ಶಶಿಧರ್ ಹಾಲಾಡಿ ಅವರು ಬರೆದ ‘ಕಾಲಕೋಶ’ ಕಾದಂಬರಿಯ ಹರವು 1947 ರಿಂದ ಪ್ರಾರಂಭವಾಗಿ 1984ರ ವರೆಗೂ ಮುಂದುವರೆದಿದೆ. 2002ರ ಗುಜರಾತ್ ಹಾಗೂ ಅದಕ್ಕೂ ನಂತರ ಬರಬಹುದಾದ ಅನೇಕ ವಿಪ್ಲವಗಳ ಕುರಿತಾದ ಮುನ್ಸೂಚನೆಯೂ ಈ ಕಾದಂಬರಿಯಲ್ಲಿದೆ. ಇದರಲ್ಲಿ ಸಿಕ್ಕಿ ನಲುಗುವವರು ಮಾತ್ರ ಅಮಾಯಕರಾದ ಜನಸಾಮಾನ್ಯರು. ಮನುಷ್ಯ ಮೂಲತಃ ಸಂಘಜೀವಿ ಎನ್ನುವದಕ್ಕೇ ಅನುಮಾನ ಬರುವ ಅನೇಕ ಸಂಗತಿಗಳನ್ನು ಇಂದು ನಾವು ಜನಾಂಗೀಯ ಹಿಂಸೆಯಲ್ಲಿ ಕಾಣುತ್ತೇವೆ. ಕಥಾನಾಯಕನ ಹೆಸರೇ ಉಲ್ಲೇಖಿಸದೇ ಸಾಗುವ ವಿಭಿನ್ನ ಶೈಲಿಯ ಕಾದಂಬರಿಯಿದು ಎಂದು ಗುರುತಿಸುತ್ತಾರೆ ಲೇಖಕ ನಾರಾಯಣ ಯಾಜಿ ಸಾಲೇಬೈಲ್
ಜೀವವಿಕಾಸವಾಗುವ ದಿನಗಳಿಂದಲೂ ಅಲೆಮಾರಿತನ ಎನ್ನುವುದು ರೂಢಿಗೆ ಬಂದಿದೆ. ಇದು ಮನುಷ್ಯರೆಂದುಕೊಳ್ಳುವ ನಾವು ನಾಗರಿಕ ಎಂದು ಘೋಷಿಸಿಕೊಂಡಮೇಲೂ ಮುಂದುವರಿದಿದೆ. ಇದಕ್ಕೆ ಮೂಲ ಕಾರಣ ವಾಸವಾಗಿರುವ ಸ್ಥಾನದಲ್ಲಿರುವ ಅಭದ್ರತೆ ಅಥವಾ ಮುಂದೆ ಪಡೆಯುವ ಸುಖದ ಕಲ್ಪನೆಯೇ ಆಗಿದೆ. ಇತಿಹಾಸದ ಉದ್ದಕ್ಕೂ ಇಂತಹ ಅನೇಕ ಘಟನಾವಳಿ ಮಾನವಜಾತಿಗಳಲ್ಲಿ ನಡೆಯುತ್ತಲೇ ಇದೆ. ಇಂತಹ ಘಟನೆಗಳನ್ನು ಹಿಡಿದಿಟ್ಟುಕೊಂಡು ಬರೆದ ಕಾದಂಬರಿ ಶಶಿಧರ ಹಾಲಾಡಿಯವರ “ಕಾಲಕೋಶ” ಅನೇಕ ದೃಷ್ಟಿಯಿಂದ ಗಮನ ಸೆಳೆಯುವ ಕಾದಂಬರಿ.
ಹಿಂಸೆಯ ವಿಜೃಂಭಣೆ ಮತ್ತು ಮನುಷ್ಯನ ಕ್ರೌರ್ಯ ಅನಾವರಣಗೊಳ್ಳಲು ಕಾರಣಗಳೇ ಬೇಕಿಲ್ಲ ಎನ್ನುವುದರ ಜೊತೆಗೆ ಇದೇಕೆ ಹೀಗೆ ಎನ್ನುವ ಪ್ರಶ್ನೆಯನ್ನೂ ಓದುಗರಲ್ಲಿ ಮೂಡುತ್ತದೆ. ದೇಶವಿಭಜನೆ ಮತ್ತು ಆ ಹೊತ್ತಿಗೆ ಪಾಕಿಸ್ಥಾನದಲ್ಲಿ ನಡೆದ ಜನಾಂಗೀಯ ಹಿಂಸೆಯಿಂದಾಗಿ ಅಲ್ಲಿನ ತಮ್ಮ ತಮ್ಮ ಆಸ್ತಿ ಪಾಸ್ತಿ ಮನೆ ಮಠ ಎಲ್ಲವನ್ನೂ ತೊರೆದು ಭಾರತಕ್ಕೆ ಓಡಿಬಂದ ಸಿಖ್ ಜನಾಂಗದವರನ್ನು ಕೇಂದ್ರವನ್ನಾಗಿ ಇರಿಸಿಕೊಂಡು ಆ ಮೂಲಕ ಮಾನವನ ಕ್ರೌರ್ಯದ ಇನ್ನೊಂದು ಮುಖವನ್ನು ತೋರಿಸಿದ್ದಾರೆ.
ಹರವು 1947 ರಿಂದ ಪ್ರಾರಂಭವಾಗಿ 1984ರ ವರೆಗೂ ಮುಂದುವರಿದು ಮುಂದೆ 2002ರ ಗುಜರಾತಿ ಹಾಗೂ ಅದಕ್ಕೂ ನಂತರ ಬರಬಹುದಾದ ಅನೇಕ ವಿಪ್ಲವಗಳ ಕುರಿತಾದ ಮುನ್ಸೂಚನೆಯೂ ಈ ಕಾದಂಬರಿಯಲ್ಲಿದೆ. ಇದರಲ್ಲಿ ಸಿಕ್ಕಿ ನಲುಗುವವರು ಮಾತ್ರ ಅಮಾಯಕರಾದ ಜನಸಾಮಾನ್ಯರು. ಮನುಷ್ಯ ಮೂಲತಃ ಸಂಘಜೀವಿ ಎನ್ನುವದಕ್ಕೇ ಅನುಮಾನ ಬರುವ ಅನೇಕ ಸಂಗತಿಗಳನ್ನು ಇಂದು ನಾವು ಜನಾಂಗೀಯ ಹಿಂಸೆಯಲ್ಲಿ ಹಿಟ್ಲರ್, ತಾಲಿಬಾನ್, ತುರ್ಕಿಯ ISIS, ಕಾಶ್ಮೀರದ ಪಂಡಿತರ ಬವಣೆ, ಎಲ್ಲಕ್ಕಿಂತ ಮೂಲವಾಗಿ ಅಮೇರಿಕಾ ಮತ್ತು ಆಸ್ಟ್ರೇಲಿಯಾದ ಮೂಲನಿವಾಸಿಗಳ ಮೇಲಿನ ಬಿಳಿಯರ ದೌರ್ಜನ್ಯಗಳಲ್ಲಿ ಗಮನಿಸಬಹುದು. ಅಲ್ಲಿನ ಕ್ರೌರ್ಯ, ಮೃಗೀಯ ಗುಣಗಳು ಮನುಕುಲಕ್ಕೆ ಕಳಂಕ ಮತ್ತು ಅಪರಾಧವೂ ಹೌದು. ಇಂತಹ ಸಂಗತಿಗಳೆಲ್ಲದರ ಕುರಿತು ಚರ್ಚಿಸುವಾಗಾಗಲೀ ಅಥವಾ ಬರೆಯುವಾಗಲೀ ಲೇಖಕನೂ ಯಾವುದೋ ಒಂದು ಪದರಿನಲ್ಲಿ ನಿಂತು ಹಿಂಸೆಯನ್ನು ವೈಭವೀಕರಿಸುವುದೂ ಉಂಟು. ಅದ್ಯಾವದೂ ಇಲ್ಲದೇ ತಣ್ಣಗೆ ತಾನೂ ಸಹ ಒಂದು ಪಾತ್ರವಾಗಿ ಓದುಗನನ್ನೂ ಅದರಲ್ಲಿ ಭಾಗಿಯಾಗಿಸುತ್ತಾ ಓದಿ ಮುಗಿಸಿದ ಮೇಲೆ ಇದು ಹೀಗೇಕೆ ಎಂದು ನಮ್ಮೊಳಗೆ ನಾವೇ ಅವಲೋಕನ ಮಾಡಿಕೊಳ್ಳುವ ಸಂಯಮದ ಬರವಣಿಗೆಯಲ್ಲಿ ಇಡೀ ಕಾದಂಬರಿ ಸಾಗುತ್ತದೆ.
ಶಶಿಧರ ಹಾಲಾಡಿಯವರು ವೃತ್ತಿಯಿಂದ ಬ್ಯಾಂಕಿನಲ್ಲಿ ಮಹತ್ವದ ಹುದ್ದೆಯನ್ನು ನಿರ್ವಹಿಸಿ ನಂತರ ಪತ್ರಿಕೋದ್ಯಮಕ್ಕೆ ಕಾಲಿಟ್ಟವರು. ಅವರ ಈ ಕಾದಂಬರಿಯ ಕೇಂದ್ರಬಿಂದು ದೆಹಲಿ. ದೆಹಲಿಯೆಂದರೆ ಮಹಾಕಾವ್ಯಗಳ ದಿನಗಳಿಂದಲೂ ಒಂದು ಅಧಿಕಾರದ ಆಕರ್ಷಣೆಯ ಕೇಂದ್ರ. ಸಿಂಹಾಸನಕ್ಕಾಗಿ ನಡೆದ ಜಗಳ, ದೊಂಭಿ, ಕ್ರಾಂತಿ, ಆಕ್ರಮಣ ಅಸೂಯೆ ದಾಯಾದಿಗಳ ಜಗಳ ಹೀಗೆ ಎಲ್ಲ ವಿಧವಾದ ತಂತ್ರ ಕುತಂತ್ರಗಳನ್ನು ಕಂಡ ನಗರ. ಇಲ್ಲಿನ ಕಲ್ಲುಮಣ್ಣಿನಲ್ಲಿ ನೀರಿಗಿಂತಲೂ ರಕ್ತ ಇಂಗಿದ್ದೇ ಹೆಚ್ಚು. ಅಲ್ಲಿ ಕಟ್ಟಿದ ಕೋಟೆ, ಗುಡಿ, ಗುರುದ್ವಾರ ಮಸೀದಿಗಳೆಲ್ಲವೂ ವಿಜಯವೆನ್ನುವ ರಕ್ತಪಾತದ ಕುರುಹುಗಳಾಗಿವೆ. ಇಷ್ಟೆಲ್ಲ ಇದ್ದರೂ ಊರುಬಿಟ್ಟು ಬರುವ ನಿರಾಶ್ರಿತರಿಗೆ ದೆಹಲಿ ಆಶ್ರಯತಾಣವೂ ಹೌದು.
ದೇಶವಿಭಜನೆಯ ನಿರಾಶ್ರಿತನಾಗಿ ಬಂದು ತ್ರಿಲೋಕಪುರಿಯಲ್ಲಿ ನೆಲೆಸಿರುವ ಅಮರಸಿಂಗ್ ಎನ್ನುವ ವೃದ್ಧನ ಮೇಲೆ ಕೇಂದ್ರೀಕರಿಸಿ ಇಲ್ಲಿ ಕಥೆ ಹೆಣೆದಿದ್ದಾರೆ. ಲಾಹೋರಿನ ಸ್ಥಿತಿವಂತ ಅಮರ ಸಿಂಗ್ ಲಾಹೋರನ್ನು ಬಿಟ್ಟು ಬಂದರೂ ಹುಟ್ಟಿದ ಊರು ಅವನನ್ನು ಕಾಡುತ್ತಿರುತ್ತದೆ. ಜನಾಂಗೀಯ ಗಲಾಟೆಯಲ್ಲಿ ಎಲ್ಲವನ್ನೂ ಬಿಟ್ಟು ಜೀವ ಕೈಯಲ್ಲಿ ಹಿಡಿದು ಹೊರಟಿದ್ದು ಅಮೃತಸರಕ್ಕಾದರೂ ಬಂದು ಸೇರುವುದು ದೆಹಲಿಗೆ. ಇಲ್ಲಿಯೂ ಅವರಿಗೆ ಆಶ್ರಯವಾಗಿ ದೊರೆತಿರುವುದು ಇಲ್ಲಿಂದ ಅದೇ ಕಾರಣಗಳಿಗಾಗಿ ಊರು ತೊರೆದು ಪಾಕಿಸ್ಥಾನಕ್ಕೆ ಹೋದವರ ಅರ್ಧಮರ್ದ ಬೆಂದು ಉಳಿದ ಮನೆಗಳೇ.
ಹೀಗೆ ಬರುವಾಗ ನಡುವೆಸಿಕ್ಕ ಯಾವಾತನೋ ಅನಾಥ ಹುಡುಗನನ್ನು ಕರೆದುಕೊಂಡು ಅವನನ್ನು ದೆಹಲಿಯ ಅವನ ಸಂಬಂಧಿಕರ ಮನೆಗೆ ಸೇರಿಸುವ ಹೊಣೆ. ಈ ಹೊತ್ತಿನಲ್ಲಿ ಇವನ ಮಗ ಕಳೆದು ಹೋಗುತ್ತಾನೆ. ಮಗನನ್ನು ನೆನೆಯುತ್ತಾ ಎದುರಿಗೆ ಕಾಣುವ ಯುವಕರಲ್ಲೆಲ್ಲಾ ಕಳೆದುಹೋದ ತನ್ನ ಮಗನನ್ನು ಕಾಣಲು ಪ್ರಯತ್ನಿಸುವ ಅವನ ಹೆಂಡತಿ ರಜನಿ ಸಿಂಗ್; ಅದರೊಟ್ಟಿಗೆ 1947-48ರ ಮಹಾತ್ಮಾ ಗಾಂಧಿಯವರ ಕೊಲೆಯ ನೆವದಿಂದ ಹಿಂಸೆಗೆ ಗುರಿಯಾಗಿ ಊರು ಬಿಡಬೇಕಾದ ಗೋಡ್ಸೆ ಎನ್ನುವ ಅಡ್ಡಹೆಸರುಳ್ಳ ಕುಟುಂಬ. ಅವರು ಬರುವದೂ ಸಹ ದೆಹಲಿಗೆ. ಸಿಖ್ಖರಿಗಾದರೆ ತಮ್ಮ ಜನಾಂಗದ ಕುರಿತು ಹೆಮ್ಮೆ ಇದೆ. ಇಲ್ಲಿ ಗೋಡ್ಸೆ ಎನ್ನುವ ಅಡ್ಡ ಹೆಸರಿರುವವರಿಗೆ ಅದನ್ನು ಮರೆಮಾಚಿ ಬದುಕಬೇಕಾದ ಪರಿಸ್ಥಿತಿ ಇದೆ. ಈ ಕುಟಂಬವೂ ತಮ್ಮ ಸಹೋದರನನ್ನು ಕಳೆದುಕೊಂಡಿದೆ. ಅವನಿಗಾಗಿ ಹುಡುಕಾಡುವ ನಾರಾಯಣ ಆಪ್ಟೆಯವರ ಹೆಂಡತಿ ಕಮಲಾ, ಅವರಿಗೂ ರತ್ನಗಿರಿಯ ತನ್ನೂರಿನ ಆಪೂಸು ಮಾವಿನ ಹಣ್ಣಿನ ನೆನಪು. ಈ ಇಬ್ಬರ ಮಧ್ಯೆ ಲೇಖಕನ ಕುಟುಂಬವೂ ಸಹ ಕಾಡುಗಳ್ಳ ವೀರಪ್ಪನನ್ನು ನೆನಪಿಸುವ ಗಂಧದ ಕಳ್ಳನೋರ್ವ ಅವರ ದೊಡ್ಡಪ್ಪನ್ನು ಹತ್ಯೆಮಾಡಿದ ಕಾರಣ ತಮ್ಮ ಹುಟ್ಟೂರನ್ನು ತೊರೆದಿದ್ದಾರೆ. ಕೆಲಸ ಮಾಡುವ ಬ್ಯಾಂಕಿನಲ್ಲಿಯೂ ಶಿಕ್ಷೆಗೆ ಗುರಿಯಾಗಿ ದೆಹಲಿಗೆ ವರ್ಗಾವಣೆಗೊಂಡ ನಿರಾಶ್ರಿತನೂ ಹೌದು.
ದೇಶವಿಭಜನೆ ಮತ್ತು ಆ ಹೊತ್ತಿಗೆ ಪಾಕಿಸ್ಥಾನದಲ್ಲಿ ನಡೆದ ಜನಾಂಗೀಯ ಹಿಂಸೆಯಿಂದಾಗಿ ಅಲ್ಲಿನ ತಮ್ಮ ತಮ್ಮ ಆಸ್ತಿ ಪಾಸ್ತಿ ಮನೆ ಮಠ ಎಲ್ಲವನ್ನೂ ತೊರೆದು ಭಾರತಕ್ಕೆ ಓಡಿಬಂದ ಸಿಖ್ ಜನಾಂಗದವರನ್ನು ಕೇಂದ್ರವನ್ನಾಗಿ ಇರಿಸಿಕೊಂಡು ಆ ಮೂಲಕ ಮಾನವನ ಕ್ರೌರ್ಯದ ಇನ್ನೊಂದು ಮುಖವನ್ನು ತೋರಿಸಿದ್ದಾರೆ.
ಈ ಎಲ್ಲದರ ನಡುವೆ ದೆಹಲಿಯಲ್ಲಿ ಮೂಲನಿವಾಸಿಗಳು ಎಂದುಕೊಂಡವರ ಪ್ರತಿನಿಧಿಯಾಗಿ ಬರುವ ಬಿಪಿನ್; ಅವನಿಗೆ ಇವರೆಲ್ಲಾ ಹೊರಗಿನವರು ಎನ್ನುವ ಭಾವದ ಮೂಲಕ ಒಳಗಿನವರು ಮತ್ತು ಹೊರಗಿನವರು ಎನ್ನುವ ಕುದಿಮೌನದ ಅಸಹನೆಯನ್ನು ತೋರಿಸುತ್ತಾ ಇರುತ್ತಾನೆ. ಇಲ್ಲಿ ಬಿಪಿನ್ ಹಾಗೂ ದೆಹಲಿಯ ಮೂಲನಿವಾಸಿಗಳ ಅಸಹನೆಯನ್ನು ಸ್ವಲ್ಪ ವಿಸ್ತರಿಸಬಹುದಾಗಿದ್ದರೂ ಅದನ್ನು ಸೂಕ್ಷ್ಮವಾಗಿ ವಿವರಿಸಿ ಹಾಗೇ ಬಿಟ್ಟಿದ್ದಾರೆ. ಇಂದಿರಾಗಾಂಧಿಯವರ ಹತ್ಯೆಯೆನ್ನುವದು ಇವೆಲ್ಲದಕ್ಕೂ ಒಂದು ವ್ಯಾಜವಾಗಿ ಮತ್ತೊಮ್ಮೆ ಸಿಖ್ಖರ ಮೇಲಿನ ಮತ್ತೊಂದು ದೊಂಬಿಗೆ ಹೇತುವಾಗುತ್ತದೆ. ಸುಮಾರು 2500 ದಿಂದ 4೦೦೦ ಸಿಕ್ಖರ ಮಾರಣಹೋಮ ನಡೆಯುವ ಘಟನೆ ಬರುತ್ತದೆ.
ಈ ಹೊತ್ತಿನ ಘಟನೆಯ ವಿಷಾದವನ್ನು ಅಮರ್ ಸಿಂಗನ ಬಾಯಲ್ಲಿ ನುಡಿಸುವದು ಹೀಗೆ “ಅವತ್ತು ಲಾಹೋರಿನಿಂದ ಓಡಿ ಬಂದೆವು, ಈ ದೇಶ ನಮಗೆ ಆಶ್ರಯ ಕೊಡುತ್ತೆ ಅಂತ. 37 ವರ್ಷ ಆಯಿತು…. ಈ ದೆಹಲಿಯನ್ನು ನಮ್ಮೂರು ಅಂತ ತಿಳಿದುಕೊಂಡಿದ್ದೆವು, ಅದು ಪೂರ್ತಿ ಭ್ರಮೆ ಅಂತ ಈ ಮೂರು ದಿನಗಳಲ್ಲಿ ಗೊತ್ತಾಯಿತು…. ಅದಕ್ಕೆ ಇರಬೇಕು ಅವತ್ತು ಸ್ವರ್ಣ ಮಂದಿರದಲ್ಲಿ ನಮ್ಮವರು ಬಂದೂಕು ಹಿಡಿದು ಕುಳಿತು, ಬೇರೆ ದೇಶ ಕೊಡಿ ಎಂದು ಹೋರಾಡಿದ್ದು… ಈ ದೆಹಲಿಯಲ್ಲಿ ನಾವು ಪರಕೀಯರು….” ಹೀಗೆ ಹೇಳುವಾಗ ಅದು ದಂಗೆ ದೊಂಬಿಗಳ ನಂತರ ಉಳಿದ ತಬ್ಬಲಿಗಳ ಪ್ರಶ್ನೆಯಾಗಿ ನಮ್ಮೆದುರು ನಿಲ್ಲುತ್ತದೆ.
ನಾರಾಯಣ ಆಪ್ಟೆ, ಅವರ ಹೆಂಡತಿಗೆ ಮನೆತನದ ಗೋಡ್ಸೆ ಎನ್ನುವ ಹೆಸರಿಲ್ಲ ಎನ್ನುವ ಚಿಂತೆಗಳಿಗಿಂತಲೂ ಈ ದೇಶ ನಮ್ಮದಲ್ಲ ಎನ್ನುವ ಸಿಖ್ಖರು ಮತ್ತು ಆ ಮೂಲಕ ಇನ್ನಿತರ ಅಲ್ಪಸಂಖ್ಯಾತರನ್ನು ಕಾಡುವ ಅಭದ್ರತೆಯ ಪ್ರಶ್ನೆ ನಮ್ಮೆದುರು ವರ್ತಮಾನ ಕಾಲದಲ್ಲಿನ ಅನೇಕ ಸಮಸ್ಯೆಗಳಿಗೆ ದೊಡ್ಡ ಪ್ರಶ್ನೆಯಾಗಿಬಿಡುತ್ತದೆ. ಮಾನವೀಯ ಸಂಬಂಧವನ್ನು ಮರೆತು ನಾವುಗಳೆಲ್ಲ ನಮ್ಮಷ್ಟಕ್ಕೆ ಕಟ್ಟಿಕೊಂಡ ಪಂಜರದಲ್ಲಿ ಬಂಧಿಯಾಗಿದ್ದೇವೆ. ಮನುಷ್ಯ ಮನುಷ್ಯರ ನಡುವೆ ಸಂವಹನದ ಕೊರತೆಯನ್ನು ಕಾಲಕೋಶ ನಿರಂತರವಾಗಿ ಎಚ್ಚರಿಸುತ್ತಲೇ ಇರುತ್ತದೆ.
ಇಲ್ಲಿ ಕಥಾನಾಯಕನ ಹೆಸರನ್ನು ಹಾಲಾಡಿಯವರು ಎಲ್ಲಿಯೂ ಹೇಳುವುದಿಲ್ಲ. ಎಷ್ಟೆಂದರೆ ಗಲಭೆಕೋರರು ಇವರನ್ನು ಸಿಖ್ ಇರಬೇಕೆಂದು ತಡೆದಾಗ ನಾರಾಯಣ ಆಪ್ಟೆ ತನ್ನ ಹೆಸರನ್ನು ಹೇಳುತ್ತಾರೆ, ನಾಯಕ ತನ್ನ ಹೆಸರನ್ನೂ ಹೇಳುತ್ತಾನೆ; ಆ ವ್ಯಕ್ತಿ ನಾವೇ ಆಗಿರಬಹುದಲ್ಲವೇ. ಕಥೆಯಲ್ಲಿ ಬರುವ ನೋವಿಗೆ ನಾವು ಕೇವಲ ಅನುಕಂಪ (Sympathy) ವ್ಯಕ್ತಪಡಿಸಿದರೆ ಸಾಲದು ಸಂವೇದನೆಯೂ (Empathy) ಬೇಕೆನ್ನುವದನ್ನು ಹಾಲಾಡಿಯವರು ಕಾದಂಬರಿಯುದ್ದಕ್ಕೂ ತಿಳಿಸುತ್ತಾ ಬಂದಿದ್ದಾರೆ.
ಕಾದಂಬರಿ ತಿರುವುಗಳನ್ನು ಪಡೆದುಕೊಳ್ಳುವದೂ ಇಲ್ಲಿಯೇ ಎಲ್ಲವನ್ನೂ ಕಳೆದುಕೊಂಡ ಅಮರ ಸಿಂಗ್ ವಿಷಣ್ಣನಾಗಿ ನಿಂತಿದ್ದರೆ ಗಲಭೆಕೋರರ ಗುಂಪನ್ನು ಚದುರಿಸಿದ ಪೋಲಿಸ್ ಇನ್ಸ್‌ಪೆಕ್ಟರ್ ಓರ್ವನಲ್ಲಿ ರಜನಿ ಸಿಂಗ್ ಅವನ್ ಅವನಲ್ಲಿ ತನ್ನ ಮಗನನ್ನು ಕಾಣುತ್ತಾಳೆ. ಆಕೆಗೆ ಆತ ತನ್ನ ಮಗನೇ ಹೌದು ಎನ್ನುವುದಕ್ಕೆ ಪುರಾವೆ ಆತನ ಧೈರ್ಯ ಮತ್ತು ಆತ ಆಕೆಯ ಕಡೆಗೆ ನೋಡಿ ನಕ್ಕು, ‘ಗಲಭೆ ಕಡಿಮೆ ಆಗಲಿ ಫಿರ್ ಆವೂಂಗಾ’ ಎನ್ನುವ ಮಾತುಗಳು. ಲಾಹೋರಿನಿಂದ ಬರುವಾಗ ಸಿಕ್ಕ ಯಾರದೋ ಮಗು ಅವರ ಸಂಬಂಧಿಕರ ಮನೆಯಲ್ಲಿ ಸೇರಿಸಿದರೂ ಆತ ಸಮಾಜದ್ರೋಹಿಯಾಗಿ ಜೈಲು ಸೇರುತ್ತಾನೆ. ಆದರೆ 1947ರ ಗಲಭೆಯಲ್ಲಿ ಕಳೆದು ಹೋದ ಮಗ 1984ರ ಗಲಭೆಯಲ್ಲಿ ಸಿಕ್ಕಿದ್ದಾನೆ ಎನ್ನುವ ಸಮಾಧಾನ ಆ ತಾಯಿಗೆ.
ಕಾದಂಬರಿ ಪಡೆದುಕೊಳ್ಳುವ ತುರೀಯಾವಸ್ಥೆ ಇದು. They lived happily ever after ಎಂದು ಕಥೆಯ ಕೊನೆಗೆ ಬಯಸುವ ಓದುಗನ ಅಂತಃಪ್ರಜ್ಞೆಗೆ ಕೊಂಚ ಸಮಾಧಾನ ಸಿಗುವ ತಂತ್ರವನ್ನು ಚೆನ್ನಾಗಿ ಬಳಸಿದ್ದಾರೆ. ಈ ನಡುವ ಇದಕ್ಕೆ ಹೊಂದುವಂತೆ ಸುಪ್ತವಾಗಿದ್ದ ಕಥಾ ನಾಯಕನ ಮತ್ತು ಆಪ್ಟೆಯವರ ಮಗಳು ಚಂದ್ರಿಕಾಳ ಪ್ರೇಮವೂ ನವಿರಾಗಿ ಬಂದಿದೆ. ಬೆಂದ ಬೂದಿಯಲ್ಲಿ ಚಿನ್ನ ಹುಡುಕುವ ರಜನಿಸಿಂಗ್ ಒಂದು ಕಡೆ ಆದರೆ ನಾಯಕನಿಗೆ ಮತ್ತೆ 2002ರಲ್ಲಿ ಇನ್ನೊಂದು ಗಲಭೆಗೆ ಈ ದೇಶ ಸಿದ್ಧವಾಗಬೇಕಿದೆ ಎನ್ನುವ ಭವಿಷ್ಯವನ್ನು ಸಾಧುವೋರ್ವ ನುಡಿಯುವದು ಕಾಲಕೋಶದಲ್ಲಿರುವ ಗೂಢವನ್ನು ಮುಂಗಾಣಿಸಿದ್ದಾರೆ.
ಕಾಲಕೋಶವೆನ್ನುವದು ತನ್ನೊಡಲಲ್ಲಿ ಬಚ್ಚಿಟ್ಟ ಜನಾಂಗಗಳ ಸುಖ, ದುಃಖ, ನೋವು, ನಲಿವುಗಳು. ಡಾ. ರಾಧಾಕೃಷ್ಣರು “ನಾಗರಿಕತೆ ಎಂದರೆ ಮನುಷ್ಯ ವಿಕಾಸದ ಪಥದಲ್ಲಿ ಪಡೆಯುವದು. ಹಾಗೆ ಪಡೆದದ್ದರಿಂದ ಏನಾದ ಎನ್ನುವುದು ಸಂಸ್ಕೃತಿ” ಎಂದಿದ್ದಾರೆ. ಕಾಲಕೋಶವನ್ನು ಬಿಡಿಸಿದಾಗ ಇತಿಹಾಸವೆನ್ನುವದು ಹಿಂಸೆಗಳ ಆಕ್ರಂದನವೋ ಮಾನವೀಯತೆಯನ್ನು ಬೋಧಿಸುವ ನೀತಿಪಾಠವೋ ಎನ್ನುವುದು ನಿರಂತರ ನಡೆದ ಚರ್ಚೆ. ಭವಿಷ್ಯ ನಿಂತಿರುವದು ಭೂತಕಾಲದ ಪಂಚಾಂಗದ ಮೇಲೆಯಲ್ಲವೇ.
(ಕೃತಿ: ಕಾಲಕೋಶ, ಲೇಖಕರು: ಶಶಿಧರ್ ಹಾಲಾಡಿ, ಪ್ರಕಾಶಕರು: ಅಂಕಿತ ಪ್ರಕಾಶನ, ಬೆಲೆ: 160/-)
ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.
ಭವಿಷ್ಯ ನಿಂತಿರುವುದು ಭೂತದ ಪಂಚಾಂಗದ ಮೇಲೆಂದು ಹೇಳುತ್ತ ತುಂಬ ಚೆನ್ನಾಗಿ ಶಶಿಧರ ಹಾಲಾಡಿಯವರ ‘ ಕಾಲಕೋಶ’ ಕಾದಂಬರಿಯನ್ನು ವಿಶ್ಲೇಷಿಸಿದ್ದಾರೆ ನಾರಾಯಣ ಯಾಜಿಯವರು.ನಿಮ್ಮ ಅಭಿಪ್ರಾಯಕ್ಕೆ ನನ್ನದು ನೂರಕ್ಕೆ ನೂರು ಸಹಮತ. ಕಾದಂಬರಿಯ ವಸ್ತು ಅತ್ಯಂತ ಸೂಕ್ಷ್ಮವಾಗಿದ್ದೂ ಎಲ್ಲೂ ತುಸುವು ಹದತಪ್ಪದಂತೆ ಅದನ್ನು ನಾಜೂಕಾಗಿ ನಿರೂಪಿಸಿದ್ದಾರೆ ಲೇಖಕರು. ಕೃತಿಯ ಲೇಖಕರಿಗೂ, ಲೇಖನದ ಕರ್ತೃವಿಗೂ ಅಭಿನಂದನೆಗಳು
ಗಜಾನನ ಶರ್ಮಾ
ಹುಕ್ಕಲು
ತುಂಬಾ ಧನ್ಯವಾದಗಳು ಗಜಾನನ ಶರ್ಮರಿಗೆ
ಖ್ಯಾತ ಪತ್ರಕರ್ತ ಶಶಿಧರ ಹಾಲಾಡಿಯವರ ಅಪ್ರತಿಮ ಕಾದಂಬರಿ ಕಾಲಕೋಶದ ಕುರಿತು ಸಮಗ್ರ ಅಧ್ಯನ ಮಾಡಿದ ಅರ್ಥಧಾರಿ ಹಾಗೂ ಅಂಕಣಕಾರ ನಾರಾಯಣ ಯಾಜಿಯವರ ವಿಸ್ತೃತ ವಿಶ್ಲೇಷಣೆ ಕಾದಂಬರಿಯ ಓದುವ ಕುತೂಹಲವನ್ನು ಕೆರಳಿಸಿದೆ. ಈ ಲೇಖನ ಕಾದಂಬರಿಯ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವುದರ ಜತೆಗೆ ಯಾಜಿಯವರ ಅಧ್ಯಯನಶೀಲತೆಯನ್ನೂ ಪ್ರತಿಬಿಂಬಿಸಿದೆ. ಇದೊಂದು ಉತ್ತಮ ಲೇಖನ.
ನಿಮ್ಮ ಅನಿಸಿಕೆಗಳಿಗೆ ತುಂಬಾ ಧನ್ಯವಾದಗಳು
ಅದ್ಭುತ ಕಾದಂಬರಿ. ಹಾಲಾಡಿಯವರ ಚಿತ್ರಣ ಸೊಗಸಾಗಿದೆ. ನಾರಾಯಣ ಯಾಜಿಯವರು ಸುಂದರವಾಗಿ ವಿಮರ್ಶೆಯನ್ನು ಕಟ್ಟಿ ಕೊಟ್ಟಿದ್ದಾರೆ.
ಧನ್ಯವಾದಗಳು ಸರ್ ನಿಮ್ಮ ಪ್ರತಿಕ್ರಿಯೆಗಳಿಗೆ
ನಿಮ್ಮ ಅಭಿಪ್ರಾಯಗಳಿಗೆ ಕೃತಜ್ಞತೆಗಳು.