Advertisement
ಗೋಳುಹೊಯ್ದುಕೊಳ್ಳಲು ಬೇಕೊಬ್ಬಳು ತಂಗಿ: ಎಚ್ ವೈ ರಾಜಗೋಪಾಲ್ ಬರಹ

ಗೋಳುಹೊಯ್ದುಕೊಳ್ಳಲು ಬೇಕೊಬ್ಬಳು ತಂಗಿ: ಎಚ್ ವೈ ರಾಜಗೋಪಾಲ್ ಬರಹ

ನನಗನ್ನಿಸುವ ಒಂದು ಮಾತು ಹೇಳಬಯಸುತ್ತೇನೆ: ಪ್ರತಿಯೊಬ್ಬನಿಗೂ ಜೀವನದಲ್ಲಿ ಒಬ್ಬ ತಂಗಿಯಾದರೂ ಬೇಕು. ನನ್ನ ಮಟ್ಟಿಗೆ ಹೇಳುವುದಾದರೆ ನನ್ನ ತಂದೆ-ತಾಯಿಯರು ನನಗೊಬ್ಬ ಸುಂದರವಾದ ತಂಗಿಯನ್ನು ದಯಪಾಲಿಸಿದ್ದರು. ತಂಗಿಯರು ಯಾಕೆ ಬೇಕು? ಮುಖ್ಯವಾಗಿ ಗೋಳುಹೊಯ್ದುಕೊಳ್ಳುವುದಕ್ಕೆ, ಅಷ್ಟೇ ಪ್ರೀತಿಸುವುದಕ್ಕೆ. ತಂಗಿಯೊಬ್ಬಳಿಲ್ಲದಿದ್ದರೆ ಹುಡುಗನಿಗೆ ಪ್ರೀತಿಸುವುದನ್ನು ಕಲಿಯುವುದು ಮಹಾ ಕಷ್ಟ ಎನಿಸುತ್ತದೆ. ನನಗೆ ಆ ಸಂದಿಗ್ಧ ಬರಲಿಲ್ಲ. ಅದೊಂದು ಅದೃಷ್ಟ ಎಂದೇ ನನ್ನ ಭಾವನೆ.

ಈ ನನ್ನ ತಂಗಿಯನ್ನು ನಾನು ಸಾಕಷ್ಟು ಗೋಳುಹೊಯ್ದುಕೊಳ್ಳುತ್ತಿದ್ದೆ. ಅವಳು ನನಗಿಂತ ಐದು ವರ್ಷ ಚಿಕ್ಕವಳು. ಎಲ್ಲ ಹೆಣ್ಣುಮಕ್ಕಳಿಗೂ ಇರುವ ನೃತ್ಯಾಸಕ್ತಿ ಅವಳಲ್ಲೂ ಇತ್ತು. ಅದನ್ನು ಕುರಿತು ಅವಳನ್ನು ಗೇಲಿ ಮಾಡುತಿದ್ದೆ. ಅವಳನ್ನು ನಾನು ಪೀಡಿಸುವುದು ಒಂದು ವಿಪರೀತಕ್ಕೆ ಏರಿದಾಗ ನಮ್ಮಮ್ಮ ನಾನು ಅವಳೊಂದಿಗೆ ಹೆಚ್ಚು ಮಾತಾಡಕೂಡದೆಂದು ಕಟ್ಟಪ್ಪಣೆ ಮಾಡಿದ್ದಳು. ನಾನೂ ಆ ಆಜ್ಞೆಯ ಪ್ರಕಾರ ಮೂರು ದಿನ ಬಹಳ ಸಂಯಮದಿಂದಲೇ ಇದ್ದೆ. ನಮ್ಮಮ್ಮ, ನೋಡು ಈ ಮೂರು ದಿನ ನಿನ್ನ ವರ್ತನೆ ಚೆನ್ನಾಗಿತ್ತು, ಇನ್ನು ಮುಂದೆಯೂ ಹಾಗೇ ಇರು ಎಂದಿದ್ದಳು. ಆದರೆ ನನಗಂತೂ ಆ ಮೂರು ದಿನ ಒಂದು ನರಕಯಾತನೆಯೇ ಆಗಿತ್ತು. ಆ ಪ್ರೀತಿಯ ತಂಗಿಯನ್ನು ಗೋಳುಹೊಯ್ದುಕೊಳ್ಳದೆ ನನ್ನ ಜೀವನ ಭಣಭಣಗೊಳ್ಳುತ್ತಿತ್ತು. ನನಗೆ ಏನು ಮಾಡಲೂ ತೋಚುತ್ತಿರಲಿಲ್ಲ. ಹೇಗೋ ಏನೋ ಆ ಭವಣೆ ಕಳೆದು ಮತ್ತೆ ತಂಗಿಯನ್ನು ಗೋಳುಹೊಯ್ದುಕೊಳ್ಳುವ ಅವಕಾಶ ಸಿಕ್ಕಿ ನಾನು ಜೀವನದಲ್ಲಿ ಬಚಾವಾದೆ.

ಈ ತಂಗಿ ಮುಂದೆ ಒಬ್ಬ ಉತ್ತಮ ಸಂಗೀತ ಕಲಾವಿದೆಯಾದಳು. ಅದೃಷ್ಟದಿಂದ ಅವಳು ಒಬ್ಬ ಉತ್ತಮ ಕಲಾಪ್ರೇಮಿಯನ್ನೂ ಕೈಹಿಡಿದಳು. ಅವಳ ಮಗಳೂ ಒಬ್ಬ ಕಲಾವಿದೆ, ಮೊಮ್ಮಗಳೂ ಉತ್ತಮ ಕಲಾಸಕ್ತಿ ತೋರುತ್ತಿದ್ದಾಳೆ. ಆ ವಿಚಾರದಲ್ಲಿ ನಾನೊಬ್ಬ ಸುಖಿ.

ಆದರೆ ನಾನಿರುವುದು ಅವಳಿಂದ ಹತ್ತು ಸಾವಿರ ಮೈಲು ದೂರದಲ್ಲಿ. ನಿಜ, ಮಾನಸಿಕ ಹತ್ತಿರ ಭೌಗೋಳಿಕ ಹತ್ತಿರಕ್ಕಿಂತ ಹೆಚ್ಚು ಮುಖ್ಯ. ಆದರೂ ದಿನನಿತ್ಯಕ್ಕೆ ಒಬ್ಬ ತಂಗಿ ಬೇಕು ಎನ್ನಿಸಿದೆ ನನಗೆ. ಗೋಳುಹೊಯ್ದುಕ್ಕೊಳ್ಳುವುದಕ್ಕಲ್ಲ, ಪ್ರೀತಿಸುವುದಕ್ಕೆ. ನನ್ನ ಅದೃಷ್ಟವೋ ಏನೋ, ನನಗೆ ಅಂಥ ಹಲವಾರು ತಂಗಿಯರು ಈ ದೂರದೇಶದಲ್ಲಿ ಸಿಕ್ಕಿದ್ದಾರೆ, ನನ್ನ ಜೀವನವನ್ನು ಪಾವನಗೊಳಿಸಿದ್ದಾರೆ. ಒಬ್ಬಾಕೆಯಂತೂ (ಅವರನ್ನು ಹೆಸರಿಸುವುದು ಆಕೆಗೆ ಇಷ್ಟವಾಗಲಾರದು ಎಂಬ ಕಾರಣದಿಂದ ಮಾಡುತ್ತಿಲ್ಲ) ಇಲ್ಲಿನ ಎಲ್ಲ ಕನ್ನಡ ಕುಟುಂಬಗಳಿಗೂ ಬೇಕಾದವಳು. ಉತ್ತಮ ಸಂಗೀತ ಕಲಾವಿದೆ, ಸಾಹಿತ್ಯ, ನೃತ್ಯ-ನಾಟಕಗಳಲ್ಲಿ ಶ್ರದ್ಧೆಯುಳ್ಳವಳು. ಮಾಸ್ತಿಯ ಕತೆಗಳನ್ನೋದಿದವಳು. ನೋವಿನಲ್ಲಿರುವ ಯಾರಿಗೆ ಏನು ಬೇಕಾದರೂ ಅದನ್ನು ಕೂಡಲೆ ತಲುಪಿಸುವ ಅಂತಃಕರಣವುಳ್ಳವಳು. ಆಕೆಯ ಪತಿಯೂ ಅದೇ ಮನೋಧರ್ಮವುಳ್ಳವರು. ಇಂಥವರು ನಮ್ಮ ಸಮಾಜದಲ್ಲಿರುವುದು ಒಂದು ದೊಡ್ಡ ಭಾಗ್ಯ ಎಂದೇ ಎನ್ನಿಸುತ್ತದೆ. ಅವರಿಗೆ ನನ್ನ ನಮಸ್ಕಾರಗಳು.

ಈ ತಂಗಿ-ತಂಗಿಯರಿಗೆ ನನ್ನ ಪ್ರೀತಿಯ ಹರಕೆಗಳು ಎಂದಿಗೂ ಸಲ್ಲುತ್ತವೆ.

About The Author

ಎಚ್.ವೈ. ರಾಜಗೋಪಾಲ್

ಅಮೇರಿಕಾದಲ್ಲಿ ನೆಲೆಸಿರುವ ಕನ್ನಡದ ಹಿರಿಯ ಲೇಖಕರು.‘ಕನ್ನಡ ಸಾಹಿತ್ಯ ರಂಗ'ದ ಸ್ಥಾಪಕ ಸದಸ್ಯರಲ್ಲೊಬ್ಬರು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ