-1-
ಒಂದಷ್ಟೂ ನಿಲ್ಲದ ಈ ಮಳೆ, ಬಿಡದೆ ಸುರಿಯುತ್ತಿದೆ
ಅತಿಬಿಸಿಲನೆ ಕಂಡ ನನ್ನೂರಲಿ ಎಂದೋ ಕಂಡ ಮಳೆ
ಈಗ ರುದ್ರನರ್ತನ ಮಾಡುತ್ತಿದೆ
ಮನೆಯಂಗಳದ ಪುಟ್ಟಪುಟ್ಟ ಸಸಿಗಳು ಬಾಗಿವೆ,
ಕರೆಂಟಿನ ವೈರುಗಳು ತೊಟ್ಟಿಲಂತೆ ತೂಗಿವೆ
ಅದೆಂದೋ ಒಣಗಲು ಹಾಕಿದ ಬಟ್ಟೆಗಳು,
ಎಷ್ಟೋ ದಿನಗಳಿಂದ ಹಸಿಹಸಿಯಾಗೆ ಇವೆ
ದಿನವೂ ಮನೆಮುಂದೆ ಬರುವ ಹಸು ತೋಯಿಸಿಕೊಂಡು ನೆನೆದಿದೆ
ಪುಟ್ಟ ಕರು ಅಮ್ಮ ಹಸುವಿನ ಹಿಂದೆ ಚಿಮ್ಮಿಚಿಮ್ಮಿ ಓಡಿದೆ
ಬಾಲ ಜಿಗಿಸಿ ಮೈಯಲ್ಲಿನ ಬಿಡದ ಚಳಿಗೆ
ಮನೆಗೋಡೆಗಳೆಲ್ಲ ಒದ್ದೆ, ರಸ್ತೆಗಳೆಲ್ಲ ಹೊಲ-ಗದ್ದೆ
ಎಂಥದೋ ಅಡರಿರುವ ಪಾಚಿ ವಾಸನೆ, ಮೂಗು ಮುಚ್ಚಿಕೊಂಡು ಕೂಡಬೇಕಿದೆ
-2-
`ನಮ್ಮೂರಿನ ಬಿಸಿಲನ್ನು ಮೀರಿಸುವುದ್ಯಾವ ಊರು?’
ಎಂದು ಪ್ರಶ್ನಿಸುತ್ತ ಗೋಣು ಹಾರಿಸಿದ್ದರು ಪಕ್ಕದ ಮನೆ ಜೋಯಿಸರು
ಕಳೆದೆರಡು ದಿನಗಳಿಂದ ಮೋಡ-ಮಳೆಗಳೆರಡೂ ಗದೆ ಹಿಡಿದು
ಕಾಳಗಕೆ ಸನ್ನದ್ಧ; ಮಹಾಭಾರತದ ಭೀಮ ದುರ್ಯೋಧನರ ಯುದ್ಧ!
-3-
ನಾವು ಚಿಕ್ಕವರಿದ್ದಾಗ ಇಂತಹ ಮಳೆ ಬಿದ್ದ ನೆನಪು
ಮಧ್ಯ ವಯಸ್ಸು ಆವರಿಸಿದಾಗಲೆ ಈಚೆಗೆ ನೋಡಿದ ನೆನಪಿಲ್ಲ
ಹಿರಿತನಕ್ಕೆ ತಿರುಗುತ್ತಿರುವ ಈ ವಸಂತದಲಿ
ನಮಗಂತೂ ಬಿಡಿ, ಈ ಮಳೆಗೂ ಮೋಹ
ಭೂಮಿಯ ಜೊತೆ ರಾಸಲೀಲೆಯ ವ್ಯಾಮೋಹ!
ಆದರೂ, ಒಂದೊಂದು ಸಾರಿ ಅನಿಸುವುದುಂಟು:
ನಮ್ಮ ಬಿಸಿಲೂರು ಮಲೆನಾಡಿನಂತಾಗಿದೆ
ಮೈಮನಗಳಿಗೆ ಒಂದಷ್ಟು ತಂಪೆರೆದಿದೆ
ಮಂಡಲಗಿರಿ ಪ್ರಸನ್ನ ಮೂಲತಃ ರಾಯಚೂರಿನವರು. ಓದಿದ್ದು ಇಂಜಿನಿಯರಿಂಗ್. ಹಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ `ಪ್ರಾಜೆಕ್ಟ್ ಮತ್ತು ಮಾರ್ಕೆಟಿಂಗ್’ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕನಸು ಅರಳುವ ಆಸೆ(ಕವಿತೆ), ಅಮ್ಮ ರೆಕ್ಕೆ ಹಚ್ಚು(ಮಕ್ಕಳ ಕವಿತೆ), ನಿನ್ನಂತಾಗಬೇಕು ಬುದ್ಧ(ಕವಿತೆ), ಏಳು ಮಕ್ಕಳ ನಾಟಕಗಳು(ಮಕ್ಕಳ ನಾಟಕ), ಪದರಗಲ್ಲು (ಸಂಪಾದನೆ), ನಾದಲಹರಿ(ಸಂಪಾದನೆ-2010) ಸೇರಿ ಒಟ್ಟು ಒಂಭತ್ತು ಕೃತಿಗಳು ಪ್ರಕಟವಾಗಿವೆ