ಒಂದು ಹೊಸ ಕಲ್ಪನೆ

ಒಂದು ಹೊಸ ಕಲ್ಪನೆ ಹುಟ್ಟಬೇಕಲ್ಲದೆ
ಹೂಕುಂಡವೊಂದು ಆಕಾಶದಿಂದ
ಭೂಮಿಗೆ ಇಳಿಯುತ್ತದೆ
ಮಣ್ಣಿನಿಂದ ಒಂದು ಕಪ್ಪು ಮೋಡ
ಹಾಗೇ ಬಾನಿಗೇರುತ್ತದೆ

ಒಂದು ಹೊಸ ಕಲ್ಪನೆ ಹುಟ್ಟಬೇಕಲ್ಲದೆ
ರಾಜಕುಮಾರಿ ಸ್ನಾನ ಮಾಡಿದರೆ ನದಿ ಹುಟ್ಟುತ್ತದೆ
ರಾಜಕುಮಾರನೊಬ್ಬ ಒಂದು ಕೂದಲು ಸಿಕ್ಕಿದರೆ
ಆ ಸೌಂದರ್ಯರಾಶಿಯನ್ನು ಹುಡುಕಲು ಹೊರಡುತ್ತಾನೆ
ಪ್ರೀತಿಯಲ್ಲಿ ಬಿದ್ದ ರಾಜಕುಮಾರಿ
ಪ್ರಿಯಕರನನ್ನು ಹಲ್ಲಿ ಮಾಡಿ ಗೋಡೆಗಂಟಿಸುತ್ತಾಳೆ
ಭೋಗದ ರಂಗಸಾನಿ ಬೆಕ್ಕಿನ ತಲೆಯ ಮೇಲೆ ದೀಪವಿಟ್ಟು
ರಸಿಕರೊಂದಿಗೆ ಜೂಜಾಡುತ್ತಾಳೆ

ಒಂದು ಹೊಸ ಕಲ್ಪನೆ ಹುಟ್ಟಬೇಕಲ್ಲದೆ
ರಾಜನಿಗೆ ಏಳು ಜನ ಗಂಡುಮಕ್ಕಳೇ ಇರುತ್ತಾರೆ
ಬೇಟೆಗೆ ಹೋಗಿ ಏಳು ಮೀನುಗಳನ್ನು ತರುತ್ತಾರೆ
ಒಣಗದ ಮೀನು ಅದ್ಭುತವಾದ ಕಥೆ ಹೇಳುತ್ತದೆ
ಪೇದರಾಸಿ ಪೆದ್ದಮ್ಮ
ಚಂದಿರನ ಮೇಲೆ ಕುಳಿತು ದಾರ ನೂಲುತ್ತಾಳೆ
ರಾಹುಕೇತುಗಳು ಚಂದ್ರನನ್ನು ನುಂಗುತ್ತಾರೆ
ಬೆಕ್ಕುಗಳ ಜಗಳವನ್ನು ಕೋತಿ ತೀರ್ಮಾನಿಸುತ್ತದೆ
ತೋರುಬೆರಳು ತುಪಾಕಿಯಾಗುತ್ತದೆ
ಶಿವನ ನೆತ್ತಿಯಿಂದ ಗಂಗೆ ಧುಮುಕುತ್ತಾಳೆ
ಭಗೀರಥನ ಹಿಂದೆ ಓಡುತ್ತಾಳೆ
ನೆತ್ತಿಯ ಮೇಲೆ ಕೈಗೆಟಕುವಂತ್ತಿದ್ದ ಆಕಾಶ
ಮನೆಯಾಕೆಯೊಬ್ಬಳ ಹೊಡೆತಕ್ಕೆ ಅಂದದಷ್ಟು ದೂರಕ್ಕೆ ಹೋಗುತ್ತದೆ
ಗಾಣ ಕುದುರೆಯನ್ನು ಹೆತ್ತುತ್ತದೆ
ಗಾಣಕ್ಕೆ ಕಟ್ಟಿರುವ ಕುದುರೆ ಯಾರದೆಂದು ತೀರ್ಮಾನಿಸಲು
ರಾಜನಿಗೆ ನರಿ ಸಹಾಯಕ್ಕೆ ಬರುತ್ತದೆ
ಸಮುದ್ರದಲ್ಲಿ ಬೆಂಕಿಬಿದ್ದರೆ
ಮೀನುಗಳು ಮರ ಹತ್ತುತ್ತವೆ

ಒಂದು ಹೊಸ ಕಲ್ಪನೆ ಹುಟ್ಟಬೇಕಲ್ಲದೆ
ಕಬ್ಬಿನಜಲ್ಲೆ ಬಿಲ್ಲಾಗುತ್ತದೆ
ಹೂವು ಬಾಣಗಳಾಗುತ್ತವೆ
ಬಾಲಕೃಷ್ಣನು ಬೆರಳಿನ ಮೇಲೆ
ಬೆಟ್ಟವನ್ನು ನಿಲ್ಲಿಸುತ್ತಾನೆ
ಗೋವುಗಳನ್ನು ಗೋಪಾಲಕರನ್ನು ರಕ್ಷಿಸುತ್ತಾನೆ
ಅಪೂರ್ವ ಸಹಸ್ರ ಶಿರಚ್ಛೇದ ಚಿಂತಾಮಣಿ
ರಂಗದ ಮೇಲೆ ಬರುತ್ತದೆ

ಕತ್ತಲಾದಾಗ ನರಿಯೊಂದು
ರೈತ ಮರೆತ ಟಗುರುಗಳಿಗಾಗಿ
ಭೂದೇವಿಯೊಂದಿಗೆ ವ್ಯಾಪಾರ ಮಾಡುತ್ತದೆ
ಮಾಯಾ ಫಕೀರನ ಪ್ರಾಣ
ಏಳೇಳು ಸಮುದ್ರದಾಚೆ
ಮರದ ಪೊಟರೆಯಲ್ಲಿ ಗಿಳಿಯಲ್ಲಿರುತ್ತದೆ
ಒಳ್ಳೆಯ ದೆವ್ವಗಳು ನಿನ್ನನ್ನು
ಈ ಊರಿನಿಂದ ಆ ಊರಿಗೆ ಹೊತ್ತುಕೊಂಡು ಹೋಗುತ್ತವೆ

ಒಂದು ಹೊಸ ಕಲ್ಪನೆ ಹುಟ್ಟಬೇಕಲ್ಲದೆ
ಜೀವನ ವಿಧವಿಧವಾಗಿ ಪ್ರತ್ಯಕ್ಷವಾಗುತ್ತದೆ
ಪರಿವ್ಯಾಪ್ತಿ ಹೊಂದುತ್ತದೆ
ವಿನೂತನ ಅನ್ವಯಸ್ಪೂರ್ತಿಯಿಂದ ಪ್ರಕಾಶಿಸುತ್ತದೆ
ವಾಸ್ತವ ಅಧಿವಾಸ್ತವಿಕವಾಗುತ್ತದೆ
ಮಾಂತ್ರಿಕ ಮಾರ್ಮಿಕ ಪೊರೆಯಿಂದ
ಆಶ್ಚರ್ಯಪಡುವಂತೆ ಮಾಡುತ್ತದೆ
ಒಂದು ಕಲ್ಪನೆ ಹುಟ್ಟಬೇಕಲ್ಲದೆ
ಜೀವನದಷ್ಟು ಮಧುರವಾಗಿ
ಕಾವ್ಯವಿರುತ್ತದೆ
ಕಾವ್ಯದಷ್ಟು ಮಧುರವಾಗಿ
ಪ್ರಾಣಮಯವಾದ ಜೀವನವಿರುತ್ತದೆ

 

ಕೆ.ಶಿವಾರೆಡ್ಡಿ ಹೈದರಾಬಾದ್ ನವರು.
ಪಕ್ಕಕಿ ಒತ್ತಿಗಿಲಿತೇ, ಮೋಹನಾ! ಓ ಮೋಹನಾ!, ರಕ್ತಂ ಸೂರ್ಯುಡು ಇವರ ಪ್ರಕಟಿತ ಕೃತಿಗಳಲ್ಲಿ ಕೆಲವು
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿಗಳು ಇವರಿಗೆ ದೊರಕಿವೆ