ದೇವರು ತೃಪ್ತನಾಗಿರಬಹುದು

ಇರುಳು ಹರಿದು
ಹಗಲು ಬರುವ ಹೊತ್ತಿಗೆ
ಇಬ್ಬನಿಯ ಮೃದು ಬಿಂದುಗಳ
ಸಿಂಚನದ ಬಣ್ಣ ಬಣ್ಣದ ಹೂವುಗಳ
ಅಜ್ಜ ಕೀಳುತ್ತಾನೆ.

ಕೈನಡುಗುವ ಬೆಳಗಿನ ಚಳಿಯಲ್ಲಿ
ಹೂವಿನಪಕಳೆ ಹರಿಯುತ್ತದೆ.
ಅಬ್ಬಿ ಒಲೆಗೆ ಕೈ ಒಡ್ಡಿಕೂರುತ್ತಾನೆ.
ಬೆಚ್ಚಗೆ ಹೊಗೆಯಾಡುವ ಅಬ್ಬಿಯಲ್ಲಿ
ಮಿಂದು,
ದೇವರ ನಾಮದೊಂದಿಗೆ ಮಡಿ ಉಡುತ್ತಾನೆ.

ಬೊಡ್ಡೆ ತುಂಬ ಮಡಿನೀರು,
ತಳೆದ ಗಂಧ
ದೇವರ ನಂದಾ ದೀಪ
ಆರತಿ ಗಂಧದ ಕಡ್ಡಿ, ಗಂಟೆಗಳ ನಾದ.

ಎಂದಿನಂತೆ ಇಂದಿಗೂ ಹೊರಜಗುಲಿಗೆ
ಕೂತು ಭಗವದ್ಗೀತೆ ಓದುತ್ತಾನೆ
ಅಜ್ಜನೂ,
ದೇವರು ತೃಪ್ತನಾಗಿರಬಹುದು.!

 

ಸುಮಾ ಕಂಚೀಪಾಲ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನವರು
ಎಸ್ . ಡಿ. ಎಂ ಉಜಿರೆ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ
ಕತೆ, ಕವನ ರಚನೆ ಇವರ ಹವ್ಯಾಸ