ನಾನು ಕಲೋಪಾಸಕನಲ್ಲ. ನಾನು ಪ್ರಕೃತಿದೇವಿಯ ಚಾರಕ. ನನ್ನಲ್ಲಿ ಇಂತಹ ಕಲಾಕೃತಿ ಹೇಗೆ ಬಂತು? -ಅಂತ ಹಲವು ಕುತೂಹಲಿಗಳು ಕೇಳುತ್ತಾರೆ. ಆಗ ನಾನು ಈ ಸತ್ಯ ಕಥೆಯನ್ನು ಅವರಿಗೆ ಹೇಳಿ ಹೆಮ್ಮೆ ಪಡುತ್ತೇನೆ. ೧೯೫೬ರಲ್ಲಿ ನಾನು ಬೋರ್ಡ್ ಹೈಸ್ಕೂಲ್ ಉಡುಪಿಯ ಆರನೇ ಈಯತ್ತೆಯ ವಿದ್ಯಾರ್ಥಿಯಾಗಿ ಸೇರಿದೆ. ಮಾನ್ಯ  ಶ್ರೀ ಬಿ.ಪಿ. ಬಾಯರಿ ಎಂಬ ಹೆಸರಾಂತ ಕಲಾವಿದರು ನಮಗೆ ಡ್ರಾಯಿಂಗ್ ಮಾಸ್ಟರ್ ಆಗಿದ್ದರು. ಈ ಹೈಸ್ಕೂಲಿನ ನಿಯಮಾವಳಿ ಪ್ರಕಾರ ವಾರಕ್ಕೊಂದು ಬಾರಿ  ಪಠ್ಯೇತರ ವಿಷಯಗಳಾದ “ಮಾರಲ್ ಸೈನ್ಸ್ ಮತ್ತು ಡ್ರಾಯಿಂಗ್ ಸಬ್ಜೆಕ್ಟ್ ‍ಗಳ ಕ್ಲಾಸುಗಳು” ನಮಗೆ ಇದ್ದುವು. ಈ ವಿಷಯಗಳಲ್ಲಿ ಪರೀಕ್ಷೆ  ಬರೆದು ಪಾಸಾಗಬೇಕೆಂಬ ನಿಯಮ ಏನೂ ಇರಲಿಲ್ಲ. ಆದರೂ, ಸಹಜವಾದ ಹುಮ್ಮಸ್ಸಿನಿಂದಲೇ ಈ ಕ್ಲಾಸುಗಳಲ್ಲಿ ನಾವು ಮುತುವರ್ಜಿ ವಹಿಸುತ್ತಾ ಇದ್ದೆವು.

ಬಾಯರಿ ಮಾಸ್ತರದು ಆಕರ್ಷಕ ವ್ಯಕ್ತಿತ್ವ. ಅವರು ಕರುಣಾಮಯಿ ಮತ್ತು ಮೃದು ಭಾಷಿ. ಗಾಂಧಿವಾದಿಯಾಗಿದ್ದ ಅವರು ಸದಾ ಖಾದಿ ಬಟ್ತೆಗಳನ್ನು ಧರಿಸುತ್ತಾ ಇದ್ದರು. ಚಿತ್ರಕಲೆಗೇ ತಮ್ಮ ಜೀವನವನ್ನೇ ಮುಡುಪಾಗಿ ಇಟ್ಟಿದ್ದ ಬಾಯರಿ ಮಾಸ್ತರನ್ನು ಕಂಡರೆ ನಮಗೆ ಎಂದೂ ಭಯ ಆಗುತ್ತಿರಲಿಲ್ಲ. ಸೌಜನ್ಯವೇ ಮೂರ್ತಿವೆತ್ತಂತಿದ್ದ ಅವರು ತುಂಟ ಮಕ್ಕಳಾದ ನಮ್ಮನ್ನು ಎಂದೂ ಗದರಿಸಿ ಬಯ್ಯುತ್ತಾ ಇರಲಿಲ್ಲ.  ಶಿಕ್ಷಿಸುತ್ತಾ ಇರಲಿಲ್ಲ. ಹಾಗಾಗಿ, ಅವರನ್ನು ಕಂಡರೆ ನಮಗೆ ಅಪಾರ ಗೌರವ, ಅಭಿಮಾನ ಮತ್ತು ಪ್ರೀತಿ. ಅವರ ಸಾಧುತ್ವ ಮತ್ತು ಒಳ್ಳೆಯತನಕ್ಕೆ ನಾವು ತಲೆಬಾಗಿ ಅವರ ಕ್ಲಾಸುಗಳಲ್ಲಿ ಮೌನವಾಗಿ ಇದ್ದು ಚಿತ್ರಕಲೆಯ ಪಾಠ ಗಳನ್ನು ಕಲಿಯುತ್ತಿದ್ದೆವು. ಅವರು ತನ್ಮಯತೆಯಿಂದ ಚಿತ್ರಕಲೆಯ ಪಾಠ ಮಾಡುತ್ತಿದ್ದರೆ ಸಮಯ ಹೋದುದೇ ನಮ್ಮ ಅರಿವಿಗೆ ಬರುತ್ತಾ ಇರಲಿಲ್ಲ. ಅವರು ಉಡುಪಿಯ ಏಕೈಕ ಚಿತ್ರಮಂದಿರವಾದ ಅಲಂಕಾರ್ ಥಿಯೇಟರಿನ ಹಿಂಬದಿ ಇದ್ದ “ಚಿತ್ರಕುಟೀರ” ಎಂಬ ಪುಟ್ಟ ಮನೆಯಲ್ಲಿ ವಾಸವಾಗಿದ್ದರು.

ಬಾಯರಿ ಮಾಸ್ತರ್ ಅವರು ನಮ್ಮ ನಾಡಿನ ಹೆಸರಾಂತ ಕಲಾಕಾರ. ಆಗಾಗ ತಮ್ಮ ಏಕವ್ಯಕ್ತಿ ಪ್ರದರ್ಶನಗಳನ್ನು ಏರ್ಪಡಿಸಿ ತಮ್ಮ  ಚಿತ್ರಕಲೆಯನ್ನು ಜನರಿಗೆ ಪರಿಚಯಿಸುತ್ತಾ ಇದ್ದರು. ಚಿತ್ರಕಲೆಯ ಎಲ್ಲಾ ಆಯಾಮಗಳಲ್ಲಿ ಅವರು ಪ್ರಾಕಾಂಡ ಪಂಡಿತರಾಗಿದ್ದರು. ಜನಪದ ಕಲೆಯಾದ ರಂಗೋಲಿ ಚಿತ್ರಗಳ ಬಗ್ಗೆ ಮತ್ತು ಪ್ರಾರಂಭಿಕ ಚಿತ್ರಕಲೆಯನ್ನು ಬೋಧಿಸುವ ಹಲವಾರು ಪುಸ್ತಕಗಳನ್ನು ಅವರು ತಮ್ಮ ಎಳೆಯ  ವಯಸ್ಸಿನಲ್ಲೇ ಬರೆದು ಪ್ರಸಿದ್ಧರಾಗಿದ್ದರು.

ಆದರೂ, ಮಹಾತ್ಮಾ ಗಾಂಧಿಯವರ ಅನುಯಾಯಿಯಾದ ಬಾಯರಿ ಮಾಸ್ತರ್ ಅವಲ್ಲಿ ಹಣದ ವ್ಯಾಮೋಹ ಮತ್ತು ಹೆಸರು ಸಂಪಾದಿಸುವ ವಾಂಛೆಗಳೇ ಇರಲಿಲ್ಲ. ಎಲೆಮರೆಯ ಕಾಯಿಯಂತೆ, ಅವರು ಬಹು ಸರಳವಾದ ಸಾತ್ವಿಕ ಜೀವನವನ್ನು ಜೀವಿಸುತ್ತಾ ಇದ್ದರು. ಸದಾ ಚಿತ್ರಕಲೆಯ ಬಗ್ಗೆಯೇ ಯೋಚಿಸುತ್ತಿದ್ದ ಅವರು ತನಗೆ ಸಿಗುತ್ತಾ ಇದ್ದ ಪಗಾರದ ಹೆಚ್ಚಿನ ಭಾಗವನ್ನು ಕಲಾಸೇವೆಗೇ ವಿನಿಯೋಗಿಸುತ್ತಾ  ಇದ್ದರು. ಗವರ್ನಮೆಂಟ್ ಬೋರ್ಡ್ ಹೈಸ್ಕೂಲಿನ ಡ್ರಾಯಿಂಗ್ ಮಾಸ್ತರಾಗಿ ದುಡಿಯುತ್ತಿದ್ದ ಅವರು ಸರಕಾರೀ ನಿಯಮಗಳನ್ನು ಸದಾ ಪಾಲಿಸುತ್ತಿದ್ದ ನಿಷ್ಟಾವಂತ ಸರಕಾರೀ ನೌಕರ ಆಗಿದ್ದರು. ಅಂದರೆ, ಅವರು ಸರಕಾರೀ ನಿಭಂದನೆಗಳ ಪ್ರಕಾರ, ಸರಕಾರೀ ಕೆಲಸದಲ್ಲಿ ಮಾಸ್ಟರಾಗಿ ಇದ್ದಷ್ಟು ದಿನ, ಸ್ವಂತವಾಗಿ ಚಿತ್ರಕಲೆಯ ಮುಖೇನ ಹಣ ಸಂಪಾದಿಸಲು ಎಂದಿಗೂ ಒಡಂಬಡಲಿಲ್ಲ. ಯಾರಿಗಾದರೂ ಚಿತ್ರ ರಚಿಸಿಕೊಟ್ಟರೆ ಅವರು ತನ್ನ ಆ ಕಾಯಕಕ್ಕೆ ಪ್ರತಿಫಲ ಪಡೆಯುತ್ತಾ ಇರಲಿಲ್ಲ.

ಅವರದು ಇಂತಹ ನಿಸ್ವಾರ್ಥ ಕಲಾಸೇವೆ ಆಗಿತ್ತು. ಯಾರಾದರೂ ಚಿತ್ರ ಬರೆದು ಕೊಡಿರಿ, ಸಾರ್! -ಅಂತ ಕೇಳಿದರೆ ಅವರು ಧರ್ಮಾರ್ಥವಾಗಿ ಬರೆದುಕೊಡುತ್ತಾ ಇದ್ದರು. ತನ್ನ ಸೇವೆಗೆ ಯಾವರೀತಿಯ ಶುಲ್ಕವನ್ನೂ ಪಡೆಯದೆ “ನಿಸ್ವಾರ್ಥ ಕಲಾ ಸೇವೆ” ಮಾಡುತ್ತಾ ಇದ್ದ ಅಪರೂಪದ ಆದರ್ಶ ವ್ಯಕ್ತಿ ಅವರು. ನಮ್ಮೆದುರಿಗೇ, ಹಲವು ಜನ ಸ್ವಾರ್ಥಿಗಳು ಅವರ ಸಜ್ಜನಿಕೆಯ ಸಂಪೂರ್ಣ ಲಾಭವನ್ನು  ಪಡೆದುಕೊಂಡರು. ಇಂದಿಗೆ ಅವರಲ್ಲಿ ಹಲವರು “ಬಹುದೊಡ್ದ ಕಲಾ ಸಂಗ್ರಹಕಾರರು” ಎಂಬ ಬಿರುದನ್ನು ಹೊಂದಿದ್ದಾರೆ.

ಈ ಕಲಾಸೇವೆಯ ದೊಡ್ದ ಗುಣ ಅವರನ್ನು ಸದಾ ಕಾರ್ಯನಿರತರನ್ನಾಗಿ ಇರಿಸಿದರೂ, ಈ ಧರ್ಮಾರ್ಥ ಕಲಾ ಸೇವೆಯು ಅವರಿಗೆ ಚಿಕ್ಕಾಸಿನ ಆರ್ಥಿಕ ಲಾಭವನ್ನು ತಂದಿರಲಿಲ್ಲ. ಸದಾ ಆರ್ಥಿಕ ಮುಗ್ಗಟ್ಟುಗಳನ್ನು ಇದುರಿಸುತ್ತಾ ಇದ್ದರೂ, ಅವರು ಎಂದಿಗೂ ಅವನ್ನು ಇತರರ ಇದುರಿಗೆ ಹೇಳಿಕೊಳ್ಳದೇ, ಕಡು ಬಡತನದ ಸರಳವಾದ ಬಾಳನ್ನೇ ಆರಿಸಿಕೊಂಡು, ನಗುಮುಖದಿಂದಲೇ ತನ್ನ ಕಲಾ ಸೇವೆಯ ಬಾಳನ್ನು ಬಾಳಿದ ಮಹಾನ್ ವ್ಯಕ್ತಿ .

೧೯೫೮ನೇ ಇಸವಿಯಲ್ಲಿ ನಾನು ಎಂಟನೇ ಕ್ಲಾಸಿಗೆ ತಲುಪಿದೆ. ಆಗ ಅವರು ನನಗೆ “ಮಧುಸೂದನ! ನೀನು ನಿನ್ನ ಸ್ಪೆಷಲ್ ಸಬ್ಜೆಕ್ಟ್ ಆಗಿ ಈ ವರ್ಷ ಡ್ರಾಯಿಂಗ್ ಸಬ್ಜೆಕ್ಟ್ ಆರಿಸಿಕೊಳ್ಳುವಿಯಾ? ಇದರಿಂದ ಮುಂದಕ್ಕೆ ನಿನಗೆ ಪ್ರಯೋಜನ ಅಗಬಹುದು!” ಅಂತ ಕೇಳಿದರು. ಆಗ ನಾನು “ಸರ್, ಕ್ಷಮಿಸಿ, ನಾನು ಈಗಾಗಲೇ ಸಯನ್ಸ್ ಸಬ್ಜೆಕ್ಟ್ ಆಪ್ಷನಲ್ ಆಗಿ ಆರಿಸಿಕೊಂಡಿದ್ದೇನೆ. ಈಗ ನಾನು ಎನ್.ಸಿ.ಸಿ. ಕ್ಯಾಡೆಟ್ ಕೂಡಾ ಆಗಿದ್ದೇನೆ. ಮುಂದಕ್ಕೆ ಭಾರತದ ಸೈನ್ಯದಲ್ಲಿ ಅಧಿಕಾರಿ ಆಗುವ ಆಸೆಯ ಬೆನ್ನು ಹತ್ತಿದ್ದೇನೆ. ನನ್ನ ಕಲಾಸಕ್ತಿಯನ್ನು ಬದಿಗಿರಿಸಿ ನಮ್ಮ ದೇಶದ ಸೇವೆಯತ್ತ ಮನಸ್ಸು ಮಾಡಿದ್ದೇನೆ!” ಅಂತ ಉತ್ತರಿಸಿದೆ.

“ಮಗೂ, ನಿನ್ನದು ಉತ್ತಮ ವಿಚಾರ. ನಿನಗೆ ಶುಭವಾಗಲಿ” ಅಂತ ಅವರು ನನಗೆ ಆಶೀರ್ವಾದ ಮಾಡಿದ್ದರು. ಹಾಗಾಗಿ, ನಾನು ಚಿತ್ರಕಲೆಯ ಐಚ್ಛಿಕ ವಿಧ್ಯಾರ್ಥಿ ಆಗಲೇ ಇಲ್ಲ. ಕಾಲ ಸರಿಯಿತು. ನನ್ನ ಕಾಲೇಜ್ ಓದು ಮುಗಿಯಿತು. ಮಾನ್ಯ ಲಾಲ್ ಬಹದೂರ್ ಶಾಸ್ತ್ರಿಗಳ ಪ್ರಭಾವದಿಂದ ನನಗೆ ಸೈನ್ಯದ ಜೀವನಕ್ಕಿಂತ “ಕೃಷಿಯ” ಜೀವನದ ಬಗ್ಗೆಯೇ ನನಗೆ ಹೆಚ್ಚಿನ ಆಸಕ್ತಿ ಮೂಡಿತು. ಹಾಗಾಗಿ, ನಾನು ಜೈ ಜವಾನ್ ಅನ್ನದೇ “ಜೈ ಕಿಸಾನ್” ಎನ್ನುತ್ತಾ ಕೃಷಿಯನ್ನೇ ನನ್ನ ಜೀವನ ವೃತ್ತಿಯಾಗಿ ಆರಿಸಿಕೊಂಡೆ. ವರುಷಗಳೇ ಉರುಳಿಹೋದುವು. ನಾನು ಚಿಕ್ಕಮಗಳೂರಿನ ಬಾಳೆಹೊಳೆಯಲ್ಲಿ ಕಾಫಿ ಬೆಳೆಯುವ ಕಾಯಕ ನಡೆಸುತ್ತಾ ಇದ್ದೆ.

೧೯೮೧ರ ಬೇಸಿಗೆಯ ಒಂದು ಮುಂಜಾನೆ ಉಡುಪಿಯ ಮುದ್ದಣ್ಣ ಮಾರ್ಗದಲ್ಲಿ ಕಾರು ನಡೆಸುತ್ತಾ ಮಂಗಳೂರು ಕಡೆಗೆ ಹೋಗುತ್ತಾ ಇದ್ದೆ. ಮಂಗಳೂರಿನಲ್ಲಿರುವ ನನ್ನ ಕಾಫಿಯ ಕ್ಯೂರರ್ ‍ಗಳನ್ನು ನಾನು ಅಂದು ಕಾಣಬೇಕಿತ್ತು. ಅಷ್ಟರಲ್ಲೇ, ಕೊಡೆ ಹಿಡಿದ ಕೊಂಡು ನೀಳ ಹೆಜ್ಜೆ ಹಾಕಿ ನಡೆಯುತ್ತಾ ಇದ್ದ ನನ್ನ ಪ್ರೀತಿಯ ಆದರ್ಶ ಗುರುಗಳಾದ ಬಾಯರಿ ಮಾಸ್ಟರ್ ಕಣ್ಣಿಗೆ ಬಿದ್ದರು. ಆಗ ಅವರು ಸರಕಾರದ ವೃತ್ತಿಯಿಂದ ರಿಟಾಯರ್ ಆಗಿದ್ದರು. ಇನ್ನೂ ಸ್ವಲ್ಪ ಕೃಷಕಾಯರಾಗಿದ್ದರು. ಮುಖದ ತೇಜಸ್ಸು ಮಾತ್ರ ಹಾಗೆಯೇ ಇತ್ತು. ನಾನು ಕಾರು ನಿಲ್ಲಿಸಿ ಕೆಳಗಿಳಿದು ಅವರ ಪಾದ ಸ್ಪರ್ಶಿಸಿ ನಮಸ್ಕರಿಸಿದೆ.

“ಮಧುಸೂದನ! ಈಗ ಸೈನ್ಯದಲ್ಲಿ ಕೆಲಸ ಮಾಡುತ್ತಾ ಇದ್ದೀಯಾ?” ಅಂತ ಕೇಳಿದರು. “ಇಲ್ಲ ಸರ್, ನಾನು ಈಗ ಒಬ್ಬ ವೃತ್ತಿಪರ ಕಾಫಿ ಬೆಳೆಯುವ ರೈತ. ಜೀವನದ ದೋಣಿಯು ನನ್ನನ್ನು ಮಣ್ಣಿನ ಸೇವೆಗೆ ಕೊಂಡೊಯ್ದಿದೆ” ಅನ್ನುತ್ತಾ ನನ್ನ ವೃತ್ತಾಂತವನ್ನೆಲ್ಲಾ ಹೇಳಿದೆ. “ಸಂತೋಷ ಮಗೂ, ಮಕ್ಕಳನ್ನು ಬೆಂಗಳೂರಿನಲ್ಲಿ ಓದಿಸುತ್ತಾ ಇದ್ದೀಯಾ, ನಿನಗೆ ಮತ್ತು ನಿನ್ನ ಹೆಂಡತಿ ಮಕ್ಕಳಿಗೆ ಒಂದು ಸಣ್ಣ ಕೊಡುಗೆ ಕೊಡುವೆ. ಒಂದು ನಿಮಿಷ ಮನೆಗೆ ಬರುತ್ತೀಯಾ?” ಅಂತ ಕೇಳಿದರು.

“ಆಗಲಿ, ಸರ್” ಎನ್ನುತ್ತಾ ಅವರನ್ನು ಅವರ ಚಿತ್ರಕುಟೀರಕ್ಕೆ ಕರೆದೊಯ್ದೆ. ಮಾಸ್ತರು ನನಗೆ ಒಂದು ಲೋಟ ಹಾಲು ಕುಡಿಯಲು ಕೊಟ್ಟು ಒಳಹೋಗಿ, ಒಂದು ೩X೫ ಅಡಿಯ ತೈಲ ವರ್ಣದ ಕ್ಯಾನ್ವಾಸ್ ಪೈಂಟಿಂಗ್ ಒಂದನ್ನು ತಂದುಕೊಟ್ಟರು. “ಇದು ನಿನಗೆ ಮತ್ತು ನಿನ್ನ ಸಂಸಾರಕ್ಕೆ ನನ್ನ ಉಡುಗೊರೆ” ಎಂದರು.

“ಸರ್, ಇದು ತಮ್ಮ ಉಡುಪಿ ಕೃಷ್ಣನ ಮೊದಲ ಆಯಿಲ್ ಪೈಂಟಿಂಗ್. ಇದರ ಬೆಲೆಯನ್ನು ನನಗೆ ಊಹಿಸಲೂ ಅಸಾಧ್ಯ.  ಈ ಮೂಲ ವರ್ಣ ಚಿತ್ರದ ವರ್ಣದ ಛಾಯಾಚಿತ್ರದ ಕಾಪಿಯನ್ನು ಉಡುಪಿ ಮಠದವರು ಅಧಿಕೃತವಾಗಿ ಮುದ್ರಿಸಿ ಭಕ್ತರಿಗೆ ಮಾರುತ್ತಾ ಇದ್ದಾರೆ.  ಸರ್, ಈ ಮೂಲ ಪ್ರತಿಗೆ ನಾನು ಅರ್ಹನೇ ಅಂತ ಅನ್ನಿಸುತ್ತಾ ಇದೆ, ನನ್ನನ್ನು ಕ್ಷಮಿಸಿ” ಅಂದೆ.

ಪೆಜತ್ತಾಯರು

ಆಗ ಬಾಯರಿ ಮಾಸ್ತರರು “ಮಗೂ, ನೀನು ನಿರಾಕರಿಸಿದರೆ ನನಗೆ ಬೇಸರ ಆಗುತ್ತೆ, ನಿನಗೆ ಇದನ್ನು ಮುಫತ್ತಾಗಿ ಪಡೆಯಲು ಇಷ್ಟ ಇಲ್ಲ…. ಅಲ್ಲವೇ?” ಅಂತ ಕೇಳಿದರು.
ನಾನು “ಹೌದು, ಸರ್, ತಾವು ಸರಿಯಾಗೇ ಊಹಿಸಿದಿರಿ” ಎಂದೆ.
“ಹಾಗಾದರೆ, ಒಂದು ಕೆಲಸ ಮಾಡು. ನನಗೆ ನೀನು ಕ್ಯಾನ್ವಾಸ್ ಮತ್ತು ತೈಲವರ್ಣದ ಖರ್ಚು ಅಂತ ಮುನ್ನೂರು ರೂಪಾಯಿ ಕೊಡು” ಅಂದರು.
“ಸರ್, ಇಂದು ನನ್ನ ಪರ್ಸಿನಲ್ಲಿ ಬರೇ ೮೫೦ ರೂಪಾಯಿಗಳಿವೆ. ತಾವು ಇಷ್ಟು ಹಣ ಸ್ವೀಕರಿಸಿ ಈ ವರ್ಣ ಚಿತ್ರವನ್ನು ನನಗೆ ದಯಪಾಲಿಸಿ” ಅಂತ ಗೋಗರೆದೆ.
ಬಾಯರಿ ಮಾಸ್ತರರು ತಮ್ಮ ಅಪರೂಪದ ಸಾತ್ವಿಕ ಸಿಟ್ಟಿನ ಗಂಭೀರ ಧಾಟಿಯಲ್ಲಿ ಹೀಗೆಂದರು “ಮಧುಸೂದನ, ಐನೂರೈವತ್ತು ರೂಪಾಯಿಗಳು ನಿನ್ನ ಬಳಿ ಇರಲಿ, ಮಂಗಳೂರಿನಲ್ಲಿರುವ ನಿನ್ನ ಕಾಫಿಯ ಕ್ಯೂರಿಂಗ್ ಕಂಪೆನಿ ತಲುಪುವ ತನಕದ ಖರ್ಚಿಗೆ ನಿನಗೆ ಹಣ ಬೇಕಲ್ಲವೇ? ನನಗೆ ಬರೇ ಮುನ್ನೂರು ಮಾತ್ರ ಕೊಡು, ಇದು ಗುರು ನಿನ್ನ್ನ ಗುರುವಿನ ಆಜ್ಞೆ” ಅಂದರು.
ಮರು ಮಾತನಾಡದೆ ಬರೇ ಮುನ್ನೂರು ರೂಪಾಯಿ ಒಪ್ಪಿಸಿ ಗುರುಗಳಿಗೆ ಉದ್ದಂಡ ನಮಸ್ಕಾರ ಮಾಡಿದೆ. “ಜಗನ್ನಿಯಾಮಕ ಕಡಗೋಲುಧಾರಿ ನಿನ್ನನ್ನು ಮತ್ತು ನಿನ್ನ ಸಂಸಾರದವರನ್ನು ಕಾಪಾಡುತ್ತಾನೆ, ಆಯುಷ್ಮಾನ್ ಭವಃ” ಅಂತ ಹೇಳುತ್ತಾ ನನ್ನ ಪ್ರೀತಿಯ ಬಾಯರಿ ಮಾಸ್ತರ್ ನನ್ನನ್ನು ಬೀಳ್ಕೊಟ್ಟರು.

ಇಂದು ಬಾಯರಿ ಮಾಸ್ಟರ್ ಅವರ “ಉಡುಪಿಯ ಶ್ರೀ ಕೃಷ್ಣ” ನಮ್ಮ ತೋಟದ ಬಂಗಲೆಯ ನಡುಮನೆಯಲ್ಲಿ ವಿರಾಜಮಾನನಾಗಿ ಇದ್ದಾನೆ. ಆ ವರ್ಣ ಚಿತ್ರಕ್ಕೆ ಬಾಯರಿ ಮಾಸ್ತರನ್ನು ನೆನೆಯುತ್ತಾ ಆಗಾಗ ಕೈ ಮುಗಿಯುತ್ತೇನೆ. ಇಂದಿಗೆ ಬಾಯರಿ ಮಾಸ್ತರ್ ಅವರು ನಮ್ಮೊಡನೆ ಇಲ್ಲ.  ಅವರು ಪ್ರೀತಿ ವಿಶ್ವಾಸಗಳಿಂದ ನನಗೆ ನೀಡಿದ ಆ ಅಪೂರ್ವ ಕ್ಯಾನ್ವಾಸ್ ಪೈಂಟಿಂಗ್ ನಮ್ಮ ಮನೆಯಲ್ಲಿದೆ.

ಹೀಗೊಂದು ಗುರುಗಳ ನೆನಪು………. ನನ್ನ ಎದೆಯಾಳದಿಂದ.