ತಾನು ಜೋಗಪ್ಪನಾದ ಪರಿಸ್ಥಿತಿಯನ್ನು ನೆನಪಿಗೆ ತರುವಂತ ಬೇನೆಬಿದ್ದ ಬಾಲಕನನ್ನು ತಾಯಪ್ಪನ ಬಳಿ ತಂದಾಗ ವಾಡಿಕೆಯ ಪ್ರಕಾರ ಗುಡ್ಡದ ಎಲ್ಲವ್ವನಿಗೆ ಬಿಡಿರೆಂಬ ಸಲಹೆ ಕೊಡುವುದಿಲ್ಲ. ಒಳ್ಳೆಯ ವೈದ್ಯರ ಬಳಿ ತೋರಿಸಿ ಎನ್ನುವ ಅವನ ಸಲಹೆಯಲ್ಲಿ ಈ ಕಾದಂಬರಿ ದೇವದಾಸಿ ಪದ್ಧತಿಯ ಅಂತ್ಯಕ್ಕೆ ಈ ಪದ್ಧತಿಯ ಮೂಲಸೆಲೆಗಳನ್ನು ಹೇಗೆ ಒಳಗಿನಿಂದಲೇ ಕೊನೆಗಾಣಿಸಲು ಸಾಧ್ಯವೆನ್ನುವುದನ್ನು ಗ್ರಹಿಸುತ್ತದೆ. ಹಾಗೆ ನೋಡಿದರೆ ತಾಯಪ್ಪ ಹೊರಗಿನ ಸಮಾಜದ ಸಹಕಾರಕ್ಕಿಂತ ತನ್ನ ಸಮುದಾಯದೊಳಗೆ ಉಂಟಾಗಬೇಕಿರುವ ಪ್ರಜ್ಞೆಗಾಗಿ ತಹತಹಿಸುವುದು ಕಂಡುಬರುತ್ತದೆ.
ಕಮಲಾಕರ ಕಡವೆ ಬರೆಯುವ ಅಂಕಣ
ಬರಹಸಂಕರದ ಕೃತಿಗಳನ್ನು ಚರ್ಚಿಸುವ ಉದ್ದೇಶದ ಈ ಕಾಲಂನಲ್ಲಿ ಈ ತಿಂಗಳು ಎತ್ತಿಕೊಂಡಿರುವ ಪುಸ್ತಕ ಅದು ಹೇಗೆ ಸೂಕ್ತವೆಂಬ ಪ್ರಶ್ನೆಯನ್ನು ಉತ್ತರಿಸಿಯೇ ಮುಂದುವರಿಯುವುದು ಸೂಕ್ತ. ಯಾಕೆಂದರೆ, ಈ ಸಲ ನಾನು ಚರ್ಚಿಸಲಿರುವುದು ಒಂದು ಅನುವಾದಿತ ಕೃತಿ – ಅಂದರೆ, ನಾನು ಮೂಲ ಕೃತಿಗಿಂತಲೂ, ಅನುವಾದಿತ ಕನ್ನಡ ಕೃತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆಯಲಿದ್ದೇನೆ. ಅದಕ್ಕೆ ಕಾರಣವೆಂದರೆ, ಮೂಲ ಕೃತಿಯು ಸಾಮಾಜಿಕ ವಾಸ್ತವವಾದಿ ಶೈಲಿಯ ಕಾದಂಬರಿ. ವಿಷಯ, ಪ್ರಸ್ತುತಿ, ಸಂವೇದನಾಶೀಲತೆ, ಶೈಲಿಗಳೆಲ್ಲದರ ದೃಷ್ಟಿಯಿಂದ ಉನ್ನತ ಕೃತಿಯೇ ಸೈ. ಆದರೆ, ಅದರ ಕನ್ನಡದ ಅನುವಾದ, ಇವೆಲ್ಲದರ ಜೊತೆಗೆ ನಡೆಸಿರುವ ಭಾಷಿಕ ಪ್ರಯೋಗವು ಅದನ್ನೊಂದು ಬರಹಸಂಕರ ಕೃತಿಯ ಉದಾಹರಣೆಯಾಗಿಸಬಲ್ಲದು ಎಂದು ನನ್ನ ನಂಬಿಕೆ.
ಈಗ ಕೃತಿಯತ್ತ ಹೊರಳೋಣ. “ಭಂಡಾರ್ ಭೋಗ್” ಎನ್ನುವ ಈ ಕಾದಂಬರಿ ಮೂಲತಃ ಮರಾಠಿ ಭಾಷೆಯ ಕೃತಿ. ಕೃತಿಕಾರ ರಾಜನ್ ಗವಸ್. ಓದುಗರ ಮತ್ತು ವಿಮರ್ಶಕರ ಸಾಮಾನ್ಯ ಪ್ರಶಂಸೆ ಪಡೆದ ಈ ಕೃತಿಯನ್ನು ಆಧರಿಸಿ ಸಿನೆಮಾ ಕೂಡ ಮಾಡಲಾಗಿದೆ. ಮರಾಠಿಯಲ್ಲಿ ಆನಂದ ಯಾದವ ಎಂಬ ಲೇಖಕರೊಂದಿಗೆ ಪ್ರವರ್ಧಮಾನಕ್ಕೆ ಬಂದ ಗ್ರಾಮಕಾದಂಬರಿ ಪ್ರಕಾರ ರಾಜನ್ ಗವಸರ ಕೃತಿಗಳಲ್ಲಿ ಗಟ್ಟಿ ದನಿ ಕಂಡುಕೊಂಡಿದೆ. ಗವಸ ಮೊದಲ ಬಾರಿ ಕನ್ನಡಿಗರಿಗೆ ಓದಲು ಲಭ್ಯವಾಗಿರುವುದು ಅವರ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದಾದ ಭಂಡಾರ ಭೋಗ ಎಂಬ ಕೃತಿಯ ಮೂಲಕ. ಇದನ್ನು ಕನ್ನಡಕ್ಕೆ ತಂದಿರುವ ಚಂದ್ರಕಾಂತ ಪೋಕಳೆ ಮಾತ್ರ ನಮ್ಮ ನಾಡಲ್ಲಿ ತಮ್ಮ ಮೌಲಿಕ ಅನುವಾದಗಳಿಗೆ ಈಗಾಗಲೇ ಹೆಸರು ಪಡೆದವರಾಗಿದ್ದಾರೆ. ತಮ್ಮ ತಣ್‌ಕಟ್ ಎಂಬ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾದಮಿ ಪ್ರಶಸ್ತಿ ಗಳಿಸಿರುವ ರಾಜನ್ ಗವಸ ಈವರೆಗೆ ಐದು ಕಾದಂಬರಿಗಳೂ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಕಥೆ, ಕಾವ್ಯ, ವಿಮರ್ಶೆ ಹೀಗೆ ಎಲ್ಲ ಬಗೆಯ ಸಾಹಿತ್ಯಸೃಷ್ಟಿಯನ್ನೂ ಮಾಡಿರುವ ಗವಸ ಸಮಕಾಲೀನ ಮರಾಠಿ ಸಾಹಿತ್ಯದಲ್ಲಿ ಮುಖ್ಯದನಿಯಾಗಿದ್ದಾರೆ.
ಕಾದಂಬರಿ ಎಂಬ ಸಾಹಿತ್ಯ ಪ್ರಕಾರವು ತನ್ನ ಅತ್ಯುನ್ನತ ಕೃತಿಗಳಲ್ಲಿ ತೋರಿಸಿರುವುದೇನೆಂದರೆ ಸಾಹಿತ್ಯ ಹೇಗೆ ಸಮಾಜವನ್ನು ಚುಚ್ಚಿ ಎಚ್ಚರಿಸಿ, ಹುಳುಕು ಹೊರತೋರಿಸಿ, ಬದಲಾವಣೆಗೆ ಕರೆಕೊಡುತ್ತಲಿರುತ್ತದೆ ಎನ್ನುವುದನ್ನು. ಭಂಡಾರ ಭೋಗ ಕಾದಂಬರಿಯೂ ಕೂಡ ಸಮಾಜದ ತೂತುಗಳಲ್ಲಿ ನುಸುಳಿ ಅಲ್ಲಿ ಅದುಮಿಡಲ್ಪಡುವ ಜನಜೀವನವನ್ನು ಚಿತ್ರಿಸುತ್ತಾ ಸಮಾಜದೊಳಗಿರುವ ದಮನದಾಹವನ್ನು ತೀವ್ರವಾಗಿ ಖಂಡಿಸುತ್ತದೆ. ಉತ್ತರ ಕರ್ನಾಟಕ ಪ್ರಾಂತವೂ ಸೇರಿದಂತೆ ಹಲವು ಕಡೆ ಸಾಮಾನ್ಯವಾಗಿ ಪ್ರಚಲಿತವಿದ್ದ ದೇವದಾಸಿ, ಜೋಗಪ್ಪ ಪರಿಪಾಠ ಈ ಕಾದಂಬರಿಯ ವಸ್ತು.
ಕಾದಂಬರಿಯ ಕೇಂದ್ರ ಪಾತ್ರನಾದ ತಾಯಪ್ಪ ಒಬ್ಬ ಸಾಮಾನ್ಯ ಹುಡುಗ. ಸಣ್ಣ ವಯಸ್ಸಿನಲ್ಲಿಯೇ ಖಾಯಿಲೆ ಬಿದ್ದು ಬಳಲುತ್ತಾನೆ. ಅವನ ಹೆತ್ತವರು ಔಷಧಿಗಳಿಗೆ ಬಗ್ಗದ ಬೇನೆಯ ನಿವಾರಣೆಗೆ ಊರ ಜೋಗತಿಯ ಮೊರೆ ಹೋಗುತ್ತಾರೆ. ಬೇನೆಯ ನಿವಾರಣೆ ಅರಿವಿಗೆ ಬರದೇ ಆ ಜೋಗತಿ ತಾಯಪ್ಪನನ್ನು ಇನ್ನೊಬ್ಬ ಜೋಗತಿಯ ಬಳಿ ಒಯ್ಯುತ್ತಾಳೆ. ಅಲ್ಲಿ ತಾಯಪ್ಪನನ್ನು ಗುಡ್ಡದ ಎಲ್ಲವ್ವನಿಗೆ ಬಿಡಬೇಕೆಂದು ತಾಕೀತು ನೀಡಲಾಗುತ್ತದೆ. ತಾಯಪ್ಪನನ್ನು ‘ದೇವರಿಗೆ ಬಿಡುವ’ ನೋವಿನ ನಿರ್ಧಾರಕ್ಕೆ ಅವರು ಬರಬೇಕಾಗುತ್ತದೆ. ಎಲ್ಲರಂತೆ ಆಡೋಡಿಕೊಂಡಿದ್ದ ಹುಡುಗನೊಬ್ಬ ಸೀರೆ ಉಟ್ಟು, ಹಣೆಗೆ ಭಂಡಾರ ಹಚ್ಚಿ ಜೋಗಪ್ಪನಾಗುವ ಹಾಗೂ ದಿನಗಳೆದಂತೆ ರೂಪಾಂತರದ ಹಿಂಸಕ ಪ್ರಕ್ರಿಯೆ ಅವನೊಳಗೆ ಮತ್ತು ಅವನ ಕುಟುಂಬದೊಳಗೆ ಉಂಟಾಗಿಸುವ ಕೋಲಾಹಲ ರಾಜನ್ ಗವಸರ ಮಾಂತ್ರಿಕ ನಿರೂಪಣೆಯಲ್ಲಿ ಓದುಗನನ್ನು ತನ್ನೊಳಗೆ ಸೆಳೆದುಕೊಳ್ಳುತ್ತ ಹೋಗುತ್ತದೆ.
ತಮ್ಮ ನಂಬಿಕೆಗಳ ಒತ್ತಾಯಕ್ಕೆ ಬಗ್ಗಿ ಮಗನ ಮೇಲಿನ ವಾತ್ಸಲ್ಯವನ್ನು ಹತ್ತಿಕ್ಕಿ, ಅವನ ಜೀವ ಉಳಿಸಿಕೊಳ್ಳಲು ಮನೆಯವರು ತಾಯಪ್ಪನನ್ನು ದೇವರಿಗೆ ಬಿಡುತ್ತಾರೆ. ಹೀಗೆ ಜೋಗಪ್ಪನಾಗುವ ತಾಯಪ್ಪ ಮೊದಮೊದಲು ನಾಚಿಕೆಯಿಂದ ಬಳಲುತ್ತಾನೆ. ಕ್ರಮೇಣ ಊರ ಜೋಗತಿಯರು ಅವನ ಕಷ್ಟ ಅರ್ಥಮಾಡಿಕೊಂಡು ಅವನ ಜೋಗಪ್ಪನಾಗುವ ದಾರಿಯನ್ನು ಸುಗಮಗೊಳಿಸುವ ಪ್ರಯತ್ನ ಮಾಡುತ್ತಾರೆ. ಹೀಗೆ ಜೋಗತಿಯರ ಸಲಿಗೆ ಹೆಚ್ಚಿಸಿಕೊಂಡ ತಾಯಪ್ಪ ಅವರ ಜತೆಯೇ ಜಾಸ್ತಿ ಕಾಲಕಳೆಯ ತೊಡಗುತ್ತಾನೆ. ಅವರಲ್ಲಿ ಒಬ್ಬಳಾದ ರತ್ನವ್ವ ಮತ್ತು ತಾಯಪ್ಪರ ನಡುವೆ ಬೆಳೆಯುವ ಸಲಿಗೆ ಮನೆಯೊಳಗೆ ಮತ್ತು ಊರೊಳಗೆ ಸಂಘರ್ಷ ಹುಟ್ಟುಹಾಕಿದಾಗ ಇಬ್ಬರೂ ಊರವರ ಎದುರು ನಿಲ್ಲುವ ರೀತಿ ಏಕತೆಯನ್ನು ಸೂಚಿಸುತ್ತದೆ. ಮುಂದೆ ಜೋಗಪ್ಪಗಳ ಸಮುದಾಯದ ಇನ್ನಿತರರ ಜತೆ ತಳುಕು ಬೆಳೆದಂತೆ ತಾಯಪ್ಪನೇ ಈ ಸಂಬಂಧದಿಂದ ದೂರಾಗುತ್ತಾನೆ.
ತನ್ನ ಕುಟುಂಬ ಮತ್ತು ಊರಿನ ವ್ಯಾಪ್ತಿಯಾಚೆಯ ಜೋಗಪ್ಪ ಸಮುದಾಯದೊಂದಿಗೆ ಒಂದಾಗುವ ತಾಯಪ್ಪನ ಜೀವನದಲ್ಲಿ ಜೋಗಪ್ಪಂದಿರ ನಡವಳಿಕೆ, ಆಚಾರಗಳ ಸಮ್ಮಿಳನ ಏರ್ಪಡುತ್ತ ಸಾಗುತ್ತದೆ. ಜೋಗಪ್ಪ-ಜೋಗತಿಯರ ದೈನಂದಿನ ತಾಪತ್ರಯಗಳು, ಲೈಂಗಿಕ ಗೊಂದಲಗಳು, ಅವರ ಮೇಲಾಗುವ ಅತ್ಯಾಚಾರಗಳು, ಅವರ ಹಬ್ಬಗಳು, ಪೂಜೆಗಳು, ಅವರೊಳಗಿನ ಶ್ರೇಣಿ, ಅವರ ನಿತ್ಯ ಕರ್ಮಗಳು, ಕರ್ತವ್ಯಗಳು, ಬಗೆಬಗೆಯ ನಂಬಿಕೆಗಳ ಜನರೊಡನೆ ಅವರ ಕೊಡುಕೊಳ್ಳುವಿಕೆ ಹೀಗೆ ಅವರ ಜೀವನದ ಹಲವು ಪದರುಗಳನ್ನು ಈ ಕಾದಂಬರಿ ಬಿಚ್ಚುತ್ತ ಹೋಗುತ್ತದೆ. ತಾಯಪ್ಪ ನಾಚಿಕೆಯಿಂದ ತುಂಬಿದ ಬಾಲ ಜೋಗಪ್ಪನಾಗಿ ಶುರುವಾಗಿ ಕ್ರಮೇಣ ತನ್ನ ಸಮುದಾಯದಲ್ಲಿ ಮೇಲೇರುತ್ತ ಹೋಗುತ್ತಾನೆ. ಅವನ ಮೇಲೆ ಹೊಸ ಹೊಸ ಜವಾಬ್ದಾರಿಗಳು ಬರುತ್ತವೆ. ತಾನಕ್ಕನ ಮರಣದ ನಂತರ ಊರ ಗದ್ದುಗೆ ಕೂಡ ಅವನ ಜವಾಬ್ದಾರಿಯಗುತ್ತದೆ. ಅಂತೆಯೇ ಅವನ ಸಹಚರರ ಸುಖದುಃಖಗಳಲ್ಲಿಯೂ ತಾಯಪ್ಪ ಪಾಲುದಾರನಾಗುತ್ತಾನೆ. ಹೀಗೆ ತನ್ನ ಸಮುದಾಯ ಹಾಗೂ ಹೊರಗಿನ ಸಮಾಜದ ಕುರಿತಾದ ಕರ್ತವ್ಯಗಳನ್ನು ನಿಭಾಯಿಸುತ್ತ ಸತ್ಯವಂತ ಜೋಗಪ್ಪನಾಗಿ ತಾಯಪ್ಪ ಹೆಸರು ಮಾಡುತ್ತಾನೆ.
ಇದೇ ಸಮಯಕ್ಕೆ ಮೋರೆ ಮಾಸ್ತರ ಎನ್ನುವ ಸಮಾಜ ಸುಧಾರಕ ತಾಯಪ್ಪನ ಜತೆ ಪರಿಚಯ ಬೆಳೆಸುತ್ತಾನೆ. ಅವನೊಂದಿಗಿನ ಮಾತುಕತೆಗಳಲ್ಲಿ ತಾಯಪ್ಪ ತನ್ನೊಳಗಿನ ಕಳವಳಗಳಿಗೆ ವ್ಯಕ್ತ ರೂಪ ಕಾಣುವುದರ ಮೂಲಕ ಜೋಗಪ್ಪ-ಜೋಗತಿ ಸಂಪ್ರದಾಯವು ಹೇಗೆ ನಿಮ್ನಜಾತಿಜನಗಳಿಗೆ ಸೀಮಿತವಾಗಿದ್ದು, ಎಲ್ಲವ್ವನ ಆಶೀರ್ವಾದದ ಬದಲಾಗಿ ಸಮಾಜದೊಳಗಿನ ಹಿಂಸಕ ಪ್ರವೃತ್ತಿಗಳಿಗಷ್ಟೇ ಒತ್ತಾಸೆಯಾಗಿರುವುದನ್ನು ಸ್ಫುಟವಾಗಿ ಕಾಣತೊಡಗುತ್ತಾನೆ. ತಮ್ಮ ಜೀವನ ಹಲವರ ಹಂಗಿನ ಜೀವನವಾಗಿರುವುದನ್ನು ಮನಗಾಣುತ್ತಾನೆ. ತನ್ಮೂಲಕ ತಾಯಪ್ಪ ಮೋರೆ ಮಾಸ್ತರನಿಗೆ ಜೋಗತಿಯರನ್ನು ಸಂಘಟಿಸಿ ಸರಕಾರದ ನೆರವಿಗೆ ಪ್ರಯತ್ನಿಸುವುದರಲ್ಲಿ ಸಹಕಾರ ಮಾಡುತ್ತಾನೆ. ಮುಂದೆ ಮುಖ್ಯವಾಹಿನಿ ಸಮಾಜದ ಬೆಂಬಲದ ಹಿಂದಿರುವ ಸ್ವಾರ್ಥ ಅವನ ಅರಿವಿಗೆ ಬರುತ್ತದೆ. ಆದರೂ ಕೂಡ ತಾಯಪ್ಪನಲ್ಲಿ ಬೆಳೆಯುವ ಪ್ರಶ್ನೆಗಳು ಅವನಿಗೆ ಬದಲಾವಣೆಯನ್ನು ಬಯಸಲು ಮತ್ತು ಅದಕ್ಕಾಗಿ ಪ್ರಯತ್ನಿಸಲು ಪ್ರಚೋದಿಸುತ್ತವೆ.
ಬೇನೆಯ ನಿವಾರಣೆ ಅರಿವಿಗೆ ಬರದೇ ಆ ಜೋಗತಿ ತಾಯಪ್ಪನನ್ನು ಇನ್ನೊಬ್ಬ ಜೋಗತಿಯ ಬಳಿ ಒಯ್ಯುತ್ತಾಳೆ. ಅಲ್ಲಿ ತಾಯಪ್ಪನನ್ನು ಗುಡ್ಡದ ಎಲ್ಲವ್ವನಿಗೆ ಬಿಡಬೇಕೆಂದು ತಾಕೀತು ನೀಡಲಾಗುತ್ತದೆ. ತಾಯಪ್ಪನನ್ನು ‘ದೇವರಿಗೆ ಬಿಡುವ’ ನೋವಿನ ನಿರ್ಧಾರಕ್ಕೆ ಅವರು ಬರಬೇಕಾಗುತ್ತದೆ.
ತಾನು ಜೋಗಪ್ಪನಾದ ಪರಿಸ್ಥಿತಿಯನ್ನು ನೆನಪಿಗೆ ತರುವಂತ ಬೇನೆಬಿದ್ದ ಬಾಲಕನನ್ನು ತಾಯಪ್ಪನ ಬಳಿ ತಂದಾಗ ವಾಡಿಕೆಯ ಪ್ರಕಾರ ಗುಡ್ಡದ ಎಲ್ಲವ್ವನಿಗೆ ಬಿಡಿರೆಂಬ ಸಲಹೆ ಕೊಡುವುದಿಲ್ಲ. ಒಳ್ಳೆಯ ವೈದ್ಯರ ಬಳಿ ತೋರಿಸಿ ಎನ್ನುವ ಅವನ ಸಲಹೆಯಲ್ಲಿ ಈ ಕಾದಂಬರಿ ದೇವದಾಸಿ ಪದ್ಧತಿಯ ಅಂತ್ಯಕ್ಕೆ ಈ ಪದ್ಧತಿಯ ಮೂಲಸೆಲೆಗಳನ್ನು ಹೇಗೆ ಒಳಗಿನಿಂದಲೇ ಕೊನೆಗಾಣಿಸಲು ಸಾಧ್ಯವೆನ್ನುವುದನ್ನು ಗ್ರಹಿಸುತ್ತದೆ. ಹಾಗೆ ನೋಡಿದರೆ ತಾಯಪ್ಪ ಹೊರಗಿನ ಸಮಾಜದ ಸಹಕಾರಕ್ಕಿಂತ ತನ್ನ ಸಮುದಾಯದೊಳಗೆ ಉಂಟಾಗಬೇಕಿರುವ ಪ್ರಜ್ಞೆಗಾಗಿ ತಹತಹಿಸುವುದು ಕಂಡುಬರುತ್ತದೆ. ಕಾದಂಬರಿಯಲ್ಲಿ ಈ ತರನ ಪ್ರಜ್ಞೆಯ ಪ್ರಸ್ತುತಿಯ ಮೂಲಕ ರಾಜನ್ ಗವಸ ಅವರು ನಮ್ಮ ಸಮಾಜದ ಆರ್ಥಿಕ ಮತ್ತು ಉಭಯಲಿಂಗರತಿ ವ್ಯವಸ್ಥೆ ತನ್ನ ಮುಂದುವರಿಕೆಗಾಗಿ ಹೇಗೆ ಸಂಪ್ರದಾಯವೊಂದನ್ನು ಹುಟ್ಟುಹಾಕಿ, ಪೀಡಿತರನ್ನು ಆ ಸಂಪ್ರದಾಯದ ಜಡ ಬೋನಿನಲ್ಲಿ ಬೇಸ್ತುಬೀಳಿಸುವುದನ್ನು ಸಮರ್ಥವಾಗಿ ಚಿತ್ರಿಸುತ್ತಾರೆ. ಈ ಕುರಿತು ಮುನ್ನುಡಿ ಬರೆದಿರುವ ಡಾ. ಶೋಭಾ ನಾಯಿಕ ಹೇಳುತ್ತಾರೆ:
“ರಾಜನ್ ಗವಸ ಅವರ ಈ ಕಾದಂಬರಿಯು ಈ ಸಂದರ್ಭದ ಸಮಾಜದ ಸಾಂಸ್ಕೃತಿಕ, ಧಾರ್ಮಿಕ ರೂಢಿ ವ್ಯವಸ್ಥೆಯ ಅರಿವನ್ನು ತಂದುಕೊಡುವ ಒಂದು ಮಹತ್ವದ ಪ್ರಕ್ರಿಯೆ, ನಮ್ಮ ಸಂಸ್ಕೃತಿಯ ಬೇರನ್ನು ಮತ್ತೊಮ್ಮೆ ಪರೀಕ್ಷೆಗೊಳಪಡಿಸಬೇಕೆನ್ನುವ ಕಳಕಳಿ, ತಳಮಳ, ತಲ್ಲಣ ಈ ಲೇಖಕನ ಬರವಣಿಗೆಯ ಮುಖ್ಯ ಉದ್ದೇಶವಾಗಿದೆ.
ದೇವದಾಸಿ ಪದ್ಧತಿಯ ಕುರಿತು ಹಲವು ಸಾಹಿತ್ಯ ಕೃತಿಗಳು ಬಂದಿವೆಯಾದರೂ “ಭಂಡಾರ ಭೋಗ” ಕಾದಂಬರಿಯ ವಸ್ತುವಾದ ಜೋಗಪ್ಪಗಳ ಜೀವನ ಚಿತ್ರಣ ಕನ್ನಡದಲ್ಲಿಯೂ ಅಷ್ಟಾಗಿ ಬಂದಂತಿಲ್ಲ. ಹಾಗಾಗಿ ಈ ಕಾದಂಬರಿಯು ತನ್ನ ವಸ್ತುವಿನಿಂದಾಗಿ ಮುಖ್ಯವಾಗುತ್ತದೆ. ಆದರೆ ಸಾಹಿತ್ಯದಲ್ಲಿ ನಾವಿನ್ಯತೆಯೇ ಪ್ರಾಮುಖ್ಯವಲ್ಲ. ಕೃತಿಯೊಂದು ತನ್ನ ವಸ್ತುವನ್ನು ಹೇಗೆ ಕಲಾತ್ಮಕಗೊಳಿಸುವುದು, ಹೇಗೆ ತನ್ನ ವಸ್ತುಪ್ರಪಂಚದೊಂದಿಗೆ ವಿಮರ್ಶಾತ್ಮಕ ಸಂಬಂಧ ಏರ್ಪಡಿಸುವುದು ಎನ್ನುವುದು ಮುಖ್ಯವಾಗುತ್ತದೆ. ರಾಜನ್ ಗವಸ ತಮ್ಮ “ಭಂಡಾರ ಭೋಗ” ಕಾದಂಬರಿಯಲ್ಲಿ ನಾವೀನ್ಯತೆಯನ್ನೇ ನೆಚ್ಚಿಲ್ಲ; ಜತೆಜತೆಗೆ ಸಮರ್ಥ ನಿರೂಪಣಾ ತಂತ್ರದೊಂದಿಗೆ ಓದುಗರ ಆಸಕ್ತಿ ಎಲ್ಲಿಯೂ ತಗ್ಗದಂತೆ ಕತೆಹೇಳುತ್ತ ಢಾಳಾಗಿ ಕಾಣಬರದ ಸೂಕ್ಷ್ಮಕಲಾವಂತಿಕೆಯ ಮೂಲಕ ತಮ್ಮ ಕೃತಿಯ ಮೌಲ್ಯವನ್ನು ಹೆಚ್ಚಿಸಿದ್ದಾರೆ.
ಈ ಕಾದಂಬರಿಯ ಹಂದರ ಬಿಗಿಯಾಗಿ ಹೆಣೆದ ಘಟನೆಗಳ ಬಳ್ಳಿಯಂತೆ ಸರಳರೇಖಾತ್ಮಕವಾಗಿಲ್ಲ. ಹಾಗೆಂದು ಬಹುತೇಕ ಘಟನೆಗಳು ಕಾಲಾನುಕ್ರಮದಲ್ಲಿಯೇ ಕಥಿತವಾಗಿದ್ದರೂ ಕಾರ್ಯಕಾರಣ ತರ್ಕದಲ್ಲಿ ಜೋಡಿಸಿಲ್ಲ. ಒಂದು ನಿರ್ದಿಷ್ಟ ವಿಧಿಯತ್ತ ನೆಟ್ಟ ನೇರ ಸಾಗುವ ಬದಲು ಲೇಖಕರು ಘಟನೆಗಳನ್ನು ಪೇರಿಸುತ್ತಾ ಪೇರಿಸುತ್ತಾ ಸಾಗುತ್ತಾರೆ. ಪ್ರತಿ ಘಟನೆಯೂ ಕಾದಂಬರಿಯ ಪಾತ್ರಪ್ರಪಂಚದ ಜೀವನಶೈಲಿಯನ್ನು ವಿವರವಾಗಿ ಓದುಗರ ಕಣ್ಣ ಮುಂದೆ ಕಟ್ಟುತ್ತ ಹೋಗುತ್ತದೆ. ಒಟ್ಟಾರೆ ಪರಿಣಾಮವೆಂದರೆ “ಭಂಡಾರ ಭೋಗ” ಕಾದಂಬರಿಯು ಜೋಗಪ್ಪ-ಜೋಗತಿ ಸಮುದಾಯದ ನಿತ್ಯ ಸಂಸ್ಕೃತಿಯ ಒಂದು ನಿಖರ ಚಿತ್ರವಾಗುತ್ತದೆ. ಮಾನವಶಾಸ್ತ್ರದ ಸಂಶೋಧಕನೊಬ್ಬನಿಗೆ ಶೋಭಿಸುವ ಸಾಂಸ್ಕೃತಿಕ ಬಿಂಬನೆಯ ಖಚಿತತೆಯನ್ನು ಲೇಖಕರು ಈ ಕಾದಂಬರಿಯಲ್ಲಿ ಪ್ರದರ್ಶಿಸುತ್ತಾರೆ ಎನ್ನುವುದು ಅವರ ನಿರೂಪಣಾಶೈಲಿಯ ದೊಡ್ಡ ಗುಣ.
ಇಂತಹ ಖಚಿತತೆ ಸಾಹಿತ್ಯದಲ್ಲಿ ಸಾಧ್ಯವಾಗುವುದು ಜೊಳ್ಳು ಸಾಮಾನ್ಯತೆಗಳನ್ನು ಮೀರಿದ ವರ್ಣನ ಶಕ್ತಿಯಿದ್ದರೆ ಮಾತ್ರ. ಭಾಷೆಯಲ್ಲಿ ಸುಲಭ ಲಭ್ಯ ಅಭಿವ್ಯಕ್ತಿ ವಿಧಾನ ತೊರೆದು, ನಿರ್ದಿಷ್ಟ ವಿವರಗಳನ್ನು ಪ್ರತಿಮಾತ್ಮಕವಾಗಿ ಹಿಡಿದಿಡುವ ವಿಶದ ವಿಧಾನದ ಮೂಲಕ ಲೇಖಕನೊಬ್ಬ ಉತ್ತಮವಾಗುವುದು ಸಾಧ್ಯವಾಗುತ್ತದೆ. ಈ ಗುಣದ ಅಪಾರ ಸಂಚಯ ರಾಜನ್ ಗವಸರಲ್ಲಿದೆ. ಉದಾಹರಣೆಗೆ, ಅವರು ಸುಮ್ಮನೆ “ಸಂಜೆಯಾಯಿತು” ಎನ್ನುವುದಿಲ್ಲ. ಬದಲಿಗೆ, “ಗಲ್ಯಾಗ ಕತ್ತಲಿ ಪಂಢರಿ ಭಸ್ಮದಾಂಗ ದಟ್ಟಾಗಿತ್ತು” ಎನ್ನುತ್ತಾರೆ, ಅಥವಾ, “ಕತ್ತಲಿ ಒಡಕ ಗಡಗಿಯಿಂದ ನೀರು ತೊಟಕಿಧಾಂಗ ತೊಟಕಾಕ ಹತ್ತಿತ್ತು”. ಬಾವಿಯಲ್ಲಿನ ನೀರು ತಾಯಪ್ಪನಿಗೆ “ಕಾಗಿ ಕಣ್ಣಿನಾಂಗ ಕಾಣಿಸ್ತಿತ್ತು”. ಹೀಗೆ ತಮ್ಮ ಪಾತ್ರಗಳ ಜೀವನವನ್ನು ತುಂಬಿರುವ ಪದಾರ್ಥಗಳಿಂದಲೇ ತಮ್ಮ ಪ್ರತಿಮೆಗಳನ್ನು ಆಯ್ದುಕೊಂಡು ವಿಶದತೆಯ ಜೊತೆಗೆ ಲೇಖಕರು ಸಾಂದರ್ಭಿಕತೆಯನ್ನೂ ಸಾಧಿಸುತ್ತಾರೆ.
ಗವಸರ ನೀರೂಪಣಾಶೈಲಿಯ ಇನ್ನೊಂದು ವಿಶೇಷವೆಂದರೆ ಅದು ವಿವರಣೆಗಿಂತಲೂ ಹೆಚ್ಚಾಗಿ ಪಾತ್ರಗಳ ನಡುವಿನ ಸಂಭಾಷಣೆಗಳನ್ನೇ ನಿಯುಕ್ತಿಸುವುದು. ಇದು ಈ ಕಾದಂಬರಿಯ ರೂಪಕತೆಯನ್ನು ಹೆಚ್ಚಿಸಿ ಈ ಮೂಲಕವೇ ನಮ್ಮೆದುರು ಜನಜಾತಿ ಜೀವನದ ಸಮಗ್ರ ಗ್ರಹಿಕೆಯನ್ನು ಸಾದರಪಡಿಸುವುದು.
ಕಾದಂಬರಿಯ ಅನುವಾದ ಶ್ಲಾಘನೀಯವಾಗಿದೆ ಎಂದರೆ ಅದು ನ್ಯೂನೋಕ್ತಿಯೇ ಆಗುವುದು.
ಅನುವಾದಕರಾದ ಚಂದ್ರಕಾಂತ ಪೋಕಳೆಯವರು ಈಗಾಗಲೇ ಅನೇಕ ಅಪರೂಪದ ಕೃತಿಗಳನ್ನು ಮರಾಠಿಯಿಂದ ಕನ್ನಡಕ್ಕೆ ತಂದು ನಮ್ಮನ್ನು ಶ್ರೀಮಂತರನ್ನಾಗಿಸಿದವರು. ಈ ಕಾರ್ಯದಲ್ಲಿನ ಅವರ ನಿಷ್ಠೆ ಹಾಗೂ ಚತುರತೆ ಎರಡೂ ಅಮೋಘವಾದುದು. “ಭಂಡಾರ ಭೋಗ” ಕಾದಂಬರಿಯಲ್ಲಿ ಅವರು ಬಳಸುವ ಭಾಷೆ, ಓದಿಸಿಕೊಳ್ಳಲು ಯಾವುದೇ ತಡೆಯಿರದ ಸರಾಗತೆ ಮತ್ತು ಮೂಲ ಕಾದಂಬರಿಯ ಪಾತ್ರಪ್ರದೇಶಕ್ಕೆ ಅನುಗುಣವಾದ ಪರಿಸರ ಸೃಷ್ಟಿಸುವಲ್ಲಿನ ಅವರ ಸಾಫಲ್ಯ ನಮೂದಿಸಲೇ ಬೇಕಾದ ಗುಣಗಳು. ಅವರು ಬಳಸಿರುವ ಭಾಷೆಯ ಬಗ್ಗೆ ಎರಡು ಮಾತು ಹೇಳಬೇಕು. ಈ ಕಾದಂಬರಿಯ ಪಾತ್ರಪ್ರದೇಶವೆಂದರೆ ಕರ್ನಾಟಕ-ಮಹಾರಾಷ್ಟ್ರದ ಗಡಿ ಪ್ರದೇಶ. ಪೋಕಳೆಯವರು ಬೆಳಗಾವಿ ಆಸುಪಾಸಿನ ಗಡಿಪ್ರದೇಶದ ಮಿಶ್ರಕನ್ನಡವನ್ನೇ ಬಳಸುತ್ತಾರೆ. ಇದು ಮೊದಲನೆಯದಾಗಿ ಸಾಂದರ್ಭಿಕ ಸಹಜತೆ ಹೊಂದಿದೆ. ಇನ್ನೊಂದು ದೃಷ್ಟಿಯಿಂದ ಈ ಪ್ರಯೋಗ ಮುಖ್ಯವಾಗುತ್ತದೆ. ಅದೆಂದರೆ, ಭಾಷಾಭಿಮಾನದ ತರಾತುರಿಯಲ್ಲಿ ಅನ್ಯಭಾಷೆ-ಭಾಷಿಕರ ಕುರಿತು ಅಸಹನೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಪೋಕಳೆಯವರ ಪ್ರಯೋಗ ನಮಗೆ ನಮ್ಮ ದುಭಾಷಿತ್ವ/ಬಲುಭಾಷಿತ್ವದ ನೆನಪನ್ನು ಮತ್ತೆ ಮತ್ತೆ ಮಾಡಿಸುತ್ತದೆ. ಯಾವ ಭಾಷೆಯೂ ಸಂಪೂರ್ಣವಾಗಿ ಒಂದು ಮಡಿವಂತ ರೂಪದಲ್ಲಿರದೇ ಹಲವು ಸಂಸ್ಕೃತಿಮಿಶ್ರಣಗಳ ಮಾಧ್ಯಮವಾಗಿರುತ್ತದೆ ಎನ್ನುವುದನ್ನು ಕಾದಂಬರಿಯ ಈ ಅನುವಾದ ನಮಗೆ ಜ್ಞಾಪಿಸುತ್ತದೆ.
“ಭಂಡಾರ ಭೋಗ” ಕಾದಂಬರಿಯ ವಿಶಿಷ್ಟತೆ ಎಂದರೆ – ಹಾಗೂ ಈ ನಿಟ್ಟಿನಲ್ಲಿ ಅದರ ಅನುವಾದಿತ ಕೃತಿ ಅಷ್ಟೇ ಸಶಕ್ತವಾಗುತ್ತದೆ – ಇದು ಹಲವು ರೀತಿಗಳಲ್ಲಿ ಗಡಿಯ ಕುರಿತಾಗಿಯೇ ಇದೆಯೆನ್ನುವುದು. ಇಲ್ಲಿನ ಪ್ರಮುಖ ಪಾತ್ರಗಳು ಹೆಣ್ಣು-ಗಂಡು ಲಿಂಗಭಾವದ ಗಡಿಗಳಲ್ಲಿರುವವರು. ಜೋಗಪ್ಪಗಳು ಈ ರೀತಿ ಗಂಡಸುತನದ ಗಡಿಯಲ್ಲಿ ಹೆಣ್ಣಿನ ರೂಪದಲ್ಲಿ ಜೀವಿಸುವವರು. ಅವರ ಇರವಿನ ಕುರಿತ ಅವರದೇ ದೃಷ್ಟಿಕೋನದಲ್ಲಿ ಸಹ ಇತ್ಯಾತ್ಮಕ ನಂಬಿಕೆಯಿಲ್ಲ. ಅವರು ತಮ್ಮ ಸ್ವಸ್ವರೂಪವನ್ನು ತೊಡಲೂ ಆಗದ, ಬಿಡಲೂ ಆಗದ ಇಬ್ಬಂದಿತನದಲ್ಲಿಯೇ ಜೀವಿಸುತ್ತಾರೆ. ಅದರಂತೆಯೇ ಅವರ ಈ ಸ್ಥಿತಿಗೆ ಮೂಲಕಾರಣವಾದ ಗುಡ್ಡದ ಎಲ್ಲವ್ವನ ಕರುಣೆಯ ಕುರಿತ ನಂಬಿಕೆಯೂ ಪ್ರಶ್ನಾತೀತವಲ್ಲ, ಹಾಗೆಂದು ಪ್ರಶ್ನಿಸುವ ಧಾರ್ಷ್ಟ್ಯವೂ ಇಲ್ಲ.
ಹೀಗೆ ದೈವದಾಟದ ಕುರಿತಾಗಲೀ, ತಮ್ಮದೇ ಸಾಮಾಜಿಕ ಸ್ಥಿತಿಯ ಕುರಿತಾಗಲೀ ಅವರ ನಿಲುವು ಗಡಿಯ ಅತ್ತಲೂ ಅಲ್ಲ, ಇತ್ತಲೂ ಅಲ್ಲ ಎನ್ನುವಂತಹ ಎಲ್ಲೆಯೇ ನೆಲೆಯಾಗುವ ಇಬ್ಬಂದಿತನದ್ದೇ ಆಗಿದೆ. ಹೀಗಿರುವ ಅವರ ಇಬ್ಬಂತಿತನವನ್ನು ಈ ಅನುವಾದಿತ ಕೃತಿ ತನ್ನ ಅತ್ತ ಕನ್ನಡವೂ ಹೌದು, ಮರಾಠಿಯೂ ಹೌದು ಎನ್ನುವಂತಹ ಮಿಶ್ರನುಡಿಯಲ್ಲಿ ಸತ್ವಯುತವಾಗಿ ಪ್ರಸ್ತುತಪಡಿಸುತ್ತದೆ. ಈ ದೃಷ್ಟಿಯಿಂದ “ಭಂಡಾರ ಭೋಗ” ಕಾದಂಬರಿಯ ಅನುವಾದವು ಕನ್ನಡ ಅಕ್ಷರಲೋಕಕ್ಕೆ ಬಲುಮೂಲ್ಯ ಸೇರ್ಪಡೆ.
# tellkamalakar@gmail.com
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯುವ ಕಮಲಾಕರ ಕಡವೆ ಅನುವಾದಕರೂ ಹೌದು.
ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017) ಇವರ ಪ್ರಕಟಿತ ಕವನ ಸಂಕಲನಗಳು.
ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ