ಕನ್ನಡದಲ್ಲಿ ಇಪ್ಪತ್ತನೆಯ ಶತಮಾನದ ಮೊದಲ ದಶಕದಲ್ಲಿ ಪಂಜೆ ಮಂಗೇಶರಾಯರು ತಮ್ಮ ಸಣ್ಣಕಥೆಗಳನ್ನು ಸುವಾಸಿನಿ ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಕಥಾಸಾಹಿತ್ಯ ಪರಂಪರೆಗೆ ನಾಂದಿ ಹಾಡಿದರು. ಪಂಜೆಯವರ ಸಮಕಾಲೀನರಾಗಿ ಸಣ್ಣಕಥೆ ಮತ್ತು ಕಾದಂಬರಿಗಳನ್ನು ರಚಿಸಿದವರು ನಂಜನಗೂಡು ತಿರುಮಲಾಂಬಾ ಮತ್ತು ಆರ್. ಕಮಲಮ್ಮನವರು, ತಿರುಮಲಾಂಬ ಅವರ ಸಚ್ಚರಿತ ಸುಧಾರ್ಣವ ಪೌರಾಣಿಕ ಕಥಾಸಂಕಲನದಿಂದ ಪ್ರಾರಂಭವಾಗುವ ಕನ್ವರೆ ಮಹಿಳಾ ಕಥಾಸಂಕಲನಕ್ಕೆ ಶತಮಾನ ಪೂರೈಸಿರುವುದು ಸ್ಮರಣೀಯ.
ಭಾಗ್ಯರೇಖಾ ದೇಶಪಾಂಡೆ ಬರೆದ ‘ಪಾನಿಪೂರಿʼ ಹೊಸ ಕಥಾ ಸಂಕಲನಕ್ಕೆ ಡಾ. ವಸುಂಧರಾ ಭೂಪತಿ ಬರೆದ ಮುನ್ನುಡಿ
ಭಾಗ್ಯರೇಖಾ ದೇಶಪಾಂಡೆಯವರು ರಚಿಸಿರುವ “ಪಾನಿಪುರಿ” ಕಥಾಸಂಕಲನ ಹೊಸತನದ ಮೆರುಗಿನಿಂದ ಕೂಡಿದ್ದು ತಲಸ್ಪರ್ಶಿಯಾಗಿದೆ. ಇಲ್ಲಿನ ಕಥೆಗಳು ಮನಸ್ಸಿನ ಹಸಿವನ್ನು ತಣಿಸುವುದರೊಂದಿಗೆ ಲೋಕಾನುಭವದ ತಿಳಿವಳಿಕೆ ನೀಡುತ್ತವೆ. ಭಾವಕ್ಕೆ ಭಾವನಾತ್ಮಕ ತುಡಿತ ಮಿಡಿತದ ಸೂಕ್ಷ್ಮತೆಯನ್ನು ಕಲಿಸುತ್ತವೆ. ಭಾಗ್ಯರೇಖಾ ಅವರು ಮಂಡೋದರಿ ಕಾದಂಬರಿಯ ಮೂಲಕ ಈಗಾಗಲೇ ಓದುಗರಿಗೆ ಪರಿಚಿತರಾಗಿದ್ದಾರೆ.
ಭಾರತೀಯ ಕಥಾಪರಂಪರೆಯಲ್ಲಿ ಮೌಖಿಕ ಮತ್ತು ಲಿಖಿತ ಕಥೆಗಳಿಗೆ ಶತಮಾನಗಳ ದೀರ್ಘ ಇತಿಹಾಸವಿದೆ. ಆಧುನಿಕ ಯುಗದಲ್ಲಿ ಆರಂಭವಾದ ಸಣ್ಣ ಕಥಾಪ್ರಕಾರವು ಸಾಹಿತ್ಯ ಪ್ರಕಾರವಾಗಿ ಪ್ರವೇಶ ಮಾಡಿದ್ದು ನವೋದಯ ಕಾಲಘಟ್ಟದಲ್ಲ, ಆದರೆ ಕಡಿಮೆ ಅವಧಿಯಲ್ಲಿಯೇ ಅಪಾರ ಜನಪ್ರಿಯತೆಯನ್ನು ಪಡೆಯುವ ಅದೃಷ್ಟ ಈ ಸಾಹಿತ್ಯ ಪ್ರಕಾರಕ್ಕೆ ಲಭಿಸಿತು. ಕನ್ನಡದಲ್ಲಿ ಇಪ್ಪತ್ತನೆಯ ಶತಮಾನದ ಮೊದಲ ದಶಕದಲ್ಲಿ ಪಂಜೆ ಮಂಗೇಶರಾಯರು ತಮ್ಮ ಸಣ್ಣಕಥೆಗಳನ್ನು ಸುವಾಸಿನಿ ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಕಥಾಸಾಹಿತ್ಯ ಪರಂಪರೆಗೆ ನಾಂದಿ ಹಾಡಿದರು. ಪಂಜೆಯವರ ಸಮಕಾಲೀನರಾಗಿ ಸಣ್ಣಕಥೆ ಮತ್ತು ಕಾದಂಬರಿಗಳನ್ನು ರಚಿಸಿದವರು ನಂಜನಗೂಡು ತಿರುಮಲಾಂಬಾ ಮತ್ತು ಆರ್. ಕಮಲಮ್ಮನವರು, ತಿರುಮಲಾಂಬ ಅವರ ಸಚ್ಚರಿತ ಸುಧಾರ್ಣವ ಪೌರಾಣಿಕ ಕಥಾಸಂಕಲನದಿಂದ ಪ್ರಾರಂಭವಾಗುವ ಕನ್ವರೆ ಮಹಿಳಾ ಕಥಾಸಂಕಲನಕ್ಕೆ ಶತಮಾನ ಪೂರೈಸಿರುವುದು ಸ್ಮರಣೀಯ. ಕಳೆದ ನೂರು ವರುಷಗಳಲ್ಲಿ ಲೇಖಕಿಯರು ಸುಮಾರು ಕಥೆಗಳನ್ನು ಬರೆದಿದ್ದಾರೆ. ಮಹಿಳೆಗೂ ಕಥೆಗೂ ಅವಿನಾಭಾವ ಸಂಬಂಧವಿದೆ, ಕಥೆಗಳು ಮಹಿಳೆಯ ಒಳಸಂಕಟಗಳಿಗೆ ದನಿಯಾಗುತ್ತವೆ.
ಭಾಗ್ಯರೇಖಾ ಅವರು ‘ಪಾನಿಪುರಿ’ ಕತೆಯಲ್ಲಿ ಬಳಸಿರುವ ನಿರೂಪಣಾ ಶೈಲಿ, ತಂತ್ರಗಾರಿಕೆ ವಿಶಿಷ್ಟವಾಗಿದ್ದು ಸಂಬಂಧಗಳ ಸಂಕೀರ್ಣತೆಯ ಸ್ಪಷ್ಟ ಅವಲೋಕನವಾಗಿದೆ. ಇಲ್ಲಿನ ಹನ್ನೊಂದು ಕಥೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ‘ಜಾರಿಪುರಿ’ ಕಥೆಯಲ್ಲ ಬದುಕಿನ ದೃಷ್ಟಿಕೋನ ವ್ಯಕ್ತಿಯಿಂದ ವ್ಯಕ್ತಿಗೆ ತಂತ್ರಜ್ಞಾನದ ಭರಾಟೆಯಲ್ಲಿ ಬದಲಾಗುತ್ತಿರುವ ಬಗೆಯನ್ನು ಕಟ್ಟಿಕೊಟ್ಟಿದ್ದಾರೆ.
ನಾದಿರಾ ಬುಟೀಕ್ ನಲ್ಲಿ ನಾದಿರಾ ಬಟ್ಟೆ ಕತ್ತರಿಸಿ ಹೊಲಿಯುವ ಯಾಂತ್ರಿಕತಲೆಯ ನಡುವೆ ಅನುಭವಿಸುವ ಜೀವಂತಿಕೆ ಮನಮುಟ್ಟುವಂತೆ ಚಿತ್ರಿಸಲಾಗಿದೆ. ‘ಕಾಕ ಸಂದೇಶ’ ಮೂಢನಂಬಿಕೆಗಳಲ್ಲಿ ಮುಳುಗಿರುವ ಮನುಷ್ಯನ ಮಾನಸಿಕ ಸ್ಥಿತಿಗತಿಯನ್ನು ಬಿಂಬಿಸಿದರೆ, ‘ಸ್ವಾಮಿಗಳ ದರ್ಶನ’ ವಿಧವೆಯ ಅಂತರಾಳದ ಇಂಗಿತವನ್ನು ಬಯಲು ಮಾಡುವಲ್ಲಿ ಯಶಸ್ವಿಯಾಗಿದೆ.
‘ವಲಸೆಹಕ್ಕಿ’ಯ ಸಂದಿಗ್ಧತೆ, ‘ಎಲ್ಲಿಗೆ ಓಟ?’ದ ನಾರಾಯಣನ ವ್ಯಕ್ತಿತ್ವ ಚಿತ್ರಣ ಬದುಕಿಗೆ ಬೆನ್ನು ತೋರಿಸುವ ರೀತಿಯನ್ನು ಅನನ್ಯವಾಗಿ ಲೇಖಕಿ ಚಿತ್ರಿಸಿದ್ದಾರೆ. ಗಿರಣೆಯೊಂದಿಗೆ ಜೀವನಕಟ್ಟಿಕೊಂಡ ಗಂಗವ್ವನ ಭಾವಲೋಕ ಸ್ಥತೆ ಮಾರಾಟವಾಗುತ್ತದೆಂದಾಗ ಜೀವವೇರಕಿಯಂತಾಗಿ ಒದ್ದಾಡುವ ಸಂಕಟ ಮನಸ್ಸು ಹಿಂಡುತ್ತದೆ, ಮೊಬೈಲಿಗಾಗಿ ಪಡಿಪಾಟಲು ಪಡುವ ‘ಮಾದೇಶನ ಮೊಬೈಲ್’ ಗ್ರಾಮೀಣ ಲೋಕದ ಮನೋಲೋಕವನ್ನು ವಿಸ್ತರಿಸಿದರೆ, ‘ಒಂದು ಪತ್ರ ಕೊನೆಯವರೆಗೂ ಕುತೂಹಲವನ್ನು ಉಳಿಸಿಕೊಂಡು ಕಥಾನಾಯಕಿಯೊಂದಿಗೆ ಓದುಗರನ್ನೂ ಅಚ್ಚರಿಗೊಳಿಸುವ ಲಹರಿ ಮನನೀಯ.
ಒಂದೊಂದು ವರ್ಗದ ಮಹಿಳೆಯ ಸಂಕಟ ಒಂದೊಂದು ಬಗೆಯದಾಗಿರುತ್ತದೆ. ಅದರಲ್ಲೂ ಭಾರತದಂತಹ ಬಹು ಸಂಸ್ಕೃತಿಯನ್ನೊಳಗೊಂಡ ಸಮಾಜದಲ್ಲಿ ಹೆಣ್ಣಿನ ಸಂಕಟಗಳು ಅಕ್ಷರಕ್ಕೆ ನಿಲುಕದವುಗಳಾಗಿ ಕಾಡುತ್ತವೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಶೋಷಣೆ ಯಾವ ನಿಟ್ಟಿನಲ್ಲಿ ಆಗುತ್ತದೆಂಬುದಕ್ಕೆ ಇಲ್ಲಿನ ಕೆಲವು ಕಥೆಗಳು ಸಾಕ್ಷಿಯಾಗಿವೆ. ಲೇಖಕಿ ಭಾಗ್ಯರೇಖಾ ದೇಶಪಾಂಡೆಯವರು ಅನುಭವನಿಷ್ಟತೆಯಿಂದ ಪ್ರಾಮಾಣಿಕವಾಗಿ ತಮಗೆ ದಕ್ಕಿರುವ ವೇದನೆ, ಸಂವೇದನೆಗಳನ್ನು ಕಥಾರೂಪದಲ್ಲಿ ನೀಡಿರುವುದು ಶ್ಲಾಘನೀಯ.
(ಕೃತಿ: ಪಾನಿಪೂರಿ(ಕಥಾ ಸಂಕಲನ), ಲೇಖಕರು: ಭಾಗ್ಯರೇಖಾ ದೇಶಪಾಂಡೆ, ಪ್ರಕಾಶನ: ಸಾಹಿತ್ಯಲೋಕ ಪಬ್ಲಿಕೇಷನ್ಸ್, ಬೆಲೆ: 130/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ