ನೀಲು ಸಾಲುಗಳನ್ನು ನೋಡುತ್ತಾ ಹೋದರೆ ಅವು ಮೂಲಭೂತವಾಗಿ ಕವಿತೆ ಇರುವುದು ವಿವರಣೆ ವ್ಯಾಖ್ಯಾನಗಳಿಗೆ ಒಳಗಾಗುವುದಕ್ಕೆ ಎಂಬ ಹಳೆಯ ಶೈಕ್ಷಣಿಕ ನಂಬಿಕೆಯನ್ನು ಇಲ್ಲವಾಗಿಸುತ್ತವೆ. ಸಾಹಿತ್ಯವೆಂಬುದು ಸಾಮೂಹಿಕ ಸೃಜನಶೀಲ ಸಂತೋಷದ ಭಾಗವಾಗಿ ಉಳಿಯದೆ ಶೈಕ್ಷಣಿಕ ಶಿಸ್ತಿನ ಭಾಗವಾದ ಪರಿಣಾಮವಾಗಿ ಕಾವ್ಯಕ್ಕೆ ಒಂದು ನಿರ್ದಿಷ್ಟ ಬಂಧವಿರಬೇಕು- ರೂಪಕ ಸಂಕೇತಗಳಿಂದ ಇಡಿಕಿರಿದಿರಬೇಕು- ವಿಮರ್ಶೆಯ ಸಿದ್ಧಾಂತಗಳ ವಿವರಣೆಗೆ ಒಳಗಾಗುವಂತಿರಬೇಕು ಎಂಬ ವಾದ ಬಲಿಯತೊಡಗಿತು. ಆದರೆ ಇವ್ಯಾವುಗಳ ಸಹಾಯವಿಲ್ಲದೆಯೇ ಕಾವ್ಯ ಇರಬಲ್ಲದು – ಓದುಗರನ್ನು ಆಳವಾಗಿ ತಟ್ಟಬಲ್ಲದು ಎಂಬುದಕ್ಕೆ ನೀಲು ಬರಹ ಉದಾಹರಣೆಯಾಗಿದೆ.
ಎಸ್. ಸಿರಾಜ್ ಅಹಮದ್ ಬರೆಯುವ ಹೊಸ ಅಂಕಣ ಇಂದಿನಿಂದ
ಯಾವಾಗಲೂ ಕವಿಯಾಗಿರು, ಗದ್ಯ ಬರೆಯುವಾಗಲೂ- ಬೋದಿಲೇರ್
ಶುರುವಿಗೇ ಬೋದಿಲೇರ್ ಹೇಳಿದ ಮಾತುಗಳು ಲಂಕೇಶರು ತಮಗೆ ತಾವೇ ಸ್ವಗತದಲ್ಲಿ ಹೇಳಿಕೊಂಡಂತೆ ಕಾಣುತ್ತವೆ. ಲಂಕೇಶರ ಬರಹಗಳನ್ನು ಓದುವಾಗ ಅವರ ಕಾವ್ಯ ಹಾಗೂ ಗದ್ಯ ಬರಹಗಳ ನಡುವಿನ ವಿಚಿತ್ರ ಸಂಬಂಧವನ್ನು ಗಮನಿಸಬೇಕು. ಅವರ ಒಟ್ಟು ಸಾಹಿತ್ಯದ ಬಗ್ಗೆ ಚರ್ಚಿಸುವಾಗ ಗದ್ಯಬರಹಗಳಾದ “ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ” , “ರೊಟ್ಟಿ”,, “ಕಲ್ಲು ಕರಗುವ ಸಮಯ”, “ಬಿರುಕು” , “ಮುಸ್ಸಂಜೆಯ ಕಥಾಪ್ರಸಂಗ”ಳನ್ನು ಹೆಸರಿಸಿದರೂ ಲಂಕೇಶರ ಓದು ಶುರುವಾಗುವುದು ಅವರ ಪ್ರಸಿದ್ಧ ಕವನಗಳಾದ “ಅವ್ವ”, “ಬಿಚ್ಚು”, ನೀಲು ಪದ್ಯಗಳು ಮತ್ತು ಬೋದಿಲೇರನ ಕಾವ್ಯದ ಅನುವಾದಗಳಿಂದಲೇ. ಅವರ ವಿಪುಲವಾದ ಗದ್ಯಬರಹಗಳನ್ನು ಪದ್ಯವೇ ಎನ್ನುವಷ್ಟು ತೀವ್ರವಾಗಿ ಅಥವಾ ಗದ್ಯವನ್ನೇ ಕಾವ್ಯವೆನ್ನುವಂತೆ “ತಪ್ಪಾಗಿ” ಓದುತ್ತೇವೆ. ಅಂದರೆ ಲಂಕೇಶರನ್ನು ಇಡಿಯಾಗಿ ಓದುವಾಗ ಸಾಹಿತ್ಯ ಪ್ರಕಾರಗಳ ಪರಿಶುದ್ಧತೆ ಮುರಿದುಬೀಳುವುದು, ಸಾಹಿತ್ಯದ ವರ್ಗೀಕರಣಗಳು ನಿರರ್ಥಕವಾಗುವುದು ಸೂಕ್ಷ್ಮ ಓದುಗನಿಗೆ ನಿಧಾನಕ್ಕಾದರೂ ಅರಿವಿಗೆ ಬರುತ್ತದೆ.
ಅವರ ಬರಹದ ಗುಣವನ್ನು ಗುರುತಿಸುವಾಗ ಗದ್ಯವನ್ನು ಕಾವ್ಯದಂತೆ ಹೆಪ್ಪುಗಟ್ಟಿಸಿ ಬರೆಯುವ ಲಂಕೇಶ್ ಅಥವಾ ಸಲೀಸು ಹರಿಯುವ ತಿಳಿನೀರ ಹರಿವಿನಂಥ ಕಾವ್ಯವನ್ನು ಗದ್ಯದಲ್ಲಿ ಬರೆಯುವ ಲಂಕೇಶ್- ಅಥವಾ ತಾನು ಬರೆಯುವ ಬದುಕನ್ನು ಕಾವ್ಯದಂತೆ ಸಹಜವಾಗಿ- ಸ್ವಚ್ಛಂದವಾಗಿ –ಆಳವಾದ ತೀವ್ರತೆಯಿಂದ ಬರೆಯುವ ಲಂಕೇಶ್… ಹೀಗೆ ಏನನ್ನು ಹೇಳಿದರೂ ಅವರ ಬರಹವನ್ನು ಸರಿಯಾಗಿ ವಿವರಿಸುವ ವಿಶ್ಲೇಷಣೆಯಂತೆ ಕಾಣುತ್ತದೆ. ಒಟ್ಟಿನಲ್ಲಿ ಲಂಕೇಶರ ಪ್ರತಿ ಬರಹದಲ್ಲೂ ಬೆಚ್ಚಗಿನ ಪಾಕದಂತೆ ಇರುವ ಕಾವ್ಯ ಪ್ರಜ್ಞೆಯ ಕುರಿತು ಹೆಚ್ಚು ಚರ್ಚೆ ನಡೆದಂತೆ ಕಾಣುವುದಿಲ್ಲ. ನಡೆದಿದ್ದರೂ “ಅವ್ವ”, “ದೇಶಭಕ್ತ ಸೂಳೆಮಗನ ಗದ್ಯಗೀತೆ”, “ಬಿಚ್ಚು” ಮೊದಲಾದ ಕೆಲವು ಕವಿತೆಗಳಿಗೆ ಮಾತ್ರ ಸೀಮಿತಗೊಂಡಿದೆ. ಮುಖ್ಯವಾಗಿ ಬಹಳ ವಿಪುಲವಾಗಿ ಸುಮಾರು 20-25 ವರ್ಷ ಬರೆದ ನೀಲು ಕವಿತೆಗಳನ್ನು ಕುರಿತು ಗಂಭೀರ ಚರ್ಚೆ ನಡೆದಂತೆ ಕಾಣುವುದಿಲ್ಲ. ಕಿರಂ ಅವರು ನೀಲು ಪದ್ಯಗಳನ್ನು ಕುರಿತು “ಅಲ್ಪಮಹಾ ಕಾವ್ಯ” ಎಂದು ಕರೆದಿರುವುದೇ ಅವುಗಳನ್ನು ಕುರಿತ ಮಹತ್ವದ ವಿಶ್ಲೇಷಣೆಯಾಗಿದೆ.
ವಿಚಿತ್ರವೆಂದರೆ, ಸುಮಾರು 20-25 ವರ್ಷಗಳವರೆಗೆ ನಿರಂತರವಾಗಿ ಬರೆದ-ಬಹಳ ಜನಪ್ರಿಯವಾಗಿದ್ದ- ನೀಲು ಕವಿತೆಗಳನ್ನು ಲಂಕೇಶರು ನಿರ್ದಿಷ್ಟ ಸ್ವರೂಪದಲ್ಲಿಯಾಗಲೀ, ಸಮಗ್ರವಾಗಿಯಾಗಲೀ ಪ್ರಕಟಿಸುವ ಗೋಜಿಗೆ ಹೋಗಲಿಲ್ಲ. ಟೀಕೆ ಟಿಪ್ಪಣಿ-ನಾಟಕಗಳು- ಕತೆಗಳು – ಇವೇ ಮೊದಲಾದ ಬೇರೆ ಬರಹಗಳನ್ನು ನಿಯಮಿತವಾಗಿ ಪ್ರಕಟಿಸುತ್ತಾ ಬಂದ ಲಂಕೇಶರು ನೀಲು ಬರಹವನ್ನು ಪ್ರಕಟಿಸುವ ಇರಾದೆಯನ್ನು ಕೊನೆಯವರೆಗೂ ತೋರದೇ ಇದ್ದುದನ್ನು ನೋಡಿದರೆ ಇಂಥ ರಚನೆಗಳನ್ನು ಗೊತ್ತಾದ ಚೌಕಟ್ಟಿನಲ್ಲಿ ಓದುವುದು ಅವರಿಗೆ ಬೇಕಿರಲಿಲ್ಲ ಅನಿಸುತ್ತದೆ. ಬರೆದುದನ್ನೆಲ್ಲ ಪ್ರಕಟಿಸಬೇಕೆನ್ನುವ ಹಪಹಪಿ ಮತ್ತು ಬರೆದು ಮುಗಿಸುವ ಮುನ್ನವೇ ತನ್ನ ಬರಹವು ಯಾವ ಪೇಜಿನಲ್ಲಿ – ಯಾರ ಗೋಡೆಗಳಲ್ಲಿ – ಯಾರಿಗೆ ಲಗತ್ತಿಸಿ ಎಂಥ ಭಾವಚಿತ್ರದೊಂದಿಗೆ ರಾರಾಜಿಸಬೇಕು ಎಂದು ಯೋಚಿಸುವ ಕಾಲಮಾನದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದ ನೀಲುವನ್ನು ಇಡಿಯಾಗಿ ಪ್ರಕಟಿಸುವ ಬಗ್ಗೆ ಯೋಚಿಸದೇ ಹೋದದ್ದು ಕವಿಯೊಬ್ಬನ ಭಾವಜೀವನದಲ್ಲಿ ಅಪೂರ್ವ ಸಂಗತಿಯಾಗಿದೆ. ಇದೇ ಕಾರಣಕ್ಕಾಗಿಯೇ ತಾನು ಬರೆದದ್ದು ಸಾವಿರಾರು ಜನರ ಬಾಯಲ್ಲಿ ನಲಿದಾಡುತ್ತಿದ್ದರೂ ಅದನ್ನು ನಿರಾಯಾಸವಾಗಿ ಅನಾಮಿಕಗೊಳಿಸಿದ ಕ್ರಮವೇ ನೀಲು ಕಾವ್ಯವನ್ನು ಜಾನಪದೀಯಗೊಳಿಸಿದೆ. ಹಾಗಾಗಿಯೇ ಲಂಕೇಶರ ನೀಲು ಕವನಗಳನ್ನು ವಿವರಿಸುವುದು-ವ್ಯಾಖ್ಯಾನಕ್ಕೆ ಈಡುಮಾಡುವುದು ವಿಪರ್ಯಾಸದಂತೆ, ಸೃಜನಶೀಲ ಹಿಂಸೆಯಂತೆ ಕಾಣಬಹುದು. ನವಿರಾಗಿ, ಕೋಮಲವಾಗಿ ಮತ್ತು ಸೂಕ್ಷ್ಮವೂ ಸಂಕೀರ್ಣವೂ ಆಗಿರುವ ನೀಲು ಬರಹವನ್ನು ಕುರಿತು ವಿವರಣೆಗಳಿಗೆ ಇಳಿಯುವುದು ಮೂರ್ಖತನದಂತೆ ಕಾಣಬಹುದು.
ನೀಲುಕವನಗಳ ಬಗ್ಗೆ ಗಹನವಾದ ಚರ್ಚೆ ನಡೆದಿಲ್ಲವಾದರೂ ನಾಡಿನ ಉದ್ದಗಲಕ್ಕೂ ನೆನಪಿನಿಂದಲೇ ಅವನ್ನು ಉಲ್ಲೇಖಿಸುವ ಉತ್ಸಾಹಿ ಓದುಗರು-ಲೇಖಕರು ಎಲ್ಲ ಕಡೆ ಸಿಗುತ್ತಾರೆ. ಕೇಶವ ಕುಲಕರ್ಣಿಯವರು ತಾವು ಇತ್ತೀಚೆಗೆ ಕನ್ನಡದಲ್ಲಿ ಬರೆದ ಹಾಯ್ಕುಗಳನ್ನು “ನೀಲುಗಳು” ಎಂದು ಕರೆದಿದ್ದಾರೆ. ನಾಲ್ಕೈದು ಸಾಲಿನ ಪುಟ್ಟ ರಚನೆಗಳನ್ನು ಹನಿಗವನ, ಚುಟುಕು ಎಂದು ಕರೆಯುವ ಬದಲಾಗಿ ಅವುಗಳನ್ನು “ನೀಲುಗಳು” ಎಂದು ಕರೆಯುವುದೇ ಹೆಚ್ಚುಸೂಕ್ತ ಎಂದು ಅವರು ಹೇಳುತ್ತಾರೆ. ನೀಲು ಕವನಗಳು ಮಾತ್ರವಲ್ಲ ನೀಲು ಒಂದು ಸ್ವತಂತ್ರ ವ್ಯಕ್ತಿತ್ವವಾಗಿ, ಒಂದು ಅಭಿವ್ಯಕ್ತಿಯ ಕ್ರಮವಾಗಿ ರೂಪುಗೊಳ್ಳುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.
2
ಒಂದು ಕಡೆ ಲಂಕೇಶರು “ಬರೆಯುವ ಕ್ರಿಯೆ ಮುಖ್ಯ” ಎನ್ನುತ್ತಾರೆ. ಅವರಿಗೆ ಮೂಲತಃ ಬಹಳ ಸೂಕ್ಷ್ಮವಾಗಿ ಬರೆಯುವುದು ಅಷ್ಟೇ ತೀವ್ರವಾಗಿ ಅನುಭವಿಸುವುದು ಮುಖ್ಯವೇ ಹೊರತು ಬರಹದ ಪ್ರಕಟನೆ-ವ್ಯಾಖ್ಯಾನ ಇತ್ಯಾದಿಗಳು ಅಲ್ಲ.
ಮೊನ್ನೆ ಮಳೆ ಬಂದಾಗ
ನಾನು ಆಘ್ರಾಣಿಸಿದ
ಮಣ್ಣಿನ ವಾಸನೆಯ
ಬಣ್ಣಿಸಲು ಹೋಲಿಕೆಗಳೇ
ಇಲ್ಲದಿರುವುದು
ಎಷ್ಟು ಸೋಜಿಗ
***
ನಾನು ನನ್ನ ನಲ್ಲನ
ನಡುವಿನ ಸಂಬಂಧವ
ಜೇನು ಬೆಲ್ಲ ಇತ್ಯಾದಿಗಳಿಗೆ
ಹೋಲಿಸುವವರಿಗೆ
ಇಂದಿಗೂ ಅದನ್ನು ವರ್ಣಿಸಲು
ನಾನು ತಕ್ಕ ಮಾತಿಗಾಗಿ
ಹುಡುಕುತ್ತಿರುವ
ಆನಂದ ಗೊತ್ತಿಲ್ಲ
-ಹೀಗೆ ಬಹಳ ತೀವ್ರವಾಗಿ ಬರೆಯುವ- ಬದುಕುವ ಕ್ರಿಯೆ ಮತ್ತು ಸಕಾರಣವಾಗಿ ವಿವರಿಸಲಾಗದ ಆನಂದವನ್ನು ವರ್ಣಿಸಲು ತಕ್ಕ ಮಾತನ್ನು ಹುಡುಕುತ್ತಲೇ ಇರುವ ವ್ಯರ್ಥಯತ್ನದ ಭಾಗವಾಗಿ ನೀಲು ಪದ್ಯಗಳು ಇವೆ ಎಂದು ಅನಿಸುತ್ತದೆ.
ನೀಲು ಸಾಲುಗಳನ್ನು ನೋಡುತ್ತಾ ಹೋದರೆ ಅವು ಮೂಲಭೂತವಾಗಿ ಕವಿತೆ ಇರುವುದು ವಿವರಣೆ ವ್ಯಾಖ್ಯಾನಗಳಿಗೆ ಒಳಗಾಗುವುದಕ್ಕೆ ಎಂಬ ಹಳೆಯ ಶೈಕ್ಷಣಿಕ ನಂಬಿಕೆಯನ್ನು ಇಲ್ಲವಾಗಿಸುತ್ತವೆ. ಸಾಹಿತ್ಯವೆಂಬುದು ಸಾಮೂಹಿಕ ಸೃಜನಶೀಲ ಸಂತೋಷದ ಭಾಗವಾಗಿ ಉಳಿಯದೆ ಶೈಕ್ಷಣಿಕ ಶಿಸ್ತಿನ ಭಾಗವಾದ ಪರಿಣಾಮವಾಗಿ ಕಾವ್ಯಕ್ಕೆ ಒಂದು ನಿರ್ದಿಷ್ಟ ಬಂಧವಿರಬೇಕು- ರೂಪಕ ಸಂಕೇತಗಳಿಂದ ಇಡಿಕಿರಿದಿರಬೇಕು- ವಿಮರ್ಶೆಯ ಸಿದ್ಧಾಂತಗಳ ವಿವರಣೆಗೆ ಒಳಗಾಗುವಂತಿರಬೇಕು ಎಂಬ ವಾದ ಬಲಿಯತೊಡಗಿತು. ಆದರೆ ಇವ್ಯಾವುಗಳ ಸಹಾಯವಿಲ್ಲದೆಯೇ ಕಾವ್ಯ ಇರಬಲ್ಲದು –ಓದುಗರನ್ನು ಆಳವಾಗಿ ತಟ್ಟಬಲ್ಲದು ಎಂಬುದಕ್ಕೆ ನೀಲು ಬರಹ ಉದಾಹರಣೆಯಾಗಿದೆ. ಪ್ರಾಸದ ಹೆಸರಿನಲ್ಲಿ ಸಾಲಿಗೆ ಸಾಲನ್ನು ಪೋಣಿಸಿ ಅಸಂಬದ್ಧಗಳನ್ನೇ ಹೊಸೆಯುವ ಎಳೆಯ ವಯಸ್ಸಿನ ಹುಡುಗರು ಏನನ್ನಾದರೂ ಬರೆಯುವ ಮೊದಲು ಸಣ್ಣಸಣ್ಣ ಸಾಲುಗಳಲ್ಲಿ ಎಂಥ ತಾಜಾತನ ಹಾಗೂ ಎಷ್ಟು ಅರ್ಥದ ಆಯಾಮಗಳು ಸೇರಿರುತ್ತವೆ ಎಂಬುದನ್ನು ಅರಿಯಲು ಶರಣರ ವಚನಗಳನ್ನು-ಲಂಕೇಶರ ನೀಲು ಸಾಲುಗಳನ್ನು ತಪ್ಪದೇ ಓದಬೇಕು.
ಹರಿವ ನೀರಿನ ಸರಸ
ಇಬ್ಬನಿಯ ಸಡಗರದ ಮೌನ
ಕಾಮನಬಿಲ್ಲಿನ ವರ್ಣರಂಜಿತ ಲಜ್ಜೆ
ಇವೆಲ್ಲವುಗಳ ಮುಗ್ಧತೆ
ನನ್ನಲ್ಲಿ ಇರದಿದ್ದರೆ
ನನ್ನ ಬರವಣಿಗೆ ವ್ಯರ್ಥ
***
ನೀಲು ಆಕಾಶದಿಂದ
ಉದುರಿದಂತೆ ನಟಿಸಲಾರಳು
ಆಕೆಯ ಉಸಿರೂ ಕೂಡ
ಚಿಗುರು ಗರುಕೆಯೊಂದಿಗೆ
ಹೆಣೆದುಕೊಂಡಿದೆ
***
ನನ್ನ ಗೋಳುಗಳನ್ನು
ಪೆನ್ನು ಪೇಪರಿನಲ್ಲಿ
ಎಲ್ಲರಿಗೆ ಕೊರೆದ ಮೇಲೆ
ಆಗುಂಬೆಯ ದಟ್ಟ ಕಾಡಿನ
ನೀಲ ಆಕಾಶದಲ್ಲಿ
ತಮ್ಮ ಚರಿತ್ರೆ ಬರೆಯುವ
ಹಕ್ಕಿಗಳ ಇಂಪು ಕೇಳಿ
ಅಸೂಯೆಗೊಂಡೆ
ಇಂಥ ಸಾಲುಗಳಲ್ಲಿ ನೀಲು ತಾನು ಎಂಥವಳು ಎಂಬುದನ್ನು ಮಾತ್ರ ಹೇಳುತ್ತಿಲ್ಲ. ಅದರ ಜೊತೆಗೇ ನಿಜವಾದ ಕಾವ್ಯ ಎಂದರೆ ಹೇಗಿರುತ್ತದೆ ಎಂದು ಸೂಚಿಸುತ್ತಿದ್ದಾಳೆ. ಕವಿತೆಯನ್ನು ರೂಪಕ ಸಂಕೇತ ವಿವರಣೆ ವ್ಯಾಖ್ಯಾನ ವಿಮರ್ಶೆ ಮೊದಲಾದ ಕಾಂಡಕೊರಕಗಳಿಂದ ದೂರಮಾಡಿ ಅದು ತನ್ನಷ್ಟಕ್ಕೆ ತಾನೇ ಗರುಕೆ, ಇಬ್ಬನಿ, ನದಿಗಳಂತೆ ಸ್ವಯಂಪೂರ್ಣ ಸ್ಥಿತಿಯಲ್ಲಿ ನಿರಾತಂಕವಾಗಿ ಇರಬಲ್ಲುದು ಎಂದು ನೀಲು ಸೂಚಿಸುತ್ತಿರುವುದು ವಿಶೇಷವಾಗಿದೆ.
3
ಬಹಳ ಸಾರಿ ಲಂಕೇಶರ ಸಾಹಿತ್ಯವನ್ನು ಚರ್ಚಿಸುವಾಗ-ಅವರು ಮಾಡಿದ ಬೋದಿಲೇರನ ಕಾವ್ಯದ ಅನುವಾದ ಹಾಗೂ ಅಲ್ಲಿ ಬರುವ ಲೈಂಗಿಕ ಲೋಕವನ್ನು ಇಡಿಯಾಗಿ ಲಂಕೇಶರಿಗೆ ಅನ್ವಯಿಸಿಕೊಂಡು-ಅವರ ಸಾಹಿತ್ಯದಲ್ಲಿ ಮುಕ್ತ ಲೈಂಗಿಕತೆಯ ವಿಜೃಂಭಣೆಯಿದೆ ಎಂಬ ಮಾತುಗಳನ್ನು ಹೇಳಲಾಗಿದೆ. ಹಾಗೆಯೇ ನೀಲು ಸಾಲುಗಳನ್ನು ಬೋದಿಲೇರನ ಕಾವ್ಯದ ಕವಲಿನಂತೆ ನೋಡುವ ಪರಿಪಾಠವೂ ಇದೆ. ಲಂಕೇಶರ ಕಣ್ಮರೆಯ ತರುವಾಯ ಬೋದಿಲೇರನ ವ್ಯಕ್ತಿವಾದಿ ನಿಲುವುಗಳನ್ನು ಲಂಕೇಶರಿಗೆ ಅನ್ವಯಿಸಿ ಅವರನ್ನು “ಬೋದಿಲೇರನ ಸಖ” ಎಂದು ಕರೆದಿದ್ದೂ ಇದೆ. ಮೇಲ್ನೋಟಕ್ಕೆ ನೀಲು ಸಾಲುಗಳು ಬೋದಿಲೇರ್ ಕಾವ್ಯದ ಅನುವಾದದ ಮುಂದುವರಿಕೆಯಂತೆ ಕಂಡರೂ ಅದಕ್ಕಿಂತ ಸ್ವತಂತ್ರವಾಗಿ ಬದುಕುವ ಗುಣ ಅವುಗಳಿಗಿದೆ.
ಬೋದಿಲೇರನ ಕಾವ್ಯದಲ್ಲಿ ಗಂಡಿನ ಅತಿರೇಕದ ಕಾಮದ ಸ್ವಚ್ಛಂದ ವಿವರಣೆಗಳಿವೆ. ಮನುಷ್ಯ ತನ್ನ ನಿಜವಾದ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳಲು ಸಮಾಜದ ಎಲ್ಲ ಕಟ್ಟುಪಾಡುಗಳು-ನೈತಿಕ ನಿರ್ಬಂಧಗಳನ್ನು ಮುರಿದು ಹಾಕಲು ಕಾಮ ಒಂದು ಮಾಧ್ಯಮವಾಗಿ ಬೋದಿಲೇರನ ಕಾವ್ಯದಲ್ಲಿ ಕಾಣಿಸುತ್ತದೆ. ಲೈಂಗಿಕತೆಯನ್ನು ಮುಕ್ತವಾಗಿ ಅನುಭವಿಸುವ ಮೂಲಕವೇ ಮನುಷ್ಯ ತನ್ನ ಪರಿಪೂರ್ಣ ಅಸ್ತಿತ್ವವನ್ನು, ತನಗೆ ದೊರಕಿರುವ ಅಪರಿಮಿತ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳಬೇಕು ಎಂಬ ಸೂಚನೆ ಬೋದಿಲೇರನ ಕಾವ್ಯದಲ್ಲಿದೆ. ಆದರೆ ಬೋದಿಲೇರನ ಕಾವ್ಯದ ಗಂಡು ನಿರೂಪಕನಿಗೆ ಕಾಮದ ಹೊರತಾಗಿ, ಬದುಕಿನ ಸರಳ-ಸಹಜ ಸೌಂದರ್ಯದ ಬಗ್ಗೆ, ಮನುಷ್ಯನ ಅಸ್ತಿತ್ವದಲ್ಲಿಯೇ ಇರುವ ವಿಪರ್ಯಾಸಗಳ ಬಗ್ಗೆ ಗಮನವಿದ್ದಂತೆ ಇಲ್ಲ. ಬೋದಿಲೇರನ ಕಾವ್ಯದ ಒರಟು ಗಂಡಸುಗಾರಿಕೆಯನ್ನು ಮೀರಲಿಕ್ಕಾಗಿಯೇ ಲಂಕೇಶರು ತಮ್ಮ ಸಂವೇದನೆಯಲ್ಲಿ ನೀಲು ಎಂಬ ಹೆಣ್ಣು ರೂಪಕವನ್ನು ಸೃಜಿಸಿಕೊಂಡರು ಎನಿಸುತ್ತದೆ. ನೀಲುವಿನ ರೂಪಕದ ಮೂಲಕ ನೋಡಿದಾಗ ಬೋದಿಲೇರನ ಕಾವ್ಯವನ್ನು ಲಂಕೇಶರಿಗೆ ಆರೋಪಿಸಿಕೊಂಡು ತಪ್ಪಾಗಿ ಓದುವ ಅವರ ಆರಾಧಕ ಓದುಗರಿಗೆ ಲಂಕೇಶರ ಬರಹದಲ್ಲಿ ಹೊಸ ಆಯಾಮವೊಂದು ಕಾಣಿಸುತ್ತದೆ.
ಹನಿ ನೀರು ಕಿಂಚಿತ್ ಹಸಿರು
ಸೂರ್ಯನ ಕಿರಣ ಇಷ್ಟು ಕಂಡಲ್ಲಿ
ಪುಟ್ಟ ಗೂಡು ಕಟ್ಟಿ ತತ್ತಿ ಇಟ್ಟು
ಮರಿ ಮಾಡಿ
ತಿಂಗಳ ಸ್ವರ್ಗ ಕಾಣುವ
ಪಕ್ಷಿ ನಾನಾಗಲೇ?
***
ಯಾರು ಪ್ರತಿಭಾವಂತ?
ಬಣ್ಣದ ಚಿಟ್ಟೆಯ ಬಗ್ಗೆ ಕೂಡ
ಕುತೂಹಲ ಮತ್ತು ಪ್ರೀತಿ ಉಳ್ಳ
ಸರಳ ಮಾತ್ರ
***
ಚಿನ್ನ ಬೆಳ್ಳಿ ಹರಿವಾಣಗಳ ನಡುವೆ
ಮಣ್ಣಿನ ಹಣತೆ
ತನ್ನ ಸರಳತೆ ಮತ್ತು ಕ್ಷಣಿಕತೆಗಳಿಂದಲೇ
ಅಂದವಾಗಿ ಕಾಣಿಸಿತು.
ಗಿಡ ಬೆಳೆಸುವ ನಾನು
ಹೂವು ಅರಳಿಸಲಾರೆ ಎಂಬುದು
ನನ್ನ ಅಸಹಾಯಕತೆ
***
ಸುಖಕ್ಕಾಗಿ ಕಾತರಿಸುವ
ಕೋಟ್ಯಾಂತರ ಜನಕ್ಕೆ ಹಣ, ನೆಲ, ಹೊನ್ನು ಬೇಕು,
ಕೆಲವರಿಗೆ ಪ್ರೀತಿ
ಎಲ್ಲೋ ಕೆಲವರಿಗೆ, ಕುಗ್ರಾಮದ
ಹಿತ್ತಿಲೊಂದರ ಹೂವು
ಬಡ ಜೋಗಿಯ ಹಾಡು
***
ನಿಜವಾದ ಕವಿ
ಹೊಂಗೆಯ ಚಿಗುರನ್ನು
ಮಾನವ ಕುಲ ಮೊದಲಬಾರಿಗೆ
ಕಂಡಂತೆ ಕಾಣುವುದು
ಮನುಕುಲದ ಭರವಸೆ
ನೀಲು ಕೇವಲ ಕಾಮವನ್ನು ಮಾತ್ರವಲ್ಲ ಹೊಂಗೆಯ ಚಿಗುರನ್ನೂ ಸಹ ಮನುಷ್ಯ ಕುಲ ಮೊದಲಬಾರಿ ನೋಡುತ್ತಿದೆಯೇನೋ ಎಂಬ ಆದಿಮ ಮುಗ್ಧತೆ-ತನ್ಮಯತೆಯಿಂದ ವಿವರಿಸುವ ಕಾರಣಕ್ಕಾಗಿಯೇ ನೀಲು ಸಾಲುಗಳಿಗೆ ಬೋದಿಲೇರನ ಕಾವ್ಯಕ್ಕಿಂತ ಬೇರೆಯದೇ ಆದ ಜೀವಶ್ರೀಮಂತಿಕೆ ಇದೆ. ಇಂಥ ಜೀವಕಾಮದ ಆರಾಧನೆಯ ಗುಣ ಬೋದಿಲೇರನ ಕಾವ್ಯದಲ್ಲಿ ಇಲ್ಲ. ಹಾಗೆಯೇ ಬೋದಿಲೇರನಲ್ಲಿ ಕಾಣಿಸುವ ಲೋಲುಪ ವ್ಯಕ್ತಿವಾದಿ ನಿಲುವುಗಳಿಗಿಂತ ಭಿನ್ನವಾಗಿ ನೀಲು ಸಮಷ್ಟಿಯ ಬಗ್ಗೆ, ಇಬ್ಬನಿಯ ಸರಳತೆಯ ಬಗ್ಗೆ, ಮನುಷ್ಯರ ಪೆದ್ದುತನದ ಬಗ್ಗೆ ರಾಜಕೀಯದ ಬಗ್ಗೆ–ಹೀಗೆ ಯಾವುದರ ಬಗ್ಗೆಯಾದರೂ ಇರಲಿ ಮುಕ್ತವಾಗಿ ಚಿಂತಿಸುವುದನ್ನು ನೋಡಬಹುದು.
ಲಂಕೇಶರು ತೀರಿಹೋದ ನಂತರ ಪ್ರಕಟವಾದ ನೀಲುವಿನ ಮೂರು ಸಂಪುಟಗಳಲ್ಲಿ ಕೈಗೆ ಸಿಕ್ಕಿದ್ದನ್ನು ಉಲ್ಲೇಖಿಸಿದರೂ ಅವು ಬದುಕಿನ ಎಲ್ಲ ಆಯಾಮಗಳ ಕುರಿತು ಮುಕ್ತವಾಗಿ ಸ್ಪಂದಿಸಿದ ಉತ್ತಮ ಉದಾಹರಣೆಗಳಂತೆ ಕಾಣುತ್ತವೆ.
ಹಿಕ್ಕೆ, ಹಸುಗಳ ಉಸಿರು,
ಉಚ್ಛೆ, ಹಾಲು, ಹುಲ್ಲಿನ ಕಮರು
ಒಟ್ಟುಗೂಡಿದ ವಿಚಿತ್ರ ವಾಸನೆಯನ್ನು
ಹೋಲುವ ಸುಗಂಧ
ಇನ್ನೊಂದಿಲ್ಲ
***
ಹೊಸನೀರು ಗದ್ದೆಗೆ ಹರಿದು
ಪೈರಿನೊಂದಿಗೆ
ಪಿಸುಗುಟ್ಟುವ ತಂಪು ಶಬ್ದವ
ಹೋಲಿಸುವ ನುಡಿ ಸಿಕ್ಕುತ್ತಿಲ್ಲ
***
ಬಟ್ಟೆ, ಮನೆ, ಬಚ್ಚಲು ಇತ್ಯಾದಿ
ಮರೆಗಳನ್ನು ಮಾಡಿಕೊಂಡ ಮನುಷ್ಯ
ನೀತಿಶಾಸ್ತ್ರವನ್ನೂ ರೂಪಿಸಿಕೊಂಡದ್ದನ್ನು
ಪಶುಪಕ್ಷಿಗಳು ತಮಾಷೆ ಮಾಡುತ್ತಿವೆ
***
ಎಂಥವನನ್ನೂ ವಾಕ್ಪಟುವನ್ನಾಗಿ
ಮಾಡುವ ಎರಡು ವಸ್ತುಗಳು
ವ್ಯಾಪಾರ ಮತ್ತು ಪ್ರೇಮ
ಎನ್ನುವುದು ಎಷ್ಟು ತಮಾಷೆ !
***
ದುಷ್ಟ ಪುಸ್ತಕ ಅಪ್ಪಟ ಅಪಾಯದ್ದು
ಯಾಕೆಂದರೆ
ದುಷ್ಟ ಮನುಷ್ಯನಂತೆ ಅದು
ಅಕಸ್ಮಾತ್
ಪಶ್ಚಾತ್ತಾಪ ಪಡಲಾರದು
***
“ತಮ್ಮ ರಾಜಕೀಯ ಸಿದ್ಧಾಂತವೇನು?”ಎಂದು
ಮಂಡ್ಯದ ನಾಯಕರನ್ನು ಕೇಳಿದರೆ ತಬ್ಬಿಬ್ಬಾಗಿ
“ಸಿದ್ಧಾಂತವಾ? “
“ನಾನು ಯಾವುದಕ್ಕೂ ಸಿದ್ಧ” ಎಂದು ಟವಲು ಕೊಡವಿ
ರೆಡಿಯಾದರು.
***
ಕಡು ಬಡವ ಕೂಡ
ತನ್ನ ಗುಡಿಸಲಲ್ಲಿ
ಸುಂದರ ಮಣ್ಣಿನ ತಟ್ಟೆಯ ಪಕ್ಕಕ್ಕೆ
ಹೊಳೆವ ತಾಮ್ರದ ಗಿಂಡಿಯಲ್ಲಿ
ನೀರಿಟ್ಟುಕೊಂಡರೆ
ಅದೇ ಅಭಿರುಚಿ
ಅಷ್ಟೇ ಅಲ್ಲ, ನೀಲು ಬದುಕಿನ ವಿಪರ್ಯಾಸಗಳ ಬಗ್ಗೆ ಅಸಂಗತತೆಯ ಬಗ್ಗೆ ನಮ್ಮೊಳಗೆ ಸದಾ ಹುಟ್ಟುವ ಸಣ್ಣಪುಟ್ಟ ಆಶೆಗಳ ಬಗ್ಗೆ ಎಷ್ಟು ಸೂಕ್ಷ್ಮವಾಗಿ ಮಾತನಾಡುತ್ತಾಳೆ ಎಂದರೆ ಅದು ಇನ್ನೊಂದು ಬಗೆಯಲ್ಲಿ ಬಹಳ ಸರಳವಾದ ತತ್ವಜ್ಞಾನದಂತೆ, ಗಹನವಾದ ಆಧ್ಯಾತ್ಮದಂತೆ ಕೇಳಿಸುತ್ತದೆ. ಮುಟ್ಟಿದರೆ ಮಿಡಿಯುವ ಜೀವಂತಿಕೆ ಇರುವ ಈ ಸಾಲುಗಳನ್ನು ಎಲ್ಲಿಂದಾದರೂ ಶುರು ಮಾಡಿ ಎಲ್ಲಿ ಬೇಕಾದರೂ ನಿಲ್ಲಿಸಬಹುದು. ನಿಬಿಡ ಕಾಡಿನಲ್ಲಿರುವ ಚಿಗುರೆಲೆಯ ಮರವೊಂದು ತನ್ನಷ್ಟಕ್ಕೆ ತಾನೇ ಅಲುಗಿದಂತೆ, ಯಾವುದೋ ಧ್ಯಾನದಲ್ಲಿ ಮುಳುಗಿ ಒಂದಾದ ಮೇಲೊಂದು ಹೂವುಗಳನ್ನು ಚೆಲ್ಲುತ್ತಿರುವ ನಿತ್ಯಪ್ರಫುಲ್ಲಿತ ಗುಣ ನೀಲುಸಾಲುಗಳಲ್ಲಿದೆ. ಈ ಕಾರಣದಿಂದಾಗಿಯೇ ಈ ಬಗೆಯ ರಚನೆಗಳನ್ನು ಜೆನ್, ತಾವೋ, ಲಾವೋತ್ಸೆ ಅಥವಾ ಹಾಯ್ಕುಗಳಿಗೆ ಮೇಲ್ನೋಟಕ್ಕೆ ಹೋಲಿಸಬಹುದಾದಂತೆ ಕಂಡರೂ ನೀಲುಸಾಲುಗಳಲ್ಲಿ ಪಾರಮಾರ್ಥಿಕ ಸತ್ಯಗಳನ್ನು ಹುಡುಕುವ ಪ್ರಯತ್ನವಾಗಲೀ, ವಿಶಾಲವ್ಯಾಪ್ತಿಯ ಬೌದ್ಧಿಕತೆಯ ಜೀಕುಗಳಾಗಲೀ ಕಾಣುವುದಿಲ್ಲ.
ಬೋದಿಲೇರನ ಕಾವ್ಯದ ಗಂಡು ನಿರೂಪಕನಿಗೆ ಕಾಮದ ಹೊರತಾಗಿ, ಬದುಕಿನ ಸರಳ-ಸಹಜ ಸೌಂದರ್ಯದ ಬಗ್ಗೆ, ಮನುಷ್ಯನ ಅಸ್ತಿತ್ವದಲ್ಲಿಯೇ ಇರುವ ವಿಪರ್ಯಾಸಗಳ ಬಗ್ಗೆ ಗಮನವಿದ್ದಂತೆ ಇಲ್ಲ. ಬೋದಿಲೇರನ ಕಾವ್ಯದ ಒರಟು ಗಂಡಸುಗಾರಿಕೆಯನ್ನು ಮೀರಲಿಕ್ಕಾಗಿಯೇ ಲಂಕೇಶರು ತಮ್ಮ ಸಂವೇದನೆಯಲ್ಲಿ ನೀಲು ಎಂಬ ಹೆಣ್ಣು ರೂಪಕವನ್ನು ಸೃಜಿಸಿಕೊಂಡರು ಎನಿಸುತ್ತದೆ.
ಸ್ವಗತದಲ್ಲೋ, ಸುಷುಪ್ತಿಯಲ್ಲೋ ಘಟಿಸುವ ಸಣ್ಣಕಂಪನದಂತೆ ಇಲ್ಲಿನ ಸಾಲುಗಳು ನಿಧಾನವಾಗಿ ಅಂತರಂಗದಲ್ಲಿ ವಿಸ್ತಾರಗೊಳ್ಳುತ್ತವೆ. ಆದ್ದರಿಂದಲೇ ಇವುಗಳಿಗೆ ಜೆನ್, ಲಾವೋತ್ಸೆ ಪದ್ಯಗಳಲ್ಲಿರುವ ಬೌದ್ಧಿಕತೆಯ ಸೆಳಕುಗಳು, ಏನೋ ಸಾಕ್ಷಾತ್ಕಾರವಾಯಿತೆಂಬ ಖಚಿತತೆಯ ಧ್ವನಿ ಇಲ್ಲಿ ಕಾಣುವುದಿಲ್ಲ.
ಈ ನನ್ನ ಸಾಲುಗಳನ್ನು
ಕವನಗಳೆಂದು ಹೇಗೆ ಕರೆಯಲಿ?
ನೀನೇ ಬಲ್ಲಂತೆ ಇವೆಲ್ಲ
ವಿರಹದ, ಕಾತರದ, ನಿರಾಶೆಯ, ಚುಂಬನದ
ಆಲಿಂಗನದ ಗುರುತುಗಳು,
ಪ್ರಕೃತಿ ಸೂರ್ಯನನ್ನು ಸ್ವಾಗತಿಸುವಾಗ
ನಾನು ಕತ್ತಲೆಯ ಭಿತ್ತಿಯ ಮೇಲೆ
ಚಿತ್ರಿಸಿದ ನಿಟ್ಟುಸಿರುಗಳು
***
ಛಪ್ಪನ್ನೈವತ್ತಾರು ದೇಶಗಳನ್ನು ಗೆದ್ದ
ಚಿಗುರು ಮೀಸೆಯ ರಾಜಕುಮಾರ
ರಥ ಹತ್ತಲು ಹೋಗಿ
ಎಡವಿ ಸತ್ತರೆ
ಅದು ಅಸಂಗತ ಘಟನೆ ಎನ್ನುವಿರಾ?
***
ತನ್ನ ಮಗ ಬುದ್ಧನಾಗಿ ಹಿಂದಿರುಗಿದಾಗ
ಶುದ್ಧೋಧನ ಅನುಭವಿಸಿದ
ಹತಾಶೆ ಮತ್ತು ಧನ್ಯತೆ
ಮನುಷ್ಯನ ಗೊಂದಲಕ್ಕೆ ಹಿಡಿದ
ಕನ್ನಡಿ ಅಲ್ಲವೇ?
***
ದಿನವಿಡೀ ಬೇಟೆಯಾಡಿ
ಪ್ರಾಣಿಗಳ ಕೊಂದು ಹಿಗ್ಗಿದ ಚಕ್ರವರ್ತಿಗೆ
ಕ್ಷಣ ಸುಖ ದೊರೆತದ್ದು
ದಾರಿ ಮಗ್ಗುಲಲ್ಲಿ
ಗರಿಗೆದರಿ ನಿಂತಿದ್ದ
ಜೀವಂತ ನವಿಲಿನಿಂದ
***
ಮೋಹಕ ಹುಡುಗಿಯ ಅಲಂಕಾರ
ಆಕಾಶಕ್ಕೆ ಅರಿಶಿನ
ಬಳಿದಂತೆ ಅಸಹಜ
***
ಶಾಲೆಯಲ್ಲಿ ಬಹುಮಾನ
ಪಡೆದ ಹುಡುಗಿಗಿಂತ
ನೊಬೆಲ್ ಬಹುಮಾನ ಪಡೆದ ಮುದುಕ
ಹೆಚ್ಚು ಸುಖಿಯೆಂದು ಅನಿಸುವುದಿಲ್ಲ.
***
ಎಲ್ಲ ಕ್ರಾಂತಿಗಳಂತೆ
ಪ್ರೇಮವೂ ಮಾಯವಾಗುವುದರಿಂದ
ಕನಿಷ್ಟ ಗಂಡ ಹೆಂಡಿರು ಪ್ರತಿದಿನ
ಹವಾಮಾನದ ಕುರಿತಾದರೂ ಜಗಳವಾಡಿದರೆ
ಆಮೇಲೆ ನಗಲು ಬಹಳಷ್ಟು ಅವಕಾಶವಾದೀತು ಅಲ್ಲವೇ
***
ಹಿಮಾಲಯವನ್ನು ಹತ್ತಿದ ತೇನ್ ಸಿಂಗನನ್ನು
ಅವನೂರಿನ ಈರವ್ವ
ಹಿತ್ತಲ ತೆಂಗಿನ ಮರ ಹತ್ತಿ ಕಾಯಿ
ಕಿತ್ತುಕೊಡಲು ವಿನಂತಿಸಿದಳು
ಮೇಲ್ನೋಟಕ್ಕೆ ಒಂದು ಗೀಳಿನಂತೆ ಕಾಣುವ ಪ್ರೇಮ ಕಾಮದ ವಿವರಗಳು ಬರೀ ದೈಹಿಕ ಅಗತ್ಯಗಳಲ್ಲ. ಅವು ಎಲ್ಲ ಬಗೆಯ ಕಟ್ಟುಪಾಡುಗಳು, ಸಂಪ್ರದಾಯಗಳನ್ನು ಮೀರುವ ತೀವ್ರ ಹಂಬಲದಂತೆ ಕಾಣಿಸುತ್ತವೆ.
ರೋಗರುಜಿನಗಳ
ರಕ್ತಮಾಂಸಗಳ ಬದುಕಿನಲ್ಲಿ
ಪ್ರೇಮವೆನ್ನುವ ಸಣ್ಣ ಕಿಡಿ ಇಲ್ಲದಿದ್ದರೆ
ಎಷ್ಟು ಶೂನ್ಯ ಎನಿಸುತ್ತದೆ
***
ಚಿಟ್ಟೆಯ ಬಣ್ಣಕ್ಕೆ
ಬೆರಗಾದ ಹುಡುಗಿ
ಅದರ ವ್ಯಭಿಚಾರಕ್ಕೆ ಮುಗ್ಧೆ
***
ಮದುವೆಯ ಶಾಸ್ತ್ರಗಳೆಲ್ಲ
ಜಟಿಲವಾದಂತೆಲ್ಲ
ವ್ಯಭಿಚಾರ
ಸರಳ ಸುಂದರವಾಯಿತು
***
ಪ್ರೇಮವನ್ನೇ ಕಾಣದವನ
ಸಣ್ಣತನಕ್ಕೆ ಹೋಲಿಸಲು
ಏನೂ ಹೊಳೆಯುತ್ತಿಲ್ಲ.
***
ನನ್ನ ಚೆಲುವನ ನೆನಪು
ಅಂತರಂಗದಲ್ಲಿ ಗೂಡು ಕಟ್ಟಿ
ಮರಿ ಮಾಡಿ ಹಾರುವುದೇ
ಈ ಬದುಕಿನ ಚೆಂದ ಅಲ್ಲವೇ
***
ಇನಿಯಾ
ಪ್ರೇಮದ ಕ್ಷಣಿಕತೆಯೇ
ಅದರ ಆಕರ್ಷಣೆ ಎಂದರೆ
ಅನುಮಾನದಿಂದ ಬಳಲಬೇಡ
***
ಬಡ ಪೋರನ ಜೊತೆ ಓಡಿ ಹೋದ
ಶ್ರೀಮಂತ ವೈಯಾರಿಯ
ವರ್ಣರಂಜಿತ ಕತೆ
ಎಲ್ಲರ ಹೃದಯದ ಗೌಪ್ಯ ಆಶೆ
ಇಲ್ಲಿ ಪ್ರೇಮ ಎಲ್ಲ ಬಗೆಯ ಜಡತ್ವ, ಶೂನ್ಯತೆಯನ್ನು ಮೀರುವ ಸರಿಸುಮಾರು ಮನುಷ್ಯರ ಸಹಜ ಸಾಧ್ಯತೆಯಾಗಿ ಕಾಣಿಸುತ್ತದೆ. ಹಾಗೆಯೇ ಕಾಮವೂ ಸಹ ಎಲ್ಲ ಬಗೆಯ ರೂಢಿಗಳು, ಗೊಡ್ಡು ನಂಬಿಕೆಗಳನ್ನು ಮೀರುವ ಮುಕ್ತ ಅವಕಾಶದಂತೆ ಕಾಣಿಸುತ್ತದೆ. ಪ್ರೇಮವೆಂಬ ಮನುಷ್ಯ ಸಾಧ್ಯತೆ, ಕಾಮವೆನ್ನುವ ಮುಕ್ತ ಅವಕಾಶ- ಇವೆಲ್ಲವನ್ನೂ ಮನುಷ್ಯ ಸಮಾಜ ತನ್ನ ಸಂಪ್ರದಾಯ, ಸಿದ್ಧಾಂತಗಳು, ನೈತಿಕತೆ, ಅಹಂಕಾರಗಳ ಹೆಸರಿನಲ್ಲಿ ಎಲ್ಲ ಕಾಲದಲ್ಲಿಯೂ ಸ್ಥಗಿತಗೊಳಿಸಿರುವ ಕಾರಣದಿಂದ ಇವೆಲ್ಲವುಗಳ ಆಚೆ ದಾಟಿ ಹೋಗಿ ಬದುಕಿನ ಜೀವಂತಿಕೆಯನ್ನು ಪಡೆಯಲು ಮನುಷ್ಯ ವಿಧವಿಧವಾಗಿ ಪ್ರಯತ್ನಿಸುತ್ತಲೇ ಇರುತ್ತಾನೆ ಎಂಬುದು ಇಲ್ಲಿನ ಹಲವಾರು ಸಾಲುಗಳಲ್ಲಿ ಸ್ಪಷ್ಟವಾಗುತ್ತದೆ. ಹಾಗಾಗಿಯೇ ಇಲ್ಲಿನ ಹೆಣ್ಣು ಪ್ರತಿಕ್ಷಣ ಜೀವಂತಿಕೆಯನ್ನು ಹುಡುಕುವ ಅಪಾರ ತಹತಹದ ಜೀವವಾಗಿ ಕಾಣುತ್ತಾಳೆ. ಅವಳ ಜೀವನ್ಮುಖತೆ ಎಷ್ಟು ಪ್ರಖರವಾಗಿದೆ ಎಂದರೆ, ಅದು ವ್ಯವಸ್ಥೆ, ಜಾತಿ, ನೀತಿ, ಸಂಪ್ರದಾಯ, ಧರ್ಮಕರ್ಮದ ಸೂಕ್ಷ್ಮಗಳನ್ನು ಒಂದೇ ಬಾರಿಗೆ ಧೂಳೀಪಟ ಮಾಡುವಂತಿದೆ.
ಹಾಗೆ ನೋಡಿದರೆ ಲಂಕೇಶರು ನೀಲು ಸಾಲುಗಳಲ್ಲಿ ಸೃಷ್ಟಿಸಿರುವ ಅಪಾರ ಜೀವಂತಿಕೆಯ ಚಿತ್ರಣಗಳು ಎರಡು ರೀತಿಯಲ್ಲಿ ನವ್ಯಕಾವ್ಯದ ಮನೋಭಾವಕ್ಕೆ ವ್ಯಕ್ತಪಡಿಸಿದ ಪ್ರತಿಭಟನೆಯಂತಿವೆ. ಪಶ್ಚಿಮದ ಅಸ್ತಿತ್ವವಾದಿ ಚಿಂತನೆ, ಅಸಂಗತತೆಯ ಸಿದ್ಧಾಂತಗಳು- ಇವೇ ಮೊದಲಾದವುಗಳ ಕಾರಣದಿಂದ ದಟ್ಟವಾಗಿ ಆವರಿಸಿಕೊಂಡ ನಿಹಿಲಿಸಿಂ, ಶೂನ್ಯತೆಗಳನ್ನು ಹೆಣ್ಣಿನ ಅಪರಿಮಿತ ಜೀವಂತಿಕೆ- ಪ್ರೀತಿಯ ಮೂಲಕ ಮೀರಲು ಸಾಧ್ಯ ಎಂಬುದನ್ನು ಕಾಣಿಸುವುದು ಲಂಕೇಶರ ವಿಶಿಷ್ಟತೆಯಾಗಿದೆ. ಎರಡನೆಯದಾಗಿ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕುವೆಂಪು, ಕಾರಂತರನ್ನು ಹೊರತುಪಡಿಸಿ, ಮೊಕಾಶಿಯವರ ಗಂಗಾಮಾಯಿ ಮತ್ತು ದೇವನೂರರ ಸಾಕವ್ವನನ್ನು ಬಿಟ್ಟರೆ ಬಹಳ ಜೀವಂತವಾದ ಸ್ತ್ರೀ ಪಾತ್ರವನ್ನು ಸೃಷ್ಟಿಸಲು ಸಾಧ್ಯವಾಗಲಿಲ್ಲ. ಈ ನಡುವೆ ನವ್ಯರೊಳಗಿದ್ದೂ ನವ್ಯರಂತಾಗದ ಲಂಕೇಶರು “ಅವ್ವ” ಪದ್ಯದ ಮೂಲಕ, “ಮುಸ್ಸಂಜೆ ಕಥಾ ಪ್ರಸಂಗ”ದ ಸಾವಂತ್ರಿಯ ಮೂಲಕ, “ಸಂಕ್ರಾಂತಿ” ಉಷಾ ಪಾತ್ರದ ಮೂಲಕ, ನೀಲುವಿನ ಮೂಲಕ ಈ ಮಿತಿಯನ್ನು ದಾಟುತ್ತಾರೆ.
ಕೊನೆಯದಾಗಿ, ಈ ನೀಲು ಯಾರು? ಹೇಗೆ ಸೃಷ್ಟಿಯಾದಳು? ಲಂಕೇಶರು ನೀಲುಸಾಲುಗಳ ನಡುವೆ ಎಂಥ ಸ್ವತಂತ್ರ, ನಿರ್ಭೀತ, ವೈಚಾರಿಕ ಪ್ರಜ್ಞೆಯ ಹೆಣ್ಣನ್ನು ಸೃಷ್ಟಿಸಿದ್ದಾರೆ ಎಂದು ಸೋಜಿಗವಾಗುತ್ತದೆ. ಅವಳು ತನ್ನ ಹೆರಳಿನ ದುಂಡುಮಲ್ಲಿಗೆ ಕೂಡ ಜಾತ್ಯಾತೀತವೆಂದು ತನ್ನ ಬಗ್ಗೆ ತಾನೇ ವಿವರಿಸುತ್ತಾಳೆ. ಇಂಥ ನೀಲುವನ್ನು ಲಂಕೇಶರು ಎಲ್ಲಿಂದ ತಂದರು? ನೀಲು ಪದೇ ಪದೇ ತನ್ನ ಇನಿಯನನ್ನು ಚೆನ್ನ ಎನ್ನುವುದನ್ನು ನೋಡಿದರೆ ಅವಳು ಯಾರು ಎಂಬ ಬಗ್ಗೆ ಕುತೂಹಲ ಹುಟ್ಟುತ್ತದೆ. ನೀಲು ಯಾರಿರಬಹುದೆಂದು, ಸ್ವತಃ ಲಂಕೇಶರ ಚಿತಾವಣೆಯ ಕಾರಣದಿಂದಲೇ, ಲಂಕೇಶ್ ಪತ್ರಿಕೆಯ ಪುಟಗಳಲ್ಲಿ ಅರ್ಥವಿಲ್ಲದ ಚರ್ಚೆಗಳು ನಡೆಯುತ್ತಿದ್ದವು. ಅವಳೇ ಹೇಳುವಂತೆ-
ಚೆನ್ನಮಲ್ಲಿಕಾರ್ಜುನನ
ಕುರಿತು ಹೇಳಿದ ಗಿಳಿಯಂಥ
ಅಕ್ಕನ ವಚನಗಳ ಎದುರು
ನನ್ನ ಕವನಗಳು
ರೆಕ್ಕೆ ಇಲ್ಲದ ಮಿಂಚುಹುಳುಗಳು
ಇದನ್ನು ನೋಡಿದರೆ, ಈ ನೀಲು ಅದೇ ಅಕ್ಕನ ತಂಗಿಯಿರಬೇಕೇನೋ? ಅನಿಸುತ್ತದೆ. ನೀವೇನಂತೀರೋ ಗೊತ್ತಿಲ್ಲ. !?
(ರೇಖಾಚಿತ್ರಗಳು: ಪುಂಡಲೀಕ ಕಲ್ಲಿಗನೂರ್)
ಕನ್ನಡ ವಿಮರ್ಶಕ, ಲೇಖಕ, ಅನುವಾದಕ. ಮೂಲತಃ ಚಿತ್ರದುರ್ಗದವರು. ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರು