ಹೊರೆ ಎಂದಿಗಿಂತಲೂ ತುಂಬಾ ದೊಡ್ಡದಾಗಿತ್ತು. ಆ ಹೆಂಗಸು ತನ್ನ ಭುಜಗಳ ಮೇಲೆ ಅದನ್ನು ಇರಿಸಿಕೊಂಡಾಗ ಅದು ಅವಳನ್ನು ಪೂರ್ಣ ಆವರಿಸಿತು. ಮೊದಲು ಆ ಗಂಟಿನ ಅಡಿಯಲ್ಲಿ ಬಿದ್ದು ಬಿಡುವಳೇನೋ ಎಂಬಂತೆ ತೂಗಾಡಿದಳು. ಆದರೆ ಒಳಗಿನ‌ ಹಠ ಇಲ್ಲ, ನೀನು ಬೀಳುವುದಿಲ್ಲ ಎಂದು ಕರೆದಂತಾಗಿತ್ತು. ಒಂದು ಕತ್ತೆ ತನ್ನ ಹೊರೆಯಿಂದ ಕೆಳಗೆ ಬೀಳಲು ತಾನೇ ಬೇಕಾದರೆ ಪರವಾನಗಿ ಕೊಟ್ಟುಕೊಂಡು ಬಿಡಬಹುದು, ಆದರೆ ಸೃಷ್ಠಿಯ ಕಿರೀಟವಾದ ಮನುಷ್ಯ ಹಾಗೇ ಕೊಟ್ಟುಕೊಳ್ಳಲಾರ.
ಸ್ಮಿತಾ ಮಾಕಳ್ಳಿ ಅನುವಾದಿಸುತ್ತಿರುವ ಐಸಾಕ್ ಬಾಶೆವಿಸ್ ಸಿಂಗರನ ‘ಇನ್ ಮೈ ಫಾದರ್ಸ್ ಕೋರ್ಟ್‌ʼ ಆತ್ಮಕಥನದ ಸರಣಿಯ ಐದನೆಯ ಕಂತು

 

ನಮ್ಮ ಮನೆಗೆ ಅನ್ಯಜನರ ಸಂಪರ್ಕ ಅತೀ ಕಡಿಮೆ‌ ಇತ್ತು. ಮನೆಯಲ್ಲಿದ್ದ ಏಕೈಕ ಅನ್ಯ ಜನಾಂಗದವನು ಎಂದರೆ ಮನೆಯ ಕಾವಲಿನವನು ಮಾತ್ರವೇ ಆಗಿದ್ದ. ಶುಕ್ರವಾರಗಳಲ್ಲಿ ಅವನು ತನ್ನ ಶುಕ್ರವಾರದ ಬಕ್ಷೀಸಿಗಾಗಿ ಬರುತ್ತಿದ್ದ. ಬಾಗಿಲ ಬಳಿಯೇ ತನ್ನ ಟೋಪಿಯನ್ನು ತೆಗೆದು ನಿಲ್ಲುತ್ತಿದ್ದ, ಅಮ್ಮ ಅವನಿಗೆ ಆರು ನಾಣ್ಯಗಳನ್ನ (ಗ್ರೋಷನ್) ಕೊಡುತ್ತಿದ್ದಳು.

ಮನೆಗಾವಲಿನವನ ಹೊರತಾಗಿ ನಮ್ಮ‌ ಮನೆಗೆ ನಮ್ಮ ಮೈಲಿಗೆ ಬಟ್ಟೆಗಳನ್ನೊಯ್ಯಲು ಅನ್ಯ ಧರ್ಮದ ಅಗಸಗಿತ್ತಿ ಬರೋಳು. ನನ್ನ ಈ ಕಥೆ ಇವರಲ್ಲೊಬ್ಬರ ಕುರಿತಾಗಿಯೇ.

ಅವಳು ಬಡವರ್ಗದ, ಸುಕ್ಕುಗಟ್ಟಿದ ವಯಸ್ಸಾದ ಮಹಿಳೆಯಾಗಿದ್ದಳು. ನಮ್ಮ ಬಟ್ಟೆಗಳನ್ನು ಒಗೆಯಲು ಶುರುವಿಡುವ ಹೊತ್ತಿಗಾಗಲೇ ಅವಳು ೭೦ ರ ಹೊಸ್ತಿಲಲ್ಲದ್ದಳು. ಅವಳ ವಯಸ್ಸಿನ ಬಹುಪಾಲು ಯಹೂದಿ ಹೆಂಗಸರಾಗಲೇ ಅನಾರೋಗ್ಯ, ನಿಶಕ್ತಿಯಿಂದಾಗಿ ಮುಕ್ಕಾದಂತಾಗಿರುತ್ತಿದ್ದರು. ನಮ್ಮ ಬೀದಿಯ ಮುದುಕಿಯರ ಬೆನ್ನುಗಳಾಗಲೇ ಬಾಗಿ ಗೂನಾಗಿ ಮತ್ತವರು ಓಡಾಡುವಾಗ ಊರುಗೋಲುಗಳಿಗೆ ವಾಲುತ್ತಿದ್ದರು. ಆದರೆ ಈ ಅಗಸಗಿತ್ತಿಯು ಸಣ್ಣಗೆ ಮತ್ತು ಕೃಶವಾಗಿದ್ದ‌ರು ತನ್ನ ತಲೆಮಾರುಗಳ ರೈತಾಪಿ ಪೂರ್ವಜರುಗಳಿಂದ ಸತ್ವವನ್ನು ಪಡೆದಂತಿದ್ದರು. ಅಮ್ಮ ಅವಳಿಗೆ ಅನೇಕ ವಾರಗಳಿಂದ ಕೂಡಿಟ್ಟಿರುತ್ತಿದ್ದ ಒಗೆವ ಬಟ್ಟೆಗಳ‌ ಗಂಟನ್ನು ಎಣಿಸಿ ಕೊಡುತ್ತಿದ್ದಳು. ಅವಳು ಹತೋಟಿ ತಪ್ಪುವಷ್ಟು ಭಾರವಾದ ಆ ಗಂಟನ್ನು ತನ್ನ ಕಿರಿದಾದ ಭುಜದ ಮೇಲೆಕ್ಕೆ ಹೊತ್ತುಕೊಂಡು ತನ್ನ ಬಹುದೂರದ ಮನೆಗೆ ಸಾಗುತ್ತಿದ್ದಳು. ಅವಳು ಕೂಡ ಕ್ರೋಚ್ಮಲ್ನ ಬೀದಿಯಲ್ಲೇ ವಾಸಿಸುತ್ತಿದ್ದಳು, ಆದರೆ ಅದು ವೋಲಾದ ಹತ್ತಿರದ ಇನ್ನೊಂದು ತುದಿಯಾಗಿತ್ತು.

ಅವಳು ಮಡಿ ಬಟ್ಟೆಗಳನ್ನು ಎರಡು ವಾರಗಳ ನಂತರ ವಾಪಸ್ಸು ತರುತ್ತಿದ್ದಳು. ನಮ್ಮಮ್ಮ ಇವಳಲ್ಲದೇ ಇನ್ಯಾವ ಅಗಸಗಿತ್ತಿಯ ಬಳಿ ಇಷ್ಟು ಸಂತಸದಿಂದಿರಲಿಲ್ಲ. ಪ್ರತಿಯೊಂದು ಹಾಸುಬಟ್ಟೆಗಳು ಬೆಳ್ಳಿಯ ಒಪ್ಪಹಾಕಿದಂತೆ ಹೊಳೆಯುತ್ತಿದ್ದವು. ಪ್ರತಿಯೊಂದು ಬಟ್ಟೆ ತುಂಡು ಇಸ್ತ್ರಿಯಾಗಿರುತ್ತಿದ್ದವು. ಆದರೆ ಬೇರೆಯವರಿಗಿಂತ ಹೆಚ್ಚಿನ ಬೆಲೆಯನ್ನೇನು ಕೇಳುತ್ತಿರಲಿಲ್ಲ. ಅವಳನ್ನು ಒಂದು ರೀತಿ ಶೋಧಿಸಿ ಪಡೆದಂತಿತ್ತು. ಅಮ್ಮ ಅವಳ ದುಡ್ಡನ್ನು ಯಾವಾಗಲೂ ತೆಗೆದಿಟ್ಟಿರುತ್ತಿದ್ದಳು, ಕಾರಣ ಆ ವಯಸ್ಸಾದ ಹೆಂಗಸು ಎರಡನೇ ಬಾರಿಗೆ ಬರಲು ದಾರಿ ತುಂಬಾ ದೂರದ್ದು ಎಂದು.

ಆ ದಿನಗಳಲ್ಲಿ ಬಟ್ಟೆ ಒಗೆಯುವುದೇನು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆ ಮುದುಕಿ ವಾಸವಿದ್ದ ಕಡೆ ಕೊಳವೆಯ ವ್ಯವಸ್ಥೆಯಿರಲಿಲ್ಲ, ಬದಲಾಗಿ ಅವಳು ಪಂಪಿನಿಂದ ನೀರು ತರಬೇಕಾಗಿತ್ತು. ಹಾಸುಬಟ್ಟೆಗಳು ಸ್ವಚ್ಛ ವಾಗಬೇಕಾದರೆ, ಅವನ್ನು ಒಗೆಯುವ ತೊಟ್ಟಿಯಲ್ಲಿ ಚೆನ್ನಾಗಿ ಉಜ್ಜಿ, ಬಟ್ಟೆ ತೊಳೆಯುವ ಸೋಡಾದಲ್ಲಿ ನೆನೆಸಿ, ಜಾಲಿಸಿ, ದೊಡ್ಡದಾದ ಚವರಿಗೆಯಲ್ಲಿ ಕುದಿಸಿ, ಗಂಜಿಯಾಕಿ ಇಸ್ತ್ರಿ ಮಾಡಬೇಕಾಗಿತ್ತು. ಎಲ್ಲಾ ಬಟ್ಟೆಗಳನ್ನ ಹತ್ತು ಅಥವಾ ಅದಕ್ಕಿಂದ ಹೆಚ್ಚು ಬಾರಿ ಕೈ ಆಡಿಸಲಾಗಿರುತ್ತಿತ್ತು. ಜೊತೆಗೆ ಒಣಗಾಕುವುದು! ಅದನ್ನು ಹೊರೆಗೆ ಹಾಕುವಂತಿರಲಿಲ್ಲ. ಏಕೆಂದರೆ ಕಳ್ಳರು ಒಣಹಾಕಿದ ಮಡಿ ಬಟ್ಟೆಗಳನ್ನು ಕದಿಯೋರು. ಹಿಂಡಿದ ಬಟ್ಟೆಗಳನ್ನು ಅಟ್ಟಕ್ಕೆ ತೆಗೆದೊಯ್ದು ಬಟ್ಟೆ ಒಣಹಾಕುವ ಸಾಲಿನಲ್ಲಿ ಹಾಕಬೇಕಿತ್ತು. ಚಳಿಗಾಲದಲ್ಲಿ ಇದು ಗಡುಸಾದ ಗಾಜಿನಂತೆ ಆಗಿ ಮತ್ತದನ್ನು ಮುಟ್ಟಿದಾಗ ಮುರಿದು ಬೀಳೋ ಹಾಗೇ ಆಗಿರೋದು. ಅಟ್ಟವನ್ನು ತಮ್ಮ ಸ್ವಂತ ಬಳಕೆಗೆ ಆಶಿಸುತ್ತಿದ್ದ ಅಗಸಗಿತ್ತಿಯರ ಮತ್ತು ಗೃಹಿಣಿಯರ ನಡುವೆ ಯಾವಾಗಲೂ ಗದ್ದಲ ಇದ್ದೇ ಇತ್ತು. ಪ್ರತಿ ಬಾರಿ ಒಗೆದಾಗಲೂ ಅವಳು ಸಹಿಸಬೇಕಾದದ್ದು ದೇವರಿಗೇ ಗೊತ್ತಿತ್ತು.

ಆ ಹಳೆಯ ಹೆಂಗಸು ಬೇಕಾಗಿದ್ದರೆ ಚರ್ಚಿನ ಎದುರಿಗೆ ‌ಭಿಕ್ಷೆ ಬೇಡಬಹುದಾಗಿತ್ತು ಅಥವಾ ವಯಸ್ಸಾದ ಬಡವರಿಗೆ ಇರುವ ಮನೆಯ ಹೊಕ್ಕಬಹುದಿತ್ತು. ಆದರೆ ಅವಳಲ್ಲಿ ಎಂತಹುದೋ ಹೆಮ್ಮೆ, ಜೊತೆಗೆ ಯಹೂದ್ಯೇತರರ ಕೆಲಸದೆಡೆಗಿನ ಪ್ರೀತಿಯ ಆಶೀರ್ವಾದವಿತ್ತು. ಆ ಮುದುಕಿಗೆ ತಾನು ಯಾರಿಗೂ ಹೊರೆಯಾಗುವುದು ಇಷ್ಟವಿರಲಿಲ್ಲ, ಹಾಗಾಗಿ ತನ್ನ ಹೊರೆಯನ್ನ ತಾನೇ ಹೊತ್ತಿದ್ದಳು.

ನಮ್ಮಮ್ಮ ಸ್ವಲ್ಪ ಪೋಲಿಷ್ ಮಾತನಾಡುತ್ತಿದ್ದಳು ಮತ್ತು ಆ ಮುದುಕಿಯು ಇವಳ ಜೊತೆಗೆ ಎಷ್ಟೋ ಸಂಗತಿಗಳ ಬಗ್ಗೆ ಮಾತನಾಡುತ್ತಿದ್ದಳು. ವಿಶೇಷವಾಗಿ ಅವಳಿಗೆ ನನ್ನ ಬಗ್ಗೆ ಎಂತಹದ್ದೋ ಅಕ್ಕರೆ ಮತ್ತು ನಾನು ನೋಡಲು ಏಸುವಿನ ಹಾಗೇ ಇದ್ದೀನಿ ಎಂದು ಹೇಳೋಳು. ಪ್ರತಿಬಾರಿ ಬಂದಾಗಲೂ ಅವಳು ಇದನ್ನ ಪುನರುಚ್ಚರಿಸೋಳು. ನಮ್ಮಮ್ಮ ಹುಬ್ಬು ಗಂಟಿಕ್ಕಿಕೊಂಡು ತನ್ನಷ್ಟಕ್ಕೆ ಸ್ಪಷ್ಟವಾಗಿ ತನ್ನ ತುಟಿಗಳನ್ನ ಆಡಿಸುತ್ತಾ “ಅವಳ ಮಾತುಗಳು ಬಂಜರುಭೂಮಿಯಲ್ಲಿ ಚದುರಿ ಹೋಗಲಿ” ಎಂದು ಪಿಸುಗುಡುತ್ತಿದ್ದಳು.

ಆ ಹೆಂಗಸಿಗೊಬ್ಬ ಶ್ರೀಮಂತ ಮಗನಿದ್ದ. ಅವನು ಯಾವ ವ್ಯಾಪಾರ ಮಾಡುತ್ತಿದ್ದ ಅನ್ನೋದು ನನಗೆ ಈಗ ನೆನಪಿಲ್ಲ. ಅವನಿಗೆ ತನ್ನ ತಾಯಿಯು ಅಗಸಗಿತ್ತಿ ಎಂಬುದು ಅವಮಾನದಂತಿತ್ತು, ಹಾಗಾಗಿ ಅವನು ಅವಳ‌ನ್ನ ನೋಡಲು ಬರುತ್ತಿರಲಿಲ್ಲ. ಮತ್ತು ಅವಳಿಗೆ ಹಣವನ್ನು ಕೊಡುತ್ತಿರಲಿಲ್ಲ. ಆ ಮುದುಕಿ ಇದನ್ನು ಯಾವುದೇ ಕೋಪವಿಲ್ಲದೆ ಹೇಳಿಕೊಳ್ಳುತ್ತಿದ್ದಳು. ಒಂದು ದಿನ ಮಗ ಮದುವೆ ಮಾಡಿಕೊಂಡ‌. ಅವನು ಒಳ್ಳೆ ಜೋಡಿಯನ್ನೇ ಆಯ್ಕೆ ಮಾಡಿಕೊಂಡಿದ್ದ ಎಂದು‌ ಕಾಣುತ್ತದೆ. ಚರ್ಚಿನಲ್ಲಿ ಮದುವೆ ನೆಡೆದಿತ್ತು. ಮಗ ತನ್ನ ಮದುವೆಗೆ ತಾಯಿಯನ್ನು ಕರೆದಿರಲಿಲ್ಲ, ಆದರೂ ಅವಳು ಚರ್ಚಿಗೆ ಹೋಗಿ ತನ್ನ ಮಗ ಅವನ “ತರುಣಿ”ಯನ್ನು ಪೂಜಾ ವೇದಿಕೆಗೆ ಕರೆದುಕೊಂಡು ಹೋಗೋದನ್ನ ನೋಡಲು ಮೆಟ್ಟಿಲುಗಳ ಬಳಿ ಕಾದಿದ್ದಳು. ನಾನು ಅಂಧಾಭಿಮಾನಿಯಾಗಿ ತೋರಿಸಿಕೊಳ್ಳಲು ಬಯಸುವುದಿಲ್ಲ, ಆದರೆ ನನ್ನ‌ ನಂಬಿಕೆಯ ಪ್ರಕಾರ ಯಹೂದಿಯ ಮಗನೊಬ್ಬ ಎಂದೂ ಈ ರೀತಿ‌ ವರ್ತಿಸಲು ಸಾಧ್ಯವಿಲ್ಲ. ನನಗೆ ಇದರಲ್ಲಿ‌ ಯಾವುದೇ ಸಂದೇಹವಿಲ್ಲ, ಅವನು ಹೀಗೆ ಮಾಡಿದ್ದೇ ಆಗಿದ್ದರೇ, ಆ ತಾಯಿ ಚೀರುತ್ತಾ, ಗೋಳಿಡುತ್ತಾ, ಅಧಿಕಾರಿಯನ್ನು ಕಳುಹಿಸಿ ಅವನನ್ನು ವಿಚಾರಣೆಗೆ ಗುರಿಪಡಿಸುತ್ತಿದ್ದಳು. ಸಂಕ್ಷಿಪ್ತವಾಗಿ, ಯಹೂದಿಗಳು ಯಹೂದಿಗಳೇ ಹಾಗೂ ಅನ್ಯರು ಅನ್ಯರೇ.

ಈ ನಿಷ್ಠೆಯಿಲ್ಲದ ಮಗನ ಕಥೆ ಅಮ್ಮನೊಳಗೆ ಆಳವಾದ ಪ್ರಭಾವ ಬೀರಿತು. ಅವಳು ಅದರ ಬಗ್ಗೆ ಹಲವು ವಾರ ಮತ್ತು ತಿಂಗಳು ಮಾತಾಡುತ್ತಲೇ ಇದ್ದಳು. ಅದು ಕೇವಲ‌ ಆ ಮುದುಕಿಗೆ ಮಾಡಿದ ಅಪಮಾನ ಮಾತ್ರವಾಗಿರದೇ, ಇಡೀ ತಾಯ್ತನದ ಸಂಪ್ರದಾಯಕ್ಕೇ ಮಾಡಿದ ಅಪಮಾನವಾಗಿತ್ತು. ಅಮ್ಮ “ಮಕ್ಕಳಿಗಾಗಿ ಮಾಡಿದ ತ್ಯಾಗಕ್ಕೆ ಇದೇ ಪ್ರತಿಫಲವೇನು? ತಾಯಿ ತನ್ನ ಕೊನೆಯ ತ್ರಾಣವನ್ನು ಬಳಸಿರುತ್ತಾಳೆ ಮತ್ತು ಇವನಿಗೆ ನಿಯತ್ತಿನ ಅರ್ಥ ಸಹ ಗೊತ್ತಿಲ್ಲ” ಎಂದು ವಾದಿಸೋಳು.

ಈ ಅಗಸಗಿತ್ತಿಯು ಸಣ್ಣಗೆ ಮತ್ತು ಕೃಶವಾಗಿದ್ದ‌ರು ತನ್ನ ತಲೆಮಾರುಗಳ ರೈತಾಪಿ ಪೂರ್ವಜರುಗಳಿಂದ ಸತ್ವವನ್ನು ಪಡೆದಂತಿದ್ದರು. ಅಮ್ಮ ಅವಳಿಗೆ ಅನೇಕ ವಾರಗಳಿಂದ ಕೂಡಿಟ್ಟಿರುತ್ತಿದ್ದ ಒಗೆವ ಬಟ್ಟೆಗಳ‌ ಗಂಟನ್ನು ಎಣಿಸಿ ಕೊಡುತ್ತಿದ್ದಳು.

ಜೊತೆಗೆ ಅವಳು ಇದರ ಪರಿಣಾಮವಾಗಿ ತನ್ನ ಸ್ವಂತ ಮಕ್ಕಳ ಬಗ್ಗೆಯೂ ಯಾವುದೇ ಖಚಿತತೆ ಇಲ್ಲವೆಂದು ನಿಗೂಢವಾದ ಸುಳಿವನ್ನು ನೀಡುತ್ತಿದ್ದಳು : ಯಾರಿಗೇ ಗೊತ್ತು ಮುಂದೊಂದು ದಿನ ಇವರು ಏನು ಮಾಡ್ತಾರೆ ಅಂತ? ಅದಾಗ್ಯೂ, ಇದು ಅವಳನ್ನ ನಮ್ಮ ಜೀವನಕ್ಕೆ ಮುಡಿಪಾಗಿರೋದನ್ನ ತಪ್ಪಿಸಲಿಲ್ಲ. ಮನೆಯಲ್ಲಿ ಯಾವುದಾದರು ಸಿಹಿತಿನಿಸು ಇದ್ದರೆ, ಅವಳು ಅದನ್ನು ಮಕ್ಕಳಿಗಾಗಿ ಪಕ್ಕಕ್ಕೆ ಇಟ್ಟು, ಎಲ್ಲಾ ಬಗೆಯ ನೆಪಗಳನ್ನು ಮತ್ತು ತನಗೆ ಏಕೆ‌ ಅದನ್ನು ರುಚಿ ನೋಡಲು ಇಷ್ಟವಿಲ್ಲವೆಂದು ಕಾರಣಗಳನ್ನು ಹೇಳುತ್ತಿದ್ದಳು. ಅವಳಿಗೆ ಹಳೆಯ ಕಾಲದ ಮಂತ್ರಗಳು ಗೊತ್ತಿದ್ದವು, ಅವಳು ತಲತಲಾಂತರದಿಂದ ಸಮರ್ಪಣಾ ಭಾವದ ತಾಯಂದಿರು ಮತ್ತು ಅಜ್ಜಿಯರಿಂದ ಪಾರಂಪರ್ಯವಾಗಿ ಬಂದ ಅಭಿವ್ಯಕ್ತಿಯನ್ನು ರೂಢಿಸಿಕೊಂಡಿದ್ದಳು. ಮಕ್ಕಳಲ್ಲಿ ಯಾರಾದರೊಬ್ಬರು ನೋವು ಎಂದು ಮೊರೆ ಇಟ್ಟರೆ, ಅವಳು “ನಾನು ನಿಮ್ಮ‌ ಪಾಪ ವಿಮೋಚನೆಯಾಗಿ ಮತ್ತು ನನ್ನ ಎಲುಬಗಳಿಂದ ನೀವು ಧೀರ್ಘ ಕಾಲ ಬಾಳಲಿ!” ಎಂದೋ ಅಥವಾ “ನಾನು ಕನಿಷ್ಠ ನಿಮ್ಮ ಬೆರಳಿನ ಉಗುರುಗಳಿಗೆ ಪ್ರಾಯಶ್ಚಿತ್ತವಾಗಲಿ” ಎಂದೋ ಹೇಳುತ್ತಿದ್ದಳು. ನಾವು ಊಟ ಮಾಡುವಾಗ “ನಿಮ್ಮ‌ ಎಲುಬುಗಳಲ್ಲಿ ಆರೋಗ್ಯ ಮತ್ತು ಮಜ್ಜೆ ಇರಲಿ!” ಎನ್ನುವಳು. ಹೊಸ ಚಂದಿರ ಬರುವ ಮುನ್ನಾದಿನ ನಮಗೆ ಜಂತು ಹುಳುಗಳು ಕಡಿಮೆಯಾಗುವ ಕಲ್ಲು ಸಕ್ಕರೆಯಂತಹ ಮಿಠಾಯಿಯನ್ನ ಕೊಡೋಳು. ನಮ್ಮಲ್ಲಿ ಯಾರಿಗಾದರೂ ಕಣ್ಣಿನಲ್ಲಿ ಏನಾದರು ಇದ್ದರೆ, ಅಮ್ಮ ತನ್ನ ನಾಲಿಗೆ ಇಂದ ಕಣ್ಣನ್ನ ನೆಕ್ಕಿ ಶುಚಿಗೊಳಿಸೋಳು. ನಮಗೆ ಕೆಮ್ಮಾದಾಗಲೆಲ್ಲ ಕಲ್ಲು ಮಿಠಾಯಿಯನ್ನು ತಿನ್ನಿಸುತಿದ್ದಳು. ಕಾಲಕಾಲಕ್ಕೆ ನಮ್ಮನ್ನು ಕೆಟ್ಟ ದೃಷ್ಠಿಯಿಂದ ತಪ್ಪಿಸಲು ಆಶೀರ್ವಚನಕ್ಕೆ ಕರೆದುಕೊಂಡು‌ ಹೋಗುತ್ತಿದ್ದಳು. ಇವೆಲ್ಲಾ ಅವಳನ್ನು ದಿ ಡ್ಯೂಟೀಸ್ ಆಫ್ ದ ಆರ್ಟ್, ದಿ ಬುಕ್ ಆಫ್ ದ ಕೋವೆನೆಂಟ್, ಹಾಗೂ ಮತ್ತಿತರ ಗಂಭೀರ ತತ್ವಶಾಸ್ತ್ರದ ಪುಸ್ತಕಗಳನ್ನು ಓದಲು ಅಡ್ಡಿಮಾಡಲಿಲ್ಲ.

ಮತ್ತೆ ಅಗಸಗಿತ್ತಿಯ ಕಡೆಗೆ ವಾಪಸ್ಸಾಗಲು : ಆ ಚಳಿಗಾಲ ತುಂಬಾ ಕ್ರೂರವಾಗಿತ್ತು. ಬೀದಿಗಳೆಲ್ಲವು ಕೆಟ್ಟ ಚಳಿಯ ಹಿಡಿತದಲ್ಲಿದ್ದವು. ನಾವೆಷ್ಟೇ ನಮ್ಮ ಒಲೆಗಳನ್ನ ಉರಿಸಿದರು, ಕಿಟಕಿಗಳು ಮಂಜು ಮತ್ತು ಹಿಮಬಿಳಲುಗಳಿಂದ ಅಲಂಕಾರವಾದಂತೆ ಇರುತ್ತಿದ್ದವು . ಜನರು ಚಳಿಯಿಂದ ಸಾಯುತ್ತಿರುವದನ್ನು ದಿನಪತ್ರಿಕೆಗಳು ವರದಿ ಮಾಡುತ್ತಿದ್ದವು. ಇದ್ದಿಲು ದುಬಾರಿಯಾಗಿತ್ತು. ಚಳಿಗಾಲ‌ ಎಷ್ಟು ಉಗ್ರವಾಗಿತೆಂದರೆ ಪೋಷಕರು ಮಕ್ಕಳನ್ನು ಶಾಲೆಗೆ (ಹೆಡರ್) ಕಳುಹಿಸುವುದನ್ನು ನಿಲ್ಲಿಸಿದರು ಹಾಗೆ ಪೋಲಿಷ್ ಶಾಲೆಗಳು ಸಹ ಮುಚ್ಚಿದ್ದವು.

ಇಂತಹ ಒಂದು ದಿನ ಈಗಾಗಲೇ ೮೦ ವರ್ಷಗಳ ಹತ್ತಿರತ್ತಿರವಿದ್ದ ಅಗಸಗಿತ್ತಿ ಮನೆಗೆ ಬಂದಳು. ಕಳೆದ ವಾರಗಳಿಂದ ಒಗೆಯುವ ಬಟ್ಟೆಗಳ ಒಳ್ಳೆಯ ರಾಶಿಯೇ ಇತ್ತು. ಅಮ್ಮ ಅವಳಿಗೆ ಬೆಚ್ಚಗಾಗಲು ಒಂದು‌ ಲೋಟ ಚಹಾವನ್ನು ಜೊತೆಗೆ ಬ್ರೆಡಿನ ತುಂಡುಗಳನ್ನ ನೀಡಿದಳು. ಆ ವಯಸ್ಸಾದ ಹೆಂಗಸು ಅಡುಗೆ ಕೋಣೆಯ ಕುರ್ಚಿಯಲ್ಲಿ ನಡುಗುತ್ತಾ , ಅಲುಗಾಡುತ್ತಾ ಕುಳಿತು , ತನ್ನ‌ ಕೈಗಳನ್ನು ಚಹಾ ಲೋಟದ ಬಿಸಿಯಿಂದ ಬೆಚ್ಚಗಾಗಿಸಿಕೊಂಡಳು. ಅವಳ‌ ಕೈಗಳು ಕೆಲಸದಿಂದಾಗಿ ಒರಟಾಗಿದ್ದವು, ಬಹುಶಃ ಸಂಧಿವಾತದಿಂದಲೂ ಇರಬಹುದು. ಉಗುರುಗಳು ಮಾತ್ರ ಆಶ್ಚರ್ಯಕರವಾಗಿ ಬಿಳುಪಿನಿಂದಿದ್ದವು. ಆ ಕೈಗಳು ಮನುಷ್ಯ ಕುಲದ ಮೊಂಡುತನದ, ತಮ್ಮ ಶಕ್ತಿ ಸಹಕರಿಸುವವರೆಗೂ ಮಾತ್ರವಲ್ಲದೇ ಸಾಮರ್ಥ್ಯದ ಎಲ್ಲೆಗಳ ಮೀರಿಯೂ ಕೆಲಸ ಮಾಡಲು ಬಯಸುವ ಸಂಕಲ್ಪವನ್ನು ಹೇಳುತ್ತಿದ್ದವು. ಅಮ್ಮ ಬಟ್ಟೆಗಳ ಎಣಿಸಿ ಪಟ್ಟಿಯನ್ನು ಬರೆದಳು : ಗಂಡಸರ ಒಳುಡುಪುಗಳು, ಹೆಂಗಸರ ನಡುಗವಚಗಳು, ಲಂಗಪೈಜಾಮಗಳು, ಪೆಟಿಕೋಟುಗಳು, ಪುಕ್ಕಗಳಹಾಸಿಗೆಯ ಮೇಲೊದಿಕೆ, ದಿಂಬಿನ ಹೊದಿಕೆಗಳು, ದುಪ್ಪಟ್ಟಿಗಳು, ಉದ್ದ ಕಾಲಿನ ಒಳ ಉಡುಪುಗಳು ಮತ್ತು ಗಂಡಸರ ಉಡುಪಿನ ಅಂಚುಗಳು. ಹೌದು, ಅನ್ಯ ಹೆಂಗಸು ಈ ಪವಿತ್ರ ಬಟ್ಟೆಗಳನ್ನು ಕೂಡ ಒಗೆಯುತ್ತಿದ್ದಳು.

ಹೊರೆ ಎಂದಿಗಿಂತಲೂ ತುಂಬಾ ದೊಡ್ಡದಾಗಿತ್ತು. ಆ ಹೆಂಗಸು ತನ್ನ ಭುಜಗಳ ಮೇಲೆ ಅದನ್ನು ಇರಿಸಿಕೊಂಡಾಗ ಅದು ಅವಳನ್ನು ಪೂರ್ಣ ಆವರಿಸಿತು. ಮೊದಲು ಆ ಗಂಟಿನ ಅಡಿಯಲ್ಲಿ ಬಿದ್ದು ಬಿಡುವಳೇನೋ ಎಂಬಂತೆ ತೂಗಾಡಿದಳು. ಆದರೆ ಒಳಗಿನ‌ ಹಠ ಇಲ್ಲ, ನೀನು ಬೀಳುವುದಿಲ್ಲ ಎಂದು ಕರೆದಂತಾಗಿತ್ತು. ಒಂದು ಕತ್ತೆ ತನ್ನ ಹೊರೆಯಿಂದ ಕೆಳಗೆ ಬೀಳಲು ತಾನೇ ಬೇಕಾದರೆ ಪರವಾನಗಿ ಕೊಟ್ಟುಕೊಂಡು ಬಿಡಬಹುದು, ಆದರೆ ಸೃಷ್ಠಿಯ ಕಿರೀಟವಾದ ಮನುಷ್ಯ ಹಾಗೇ ಕೊಟ್ಟುಕೊಳ್ಳಲಾರ.

ಆ ವಯಸ್ಸಾದ ಹೆಂಗಸು ಆ ದೊಡ್ಡ ಗಂಟನ್ನು ಹೊತ್ತು ಹೊರಗೆ ಹಿಮದೊಳಗೆ ತೂಗಾಡುತ್ತಾ ಹೋಗುವುದನ್ನು ನೋಡಲು ಭಯಭೀತವಾಗಿತ್ತು. ಹಿಮ ಉಪ್ಪಿನ‌ ಹಾಗೇ ಒಣಗಿತ್ತು ಮತ್ತು ತುಂಟ ದೆವ್ವಗಳು ಕುಳಿರಿನಲ್ಲಿ ನೃತ್ಯ ಮಾಡಿದಂತೆ ಗಾಳಿಯು ಬಿಳಿ ಧೂಳಿನ ಸುಂಟರಗಾಳಿಯಿಂದ ತುಂಬಿತ್ತು‌. ಆ ಹೆಂಗಸು ವೋಲಾವನ್ನು ತಲುಪಿದಳ?

ಅವಳು ಕಣ್ಮರೆಯಾದಳು, ಮತ್ತು ಅಮ್ಮ ನಿಟ್ಟುಸಿರು ಬಿಟ್ಟು, ಅವಳಿಗಾಗಿ ಪ್ರಾರ್ಥಿಸಿದಳು.

ಸಾಮಾನ್ಯವಾಗಿ ಆ ಹೆಂಗಸು ಒಗೆದ ಬಟ್ಟೆಗಳನ್ನ ಎರಡು ಅಥವಾ ತುಂಬಾ ಅಂದರೆ ಮೂರು ವಾರಗಳ ನಂತರ ವಾಪಾಸ್ಸು ತಂದುಕೊಡೋಳು. ಆದರೆ ಮೂರು ವಾರ ಕಳೆಯಿತು, ಆಮೇಲೆ ನಾಲ್ಕನೇ ವಾರ ಮತ್ತು ಐದು. ಆ ಮುದಿ ಹೆಂಗಸಿನ ಕಡೆಯಿಂದ ಏನು ಕೇಳಿಬರಲಿಲ್ಲ. ನಾವು ದುಪ್ಪಟ್ಟಿಗಳು ಇಲ್ಲದೆ ಕಳೆದೆವು. ಶೀತ ಮತ್ತಷ್ಟು ತೀವ್ರವಾಗಿತ್ತು. ದೂರವಾಣಿ ತಂತಿಗಳು ಈಗ ಹಗ್ಗದ ಹಾಗೇ ದಪ್ಪವಾಗಿದ್ದವು. ಮರಗಳ ಕೊಂಬೆಗಳು ನೋಡಲು ಗಾಜಿನಂತೆ ಆಗಿದ್ದವು. ಎಷ್ಟೊಂದು ಹಿಮ ಬಿದ್ದಿತ್ತು ಎಂದರೆ ಬೀದಿಗಳು ಏರುಪೇರಾಗಿದ್ದವು, ಎಷ್ಟೋ ಬೀದಿಗಳಲ್ಲಿ ಜಾರುಬಂಡಿಗಳು ಗುಡ್ಡದ ಇಳಿಜಾರುಗಳಲ್ಲಿ ಜಾರುವಂತೆ ಮೇಲಿಂದ ಜಾರುತ್ತಿದ್ದವು. ಒಳ್ಳೆಮನಸ್ಸಿನ ಜನರು ಬೀದಿಗಳಲ್ಲಿ ಅಲೆಮಾರಿಗಳು ಬೆಚ್ಚಗಿರಲೆಂದು, ಸುಡಲು ಆಲೂಗಡ್ಡೆಗಳು ಇದ್ದರೆ ಸುಟ್ಟುಕೊಳ್ಳಲು ಬೆಂಕಿ ಹೊತ್ತಿರಿಸುತ್ತಿದ್ದರು.

ನಮಗೆ ಆ ಅಗಸಗಿತ್ತಿಯ ಅನುಪಸ್ಥಿತಿ ಅನಾಹುತದಂತಾಗಿತ್ತು. ನಮಗೆ ಬಟ್ಟೆಗಳು ಬೇಕಿದ್ದವು. ಆ ಹೆಂಗಸಿನ ಮನೆಯ ವಿಳಾಸ ಸಹ ಗೊತ್ತಿರಲ್ಲಿಲ್ಲ. ನಮಗೆ ಅವಳು ಕುಸಿದುಬಿದ್ದು ಸತ್ತಿರಬಹುದೆಂದು ತೋರುತ್ತಿತ್ತು. ಕಳೆದ ಬಾರಿ ಆ ವಯಸ್ಸಾದ ಹೆಂಗಸು ನಮ್ಮ‌ಮನೆಯ ಬಿಟ್ಟಾಗ ಅಮ್ಮನಿಗೆ ಮತ್ತೆಂದು ನಮ್ಮ ವಸ್ತುಗಳನ್ನ ನೋಡಲಾಗುವುದಿಲ್ಲ ಎಂಬ ಮುನ್ಸೂಚನೆ ಬಂದಿತ್ತು ಎಂದು ಘೋಷಿಸಿದಳು. ಅವಳು ಹರಿದ ಹಳೆಯ ಅಂಗಿಗಳನ್ನ ಹುಡುಕಿ ಮತ್ತು ಅವನ್ನು ಒಗೆದು ತೇಪೆ ಹಾಕಿದಳು. ನಾವು ನಮ್ಮ ಕಳೆದ ಬಟ್ಟೆಗಳಿಗೂ ಮತ್ತು ಆ ಮುದುಕಿಗೂ ಶೋಕಿಸಿದೆವು. ಇಷ್ಟು ವರ್ಷಗಳ ಆ ಶ್ರಮಿಕ ಹೆಂಗಸಿನ ದುಡಿತ ನಿಷ್ಠೆಯಿಂದ ಕೂಡಿದ್ದರಿಂದ‌ ನಮಗೆ ಹತ್ತಿರವಾಗಿದ್ದಳು.

ಎರಡು ತಿಂಗಳ ಮೇಲೆ ಕಳೆಯಿತು. ಹಿಮ ಕಡಿಮೆ ಆಯಿತು, ಮತ್ತೆ ಚಳಿಯ ಹೊಸ ಅಲೆಯಿಂದ ಹೊಸ ಮಂಜು ಬಂದಿತ್ತು. ಒಂದು ಸಂಜೆ ಅಮ್ಮ ಸೀಮೆ ಎಣ್ಣೆ ಬುಡ್ಡಿಯ ಪಕ್ಕ ಕೂತು ಅಂಗಿಯೊಂದಕ್ಕೆ ತೇಪೆ ಹಾಕುತ್ತಿದ್ದಳು. ಬಾಗಿಲು ತೆರೆಯಿತು ಮತ್ತು ಸಣ್ಣ ಪ್ರಮಾಣದ ಏದುಸಿರಿನ ಹಬೆ ಮತ್ತದರ ಹಿಂದೆ ದೊಡ್ಡದೊಂದು ಹೊರೆ ಒಳಬಂದಿತು. ಆ ಹೊರೆಯ ಕೆಳಗೆ ತೂರಾಡುತ್ತಿದ್ದ ಆ ವಯಸ್ಸಾದ ಹೆಂಗಸು, ಅವಳ‌ಮುಖ ದುಪ್ಪಟ್ಟಿಯಷ್ಟೇ ಶುಭ್ರವಾಗಿತ್ತು. ಕೆಲ ತೆಳು ಬಿಳಿಕೂದಲುಗಳು ಅವಳ‌ ಕಂಬಳಿಯ ಒಳಗಿಂದ ಚದುರಿದ್ದವು. ಅಮ್ಮ ಅರ್ಧ ಉಸಿರಿನಿಂದ ಕೂಗಿದಳು, ಹೆಣವೊಂದು ಕೋಣೆ ಒಳಗೆ ಬಂದಿದೆಯೇನೋ‌ ಅನ್ನೋ‌ ಹಾಗೇ. ನಾನು ಆ ಮುದುಕಿ ಎಡೆಗೆ ಓಡಿದೆ ಮತ್ತು ಹೊರೆಯನ್ನು ಇಳಿಸಲು ಸಹಾಯ ಮಾಡಿದೆ. ಅವಳು ಮತ್ತಷ್ಟು ಸಣ್ಣಗಾಗಿ, ಜಾಸ್ತಿ ಬಾಗಿದ್ದಳು. ಅವಳ ಮುಖ ಇನ್ನೂ ಬಡಕಲಾಗಿ, ಅವಳ ತಲೆ ಒಂದು ಕಡೆ ಇಂದ ಇನ್ನೊಂದು ಕಡೆಗೆ ಅವಳು ಇಲ್ಲವೆಂದು ಹೇಳುತ್ತಿದ್ದಾಳೇನೋ ಎಂಬಂತೆ ಅಲಗಾಡುತ್ತಿತ್ತು. ಅವಳಿಗೆ ಸ್ಪಷ್ಟವಾಗಿ ಪದಗಳನ್ನ ಉಚ್ಚರಿಸಲಾಗುತ್ತಿರಲಿಲ್ಲ, ಆದರೆ ತನ್ನ ಮುಳುಗಿದ ಬಾಯಿ ಹಾಗೂ ಬಣ್ಣಗೆಟ್ಟ ತುಟಿಗಳಿಂದ ಏನನ್ನೋ ಗೊಣಗುಟ್ಟಿದಳು.

ಆ ಹೆಂಗಸು ಸ್ವಲ್ಪ ಚೇತರಿಸಿಕೊಂಡ ಮೇಲೆ, ಅವಳು ತುಂಬಾನೇ ಹುಷಾರು ತಪ್ಪಿದ್ದನ್ನ ಹೇಳಿದಳು. ಅವಳ ಕಾಯಿಲೆ ಏನು ಅನ್ನೋದು ನನಗೆ ನೆನಪಾಗುತ್ತಿಲ್ಲ. ಅವಳಿಗೆಷ್ಟು ಹುಷಾರು ತಪ್ಪಿತ್ತು ಎಂದರೆ ಯಾರೋ ವೈದ್ಯರಿಗೆ ಕರೆ ಕಳುಹಿಸಿದ್ದರು, ಮತ್ತೆ ಆ ವೈದ್ಯ ಪಾದ್ರಿಗೆ ಕರೆ ಕಳುಹಿಸಿದ್ದ. ಮತ್ಯಾರೋ ಅವಳ ಮಗನಿಗೆ ತಿಳಿಸಿದ್ದರು, ಮತ್ತು ಅವನು ಶವಪೆಟ್ಟಿಗೆಗೆ ಮತ್ತು ಅಂತ್ಯಸಂಸ್ಕಾರಕ್ಕೆ ದುಡ್ಡನ್ನೂ ಒದಗಿಸಿದ್ದ. ಆದರೆ ಸರ್ವಶಕ್ತ ಇನ್ನೂ ಅವಳ ನೋವು ತುಂಬಿದ ಆತ್ಮವನ್ನ ತನ್ನ ಬಳಿ ಕರೆಸಿಕೊಳ್ಳಲು ಸಿದ್ದನಿರಲಿಲ್ಲ. ನಿಧಾನವಾಗಿ ಚೇತರಿಕೊಳ್ಳತೊಡಗಿದಳು, ಅವಳು ಆರೋಗ್ಯವಂತಳಾದಳು. ಯಾವಾಗ ತನ್ನ‌ ಕಾಲ ಮೇಲೆ ನಿಲ್ಲಲ್ಲು ಸಾಧ್ಯವಾಯಿತೋ ಮತ್ತೆ ತನ್ನ ಒಗೆಯುವ ಕೆಲಸವನ್ನ ಶುರುಮಾಡಿದಳು. ಬರಿ ನಮ್ಮದು ಮಾತ್ರವಲ್ಲ, ಬೇರೆ ಕುಟುಂಬದವರದು ಸಹ.

” ನನಗೆ ಈ ಒಗೆಯೋ‌ ಬಟ್ಟೆಗಳಿಂದಾಗಿ ಹಾಸಿಗೆಯಲ್ಲಿ ನೆಮ್ಮದಿಯಾಗಿ ವಿಶ್ರಾಂತಿ ಪಡೆಯೋಕು ಸಹ ಆಗಲಿಲ್ಲ,” ಮುದುಕಿ ವಿವರಿಸಿದಳು “ಒಗೆತ ನನ್ನನ್ನು ಸಾಯಲು ಸಹ ಬಿಡಲಿಲ್ಲ”.

“ದೇವರ ದಯೆಯಿಂದ ನೀವು ನೂರಿಪ್ಪತ್ತು ವರ್ಷ ಬದುಕುವಂತಾಗಲಿ” ಎಂದು ಅಮ್ಮ ದೇವರನ್ನು ಸ್ತುತಿಸಿದಳು.

“ದೇವರೇ ತಡೆ! ಅಷ್ಟು ದೊಡ್ಡ ಜೀವನ ಯಾವ ಒಳ್ಳೆಯದಕ್ಕೇ? ಕೆಲಸ ಮತ್ತಷ್ಟು ಕಠಿಣ ಮತ್ತೂ ಕಠಿಣವಾಗುತ್ತಾ ಹೋಗುತ್ತದೆ. ಹಾಗೇ ನನ್ನ ಶಕ್ತಿ ಕೂಡ ನನ್ನ ಬಿಟ್ಟು ಹೋಗುತ್ತಿದೆ – ನಾನು ಯಾರಿಗೂ ಹೊರೆಯಾಗಲಾರೆ!”

ಮುದುಕಿ ಗೊಣಗುತ್ತಾ ಶಿಲುಬೆಯ ಸ್ಮರಿಸುತ್ತಾ, ಸ್ವರ್ಗದ ಕಡೆಗೆ ಕಣ್ಣುಗಳನ್ನ ಹಾಯಿಸಿದಳು. ಅದೃಷ್ಟಕ್ಕೆ ಮನೆಯಲ್ಲಿ‌ ಸ್ವಲ್ಪ ದುಡ್ಡು ಇತ್ತು. ಅಮ್ಮ ಅದನ್ನು ಎಣಿಸಿದಳು. ನನಗಾಗ ಎಂತಹದೋ ಅಲೌಕಿಕ ಭಾವನೆ ಉಂಟಾಯಿತು : ಮುದುಕಿಯ ಒಗೆವ ಕೈಯಲ್ಲಿ ಆ ನಾಣ್ಯಗಳು ಅವಳ ಹಾಗೇ ಮತ್ತಷ್ಟು ದಣಿದು, ಶುದ್ಧವಾಗಿ ಮತ್ತು ಧರ್ಮ ಶ್ರದ್ಧೆಯಿದ್ದಂತೆ ತೋರುತ್ತಿದ್ದವು. ಅವಳು ಅವನ್ನು ಉರುಬಿ ಅವಳ ಕರವಸ್ತ್ರಕ್ಕೆ ಕಟ್ಟಿಕೊಂಡಳು. ಕೆಲ ವಾರಗಳ ನಂತರ ಮೈಲಿಗೆ ಬಟ್ಟೆಗಳ ಹೊಸ ಗಂಟಿಗಾಗಿ ಬರುತ್ತಿನೆಂದು ಮಾತು ಕೊಟ್ಟು ಹೊರಟಳು.

ಆದರೆ ಅವಳು ಮತ್ತೆಂದೂ ಬರಲಿಲ್ಲ. ಹಿಂತಿರುಗಿಸಿದ ತೊಳೆದ ಬಟ್ಟೆಗಳು ಅವಳ ಭೂಮಿ ಮೇಲಿನ ಕಡೆಯ ಪ್ರಯತ್ನವಾಗಿತ್ತು. ಹಿಡಿದ ಕೆಲಸವನ್ನು ಪೂರ್ಣವಾಗಿ ನೆರೆವೇರಿಸಲು,‍‍ ಅವಳಲ್ಲಿ‌ ಎಂತಹುದೋ ಅದಮ್ಯ ಇಚ್ಛಾ ಶಕ್ತಿಯು ನಿಜವಾದ ಮಾಲೀಕರಿಗೆ ಅವರ ಸ್ವತ್ತುನ್ನು ಹಿಂದಿರುಗಿಸಲೇ ಬೇಕೆಂದು ಪ್ರಚೋದಿಸಿತ್ತು.

ತುಂಬಾ ಹಿಂದಿನಿಂದಲೂ ಪ್ರಾಮಾಣಿಕತೆ ಮತ್ತು ಕರ್ತವ್ಯಗಳ ಆಸರೆಯಲ್ಲಿ ಸಂರಕ್ಷಿತವಾದ ಒಡೆದ ಚೂರುಗಳಿಗಿಂತ ಹೆಚ್ಚೆನಿರಲಿಲ್ಲ, ಆ ಶರೀರ. ಭೂಮಿಯ ಮೇಲೆ ಯಾವುದೇ ಪಾತ್ರವನ್ನು ನಿಭಾಯಿಸಿರಲಿ, ಯಾವ ಭಾಷೆ, ಯಾವ ಮತವಾದರೂ ಇರಲಿ, ಇವ್ಯಾದನ್ನೂ ಲಕ್ಷಿಸದೇ ಆ ಆತ್ಮ ಪವಿತ್ರ ಆತ್ಮಗಳು ಸಂಧಿಸುವ ಗೋಲದೊಳಗೆ ಸಾಗಿ ಹೋಯಿತು. ನನಗೆ ಈ ಅಗಸಗಿತ್ತಿ ಇಲ್ಲದ ಈಡನ್ನನ್ನು ಕಲ್ಪಸಿಕೊಳ್ಳಲು ಆಗುವುದಿಲ್ಲ. ಜೊತೆಗೆ ಇಂತಹ ಶ್ರಮಕ್ಕೆ ಯಾವುದೇ ಪ್ರತಿಫಲವಿಲ್ಲದ ಪ್ರಪಂಚದ ಬಗ್ಗೆ ನೆನೆಯಲೂ ಸಾಧ್ಯವಿಲ್ಲ.