ಎಲ್ಲ ಬಗೆಯ ಅಧಿಕಾರ, ದರ್ಪವನ್ನು ಧಿಕ್ಕರಿಸುವ ಕಾರಣಕ್ಕಾಗಿಯೇ ಗಾಲಿಬ್ ಕುಡಿತ, ಜೂಜು ಮತ್ತು ಸಾಂಪ್ರದಾಯಿಕ ಇಸ್ಲಾಮಿಗೆ ಹೊರತಾದ ಪಾಷಂಡಿತನವನ್ನು ಬೆಳೆಸಿಕೊಂಡ. ದಿಲ್ಲಿಯಿಂದ ಕಲ್ಕತ್ತೆಗೆ ಹೋದರೂ ಪಿಂಚಣಿ ಸಿಗದೆ ಫಕೀರನಾಗಿದ್ದ ಗಾಲಿಬ್ ಪರ್ಶಿಯನ್ ಫ್ರೊಫೆಸರ್ ಹುದ್ದೆಗೆ ಅರ್ಜಿ ಹಾಕಿದ್ದ. ಆ ಹುದ್ದೆಯ ಸಂದರ್ಶನಕ್ಕೆ ಹೋದಾಗ ನಡೆದ ಘಟನೆ ಗಾಲಿಬ್‌ನ ಆತ್ಮಾಭಿಮಾನ-ಸ್ವಂತಿಕೆಗೆ ಸಂಕೇತದಂತಿದೆ. ಪಲ್ಲಕ್ಕಿಯಿಲ್ಲದೆ ಎಲ್ಲೂ ಹೋಗದ ಗಾಲಿಬ್ ಕೆಲಸ ಕೇಳಿ ಸಂದರ್ಶನಕ್ಕೆ ಹೋಗುವಾಗ ದಾರಿಯುದ್ದಕ್ಕೂ ನಾಣ್ಯಗಳನ್ನು ಚಿಮ್ಮುತ್ತ ಸಾಗುತ್ತಾನೆ.
ಎಸ್. ಸಿರಾಜ್‌ ಅಹಮದ್‌ ಅಂಕಣ

 

ಗಾಲಿಬ್‌ನ ಕಾವ್ಯವನ್ನು ವಿವರಿಸುವ ಹಲವಾರು ಪುಸ್ತಕಗಳಿವೆ. ಆದರೆ ಅವನ ವ್ಯಕ್ತಿತ್ವ, ಜೀವನ ಕಥನಗಳನ್ನು ಸಮಗ್ರವಾಗಿ ದಾಖಲಿಸಿರುವ ಪುಸ್ತಗಳು ಕಡಿಮೆ. ಗಾಲಿಬ್‌ನ ಜೀವನದ ಏಳುಬೀಳುಗಳನ್ನು ಒಂದಿಷ್ಟೂ ಅರಿಯದೆ, ಅವನ ಕಾವ್ಯವನ್ನು ಮತ್ತೆ ಮತ್ತೆ ಮೆಲುಕು ಹಾಕುವವರು ಎಲ್ಲ ಕಡೆ ದೊರಕುತ್ತಾರೆ. ಗಾಲಿಬ್‌ನ ಜೀವನವನ್ನು ಕುರಿತ ಪುಸ್ತಕಗಳು ದೊರಕದಿರುವುದು ಸಾಂಸ್ಕೃತಿಕ ಅಸ್ವಸ್ಥತೆಯ ಲಕ್ಷಣ ಎಂದು ಗ್ರಹಿಸಿ ಪವನ್ ಕೆ ವರ್ಮ ಅವರು ಇಂಗ್ಲಿಶಿನಲ್ಲಿ ‘ಗಾಲಿಬ್: ದಿ ಮ್ಯಾನ್, ದಿ ಟೈಮ್ಸ್’ ಎಂಬ ವಿಸ್ತಾರವಾದ ಕೃತಿಯನ್ನು ಬರೆದಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿಯೂ, ಸಕ್ರಿಯ ರಾಜಕಾರಣಿಯೂ ಆಗಿರುವ ಪವನ್ ಕೆ ವರ್ಮಾ ಅವರು ಗಾಲಿಬ್ ಕುರಿತು ಬರೆದಂತೆ ದೆಹಲಿಯ ಇತಿಹಾಸದ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಗಾಲಿಬ್ ಕುರಿತು ವರ್ಮಾ ಅವರು ಬರೆದಿರುವ ಪುಸ್ತಕವನ್ನು ‘ಗಾಲಿಬ್: ವ್ಯಕ್ತಿತ್ವ ಮತ್ತು ಯುಗಾಂತ’ ಎಂಬ ಹೆಸರಿನಲ್ಲಿ ಕತೆಗಾರ-ಕಾದಂಬರಿಕಾರ ಬಿದಿರಹಳ್ಳಿ ನರಸಿಂಹಮೂರ್ತಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಗಾಲಿಬ್: ದಿ ಮ್ಯಾನ್, ದಿ ಟೈಮ್ಸ್’ ಎಂಬ ಪುಸ್ತಕವನ್ನು ‘ಗಾಲಿಬ್: ವ್ಯಕ್ತಿತ್ವ ಮತ್ತು ಯುಗಾಂತ’ ಎಂದು ಅನುವಾದಿಸುವ ಮೂಲಕವೇ ಬಿದಿರಹಳ್ಳಿಯವರು ಗಾಲಿಬ್‌ನ ಕಾಲವೇ ಯುಗಪಲ್ಲಟದ, ಮಹಾಸ್ಥಿತ್ಯಂತರದ ಕಾಲ ಎಂದು ಸೂಚಿಸಿದ್ದಾರೆ.

(ಪವನ್ ಕೆ ವರ್ಮಾ)

ಹಾಗೆ ನೋಡಿದರೆ ಎಲ್ಲ ಕಾಲವೂ ತೀವ್ರವಾದ ಸ್ಥಿತ್ಯಂತರಗಳ ಕಾಲವೇ ಆಗಿರುತ್ತದೆ. ಅದರೆ ಶೇಕ್ಸ್‌ಪಿಯರ್, ಟಾಲ್‌ಸ್ಟಾಯ್, ಕುವೆಂಪು, ಬ್ಲೇಕ್, ವರ್ಡ್ಸ್‌ವರ್ತ್‌, ಕಮೂ ಹೀಗೆ ಹಲವು ಬರಹಗಾರರು ಮನುಷ್ಯ ಚರಿತ್ರೆಯಲ್ಲಿ ನಡೆಯುತ್ತಿದ್ದ ಮಹಾಪಲ್ಲಟಗಳಾದ ಪುನರುಜ್ಜೀವನ, ಕೈಗಾರಿಕೀಕರಣ, ವಸಾಹತುಶಾಹಿ, ಸ್ವಾತಂತ್ರ್ಯಸಂಗ್ರಾಮ, ಮಹಾಯುದ್ಧಗಳಂಥ ಸಂಕಟ-ಸಂದಿಗ್ಧಗಳ ನಡುವೆಯೇ ನಿಂತು ಅವುಗಳ ಎಲ್ಲ ಪರಿತಾಪ, ದುರಂತಗಳನ್ನು ಎವೆಯಿಟ್ಟು ನೋಡಿ ಬರೆದರು. ಚರಿತ್ರೆಯ ಪ್ರವಾಹದಲ್ಲಿ ಸಂಭವಿಸುವ ಮೌಲ್ಯಗಳ ಪಲ್ಲಟ, ಸಂಸ್ಕೃತಿ ಸಮುದಾಯಗಳ ನಾಶ, ಸಾಮಾನ್ಯ ಜನರ ದುರ್ದೆಶೆ ಎಲ್ಲವುಗಳ ಬಗ್ಗೆ ಚಿಂತಿಸಿ ಬರೆದರು. ಅಂಥದೇ ಒಂದು ಚರಿತ್ರೆಯ ಸಂಘರ್ಷಮಯ ಕಾಲಘಟ್ಟದ ನಡುವೆ ನಿಂತು ಬರೆದವನು ಗಾಲಿಬ್.

ಮೊಗಲ್ ಸಾಮ್ರಾಜ್ಯ ಕೊನೆಯುಸಿರೆಳೆಯುತ್ತಿದ್ದ ಹಾಗೆ ನಿಧಾನವಾಗಿ ಆದರೆ ಅಷ್ಟೇ ತೀವ್ರವಾಗಿ ಆವರಿಸಿಕೊಳ್ಳುತ್ತಿದ್ದ ಬ್ರಿಟಿಶ್ ಆಳ್ವಿಕೆ- ಬ್ರಿಟಿಶ್ ಆಳ್ವಿಕೆಯ ಪಂಜಗಳು ಬಿಗಿಯಾಗುತ್ತಿದ್ದ ಹಾಗೆ ಹೊತ್ತಿಕೊಂಡ 1857ರ ದಂಗೆಯ ದಳ್ಳುರಿ- ಇವೆಲ್ಲವುಗಳ ನಡುವೆ ಬದುಕಿದವನು ಗಾಲಿಬ್. ಸುಮಾರು 800 ವರ್ಷಗಳ ಮುಸ್ಲಿಮ್ ಆಳ್ವಿಕೆ ಅದರಲ್ಲೂ ಸುಮಾರು 300 ವರ್ಷಗಳ ಮೊಗಲ್ ಆಳ್ವಿಕೆ ಕೊನೆಗೊಂಡು ಬ್ರಿಟಿಶ್ ಅಧಿಪತ್ಯದ ಸೂರ್ಯ ನಿಧಾನಕ್ಕೆ ಕಣ್ಣು ಕುಕ್ಕುತ್ತಿದ್ದ ಕಾಲವದು. ಅಲ್ಲಿಯವರೆಗೆ ದೇವರ ನೆರಳಿನಂತಿರುವ ಜಿಲ್ಲ್-ಎ-ಇಲಾಹಿ, ಜಗತ್ತಿನ ಆಶ್ರಯದಾತನಾಗಿದ್ದ ಜಹಾಂಪನಾ ಎಂದೆಲ್ಲ ನಾಮಾಂಕಿತನಾಗಿದ್ದ ದಿಲ್ಲಿಯ ಚಕ್ರವರ್ತಿ ಕೇವಲ ನಾಮಕಾವಸ್ತೆ ಆಡಳಿತಗಾರನಾಗಿ ಬ್ರಿಟಿಶ್ ಸರ್ಕಾರದಿಂದ ಸಂಬಳ ಪಡೆಯುವ ಮಾಮೂಲು ಪಿಂಚಣಿದಾರನಾಗಿಬಿಟ್ಟಿದ್ದ. ಚಕ್ರವರ್ತಿಯನ್ನು ಕಾಣಲು ಬಂದಾಗ ಸಲ್ಲಿಸುವ ನಜರ್ ಕಾಣಿಕೆಗೂ ಗತಿಯಿಲ್ಲದ ಬೆದರು ಬೊಂಬೆಯಾಗಿದ್ದ.

ಮೊಗಲ್ ಸಾಮ್ರಾಜ್ಯದ ಕೊನೆಯ ದೊರೆಯಾಗಿದ್ದ ಬಹದೂರ್ ಶಾ ಜಫರ್ ತನಗೆ ಸಲ್ಲಬೇಕಾದ ನ್ಯಾಯಬದ್ಧ ಸ್ಥಾನಮಾನ, ಹಕ್ಕುಗಳು, ಕಾಣಿಕೆಗಳು ಹೇಗೆ ದಕ್ಕಬೇಕು ಎಂದು ಅರ್ಜಿಗಳು- ಅಪೀಲುಗಳನ್ನು ಗುಜರಾಯಿಸುತ್ತ ಹೋರಾಟ ನಡೆಸುತ್ತಿದ್ದ ಕಾಲವದು. ಸಾರಾಂಶದಲ್ಲಿ ಹೇಳುವುದಾದರೆ, ಮೊಗಲ್ ಆಡಳಿತದ ಅಡಿಪಾಯ ಕುಸಿದು ಹೋಗಿ ಇಲ್ಲಿಯವರೆಗೆ ನಡೆದುಕೊಂಡು ಬಂದಿದ್ದ ರೀತಿರಿವಾಜುಗಳಿಗೆ ತದ್ವಿರುದ್ಧವಾದ ಆಡಳಿತ ವ್ಯವಸ್ಥೆಯೊಂದು ತಲೆಯೆತ್ತುವ ಸನ್ನಾಹದಲ್ಲಿತ್ತು. ಆದರೆ ಹೊಸದಾಗಿ ಸೃಷ್ಟಿಯಾಗುತ್ತಿದ್ದ ಆಡಳಿತ ವ್ಯವಸ್ಥೆಗೆ, ಅದು ಎತ್ತಿಹಿಡಿಯುತ್ತಿದ್ದ ಮೌಲ್ಯ ವ್ಯವಸ್ಥೆಗೆ ಇದುವರೆಗೆ ಪಾಲಿಸಿಕೊಂಡು ಬಂದಿದ್ದ ಸಾಮಾಜಿಕ ರೀತಿನೀತಿಗಳು, ಆಡಳಿತದ ಶೈಲಿ, ಜೀವನ ಕ್ರಮಗಳೇ ಅನಗತ್ಯವಾಗಿ ಕಾಣುತ್ತಿತ್ತು.

ಇಂಥ ಬಿಕ್ಕಟ್ಟುಗಳ ನಡುವೆ ಆಗ್ರಾದಲ್ಲಿ 1797ರಲ್ಲಿ ಹುಟ್ಟಿದ ಗಾಲಿಬ್‌ ತಾನು ಟರ್ಕಿಯ ಮಹಾಪ್ರಭಾವಿ ಮನೆತನಕ್ಕೆ ಸೇರಿದವನು ಎಂಬ ಒಣಹೆಮ್ಮೆ ತಲೆಯೇರಿ ಕುಳಿತಿತ್ತು. ಶ್ರೀಮಂತವರ್ಗಕ್ಕೆ ಸೇರಿದ ಜನರಲ್ಲಿರುವ ಆಡಂಬರ, ಆತ್ಮಪ್ರತ್ಯಯದ ಗುಣಗಳನ್ನು ಅವನು ಹೆಚ್ಚಾಗಿಯೇ ರೂಢಿಸಿಕೊಂಡಿದ್ದ. ಅವನಿಗೆ ಮುಶಾಯಿರಾ, ಮದ್ಯ, ಜೂಜುಗಳು ತನ್ನ ದೈನಂದಿನ ಚಟುವಟಿಕೆಗಳ ಭಾಗವೇ ಆಗಿಹೋಗಿದ್ದವು.

ಚಿಕ್ಕಂದಿನಲ್ಲೇ ಗಾಲಿಬ್‌ನ ಅಪ್ಪ, ಚಿಕ್ಕಪ್ಪ ಇಬ್ಬರೂ ತೀರಿಹೋಗಿದ್ದರು. ಅವನ ಅಪ್ಪ ಹಾಗೂ ಚಿಕ್ಕಪ್ಪ ಬ್ರಿಟಿಶ್ ಸೇನೆಯಲ್ಲಿ ಕೆಲಸ ಮಾಡಿದ್ದಕ್ಕೆ ಪ್ರತಿಫಲವಾಗಿ ನೀಡುತ್ತಿದ್ದ ಪಿಂಚಣಿ ಮೊತ್ತವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ, ಅದನ್ನು ನಿಯಮಿತವಾಗಿ ಪಡೆದುಕೊಳ್ಳುವುದಕ್ಕಾಗಿ ಗಾಲಿಬ್ ಜೀವನ ಪರ್ಯಂತ ಹೋರಾಟ ಮಾಡಬೇಕಾಯಿತು.

ಪವನ್ ಕೆ ವರ್ಮಾ ಅವರ ಪುಸ್ತಕದ ವಿಶೇಷತೆ ಇರುವುದು ಗಾಲಿಬ್ ಪಿಂಚಣಿಯನ್ನು ಪಡೆಯಲು ಮಾಡಿದ ಹೋರಾಟವನ್ನು ಪರಕೀಯ ವ್ಯವಸ್ಥೆಯ ವಿರುದ್ಧ ಹೋರಾಡಿದ ವ್ಯಕ್ತಿಯೊಬ್ಬನ ಆತ್ಮಗೌರವದ ಕತೆಯನ್ನಾಗಿ ಹೇಳುವುದರಲ್ಲಿದೆ. ಬ್ರಿಟಿಶರ ವಿರುದ್ಧ ಹೋರಾಡುತ್ತಿದ್ದ ವ್ಯಕ್ತಿಯೊಬ್ಬನ ಆತ್ಮಗೌರವದ ಏಳುಬೀಳಿನ ಕತೆಯನ್ನು ಹೇಳುತ್ತಲೇ, ವ್ಯಕ್ತಿಯ ಕತೆಯನ್ನು ಒಂದು ಉಜ್ವಲವಾದ ಸಂಸ್ಕೃತಿಯ ಜೀವನಕ್ರಮ, ಅದರ ಮೌಲ್ಯಗಳು, ಸಾಹಿತ್ಯ ಪರಂಪರೆಯ ಅಭಿರುಚಿಗಳು ವಿನಾಶಗೊಂಡ ಕತೆಯನ್ನಾಗಿ ಹೇಳುವುದೇ ಪುಸ್ತಕದ ನಿಜವಾದ ಶಕ್ತಿಯಾಗಿದೆ. ಅದಕ್ಕಾಗಿಯೇ ಬಿದರಹಳ್ಳಿ ನರಸಿಂಹಮೂರ್ತಿ ಅವರು ಈ ಪುಸ್ತಕವನ್ನು ‘ಗಾಲಿಬ್: ವ್ಯಕ್ತಿತ್ವ ಮತ್ತು ಯುಗಾಂತ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿರುವುದು ಅರ್ಥಪೂರ್ಣವಾಗಿದೆ.

ಗಾಲಿಬ್ ತನ್ನ ಪಿಂಚಣಿಗಾಗಿ ಬ್ರಿಟಿಷರ ಜೊತೆ ಇನ್ನಿಲ್ಲದಂತೆ ಹೆಣಗಾಡಿದ ಎಂಬುದು ಸರಿ. ಆದರೆ ಅದಕ್ಕಾಗಿ ತನ್ನ ಘನತೆಯನ್ನು ಆತ್ಮಗೌರವವನ್ನು ಬಿಡಲು ತಯಾರಿರಲಿಲ್ಲ. ತನ್ನ ಪೂರ್ವಜರು ಬ್ರಿಟಿಶರಿಗೆ ಸಲ್ಲಿಸಿದ ಸೇವೆಗೆ ಪ್ರತಿಯಾಗಿ ತಾನು ಕೇಳುತ್ತಿರುವುದು ನ್ಯಾಯಬದ್ಧ ಕಾನೂನಿನ ಪಾಲೇ ಹೊರತು ಬ್ರಿಟಿಶರ ಮೆಹರಬಾನಿಯನ್ನಲ್ಲ ಎಂಬುದು ಅವನಿಗೆ ಸ್ಪಷ್ಟವಾಗಿ ಗೊತ್ತಿತ್ತು. ಪರಿಹಾರ ಕೇಳುವುದಕ್ಕಾಗಿ ಅವನು ಖಸೀದಾಗಳನ್ನು (ಪ್ರಶಂಸಾ ಪದ್ಯಗಳು) ಬರೆದಿದ್ದರೂ ಅವು ಭಟ್ಟಂಗಿ ಪದ್ಯಗಳಾಗಿರಲಿಲ್ಲ. ಬದಲಾಗಿ ಅವು ತನಗೆ ಆಶ್ರಯದಾತರಾಗಿರುವವರಿಗೆ ಪ್ರತಿಯಾಗಿ ಸಲ್ಲಿಸುತ್ತಿರುವ ಶಿಷ್ಟಾಚಾರದ ಉಡುಗೊರೆಗಳಾಗಿದ್ದವು. ಅದಕ್ಕಿಂತ ಹೆಚ್ಚಾಗಿ ಇಂಥ ಬರಹಗಳು ಅವನ ಪ್ರತಿಭೆ, ಕ್ರಿಯಾಶೀಲತೆ, ಬೌದ್ಧಿಕತೆಗಳ ಉದಾಹರಣೆಗಳೂ ಆಗಿದ್ದವು.

ದುರಂತವೇನೆಂದರೆ, ಬ್ರಿಟಿಶ್ ಸರ್ಕಾರ ಅವನ ಮನವಿಯನ್ನು ಪರಿಗಣಿಸಲೇ ಇಲ್ಲ. ಮನೆಯಿಲ್ಲದೆ, ಹಣವಿಲ್ಲದೆ, ಸ್ವಂತಕ್ಕೆ ಓದಲು ಪುಸ್ತಕಗಳೂ ಇಲ್ಲದೆ ನಿರ್ಗತಿಕನಾಗಿದ್ದ ಗಾಲಿಬ್ ತನ್ನ ಮನವಿಗಳ ಪೂರೈಕೆಗಾಗಿ ದಿಲ್ಲಿಯಿಂದ ಕಲ್ಕತ್ತೆಗೆ ಸುಮಾರು ಒಂದೂವರೆ ವರ್ಷ ಪ್ರಯಾಣ ಮಾಡಿದರೂ ಬ್ರಿಟಿಶರು ಅವನತ್ತ ಕಣ್ಣೆತ್ತಿ ನೋಡಲಿಲ್ಲ. ಹಾಗಾಗಿ ಗಾಲಿಬ್ ಜೀವನ ಪರ್ಯಂತ ಸಾಲಗಾರನಾಗಿಯೇ ಉಳಿದ. ಕೊನೆಯವರೆಗೂ ಆರ್ಥಿಕ ಅಭದ್ರತೆಯಿಂದ ನರಳಿದ. ಬ್ರಿಟಿಶ್ ಸರ್ಕಾರಕ್ಕೆ ಮೂಲಭೂತವಾಗಿ ಗಾಲಿಬ್‌ನ ಯೋಗ್ಯತೆಯನ್ನು ಪುರಸ್ಕರಿಸುವ, ಅವನ ವಂಶ ತಮಗೆ ಸಲ್ಲಿಸಿದ ಸೇವೆಗೆ ಪ್ರತಿಫಲ ಸಲ್ಲಿಸುವ ಸೌಜನ್ಯವೇ ಇರಲಿಲ್ಲ.

1800ರ ಸುಮಾರಿಗೆ ಬ್ರಿಟಿಶ್ ಸರ್ಕಾರ ಇನ್ನೂ ವಸಾಹತುಶಾಹಿಯ ಪೂರ್ಣ ಸ್ವರೂಪವನ್ನು ಪಡೆಯದಿದ್ದರೂ ಆ ಹೊತ್ತಿಗಾಗಲೇ, ಅದರ ಅಸಲಿ ಕೆಡುಕಿನ ಗುಣಗಳನ್ನು, ವಿನಾಶಕಾರಿ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿತ್ತು. ಬ್ರಿಟಿಶ್ ಸರ್ಕಾರಕ್ಕೆ ತಾನು ಯಾರ ವಿರುದ್ಧ ದಬ್ಬಾಳಿಕೆ ನಡೆಸುತ್ತಿದ್ದೇನೋ ಆ ಸಮಾಜದಲ್ಲಿ ಬದುಕುತ್ತಿರುವ ಜನರಿಗೆ ತಮ್ಮದೇ ಆದ ಪ್ರತಿಭೆ, ಕಲ್ಪನಾ ಶಕ್ತಿ, ಜೀವನ ಶೈಲಿಗಳು ಇವೆ ಎಂಬ ಪ್ರಜ್ಞೆಯಾಗಲೀ, ಆ ಜನರ ಹಕ್ಕುಬಾಧ್ಯತೆಗಳನ್ನು ಮಾನ್ಯ ಮಾಡುವ ಜವಾಬ್ದಾರಿ ತನ್ನ ಮೇಲಿದೆ ಎಂಬ ಪರಿಜ್ಞಾನವಾಗಲೀ ಇರಲೇ ಇಲ್ಲ. ಇದು ಭಾರತದಂಥ ದೇಶಗಳ ಅಸ್ತಿತ್ವಕ್ಕೆ, ಸಂಸ್ಕೃತಿಗೆ ದೊಡ್ಡ ಆಘಾತ ಮಾಡುವ ಮುನ್ಸೂಚನೆಯಾಗಿತ್ತು.

ಗಾಲಿಬ್‌ನ ಸ್ಥಿತಿ ಎಷ್ಟು ಅತಂತ್ರವಾಗಿತ್ತು ಎಂದರೆ, ಇತ್ತ ಅವನ ಮನವಿಗಳಿಗೆ ಫಿರ್ಯಾದುಗಳಿಗೆ ಬೆಲೆ ಕೊಡಲು ಬ್ರಿಟಿಶರಿಗೆ ಆಸಕ್ತಿ ಇರಲಿಲ್ಲ. ಅತ್ತ ಅವನ ಆಕಾಂಕ್ಷೆಗಳನ್ನು ಪೂರೈಸಿ ಅವನ ಪ್ರತಿಭೆಗೆ ಪೋಷಣೆ ನೀಡುವ ಶಕ್ತಿ ಮೊಘಲ್ ಚಕ್ರವರ್ತಿಗಳಿಗೆ ಇರಲಿಲ್ಲ. ದಿಲ್ಲಿಯ ಸಿಂಹಾಸನದ ಮೇಲೆ ಸಾಮ್ರಾಜ್ಯ ಆಳುವುದಕ್ಕಿಂತ ಕಾವ್ಯ ಬರೆಯುವುದೇ ಶ್ರೇಷ್ಠ ಎಂದು ನಂಬಿದ್ದ ಬಹದೂರ್ ಶಾ ಜಫರ್‌ನಂತಹ ಶ್ರೇಷ್ಠ ಸಾಹಿತ್ಯಿಕ ಅಭಿರುಚಿಯ ವ್ಯಕ್ತಿ ಸಿಂಹಾಸನದಲ್ಲಿ ಕುಳಿತಿದ್ದರೂ ಗಾಲಿಬ್‌ಗೆ ಮೊಗಲರ ಆಸ್ಥಾನದಲ್ಲಿ ಸ್ಥಾನವಿರಲಿಲ್ಲ. ಒಂದು ಕಾಲದಲ್ಲಿ ನವರತ್ನಗಳಿಂದ ಕಂಗೊಳಿಸುತ್ತಿದ್ದ ಮೊಗಲ್ ಸಾಮ್ರಾಜ್ಯ ಈಗ ಕೇವಲ ಒಂದು ರತ್ನಕ್ಕೆ ಸೀಮಿತಗೊಂಡಿತ್ತು.

ಗಾಲಿಬ್‌ ತಾನು ಟರ್ಕಿಯ ಮಹಾಪ್ರಭಾವಿ ಮನೆತನಕ್ಕೆ ಸೇರಿದವನು ಎಂಬ ಒಣಹೆಮ್ಮೆ ತಲೆಯೇರಿ ಕುಳಿತಿತ್ತು. ಶ್ರೀಮಂತವರ್ಗಕ್ಕೆ ಸೇರಿದ ಜನರಲ್ಲಿರುವ ಆಡಂಬರ, ಆತ್ಮಪ್ರತ್ಯಯದ ಗುಣಗಳನ್ನು ಅವನು ಹೆಚ್ಚಾಗಿಯೇ ರೂಢಿಸಿಕೊಂಡಿದ್ದ.

ಜೌಕ್ ಎಂಬುವವನು ಸಾಮಾನ್ಯ ಕವಿಯಾಗಿದ್ದರೂ ಕವಿಕುಲಚಕ್ರವರ್ತಿಯಾಗಿ ಜಫರ್‍ನ ಆಸ್ಥಾನದಲ್ಲಿ ತಳ ಊರಿದ್ದ. ಜೌಕ್ ಇರುವವರೆಗೂ ಗಾಲಿಬ್‌ಗೆ ಮೊಗಲ್ ಚಕ್ರವರ್ತಿಯ ಆಶ್ರಯ ಸಿಗಲಿಲ್ಲ. ಪರಕೀಯ ಆಡಳಿತ ವ್ಯವಸ್ಥೆಗೆ ಗಾಲಿಬನಂಥ ದೇಶೀ ಪ್ರತಿಭೆಗಳ ಸೃಜನಶೀಲತೆಯನ್ನು ಗುರುತಿಸಲಾಗದಷ್ಟು ಕುರುಡುತನವಿದ್ದರೆ, ಮೊಗಲರಿಗೆ ಗಾಲಿಬನನ್ನು ಪೋಷಿಸುವಷ್ಟು ಸಾಮರ್ಥ್ಯ ಇರಲಿಲ್ಲ. ಇಂಥ ಅತಂತ್ರ ಸ್ಥಿತಿ ಅಸ್ಥಿರತೆಗಳ ನಡುವೆ ಗಾಲಿಬ್ ತನ್ನ ಪ್ರಚಂಡ ಆತ್ಮವಿಶ್ವಾಸ, ಸಣ್ಣದೊಂದು ಅಹಂಕಾರದ ಬಲದಿಂದಲೇ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿತ್ತು.

ಎಲ್ಲ ಬಗೆಯ ಅಧಿಕಾರ, ದರ್ಪವನ್ನು ಧಿಕ್ಕರಿಸುವ ಕಾರಣಕ್ಕಾಗಿಯೇ ಗಾಲಿಬ್ ಕುಡಿತ, ಜೂಜು ಮತ್ತು ಸಾಂಪ್ರದಾಯಿಕ ಇಸ್ಲಾಮಿಗೆ ಹೊರತಾದ ಪಾಷಂಡಿತನವನ್ನು ಬೆಳೆಸಿಕೊಂಡ. ದಿಲ್ಲಿಯಿಂದ ಕಲ್ಕತ್ತೆಗೆ ಹೋದರೂ ಪಿಂಚಣಿ ಸಿಗದೆ ಫಕೀರನಾಗಿದ್ದ ಗಾಲಿಬ್ ಪರ್ಶಿಯನ್ ಫ್ರೊಫೆಸರ್ ಹುದ್ದೆಗೆ ಅರ್ಜಿ ಹಾಕಿದ್ದ. ಆ ಹುದ್ದೆಯ ಸಂದರ್ಶನಕ್ಕೆ ಹೋದಾಗ ನಡೆದ ಘಟನೆ ಗಾಲಿಬ್‌ನ ಆತ್ಮಾಭಿಮಾನ-ಸ್ವಂತಿಕೆಗೆ ಸಂಕೇತದಂತಿದೆ. ಪಲ್ಲಕ್ಕಿಯಿಲ್ಲದೆ ಎಲ್ಲೂ ಹೋಗದ ಗಾಲಿಬ್ ಕೆಲಸ ಕೇಳಿ ಸಂದರ್ಶನಕ್ಕೆ ಹೋಗುವಾಗ ದಾರಿಯುದ್ದಕ್ಕೂ ನಾಣ್ಯಗಳನ್ನು ಚಿಮ್ಮುತ್ತ ಸಾಗುತ್ತಾನೆ. ಅಷ್ಟೇ ಅಲ್ಲ, ತನ್ನನ್ನು ಬ್ರಿಟಿಶ್ ಅಧಿಕಾರಿ ಬಾಗಿಲ ಬಳಿ ಎದುರುಗೊಂಡು ಪಲ್ಲಕ್ಕಿಯಿಂದ ಕರೆದೊಯ್ಯಬೇಕು ಎಂದು ಷರತ್ತು ಹಾಕುತ್ತಾನೆ. ಕೆಲಸ ಕೇಳಿ ಸಂದರ್ಶನಕ್ಕೆ ಬಂದ ವ್ಯಕ್ತಿಯನ್ನು ಹೀಗೆ ಹೂಮಳೆ ಚೆಲ್ಲಿ ಸ್ವಾಗತಿಸುವ ಪದ್ಧತಿ ಇಲ್ಲವೆಂದು ಬ್ರಿಟಿಶ್ ಅಧಿಕಾರಿ ಹೇಳಿದಾಗ ತನ್ನ ವ್ಯಕ್ತಿತ್ವ- ಪ್ರತಿಭೆಗೆ ಬೆಲೆ ಇಲ್ಲದ ಕಡೆ ತಾನಿರಲಾರೆ ಎಂದು ಗಾಲಿಬ್ ಶೇರವಾನಿಯ ಮೇಲಿನ ಧೂಳು ಕೊಡವಿಕೊಂಡು ವಾಪಸು ಬರುತ್ತಾನೆ. ಈ ಘಟನೆ ಅವನ ವ್ಯಕ್ತಿತ್ವ, ಪ್ರತಿಭೆ ಹಾಗೂ ಅಹಂಕಾರ ಎಲ್ಲವುಗಳಿಗೆ ಹಿಡಿದ ಕನ್ನಡಿಯಂತಿದೆ. ಇದಿಷ್ಟೇ ಅಲ್ಲ ‘ಕಾಬಾದ ಬಾಗಿಲು ತಾನಾಗಿಯೇ ತೆರೆದು ಸ್ವಾಗತಿಸದಿದ್ದರೆ, ನನಗೆ ಸ್ವರ್ಗವೂ ಬೇಡ’ ಎನ್ನುವ ಗಾಲಿಬ್‌ಗೆ ಲೌಕಿಕವಾಗಿ ಸಿಗುವ ಅಧಿಕಾರ, ರಾಜಕೀಯ ವ್ಯಕ್ತಿಗಳಿಂದ ಸಿಗುವ ಮನ್ನಣೆ, ಧಾರ್ಮಿಕವಾಗಿ ದಕ್ಕಬಹುದಾದ ಪ್ರಲೋಭನೆಗಳು-ಎಲ್ಲವೂ ಪರಮ ನಿರ್ಲಕ್ಷ್ಯಕ್ಕೆ ಯೋಗ್ಯವಾದ ಸಂಗತಿಗಳಾಗಿದ್ದವು.

ಇಂಥ ನಿರ್ಲಕ್ಷ್ಯ, ಧಿಕ್ಕಾರದ ಧೋರಣೆಯ ಭಾಗವಾಗಿಯೇ ಗಾಲಿಬನ ಕುಡಿತ- ಜೂಜಿನ ಪ್ರವೃತ್ತಿಯನ್ನು ನೋಡಬೇಕು. ಹಾಗೆ ನೋಡಿದರೆ, ಕುಡಿತ, ಲೋಲುಪತೆಯ ಅನುಭವಗಳು ಉರ್ದು ಕಾವ್ಯಕ್ಕಾಗಲೀ, ಪರ್ಶಿಯನ್ ಕಾವ್ಯಕ್ಕಾಗಲೀ ಹೊಸವೇನಲ್ಲ. ಗಾಲಿಬನ ಕುಡಿತ, ಜೂಜಿನ ಅಭ್ಯಾಸಗಳು, ಸ್ಥಾಪಿತ ಧಾರ್ಮಿಕ ವಿರೋಧಿ ನಿಲುವುಗಳು ಕೇವಲ ಗಾಲಿಬನ ವಿಲಾಸಿ ಪ್ರವೃತ್ತಿಗೆ, ಲೋಲುಪತನಕ್ಕೆ ಮಾತ್ರ ಉದಾಹರಣೆಯಾಗದೆ, ಅವನ ತೀವ್ರ ಜೀವನಪ್ರೀತಿ ಹಾಗೂ ಆತ್ಮಾಭಿಮಾನಕ್ಕೆ ಉದಾಹರಣೆಯಾಗಿಯೂ ನೋಡಬಹುದು.

ಗಾಲಿಬ್‌ನ ಜೀವನ ಕಥನವನ್ನು ಚರಿತ್ರೆಯ ಬಹು ದೊಡ್ಡ ಸಂಕ್ರಮಣದ ತಿರುವುಗಳಲ್ಲಿ ನಿಂತು ಕಟ್ಟಿಕೊಡುತ್ತಲೇ ಅದನ್ನು ಒಂದು ಯುಗದ, ಸಂಸ್ಕೃತಿಯ ಆತ್ಮಾಭಿಮಾನದ ಹೋರಾಟದ ಕತೆಯಾಗಿ ಕಟ್ಟುವುದರಲ್ಲಿ ಪವನ್ ಕುಮಾರ್ ವರ್ಮಾ ಅವರ ಪುಸ್ತಕದ ವಿಶೇಷತೆ ಇದೆ.

ಇದಕ್ಕಿಂತ ಮುಖ್ಯವಾಗಿ ಗಾಲಿಬ್‌ನ ಜೀವನ ಕಥನಕ್ಕೆ ಹಿನ್ನೆಲೆಯಾಗಿ ಬಂದಿರುವ ದಿಲ್ಲಿಯ ಕತೆ ಒಂದು ಅಪೂರ್ವವಾದ ಸಾಂಸ್ಕೃತಿಕ ದಾಖಲೆಯ ಹಾಗಿದೆ. ಗಾಲಿಬ್ ಎಂಥಾ ಕಾಲದಲ್ಲಿ ಬದುಕಿದ್ದ ಎಂದರೆ ಅಲ್ಲಿ ಬಾದಶಹನಿಂದ ಭಿಕ್ಷುಕನವರೆಗೆ ಎಲ್ಲರೂ ಕಾವ್ಯದ ಮೋಹಕ್ಕೆ ಶರಣಾದವರೇ. ರಾತ್ರಿ ಕಳೆದು ಬೆಳಗಾದರೂ ದಿಲ್ಲಿಯಲ್ಲಿ ನಡೆಯುತ್ತಿದ್ದ ಮುಶಾಯಿರಾಗಳು, ನೃತ್ಯಕೂಟಗಳು ನಿಲ್ಲುತ್ತಿರಲಿಲ್ಲ. ದೆಹಲಿಯಲ್ಲಿ ಪ್ರತಿ ಹದಿನೈದು ದಿನಗಳಿಗೊಮ್ಮೆ ನಡೆಯುತ್ತಿದ್ದ ಕಾವ್ಯಗೋಷ್ಠಿಗಳು ಅಂದಿನ ಕಾಲದ ಸಾಂಸ್ಕೃತಿಕ ಅಭಿರುಚಿಗೆ ಉದಾಹರಣೆಯಾಗಿದ್ದವು.

ದಿಲ್ಲಿಯಲ್ಲಿ ನಡೆಯುತ್ತಿದ್ದ ನೃತ್ಯ, ಕಾವ್ಯ, ಮದ್ಯ ಗೋಷ್ಠಿಗಳು ಊಳಿಗಮಾನ್ಯ ವ್ಯವಸ್ಥೆಯ ವಿಲಾಸಿ ಜೀವನದ ವೈಭವಕ್ಕೆ ಉದಾಹರಣೆಯಂತೆ ಕಾಣಿಸಿದರೂ ಅವು ಗಾಲಿಬ್‌ನ ಕಾಲದ ಸ್ವೀಕೃತ ಮೌಲ್ಯಗಳೇ ಆಗಿದ್ದವು. ಆ ಕಾಲದಲ್ಲಿ ಕಾವ್ಯ, ಸಂಗೀತ, ನೃತ್ಯ ಮೊದಲಾದ ಸಕಲಕಲಾ ಪ್ರಕಾರಗಳು, ಪ್ರತಿಭೆಗಳೂ ರಾಜಾಶ್ರಯದ ನೆರಳಿನಲ್ಲಿಯೇ ಬೆಳೆದು ನಿಲ್ಲಬೇಕಾಗಿತ್ತು. ರಾಜಪರಿವಾರ, ಕುಲೀನ ಶ್ರೀಮಂತ ವರ್ಗದ ಆಸರೆಯಲ್ಲಿಯೇ ಅಂದಿನ ಕಾಲದ ಕಲಾವಿದರು ಸಾರ್ಥಕತೆಯನ್ನು ಪಡೆದುಕೊಳ್ಳಬೇಕಾದ ಸ್ಥಿತಿ ಇತ್ತು. ಅದೇನೇ ಇದ್ದರೂ ದೆಹಲಿಯ ಬಹದೂರ್ ಶಾ ಜಫರ್‍ನ ಕಾಲದಲ್ಲಿ ನಡೆಯುತ್ತಿದ್ದ ಫೂಲ್ ವಾಲೋಂಕಿ ಸೈರ್(ಹೂವಾಡಿಗರ ಮೆರವಣಿಗೆ) ರಾಮಲೀಲಾ ಮೆರವಣಿಗೆಗಳು, ಹೋಳಿ ಹಬ್ಬ, ಪತಂಗ ಬಾಜಿ(ಗಾಳಿಪಟ ಹಾರಿಸುವ ಹಬ್ಬ), ಕಬೂತರ್ ಬಾಜಿ (ಪಾರಿವಾಳಗಳನ್ನು ಹಾರಿಸುವ ಹಬ್ಬ) ಮೊದಲಾದವುಗಳು ಬ್ರಿಟಿಶರು ಭಾರತಕ್ಕೆ ಆಗಮಿಸುವ ಮುನ್ನ ಭಾರತವು ರೂಢಿಸಿಕೊಂಡು ಬಂದಿದ್ದ ಸದಭಿರುಚಿಯ-ಸಹಬಾಳ್ವೆಯ, ಶ್ರೀಮಂತವಾದ ಸಾಂಸ್ಕೃತಿಕ ಅಭಿರುಚಿಯ ಜೀವನ ಶೈಲಿಗೆ ಉದಾಹರಣೆಯಾಗಿದ್ದವು.

ಫೂಲ್ ವಾಲೋಂಕಿ ಸೈರ್‌ನ ದಿನದಂದು ರಾಜಪರಿವಾರದ ಎಲ್ಲ ಸದಸ್ಯರು ನಿಗದಿತ ದಿನದಂದು ಊರಹೊರಗೆ ಹೋಗಿ ಅಡುಗೆ ಮಾಡಿ ನೃತ್ಯ ಹಾಡುಗಳನ್ನು ಹಾಡುತ್ತ ಸಂತೋಷದಿಂದ ಕಾಲ ಕಳೆಯುತ್ತಿದ್ದರು. ರಾಜಪರಿವಾರದವರು ಇಡೀ ದಿನ ಸೇರಿ ಮಾಡಿದ ಹೂವಿನ ಚಾದರ-ಹಂದರಗಳನ್ನು ಸಾಲಂಕೃತವಾಗಿ ಬೀದಿಬೀದಿಗಳಲ್ಲಿ ಮೆರವಣಿಗೆಯಲ್ಲಿ ತಂದು ದಿಲ್ಲಿಯ ಪ್ರಸಿದ್ಧ ಯೋಗಮಾಯಾ ಮಂದಿರಕ್ಕೂ ಕಿಶ್ತವಾರ್ ದರ್ಗಾಕ್ಕೂ ಸಲ್ಲಿಸುತ್ತಿದ್ದರು. ಬಹದೂರ್ ಶಾ ಜಫರ್‌ಗೆ ಎಂಥ ಸಹಬಾಳ್ವೆಯ ಮನೋಧರ್ಮವಿತ್ತು ಎಂದರೆ, ಅವನು ರಾಮಲೀಲಾ ಮೆರವಣಿಗೆ ತನ್ನ ಅರಮನೆಯ ಮುಂದೆಯೇ ಹಾದುಹೋಗಬೇಕು ಎಂದು ಆಜ್ಞೆ ಮಾಡಿದ್ದ. ಪ್ರತಿವರ್ಷ ನಡೆಯುತ್ತಿದ್ದ ಪತಂಗ್‌ಬಾಜಿ, ಕಬೂತರ್ ಬಾಜಿಗಳಂದು ರಾಜ ಸ್ವತಃ ಎಲ್ಲರೊಂದಿಗೆ ಸೇರಿ ಗಾಳಿಪಟ- ಪಾರಿವಾಳಗಳನ್ನು ಆಕಾಶಕ್ಕೆ ಹಾರಿಸುತ್ತಿದ್ದ.

ಇಂಥ ಅದ್ಭುತವಾದ ಜೀವನಕ್ರಮವನ್ನು ರೂಢಿಸಿಕೊಂಡು ಸ್ವರ್ಗದಂತೆ ಕಂಗೊಳಿಸುತ್ತಿದ್ದ ದೆಹಲಿ ಬ್ರಿಟಿಶರ ಕಪಿಮುಷ್ಟಿಗೆ ಸಿಕ್ಕು ನಿಧಾನವಾಗಿ ಕಾರಕೂನರ ಕೇಂದ್ರ ಕಚೇರಿಯಾಗಿಬಿಟ್ಟಿತು. ಅದಕ್ಕಿಂತ ಮುಖ್ಯವಾಗಿ, 1857ರ ಸಿಪಾಯಿದಂಗೆಯ ನಂತರ ದಿಲ್ಲಿಯ ಬೀದಿಗಳು ದೊಂಬಿ, ಕೊಲೆ, ರಕ್ತಪಾತ, ಲೂಟಿಯ ಕೇಂದ್ರವಾಗಿಬಿಟ್ಟವು.

1857ರ ದಂಗೆಯ ಸಂದರ್ಭದಲ್ಲಿ ಕಾನ್ಪುರ, ಗ್ವಾಲಿಯರ್‌ನಿಂದ ಬಂಡೆದ್ದು ಬಂದಿದ್ದ ಭಾರತೀಯ ಸೈನಿಕರು ದೆಹಲಿಯ ಬೀದಿಬೀದಿಗಳಲ್ಲಿ ದೊರಕುತ್ತಿದ್ದ ನೂರಾರು ಬಗೆಯ ರಸಭರಿತ ಸಿಹಿತಿಂಡಿಗಳು, ಮಹಲುಗಳ ಮೇಲಿನಿಂದ ಹರಿದುಬರುತ್ತಿದ್ದ ಸಂಗೀತ ನೃತ್ಯದ ಪಲುಕುಗಳನ್ನು ಕೇಳಿ, ನಾಳೆ ಬೆಳಗಾದರೆ ನಾವು ಯಾರಿಗೋಸ್ಕರ ಯುದ್ಧ ಮಾಡಬೇಕು ಎಂಬ ಗೊಂದಲದಲ್ಲಿ ಬಿದ್ದಿದ್ದರು ಎಂದು ಇತಿಹಾಸಕಾರ ಡಾರ್ಲಿಂಪಲ್ ಬರೆಯುತ್ತಾನೆ. ಇಂಥ ದೆಹಲಿಯಲ್ಲಿ, 1857ರ ದಂಗೆಯ ನಂತರ ಬ್ರಿಟಿಶರು ಸುಮಾರು 27,000ಕ್ಕೂ ಹೆಚ್ಚು ದಂಗೆಕೋರರನ್ನು ನೇತುಹಾಕಿ ಹೆಣಗಳ ತೋರಣವನ್ನು ಕಟ್ಟಿದರು. ವ್ಯಾಪಾರ, ಪರಸ್ಪರ ಭೇಟಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಕೇಂದ್ರವಾಗಿದ್ದ ಚಾಂದನಿ ಚೌಕ್ ಹೆಣಗಳಿಂದ ಕೊಳೆತುನಾರುವ ಸ್ಮಶಾನವಾಯಿತು.

(ಬಿದಿರಹಳ್ಳಿ ನರಸಿಂಹಮೂರ್ತಿ)

ದುರಂತವೆಂದರೆ, ಸ್ವರ್ಗದಂತಿದ್ದ ದಿಲ್ಲಿ ಸ್ಮಶಾನದಂತಾದ ಕರಾಳದಿನಗಳಲ್ಲಿ ಗಾಲಿಬ್ ಇದೆಲ್ಲದಕ್ಕೆ ಸಾಕ್ಷಿಯಾಗಿದ್ದ. ಮೊಗಲರ ಕಾಲದಲ್ಲಿ ಬಹಳ ಕಲಾತ್ಮಕವಾಗಿ ರೂಪಗೊಂಡಿದ್ದ ಲತಾಮಂಟಪಗಳು, ಉದ್ಯಾನಗಳು, ಕಾರಂಜಿಗಳು, ಸೈನಿಕರ ಸೇನಾ ಪಾಳ್ಯಗಳಾಗಿ, ಕುದುರೆ ಲಾಯಗಳಾಗಿ, ಆಯುಧಗಳನ್ನು ಕೂಡಿಡುವ ಶಸ್ತ್ರಾಗಾರಗಳಾಗಿ ಬದಲಾಗಿಬಿಟ್ಟವು. ದಿಲ್ಲಿಯ ಚಾಂದನಿ ಚೌಕದಲ್ಲಿ ಎಷ್ಟು ಹೆಣಗಳು ಬಿದ್ದಿದ್ದವೆಂದರೆ, ಅವುಗಳನ್ನು ತಿನ್ನಲು ಕಾಗೆ-ಹದ್ದುಗಳಿಗೂ ಪುರುಸೊತ್ತಿರಲಿಲ್ಲ. ರಾಜನ ಅರಮನೆ, ಮಸೀದಿಗಳು, ಮದರಸಾಗಳು, ಪ್ರತಿಷ್ಠಿತವಾಗಿದ್ದ ದಿಲ್ಲಿ ಕಾಲೇಜು ಎಲ್ಲವೂ ಸಹ ತಮ್ಮ ಗತವೈಭವ, ವಿಶಿಷ್ಟತೆಗಳನ್ನು ಕಳಚಿಕೊಂಡವು.

1857ರ ದಂಗೆಯಲ್ಲಿ ಸಿಪಾಯಿಗಳ ಆಕ್ರಮಣ ಮತ್ತು ಬ್ರಿಟಿಶರ ಪುನರಾಕ್ರಮಣ ಎರಡಕ್ಕೂ ಬಲಿಯಾದ ದೆಹಲಿ ನಿರಂತರ ಹಿಂಸಾಚಾರ ದೊಂಬಿಗಳಿಂದ ನುಚ್ಚುನೂರಾಯಿತು. ದೆಹಲಿಯ ಪತನವನ್ನು ಬಿದಿರಹಳ್ಳಿ ನರಸಿಂಹಮೂರ್ತಿಯವರ ಅನುವಾದ ಒಂದು ಉಜ್ವಲ ಸಂಸ್ಕೃತಿಯ ಅವಸಾನ ಎಂಬಂತೆ ಚಿತ್ರಿಸುತ್ತದೆ. ಈ ಕೃತಿ ಬಹಳ ಮುಖ್ಯವಾಗುವುದು ಯಾಕೆಂದರೆ ಅದು ಏಕಕಾಲಕ್ಕೆ ಕವಿಯೊಬ್ಬನ ವಿಕ್ಷಿಪ್ತ ವ್ಯಕ್ತಿತ್ವವನ್ನು, ಬಹಳ ಶ್ರೀಮಂತವಾದ ಸಂಸ್ಕೃತಿಯೊಂದರ ಏಳುಬೀಳಿನ ಕಥನವನ್ನು, ಚರಿತ್ರೆಯ ಕ್ರೂರ ಬೆಳವಣಿಗೆಯ ಪರಿಣಾಮಗಳನ್ನು ಒಂದೇ ಬಾರಿಗೆ ದಾಖಲಿಸುತ್ತದೆ ಎಂಬ ಕಾರಣಕ್ಕಾಗಿ. ಹಾಗೆ ನೋಡಿದರೆ, ದಿಲ್ಲಿಯ ಪತನ, ಅಲ್ಲಿಯ ಜೀವನ ಶೈಲಿಯ ಅವಸಾನಗಳೆಲ್ಲವೂ ಇಂಗ್ಲಿಶ್ ನವ್ಯ ಸಾಹಿತ್ಯದಲ್ಲಿ ಬೋದಿಲೇರ್ ಪ್ಯಾರಿಸ್‌ನ ಪತನದ ಕತೆಯ ಮೂಲಕ, ಎಲಿಯೆಟ್ ಲಂಡನ್ ನಗರದ ಪತನದ ಮೂಲಕ ಹೇಳಿದ ಮಾದರಿಯಲ್ಲಿಯೇ ಇದೆ.

ಬೋದಿಲೇರ್, ಎಲಿಯೆಟ್ ಮೊದಲಾದವರು ಪ್ರಪಂಚದ ಅತ್ಯಾಧುನಿಕ ನಗರಗಳಾದ ಪ್ಯಾರಿಸ್, ಲಂಡನ್‌ಗಳ ಕಥನಗಳ ಮೂಲಕ ಆಧುನಿಕ ಸಂಸ್ಕೃತಿ ವಿನಾಶದತ್ತ ಸಾಗಿರುವ ದುರಂತವನ್ನು ಹೇಳುತ್ತಾರೆ.

ಮುಖ್ಯವಾಗಿ ಗಾಲಿಬ್ ಪಶ್ಚಿಮದ ಎಲ್ಲ ಲೇಖಕರಿಗಿಂತ ಮುಂಚೆಯೇ ಬ್ರಿಟಿಶ್ ಆಧುನಿಕತೆ ಉಂಟುಮಾಡುವ ವಿಘಟನೆ, ವಿನಾಶದ ಪರಿಣಾಮಗಳನ್ನು ಗ್ರಹಿಸಿದ್ದ. ಚರಿತ್ರೆಯ ಪದಾಘಾತಕ್ಕೆ ಸಿಕ್ಕು ನಮ್ಮ ಸಂಸ್ಕೃತಿ, ಸಂತೋಷಗಳು ಹೇಗೆ ನಾಶವಾಗುತ್ತವೆ ಎಂಬ ಕರಾಳ ಭವಿಷ್ಯದರ್ಶನ (ಅಪೋಕಲಿಪ್ಟಿಕ್ ವಿಶನ್) ಇದ್ದ ಲೇಖಕ ಗಾಲಿಬ್. ಗಾಲಿಬನ ಕುರಿತ ಈ ಪುಸ್ತಕ, ಬ್ರಿಟಿಶ್ ಆಡಳಿತ ಹಾಗೂ ಅವರ ಆಧುನಿಕತೆ ತಂದೊಡ್ಡಬಹುದಾದ ದೂರಗಾಮಿ ಪರಿಣಾಮಗಳನ್ನು ಮೊದಲೇ ಗ್ರಹಿಸಿದ್ದ ಲೇಖಕನೊಬ್ಬನನ್ನು ಪರಿಚಯಿಸುತ್ತದೆ.


ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ವ್ಯಕ್ತಿಯ ಅಭದ್ರತೆ, ಸಂಸ್ಕೃತಿಯ ಅಸ್ಥಿರತೆ ಎಲ್ಲವನ್ನೂ ಅನುಭವಿಸಿ ಬರೆದ ಗಾಲಿಬ್ ಒಂದು ರೀತಿಯಲ್ಲಿ ಭಾರತದ ಬೋದಿಲೇರ್‌ನಂತೆ ಕಾಣಿಸುತ್ತಾನೆ. ಗಾಲಿಬನ ಕುಡಿತ, ಲೋಲುಪತೆ, ಸಂಪ್ರದಾಯ ವಿರೋಧಿ ನಡವಳಿಕೆಗಳನ್ನು ಗಮನಿಸಿದರೆ ಅವನು ಬೋದಿಲೇರನಿಗಿಂತ ಆಧುನಿಕನೇ.