ಮ್ಯಾಕ್ಸ್ವೆಲ್ ಕಾಲಕ್ಕೆ ಸುಮಾರು ಎರಡು ಶತಮಾನದ ಮುನ್ನವೇ, ಐಸಾಕ್ ನ್ಯೂಟನ್ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತುಎಂದು ತೋರಿಸಿಕೊಟ್ಟಿದ್ದ. ಅದರ ಕುರಿತು ಮತ್ತಷ್ಟು ಅಧ್ಯಯನ ನಡೆಸಿದ ಮ್ಯಾಕ್ಸ್ವೆಲ್, ಕೇವಲ ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳಿಂದಲೇ ಯಾವುದೇ ಬಣ್ಣವನ್ನು ನಿರ್ಮಿಸಬಹುದೆಂದು ತೋರಿಸಿಕೊಟ್ಟ. ಅಷ್ಟೇ ಅಲ್ಲ, ೧೮೬೧ರಲ್ಲಿ, ಲಂಡನ್ನಿನ ರಾಯಲ್ ಸೊಸೈಟಿಯ ಪ್ರದರ್ಶನ ಒಂದರಲ್ಲಿ, ಜಗತ್ತಿನ ಮೊಟ್ಟ ಮೊದಲ ಕಲರ್ ಫೋಟೋವನ್ನು ಪ್ರದರ್ಶಿಸಿದ. ಕಾಲದಲ್ಲಿ, ಕಲರ್ ಕ್ಯಾಮೆರಾ ಇರಲಿಲ್ಲ.
ಶೇಷಾದ್ರಿ ಗಂಜೂರು ಬರೆಯುವ ಅಂಕಣ

 

ನಾನು ಸಣ್ಣವನಿದ್ದಾಗ ನಮ್ಮ ಮನೆಯಲ್ಲೊಂದು ಪದ್ಧತಿ ಇತ್ತು; ತಲೆಗೆ ನೀರು ಹಾಕಿಕೊಳ್ಳುವ ಮುನ್ನ – ಅದು ಹಬ್ಬ, ಹರಿದಿನವಿರಲಿ ಅಥವಾ ಹೇರ್-ಕಟ್ ಮಾಡಿಸಿಕೊಂಡ ನಂತರವಿರಲಿ – “ಅಶ್ವತ್ಥಾಮ, ಬಲಿ, ವ್ಯಾಸ, ಹನುಮ, ವಿಭೀಷಣ, ಕೃಪ, ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ” ಎಂದು ಹೇಳುತ್ತಾ ಎಣ್ಣೆಯಿಂದ ಏಳು ಬೊಟ್ಟುಗಳನ್ನು ನಮ್ಮ ತೊಡೆಯ ಮೇಲಿಟ್ಟುಕೊಳ್ಳುವುದು.

ಈ ಕುರಿತು ನಾನು ನಮ್ಮ ಅಜ್ಜಿಯನ್ನು ಪ್ರಶ್ನಿಸುತ್ತಿದ್ದೆ. ಅವರು, ಆ ಏಳೂ ಜನರು ಕಾಲವನ್ನೇ ಗೆದ್ದವರೆಂದೂ ಹೀಗಾಗಿ ಅವರು ಚಿರಂಜೀವಿಗಳೆಂದೂ ಹೇಳುತ್ತಿದ್ದರು. ಆ ಚಿರಂಜೀವಿಗಳನ್ನು ಈ ರೀತಿ ನೆನೆಯುವುದರಿಂದ ಮಕ್ಕಳ ಆಯಸ್ಸೂ ಸಹ ಹೆಚ್ಚುವುದೆಂದು ಆ ಕಾಲದಲ್ಲಿ ನಮ್ಮ ಮನೆಯಲ್ಲಿದ್ದ ಒಂದು ಸಣ್ಣ ನಂಬಿಕೆ.

ನಾನು ಮಿಡ್ಲ್ ಸ್ಕೂಲಿನಲ್ಲಿದ್ದಾಗ, ನಮ್ಮ ಆಪ್ತರೊಬ್ಬರ ಮಗ, ನನಗಿಂತ ಕೇವಲ ಕೆಲವೇ ವರ್ಷಗಳು ದೊಡ್ಡವನು, ಹೈ-ಸ್ಕೂಲಿನಲ್ಲಿ ಓದುತ್ತಿದ್ದವನು, ಈಜಲು ಹೋಗಿ ಹತ್ತಿರದ ಒಂದು ಕುಂಟೆಯಲ್ಲಿ ಮೃತನಾದ. ಆ ದಿನ, ಶ್ರದ್ಧಾಂಜಲಿಯ ಸಭೆಯಲ್ಲಿ ನಮ್ಮ ಶಿಕ್ಷಕರು ಮಾತನಾಡುತ್ತಾ ಅವನು “ಕಾಲದಲ್ಲಿ ಲೀನನಾದ” ಎಂದರು. ನಂತರದಲ್ಲಿ, ಮರಣವನ್ನು “ಕಾಲಾಧೀನರಾದರು”, “ಕಾಲದಲ್ಲಿ ಲೀನರಾದರು” ಎಂದೆಲ್ಲಾ ಬಣ್ಣಿಸುವುದು ನನ್ನ ಗಮನಕ್ಕೆ ಬರಲಾರಂಭಿಸಿತು.

ಇಂತಹ ಮಾತುಗಳನ್ನು ಕೇಳಿದಾಗ-ಓದಿದಾಗಲೆಲ್ಲಾ, “ಕಾಲವನ್ನು ಗೆಲ್ಲುವುದೆಂದರೆ ಏನು?”, ಯಾರಿಗೂ ಬಗ್ಗದ ಕಾಲವನ್ನು ಗೆಲ್ಲುವುದಾದರೂ ಹೇಗೆ? ಎಂದೆಲ್ಲಾ ಆಲೋಚನೆಗಳು ಬರುತ್ತಿದ್ದವು.

******

ನಮ್ಮ ಭೂಮಿಯ ಸೃಷ್ಟಿಯಾಗಿ ಸುಮಾರು ೪.೭ ಬಿಲಿಯನ್ ವರ್ಷಗಳಾಗಿವೆ. ಮಾನವರು ಗಡಿಯಾರಗಳನ್ನು ಸೃಷ್ಟಿಸಲು ತೊಡಗಿ ಹಲವಾರು ಸಹಸ್ರ ವರ್ಷಗಳಾಗಿವೆ. ಮೆಕ್ಯಾನಿಕಲ್ ಗಡಿಯಾರಗಳಿಗೆ ಹಲವಾರು ಶತಮಾನಗಳ ಇತಿಹಾಸ ಇದೆ. ಕಳೆದ ಕೆಲವು ದಶಕಗಳಲ್ಲಿ ಅತ್ಯಂತ ನಿಖರವಾಗಿ ಸಮಯ ತೋರುವ “ಅಟಾಮಿಕ್ ಕ್ಲಾಕ್”ಗಳನ್ನು ತಯಾರಿಸುವುದು ಸಾಮಾನ್ಯವಾಗಿದೆ. ಎರಡು ವರ್ಷಗಳ ಹಿಂದೆ ಭಾರತೀಯ ವಿಜ್ಞಾನಿಗಳು ಮತ್ತು ತಾಂತ್ರಿಕ ತಜ್ಞರು ಸಹ ಅಂತಹ ಗಡಿಯಾರಗಳನ್ನು ನಿರ್ಮಿಸಿದ್ದಾರೆ. ಈ ಗಡಿಯಾರಗಳು ಎಷ್ಟು ನಿಖರವಾಗಿರುತ್ತವೆಂದರೆ, ಹಲವಾರು ಬಿಲಿಯನ್ ವರ್ಷಗಳಾದರೂ, ಅವು ಒಂದೇ-ಒಂದು ಸೆಕೆಂಡ್ ಸಹ “ಸ್ಲೋ” ಅಥವಾ “ಫಾಸ್ಟ್” ಆಗುವುದಿಲ್ಲ.

ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿರುವ ಜಿ.ಪಿ.ಎಸ್. ತಂತ್ರಜ್ಞಾನಕ್ಕೆ ಇಂತಹ ಅತ್ಯಂತ ನಿಖರವಾದ ಗಡಿಯಾರಗಳು ಬೇಕೇ ಬೇಕು. ಅವುಗಳ ನಿಖರತೆ ಸರಿ ಇರದಿದ್ದರೆ, ಗೂಗಲ್ ಮ್ಯಾಪ್ ಹಾಕಿಕೊಂಡು ಕೊಂಕಣಕ್ಕೆ ಪ್ರಯಾಣ ಬೆಳೆಸುತ್ತಿರುವವರು ಮೈಲಾರವನ್ನು ತಲುಪಬೇಕಾಗಬಹುದು.

ಅತ್ಯಂತ ನಿಖರವಾಗಿ ಸಮಯ ತೋರುವ ಇಂತಹ ಎರಡು ಗಡಿಯಾರಗಳು ನಮಗೆ ಸಿಕ್ಕಿದರೆ, ಮೊದಲು, ಎರಡೂ ಗಡಿಯಾರಗಳೂ ಒಂದೇ ಸಮಯ ತೋರುವಂತೆ “ಸಿಂಕ್ರನೈಜ಼್” ಮಾಡೋಣ. ಆಮೇಲೆ, ಒಂದು ಗಡಿಯಾರವನ್ನು ಎವರೆಸ್ಟ್ ಶಿಖರದ ಮೇಲೆ ಸ್ಥಾಪಿಸೋಣ. ಇನ್ನೊಂದನ್ನು ಮಲ್ಪೆಯ ಬೀಚಿನಲ್ಲಿ ಸಮುದ್ರದ ದಡದಲ್ಲಿ ಇಡೋಣ.

ಇಂತಹ ಮಹತ್ತರ ಸಾಧನೆ ಮಾಡಿದ ನಂತರ, ಕೆಲ ಕಾಲ ವಿರಮಿಸೋಣ. “ಕೆಲ ಕಾಲ” ಎಂದರೆ ಎಷ್ಟು? ೪.೭ ಬಿಲಿಯನ್ ವರ್ಷಗಳು.

(ಆಲ್ಬರ್ಟ್ ಐನ್‌ಸ್ಟೈನ್)

ವಿರಮಿಸಿದ ನಂತರಇವೆರಡೂ ಗಡಿಯಾರಗಳನ್ನು ನೋಡಿದರೆಎವರೆಸ್ಟ್ ಮೇಲಿರುವ ಗಡಿಯಾರಮಲ್ಪೆಯ ಸಮುದ್ರ ತೀರದ ಗಡಿಯಾರಕ್ಕಿಂತ ಸುಮಾರು ೩೯ ಗಂಟೆಗಳಷ್ಟು ಮುಂದಿರುವುದು ನಮಗೆ ಗೊತ್ತಾಗುತ್ತದೆ. ಪೂರ್ತಿಯಾಗಿ ಸಿಂಕ್ರನೈಜ಼್” ಆಗಿರುವ ಈ ಅತ್ಯಂತ ನಿಖರವಾದ ಗಡಿಯಾರಗಳು ತೋರುವ ವೇಳೆಯಲ್ಲಿ ಹೆಚ್ಚು ಕಡಿಮೆ ಆಗಿರುವುದಾದರೂ ಹೇಗೆ?!

ಇದಕ್ಕೆ ಉತ್ತರ, ಐನ್‌ಸ್ಟೈನನ ಜೆನೆರಲ್ ರಿಲೆಟಿವಿಟಿ ಥಿಯರಿಯಲ್ಲಿ ಇದೆ. ಐನ್‌ಸ್ಟೈನ್ ತೋರಿಸಿಕೊಟ್ಟಂತೆ, ಗುರುತ್ವಾಕರ್ಷಣೆಯ ಬಲ ಕಾಲದ ವೇಗವನ್ನು ಬದಲಿಸಬಲ್ಲದು. ಗುರುತ್ವ ಹೆಚ್ಚಿರುವ ಸಮುದ್ರದ ದಡದಲ್ಲಿ ಕಾಲದ ಗತಿ ನಿಧಾನವಾದರೆ, ಗುರುತ್ವ ಕಡಿಮೆ ಇರುವ ಎವರೆಸ್ಟಿನ ಶಿಖರದ ಮೇಲೆ ಅದರ ವೇಗ ಹೆಚ್ಚು. ಎವರೆಸ್ಟ್ ಮೇಲೆ ಸೆಕೆಂಡಿನ ಅವಧಿ, ಮಲ್ಪೆಯ ಸೆಂಕೆಂಡಿನ ಅವಧಿಗಿಂತ ಕಡಿಮೆ. ಗುರುತ್ವದ ಬಲದಿಂದ ಉಂಟಾಗುವ ಕಾಲದ ಗತಿಯಲ್ಲಿನ ಈ ಬದಲಾವಣೆಯನ್ನು “ಟೈಮ್ ಡೈಲೇಷನ್” ಎಂದೆನ್ನುತ್ತಾರೆ.

ಈ ಟೈಮ್ ಡೈಲೇಷನ್ ಎನ್ನುವುದು, ನಮ್ಮ ಅನುಭವಕ್ಕೆ ಬಾರದಿರಬಹುದು. ಆದರೆ, ಇದು ಪ್ರಯೋಗಗಳಿಂದ ಪ್ರಮಾಣೀಕೃತವಾಗಿರುವ ಸತ್ಯ. ಈ ಪ್ರಯೋಗಗಳು, “ಅಟಾಮಿಕ್ ಕ್ಲಾಕ್” ಗಳನ್ನು ಎವರೆಸ್ಟ್ ಶಿಖರದ ಮೇಲೆ ಮತ್ತು ಮಲ್ಪೆಯ ಸಮುದ್ರದಡದಲ್ಲಿ ಇಟ್ಟು ೪.೭ ಬಿಲಿಯನ್ ವರ್ಷಗಳ ಕಾಲ ವಿರಮಿಸುವ ನಮ್ಮ ಕಲ್ಪನಾ ಲಹರಿಯಂತಹವುಗಳಲ್ಲ; ನಿಜವಾದ ವಿಜ್ಞಾನಿಗಳು, ತಮ್ಮ ವೈಜ್ಞಾನಿಕ ಸಲಕರಣೆಗಳ ಮೂಲಕ ನಡೆಸಿದಂತಹ ಪ್ರಯೋಗಗಳು. ೧೯೫೯ರಲ್ಲಿ, ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ರಾಬರ್ಟ್ ಪೌಂಡ್ ಮತ್ತು ಗ್ಲೆನ್ ರೆಬ್ಕಾ ಎಂಬ ವಿಜ್ಞಾನಿಗಳು ಈ ವಿಷಯವನ್ನು ಮೊಟ್ಟ ಮೊದಲ ಬಾರಿಗೆ ತಮ್ಮ ಪ್ರಯೋಗವೊಂದರ ಮೂಲಕ ತೋರಿಸಿಕೊಟ್ಟರು.(*) ನಂತರದಲ್ಲಿ, NASA ವಿಜ್ಞಾನಿಗಳು ೧೯೭೬ರಲ್ಲಿ ತಮ್ಮ ಮತ್ತಷ್ಟು ಕರಾರುವಾಕ್ಕಾದ ಪ್ರಯೋಗಗಳ ಮೂಲಕ ಅದನ್ನು ಖಚಿತ ಪಡಿಸಿದರು. (**)

Black Hole ಗಳಂತಹ ಅಂತರಿಕ್ಷ ಕಾಯಗಳಲ್ಲಿ, ಗುರುತ್ವದ ಬಲ ಅಪಾರವಾಗಿರುವುದರಿಂದ, “ಟೈಮ್ ಡೈಲೇಷನ್”ನಿಂದಾಗಿ, ಈ ಕೃಷ್ಣ-ರಂಧ್ರಗಳ ಒಳಗೆ ಕಾಲ ಚಲಿಸುವುದೇ ಇಲ್ಲ; ಕಾಳ ಕೂಪದಲ್ಲಿ ಕಾಲನೇ ಕಾಲವಾಗುತ್ತಾನೆ.

ಇತ್ತೀಚಿನ ವರ್ಷಗಳಲ್ಲಿ, ಕೃಷ್ಣ-ರಂಧ್ರಗಳ ಈ ಗುಣ, ಕಾಲ-ಯಾನದ ಸಾಧ್ಯತೆಯ ಕುರಿತು ಕುತೂಹಲ ಮೂಡಿಸುತ್ತಿದೆ. ಕೆಲ ವರ್ಷಗಳ ಹಿಂದೆ ಬಿಡುಗಡೆಯಾದ ಹಾಲಿವುಡ್ ಹಿಟ್ ಸಿನೆಮಾ “ಇಂಟರ್‌ಸ್ಟೆಲಾರ್” ಇಂತಹ ಸಾಧ್ಯತೆಯ ಕಲ್ಪನೆಯ ಮೇಲೆ ಆಧರಿಸಿದೆ.

******

(ಜಾನ್ ಆರ್ಚಿಬಾಲ್ಡ್ ವೀಲರ್)

“ದೇಶ-ಕಾಲಗಳು ವಸ್ತುಗಳಿಗೆ ಚಲಿಸುವುದು ಹೇಗೆಂದು ತಿಳಿಸುತ್ತವೆ; ವಸ್ತುಗಳು ದೇಶ-ಕಾಲಗಳಿಗೆ ಬಗ್ಗುವುದು ಹೇಗೆಂದು ತಿಳಿಸುತ್ತವೆ” ಎನ್ನುತ್ತಾನೆ ಖ್ಯಾತ ಭೌತ ಶಾಸ್ತ್ರಜ್ಞ ಜಾನ್ ಆರ್ಚಿಬಾಲ್ಡ್ ವೀಲರ್. (ಪ್ರೊ.ವೀಲರ್‌ ನಂತಹ ಭೌತಶಾಸ್ತ್ರಜ್ಞರು ಅತ್ಯಂತ ವಿರಳ. “ಬ್ಲ್ಯಾಕ್ ಹೋಲ್”ಗಳಿಗೆ ಆ ಹೆಸರನ್ನಿತ್ತವನು ಪ್ರೊ.ವೀಲರ್. ೨೦೦೮ರಲ್ಲಿ ತನ್ನ ೯೬ನೆಯ ವಯಸ್ಸಿನಲ್ಲಿ ಮೃತನಾದ ವೀಲರ್‌ ಗೆ ನೊಬೆಲ್ ಪ್ರಶಸ್ತಿ ದೊರಕಲಿಲ್ಲ. ಆದರೆ, ರಿಚರ್ಡ್ ಫೆಯ್ನ್‌ಮನ್, ಕಿಪ್ ಥಾರ್ನ್ ಮತ್ತಿನ್ನೆಷ್ಟೋ ಜನ ಸುವಿಖ್ಯಾತ ನೊಬೆಲ್ ವಿಜೇತರು ಇವನ ಶಿಷ್ಯರೇ!)

ದೊರೆಗಳಿರಲಿ, ದರವೇಶಿಗಳಿರಲಿ, ಕಾಲ ಯಾರಿಗೂ ಬಗ್ಗುವುದಿಲ್ಲ ಎಂಬುದು ಕಾಮನ್-ಸೆನ್ಸ್ ಮಾತ್ರವಲ್ಲ ಫಿಲಾಸಫಿಯ ಮಾತೂ ಸಹ. ಆದರೆ, ದೇಶ-ಕಾಲಗಳು (space-time) ವಸ್ತುಗಳ ಗುರುತ್ವದ ಬಲಕ್ಕೆ ಬಗ್ಗುತ್ತವೆ ಎಂದು ತೋರಿಸಿ ಒಂದೇ ಎಳೆತಕ್ಕೆ ಕಾಮನ್-ಸೆನ್ಸ್ ಮತ್ತು ಫಿಲಾಸಫಿಗಳ ಪರದೆಯನ್ನು ಬದಿಗೆ ಸರಿಸಿದವನು ಐನ್‌ಸ್ಟೈನ್.

 

ಎರಡು ವರ್ಷಗಳ ಹಿಂದೆ ಭಾರತೀಯ ವಿಜ್ಞಾನಿಗಳು ಮತ್ತು ತಾಂತ್ರಿಕ ತಜ್ಞರು ಸಹ ಅಂತಹ ಗಡಿಯಾರಗಳನ್ನು ನಿರ್ಮಿಸಿದ್ದಾರೆ. ಈ ಗಡಿಯಾರಗಳು ಎಷ್ಟು ನಿಖರವಾಗಿರುತ್ತವೆಂದರೆ, ಹಲವಾರು ಬಿಲಿಯನ್ ವರ್ಷಗಳಾದರೂ, ಅವು ಒಂದೇ-ಒಂದು ಸೆಕೆಂಡ್ ಸಹ “ಸ್ಲೋ” ಅಥವಾ “ಫಾಸ್ಟ್” ಆಗುವುದಿಲ್ಲ.

ನಮ್ಮ ಕಾಮನ್-ಸೆನ್ಸಿನ ಪರದೆಯ ಹಿಂದೆ, ಕಾಲವೆನ್ನುವ ಸಾರ್ವಭೌಮನೂ ಸಹ ಗುರುತ್ವಕ್ಕೆ ಬಾಗುವ ನಗ್ನನೆಂದು ತೋರಿಸಿಕೊಟ್ಟ ಕ್ರಿ.ಶ. ೧೯೦೫ ಅನ್ನು ಐನ್‌ಸ್ಟೈನನ “Annus mirabilis” (ಪವಾಡಸದೃಶ ವರ್ಷ) ಎಂದೆನ್ನುತ್ತಾರೆ. ಆ ವರ್ಷ, ಐನ್‌ಸ್ಟೈನ್ ತನ್ನ ರೀಸರ್ಚ್ ಪೇಪರುಗಳ ಮೂಲಕ ಅನಂತದ ಗುಹ್ಯಾತಿಗುಹ್ಯ ರಹಸ್ಯಗಳನ್ನು ಹೊರಗೆಡವಿದ. ಅವನ ಸುಪ್ರಸಿದ್ಧ E=mc² ಹೊರಬಿದ್ದದ್ದೂ ಆ ವರ್ಷವೇ.

ಆದರೆ, ಆ ಸಂದರ್ಭ ಬಂದಿದ್ದು ಹೇಗೆಂದು ಅರ್ಥಮಾಡಿಕೊಳ್ಳಲು ನಾವು ಐನ್‌ಸ್ಟೈನನಿಗಿಂತ ಹಿಂದಿನ ಕಾಲಕ್ಕೆ ಹೋಗಬೇಕಾಗುತ್ತದೆ.

******

ನಾನು ಅಮೆರಿಕದಲ್ಲಿದ್ದಾಗ, ಅಲ್ಲಿನ ಪ್ರಖ್ಯಾತ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಹತ್ತಿರದ ಊರೊಂದರಲ್ಲಿಯೇ ವಾಸಿಸುತ್ತಿದ್ದೆ. ಐನ್‌ಸ್ಟೈನನ ಮನೆ ಹತ್ತಿರದಲ್ಲಿಯೇ ಇತ್ತು. ಅದು ದೊಡ್ಡ ಮನೆ ಏನೂ ಅಲ್ಲ. ಅದರ ಮುಂದೆ ಓಡಾಡುವಾಗ, “ಅದು ಐನ್‍ಸ್ಟೈನನ ಮನೆ” ಎಂದು ಹೇಳಿದರೆ ಅದು ಗಮನಕ್ಕೆ ಬರುತ್ತಿತ್ತೇ ವಿನಃ ಇಲ್ಲದಿದ್ದರೆ ಹೊರಗಿನಿಂದ ಅದಕ್ಕೇನೂ ಅಂತಹ ವಿಶೇಷತೆ ಏನೂ ಕಾಣುವುದಿಲ್ಲ.

(ಐನ್‍ಸ್ಟೈನನ ಮನೆ)

ಅವನ ಮನೆಯ ಒಳಗೆ, ಐನ್‌ಸ್ಟೈನ್‌ ತನ್ನ ನೆಚ್ಚಿನ ಮೂರು ವಿಜ್ಞಾನಿಗಳ ಚಿತ್ರಪಟಗಳನ್ನಿಟ್ಟುಕೊಂಡಿದ್ದನಂತೆ. ಆ ಮೂರೂ ಜನ ವಿಜ್ಞಾನಿಗಳೂ ಬ್ರಿಟಿಷರೇ. ಮೊದಲನೆಯವನು ಐಸಾಕ್ ನ್ಯೂಟನ್ ಆದರೆ, ಎರಡನೆಯವನು ಮೈಕೇಲ್ ಫ್ಯಾರಡೇ. ಕಡೆಯವನು ಮತ್ತು ಕಾಲಘಟ್ಟದಲ್ಲಿ ಐನ್‌ಸ್ಟೈನನಿಗೆ ಹತ್ತಿರದವನು ಜೇಮ್ಸ್ ಕ್ಲರ್ಕ್ ಮ್ಯಾಕ್ಸ್‌ವೆಲ್.

ಐನ್‌ಸ್ಟೈನ್‌ ನ “ಪವಾಡ”ದ ಇತಿಹಾಸದ ಹಿಂದೆ, ಈ ಮೂರೂ ಜನರ ಕೊಡುಗೆಗಳಿವೆ. ಕಾಲದ ಸತ್ಯವನ್ನು ಮುಚ್ಚುವ ಕಾಮನ್-ಸೆನ್ಸಿನ ಪರದೆಯನ್ನು ಹಿಂದೆ ಸರಿಸಲು, ಐನ್‌ಸ್ಟೈನ್ ಈ ಮೂರೂ ಜನರ ಭುಜಗಳನ್ನೇರಬೇಕಾಯಿತು. ಹೀಗಾಗಿ, ಕಾಲದ ಬಗೆಗಿನ ಚರ್ಚೆಯಲ್ಲಿ, ಇವರ ವಿಚಾರಗಳು ಅಸಮಂಜಸವೆಂದೇನೂ ಅನಿಸುವುದಿಲ್ಲ. ಬದಲಿಗೆ, ಐನ್‌ಸ್ಟೈನ್‌ ನ ವಿಚಾರಧಾರೆಗಳನ್ನು ಅರಿತುಕೊಳ್ಳಲು ಅವು ಸಹಾಯಕವೇ ಎಂದೆನ್ನಬಹುದು.

ಐಸಾಕ್ ನ್ಯೂಟನ್‌ ನ ಹೆಸರನ್ನು ಕೇಳದವರಾರು? ನಾನಿನ್ನೂ ಸ್ಕೂಲಿಗೆ ಹೋಗುವ ಮೊದಲೇ, ನಮ್ಮ ಚಿಕ್ಕಪ್ಪ ಹೇಳುತ್ತಿದ್ದ ಕತೆಗಳ ಮೂಲಕ ನ್ಯೂಟನ್‌ ನನಗೆ ಪರಿಚಿತನಾಗಿದ್ದ. ಅವರ ಕತೆಗಳ ಮೂಲಕವೇ ನನಗೆ ಫ್ಯಾರಡೇಯ ಹೆಸರೂ ತಿಳಿದಿತ್ತು. ಆದರೆ, ಮ್ಯಾಕ್ಸ್‌ವೆಲ್‌ ನ ಪರಿಚಯ ಬಹುಮಟ್ಟಿಗೆ ನನಗೆ ಆಗಿದ್ದು, ನಾನು ಎಂಜಿನಿಯರಿಂಗ್ ಓದುತ್ತಿದ್ದಾಗಲೇ. ಇಂದೂ ಸಹ, ಐನ್‌ಸ್ಟೈನ್, ನ್ಯೂಟನ್, ಫ್ಯಾರಡೇ ಹೆಸರು ತಿಳಿದವರಿಗೂ ಮ್ಯಾಕ್ಸ್‌ವೆಲ್ ಬಹುಮಟ್ಟಿಗೆ ಅಪರಿಚಿತನೇ. ಆದರೆ, ಐನ್‌ಸ್ಟೈನ್ ಸ್ವತಃ ತನ್ನೊಂದು ಪತ್ರದಲ್ಲಿ ಹೇಳಿಕೊಂಡಂತೆ, “I owe more to Maxwell than to anyone”

******

ಮ್ಯಾಕ್ಸ್‌ವೆಲ್ ಹುಟ್ಟಿದ್ದು ೧೮೩೧ರಲ್ಲಿ. ಸ್ಕಾಟ್ಲೆಂಡಿನ ಎಡಿನ್‌ಬರೋದಲ್ಲಿ. ಆದರೆ ಅವನ ಬಾಲ್ಯ ಬಹುಮಟ್ಟಿಗೆ ಕಳೆದದ್ದು ಹತ್ತಿರದ ಒಂದು ಹಳ್ಳಿಯಲ್ಲಿ. ಸರಿಯಾದ ಶಾಲೆ ಇಲ್ಲದ್ದರಿಂದ, ಅವನ ಮೊದಲು ಗುರು ಅವನ ತಾಯಿಯೇ. ಮ್ಯಾಕ್ಸ್‌ವೆಲ್‌ ಗೆ ಸುಮಾರು ಎಂಟು ವರ್ಷವಿದ್ದಾಗ ಅವನ ತಾಯಿ, ಕ್ಯಾನ್ಸರ್‌ ಗೆ ತುತ್ತಾಗಿ ಮರಣ ಹೊಂದಿದರು. ಅನಂತರ ಅವನ ತಂದೆ, ಪಾಠ ಹೇಳಿ ಕೊಡಲು ಶಿಕ್ಷಕನೊಬ್ಬನನ್ನು ಗೊತ್ತು ಮಾಡಿದರು. ಆದರೆ, ಆ ಶಿಕ್ಷಣ ಹೆಚ್ಚು ಕಾಲ ನಡೆಯಲಿಲ್ಲ. ಆ ಶಿಕ್ಷಕನ ಪ್ರಕಾರ, ಮ್ಯಾಕ್ಸ್‌ವೆಲ್ ಒಬ್ಬ ಶತ-ಪೆದ್ದ.

(ಮ್ಯಾಕ್ಸ್‌ವೆಲ್)

ಆದರೆ, ಮ್ಯಾಕ್ಸ್‌ವೆಲ್‌ ನ ತಂದೆಗೆ ತನ್ನ ಮಗನ ಬುದ್ಧಿವಂತಿಕೆಯ ಬಗೆಗೆ ಯಾವುದೇ ಶಂಕೆ ಇರಲಿಲ್ಲ. ಅವನು, ತನ್ನ ಮಗನನ್ನು ಪ್ರತಿಷ್ಠಿತ ಶಾಲೆಯಾಗಿದ್ದ ಎಡಿನ್‌ಬರೋ ಅಕ್ಯಾಡೆಮಿಗೆ ಸೇರಿಸಿದ. ಆ ವೇಳೆಗೆ ಮ್ಯಾಕ್ಸ್‌ವೆಲ್‌ ಗೆ ಹತ್ತು ವರ್ಷ ವಯಸ್ಸಾಗಿತ್ತು. ಅಲ್ಲಿಯವರೆಗೂ ಕ್ರಮ ಶಿಕ್ಷಣ ಪಡೆಯದೇ ಇದ್ದ, ಮ್ಯಾಕ್ಸ್‌ವೆಲ್‌ ಗೆ ಶಾಲೆಯ ಮೊದಲ ವರ್ಷಗಳು ಕಷ್ಟಕರವಾಗೇ ಇದ್ದವು. ಆದರೆ, ಗಣಿತದ ಅಭ್ಯಾಸ ಹೆಚ್ಚಿದಂತೆ, ಅವನ ಪ್ರತಿಭೆ ಹೊರ ಹೊಮ್ಮಲಾರಂಭಿಸಿತು. ಹದಿನಾಲ್ಕು ವರ್ಷವಿದ್ದಾಗ ಅವನು ಜಿಯಾಮಿಟ್ರಿಯ ಬಗೆಗೆ ಬರೆದ ರೀಸರ್ಚ್ ಪೇಪರ್ ಅನ್ನು, ಎಡಿನ್‌ಬರೋದ ರಾಯಲ್ ಸೊಸೈಟಿಯಲ್ಲಿ ಮಂಡಿಸಲಾಯಿತು. ಅವನಿನ್ನೂ ಸಣ್ಣ ಹುಡುಗನಾಗಿದ್ದರಿಂದ, ಯೂನಿವರ್ಸಿಟಿ ಆಫ್ ಎಡಿನ್‌ಬರೋದ ಗಣ್ಯ ಪ್ರೊಫೆಸರ್ ಒಬ್ಬರು ಆ ಪೇಪರ್ ಅನ್ನು ಮ್ಯಾಕ್ಸ್‌ವೆಲ್ ಪರವಾಗಿ ಮಂಡಿಸಿದರು.

ನಂತರದ ವರ್ಷಗಳಲ್ಲಿ, ಮ್ಯಾಕ್ಸ್‌ವೆಲ್‌ ನ ಬುದ್ಧಿವಂತಿಕೆಯ ಬಗೆಗೆ ಪ್ರಶ್ನೆಗಳೇ ಏಳಲಿಲ್ಲ. ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲಿಯೇ ಎಡಿನ್‌ಬರೋ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಮುಗಿಸಿ, ಅಲ್ಲಿಂದ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಉನ್ನತ ಶಿಕ್ಷಣ ಪಡೆದು, ಇಪ್ಪತ್ತೈದನೆಯ ವಯಸ್ಸಿನಲ್ಲಿಯೇ ಪ್ರೊಫೆಸರ್ ವೃತ್ತಿಯನ್ನಾರಂಭಿಸಿದ.

ಹಲವಾರು ಹೆಸರಾಂತ ವಿಜ್ಞಾನಿಗಳು ಹೆಸರಿಗೆ “ಪ್ರೊಫೆಸರ್”ಗಳಾಗಿದ್ದರೂ, ವೈಜ್ಞಾನಿಕ ಅಧ್ಯಯನವಷ್ಟನ್ನೇ ಗುರಿಯಾಗಿಸಿಕೊಳ್ಳುವ ಅವರು, ಕ್ಲಾಸ್ ರೂಮಿಗೆ ಹೋಗಿ ಪಾಠ ಮಾಡುವುದು ಅತಿ ವಿರಳ. ಆದರೆ, ಮ್ಯಾಕ್ಸ್‌ವೆಲ್ ಆ ತರಹದ ಪ್ರೊಫೆಸರ್ ಆಗಿರಲಿಲ್ಲ. ತನ್ನ ವೈಜ್ಞಾನಿಕ ಅಧ್ಯಯನದೊಡನೆ, ಅವನು ಪ್ರತಿವಾರ ಹದಿನೈದು ಗಂಟೆ ಕ್ಲಾಸ್ ರೂಮ್ ಪಾಠವನ್ನೂ ನೀಡುತ್ತಿದ್ದ. ಅದಕ್ಕೂ ಮೀರಿ, ಹತ್ತಿರದ ವಯಸ್ಕ ಶಿಕ್ಷಣ ಕೇಂದ್ರದಲ್ಲಿಯೂ ಪ್ರತಿ ವಾರ ಉಚಿತವಾಗಿ ಗಣಿತ ಮತ್ತು ಭೌತ ಶಾಸ್ತ್ರದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದ.

ಅವನು ಪ್ರೊಫೆಸರ್ ಆದ ಸಮಯದ ವೇಳೆಗೆ ಖಗೋಳ ಶಾಸ್ತ್ರದಲ್ಲಿ ಶನಿಗ್ರಹದ ಸುತ್ತ ಇರುವ ಉಂಗುರಗಳ ಬಗೆಗೆ ಚರ್ಚೆ ನಡೆಯುತ್ತಿತ್ತು. ಟೆಲಿಸ್ಕೋಪ್‌ ಗಳ ಮೂಲಕ ಶನಿಯ ಸುತ್ತಲೂ ಇರುವ ಉಂಗುರಗಳನ್ನು ಗಮನಿಸಿ ಶತಮಾನಗಳೇ ಆಗಿದ್ದವು. ಆದರೆ, ಅಂತಹ ಉಂಗುರ ಒಂದು ಘನ ವಸ್ತುವೇ? ಅಥವಾ, ಅವು, ಉಂಗುರದಂತೆ ನಮಗೆ ಕಾಣುವ, ಶನಿಗ್ರಹವನ್ನು ಸುತ್ತುತ್ತಿರುವ ಸಣ್ಣ-ಸಣ್ಣ ಕಣಗಳೇ?

ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದ ವೇಳೆಗೆ, ಈ ಪ್ರಶ್ನೆಗೆ ಉತ್ತರಿಸುವುದು ಸಾಧ್ಯವಿರಲಿಲ್ಲ. ಆದರೆ, ಕೇವಲ ಗಣಿತದ ಸಹಾಯದಿಂದಲೇ, ಮ್ಯಾಕ್ಸ್‌ವೆಲ್ ಈ ಪ್ರಶ್ನೆಗೆ ಉತ್ತರ ನೀಡಿದ – ಶನಿಯ ಸುತ್ತ ಕಾಣುವ ಉಂಗುರಗಳು ಕೋಟ್ಯಾಂತರ ಸಣ್ಣ-ಸಣ್ಣ ಕಣಗಳಿಂದ ಮಾಡಲ್ಪಟ್ಟಿರುವಂತಹವು. ಉಂಗುರಾಕೃತಿಯ ಘನ ವಸ್ತುವೊಂದು, ಶನಿಯಂತಹ ಗ್ರಹವನ್ನು ಹೆಚ್ಚುಕಾಲ ಸುತ್ತುವುದು ಅಸಾಧ್ಯವೆಂದು ಮ್ಯಾಕ್ಸ್‌ವೆಲ್ ಗಣಿತದ ಮೂಲಕ ತೋರಿಸಿಕೊಟ್ಟ. ಸುಮಾರು ನೂರಿಪ್ಪತ್ತು ವರ್ಷಗಳ ನಂತರ, ಅಮೆರಿಕದ NASA ಸಂಸ್ಥೆ ಕಳುಹಿಸಿದ ವಾಯೇಜರ್ ಅಂತರಿಕ್ಷ ವಾಹನ ಶನಿಗ್ರಹದ ಬಳಿಗೆ ಹೋಗಿ ಮ್ಯಾಕ್ಸ್‌ವೆಲ್‌ ನ ಗಣಿತದ ಸತ್ಯವನ್ನು ಖಚಿತ ಪಡಿಸಿತು.

ಮ್ಯಾಕ್ಸ್‌ವೆಲ್‌ ನ ಕಾಲಕ್ಕೆ ಸುಮಾರು ಎರಡು ಶತಮಾನದ ಮುನ್ನವೇ, ಐಸಾಕ್ ನ್ಯೂಟನ್ “ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು” ಎಂದು ತೋರಿಸಿಕೊಟ್ಟಿದ್ದ. ಅದರ ಕುರಿತು ಮತ್ತಷ್ಟು ಅಧ್ಯಯನ ನಡೆಸಿದ ಮ್ಯಾಕ್ಸ್‌ವೆಲ್, ಕೇವಲ ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳಿಂದಲೇ ಯಾವುದೇ ಬಣ್ಣವನ್ನು ನಿರ್ಮಿಸಬಹುದೆಂದು ತೋರಿಸಿಕೊಟ್ಟ. ಅಷ್ಟೇ ಅಲ್ಲ, ೧೮೬೧ರಲ್ಲಿ, ಲಂಡನ್ನಿನ ರಾಯಲ್ ಸೊಸೈಟಿಯ ಪ್ರದರ್ಶನ ಒಂದರಲ್ಲಿ, ಜಗತ್ತಿನ ಮೊಟ್ಟ ಮೊದಲ ಕಲರ್ ಫೋಟೋವನ್ನು ಪ್ರದರ್ಶಿಸಿದ. ಆ ಕಾಲದಲ್ಲಿ, ಕಲರ್ ಕ್ಯಾಮೆರಾ ಇರಲಿಲ್ಲ. ಕಪ್ಪು-ಬಿಳುಪು ಕ್ಯಾಮೆರಾ ಲೆನ್ಸಿನ ಮುಂದೆ, ಒಂದೊಂದಾಗಿ ಕೆಂಪು, ಹಸಿರು, ನೀಲಿ ಫಿಲ್ಟರ್‌ ಗಳನ್ನಿಟ್ಟು ಮೂರು ಫೋಟೋಗಳನ್ನು ತೆಗೆದು, ಅವುಗಳನ್ನು ಒಟ್ಟುಗೂಡಿಸಿದರೆ, ಅದರಿಂದ ಕಲರ್ ಫೋಟೋ ನಿರ್ಮಿಸಬಹುದೆಂದು ಅವನು ತೋರಿಸಿಕೊಟ್ಟ.

ಆದರೆ, ಮ್ಯಾಕ್ಸ್‌ವೆಲ್‌ ನ ಖ್ಯಾತಿ ಇವು ಯಾವುದರಿಂದಲೂ ಅಲ್ಲ. ನನ್ನಂತಹ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮ್ಯಾಕ್ಸ್‌ವೆಲ್‌ ನ ಪರಿಚಯ ಆಗುವುದು ಈ ವಿಷಯಗಳಿಗಾಗಿ ಅಲ್ಲ. ಐನ್‌ಸ್ಟೈನ್‌ ನಂತಹ ಅಪ್ರತಿಮನೊಬ್ಬ ಮ್ಯಾಕ್ಸ್‌ವೆಲ್‌ ಗೆ ಋಣಭಾರನಾಗಿದ್ದು, ಶನಿಗ್ರಹದ ಉಂಗುರಗಳಿಗಾಗಿ ಅಥವಾ ಕಲರ್ ಫೋಟೋಗಾಗಿ ಅಲ್ಲ. ಈ ವಿಚಾರಗಳು ಕಾಲದ ಬಗೆಗಿನ ನಮ್ಮ ಚರ್ಚೆಯಲ್ಲಿ ಅಪ್ರಸಕ್ತ ಸಹ ಎನ್ನಬಹುದು.

(ಜಗತ್ತಿನ ಮೊಟ್ಟಮೊದಲ ಕಲರ್‌ ಫೋಟೋ)

ಮ್ಯಾಕ್ಸ್‌ವೆಲ್, ಐನ್‌ಸ್ಟೈನ್‌ ಗೆ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮತ್ತು “ಕಾಲ ಬಗ್ಗುವುದನ್ನು” ತಿಳಿಯಲೆತ್ನಿಸುತ್ತಿರುವ ನಮಗೆ ಮುಖ್ಯನಾಗುವುದು, ಎಲೆಕ್ಟ್ರೋ-ಮ್ಯಾಗ್ನೆಟಿಸಂ ವಿಷಯದಲ್ಲಿ ಅವನು ತೋರಿಸಿಕೊಟ್ಟ ಹೊಸದೊಂದು ಅರಿವಿನಿಂದ.


ಆದರೆ, ಅದನ್ನು ಚರ್ಚಿಸಲು ನಾವು ಇನ್ನಷ್ಟು ಕಾಲ ಹಿಂದೆ ಹೋಗಬೇಕು. ಮ್ಯಾಕ್ಸ್‌ವೆಲ್‌ ಗಿಂತ ಹಿಂದಿನವನಾದ ಮೈಕೇಲ್ ಫ್ಯಾರಡೆಯನ್ನು ಕಾಣಬೇಕು.

(ಮುಂದುವರೆಯುವುದು)

(*) https://en.wikipedia.org/wiki/Pound-Rebka_experiment
(**) https://en.wikipedia.org/wiki/Gravity_Probe_A