ಪುನಃ ನೋಡಿದನು.

‘ಮಗೂ ಕಮಲೇ’
‘ಏನು ಮಾವಯ್ಯ?’
‘ಹೊರಗೆ ನೂರಾರು ಜನರಿದ್ದಾರಲ್ಲವೇ?’
‘ಹೌದು, ಮಾವಯ್ಯ ಅವರು ಇನ್ನೂ ಹೋಗಲಿಲ್ಲ.’
‘ಅವರ ಮುಂದೆ ಹೋಗಿ ನಿಲ್ಲಲಿಕ್ಕೆ ನಿನಗೆ ಹೆದರಿಕೆಯಾದೀತೇ?
‘ಇಲ್ಲ ಮಾವಯ್ಯ, ಹೆದರಿಕೆ ಏನು?’
‘ನಾನೀಗ ನಿನ್ನ ಹತ್ತಿರ ಹೇಳುವುದನ್ನು ನೀನು ಅವರ ಮುಂದೆ ಹೇಳುವಿಯಾ?’
‘ಅಡ್ಡಿಯೇನು ಮಾವಯ್ಯ? ಏನೆಂದು ಹೇಳಬೇಕು?’

‘ಮಗೂ, ಅವರಿದ್ದಲ್ಲಿಗೆ ಹೋಗಿ ನಾನು ನಾಳೆ ಬೆಳಗ್ಗಿನಿಂದ ನನ್ನ ಹತ್ತಿರ ಇದ್ದ ಅಕ್ಕಿಯನ್ನೆಲ್ಲ ಮುಡಿ ಒಂದಕ್ಕೆ ಐದು ರೂಪಾಯಿಯಂತೆ ಮಾರುತ್ತೇನೆಂದು ಹೇಳಿ ಬಾ… ಅಷ್ಟೇ… ಹೋಗು, ಮಗು.’

ಕಮಲೆ ತನ್ನ ಮುಖವನ್ನು ಒರಸಿಕೊಂಡು ಹೊರಗೆ ಹೋದಳು. ಆ ನೂರಾರು ಮಂದಿ ಜನರ ಮುಂದೆ ಜಗಲಿಯ ಮೇಲೆ ನಿಂತುಕೊಂಡಳು. ಅವರೆಲ್ಲರನ್ನೂ ಒಂದು ಬಾರಿ ನೋಡಿದಳು. ಅವರೆಲ್ಲರೂ ತಾವು ಮಾಡುತ್ತಿರುವ ಗದ್ದಲವನ್ನು ಕೂಡಲೇ ನಿಲ್ಲಿಸಿ ಆ ಕೋಮಲವಾದ ಬಾಲಿಕೆಯನ್ನು ನೋಡಲಾರಂಭಿಸಿದರು.

‘ನನ್ನ ಸೋದರಮಾವ ಸರ್ವೋತ್ತಮ ನಾಯಕರು ನನ್ನನ್ನು ನಿಮ್ಮ ಹತ್ತಿರ ಕಳುಹಿಸಿದ್ದಾರೆ’ ಎಂದು ಕಮಲೆ ಸ್ವಲ್ಪವಾದರೂ ಭೀತಿಯಿಲ್ಲದೆ ಪ್ರಾರಂಭಿಸಿದಳು. ಅವರೆಲ್ಲರೂ ತಮ್ಮ ಕಿವಿಗಳನ್ನು ನೆಟ್ಟಗೆ ಮಾಡಿಕೊಂಡು ಅವಳು ಹೇಳಬಹುದಾದ ಮಾತುಗಳನ್ನು ಕೇಳಲಿಕ್ಕೆ ತವಕಗೊಂಡರು.

ಕಮಲೆ ತನ್ನ ಮುಂದೆಯೇ ನೋಡುತ್ತಾ ತನ್ನ ಮೃದುವಾದ ಸ್ವರದಿಂದ ಮೆಲ್ಲಗೆ ಹೇಳಿದಳು : ‘ನನ್ನ ಮಾವ ಸರ್ವೋತ್ತಮ ನಾಯಕರು ನಾಳೆ ಬೆಳಗ್ಗಿನಿಂದ ತಮ್ಮ ಹತ್ತಿರವಿದ್ದ ಅಕ್ಕಿಯನ್ನೆಲ್ಲಾ ಮುಡಿ ಒಂದಕ್ಕೆ ಐದು ರೂಪಾಯಿಯಂತೆ ಮಾರುತ್ತಾರಂತೆ. ಇದನ್ನು ನಿಮಗೆ ತಿಳಿಸಲಿಕ್ಕೆ ನನ್ನನ್ನು ಕಳುಹಿಸಿದ್ದಾರೆ… ಇನ್ನು ನೀವೆಲ್ಲರೂ ಹೋಗುವಿರೇನು?’

ಇದನ್ನು ಕೇಳುತ್ತಲೇ ಆ ಬಡಜನರ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಸರ್ವೋತ್ತಮ ನಾಯಕರನ್ನು ತುಂಬಾ ಹೊಗಳಿಕ್ಕೆ ಪ್ರಾರಂಭಿಸಿದರು. ಆ ಬಾಲಿಕೆಯನ್ನು ತುಂಬಾ ಹರಸಿದರು. ಇಬ್ಬರು ಮುದುಕರು ಮುಂದಕ್ಕೆ ಬಂದು ಕಮಲೆಯ ತಲೆಯ ಮೇಲೆ ಕೈಗಳನ್ನಿಟ್ಟು, ದೇವರು ನಿನಗೆ ಒಳ್ಳೇದು ಮಾಡಲಿ ತಾಯಿ ಎಂದರು. ಇದನ್ನೆಲ್ಲ ನೋಡಿ ಕಮಲೆಯ ಕಣ್ಣುಗಳಿಗೆ ನೀರು ಬಂತು. ಅವಳು ಕೂಡಲೇ ತನ್ನ ಸೋದರ ಮಾವನಿದ್ದಲ್ಲಿಗೆ ಓಡಿಹೋದಳು. ನಾಯಕನು ಹೊರಗೆ ಆಗುತ್ತಿದ್ದುದನ್ನೆಲ್ಲ ನೋಡುತ್ತಲೂ ಕೇಳುತ್ತಲೂ ನಿಂತುಕೊಂಡಿದ್ದನು. ಕಮಲೆ ತನ್ನ ಹತ್ತಿರ ಬಂದಾಕ್ಷಣ ಅವಳನ್ನು ಬಿಗಿಯಾಗಿ ಅಪ್ಪಿಕೊಂಡನು. ಅವಳಲ್ಲಿ ಅಳು ಉಕ್ಕಿ ಉಕ್ಕಿ ಬರಲಾರಂಭಿಸಿತು.


ನಾಯಕನು ಅವಳ ಕೋಮಲವಾದ ತಲೆಯನ್ನು ತನ್ನ ಹೃದಯಕ್ಕೆ ಒತ್ತಿಕೊಂಡು ನೋಡುವವರ ಹೃದಯ ಕರಗಿ ನೀರಾಗಿ ಹೋಗುವಂತೆ ಅವಳೊಂದಿಗೆ ತಾನೂ ಅತ್ತನು…..

ನಾಗಣ್ಣ ಕಥೆಯನ್ನು ಹೇಳುವುದನ್ನು ನಿಲ್ಲಿಸಿದನು. ನಮ್ಮನ್ನು ಕತೆಯ ಭಾವಲೋಕದಲ್ಲಿ ವಿಹರಿಸಲು ಬಿಟ್ಟು ಅಲ್ಲಿಂದ ಹೊರಟುಹೋದನು.
(ಸಂಕ್ಷೇಪಿತ ಸಣ್ಣಕತೆ – ಸಂಕಲನ : ಹುಚ್ಚು ಬೆಳದಿಂಗಳಿನ ಹೂಬಾಣಗಳು. 1938)

ಟಿಪ್ಪಣಿ:
ಪಡುಕೋಣೆ ರಮಾನಂದ ರಾವ್: ಪಡುಕೋಣೆ (ಇದು ಉಡುಪಿ ಜಿಲ್ಲೆಯ ಒಂದು ಊರು, ರಮಾನಂದರಾಯರ ಪೂರ್ವಿಕರ ಊರು) ರಮಾನಂದ ರಾಯರು ಮಂಗಳೂರಿನಲ್ಲಿ ಹುಟ್ಟಿ ಬೆಳೆದರು. ರಾಜಮಹೇಂದ್ರಿ, ತಲಚೇರಿ, ಪಾಲ್ಘಾಟ್, ಮದ್ರಾಸು ಹಾಗೂ ಮಂಗಳೂರು ಸರಕಾರಿ ಕಾಲೇಜುಗಳಲ್ಲಿ ರಸಾಯನ ಶಾಸ್ತ್ರದ ಪ್ರೊಫೆಸರ್ ಮತ್ತು ನಂತರ ಪ್ರಿನ್ಸಿಪಾಲ್ ಆಗಿದ್ದರು. ಅವರು ಹಾಸ್ಯ ಕತೆಗಳನ್ನು ಬರೆದು ‘ಹುಚ್ಚು ಬೆಳದಿಂಗಳಿನ ಹೂಬಾಣಗಳು’ (1938) ಎಂಬ ಸಂಕಲನವನ್ನು ಪ್ರಕಟಿಸಿದ್ದರು. ಪ್ರಸ್ತುತ ಕತೆಯನ್ನು ಇದೇ ಸಂಕಲನದಿಂದ ಆರಿಸಲಾಗಿದೆ. ನಾಟಕಗಳನ್ನು ಅನುವಾದಿಸಿ, ನಿರ್ದೇಶಿಸಿ ರಂಗದಮೇಲೆ ತರುತ್ತಿದ್ದರು. ‘ಚೆರಿ ಹಣ್ಣೀನ ತೋಟ’, ‘ಪಶ್ಚಿಮ ರಣರಂಗದಲ್ಲಿ ಎಲ್ಲವೂ ಶಾಂತ’ ಮುಂತಾದ ಕೃತಿಗಳನ್ನು ಅನುವಾದಿಸಿದ್ದರು.