ನಾವಿಬ್ಬರೂ ಸಂಧಿಸದಿರುತ್ತಿದ್ದರೆ….

ನಾವಿಬ್ಬರೂ ಸಂಧಿಸದಿರುತ್ತಿದ್ದರೆ
ಕನಸಿನ ತತ್ತಿಗೆ ಕಾವು ಕೊಟ್ಟು
ರೆಕ್ಕೆ ಪುಕ್ಕ ಬಂದು
ಹಾರುತ್ತಿರಲಿಲ್ಲ

ಮನದ ಅಂಗಳಕ್ಕೆ ಹೇಳದೇ ಕೇಳದೇ
ಲಗ್ಗೆ ಇಟ್ಟು ನಗುತ್ತಿರಲಿಲ್ಲ

ನಾವಿಬ್ಬರೂ ಸಂಧಿಸದಿರುತ್ತಿದ್ದರೆ
ಸುಖದ ಕಲ್ಪನೆಯೂ
ಇಷ್ಟೊಂದು ಹಿರಿದು
ಹಿಗ್ಗಾಗುತ್ತಿರಲಿಲ್ಲ

ಬಂಗಾರದ ಬಟ್ಟಲಲ್ಲಿ ಅಮೃತ
ಉಣ್ಣುವ ರಸಗಳಿಗೆಗಳಿಗೆ ಸಾಕ್ಷಿಯಾಗುತ್ತಿರಲಿಲ್ಲ

ನಾವಿಬ್ಬರೂ ಸಂಧಿಸದಿರುತ್ತಿದ್ದರೆ
ಅವಡುಗಚ್ಚಿ ವಿದಾಯ ಹೇಳುವ ದುಃಖವಿರುತ್ತಿರಲಿಲ್ಲ
ವಿರಹದ ಬೇಗುದಿಯೊಂದು
ಒಳಗೊಳಗೇ ಸುಡುತ್ತಿರಲಿಲ್ಲ

ನಮ್ಮೊಳಗುಗಳು ಬರಿದಾಗಿ
ನಿಡುಸುಯ್ಯುವ ಪ್ರಮೇಯವಿರುತ್ತಿರಲಿಲ್ಲ

ನಾವಿಬ್ಬರು ಸಂಧಿಸದಿರುತ್ತಿದ್ದರೇ
ಚೆನ್ನಿತ್ತೋ ಏನೋ
ಕೊನೇ ಪಕ್ಷ ನಾನು ನಾನಾಗಿಯೂ
ನೀನು ನೀನಾಗಿಯೂ ಉಳಿದುಬಿಡಬಹುದಿತ್ತು!

 

ಡಾ. ಪ್ರೀತಿ ಕೆ. ಎ. ಬೆಂಗಳೂರಿನವರು
ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವೀಧರೆ.
ಕರ್ನಾಟಕ ಆರ್ಥಿಕತೆಯ ಬಗ್ಗೆ ಪುಸ್ತಕ ಹಾಗೂ ಹಲವಾರು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿವೆ.