ಸೆರಗು

ಸೀರೆಯ ಸೆರಗು
ಸರಿಯಾಗಿ ಸಿಕ್ಕಿಸಿಕೊ ಅಂತ ಹೇಳಿದ್ದು ಸಾವಿರ ಸಲ ಇರಬೇಕು
ಅದನ್ನು ನೀ ಹಿಡಿದಾಗಲೆಲ್ಲಾ ಇನಿಯೇ ಬಂದು ಸೆರಗು ಸೊಂಟ ಬೆಸೆದಂತೆ

ಎಲ್ಲೋ ದೂರ ಇರುವ ನೀ
ಅದೆಷ್ಟು ಬೆಸೆದುಕೊಂಡಿರುವೆ !!

ನೋಡುವ ನೋಟವಾಗಿ ಕಾಡುವುದು
ಕನ್ನಡಿಯ ಮುಂದೆ ಬಿಂಬವೇ ಆಗುವುದು ಹೇಗೆ?
ಹೇಗಾಯ್ತು ಇದೆಲ್ಲಾ??

ಒಂದು ಜೀವ ಇನ್ನೊಂದರಲ್ಲಿ
ಉಸಿರಾಟದ ಉಸಿರಾಗುವುದು
ತಿನ್ನುವ ತುತ್ತಿನಲ್ಲಿ ತುತ್ತಾಗುವುದು
ಸಹಜ ಕ್ರಿಯೆಯಲ್ಲಾ!!!

ಇಷ್ಟೊಂದು ಭಿನ್ನಗಳನ್ನು ಅಭಿನ್ನವಾಗಿ ಬೆಸೆಯುವುದು
ಸಾಮಾನ್ಯವಾದುದಲ್ಲ;
ಹೆಣ್ಣು ಗಂಡು ಒಂದಾಗುವುದು
ಹಗಲು ರಾತ್ರಿಗಳ ಬೆಸೆಯುವುದು ದೂರವ ಹತ್ತಿರವಾಗಿಸುವುದು ಹತ್ತಿರವ ದೂರವಾಗಿಸುವುದು; ಯಾವಾವುದೋ ಅಸಂಗತಗಳ ಸಂಗತದಲ್ಲಿ ಹಿಡಿದು ಜಡಿದು ಚರ್ಚಿಸುವುದು, ಬೇಕಾದುದನ್ನು ಬೇಡವಾದುದರ ಜೊತೆ ಕೂಡಿ ಕಳೆದು ಗುಣಿಸಿ ಬಾಗಿಸಿ
ಕೊನೆಗೆ ನಾವಿಬ್ಬರೇ ಶೇಷವಾಗಿ ಉಳಿಯುವುದೆಂದರೆ
ಅದಕ್ಕೆ
ಏನೆಂದು ಕರೆಯಬಹುದು!!?

ಸೆರಗು ಹಿಡಿದು ಮಹಾಭಾರತ ಸೆರಗಿನಿಂದ ಸುಳಿದ ರಾಮಾಯಣ, ರಾಮಚಂದ್ರ ಶರ್ಮರ ಸೆರಗಿನ ಕೆಂಡ
ಎಲ್ಲವೂ ಸುಳಿಯುತ್ತವೆ
ನೀ ಸೆರಗ ಸುಂದರ ಸೊಂಟಕೆ ಸಿಕ್ಕಿಸಿಕೊಳ್ಳುವಾಗ
ಹಾಗೆ ಬೆದರಿಕೆಯ ಬೆತ್ತವ ಮಕ್ಕಳ ಎದಿರು ಹಿಡಿದಾಗ
ಈ ಎಲ್ಲಾ ಸೂತ್ರಗಳ ಒಂದೇ ಎಳೆಯಲಿ ಜೋಡಿಸುವ ಕಾಣ್ಕೆಗೆ ಏನೆನ್ನಲಿ??

ಇನ್ನು
ಭುಜಕೆ ಭುಜತಾಗಿಸಿದ್ದು ಒಮ್ಮೆ ಮಾತ್ರ, ತುಟಿಗೆ ತುಟಿಯೊತ್ತಿದ್ದು ಕ್ಷಣ ಮಾತ್ರ
ಅದರ ಮಿಂಚು ಕಂಪನ ನೆನಪು, ರುಚಿ
ವರ್ಷಾನುವರ್ಷ ಉಳಿದು
ಬೆಳೆಯುವ ಸೋಜಿಗಗಕೆ
ಏನೆನ್ನಲಿ !!?

ಓದುವಾಗ ಅಕ್ಷರವಾಗುವುದು
ಬರೆಯುವಾಗ ಶಬ್ದಾರ್ಥವಾಗುವುದು
ಕನಸಿನಲ್ಲಿ ಸಕ್ಕರೆಯಾಗುವುದು
ಮನದ ಯಾವುದೋ‌ಲೆಕ್ಕಾಚಾರದಲ್ಲಿ
ಪ್ರತಿಮೆಯಾಗಿ ಹೊಕ್ಕುಳಲ್ಲಿ ಸುಳಿಯುತ್ತಿದ್ದೆ

ಮನದ ಸಂದುಗೊಂದಲ್ಲಿ ಪುಂಡನಾಗಿ ನುಸುಳುವ ನನ್ನ
ಹಿಡಿದು ನೀ ಜಡಿಯಬೇಕೆಂದೆರೂ
ನನ್ನ ಕಂಡಾಕ್ಷಣ ತುಟಿಗಳಲ್ಲಿ
ಸವಿಇನಿಯಾಗುತ್ತಿದ್ದೆ ನಾ

ಇದು
ಪ್ರೀತಿಯಲ್ಲದೇ ಇನ್ನೇನು ಮಾರಾಯ್ತಿ???!!!