ಬಸ್ಸು ಎನ್ನುವುದಿನ್ನೂ ಬಂದಿಲ್ಲದ ಕಾಲದಲ್ಲಿ ಹಳ್ಳಿಯ ಮಕ್ಕಳು ಹೈಸ್ಕೂಲು ವಿದ್ಯಾಭ್ಯಾಸಕ್ಕಾಗಿ ಪ್ರತಿ ದಿನ ಆರೇಳು ಕಿಲೋಮೀಟರಿಗಿಂತಲೂ ಹೆಚ್ಚು (ಅತ್ತ ಇತ್ತ ಒಟ್ಟು ಹನ್ನೆರಡು ಕಿಲೋಮೀಟರ್) ನಡೆದು ಹೋಗಬೇಕಾಗಿತ್ತು. ಸಾಯಂಕಾಲ ನಾಲ್ಕೂವರೆ ಗಂಟೆಗೆ ಶಾಲೆ ಮುಗಿಸಿ ಅಷ್ಟು ದೂರವನ್ನು ನಡೆದು ಮನೆ ಸೇರುವಾಗ ಹೊಟ್ಟೆಯಲ್ಲಿ ಎಷ್ಟು ಹಸಿವಿರುತ್ತಿತ್ತು, ಆ ಹಸಿವನ್ನು ತಣಿಸಲು ಎಷ್ಟು ಮನೆಗಳಲ್ಲಿ ತಿಂಡಿ ಎನ್ನುವುದು ಇರುತ್ತಿತ್ತು ಎನ್ನುವುದು ಬೇರೆ ವಿಚಾರ. ಮಳೆಗಾಲದಲ್ಲಿ ಬೆಳಿಗ್ಗೆ ಮತ್ತು ಸಂಜೆ ಮಕ್ಕಳು ಹೇಗೆ ಆ ದೂರವನ್ನು ನಡೆಯಬೇಕಾಗುತ್ತಿತ್ತು ಅನ್ನುವುದನ್ನು ಯಾರೂ ಊಹಿಸಬಹುದು.
ನಾನೀಗ ಹೇಳಲು ಹೊರಟಿರುವುದು ಆ ಮಕ್ಕಳ ಅಂಗಿ ಚೆಡ್ಡಿಯ ವಿಚಾರ. ಮಕ್ಕಳಲ್ಲಿ ಹೆಚ್ಚಿನವರ ಬಳಿ ಇದ್ದುದು ಶಾಲೆಗೆ ಹೋಗುವಾಗ ತೊಟ್ಟುಕೊಳ್ಳಲು ಆಗುವಂಥ ಒಂದು ಚಡ್ಡಿ ಮತ್ತು ಒಂದು ಅಂಗಿ ಮಾತ್ರ! ಎರಡನೆಯದು ಇದ್ದರೆ, ಅದು ಹಲವು ತೇಪೆಗಳಿಂದ ಕೂಡಿದ್ದು ಮನೆಯಲ್ಲಿ ಮಾತ್ರ ಹಾಕಿಕೊಳ್ಳಲು ಆಗುವಂಥದು. ‘ಅಣ್ಣ ಒಂದು ಹೊತ್ತು ಶಾಲೆಗೆ ಹೋಗುವುದು ತಮ್ಮ ಇನ್ನೊಂದು ಹೊತ್ತು ಶಾಲೆಗೆ ಹೋಗುವುದು. ಕಾರಣ ಇಬ್ಬರದಾಗಿ ಇದ್ದುದು ಒಂದು ಚೆಡ್ಡಿ ಒಂದು ಅಂಗಿ’ ಎನ್ನುವುದು ಒಂದು ಕತೆ ಅಲ್ಲ. ಪ್ರಾಥಮಿಕ ಶಿಕ್ಷಕನಾಗಿದ್ದ ಎಂಟು ವರ್ಷಗಳಲ್ಲಿ ನಾನು ಕೂಡ ಅಂತ ಎರಡು ಜೊತೆ ಅಣ್ಣ ತಮ್ಮರನ್ನು ಕಂಡಿದ್ದೇನೆ.
ಮಳೆಗಾಲದಲ್ಲಿ ಈ ಅಂಗಿ ಚಡ್ಡಿ ಎಂಬ ಸಾಧನ ಒಣಗಿರುವುದಕ್ಕಿಂತ ಹೆಚ್ಚು ಕಾಲ ಒದ್ದೆಯಾಗಿಯೇ ಇರುತ್ತದೆ. ಅದು ಒಣಗಲು ಒಂದು ದಿನ ಸಾಕಾಗುವುದಿಲ್ಲ. ಶನಿವಾರ ಸಾಯಂಕಾಲ ಮಳೆಯಲ್ಲಿ ತೊಯ್ಯಿಸಿಕೊಂಡು ಮನೆ ಮುಟ್ಟಿದರಂತೂ ಸೋಮವಾರ ಅರ್ಧ ಒದ್ದೆ ಅಂಗಿ ಚಡ್ಡಿ ಹಾಕಿಕೊಂಡೇ ಶಾಲೆಗೆ ಹೋಗಬೇಕು. ಬಿಸಿಲಿದ್ದ ದಿನವಾದರೆ ‘ಹಾಕಿಕೊ. ಮೈ ಬಿಸಿಗೆ ಒಣಗುತ್ತದೆ’ ಎನ್ನುವ ಅಮ್ಮನ ಸಲಹೆ ಬೇರೆ ಇದೆ. ದಾರಿಯಲ್ಲಿ ಮಳೆ ಎದುರಾದರೆ, ಕೊಡೆಯ ಭಾಗ್ಯವಿಲ್ಲದ ಮಕ್ಕಳು ಅದೆಷ್ಟೊ! ಆದರೂ ಅದೆಲ್ಲಿಂದಲೋ ಹರಕು ಮುರುಕು ಕೊಡೆ ಸಂಪಾದಿಸಿಕೊಂಡು ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಆ ಭಾಗ್ಯವಿಲ್ಲದವರಿಗೆ ಮಳೆಗಾಲದಲ್ಲಿ ಬಹಳ ಸಲ ಮನೆಯಲ್ಲಿಯೇ ಉಳಿಯುವ ರಜಾಭಾಗ್ಯ. ‘ಯಾಕೆ ಶಾಲೆಗೆ ಬರಲಿಲ್ಲ?’ ಎಂದು ಮೇಷ್ಟ್ರು ಕೂಡ ಕೇಳುತ್ತಿರಲಿಲ್ಲ. ಮೇಷ್ಟ್ರಿಗೂ ಸತ್ಯ ಗೊತ್ತಿರುತ್ತಿತ್ತು. ಇಂಥ ಸ್ಥಿತಿಯಲ್ಲಿ ಶನಿವಾರದ ಅರ್ಧ ದಿನದ ಶಾಲೆ ಒಂದು ಶಾಪವೇ ಆಗಿತ್ತು. ಅರ್ಧ ದಿನಕ್ಕಾಗಿ ಅಷ್ಟು ದೂರ ನಡೆಯಬೇಕಾದ್ದು ಒಂದು. ಮನೆಗೆ ಬಂದು ಉಡುಪನ್ನು ಒಗೆದು ಮತ್ತೆ ಸೋಮವಾರಕ್ಕೆ ಸಿದ್ಧಪಡಿಸಬೇಕಾದ ಕಷ್ಟ ಇನ್ನೊಂದು. ಒಲೆಕಲ್ಲಿನ ಮೇಲೆ ಅಂಗಿ ಚಡ್ಡಿಯನ್ನು ಒಣಗಿಸುವ ಸಾಹಸ ಮಾಡಿ ಸುಟ್ಟು ಹಾಕಿಸಿಕೊಂಡವರೂ ಇದ್ದರು! ವಾಸ್ತವದಲ್ಲಿ, ಅರ್ಧ ದಿನ ಎನ್ನುವುದು ಪಾಠಕ್ಕೆ ಮಾತ್ರ, ಹೋಗುವ ಬರುವ ಕಾಯಕದಲ್ಲಿ ಹೆಚ್ಚು ಕಡಿಮೆ ಅದು ಒಂದು ದಿನವೇ ಆಗಿರುತ್ತಿತ್ತು.
ಈ ಅರ್ಧ ದಿನದ ಶಾಲೆ, ಅರೆ ಕೆಲಸದ ಆರನೆಯ ದಿನದ ಆಫೀಸು ಬ್ರಿಟಿಷರಿಗೆ ಯಾಕೆ ಬೇಕಾಯಿತು? ಕಂಪೆನಿ ಸರಕಾರಕ್ಕೆ ಬೇಕಾದ ಕಾರಕೂನರಿಂದ ಅತಿ ಹೆಚ್ಚಿನ ದುಡಿಮೆಯ ಬೆಳೆ ತೆಗೆಯಲೆಂದೋ, ಅದಕ್ಕನುಗುಣವಾಗಿ ಶಾಲೆ ಕಾಲೇಜುಗಳಲ್ಲಿ ಕೂಡ ಗರಿಷ್ಠ ಮಟ್ಟದ ಕಲಿಕೆ ನಡೆಯಲೆಂದೋ ಇರಬಹುದು. ಅದೇನೇ ಇರಲಿ. ಇವತ್ತು ಸ್ವತಂತ್ರ ಭಾರತದಲ್ಲಿ, ಇಪ್ಪತ್ತೊಂದನೆಯ ಶತಮಾನದಲ್ಲಿ, ಉದ್ಯೋಗಸ್ಥರ ಮತ್ತು ಮಕ್ಕಳ ಅರೆವಾಸಿ ಕೆಲಸವನ್ನು ಕಂಪ್ಯೂಟರು ಮತ್ತಿತರ ಯಂತ್ರಗಳು ಮಾಡುತ್ತವೆ. ವಿದ್ಯಾರ್ಥಿಗಳ ನೆರವಿಗೆ ಕಂಪ್ಯೂಟರ್, ಟ್ಯೂಶನ್ಮಾಸ್ಟರ್, ಗೈಡುಗಳು, ಸ್ಪೆಶಲ್ ಕ್ಲಾಸುಗಳಿವೆ. ಹೀಗಿರುವಾಗ ಶಾಲೆಗಳಲ್ಲಿ ಈ ಅರ್ಧ ದಿನದಲ್ಲಿ ಕಡಿದು ಹಾಕುವುದಾದರೂ ಏನು?
ಇನ್ನು ಸರಕಾರಿ ಕಚೇರಿಗಳ ಆರನೇ ದಿನದ ಅರೆ ಕೆಲಸದ ವಿಚಾರ. ಸರಕಾರಿ ಕಚೇರಿಗಳಲ್ಲಿ ‘ಕೆಲಸ’ ಆರಂಭವಾಗುವುದೇ ಹನ್ನೊಂದಕ್ಕೆ. ಅನಂತರ ಅರ್ಧಗಂಟೆಯ ಕಾಫಿ ಬ್ರೇಕು. ಹಾಗೆ ಹೀಗೆ ನೋಡ ನೋಡುವಷ್ಟರಲ್ಲಿ ಒಂದು ಗಂಟೆ. ಊಟದ ಬ್ರೇಕು. ಎರಡು ಗಂಟೆಗೆ ಮತ್ತೆ ಕೆಲಸ ಮಾಡುವ ಅರೆವಾಸಿ ಮಂದಿ ‘ಕೆಲಸ ಮಾಡುತ್ತಿರುತ್ತಾರೆ’. ಸಾಯಂಕಾಲದ ವರೆಗೂ ಮಂಪರಿನಲ್ಲೇ ಇರುವ ಉಳಿದ ಅರೆವಾಸಿ ಮಂದಿ ‘ಕೆಲಸ ನೋಡುತ್ತಿರುತ್ತಾರೆ’. ಈಗೀಗಲಂತೂ ಟೀವಿ ನೋಡುವ ಸ್ಟೈಲಿನಲ್ಲಿ ಯಾವುದೋ ಒಂದು ಫೈಲನ್ನು ಗಂಟೆಗಟ್ಟಳೆ ನೋಡುತ್ತಾ ಕುಳಿತುಕೊಳ್ಳುವ ಕಳೆದ ಯುಗದ ಕ್ಲರ್ಕುಗಳು ಮತ್ತು ಕ್ಲರ್ಕಿಣಿಯರು ಮಾಡುವ ಮುಖ್ಯವಾದ ಕೆಲಸವೆಂದರೆ, ಕಣ್ಣು ತೆರೆದಿರಿಸಿಕೊಂಡೇ ನಿವೃತ್ತಿಯ ನಂತರದ ಕೆಟ್ಟಕನಸನ್ನು ಕಾಣುವುದು! ಇದಕ್ಕೆ ಐದು ದಿನ ಇದೆ. ಆರನೆಯ ದಿನವೂ ಬಸ್ಸಿನಲ್ಲೋ, ಸ್ಕೂಟರಿನಲ್ಲೋ, ಕಾರಿನಲ್ಲೋ ಪರದಾಡಿಕೊಂಡು ಯಾಕೆ ಆಫೀಸಿಗೆ ಬರಬೇಕು?
ಮಕ್ಕಳಿಗಾದರೂ ಅಷ್ಟೆ, ಪಾಠ ಅರ್ಧದಿನವಾದರೂ ಪರದಾಟ ಒಂದು ದಿನದ್ದೇ ಅಲ್ಲವೆ? ಇದರ ಬದಲು ಆ ಅರ್ಧ ದಿನವನ್ನು ಮಕ್ಕಳಿಗೆ ಕೊಟ್ಟರೆ ಅವರಿಗೆ ಸ್ವತಂತ್ರವಾಗಿ ಯೋಚಿಸಲು, ಬೆಳೆಯಲು ಒಂದಿಷ್ಟು ಅವಕಾಶವಾದರೂ ಸಿಕ್ಕಿದಂತಾಗುವುದಿಲ್ಲವೆ? ಅದಕ್ಕೆ ‘ಭಾನುವಾರ ಇದೆಯಲ್ಲ?’ ಎನ್ನಬಹುದು ಟೀಚರುಗಳು ಮತ್ತು ಕೆಲವು ತಾಯಿತಂದೆಯರು. ಕೇವಲ ಉಸಿರಾಟಕ್ಕೆ ಬದುಕಿನಲ್ಲಿ ಒಂದು ದಿನವಾದರೂ ಬೇಡವೆ? ಈಗೀಗ ಶನಿವಾರ ಪಾಠದ ಬದಲು ಕೆಲವು ಶಾಲೆಗಳಲ್ಲಿ ‘ಕಲ್ಚರಲ್ ಆಕ್ಟಿವಿಟೀಸ್’ ಅನ್ನೋದನ್ನ ಮಾಡುತ್ತಾರೆ. ಆದರೂ ಮಗುವಿಗೆ ಆರನೇ ದಿನ ಶಾಲೆಗೆ ಹೋಗುವ ಪಾಡು ತಪ್ಪಿದ್ದಲ್ಲ. ಕಲ್ಚರಲ್ ಆಕ್ಟಿವಿಟೀಸ್ ಶುಕ್ರವಾರ ಅಪರಾಹ್ನ ಮಾಡಿದರೆ ಸಾಕು. ಅದರಿಂದ ಮಕ್ಕಳ ಕಲಿಕೆಯಲ್ಲಿ ಏನೂ ನಷ್ಟವಾಗಲಿಕ್ಕಿಲ್ಲ. ವಾಸ್ತವದಲ್ಲಿ, ಇವತ್ತು ಮಕ್ಕಳಿಗೆ ಕಲಿಸುವುದು ಅತಿಯಾಗುತ್ತದೆ. ಈ ಕಲಿಕೆಯ ಗಾಣದ ನೊಗದಡಿಯಲ್ಲಿ ಮಕ್ಕಳು ನರಳುತ್ತಿರುವುದು ಯಾಕೆ ಪಾಲಕರಿಗೆ ಕಾಣಿಸುವುದಿಲ್ಲ? ಈ ಕಲಿಕೆ ಮಕ್ಕಳನ್ನು ಮಾನವ ಯಂತ್ರಗಳನ್ನಾಗಿ ಮಾಡುತ್ತಿದೆ ಎಂಬುದನ್ನು ನಾವು ಯಾಕೆ ಒಪ್ಪಿಕೊಳ್ಳುವುದಿಲ್ಲ? ಇವತ್ತು ಬಹಳ ತಾಯಿತಂದೆ (ಮುಖ್ಯವಾಗಿ ತಂದೆ) ತಮ್ಮ ಮಕ್ಕಳ (ಅಥವಾ ಒಂದೇ ಮಗುವಿನ) ಮುಖವನ್ನೇ ಸರಿಯಾಗಿ ಕಾಣುತ್ತಿಲ್ಲ!
ಅಮೆರಿಕದಲ್ಲಿ, ಇಂಗ್ಲೆಂಡಿನಲ್ಲಿ, ನಮ್ಮ ಕೇಂದ್ರ ಸರಕಾರದ ಆಫೀಸುಗಳಲ್ಲಿ ವಾರದಲ್ಲಿ ಐದು ದಿನ ಕೆಲಸ. ‘ವೀಕ್ ಎಂಡ್’ ಎನ್ನುವುದು ಎರಡು ದಿನ. ಇದರಿಂದಾಗಿ ನಾನಾ ವಿಧ ಆಫೀಸು ಕಚೇರಿ ಕಾರ್ಯಾಲಯಗಳಲ್ಲಿ ಕೆಲಸ ಮಾಡುವವರಿಗೆ ತಮ್ಮ ಮಕ್ಕಳ ಜೊತೆಯಿರಲು ಎರಡು ದಿನ ಸಿಗುತ್ತದೆ. ಇದು ಬಹಳ ಮುಖ್ಯ. ಯಾಕೆಂದರೆ, ಈಗ ಮಕ್ಕಳು ಮತ್ತು ಅವರ ಪಾಲಕರು ಮನೆಯಲ್ಲಿ ಹೋಮ್ವರ್ಕಿನ ಪಿಶಾಚಿಯಿಲ್ಲದೆ ಆರಾಮವಾಗಿ ಜೊತೆಗಿರುವುದೇ ಕಡಿಮೆ. ಕೆಲವರು ಪಾರ್ಕಿಗೋ ಪಿಕ್ನಿಕ್ಕಿಗೋ ಹೋಗಲು ಭಾನುವಾರವನ್ನು ಉಪಯೋಗಿಸುತ್ತಾರೆ. ಅದನ್ನು ಮುಗಿಸಿ ಮನೆಗೆ ಬಂದು ಮಲಗಿದ ಮಗು ಮರುದಿನ ಶಾಲೆಗೆ ಸಿದ್ಧವಾಗಬೇಕಲ್ಲ? ಎಲ್ಲಿದೆ ಔಟಿಂಗಿನ ಅನುಭವದ ನೆನಪು ಮತ್ತು ನೆನಪನ್ನು ಮೆಲ್ಲುವ, ಹಂಚಿಕೊಳ್ಳುವ ಖುಷಿಗೆ ಸಮಯ? ಉದ್ಯೋಗದಲ್ಲಿರುವವರು ಶನಿವಾರ ತಮ್ಮ ಬದುಕಿಗೆ ಸಂಬಂಧಿಸಿದ, ಖರೀದಿ, ಬ್ಯಾಂಕಿಂಗ್ ಮುಂತಾದ ಹಲವು ವ್ಯವಹಾರಗಳನ್ನು ಆರಾಮವಾಗಿ ಮುಗಿಸಬಹುದು. ಇತರ ದಿನಗಳಲ್ಲಿ ಸಂಜೆಯ ಅರೆಗತ್ತಲೆಯಲ್ಲಿ ನಡೆಸುವ ಶಾಪಿಂಗ್, ಡಾಕ್ಟರ ಭೇಟಿ ಇತ್ಯಾದಿಗಳನ್ನು ಟೆನ್ಶನ್ರಹಿತವಾಗಿ ತಮ್ಮ ಆಯ್ಕೆಯ ಹೊತ್ತಿನಲ್ಲಿ ಆರಾಮವಾಗಿ ಮಾಡಬಹುದು. ಕೆಲವು ವಿದ್ಯಾವಂತ ತಾಯಿತಂದೆಯರಾದರೂ ಟ್ಯೂಶನ್ ಬಿಡಿಸಿ ಮಕ್ಕಳನ್ನು ತೊಡೆಯ ಮೇಲೆ ಕುಳ್ಳಿರಿಸಿ ಕಲಿಸಬೇಕಾದ್ದನ್ನು ಕಲಿಸಬಹುದು.
ಐದು ದಿನ ಆಫೀಸು ಸಾಕು. ತಿಂಗಳಲ್ಲಿ ‘ಎರಡನೇ ಶನಿವಾರ ರಜೆ’ ಎನ್ನುವ ತಮಾಷೆಯನ್ನು ವಜಾ ಮಾಡಬಹುದು. ಹಾಗೆ ಮಾಡಿದರೆ ಆರು ದಿನಗಳ ಕೆಲಸವನ್ನು ಐದೇ ದಿನದಲ್ಲಿ ಮಾಡಿ ಮುಗಿಸಲು ಸಾಧ್ಯ ಎನ್ನುವುದನ್ನು ‘ಕೆಲಸ ಮಾಡುವವರು’ ಮಾಡಿ ತೋರಿಸುತ್ತಾರೆ. ಸೋಮಾರಿಗಳಿಗೆ, ಕೆಲಸ ಗೊತ್ತಿಲ್ಲದವರಿಗೆ ಏಳು ದಿನ ಕೊಟ್ಟರೂ ಅಷ್ಟೇ ಮಾಡುವುದು! ಎಷ್ಟು ಗಂಟೆಗಳ ಕೆಲಸ ಎನ್ನುವುದು ಮುಖ್ಯವಲ್ಲ, ಕೆಲಸದ ಗುಣಮಟ್ಟ ಮುಖ್ಯ. ಇಷ್ಟಕ್ಕೂ ಎಂಟು ಗಂಟೆಯಲ್ಲಿ ಎಂಟು ಗಂಟೆಯೂ ಕೆಲಸ ನಡೆಯುವುದು ಅರೆವಾಸಿ ಟೇಬಲುಗಳ ಮೇಲೆ. ಕೆಲವರು ಅವರ ಟೇಬಲುಗಳ ಮೇಲೆ ಇರುವುದೇ ಕಡಿಮೆ. ಮತ್ತೆ ಕೆಲವರು ಎಂಟು ಗಂಟೆಗಳಲ್ಲಿ ಎರಡು ಗಂಟೆಯನ್ನಾದರೂ ಅತ್ತಿತ್ತ ಕುಳಿತವರ ಜೊತೆ ಕಾಡುಹರಟೆಯಲ್ಲಿ ಮತ್ತು ಜಗಳ ಮಾಡುವುದರಲ್ಲಿ, ಚಹಾ ಕಾಫಿ ಕುಡಿಯುವುದರಲ್ಲಿ ಮತ್ತು ಶೌಚಾಲಯದಲ್ಲಿ ಕಳೆಯುತ್ತಾರೆ. ಅಗತ್ಯ ಎಂದಾದರೆ, ಐದು ದಿನದ ಕೆಲಸದ ಸಮಯವನ್ನು ಅರ್ಧ ಗಂಟೆ ಹೆಚ್ಚಿಸಬಹುದು.
ಈ ಬದಲಾವಣೆಯ ಪ್ರಯೋಜನಗಳ ಮತ್ತು ಅನುಕೂಲಗಳ ಕುರಿತು ವಿಚಾರ ಮಾಡುವುದಾದರೆ, ಶಾಪಿಂಗಿಗೆ ಶನಿವಾರ ಇರುವುದರಿಂದ ಈಗ ಪ್ರತಿ ದಿನ ಅಂಗಡಿಗಳಲ್ಲಿ, ಮಾಲ್ಗಳಲ್ಲಿ ಕಾಣಿಸುವ ಜನಸಂದಣಿ ತೆಳುವಾಗುತ್ತದೆ. ಒಂದಷ್ಟು ಮಂದಿಗೆ ಬ್ಯಾಂಕಿಗೆ ಹೋಗುವ ಅಗತ್ಯ ಇರುತ್ತದೆ. ಅದನ್ನು ಶನಿವಾರ ಮಾಡಬಹುದು. ಬೇರೆ ದಿನ ಮುಸ್ಸಂಜೆ ಹೊತ್ತು ಭಯಪಡುತ್ತಾ ಎಟಿಎಂನಿಂದ ಹಣ ಇಳಿಸಿಕೊಳ್ಳಬೇಕಾಗಿಲ್ಲ. ಉಳಿತಾಯದ ವಿಚಾರಕ್ಕೆ ಬರುವುದಾದರೆ, ಪ್ರತಿ ವಾರ ಕೆಲವು ಕೋಟಿ ರುಪಾಯಿಗಳ ಇಂಧನ ಉಳಿತಾಯವಾಗುತ್ತದೆ. ಖಂಡಿತವಾಗಿಯೂ ಜನ ತಮ್ಮ ಸ್ವಾಸ್ಥ್ಯದ ಕಡೆಗೆ, ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಮುಖ್ಯವಾಗಿ ತಮ್ಮ ಮಕ್ಕಳ ಕಡೆಗೆ ಹೆಚ್ಚು ಗಮನ ಕೊಡುವವರಾಗುತ್ತಾರೆ.
ಶನಿವಾರ ಒಂದು ದಿನವಾದರೂ ಎಲ್ಲಾ ಪ್ರಜೆಗಳು ಬಸ್ಸು ಪ್ರಯಾಣದ ಸುಖವನ್ನು ಅನುಭವಿಸಬಹುದು. ಸ್ವಂತ ವಾಹನವನ್ನು ಟೆನ್ಶನಿಲ್ಲದೆ ಓಡಿಸಬಹುದು. ಮನುಷ್ಯರು ಮನುಷ್ಯರನ್ನು ಕಾಣಬಹುದು. ಭಾನುವಾರವನ್ನು ಸಂಪೂರ್ಣವಾಗಿ ಉಸಿರಾಟಕ್ಕೆ ಮತ್ತು ಏಕಾಂತದ ಸುಖಕ್ಕೆ ಇಟ್ಟುಕೊಳ್ಳಬಹುದು. ಎಲ್ಲಾ ನಾಲ್ಕು ಶನಿವಾರಗಳನ್ನು ಶನಿವಾರವೊಂದಕ್ಕೆ ಕೇವಲ ಹತ್ತು ರೂಪಾಯಿಯಂತೆ ಕಚೇರಿ ಉದ್ಯೋಗಸ್ಥರಿಗೆ ಮಾರಾಟಮಾಡಲು ಸರಕಾರ ತೀರ್ಮಾನಿಸಿದರೆ ಖಂಡಿತವಾಗಿಯೂ ಎಲ್ಲರೂ ಕೊಂಡುಕೊಳ್ಳಲು ಸಿದ್ಧರಿರುತ್ತಾರೆ. ಅದಕ್ಕಿಂತ ಹೆಚ್ಚು ಆ ದಿನದ ಓಡಾಟಕ್ಕೆ, ಇಂಧನಕ್ಕೆ ವ್ಯಯವಾಗುವುದಿಲ್ವೆ? ಈ ಮೂಲಕ ಸಂಗ್ರಹವಾಗುವ ಕೋಟಿ ಕೋಟಿ ರುಪಾಯಿಗಳನ್ನು ನೇರವಾಗಿ ಜನಹಿತ ಕಾರ್ಯಕ್ರಮಗಳಿಗೆ ಬಳಸಬಹುದು.
ಒಂದು ದಿನ ಹೆಚ್ಚು ಮನೆಯಲ್ಲಿ ಉಳಿಯುವುದರ ಇತರ ಅನುಕೂಲಗಳಂತೂ ಹತ್ತು ಹಲವು. ಕ್ಲಿನಿಕಿಗೆ, ಆಸ್ಪತ್ರೆಗೆ ಹೋಗುವುದು, ಮಕ್ಕಳೊಡನೆ ಮಾತಾಡುವುದು, ಅವರ ಶಾಲೆಯ ಬಗ್ಗೆ ತಿಳಿದುಕೊಳ್ಳುವುದು. ಟೀವಿಗೆ ರಜೆ ಕೊಟ್ಟು ಮನುಷ್ಯರು ಮನುಷ್ಯರನ್ನು ಕಾಣುವುದು ಇತ್ಯಾದಿ, ಇತ್ಯಾದಿ. ಈ ಮೂಲಕ ನಾವು ಕೂಡ ಡೆವಲಪ್ಡ್ ಕಂಟ್ರಿ ಅಂತ ಲೋಕಕ್ಕೆ ತೋರಿಸುವುದು ಮಾತ್ರವಲ್ಲ, ಐದು ದಿನ ಸಮಯ ಹಾಳು ಮಾಡದೆ, ಚೆನ್ನಾಗಿ ಮತ್ತು ಚುರುಕಿನಿಂದ ಕೆಲಸ ಮಾಡಿ ನಿಜವಾಗಿಯೂ ಮುಂದವರಿಯುವುದು ಸಾಧ್ಯವಿದೆ.
ಆದರೆ ಎಲ್ಲಕ್ಕಿಂತ ಮೊದಲು ವಜಾ ಮಾಡಬೇಕಾದ್ದು ಅರ್ಧ ದಿನದ ಶಾಲೆಯನ್ನು. ಈಗಿನ ಕಲಿಕೆಯ ಹೊರೆಯನ್ನು ಹೊರುವ ಕಾಯಕ ಐದು ದಿನ ನಡೆದರೆ ಸಾಕು.
ಉಜಿರೆಯಲ್ಲಿ ನೆಲೆಸಿರುವ ಕನ್ನಡದ ಖ್ಯಾತ ಕಾದಂಬರಿಗಾರ. ಇಂಗ್ಲಿಷ್ ಭಾಷಾ ಬೋಧನೆಯ ವಿಶೇಷಜ್ಞ