ಇಂಥ ತೀವ್ರತರವಾದ ಕಷ್ಟದ ದಿನಗಳಲ್ಲಿ ಕೆಲವರು ತಮ್ಮ ಗುಪ್ತ ಕಾರ್ಯಸೂಚಿಗಳನ್ನು ಮುನ್ನೆಲೆಗೆ ತರಲು ಪ್ರಯತ್ನಿಸಿದ ಘಟನೆಗಳೂ ನಡೆದುವು. ಕೊರೋನಾ ಓಡಿಸಲು ಶಂಖ ಜಾಗಟೆಗಳನ್ನು ಬಳಸಲು ಸೂಚಿಸಿದಲ್ಲಿಂದ ಆರಂಭವಾದ ಅದು ದೆಹಲಿಯ ತಬ್ಲೀಗ್ ಜಮಾಅತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಿಂದ ಕೊರೋನಾ ಹರಡಿದೆ ಎಂದು ಹೇಳುತ್ತಾ ಮಹಾಮಾರಿಗೂ ಕೋಮುವಾದದ ಸೋಂಕು ತಗಲಿಸುವವರೆಗೆ ಮುಂದುವರೆಯಿತು. ಆದರೆ ಕೊರೋನಾಕ್ಕೆ ಹಿಂದು ಮುಸ್ಲಿಂ ವ್ಯತ್ಯಾಸ ಗೊತ್ತಾಗದೆ, ಎಲ್ಲರನ್ನೂ ಬಲಿ ತೆಗೆದುಕೊಳ್ಳಲಾರಂಭಿಸಿದ ಮೇಲೆ ಚಿತ್ರ ಸ್ವಲ್ಪ ಬದಲಾಯಿತು.
ಏ.ಕೆ. ಕುಕ್ಕಿಲ ಬರೆದ ‘ವೈರಸ್ʼ ಕಾದಂಬರಿಗೆ ಪ್ರೊ. ಪುರುಷೋತ್ತಮ ಬಿಳಿಮಲೆ ಬರೆದ ಮುನ್ನುಡಿ
ಸ್ವಾತಂತ್ರ್ಯೋತ್ತರ ಭಾರತವು ಇದಿರಿಸಿದ ಅನಿರೀಕ್ಷಿತ ಆಪತ್ತುಗಳಲ್ಲಿ ಕೊರೋನಾ ತಂದ ಬಿಕ್ಕಟ್ಟುಗಳು ಬಹಳ ಪ್ರಮುಖವಾದುವು. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಅದು ಬಹುತೇಕ ಭಾರತೀಯರನ್ನು ಕಂಗೆಡಿಸಿತು. ಯಾವ ಪೂರ್ವ ಸಿದ್ಧತೆಯಿಲ್ಲದೆ ಲಾಕ್ ಡೌನ್ ಘೋಷಿಸಿದ್ದರ ಪರಿಣಾಮವಾಗಿ ಲಕ್ಷಾಂತರ ಜನರು ಕೆಲವು ಗಂಟೆಗಳೊಳಗಾಗಿ ಬೀದಿಗೆ ಬಿದ್ದು ತಮ್ಮ ಬದುಕನ್ನು ಕಳೆದುಕೊಳ್ಳಬೇಕಾಯಿತು. ಭಾರತ ವಿಭಜನೆಯ ಸಂದರ್ಭದಲ್ಲಿ ಕಾಣಿಸಿಕೊಂಡ ಮಹಾವಲಸೆಯು ಮತ್ತೊಮ್ಮೆ ಮರುಕಳಿಸಿತು. ಇದು ಉಂಟು ಮಾಡಿದ ಗಾಯಗಳು ಗುಣವಾಗಬೇಕಾದರೆ ಬಹಳ ಸಮಯ ಬೇಕಾದೀತು.
ಶಿಕ್ಷಣ ಕ್ಷೇತ್ರವು ಇಡಿಯಾಗಿ ಕುಸಿಯಿತು. ಅನೇಕ ಕೈಗಾರಿಕೆಗಳಿಗೆ ತಮ್ಮ ಮುಚ್ಚಿದ ಬಾಗಿಲುಗಳನ್ನು ತೆರೆಯಲು ಇನ್ನೂ ಸಾಧ್ಯವಾಗಿಲ್ಲ. ಪ್ರವಾಸೋದ್ಯಮ ನೆಲಕಚ್ಚಿತು. ಕ್ರೀಡಾ ಕ್ಷೇತ್ರ ಕುಸಿಯಿತು. ವಿಶೇಷವೆಂದರೆ, ಧಾರ್ಮಿಕ ಕ್ಷೇತ್ರಗಳನ್ನೂ ಕೇಳುವವರಿಲ್ಲವಾಗಿದೆ. ರಿಕ್ಷಾ ಓಡಿಸುವವರು, ಬಾಡಿಗೆ ವಾಹನಗಳನ್ನು ಚಲಾಯಿಸುವ ಡ್ರೈವರುಗಳು ಮತ್ತು ಲಕ್ಷಾಂತರ ಉದ್ಯೋಗಿಗಳು ಅನಾಥರಾದರು. ಯುವಕರು ನಿಧಾನವಾಗಿ ಹತಾಶೆಯತ್ತ ಜಾರುದ್ದಾರೆ. ಅಳಿದುಳಿದ ವಲಸೆ ಕಾರ್ಮಿಕರಿಗೆ ಇನ್ನೂ ತಮ್ಮ ನೆಲೆಗಳನ್ನು ಕಂಡುಕೊಳ್ಳಲಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯು ಹೇಳುವ ಪ್ರಕಾರ, ಕೊರೋನಾದಿಂದ ಜನ ಮಾನಸಿಕ ಒತ್ತಡಗಳಿಗೆ ಒಳಗಾಗಿದ್ದು, ಅದು ಆತ್ಮಹತ್ಯೆಗಳಿಗೂ ಕಾರಣವಾಗಿದೆ ಮತ್ತು ಅನೇಕ ಕಡೆಗಳಲ್ಲಿ ಹಿಂಸೆಯನ್ನೂ ಹೆಚ್ಚು ಮಾಡಿದೆ.
ಇಂಥ ತೀವ್ರತರವಾದ ಕಷ್ಟದ ದಿನಗಳಲ್ಲಿ ಕೆಲವರು ತಮ್ಮ ಗುಪ್ತ ಕಾರ್ಯಸೂಚಿಗಳನ್ನು ಮುನ್ನೆಲೆಗೆ ತರಲು ಪ್ರಯತ್ನಿಸಿದ ಘಟನೆಗಳೂ ನಡೆದುವು. ಕೊರೋನಾ ಓಡಿಸಲು ಶಂಖ ಜಾಗಟೆಗಳನ್ನು ಬಳಸಲು ಸೂಚಿಸಿದಲ್ಲಿಂದ ಆರಂಭವಾದ ಅದು ದೆಹಲಿಯ ತಬ್ಲೀಗ್ ಜಮಾಅತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಿಂದ ಕೊರೋನಾ ಹರಡಿದೆ ಎಂದು ಹೇಳುತ್ತಾ ಮಹಾಮಾರಿಗೂ ಕೋಮುವಾದದ ಸೋಂಕು ತಗಲಿಸುವವರೆಗೆ ಮುಂದುವರೆಯಿತು. ಆದರೆ ಕೊರೋನಾಕ್ಕೆ ಹಿಂದು ಮುಸ್ಲಿಂ ವ್ಯತ್ಯಾಸ ಗೊತ್ತಾಗದೆ, ಎಲ್ಲರನ್ನೂ ಬಲಿ ತೆಗೆದುಕೊಳ್ಳಲಾರಂಭಿಸಿದ ಮೇಲೆ ಚಿತ್ರ ಸ್ವಲ್ಪ ಬದಲಾಯಿತು.
ಏ.ಕೆ. ಕುಕ್ಕಿಲರ ಪ್ರಸ್ತುತ ಕಾದಂಬರಿ ಮೇಲೆ ಹೇಳಿದ ಕೊರೋನಾ ಕಾಲದ ಕೆಲವು ದುರಿತಗಳನ್ನು ಮುನ್ನೆಲೆಗೆ ತರಲು ಪ್ರಯತ್ನಿಸುತ್ತದೆ. ಹಾಗೆ ಮಾಡಲು ಕುಕ್ಕಿಲರು ನೂರ್ ಮತ್ತು ಅನಾಮಿಕ ಎಂಬ ಎರಡು ಮುಖ್ಯ ಪಾತ್ರಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಇಡೀ ಕಾದಂಬರಿಯು ಈ ಎರಡು ಪಾತ್ರಗಳ ಸುತ್ತವೇ ಬೆಳೆಯುತ್ತಾ, ಇಸ್ಲಾಂ ಮತ್ತು ಹಿಂದೂ ಧರ್ಮದ ಕುರಿತಾದ ಕೆಲವು ವಿಷಯಗಳಿಗೆ ಆಗಾಗ ಮುಖಾಮುಖಿಯಾಗುತ್ತಾ ಅವರೆಡೂ ಧರ್ಮಗಳ ಬಗ್ಗೆ ಇರುವ ಅಪನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತದೆ. ಇಂಥ ಪ್ರಯತ್ನಗಳ ನಡುವೆ ನೂರ್ ನ ಅಸಾಮಾನ್ಯ ಪ್ರತಿಭೆಗೆ ಅನಾಮಿಕ ಮರುಳಾಗುತ್ತಾಳೆ ಮತ್ತು ಅನಾಮಿಕಳ ನಾಯಕತ್ವದ ಲಕ್ಷಣಗಳಿಗೆ ನೂರ್ ಮನಸೋಲುತ್ತಾನೆ.
ನೂರ್ ಕೆಲಸ ಹುಡುಕಿಕೊಂಡು ಬಂಗಾಳದಿಂದ ಬಂದವನಾದರೆ, ಅದೇ ಕಾಫಿ ಎಸ್ಟೇಟಿನಲ್ಲಿ ದುಡಿದು ಜೀವನ ಸಾಗಿಸಲು ಬಿಹಾರದಿಂದ ವಿಧವೆ ಅನಾಮಿಕಳೂ ಆಗಮಿಸಿರುತ್ತಾಳೆ. ಲಾಕ್ ಡೌನ್ ಅವರಿಬ್ಬರ ಬದುಕಿನಲ್ಲಿ ಆರ್ಥಿಕ ಬಿಕ್ಕಟ್ಟನ್ನು ತರುತ್ತದೆ. ಆದರೆ ಎಸ್ಟೇಟ್ ಮಾಲೀಕ ವರದರಾಜನು ಅವರ ಸಮಸ್ಯೆಗಳಿಗೆ ಕಿವಿಯಾಗುವ ಬದಲು ಸಮಸ್ಯೆಗಳನ್ನು ಹೆಚ್ಚು ಮಾಡುತ್ತಾನೆ. ಆಗ ನೂರ್ ಮತ್ತು ಅನಾಮಿಕರಿಬ್ಬರೂ ಅಲ್ಲಿಂದ ತಪ್ಪಿಸಿಕೊಳ್ಳಲು ಯೋಜನೆಯನ್ನು ರೂಪಿಸುತ್ತಾರೆ. ಕಾದಂಬರಿ ಶುರು ಆಗುವುದೇ ಅವರಿಬ್ಬರ ಪರಾರಿ ಯೋಜನೆಯಿಂದ. ಮುಂದೆ ಕಾದಂಬರಿಯು ನೂರ್ ಮತ್ತು ಅನಾಮಿಕರ ನಡುವಣ ಸಂಬಂಧಗಳನ್ನು ಪರಿ ಶೋಧಿಸುತ್ತಾ ಕುತೂಹಲಕರವಾಗಿ ಬೆಳೆಯುತ್ತದೆ.
ಒಂದು ಉದಾತ್ತ ಸಂಬಂಧವನ್ನು ಮಾನವನ ಕೆಲವು ಇತಿ ಮಿತಿಗಳ ಚೌಕಟ್ಟಿನಲ್ಲಿ ಪರಿಶೀಲಿಸುವ ಈ ಕಾದಂಬರಿಯು ವರ್ತಮಾನ ಕಾಲದ ನಮ್ಮ ತಿಳಿವಿನ ಗಡಿ ರೇಖೆಗಳನ್ನು ಗಮನಾರ್ಹವಾಗಿ ವಿಸ್ತರಿಸುತ್ತದೆ ಮತ್ತು ಕೆಲವು ಅಪಕಲ್ಪನೆಗಳನ್ನು ಹೋಗಲಾಡಿಸುತ್ತದೆ. ಈ ಸಂದರ್ಭಗಳಲ್ಲಿ ಕಾದಂಬರಿಯು ಕಲಾಕೃತಿಯೊಂದರ ಕೆಲವು ಗುಣಗಳನ್ನು ಮೀರಿ ವಾಚ್ಯವಾಗುವುದೂ ಇದೆ. ಸಂದೇಶ ಮುಖ್ಯವಾದಾಗ ಇದು ಅನಿವಾರ್ಯವಾಗುತ್ತದೆ.
ಅಂತಹ ಕೆಲವು ಉದಾಹರಣೆಗಳನ್ನು ಇಲ್ಲಿ ಗಮನಿಸಬಹುದು.
ಕಾದಂಬರಿಯ ಆರಂಭದಲ್ಲಿ ಕೊರೋನಾದಿಂದ ಮರಣಹೊಂದಿದ ಶಂಕರನ ವಿವರ ಬರುತ್ತದೆ. ಆ ಸಂದರ್ಭದಲ್ಲಿ ಕಾಯಿಲೆಗೆ ಮುಸ್ಲಿಮರ ಸಂಪರ್ಕದಲ್ಲಿ ಕಾರಣಗಳನ್ನು ಹುಡುಕುವುದನ್ನು ಕಾದಂಬರಿಯು ವಿಶ್ಲೇಷಿಸುತ್ತದೆ- ಯಾವ ಕೋನದಲ್ಲಿ ಯೋಚಿಸಿದರೂ ತನ್ನ ಗಂಡ ಕೊರೋನಾ ಪಾಸಿಟಿವ್ ಹೇಗಾದ ಅನ್ನುವ ಪ್ರಶ್ನೆಗೆ ಉತ್ತರವೇ ಸಿಗುತ್ತಿಲ್ಲ ಮತ್ತು ನಡು ನಡುವೆ ಬಿಕ್ಕುವಿಕೆ, ದೀರ್ಘ ಉಸಿರಾಟ. ತುಸು ಹೊತ್ತು ಎರಡೂ ಕಡೆಯಿಂದಲೂ ಮೌನ. ಬಳಿಕ ಆತ ಮೌನ ಮುರಿದ.
ಪಕ್ಕದ ಬ್ಯಾರಿ ಮುಸಲ್ಮಾನರ ಮನೆಯಿಂದ ಯಾರಾದ್ರೂ ನಮ್ಮ ಮನೆಗೆ ಬಂದಿದ್ದರೇ?
ಯಾವಾಗ? ಆಕೆಯ ಪ್ರಶ್ನೆ.
ಕಳೆದ ಎರಡ್ಮೂರು ವಾರಗಳಲ್ಲಿ.
ಇಲ್ವಲ್ಲ? ಯಾಕೆ?
ನಂಗೆ ಕೊರೋನಾ ಹೇಗೆ ಬಂತೂ ಅಂತ?
ಅದೇ ನಂಗೂ ಚಿಂತೇರಿ. ಬ್ಯಾರಿಗಳೊಂದಿಗೆ ಸಂಪರ್ಕವೇ ಇಲ್ಲದ ನಿಮಗೆ ಹೇಗೆ ಬಂತೂ ಅಂತ? ಲಾಕ್ಡೌನ್ ಸಡಿಲಿಕೆ ಆದಾಗ ಬ್ಯಾರಿಗಳನ್ನು ಸಂಪರ್ಕಿಸಿದ್ದಿರಾ? ಬ್ಯಾರಿಗಳ ಅಂಗಡಿಯಿಂದ ಏನನ್ನಾದರೂ ಖರೀದಿಸಿದ್ದಿರಾ? ರೇವತಿ ಆತಂಕ ತೋಡಿಕೊಂಡಳು.
ವಿಶ್ವ ಆರೋಗ್ಯ ಸಂಸ್ಥೆಯು ಹೇಳುವ ಪ್ರಕಾರ, ಕೊರೋನಾದಿಂದ ಜನ ಮಾನಸಿಕ ಒತ್ತಡಗಳಿಗೆ ಒಳಗಾಗಿದ್ದು, ಅದು ಆತ್ಮಹತ್ಯೆಗಳಿಗೂ ಕಾರಣವಾಗಿದೆ ಮತ್ತು ಅನೇಕ ಕಡೆಗಳಲ್ಲಿ ಹಿಂಸೆಯನ್ನೂ ಹೆಚ್ಚು ಮಾಡಿದೆ.
ಕಾದಂಬರಿಯು ಹೀಗೆ ಬೆಳೆಯುತ್ತಾ ಹೋಗುತ್ತಿದ್ದಂತೆ ಭಾರತೀಯ ಸಮಾಜದ ಅನೇಕ ಅನಿಷ್ಠಗಳ ಬಗೆಗೂ ಮಾತುಗಳು ಬರುತ್ತವೆ. ಅಮಾನುಷವಾದ ಅಸ್ಪಶ್ಯತೆಯ ಕುರಿತು, ಅಭಿವೃದ್ಧಿಯ ಫಲಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕಾದ ಅಗತ್ಯಗಳು, ಮಾಲ್ ಸಂಸ್ಕೃತಿಯು ಉಂಟು ಮಾಡಿದ ಹಾನಿಗಳು, ಕುಡಿತದ ಸಮಸ್ಯೆಗಳು, ಕಾಡನ್ನು ನಾಶ ಮಾಡಿ ಕಾಂಕ್ರಿಟ್ ಕಟ್ಟಡ ಕಟ್ಟುವವರು ಮಾಡುವ ಪರಿಸರ ವಿನಾಶ, ಕೋಮು ಜಗಳಗಳು ಸಮಾಜವನ್ನು ಒಡೆದು ಮಾನವ ಸಂಬಂಧಗಳನ್ನು ಛಿದ್ರಗೊಳಿಸುತ್ತಿರುವ ರೀತಿ, ಅಂತರಜಾತಿಯ ವಿವಾಹಗಳು, ಬುರ್ಖಾ ಸಮಸ್ಯೆ, ಲಿಂಗ ತಾರತಮ್ಯ, ಆಧುನಿಕ ತಂತ್ರಜ್ಞಾನವನ್ನು ಬಳಸಿ ವಿಷಬೀಜಗಳನ್ನು ಬಿತ್ತುವ ಪರಿ- ಮೊದಲಾದ ಅನೇಕ ಸಂಗತಿಗಳು ಕಾದಂಬರಿಯಲ್ಲಿ ಹಸಿ ಹಸಿಯಾಗಿಯೇ ಕಾಣಿಸಿಕೊಳ್ಳುತ್ತವೆ. ಮುಂದಿನ ಸಾಲುಗಳನ್ನು ಗಮನಿಸಿರಿ-
ಲಾಕ್ ಡೌನ್ ಘೋಷಣೆಯಾಗಿ ಒಂದು ವಾರ ಕಳೆಯುತ್ತಲೇ ಟಿ.ವಿ. ವಾರ್ತೆಗಳ ಸ್ವರೂಪವೇ ಬದಲಾಯಿತು. ಕೊರೋನಾವನ್ನು ಮುಸ್ಲಿಮರಿಗೆ ಜೋಡಿಸಿ, ಅವರು ಸೋಂಕು ಹರಡುತ್ತಾರೆ ಎಂಬ ವಾರ್ತೆಗಳು ಮೇಲಿಂದ ಮೇಲೆ ಪ್ರಸಾರವಾಗತೊಡಗಿದುವು. ಟೊಪ್ಪಿ, ಪೈಜಾಮ, ಗಡ್ಡ ಇಟ್ಟ ಮುಸ್ಲಿಮರನ್ನು ಮತ್ತೆ ಮತ್ತೆ ತೋರಿಸುತ್ತಾ ಮಸೀದಿ, ನಮಾಝ್ ಗಳ ವೀಡಿಯೋಗಳನ್ನು ಪ್ರಸಾರ ಮಾಡುತ್ತಾ, ಸಾರ್ವಜನಿಕವಾಗಿ ಒಂದು ನಿರ್ದಿಷ್ಟ ಅಭಿಪ್ರಾಯವನ್ನೇ ಅವು ರೂಪಿಸಿದುವು. ಮಾಧ್ಯಮಗಳು ಕೊಟ್ಟ ಕೆಲವು ಹೆಸರುಗಳನ್ನು ರೇವತಿ ನೆನಪಿಸಿಕೊಂಡಳು-
‘ಕೊರೋನಾ ಜಿಹಾದ್, ಮದ್ರಸ ವೈರಸ್, ಗರ್ಭಿಣಿ ವೈರಸ್, ತಬ್ಲೀಗಿ ವೈರಸ್.. ಹೀಗೆ ತರಹೇವಾರಿ ಹೆಸರುಗಳನ್ನು ಕೊಟ್ಟು ಟಿ.ವಿ. ಚಾನೆಲ್ ಗಳು ಕೊರೋನಾಕ್ಕೆ ನಿರ್ದಿಷ್ಟ ಚಹರೆಯನ್ನು ಕೊಟ್ಟವು. ಆ ಬಳಿಕ ಮೊಬೈಲ್ ಗಳಲ್ಲಿ ಪುಂಖಾನುಪುಂಖ ಸುದ್ದಿಗಳು, ವೀಡಿಯೋಗಳು. ಬ್ಯಾರಿಗಳು ಉದ್ದೇಶಪೂರ್ವಕವಾಗಿ ಸೋಂಕು ಹರಡುತ್ತಿದ್ದಾರೆ, ಅವರಿಂದ ಏನೂ ಖರೀದಿಸಬೇಡಿ, ಮುಟ್ಟಬೇಡಿ, ಅವರು ನೋಟಿಗೆ ಉಗುಳುತ್ತಾರೆ, ತರಕಾರಿಗಳಿಗೆ ಉಗುಳುತ್ತಾರೆ, ರಸ್ತೆಗೆ ಉಗುಳುತ್ತಾರೆ.. ಹೀಗೆ ಸುದ್ದಿಗಳೇ ಸುದ್ದಿಗಳು…’
ಇಂತಹ ಕಟು ವಾಸ್ತವವಾದೀ ಸಾಲುಗಳು ನಮ್ಮ ಕಣ್ಣೆದುರೇ ನಡೆದು ಹೋದ, ಈಗಲೂ ನಡೆಯುತ್ತಿರುವ ಅಪಾಯಕಾರೀ ಬೆಳವಣಿಗೆಗಳನ್ನು ಓದುಗರ ಗಮನಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಜೊತೆಗೆ ಕಾದಂಬರಿಯು ರೇವತಿಯ ಮೂಲಕ ಇವತ್ತಿಗೆ ಅಗತ್ಯವಾಗಿ ಬೇಕಾದ ಸಂದೇಶವೊಂದನ್ನೂ ನಮಗೆ ನೀಡುತ್ತದೆ- `ಈ ಜಗತ್ತಿನಲ್ಲಿರುವವರೆಲ್ಲ ಕೇವಲ ಮನುಷ್ಯರು ಮಕ್ಕಳೇ. ಯಾರೂ ಅನ್ಯರಿಲ್ಲ. ಎಲ್ಲರೂ ನಮ್ಮವರೇ. ಯಾರನ್ನೂ ಧರ್ಮದ ಕಾರಣಕ್ಕಾಗಿ ದ್ವೇಷಿಸಬೇಡಿ. ಕೆಟ್ಟವರು ಎಲ್ಲ ಧರ್ಮದಲ್ಲೂ ಇದ್ದಾರೆ, ಒಳ್ಳೆಯವರೂ ಎಲ್ಲ ಧರ್ಮದಲ್ಲಿ ಇದ್ದಾರೆ, ಕೆಟ್ಟವರ ಕೆಟ್ಟತನವನ್ನು ವಿರೋಧಿಸಿ. ಒಳ್ಳೆಯವರ ಒಳ್ಳೇತನವನ್ನು ಮೆಚ್ಚಿಕೊಳ್ಳಿ. ಇದರಾಚೆಗಿನ ಎಲ್ಲ ವಾದಗಳನ್ನೂ ತಿರಸ್ಕರಿಸಿ’.
ಕಾದಂಬರಿಯ ಉತ್ತರಾರ್ಧವು ಬಹುತೇಕವಾಗಿ ಇಸ್ಲಾಂ ಧರ್ಮದ ಬಗ್ಗೆ ಜನರಲ್ಲಿರುವ ತಪ್ಪುಕಲ್ಪನೆಗಳನ್ನು ನೂರ್ ನ ವಿವರಣೆಗಳ ಮೂಲಕ ಹೋಗಲಾಡಿಸಲು ಪ್ರಯತ್ನಿಸುತ್ತದೆ. ಈ ನಿಟ್ಟಿನಲ್ಲಿ ಇದು ಬೋಳುವಾರು ಮುಹಮ್ಮದ್ ಕುಂಞಯವರ ಪ್ರಯತ್ನದ ಮುಂದುವರಿಕೆಯೂ ಹೌದು. ನೂರಾರು ವರ್ಷಗಳು ಜೊತೆಗೇ ಬದುಕಿದ ಹಿಂದೂ ಮುಸ್ಲಿಮರು ಪರಸ್ಪರ ತಿಳಿದುಕೊಳ್ಳಲು ಮಾಡಿದ ಪ್ರಯತ್ನಗಳು ಇಲ್ಲವೆಂಬಷ್ಟು ಕಡಿಮೆ. ದ್ವೇಷಿಸಲು ಹೇಳಿಕೊಟ್ಟಷ್ಟು ಪ್ರೀತಿಸಲು ಕಲಿಸಿದ್ದರೆ ಭಾರತದ ಇಂದಿನ ಪರಿಸ್ಥಿತಿಯೇ ಬೇರೆ ಇರುತ್ತಿತ್ತು. ಮುಸ್ಲಿಮರ ಕುರಿತಾಗಿ ಮುಸ್ಲಿಮೇತರರಲ್ಲಿ ಇರುವ ಕೆಲವು ಜನಪ್ರಿಯ ನಂಬಿಕೆಗಳನ್ನು ಈ ಕಾದಂಬರಿ ದಿಟ್ಟವಾಗಿ ತಿರಸ್ಕರಿಸುತ್ತದೆ. ಮುಸ್ಲಿಮರ ಬಹುಪತ್ನಿತ್ವ ಮತ್ತು ಹೆಚ್ಚು ಮಕ್ಕಳ ಕಲ್ಪನೆ ಅಂತಹ ಒಂದು ಜನಪ್ರಿಯ ನಂಬಿಕೆ. ಅದರ ಕಾರಣಗಳನ್ನು ಕಾದಂಬರಿಯು ಚಾರಿತ್ರಿಕವಾಗಿ ವಿಶ್ಲೇಷಿಸುತ್ತದೆ-
ಯುದ್ಧದಲ್ಲಿ ಮೃತಪಟ್ಟ ಮುಸ್ಲಿಮ್ ಯೋಧರ ಅನಾಥ ಮಕ್ಕಳಿಗೆ ಇತರ ಮುಸ್ಲಿಮರು ಆಶ್ರಯ ಒದಗಿಸಬೇಕು. ಅವರ ಜೊತೆ ಅವರ ವಿಧವೆ ಪತ್ನಿಯರೂ ಇರುವುದು ಸಹಜ. ಅವರ ಆಶ್ರಯವೂ ನಿಮ್ಮ ಹೊಣೆಯಲ್ಲಿದೆ. ಆದರೆ ಇವರೆಲ್ಲರಿಗೆ ಆಶ್ರಯ ಕೊಟ್ಟ ಹೆಸರಲ್ಲಿ ನೀವು ಅವರ ಮೇಲೆ ಅಧಿಕಾರ ಸ್ಥಾಪಿಸಬಾರದು. ಅವರನ್ನು ಲೈಂಗಿಕವಾಗಿ ಶೋಷಿಸಬಾರದು. ಹಾಗೊಂದು ವೇಳೆ, ಅಂಥ ಸನ್ನಿವೇಶ ನಿರ್ಮಾಣವಾಗುವ ಸಂದರ್ಭ ಎದುರಾದರೆ, ಅವರನ್ನು ಪತ್ನಿಯಾಗಿ ಸ್ವೀಕರಿಸಿ ಆಶ್ರಯ ಕಲ್ಪಿಸಬೇಕು, ಇದು ಯುದ್ಧದ ಸಂದರ್ಭದಲ್ಲಿ ಉಂಟಾದ ವಿಷಮ ಪರಿಸ್ಥಿತಿಗೆ ನೀಡಲಾದ ಪರಿಹಾರವೇ ಹೊರತು ನಾಲ್ವರು ಪತ್ನಿಯರನ್ನು ಸಾರಾಸಗಟು ಹೊಂದಲು ಪ್ರೇರೇಪಿಸುವ ಅಥವಾ ಅನುಮತಿಸುವ ವಚನ ಅಲ್ಲ. ಒಂದುವೇಳೆ, ಇದು ಮುಸ್ಲಿಮರ ಸಂಸ್ಕೃತಿ ಎಂದಾಗಿದ್ದರೆ, ಪ್ರತಿ ಊರಿನಲ್ಲೂ ಇಂಥವರು ಧಾರಾಳ ಕಾಣಸಿಗಬೇಕಿತ್ತು. ಮಾತ್ರವಲ್ಲ, ಮುಸ್ಲಿಮ್ ಸಮುದಾಯದಲ್ಲಿ ಹೆಣ್ಮಕ್ಕಳ ಕೊರತೆಯಾಗಿ ಹಾಹಾಕಾರ ಏಳಬಹುದಿತ್ತು… ಎಂಬಂಥ ಕಣ್ತೆರೆಸುವ ಮಾತುಗಳು ಇಲ್ಲಿವೆ. ಅದೇ ರೀತಿ, ಇಸ್ಲಾಮಿನ ಸಹಿಷ್ಣು ಗುಣವನ್ನು ಕೂಡಾ ಇಲ್ಲಿ ಪ್ರತಿಪಾದಿಸಲಾಗಿದೆ.
ಇಡೀ ಕಾದಂಬರಿಯನ್ನು ಓದಿ ಮುಗಿಸಿದಾಗ ನಮಗೆ ಇಸ್ಲಾಂ ಧರ್ಮದ ಕೆಲವು ಮೂಲ ತತ್ವಗಳ ಕುರಿತು ತಿಳಿವಳಿಕೆ ಹೆಚ್ಚುತ್ತದೆ. ಇದೇನೂ ಸಣ್ಣ ಸಾಧನೆಯಲ್ಲ.
ನನಗೆ ಬಹಳ ಆಪ್ತವಾಗಿ ಕಂಡ ನೂರ್ ನ ಕವಿತೆಯಂಥಾ ಒಂದು ಮಾತನ್ನು ಉದ್ಧರಿಸಿ ಈ ಮುನ್ನುಡಿಯನ್ನು ಮುಗಿಸಬಯಸುತ್ತೇನೆ. ಆತ ಹೇಳುತ್ತಾನೆ- `ಕಪ್ಪು ಬುರ್ಖಾ ಧರಿಸಿರುವ ನೀನು ಮತ್ತು ನಾನು ಜಗಳ ಮಾಡಿದರೆ ಈ ಸಮಾಜ ಅದನ್ನು ನೋಡಿ ಮಜಾ ಪಡೆಯುತ್ತದೆ. ನಕ್ಕು ಸುಮ್ಮನಾಗುತ್ತದೆ. ಆದರೆ ಹಣೆಗೆ ಬಿಂದಿ ಹಾಕಿರುವ ನೀನು ಮತ್ತು ನಾನು ಜಗಳವಾಡಿದರೆ ಹಿಂದೂ ಮಹಿಳೆಯ ಮೇಲೆ ಮುಸ್ಲಿಮನಿಂದ ಹಲ್ಲೆ ಎಂದು ರೊಚ್ಚಿಗೇಳುತ್ತದೆ. ಘರ್ಷಣೆಗೆ ನಿಲ್ಲುತ್ತದೆ. ಬುರ್ಖಾದ ಒಳಗಿದ್ದುಕೊಂಡು ನೀನು ನನ್ನೊಂದಿಗೆ ಜಗಳ ಮಾಡಿದರೆ ಅದು ಮನರಂಜನೆ, ಬುರ್ಖಾದಿಂದ ಹೊರಬಂದು ನೀನು ಜಗಳ ಮಾಡಿದರೆ ಅದು ಧರ್ಮಗಳ ನಡುವಿನ ಸಂಘರ್ಷ. ಧರ್ಮಗಳೆಲ್ಲ ಸಂಕೇತಗಳಲ್ಲಿ ಬಂಧಿಯಾಗಿರುವುದರ ಪರಿಣಾಮ ಇದು. ನೀನು ಮುಸ್ಲಿಮ್ ಆಗುವುದು ಪರ್ದಾ ಧರಿಸಿರುವುದರಿಂದ ಅಲ್ಲ. ಗಡ್ಡ ಮತ್ತು ಟೋಪಿ ಧರಿಸಿರುವುದರಿಂದಾಗಿ ನಾನು ಮುಸ್ಲಿಮ್ ಆಗಿರುವುದೂ ಅಲ್ಲ…’
ಹೀಗೆ ಈ ಕಾದಂಬರಿಯು ಅನೇಕ ಸಮಸ್ಯೆಗಳನ್ನು ಮೈಮೇಲೆಳೆದುಕೊಂಡು ಕ್ರಿಯಾಶೀಲವಾಗಿದೆ. ಒಮ್ಮೊಮ್ಮೆ ಇವೆಲ್ಲವನ್ನೂ ತಾಳಿಕೊಳ್ಳುವ ಶಕ್ತಿ ಈ ಕೃತಿಗಿದೆಯೇ ಎಂಬ ಸಂಶಯವೂ ಬರುವುದುಂಟು. ಇಷ್ಟಿದ್ದರೂ ನಮ್ಮ ಕಾಲದ ಮುಖ್ಯ ಸಮಸ್ಯೆಗಳಿಗೆ ದಿಟ್ಟವಾಗಿ ಮುಖಾಮುಖಿಯಾಗುತ್ತಾ, ಓದುಗರ ಅರಿವಿನ ವಲಯಗಳನ್ನು ವಿಸ್ತರಿಸಿದ ಕುಕ್ಕಿಲರಿಗೆ ನಾವು ಅಭಿನಂದನೆಗಳನ್ನು ಹೇಳಲೇಬೇಕು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ