ಒಂದರಿಂದ ಬಿಡಿಸಿಕೊಂಡು ಮತ್ತೊಂದಕ್ಕೆ ಪ್ರವೇಶ ಮಾಡಲು ಸಾಧ್ಯವೇ ಎನ್ನುವುದರ ಗೊಂದಲ ಮತ್ತು ಆತಂಕ ಎಲ್ಲವೂ ಅವುಗಳ ಸೂಕ್ಷ್ಮ ಅಭಿನಯದಲ್ಲಿ ವ್ಯಕ್ತವಾಗುತ್ತದೆ. ಸದ್ಯದ ಸಂದರ್ಭದಲ್ಲಿ ಜೀವನದ ಒಂದು ನೆಲೆಯನ್ನು ಬದಿಗಿಟ್ಟು ಮತ್ತೊಂದನ್ನು ರೂಪಿಸಿಕೊಳ್ಳುವ ಶಕ್ತಿ ಮತ್ತು ಅದು ಎಟುಕುವ ರೀತಿಯಲ್ಲಿ ಇದೆಯೇ ಎನ್ನುವ ಪ್ರಶ್ನೆ ಅವಳಿಗೆ. ಹೀಗಾಗಿ ಅವರಿಬ್ಬರ ಬದುಕಿನ ರೀತಿ ಮತ್ತು ತೆಗೆದುಕೊಂಡ ತಿರುವು ಹಾಗೂತಲುಪಿದ ಹಂತ ಅವು ತೆಗೆದುಕೊಳ್ಳಬಹುದಾದ ರೀತಿಯನ್ನು ಮುಂದಿಡುತ್ತದೆ. ಹಾಗೆಯೇ ಬದುಕು ತಾವು ತಿಳಿದಷ್ಟು ಸರಳವಾಗಿ ಸಲೀಸಾಗಿ ತಮ್ಮ ತೆಕ್ಕೆಗೆ ಸಿಗುವಂತದ್ದಲ್ಲವಲ್ಲ…
-ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ತೈವಾನ್ ನ ʻಯಿ ಯಿʼ ಸಿನಿಮಾದ ವಿಶ್ಲೇಷಣೆ
ತೈಪೆ ನಗರದಲ್ಲಿ ಒಂದು ದೊಡ್ಡ ಸಂಸಾರ. ಹೊಸದಾಗಿ ಮದುವೆಯಾದ ದಂಪತಿಯನ್ನು ಭೇಟಿ ಮಾಡಲು ಬಂದ ಜನ. ಅವರಲ್ಲೊಬ್ಬಳು ಇದ್ದಕ್ಕಿದ್ದ ಹಾಗೆ ಸ್ಥಿಮಿತ ಕಳೆದುಕೊಂಡವಳಂತೆ ಅಷ್ಟು ದೂರದಲ್ಲಿ ಕುಳಿತಿದ್ದ ಈ ಅಜ್ಜಿಯ ಬಳಿ ಹೋಗಿ ಅರಚುತ್ತಾಳೆ, “ನಾನು ಮದುವೆಯಾಗಬೇಕಾಗಿದ್ದವನು ಅವನು.. ಹೀಗಾಗಿದೆ ನನ್ನ ಪರಿಸ್ಥಿತಿ.. ನೋಡು…” ಎಂದು ಕೂಗಾಡುತ್ತಾಳೆ. ಇದ್ದಕ್ಕಿದ್ದ ಹಾಗೆ ದಿಢೀರನೆ ಬದಲಾದ ವಾತಾವರಣದಿಂದ ಬಂದವರೆಲ್ಲ ಚಕಿತಗೊಳ್ಳುತ್ತಾರೆ. ಏನೆಂದು ತಿಳಿಯದೆ ಅತ್ತಿತ್ತ ಗಡಿಬಿಡಿಯಲ್ಲಿ ಓಡಾಡುತ್ತಾರೆ. ಮದುವೆಯಾದ ಹುಡುಗ ಕೂಡ ಎಲ್ಲರನ್ನು ಸಂತೈಸುತ್ತಾ ಸಮಾಧಾನಪಡಿಸಲು ಪ್ರಯತ್ನಿಸುತ್ತಾನೆ.
ಇದು 2000 ರ ಕಾನ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ವಿಜೇತ ಎಡ್ವರ್ಡ್ ಯಂಗ್ ನ ಸುಮಾರು ಮೂರು ಗಂಟೆಗಳ ʻಯಿ ಯಿʼ(Yi Yi) ಚಿತ್ರದ ಮೊದಲನೆಯ ದೃಶ್ಯ. ಇದರಲ್ಲಿ ಮೂರು ಅಂಶಗಳು ಅಡಕವಾಗಿರುವುದನ್ನು ಕಾಣಬಹುದು. ಮದುವೆಯಾಗಿರುವ ದಂಪತಿಗಳ ಉತ್ಸಾಹ, ಉದ್ವಿಗ್ನಗೊಳ್ಳುವ ವ್ಯಕ್ತಿ, ಮತ್ತು ಸಮಾಧಾನ ಪಡಿಸುವ ಪ್ರಯತ್ನ.
ಈ ಗಲಾಟೆ, ಅಬ್ಬರಗಳು ಮುಗಿದ ತರುವಾಯ ಎನ್.ಜೆ. ಎನ್ನುವ ನಡುವಯಸ್ಸಿನ ವ್ಯಕ್ತಿ ಲಿಫ್ಟಿನ ಹತ್ತಿರ ಬರುತ್ತಾನೆ. ಅದು ತೆರೆದೊಡನೆ ಕಂಡದ್ದು ಅವನ ಮೂವತ್ತು ವರ್ಷದ ಹಿಂದಿನ ಪ್ರೇಮಿ ಶೆರಿ. ನಂಬದವನಂತೆ “ನೀನಾ…?” ಎನ್ನುತ್ತಾನೆ. ಅದಕ್ಕವಳು ಬೆಕ್ಕಸ ಬೆರಗು. ಕ್ಷಣಕಾಲ ಮಾತಿಲ್ಲದೆ ಸುಮ್ಮನೆ ನಿಂತು, ಪ್ರತ್ಯೇಕವಾಗಿ ಮಾತನಾಡು ಎಂಬುದರ ಅರ್ಥವಿರುವಂತೆ ವಿಸಿಟಿಂಗ್ ಕಾರ್ಡ್ ಕೊಡುತ್ತಾಳೆ. ಮೂವತ್ತು ವರ್ಷಗಳ ಕಾಲ ಹಿಂದಕ್ಕೆ ಧಿಡೀರನೆ ತಳ್ಳಿದ ಪ್ರಸಂಗದಿಂದ ಅವನು ನೆಲೆ ತಪ್ಪಿ ತಬ್ಬಿಬ್ಬು. ಅವನನ್ನು ಸಮಾಧಾನಪಡಿಸಿಕೊಂಡು ಕರೆದುಕೊಂಡು ಹೋಗುವುದು ಅವನ ಸಹೋದ್ಯೋಗಿ ಎ.ಡಿ.
ಚಿತ್ರದಲ್ಲಿ ನಿರ್ದೇಶಕ ಎಡ್ವರ್ಡ್ ಯಂಗ್ ಮೂರು ಪೀಳಿಗೆಯ ಜೀವಿಗಳನ್ನು ಪರಿಚಯಿಸುತ್ತಾನೆ. ಎನ್.ಜೆ. ಮತ್ತು ಅವನ ಹೆಂಡತಿ ಮಿನ.ಮಿನ್, ಈಗ ಹಾಸಿಗೆ ಹಿಡಿದಿರುವ ಹೆಂಡತಿಯ ತಾಯಿ ಮತ್ತು ಮಕ್ಕಳಾದ ತಿಂಗ್ ತಿಂಗ್ ಎಂಬ ಹರೆಯಕ್ಕೆ ಕಾಲಿಡುತ್ತಿರುವ ಹುಡುಗಿ ಮತ್ತು ಎಂಟೊಂಭತ್ತು ವರ್ಷ ವಯಸ್ಸಿನ ಯಾಂಗ್ ಯಾಂಗ್ ಎನ್ನುವ ಅತಿ ಚಟುವಟಿಕೆಯ ಹುಡುಗ. ನಗು ಮಾಯವಾದಂತೆ ಕಾಣುವ ಚೌಕು ಮುಖದ ಎನ್.ಜೆ. ತನ್ನ ಔದ್ಯೋಗಿಕ ಸಮಸ್ಯೆಗಳನ್ನು ಏ.ಡಿ ಜೊತೆ ಚರ್ಚಿಸುತ್ತಾನೆ. ಅವನು ಮಾತನಾಡುತ್ತಿದ್ದರೆ ಕಂಪನಿಯ ಪ್ರಗತಿಗಾಗಿ ಯೋಚಿಸುತ್ತ, ಹೆಚ್ಚು ಕಾಲ ಗೊಂದಲದಲ್ಲಿರುವವನಂತೆ ಕಾಣುತ್ತಾನೆ ಎನ್.ಜೆ ಆಗಲೇ ಅವನಿಗೆ ತನ್ನ ಮಾಜಿ ಪ್ರೇಮಿ ಇನ್ಸುರೆನ್ಸ್ ವ್ಯವಹಾರದಲ್ಲಿ ಉನ್ನತ ಶ್ರೇಣಿಯಲ್ಲಿರುವುದು ತಿಳಿದು ಅವಳನ್ನು ಭೇಟಿಯಾಗಿ ಚರ್ಚಿಸುವ ಮನಸ್ಸಾಗುತ್ತದೆ. ಈ ತೆರನಾದ ಶುದ್ಧ ಲೌಕಿಕ ಸಂಬಂಧದ ವಿಷಯಗಳಿರುವ ದೃಶ್ಯಗಳನ್ನು ತ್ವರಿತ ನಿರೂಪಣೆಯಲ್ಲಿ ಮುಗಿಸಿ ಬಿಡುವುದು ಚಿತ್ರದುದ್ದಕ್ಕೂ ಕಾಣುತ್ತದೆ.
ಎನ್.ಜೆಯ ಹೆಂಡತಿ ಮಿನ್.ಮಿನ್ ಅಸ್ವಸ್ಥಳಾಗಿ ಮಲಗಿರುವ ಅಮ್ಮನ ಬಳಿಗೆ ಮಗಳು ತಿಂಗ್ ತಿಂಗ್ ಮತ್ತು ಯಾಂಗ್ ಯಾಂಗ್ ಜೊತೆ ದಿನ ನಿತ್ಯವೂ ಹೋಗಿ ತಮಗನ್ನಿಸಿದ್ದನ್ನು ಹೇಳುವುದು ರೂಢಿ. ಮಿನ್. ಮಿನ್ ಒಂದೆರಡು ಬಾರಿ ನಿಂತು ಪ್ರಯತ್ನಿಸಿದರೂ ಏನೂ ಹೇಳಲಾಗದೆ ಬೇಸರಗೊಂಡು ಹಿಂತಿರುಗುತ್ತಾಳೆ. ಅವಳು ಗಂಡನಿಗೆ, “ನಂಗೆ ಏನು ಹೇಳ್ಬೇಕು ಅಂತ ಗೊತ್ತಾಗ್ತಾ ಇಲ್ಲ… ಎಲ್ಲ ಖಾಲಿ ಖಾಲಿ” ಎಂದು ತನ್ನ ಮನಸ್ಸು ಮತ್ತು ಅಂತರಂಗದ ತಲ್ಲಣ ಹೇಳಿಕೊಳ್ಳುತ್ತಾಳೆ. ಎನ್. ಜೆಗೆ ಅವಳನ್ನು ಸಮಾಧಾನಪಡಿಸುವುದನ್ನು ಬಿಟ್ಟರೆ ಬೇರೇನೂ ಮಾಡಲಾಗುವುದಿಲ್ಲ. ಎನ್.ಜೆ ಮಗಳು, ಮಗ ಕೂಡ ಬಂದು ಅಜ್ಜಿಯ ಬಗ್ಗೆ ಇರುವ ಭಾವನೆಯನ್ನು ಹೊರಗೆ ಹಾಕುತ್ತಾರೆ. ಆದರೆ ಅವರಿಗೆ ಅಜ್ಜಿ ಅದನ್ನು ಕೇಳಿಸಿಕೊಳ್ಳುತ್ತಿದ್ದಾಳೋ ಇಲ್ಲವೋ ಎಂಬುದರ ಬಗ್ಗೆ ಕೂಡ ಅನುಮಾನ. ಅವರು ಹೇಳುವುದನ್ನು ಕರ್ತವ್ಯ ಎನ್ನುವಂತೆ ನಿರ್ವಹಿಸುತ್ತಿರುತ್ತಾರೆ.
ಹೀಗೆ ಅಮ್ಮನ ಎದುರು ನಿಂತು ಏನೂ ಹೇಳಲಾಗದೆ ಒದ್ದಾಡುವ ಎನ್. ಜೆ ಕಿಂಚಿತ್ ಸಮಾಧಾನ ಇಲ್ಲದ ವ್ಯಕ್ತಿ. ಅವನನ್ನು ಸಮಾಧಾನಪಡಿಸಲು ಮತ್ತು ಕಂಪನಿಯ ಪ್ರಗತಿಯ ಬಗ್ಗೆ ಯೋಚಿಸಲು ಕ್ರಮಗಳು ಯೋಚಿಸಬೇಕಾದ ರೀತಿ ಇತ್ಯಾದಿಗಳನ್ನು ಎ.ಡಿ ಮಾಡುತ್ತಲೇ ಇರುತ್ತಾನೆ.
ಹುಡುಗ ಯಾಂಗ್ ಯಾಂಗ್ ಗೆ ಫೋಟೊ ತೆಗೆಯುವ ಹವ್ಯಾಸ. ಅದೂ ಕೂಡ ಮನುಷ್ಯರ ತಲೆಯ ಹಿಂಭಾಗವನ್ನು ತೆಗೆಯುವುದು! ಇದನ್ನು ಕಂಡ ಅವನ ಸಹಪಾಠಿಗಳಿಗೆ ವಿನೋದ. ಫೋಟೋ ತೆಗೆಯುವವರ ಹತ್ತಿರ ಅವನ್ನು ತೆಗೆದುಕೊಂಡು ಹೋದಾಗ ಅವರು ಅದರಲ್ಲಿರುವ ಫೋಟೋಗಳನ್ನು ನೋಡಿ ಹಾಸ್ಯ ಮಾಡುತ್ತಾರೆ. ಆದರೆ ಯಾಂಗ್ ಯಾಂಗ್ ಜಗ್ಗುವುದಿಲ್ಲ. ಅವನು ತಂದೆಯ ತಲೆಯ ಫೋಟೋವನ್ನೇ ಹಿಂಬದಿಯಿಂದ ತೆಗೆದಾಗ ಕೇಳುವ ಪ್ರಶ್ನೆಗೆ ಉತ್ತರವಾಗಿ, “ನಿನ್ನ ಹಿಂಬದಿ ನಿಂಗೆ ಕಾಣೋದಿಲ್ಲ…. ಅದನ್ನು ತೋರಿಸ್ಲಿಕ್ಕೆ ತೆಗೆದಿದ್ದೇನೆ…” ಎನ್ನುತ್ತಾನೆ.
ಎಡ್ವರ್ಡ್ ಯಂಗ್ ಹೀಗೆ ಮಾಡುವುದರಿಂದ ಅವನ ನಿರೂಪಣಾ ವಿಧಾನವನ್ನು ನಾವು ತಿಳಿದುಕೊಳ್ಳಬಹುದು. ಅವನು ಯಾವುದನ್ನೇ ಆಗಲಿ ವಾಚ್ಯವಾಗಿ ಹೇಳುವುದಿಲ್ಲ. ಯಾವುದೇ ಗಂಭೀರವಾದ ವಿಷಯವನ್ನಾಗಲಿ, ಭಾವವನ್ನಾಗಲಿ ವ್ಯಕ್ತಪಡಿಸುವುದು ಪರೋಕ್ಷವಾಗಿಯೇ ಮತ್ತು ಅದರ ರೂಪಕವೊಂದನ್ನು ಹೆಣೆಯುತ್ತಾನೆ. ಇದನ್ನು ಆಯಾ ಸಂದರ್ಭಗಳಲ್ಲಿ ಗುರುತಿಸಲು ಸಾಧ್ಯ. ಯಾಂಗ್ ಯಾಂಗ್ ಹುಡುಗಾಟದಿಂದ ಹೀಗೆ ಫೋಟೋಗಳನ್ನು ತೆಗೆಯುವುದರ ಮೂಲಕ, ಅವನು ಯಾರಿಗೇ ಆಗಲಿ ಸತ್ಯದ ಪೂರ್ತಿ ದರ್ಶನ ಆಗುವುದಿಲ್ಲ, ಅರಿವಾಗುವುದು ಅರ್ಧದಷ್ಟು ಮಾತ್ರ ಎನ್ನುವುದನ್ನು ಹೇಳುತ್ತಾನೆ. ಇದಲ್ಲದೆ ಅವನು ಹುಡುಗಾಟದಲ್ಲಿಯೂ ಮುಂದು. ಹುಡುಗಿಯರಿಂದ ಎಷ್ಟೋ ಬಾರಿ ರೇಗಿಸಿಕೊಳ್ಳುತ್ತಾನೆ.
ಇವೆಲ್ಲವೂ ವರ್ತಮಾನದಲ್ಲಿ ವಿವಿಧ ಪಾತ್ರಗಳು ಯಾವ ನೆಲೆಯಲ್ಲಿ ಇವೆ ಎನ್ನುವುದನ್ನು ತೋರಿಸಿದರೆ ಅಲ್ಲಿಂದ ಮುಂದುವರೆದ ಭಾಗದಲ್ಲಿ ಎಲ್ಲ ಪಾತ್ರಗಳು ಸಂಘರ್ಷದಲ್ಲಿ ನಿರತರಾಗುತ್ತಾರೆ. ಹೊಸತನವನ್ನು ಕಾಣುವ, ತಮ್ಮನ್ನು ಪರೀಕ್ಷಿಸಿಕೊಳ್ಳುವ, ಇನ್ನೊಬ್ಬರಿಗೆ ಇಷ್ಟವಾಗುವಂತೆ ನಡೆದುಕೊಳ್ಳುವ ರೀತಿಗಳಲ್ಲಿ ಮಗ್ನರಾಗುತ್ತಾರೆ. ಇವಕ್ಕೆಲ್ಲ ಮೂಲ ಕಾರಣ ಒಂದೇ ಎನ್ನುವುದನ್ನು ಗುರುತಿಸಬಹುದು. ಕಳೆದ ವರ್ಷಗಳಲ್ಲಿ ಸೋತ ಪ್ರಯತ್ನಗಳು ಅವರನ್ನು ಕಾಡುತ್ತವೆ. ವರ್ತಮಾನದಲ್ಲಿ ಲಭಿಸಿದ ಸುಖವನ್ನು ಸ್ವೀಕರಿಸಲು ಸಾಧ್ಯವಾಗದಷ್ಟು ಭವಿಷ್ಯದ ಯೋಚನೆಯಲ್ಲಿ ಮುಳುಗಿರುತ್ತಾರೆ. ಉನ್ನತ ಮಟ್ಟದಲ್ಲಿ ಜೀವನ ಸಾಗಿಸುತ್ತಿದ್ದೇವೆ ಎನ್ನುವುದರ ಬಗ್ಗೆ ಲಕ್ಷ್ಯವಿಲ್ಲ. ಇದನ್ನು ನಿರೂಪಿಸಲು ನಿರ್ದೇಶಕ ಪ್ರತಿಯೊಂದು ಪಾತ್ರಕ್ಕೂ ವಿಶಿಷ್ಟವೆನಿಸುವ ಸಂದರ್ಭವನ್ನು ನಿರ್ಮಾಣ ಮಾಡುತ್ತಾನೆ.
ಎನ್.ಜೆ ಉದ್ಯೋಗದ ವಿಸ್ತರಣೆಯ ಜೊತೆ ಗೆಳತಿ ಶೆರಿಯನ್ನು ಭೇಟಿ ಮಾಡಲು ಟೋಕಿಯೊಗೆ ಹೋಗುತ್ತಾನೆ. ಅಲ್ಲಿ ಅವರಿಬ್ಬರು ಕಳೆದ ಮೂವತ್ತು ವರ್ಷದ ಹಿಂದಿನ ದಿನಗಳಲ್ಲಿ, ಆಡಿದ ಮಾತು ಮತ್ತು ಉಂಟಾದ ಭಾವನೆಗಳನ್ನು ಮರುನಿರ್ಮಾಣ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಅದು ಈಗ ಅವರಿಗೆ ಅದೇ ರೀತಿಯಲ್ಲಿ ದಕ್ಕುವುದು ಸಾಧ್ಯವಿಲ್ಲ ಎನ್ನುವುದು ಅರಿವಾಗುತ್ತದೆ. ಈಗಿನ ಬದಲಾದ ಸಂದರ್ಭದಲ್ಲಿ ಸಂಕೀರ್ಣತೆಯಿಂದ ಕೂಡಿದ ಸಂಬಂಧಗಳನ್ನು ಅಂದುಕೊಂಡಷ್ಟು ರೀತಿಯಲ್ಲಿ ಶೀಘ್ರವಾಗಿ ಮರುರೂಪಿಸಲು ಸಾಧ್ಯವಾಗುವುದಿಲ್ಲ ಎನ್ನುವುದು ತಿಳಿಯುತ್ತದೆ. ಇದು ವೈಯಕ್ತಿಕ ವಿಷಯವಾದರೆ, ಶೆರಿ ಎನ್.ಜೆಗೆ ಸಹಾಯ ಮಾಡುವ ಕಾತರದಲ್ಲಿರುತ್ತಾಳೆ.
ಅವನಿಗೆ ತನ್ನ ಮಾಜಿ ಪ್ರೇಮಿ ಇನ್ಸುರೆನ್ಸ್ ವ್ಯವಹಾರದಲ್ಲಿ ಉನ್ನತ ಶ್ರೇಣಿಯಲ್ಲಿರುವುದು ತಿಳಿದು ಅವಳನ್ನು ಭೇಟಿಯಾಗಿ ಚರ್ಚಿಸುವ ಮನಸ್ಸಾಗುತ್ತದೆ. ಈ ತೆರನಾದ ಶುದ್ಧ ಲೌಕಿಕ ಸಂಬಂಧದ ವಿಷಯಗಳಿರುವ ದೃಶ್ಯಗಳನ್ನು ತ್ವರಿತ ನಿರೂಪಣೆಯಲ್ಲಿ ಮುಗಿಸಿ ಬಿಡುವುದು ಚಿತ್ರದುದ್ದಕ್ಕೂ ಕಾಣುತ್ತದೆ.
ಅವಳ ಸೂಚನೆಯಂತೆ ಓಟಾ ಎಂಬುವನನ್ನು ಭೇಟಿಯಾಗುತ್ತಾನೆ. ಆದರವನು ವಾಣಿಜ್ಯ ವಿಷಯಗಳಿಗಿಂತ ಹೆಚ್ಚಾಗಿ ಬದುಕಿನ ವಿಸ್ತಾರ ಹಾಗೂ ಸಂಕೀರ್ಣತೆಯ ತನ್ನ ಅಭಿಮತ ತಿಳಿಸುತ್ತಾನೆ. ಬಗ್ಗೆ ಇಸ್ಪೀಟಾಡುತ್ತ ಅವನು ಹೇಳುವ ಮಾತುಗಳಿಂದ ಎನ್.ಜೆ ಮೌನಿಯಾಗುತ್ತಾನೆ. ಓಟಾ, “ಶೆರಿ ನನ್ನನ್ನು ವ್ಯವಹಾರದಿಂದ ದೂರವಿಟ್ಟಳು. ಆದರೆ ಅದರಿಂದಾದ ಹಿನ್ನಡೆಯನ್ನು ಒಪ್ಪಿಕೊಳ್ಳದೆ ಮತ್ತೆ ಮತ್ತೆ ಮನಸ್ಸಿಟ್ಟು ಪ್ರತ್ನಿಸಿ ಸಫಲನಾದೆ.. ಮಾಡುವ ತಪ್ಪುಗಳನ್ನು ಗುರುತಿಸುವ ಅಭ್ಯಾಸ ಬೆಳೆಸಿಕೊಂಡೆ,,,” ಎಂದು ಬದುಕಿನಲ್ಲಿ ಗೆಲ್ಲುವುದರ ಸೂಕ್ಷ್ಮತೆ ತೆರೆದಿಡುತ್ತಾನೆ.
ಟೊಕಿಯೊದಲ್ಲಿ ಎನ್.ಜೆ ಮತ್ತು ಶೆರಿ ರೈಲು, ಹೊಟೇಲ್ ಇತ್ಯಾದಿಗಳಲ್ಲಿ ತಾವು ಹಿಂದೆ ಸಂಚರಿಸಿದ, ಭೇಟಿ ಮಾಡಿದ ಸ್ಥಳಗಳಲ್ಲಿಯೇ ಮತ್ತೆ ಓಡಾಡುತ್ತಾರೆ. ಆಗ ಭಾವ ಉಕ್ಕಿ ಹರಿಯುತ್ತಿದ್ದ ರೀತಿಗೂ ಈಗಿನ ರೀತಿಗೂ ಅಜಗಜಾಂತರ. ಅವಳು, “ತಾನಿನ್ನೂ ಅದೇ ದಿನಗಳಲ್ಲಿ ಇದ್ದ ಹಾಗಿದ್ದೇನೆ. ನೀನು ಅವತ್ತು ಹೇಳಿದಂತೆ ಯಾಕೆ ಬರಲಿಲ್ಲ ನಾನು ಕಾಯುತ್ತಲೇ ಇದ್ದೆ…” ಎನ್ನುತ್ತಾಳೆ. ಅದಕ್ಕೆ ಎನ್.ಜೆ ಉತ್ತರ ಕೊಡುವ ಸ್ಥಿತಿಯಲ್ಲಿ ಇರುವುದಿಲ್ಲ. ಅವನಿಗೆ ಆಗಲೂ ಕೂಡ ತನ್ನ ಪ್ರೇಮಕ್ಕಿಂತ ಹೆಚ್ಚಾಗಿ ತನ್ನ ಬಗ್ಗೆಯೇ ಅವನಿಗೆ ಚಿಂತೆ. ಅದಕ್ಕೆಂದೇ ಅವನು ಅವಳ ಪ್ರೀತಿಯನ್ನು ಯಾವುದೇ ಆತಂಕವಿಲ್ಲದೆ ಸ್ವೀಕರಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ಹಾಗೆಂದೇ ಅದೇ ಹಿಂಜರಿಕೆಯಲ್ಲಿಯೇ ಅವನು ಹೋಗಿರುವುದಿಲ್ಲ. ಆದರೆ ಕುತೂಹಲದ ಸಂಗತಿ ಎಂದರೆ ಅವಳು ಮತ್ತೆ ಮತ್ತೆ ಕೇಳಿದ ಪ್ರಶ್ನೆಗೆ ಈಗಲೂ ಅವನಿಂದ ಉತ್ತರ ಸೊನ್ನೆ.
ಅವರು ಈಗ ಭೇಟಿಯಾದಾಗ ಹೋಟೆಲಿನಲ್ಲಿ ಎರಡು ಪ್ರತ್ಯೇಕ ರೂಮುಗಳನ್ನು ಮಾಡಿರುತ್ತಾರೆ. ಅವಳನ್ನು ಅವಳ ರೂಮಿಗೆ ಬಿಡುವಾಗ ಎನ್.ಜೆ, “ರಿಸೆಪ್ಷನಿಸ್ಟ್ ತಮ್ಮಿಬ್ಬರಿಗೆ ಬೇರೆಬೇರೆ ಕೀಗಳನ್ನು ಕೊಡುವಾಗ ಅವನಿಗೆ ಏನ್ನಿಸಿರಬಹುದು” ಎನ್ನುತ್ತಾನೆ. ಆಗಲು ಇಬ್ಬರಿಗೂ ಮನಸ್ಸಿನಾಳದಲ್ಲಿ ಒಟ್ಟಿಗೆ ಒಂದೇ ರೂಮಿನಲ್ಲಿ ಇರಬಹುದೆಂಬ ಅಭಿಲಾಷೆ ಉಂಟಾದರೂ ಹಾಗೆ ಮಾಡಲು ಹಿಂಜರಿಯುತ್ತಾರೆ. ಎನ್.ಜೆ ಒತ್ತಡವನ್ನು ನಿಗ್ರಹಿಸಿ ಅವಳನ್ನು ಅವಳ ರೂಮಿಗೆ ಬಿಡುತ್ತಾನೆ. ಆದರೆ ಮರುಕ್ಷಣದಲ್ಲಿಯೇ ವಾಪಸ್ಸು ಕರೆದು, “ಅಷ್ಟು ವರ್ಷಗಳಿಂದ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ” ಎನ್ನುತ್ತಾನೆ. ಅವಳಿಗೆ ಅದು ಅರ್ಧಸತ್ಯವೆಂಬಂತೆ ತೋರುತ್ತದೆ. ಅದಕ್ಕಾಗಿಯೇ ಮುಂದೊಂದು ಸಂದರ್ಭದಲ್ಲಿ, “ನೀನು ನನ್ನನ್ನು ಪ್ರೀತಿಸಲೇ ಇಲ್ಲ…” ಎಂದು ಖಾರವಾಗಿ ಅವನನ್ನು ದೂಡುತ್ತಾಳೆ. ಇಷ್ಟಾಗಿಯೂ ಅವನಿಗೊಂದು ಹಂಬಲ. ಈಗಲಾದರೂ ತಾವು ಹೊಸದಾಗಿ ಜೀವನ ಪ್ರಾರಂಭ ಮಾಡಬಹುದೇ ಎಂದು. ಅವಳನ್ನು ಪ್ರಶ್ನಿಸಿ ಉತ್ತರಕ್ಕಾಗಿ ಕಾದಿರುತ್ತಾನೆ. ಅವಳು ಈಗ ಸಂಕೀರ್ಣ ಬದುಕಿನಲ್ಲಿ ಸಿಲುಕಿಕೊಂಡಿರುತ್ತಾಳೆ. ತಾನು ಮದುವೆಯಾದ ಇನ್ಶೂರೆನ್ಸ್ ಕಂಪೆನಿಯ ರೋಡ್ನಿಯ ಜೊತೆಗಿನ ಸಂಬಂಧ ಮತ್ತು ಹಿಂದಿನ ಪ್ರೇಮವನ್ನು ಕಣ್ಣೆದುರು ತಂದ ಎನ್.ಜೆ ನಡುವೆ ಸಿಲುಕಿ ನಲುಗುತ್ತಾಳೆ.
ಒಂದರಿಂದ ಬಿಡಿಸಿಕೊಂಡು ಮತ್ತೊಂದಕ್ಕೆ ಪ್ರವೇಶ ಮಾಡಲು ಸಾಧ್ಯವೇ ಎನ್ನುವುದರ ಗೊಂದಲ ಮತ್ತು ಆತಂಕ ಎಲ್ಲವೂ ಅವುಗಳ ಸೂಕ್ಷ್ಮ ಅಭಿನಯದಲ್ಲಿ ವ್ಯಕ್ತವಾಗುತ್ತದೆ. ಸದ್ಯದ ಸಂದರ್ಭದಲ್ಲಿ ಜೀವನದ ಒಂದು ನೆಲೆಯನ್ನು ಬದಿಗಿಟ್ಟು ಮತ್ತೊಂದನ್ನು ರೂಪಿಸಿಕೊಳ್ಳುವ ಶಕ್ತಿ ಮತ್ತು ಅದು ಎಟುಕುವ ರೀತಿಯಲ್ಲಿ ಇದೆಯೇ ಎನ್ನುವ ಪ್ರಶ್ನೆ ಅವಳಿಗೆ. ಹೀಗಾಗಿ ಅವರಿಬ್ಬರ ಬದುಕಿನ ರೀತಿ ಮತ್ತು ತೆಗೆದುಕೊಂಡ ತಿರುವು ಮತ್ತು ತಲುಪಿದ ಹಂತ ಅವು ತೆಗೆದುಕೊಳ್ಳಬಹುದಾದ ರೀತಿಯನ್ನು ಮುಂದಿಡುತ್ತದೆ. ಹಾಗೆಯೇ ಬದುಕು ತಾವು ತಿಳಿದಷ್ಟು ಸರಳವಾಗಿ ಸಲೀಸಾಗಿ ತಮ್ಮ ತೆಕ್ಕೆಗೆ ಸಿಗುವಂತದ್ದಲ್ಲ. ಅದಕ್ಕೆ ಸೂಕ್ಷ್ಮ ತಿರುವುಗಳಿದ್ದು ತಮಗರಿವಿಲ್ಲದಂತೆಯೇ ಮುಂದುವರೆಯುವುದು ಹೇಗೆಂಬ ಪ್ರಶ್ನೆಯೊಂದಿಗೆ ಮಾತ್ರ ತಮ್ಮನ್ನು ಬಿಡುವ ರೀತಿಯಲ್ಲಿರುತ್ತದೆ ಎನ್ನುವುದನ್ನು ನಿರ್ದೇಶಕ ಯಾಂಗ್ ಸೂಚಿಸುತ್ತಾನೆ.
ಎನ್.ಜೆ ಮಗಳು ಟಿಂಗ್ ಟಿಂಗ್ ತನ್ನ ಜೀವನವನ್ನು ರೂಪಿಸಿಕೊಳ್ಳುವ ಮೊದಲ ಹಂತದಲ್ಲಿರುತ್ತಾಳೆ. ಅವಳಿಗೆ ಅವಳದೇ ಆದ ಕನಸುಗಳ ಹಬ್ಬ. ಕಣ್ಣಿನ ಮಿಂಚುಗಳಲ್ಲಿ ಹೊಸತನ್ನು, ಎಲ್ಲ ಬಗೆಯ ಗೆಲುವನ್ನು, ನಲಿವನ್ನು ಅಪೇಕ್ಷಿಸುವ ಧಾವಂತ. ಹೀಗೆ ಮಾಡುವ ರೀತಿಯಲ್ಲಿಯೇ ಅವಳು ತನ್ನ ಗೆಳತಿಯ ಪ್ರೇಮಿ ಫ್ಯಾಟಿಯೊಂದಿಗೆ ಗೆಳೆತನವನ್ನು ಪ್ರಾರಂಭಿಸುತ್ತಾಳೆ. ಪ್ರಾರಂಭದಲ್ಲಿ ಎಲ್ಲವೂ ಚೆಲುವೆ. ಗೆದ್ದೆನೆಂದು ಕುಣಿವ ಹಂಬಲದಲ್ಲಿದ್ದಾಗ ಅವಳಿಗೆ ಗೆಳತಿ ನೇರ ಪ್ರಶ್ನೆ ಮಾಡುತ್ತಾಳೆ, “ನೀನು ನನ್ನ ಗೆಳೆಯನನ್ನು ಈಗ ಹಿಂಬಾಲಿಸುತ್ತಿದ್ದೀಯ ಅಲ್ಲವೇ…” ಎಂದು. ಅವಳಿಗೆ ನಾಚಿಕೆಯಾಗುತ್ತದೆ ಅಥವಾ ತಾನು ದ್ರೋಹ ಬಗೆದನೆಂದು ಪಾಪಪ್ರಜ್ಞೆ ಕಾಡುತ್ತದೆ. ಮಾತಿಲ್ಲದೆ ಮುಖ ಕೆಳಗೆ ಮಾಡಿ, ಕಣ್ಣುಗಳನ್ನು ಮೇಲೆತ್ತಲಾಗದೆ, ಸುಮ್ಮನೆ ತನ್ನನ್ನು ಕೊಲ್ಲುವ ಕ್ಷಣಗಳನ್ನು ಅನುಭವಿಸುವ ಪರಿಸ್ಥಿತಿಯನ್ನು ಅವಳು ಎದುರಿಸಬೇಕಾಗುತ್ತದೆ.
ಅವಳು ಪ್ರೇಮಿಸುತ್ತಿರುವ ಫ್ಯಾಟಿ ಟಿಂಗ್ ಟಿಂಗ್‌ಳನ್ನು ಒಮ್ಮೆ ಹೋಟೆಲಿಗೆ ಕರೆದುಕೊಂಡು ಹೋಗುತ್ತಾನೆ. ಹೊಟೇಲ್ ರೂಮಿನಲ್ಲಿ ಅವರಿಬ್ಬರೇ ಇರುವಾಗ ಹಲವು ಕ್ಷಣಗಳು ಮಾತಿಲ್ಲದೆ ಜರುಗುತ್ತವೆ. ಅವರಿಬ್ಬರೂ ಈಗ ಎದುರಿಸಬೇಕಾಗಿರುವ ಸಂದರ್ಭದ ಒತ್ತಡದಲ್ಲಿರುತ್ತಾರೆ. ದೈಹಿಕ ಅಪೇಕ್ಷೆ ಪರಸ್ಪರ ಬಳಿಗೆ ದೂಡಿ ಕಾಡುವುದು ಒಂದಾದರೆ ಅದನ್ನು ತುಳಿಯುವ ವಿವೇಕದ ಮೊನಚು ಮತ್ತೊಂದು. ಕೊನೆಗೂ ಫ್ಯಾಟಿಯ ವಿವೇಕ ಗೆಲ್ಲುತ್ತದೆ. “ನಾವು ಹೀಗೆ ಬಂದಿರುವುದು ಸರಿಯಲ್ಲ…” ಎಂದು ಅಲ್ಲಿಂದ ಓಟ ಕೀಳುತ್ತಾನೆ. ಇದಕ್ಕೂ ಮುಂಚೆ ಅವನು ತಾನು ಮೊದಲ ಪ್ರೇಮಿಗೆ ಮೋಸ ಮಾಡುತ್ತಿದ್ದೇನೆಯೇ ಎನ್ನುವ ಆಂತರಿಕ ತಳಮಳದಿಂದ ಟಿಂಗ್ ಟಿಂಗ್ ಅವಳನ್ನು ದೂರ ಮಾಡುವನಂತೆ ಕೂಗಾಡಿ, ಅರಚಾಡಿರುತ್ತಾನೆ.
ಈ ಚಿತ್ರದಲ್ಲಿ ಪಾತ್ರಗಳು ಎದುರಿಸಬೇಕಾದ ಪ್ರಶ್ನೆಗಳು ಯಾವುದೂ ಸರಳ ರೀತಿಯಲ್ಲಿ ಇಲ್ಲ. ಸಂಕೀರ್ಣತೆಯಿಂದ ಕೂಡಿವೆ. ಅವುಗಳನ್ನು ಆಯಾ ಪಾತ್ರಗಳು ತಮ್ಮ ವ್ಯಕ್ತಿತ್ವಕ್ಕೆ ಅನುಸಾರವಾಗಿ ನಿರ್ವಹಿಸುತ್ತವೆ. ಅಲ್ಲಲ್ಲಿ ಹಾಸ್ಯದ ನವಿರುಗಳನ್ನು ಸಿಂಪಡಿಸುತ್ತಾ ಕೊನೆಗೂ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ. ಹೀಗೆ ಯಾವುದಕ್ಕೆ ಆದರೂ ಸರಳವಾದ ಉತ್ತರವಾದ ಉತ್ತರವಿಲ್ಲ. ಉತ್ತರ ಸಿಗುವುದು ಅಷ್ಟು ಸುಲಭವಲ್ಲ ಎನ್ನುವುದು ನಿರ್ದೇಶಕ ಎಡ್ವರ್ಡ್ ಯಾಂಗ್ ನ ನಿಲುವು. ಅವನ ನಿರೂಪಣಾ ಕ್ರಮದಲ್ಲಿ ಭಾವ ತೀವ್ರತೆಯ ಸಂದರ್ಭವಿದ್ದರೂ ಕ್ಲೋಸ್ ಅಪ್‌ಗಳನ್ನು ಹೆಚ್ಚು ಬಳಸುವುದಿಲ್ಲ. ಇದು ಎನ್.ಜೆ ಹಾಗೂ ಶೆರಿಯಾ ನಡುವಿನ ಸಂಬಂಧಕ್ಕೆ ಹೆಚ್ಚು ಅನ್ವಯವಾಗುತ್ತದೆ. ಆದರೆ ಚಿಕ್ಕವನಾದ ಯಾಂಗ್ ಯಾಂಗ್ ಮತ್ತು ಟಿಂಗ್ ಟಿಂಗ್ ಸಂಬಂಧಿತ ಸಂದರ್ಭಗಳಲ್ಲಿ ಬಳಸುತ್ತಾನೆ. ಅದಕ್ಕಿಂತ ಹೆಚ್ಚಾಗಿ ಮಲಗಿಕೊಂಡೇ ಇರುವ ಅಜ್ಜಿ, ಮಿನ್ ಮಿನ್‌ಳ ತಾಯಿ ಇರುವ ದೃಶ್ಯಗಳಲ್ಲಿ ಉಪಯೋಗಿಸಿದ್ದಾನೆ. ಪಾತ್ರಗಳು ವಯೋಮಾನಕ್ಕೆ ಅನುಗುಣವಾಗಿ ವರ್ತಿಸುತ್ತ, ಅಭಿನಯಿಸುತ್ತ ತಮ್ಮ ಪಾತ್ರಗಳನ್ನು ನಿರ್ವಹಿಸುತ್ತವೆ. ಆದರೆ ಚಿಕ್ಕ ವಯಸ್ಸಿನ ಯಾಂಗ್ ಯಾಂಗ್‌ನ ಸಂದೇಶದ ರೀತಿಯ ಮಾತು ಮತ್ತು ವರ್ತನೆಗಳು ನಂಬಲು ಅಸಾಧ್ಯವೆನಿಸುವಷ್ಟು ಗಾಂಭೀರ್ಯದಿಂದ ಕೂಡಿವೆ ಎನಿಸುತ್ತದೆ.
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.
ಪ್ರಿಯ ಪ್ರಸನ್ನ , ನಿನ್ನ ವಿಶ್ಲೇಷಣೆ ಚೆನ್ನಾಗಿ ಬಂದಿದೆ .
ನನ್ನ ಒಂದು ಕೋರಿಕೆ – ಕನ್ನಡದ ಚಿತ್ರಗಳ ಬಗ್ಗೆಯೂ
ಹೀಗೆ ವಿಶ್ಲೇಷಿಸಬಹುದಲ್ಲವೇ ? ಪ್ರಯತ್ನಿಸು .
ಸಿಂಹ ಕೊಳ್ಳೇಗಾಲ
Complex story