ಚಾ ಕುಡಿಯುವ ಮಜಾ ಕುಡಿಯುವವರಿಗೇ ಗೊತ್ತು. ಚಾ ಕುಡಿಯುವ ಹೊತ್ತಲ್ಲಿ ಸರಿಯಾದ ಚಾ ಹೊಟ್ಟೆಗೆ ಬೀಳದಿದ್ದರೆ ಅದರ ಫಾಜೀತಿ ಕೂಡ ಚಾ ಕುಡಿಯುವ ಚಟದವರಿಗೆ ಮಾತ್ರ ಅರ್ಥವಾಗಲು ಸಾಧ್ಯ. ನಾನು ದಿನಕ್ಕೊಂದು ಬಾರಿ ಮಾತ್ರ ಚಾ ಕುಡಿಯುವುದು, ದಿನಾಲೂ ಮಧ್ಯಾಹ್ನ ೨:೩೦ಯಿಂಡ ೩ ಗಂಟೆಯ ಒಳಗೆ ಒಂದು ಉದ್ದ ಲೋಟದ ತುಂಬಾ ಚಾ ಬೀಳಬೇಕು, ಅಷ್ಟೇ ನನ್ನ ಸಿಂಪಲ್ ಚಟ. ನನ್ನ ಈ ಒಂದು ಸರಳ ಬೇಡಿಕೆ ಕೂಡ ಅಮೇರಿಕೆಯಲ್ಲಿ ಈಡೇರಿಸಿಕೊಳ್ಳುವುದು ಎಷ್ಟು ಕಷ್ಟ ಗೊತ್ತ? ಇಂಗ್ಲೆಂಡಿನ ಪ್ರಖ್ಯಾತ ನಾಟಕಕಾರ ನೋಯೆಲ್ ಕೊವರ್ದ್ ಕೇಳುತ್ತಾನೆ ” Wouldn’t it be dreadful to live in a country where they didn’t have tea?”. ಅವನು ಎಲ್ಲೋ ಅಮೆರಿಕಾಗೆ ಬಂದಾಗ ಈ ಮಾತನ್ನು ಅನುಭವಿಸಿದನೋ ಏನೋ. ಕೆಲಸಕ್ಕೆ ಹೋದಾಗ ವಾರದ ೫ ದಿನವೂ ಲಿಪ್ಟನ್ ಟೀ ಬ್ಯಾಗಿನ ಚಾ. ನನ್ನ ಮಗ್ ಅಳತೆಗೆ ಒಂದು ಬ್ಯಾಗ್ ಹಾಕಿದರೆ ಚೊಳಪಟ್ಟೆ ಚಾ, ೨ ಬ್ಯಾಗ್ ಹಾಕಿ ಕುದಿಸಿಬಿಟ್ಟರೆ ತೀರ ಕಡಕ್. ೨ ಬ್ಯಾಗ್ ಉಪಯೋಗಿಸಿ, ಅದನ್ನು ಬಿಸಿ ನೀರು ಸೇರಿಸಿ, ಹಾಲು ಸಕ್ಕರೆ ಸೇರಿಸಿ, ಮತ್ತೆ ಮೈಕ್ರೋವೆವ್ ಮಾಡಿ, ಅದರ ಒಂದು ಸರಿಯಾದ ಹದ ಕಂಡುಕೊಳ್ಳಲು ಒಂಥರಾ ಕಲಿನರಿ ಆರ್ಟ್ ಡಿಗ್ರಿ ಬೇಕು.
ಮತ್ತೆ ವಾರಾಂತ್ಯದಲ್ಲಿ ಚಾ ಸೊಪ್ಪು ಕುದಿಸಿ ನಮ್ಮಲ್ಲಿಯಂತೆ ಒಳ್ಳೆಯ ಘಮಘಮ ಚಾ ಕುಡಿಯುವ ಸೊಗಸಿಗಾಗಿ ಕಾಯುತ್ತಿರುತ್ತೇನೆ. ಅದೂ ಒಂದು ಬಗೆಯ ಯಜ್ಞ. ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಹಾಲು. ಮಕ್ಕಳಿಗೆ ಪೂರ್ಣ ಪ್ರಮಾಣದ ಕೊಬ್ಬಿನಂಶದ ಹಾಲು. ಮೊಸರು ಹೆಪ್ಪು ಹಾಕಲು ೨% ಕೊಬ್ಬಿನಂಶದ ಹಾಲು. ನನ್ನ ಚಾ, ನಮ್ಮೆಜಮಾನರ ಸೀರಿಯಲ್ಗೆ ೧% ಕೊಬ್ಬಿನಂಶದ ಹಾಲು. ಯಾವುದೊಂದು ಬಗೆಯ ಹಾಲು ಮುಗಿದು ಹೋದರು ನನ್ನ ಚಾಕ್ಕೆ ಮಾತ್ರ ಅಡ್ಡಿಯಿಲ್ಲ, ಆದರೆ ಒಂದೊಂದು ಹಾಲಿಗೆ ಒಂದೊಂದು ಬಗೆಯ ನೀರಿನ ಪ್ರಮಾಣ. ಇಲ್ಲಿಯ ಇಂಡಿಯನ್ ದಿನಸಿ ಅಂಗಡಿಗಳಲ್ಲಿ ಕೂಡ ಒಮ್ಮೊಮ್ಮೆ ಒಂದು ಬಗೆಯ ಸೊಪ್ಪು ಸಿಕ್ಕರೆ ಮತ್ತೆ ಅದೇ ಬ್ರಾಂಡಿನ, ಗುಣಮಟ್ಟದ ಸೊಪ್ಪು ಸಿಗುತ್ತದೆಯೆಂದು ಹೇಳಲಾಗದು. ಒಂದು ಸೊಪ್ಪನ್ನು ಹೆಚ್ಚು ಕುದಿಸಿದರೆ ಒಳ್ಳೆಯದು, ಮತ್ತೊಂದಕ್ಕೆ ಬರಿ ಕುದಿ ನೀರು ಹಾಕಿಟ್ಟರೆ ಸಾಕು. ಒಂದೊಂದು ಸೊಪ್ಪಿನ ಚಾ ಕಣ್ಣು ಒಂದೊಂದು ಬಣ್ಣ. ಅದೆಲ್ಲವನ್ನೂ ಅಳೆದು ಸುರಿದು ಕಂಡುಕೊಂಡು ಮಾಸ್ಟರಿಸಿದ್ದೇನೆ ಕೇವಲ ಒಂದು ಕಪ್ ಚಾಕ್ಕಾಗಿ. ಮಧ್ಯಾಹ್ನ ಊಟವಾದ ಮೇಲೆ ಮನೆಮಂದಿಯಲ್ಲ ಮಲಗಿದ ಮೇಲೆ, ಒಂದು ಉದ್ದ ಮಗ್ ಹಬೆಯಾಡುವ ಚಾ ಮಾಡಿಕೊಂಡು ಹೀರುತ್ತಾ ಧ್ಯಾನಸ್ಥಳಾಗುತ್ತೇನೆ Each cup of tea represents an imaginary voyege ಎಂಬಂತೆ. ಅದು ನನ್ನ ಅತ್ಯಂತ ರಿಲಾಕ್ಸಿನ ಸಮಯ. ಆ ವೇಳೆಯನ್ನು ಡಿಸ್ಟರ್ಬ್ ಮಾಡುವ ಗೋಜಿಗೆ ಹೋಗದಂತೆ ನನ್ನ ಚಾ, ಕಾಫಿ ಒಂದೂ ಕುಡಿಯದ ಗಂಡ ತಮ್ಮ ಬಿಸಿ ಅನುಭವದಿಂದ ಕಂಡಿಕೊಂಡಿದ್ದಾರೆ. ಮಕ್ಕಳು ಎದ್ದರೂ ಅಮ್ಮ ಚಾ ಕುಡಿಯುತ್ತಿದ್ದಾಳೆ ಎಂದು ಹೇಳಿದರೆ ನನ್ನ ಕಡೆ ಮುಖ ಹಾಕುವುದಿಲ್ಲ.
ಇನ್ನು ವೀಕೆಂಡಿಗೆ ಹೊರಸುತ್ತುವ ಕಾರ್ಯಕ್ರಮವಿದ್ದರಂತೂ ಮುಗಿದೇ ಹೋಯಿತು, ನನ್ನ ಚಾ ಪರದಾಟ… ಹರ ಹರ ಶ್ರೀಚೆನ್ನ ಸೋಮೇಶ್ವರಾ. ಇಲ್ಲಿನ ಪ್ರತಿಷ್ಠಿತ ಕಾಫಿ ಅಂಗಡಿ ಸರಣಿಯಲ್ಲೊಂದಾದ “ಸ್ಟಾರ್ ಬಕ್ಸ್” ನಲ್ಲಿ ಹೋಗಿ ಚಾ ಕೇಳಿದಿರೋ ನಿಮ್ಮ ಚಾ ರುಚಿ ಜನ್ಮ ಜನ್ಮಕ್ಕೂ ಕೆಟ್ಟು ಹೋಯಿತೆಂದೇ ತಿಳಿಯಿರಿ. ನೆಟ್ಟಗೆ ಸಿಂಪಲ್ ಚಾ ಮಾಡುವುದು ಬಿಟ್ಟು, “ವನಿಲ್ಲಾ ಚೈ, ಚೈ ಟೀ ಲಾಟೆ ” ಎಂದು ಊರಿಗಿಲ್ಲದ ಹೆಸರು ಹೇಳಿ ಲೊಟ್ಟೆ ಹೊಡೆದು ಕಳಿಸುತ್ತಾರೆ. ಲೋಕಲ್ ಕಾಫಿ ಅಂಗಡಿಗಳಲ್ಲಿ ಹೋಗಿ ಚಾ ಮಾಡಿಸಿಕೊಂಡು ಕುಡಿಯುವುದಕ್ಕಿಂತ ಕಲಗಚ್ಚು ಕುಡಿಯುವುದು ಲೇಸು. (ಅದೂ ಇಲ್ಲಿ ಸಿಗುವುದಿಲ್ಲ ಎನ್ನಿ) ಇನ್ನು ರೆಸ್ಟೋರಂಟ್ ಗಳಲ್ಲಿ ಹೋಗಿ ಚಾ ಕೇಳಿದರೆ ಒಂದು ಕಪ್ ಚಾಗೆ ಒಂದು ಒಪ್ಪತ್ತು! ಇದ್ದುದರಲ್ಲಿ “ಡಂಕಿನ್ ಡೊನಟ್ಸ” ದವರ ಚಾ ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡು ಕುಡಿಯಬಹುದು. ೩ ಗಂಟೆಯಷ್ಟೊತ್ತಿಗೆ ನನ್ನ ಹೊಟ್ಟೆಗೆ ಚಾ ಬೀಳದಿದ್ದರೆ ಕಾರಿನಲ್ಲಿದ್ದವರಿಗೆಲ್ಲ ಹೊರಸುತ್ತುವ ಮಜವೆಲ್ಲ ಬಿಸಿ ಚಹಾದಲ್ಲಿ ಬಿದ್ದ ಬಿಸ್ಕೀಟ್ ಆಗುವುದರಲ್ಲಿ ಸಂದೇಹವಿಲ್ಲ. ಅದಕ್ಕೆ ಕಾರು ಹತ್ತಿದಾಗಲಿಂದನೇ ಡಂಕಿನ್ ಡೊನಟ್ಸ ಬೋರ್ಡ್ ಕಂಡಾಗೆಲ್ಲ ನನ್ನ ಮಗಳು “ಅಮ್ಮ ಚಾ ಬೇಕಾ?” ಎನ್ನುವ ಟ್ರಿಕ್ ಕಲಿತುಕೊಂದಿದ್ದಾಳೆ. ಅದರಲ್ಲಿ ಅವಳ ಸ್ವಾರ್ಥವೂ ಇದೆ ಯಾಕೆಂದರೆ, ಅಲ್ಲಿಗೆ ಹೋದ ಮೇಲೆ , “ಸ್ಟ್ರಬೇರಿ ಕ್ರೀಂ ಡೊನಟ ಓನ್ ಫಾರ್ ಮಿ, ಒನ್ ಫಾರ್ ಮೈ ಬೇಬಿ ಬ್ರದರ್” ಎಂದು ತಾನೇ ಕೂಗಿ ಆರ್ಡರ್ ಮಾಡಿ ಆಗಿರುತ್ತದೆ. ತಮ್ಮನಿಗೆ ಪಾಪ ಏನು ಬೇಕಿತ್ತೋ ಇವಳು, ಎರಡರದ್ದೂ ಕ್ರೀಂ ಮೆಂದು ಬರಿ ಸಿಹಿಬ್ರೆಡ್ಡಿನ ಭಾಗವನ್ನು ಅವನಿಗೆ ರವಾನಿಸಿರುತ್ತಾಳೆ. ಅವನ ಪಾಲಿನ ಕ್ರೀಂ ಯಾಕೆ ತಿಂದೆ ಎಂದು ಕೇಳಿದರೆ “cream is not good for little kids” ಎಂಬ ತನಗೆ ಅನ್ವಯವಲ್ಲವನ್ನೋ ವೇದಾಂತ.
ಇನ್ನು ಯಾರದ್ದಾದರೂ ಮನೆಗೆ ಹೋದರೆ ಮತ್ತೊಂದು ಬಗೆ ಇಬ್ಬಗೆ. ಮಧ್ಯಾಹ್ನದ ಊಟಕ್ಕೆ ಕರೆದರೆ, ಊಟ ಮುಗಿಸಿ, ಅದೂ ಇದೂ ಸುದ್ದಿ ಸುಲಿದು, ಕಾಫಿ ಕುಡೀತೀರಾ ಎಂದಾಗ ಮೊದಲು ಮುಜುಗರವಾಗಿ ಹ್ನೂ ಎಂದು ಕಾಫಿ ಕುಡಿದು, ಸರಿಹೋಗದೆ ಮತ್ತೆ ದಾರಿಯಲ್ಲಿ ಚಾ ಜಪ ಮಾಡುತ್ತಿದ್ದೆ. ಆದರೆ ಈಗ ಅವರು ಕೇಳುವ ಹೊತ್ತಿಗೆ ನಾನು, ಚಾ ಮಾಡ್ತೀರ ಬೇಜಾರಿಲ್ಲ ಅಂದ್ರೆ ಅಂದು ಕೇಳಿಬಿಡುತ್ತೇನೆ. ಆದರೂ ಒಮ್ಮೊಮ್ಮೆ ಚಾ ಸಿಗುವುದಿಲ್ಲ. ಕೆಲವರ ಮನೆಯಲ್ಲಿ ಚಾದ ಅಸ್ತಿತ್ವವೇ ಇರುವುದಿಲ್ಲ. ಅವರು ಪೆಚ್ಚು ಮೊರೆ ಹಾಕಿದಾಗ ಥೂ ನನ್ನ ಚಾ ಚಟ ಇಷ್ಟೊಂದು ಯಾತನಾಕಾರಿಯೇ ಎಂದು ಅನ್ನಿಸಿಬಿಡುತ್ತದೆ.
ಈ ಚಹಾದಿಂದಾಗುವ ಅನಾಹುತಗಳಿಗೆಲ್ಲ ಅಮ್ಮನೇ ಕಾರಣ ಎಂದು ಠರಾಯಿಸಿ ಆ ಬಗ್ಗೆ ಗಿಲ್ಟಿ ಆನಿಸಿಕೊಳ್ಳುವುದನ್ನು ಬಿಡಬೇಕೆಂದಿದ್ದೇನೆ. ಯಾಕೆಂದರೆ ನಾನು ಚಾ ಕುಡಿಯುವ ರೂಢಿ ಮಾಡಿಕೊಳ್ಳಲು ಅಮ್ಮನೇ ಕಾರಣ. ಅಮ್ಮನ ಇತರ ಅಡಿಗೆಗಳಂತೆ ಚಾ ಕೂಡ ಅದ್ಭುತ. ಮದುವೆಗೆ ಮೊದಲು ಎಂದೂ ಚಾ ಕುಡಿಯದ ಅಪ್ಪನಿಗೆ ಈಗ ಅಮ್ಮನ ಕೈಯಿಂದ ತಯಾರಾದ ಚಾದ ರುಚಿ ಬೇರೆ ಯಾವ ಚಾದಲ್ಲಿಯೂ ಸಿಗುವುದಿಲ್ಲ. ನಾನು ಮೊದಲು ಚಾ ಕುಡಿದಿದ್ದು ಹತ್ತನೇ ತರಗತಿಯ ಪರೀಕ್ಷೆಯ ಸಮಯದಲ್ಲಿ. ರಾತ್ರಿ ಊಟ ಮಾಡಿ ಕುಳಿತು ಪುಸ್ತಕ ಹಿಡಿದ ಕೂಡಲೇ ಒತ್ತರಿಸಿ ಬರುತ್ತಿದ್ದ ನಿದ್ದೆಯನ್ನು ಓಡಿಸಲು ಅಮ್ಮ ಹುಡುಕಿದ ಉಪಾಯ- ಚಹಾ. ಅಲ್ಲಿಂದ ಶುರುವಾಯಿತು ನನ್ನ ಚಾವಲಂಬನೆ. ಆಮೇಲೆ ಈ ಚಹಾಕ್ಕಾಗಿ ಪಟ್ಟ ಪಾಡುಗಳೆಲ್ಲ ಒಂದೆರಡಲ್ಲ.
ಇಂಜಿನಿಯರಿಂಗ್ ಓದುವಾಗ ನಮ್ಮ ಹುಡುಗಿಯರ ಹಾಸ್ಟೆಲ್ ನ ಮೆಸ್ ನಲ್ಲಿ ಎರಡು ಹೊತ್ತಿನ ಊಟ ಮಾತ್ರ ಸಿಗುತ್ತಿತ್ತು. ಬೆಳಗ್ಗಿನ ಚಹಕ್ಕಾಗಿ ರೂಮಿನಲ್ಲಿಯೇ ಒಂದು ಪುಟ್ಟ ಸ್ಟೋವ್ ಇಟ್ಟುಕೊಂಡಿದ್ದೆವು. ನಾವು ರೂಂ ಮೇಟ್ಸ್ ಮೂವರಿಂದ ಅರ್ಧ ಲೀಟರ್ ಹಾಲು ಕೊಳ್ಳುತ್ತಿದ್ದೆವು. ಅದರಲ್ಲಿ ಬೆಳಿಗ್ಗೆ ಮೂವರಿಗೂ ಒಂದು ದೊಡ್ಡ ಕಪ್ ಚಹಾ. ಅದೇ ತಿಂಡಿ ತೀರ್ಥ ಎಲ್ಲ. ಸಂಜೆಯ ಚಹಾ ಕಾಲೇಜು ಕ್ಯಾಂಟೀನಿನಲ್ಲಿ ಪೂರೈಸುತ್ತಿತ್ತು. ಹಾಲು ಕೊಳ್ಳುವುದು ಪ್ರತಿದಿನವೂ ಒಬ್ಬೊಬ್ಬರದು ಒಂದೊಂದು ದಿನದಂತೆ ಪಾಳಿ. ದಿನಾಲೂ ಸಂಜೆ ಬರೋಬ್ಬರಿ ಏಳೂವರೆ ಗಂಟೆಗೆ ಹಾಜರೀ ಕಾರ್ಯಕ್ರಮ. ಹಾಜರಿಯಾದ ಮೇಲೆ ಜೈಲಿನಂತ ಕಬ್ಬಿಣದ ಕಟಾಂಜನ ಎಳೆದು ದೊಡ್ಡ ಬೀಗ ಜಡಿಯುತ್ತಿದ್ದರು. ಆಮೇಲೆ ಎಲ್ಲೂ ಹೊರಬೀಳುವಂತಿಲ್ಲ. ಅಕಸ್ಮಾತ್ ಹಾಲು ತರುವ ಪಾಳಿ ಮರೆತು ಹೋದರೆ ಏಳೂವರೆಯೊಳಗೆ ಹೇಗಾದರೂ ಹಾಲು ತಂದುಬಿಡಬೇಕು. ಅದಕ್ಕಾಗಿ ಒಲಂಪಿಕ್ ಓಟ ಅನತಿ ದೂರದ ದಿನಸಿ ಅಂಗಡಿಗೆ. ಬರುವಷ್ಟರಲ್ಲಿ ಹಾಜರಿ ಮುಗಿದು ಹೋದರೆ ಅಥವಾ ಕೊನೆಯಲ್ಲಿ ಏದುಸಿರು ಬಿಡುತ್ತಾ ಬಂದು ಸೇರಿಕೊಂಡರೆ ವಾರ್ಡನ್ ವಾಚಾಮಗೋಚರ ಬಯ್ಯುತ್ತಿದ್ದಳು, ಯಾರೊಂದಿಗೋ ಓಡಿ ಹೋಗಿ ಈಗ ಅಷ್ಟೇ ಬರುತ್ತಿದ್ದೆವೇನೋ ಎಂಬಂತೆ. ನಾನೂ ಕೂಡ ಒಂದು ಕಪ್ ಚಾಕ್ಕಾಗಿ ಚಾಮುಂಡಿಯಂತ ವಾರ್ಡನ್ ಕೈಯಲ್ಲಿ ಅನಗತ್ಯ ಚಾರಿತ್ರ್ಯವಧೆ ಮಾಡಿಸಿಕೊಂಡಿದ್ದಿದೆ.
ಅಷ್ಟಾದರೂ ಚಾ ಕುಡಿಯುವ ಮಜಾ ಬಿಟ್ಟುಕೊಡಲು ನಾನು ತಯಾರಿಲ್ಲ. ದಿನಕ್ಕೆರಡು ಬಾರಿಯಿಂದ ಈಗ ದಿನಕ್ಕೊಂದು ಬಾರಿ ಚಹಾಕ್ಕೆ ಬಂದಿಳಿದಿದ್ದೇನೆ. ಇದಕ್ಕಿಂತ ಹೆಚ್ಚಿಗೆ ಕಾಂಪ್ರಮೈಸ್ ಸಾಧ್ಯವಿಲ್ಲ. ನನ್ನನ್ನು ನೀವು ಯಾರಾದರೂ ಮನೆಗೆ ಕರೆದರೆ ಮೃಷ್ಟಾನ್ನ ಮಾಡಿ ಬಡಿಸಬೇಕೆಂದಿಲ್ಲ, ಸರಿಯಾದ ಸಮಯಕ್ಕೆ ಒಂದು ಕಪ್ ಒಳ್ಳೆಯ ಚಹಾ ಮಾಡಿಕೊಟ್ಟರೆ ಸಾಕು, ನಾನು ಚಿರಋಣಿ. ನೀವೂ ಅಷ್ಟೇ, ನಮ್ಮ ಮನೆಗೆ ಬಂದರೆ ಒಂದು ಕಪ್ ಸೂಪರ್ ಚಹಕ್ಕೆ ಮೋಸವಿಲ್ಲ. ಬೇಕೆಂದರೆ ಮಸಾಲ ಟೀ, ಶುಂಟಿ ಚಾ , ಯಾಲಕ್ಕಿ ಚಾ ಇಲ್ಲವೇ ಒಂದು ಒಳ್ಳೆಯ ಕೆಟಿ.
ಊರು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ. ಅಮೆರಿಕಾದ ಬಾಸ್ಟನ್ ಸಮೀಪ ಈಗ ಕಟ್ಟಿಕೊಂಡ ಸೂರು. ತಂತ್ರಜ್ಞಾನದ ಉದ್ದಿಮೆಯಲ್ಲಿ ಕೆಲಸ. ದೇಶ ಸುತ್ತುವುದು, ಬೆಟ್ಟ ಹತ್ತುವುದು, ಓಡುವುದು, ಓದು, ಸಾಹಸ ಎಂಬ ಹಲವು ಹವ್ಯಾಸ. ‘ಒದ್ದೆ ಹಿಮ.. ಉಪ್ಪುಗಾಳಿ’ ಇವರ ಪ್ರಬಂಧ ಸಂಕಲನ. “ಪ್ರೀತಿ ಪ್ರಣಯ ಪುಕಾರು” ನೂತನ ಕಥಾ ಸಂಕಲನ.