ಇಲ್ಲಿ ಅಪೂರ್ವವಾದ ರಚನಾ ಸೌಂದರ್ಯವನ್ನು ಗಮನಿಸಬಹುದು. ಭಗವಂತ ಸುಗತನ ಕರುಣೆಯೆಂಬ ಮನದ ಹುತ್ತಗಟ್ಟುವಿಕೆ ನಾಲ್ಕು ಪಾದಗಳ ಪದ್ಯಗಳಿಂದ ತೊಡಗಿ, ಎಂಟು ಮತ್ತು ಹದಿನಾಲ್ಕಕ್ಕೆ ಏರಿ; ಮತ್ತೆ ಎಂಟಕ್ಕಿಳಿದು ನಾಲ್ಕು ಪಾದಗಳಿಗೆ ಕೊನೆಯಾಗಿ ಒಂದು ಪಾದದ “ಓಂ ಶಾಂತಿಃ ಶಾಂತಿಃ ಶಾಂತಿಃ” ಎಂಬ ಉಕ್ತಿಯಲ್ಲಿ ಕೊನೆಯಾಗುವುದು ಧ್ವನಿಪೂರ್ಣವಾಗಿದೆ. ಕರುಣ ರಸದ ಆತ್ಯಂತಿಕ ನೆಲೆ ಶಾಂತರಸದಲ್ಲೇ ಎಂಬುದು ಇಡೀ ಕಾವ್ಯ ಧ್ವನಿಸುತ್ತದೆ. ಇದನ್ನು ಕವಿಯು ಕೇವಲ ಕಾವ್ಯದಲ್ಲಿ ಮಾತ್ರ ಬಿಂಬಿಸದೆ ತನ್ನ ರಚನಾ ಕೌಶಲದಲ್ಲೂ ಔಚಿತ್ಯಪೂರ್ಣವಾಗಿ ಕಾಣಿಸಿರುವುದು ಮನಮುಟ್ಟುವಂಥದ್ದು..
ಹೆಚ್.ಎಸ್.ವೆಂಕಟೇಶಮೂರ್ತಿ ಬರೆದ ಬುದ್ಧ ಚರಣ ಕವನ ಸಂಕಲನದ ಕುರಿತು ಕೃಷ್ಣಪ್ರಕಾಶ್ ಉಳಿತ್ತಾಯ ಬರಹ
ಲಲಿತ ಛಂದೋಲಯ ಕ್ರಮದಲ್ಲಿ ರಚನೆಯಾಗಿರುವ ಈ ಬುದ್ಧಚರಣ ಕಾವ್ಯದ ತುಂಬಾ ಹಬ್ಬಿರುವುದು ಕರುಣರಸ. ಕರುಣಾಮೂರ್ತಿಯಾದ ಭಗವಾನ್ ಬುದ್ಧನ ಆವಿರ್ಭಾವಕ್ಕೆ ಅಗತ್ಯವಾದ ಮನಃಪಾಕದ ಉಂಟಾಗುವಿಕೆಯೇ ಈ ಕಾವ್ಯದ ಕೇಂದ್ರ. ಕಾವ್ಯ ಕರ್ಮ ಇದಕ್ಕಾಗಿ ತುಡಿದಿದೆ ಎನ್ನಬಹುದು. ಈ ಕಾವ್ಯದ ಮೇಲೆ ಮೇಲೆ ಮಂಜೇಶ್ವರ ಗೋವಿಂದ ಪೈ ಬರೆದ ‘ವೈಶಾಖಿ’ಯ ಪ್ರಭಾವ ಇದೆ. ಇಲ್ಲಿ ಅಪೂರ್ವವಾದ ರಚನಾ ಸೌಂದರ್ಯವನ್ನು ಹೊಂದಿರುವ ಈ ಕೃತಿಯ ಕುರಿತು ಬರೆದಿದ್ದಾರೆ ಕೃಷ್ಣಪ್ರಕಾಶ್ ಉಳಿತ್ತಾಯ
ಕನ್ನಡ ನಾಡಿನ ಬಹು ಮುಖ್ಯ ಕವಿಗಳಾದ ಹೆಚ್.ಎಸ್.ವೆಂಕಟೇಶಮೂರ್ತಿಯವರ ಕಳೆದ ವರುಷ ಬಿಡುಗಡೆಯಾದ ಮಹಾಕಾವ್ಯ “ಬುದ್ಧ ಚರಣ” ವರುಷವಿಡೀ ಓದಿನ ಸಾಂಗತ್ಯ ಕೊಟ್ಟ ಅಂತಃಕರಣ ತುಂಬಿದ ಕಾವ್ಯ. ಭಗವಾನ್ ಬುದ್ಧನನ್ನು ನನ್ನೊಳಗು ಮಾಡಿಕೊಂಡದ್ದು ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈಗಳ “ವೈಶಾಖಿ” ಓದಿನಿಂದ ಮತ್ತು ಶತಾವಧಾನಿ ಡಾ.ಆರ್.ಗಣೇಶ್ ಅವರ ಬೆಂಗಳೂರಿನ ಗೋಖಲೆ ಸಂಸ್ಥೆ ಆಯೋಜಿಸಿದ ಗೋವಿಂದ ಪೈಗಳ ಕಾವ್ಯಗಳ ಕುರಿತಾದ ಉಪನ್ಯಾಸ ಮಾಲಿಕೆಯ ಮೂಲಕ. “ವೈಶಾಖಿ” ಬುದ್ಧನ ಕೊನೆಯ ದಿನಗಳ ಬಗೆಗಿನ ೭೩೦ ಪಂಕ್ತಿಗಳ ಝಂಪೆರಗಳೆ ಎಂಬ ರಚನಾಕ್ರಮದ ಹೆಸರನ್ನಿರಿಸಿದ ಖಂಡಕಾವ್ಯ. ವೆಂಕಟೇಶಮೂರ್ತಿಗಳು ಪುಸ್ತಕದಲ್ಲಿ ಹೇಳಿಕೊಂಡಂತೆ ಅವರ ಮೇಲೆ ಗೋವಿಂದ ಪೈಗಳ “ವೈಶಾಖಿ”ಮತ್ತು ಬುದ್ಧ ಪರಿಸರದ ಕವಿತೆಗಳು ಪ್ರಭಾವಿಸಿದವುಗಳು.
ಬುದ್ಧ ಚರಣವನ್ನು ಕವಿ ಲಲಿತ ಛಂದೋಲಯ ಎಂಬ ಕ್ರಮದಲ್ಲಿ ರಚಿಸಿದ್ದಾರೆ. ಇದು ಹೆಚ್ಚಿನೆಡೆಯಲ್ಲಿ ಝಂಪೆ ನಡೆಯಲ್ಲಿ ಅಂದರೆ ಇದೆ. ಹಾಗೆಯೇ ಕೆಲವೆಡೆ ಈ ಛಂದೋಲಯವನ್ನು ಮೀರಿದ (ಸಡಿಲಿಸಿದ) ನಡೆ ಇದೆ. ಹಾಗಾಗಿಯೇ “ಲಲಿತ ಛಂದೋಲಯ” ಎಂಬುದಾಗಿ ಹೆಸರಿಸಿರಬಹುದು.
ಭಾಷಾ ಗುಣ ಲಲಿತವಾಗಿ ಪ್ರಸಾದಗುಣವನ್ನು ಹೊಮ್ಮಿಸುವಂತಿದ್ದು ಕಾವ್ಯದ ಪ್ರವಾಹದ ಜತೆಗೆ ಓದುಗನನ್ನು ಕೊಂಡೊಯ್ಯುವಂತಿದೆ. ಕಾವ್ಯದ ಭಣಿತಿ ಈಗಣ ಓದುಗರನ್ನು ಗಮನದಲ್ಲಿರಿಸಿಕೊಂಡು ಹೆಣೆದದ್ದು. ಹೀಗಾಗಿ ಎಲ್ಲಾ ಓದುಗರನ್ನೂ ಮುಟ್ಟುವಲ್ಲಿ ಯಶಸ್ವಿಯಾಗುತ್ತದೆ.
ಇಡೀ ಕಾವ್ಯದ ತುಂಬಾ ಹಬ್ಬಿರುವುದು ಕರುಣರಸ. ಕರುಣಾಮೂರ್ತಿಯಾದ ಭಗವಾನ್ ಬುದ್ಧನ ಆವಿರ್ಭಾವಕ್ಕೆ ಅಗತ್ಯವಾದ ಮನಃಪಾಕದ ಉಂಟಾಗುವಿಕೆಯೇ ಕಾವ್ಯದ ಕೇಂದ್ರ. ಕಾವ್ಯ ಕರ್ಮ ಇದಕ್ಕಾಗಿ ತುಡಿದಿದೆ- ಮಿಡಿದಿದೆ.
ರಚನಾ ವಿಧಾನ ಮತ್ತು ಕಾವ್ಯದ ಓಘಕ್ಕೆ ಆಂತರಿಕ ಸಂಬಂಧವಿರುವುದು ಈ ಕಾವ್ಯದ ಅನನ್ಯತೆ. ಅದು ಹೀಗಿದೆ:
ಎಂಟು ಕಾಂಡಗಳಲ್ಲಿ ಹಬ್ಬಿದ ಬುದ್ಧ ಚರಿತೆಯ ಎರಡನೆಯ ಕಾಂಡ “ಪೂರ್ವಖಾಂಡ” ಬುದ್ಧನ ಹಿಂದಿನ ಜನ್ಮದ ಜೀವನ ಇತಿವೃತ್ತಗಳನ್ನು ಹೇಳಿದೆ. ಕಾವ್ಯವನ್ನು ಕವಿ ಚೌಪದಿ (ನಾಲ್ಕು ಪಾದ) ಯಲ್ಲಿ ರಚಿಸಿದ್ದಾರೆ. ಬುದ್ಧನ ಕತೆ ಮಧ್ಯಕಾಂಡದಿಂದ ಮೊದಲಾಗುತ್ತದೆ. ಮಧ್ಯಕಾಂಡ, ಉತ್ತರಕಾಂಡ, ಪ್ರವರ್ತನಕಾಂಡ ಇವಿಷ್ಟನ್ನು ಅಷ್ಟಪದಿ (ಎಂಟು ಸಾಲು)ಯಲ್ಲಿ ರಚಿಸಿದ್ದಾರೆ. ದೀಕ್ಷಾಕಾಂಡ ಹದಿನಾಲ್ಕು ಪಾದಗಳ ಸಾನೆಟ್ ಮಾದರಿಯದ್ದು. ಇಲ್ಲಿ ಬುದ್ಧನ ದೀಕ್ಷಾಕರ್ಮಗಳು, ಬುದ್ಧಮತದ ಪ್ರವಹಿಸುವಿಕೆಯೆಂಬ ಕ್ಷಾತ್ರವಿದೆ. ಅದಕ್ಕೆ ಸರಿಯಾದ ಓಘ ಹದಿನಾಲ್ಕು ಪಾದಗಳ ಕಾವ್ಯದ ರೂಪ ನಿರೂಪಣದ ಮೂಲಕ ಒಗ್ಗಿದೆ. ಪರಿನಿರ್ವಾಣಕಾಂಡ ಅಷ್ಟಪದಿಯಲ್ಲಿ ಮೊದಲಾಗುತ್ತದೆ. ಹಾಗೆಯೇ, ಕೊನೆಗೆ ನಾಲ್ಕು ಪಾದಗಳ ಪದ್ಯದಲ್ಲಿ ಕೊನೆಯಾಗುತ್ತದೆ.
ಇಲ್ಲಿ ಅಪೂರ್ವವಾದ ರಚನಾ ಸೌಂದರ್ಯವನ್ನು ಗಮನಿಸಬಹುದು. ಭಗವಂತ ಸುಗತನ ಕರುಣೆಯೆಂಬ ಮನದ ಹುತ್ತಗಟ್ಟುವಿಕೆ ನಾಲ್ಕು ಪಾದಗಳ ಪದ್ಯಗಳಿಂದ ತೊಡಗಿ, ಎಂಟು ಮತ್ತು ಹದಿನಾಲ್ಕಕ್ಕೆ ಏರಿ; ಮತ್ತೆ ಎಂಟಕ್ಕಿಳಿದು ನಾಲ್ಕು ಪಾದಗಳಿಗೆ ಕೊನೆಯಾಗಿ ಒಂದು ಪಾದದ “ಓಂ ಶಾಂತಿಃ ಶಾಂತಿಃ ಶಾಂತಿಃ” ಎಂಬ ಉಕ್ತಿಯಲ್ಲಿ ಕೊನೆಯಾಗುವುದು ಧ್ವನಿಪೂರ್ಣವಾಗಿದೆ. ಕರುಣ ರಸದ ಆತ್ಯಂತಿಕ ನೆಲೆ ಶಾಂತರಸದಲ್ಲೇ ಎಂಬುದು ಇಡೀ ಕಾವ್ಯ ಧ್ವನಿಸುತ್ತದೆ. ಇದನ್ನು ಕವಿಯು ಕೇವಲ ಕಾವ್ಯದಲ್ಲಿ ಮಾತ್ರ ಬಿಂಬಿಸದೆ ತನ್ನ ರಚನಾ ಕೌಶಲದಲ್ಲೂ ಔಚಿತ್ಯಪೂರ್ಣವಾಗಿ ಕಾಣಿಸಿರುವುದು ಮನಮುಟ್ಟುವಂಥದ್ದು.. ಕರುಣ ರಸ ಆದ್ಯಂತವಾಗಿ ಕಾವ್ಯದಲ್ಲಿ ಪಡಿಮೂಡಿದೆ.
*****
ಮಾನವ ಪ್ರಜ್ಞೆಯ ವಿಕಾಸ ಹಠಾತ್ತಾಗಿ ಸಂಭವಿಸುವಂಥದ್ದಲ್ಲ ಎಂಬುದು ಕಾವ್ಯದ ಮೊದಲಲ್ಲೇ ಬಂದು ಬುದ್ಧಪ್ರಜ್ಞೆಯ ವಿಕಾಸವನ್ನು ಕುರಿತಾಗಿ ಹೇಳುತ್ತದೆ. (ಪೂರ್ವಕಾಂಡ,ಎರಡನೆಯ ಪದ್ಯ)
“ಭವಭವಾಂತರದಲ್ಲಿ ಮಾಗುತ್ತ ಸಂ
ಭವಿಸಿದ, ಪರಾಮಿ ಮುಗಿಸಿ.
ಅವೋ ಒಂದಲ್ಲ ಬರೋಬ್ಬರಿ ಹತ್ತು
ಅವನಾದದ್ದು ಬುದ್ಧ ಕಡೆಗೆ”
(ಪರಾಮಿ=ವೃತ) ಭೌದ್ಧ ಪಾರಿಭಾಷಿಕ ಪದಗಳ ಸೂಚಿಯೂ ಅನುಬಂಧದಲ್ಲಿ ಇದೆ.
ಭಾಷಾ ಗುಣ ಲಲಿತವಾಗಿ ಪ್ರಸಾದಗುಣವನ್ನು ಹೊಮ್ಮಿಸುವಂತಿದ್ದು ಕಾವ್ಯದ ಪ್ರವಾಹದ ಜತೆಗೆ ಓದುಗನನ್ನು ಕೊಂಡೊಯ್ಯುವಂತಿದೆ. ಕಾವ್ಯದ ಭಣಿತಿ ಈಗಣ ಓದುಗರನ್ನು ಗಮನದಲ್ಲಿರಿಸಿಕೊಂಡು ಹೆಣೆದದ್ದು. ಹೀಗಾಗಿ ಎಲ್ಲಾ ಓದುಗರನ್ನೂ ಮುಟ್ಟುವಲ್ಲಿ ಯಶಸ್ವಿಯಾಗುತ್ತದೆ.
“ಭೂಮಿ ಪರಿವೀಕ್ಷಣೆಯ ಮಾಡುತ್ತ ಮಾಡುತ್ತ
ಹಾರುತ್ತ ಇದೆ ಒಂದು ಶ್ವೇತ ಶುಭ್ರ ಮರಾಳ…”
ಎಂಬಲ್ಲಿಂದ ಬುದ್ಧ ಚರಿತೆ ಶುರುವಾಗುತ್ತದೆ. ಮುಂದೆ ಮಾಯಾದೇವಿಯ ಅಂತಃಪುರ ಬೆಳದಿಂಗಳ ಹಿನ್ನೆಲೆಯ ವರ್ಣನೆ ಸೊಗಸಾದ ಕಾವ್ಯವಾಗಿದೆ-
“ಪಡುವಲಲ್ಲಸ್ತಮಿಸುತಿರಲು ಮೂಡಲ ಸೂರ್ಯ,
ಬಾನಲ್ಲಿ ಮೂಡುತ್ತ ಇರಲು ಬೆಳ್ದಿಂಗಳಿನ
ಬಾಗುಬೋಗಣಿ ಚಂದ್ರ, ಸುರಿಸುತ್ತ ತನಿ ಹಾಲು,
ತಣಿವಲ್ಲಿ ಬರುತ ಇದ್ದಾಳೆ ಮಲಗುವ ಮನೆಗೆ,
ಸರಿಸಿ ಅಂತಃಪುರದ ಹಾಲುಮುತ್ತಿನ ತೆರೆಯ,
ಇರುಳ ಚಳಿಗೆ ಗಡಗಡ ನಡುಗುತ್ತ ಕಾಯುತ್ತಿರೆ
ಪತಿ ತನ್ನ. ಹೊರಗೆ ಕಾಣದ ಯಾರೋ ವೀಣೆಯ
ನ್ನೆದೆಗೆಳೆದೆಳೆದು ನುಡಿಸುತ್ತಿರೆ ಸುಶ್ರುತಿಯಲ್ಲಿ.”
ಈ ಪದ್ಯದ ವಕ್ರೋಕ್ತಿಗಳು ಗಮನೀಯ
“ಮೂಡಲ ಸೂರ್ಯ ಪಡುವಲ್ಲಸ್ತಮಿಸುತ್ತಿದ್ದಾನೆ”
“ಬೆಳ್ದಿಂಗಳಿನ ಬಾಗು ಬೋಗುಣಿ ಚಂದ್ರ, ಸುರಿಸುತ್ತ ತನಿಹಾಲು”
ಹಾಗೆಯೇ ಇನ್ನೂ ಕೆಲವು ಉಕ್ತಿಗಳಲ್ಲಿ ನನಗಾಪ್ತವಾದವು: ದೀಕ್ಷಾಕಾಂಡದ ೨೭ ನೆ ಪದ್ಯದಲ್ಲಿ ಬರುವ “ಕಿರಣ ಬಿಡಿಸುತ್ತ ಇರೆ ಹೆಗ್ಗಾಡ ಮುಂಗುರುಳು” ಆಹಾ, ಕವಿಯ ಕಣ್ಣೇ! ಹೆಗ್ಗಾಡು ಎಂಬ ಕತ್ತಲೆಯ ಮುಂಗುರುಳನ್ನು ಕಿರಣ ಸರಿಸುತ್ತಿದೆ/ ಬಾಚುತ್ತಿದೆ ಎಂಬ ನೋಟ.
ಬುದ್ಧಾವತರಣಕ್ಕೆ ಮುನ್ನಿನ ಸಿದ್ಧತೆಯ ವಿವರಣೆ ಅತ್ಯಂತ ನನಗೆ ಆಪ್ತವಾದವುಗಳು.
“ಬೋಧಿಸತ್ವನ ಗರ್ಭದಲಿ ಧರಿಸಿದ ಮಾಯೆ
ಬಿದಿಗೆಚಂದ್ರನ ಬಸಿರಿನಲ್ಲಿ ಪೊರೆಯುತ್ತಿರುವ
ಗರಿಹಗುರ ಬೆಳ್ಮುಗಿಲಿನಂತೆ, ಮಕರಂದವನು
ತನ್ನ ಅಂತರ್ಯದಲ್ಲಿ ಹುದುಗಿಸಿಟ್ಟಿರುವಂಥ
ಮರುಗ ಪುಷ್ಪದ ಮೊಗ್ಗಿನಂತೆ ಕಾಣುವಳಾಗ.
ಆಕೆಯುಸಿರಾಡಿದರೆ ಹಸನಾದ ಹೊಸಕಂಪು
ಹೊರಹೊಮ್ಮುತ್ತಾ ಇತ್ತು. ಕಣ್ಣನ್ನು ತೆರೆದಾಗ
ನೀಲೋತ್ಪಲದ ಮೊಗ್ಗು ಅರಳುತ್ತಿದೆಯೋ
ಎನುವ ಭ್ರಮೆಹುಟ್ಟುವುದು ಸನಿಹದಲಿ ಸುಳಿಯೆ.
ದಿನತುಂಬಿ ಬಸುರಿ ಗರ್ಭವ ಹೊತ್ತಕಾರಣ
ಬೆನ್ನನ್ನು ಹಿಂದೆಬಾಗಿಸಿ ನಡೆಯುತಿರುವಾಗ
ಮಾರನಿಗೆ ಗುರಿಯಿಟ್ಟು ಹೆದೆಯೇರಿಸಿದ ಬಿಲ್ಲ
ಹೋಲುವಳು. ತಾಯ ಸೆರಗಿನ ಜೋಡಿ ಮಗುವೊಂದು
ಮುಗಿಲ ಮರೆಯಲಿ ಕಣ್ಣಮುಚ್ಚಾಲೆಯಲಿ ತೊಡಗಿ
ನಲಿವಂತೆ ಅವಳ ಸುತ್ತುವುದು ತಣ್ಣನೆ ಗಾಳಿ.
ಇರುಳು ಮಾಯಾದೇವಿ ನಿದ್ರಿಸುತ್ತಿರುವಾಗ.”
ಕಾಶ್ಯಪನ ಆಶ್ರಮದ ಘಟ ಸರ್ಪ ಬುದ್ಧನಿಗೆದುರಾಗುವ ಕ್ಷಣ:
“….ಅಶ್ರುತ ನಾಗ ಸ್ವರಕೆ ಹೆಡೆತೊನೆದಾಟ ಕೆಲವು ಕ್ಷಣ. ಕೇದಗೆಯ ಬನದಿಂದ ಹೊರಟ ಪರಿಮಳದಂತೆ ಘಟಸರ್ಪ ಬಂದುಬಸೇರುವುದು ಬುದ್ಧನ ಕರದ ಕಪ್ಪರ”
ಆನುಷಂಗಿಕವಾಗಿ ಕಾವ್ಯದಲ್ಲಿ ಬುದ್ಧೋಪದೇಶವೂ ಅಲ್ಲಲ್ಲಿ ಬಂದಿದೆ:
“ಮಾತಿಗಿದೆ ದುಃಖವನ್ನು ಶಮನಗೊಳಿಸುವ ಶಕ್ತಿ.
ಸತ್ಯ ಮತ್ತು ದಯೆಯ ಮಿಲನಗೊಳಿಸುವ ಶಕ್ತಿ.
ಮಾತಿಗಿದೆ ಜಗವನ್ನೆ ಪರಿವರ್ತಿಸುವ ಶಕ್ತಿ” ಇದು ಬುದ್ಧವಾಣಿ….”
ಬುದ್ಧನ ದಿನಚರಿಯ ಕುರಿತೂ ಎರಡು ಹದಿನಾಲ್ಕು ಪಾದಗಳಲ್ಲಿ ವಿವರಿಸಿದೆ.
“ದೀಪನಂದಿತು ದೀಪದಲಿ, ಮುಳುಗಿತು ನೀರು ನೀರಲ್ಲಿ. ಸೊನ್ನೆ ತೆರೆಯಿತು ಕಣ್ಣ ಅಂತರಾಲೋಕಕ್ಕೆ. ಭೂಮಿ ಗುಡುಗಿತು ಶೂನ್ಯ ಆಡಿಸುವ ಡಿಂಡಿಮದ ಹಾಗೆ…” ಎಂಬಲ್ಲಿಗೆ ಬುದ್ಧನ ಪರಿನಿರ್ವಾಣವಾಗುತ್ತದೆ.
ಈ ಕಾವ್ಯ ಬಹುಕಾಲ ಬಾಳಿ ಬೆಳಗುತ್ತದೆ. ಓದಿ ಮುಗಿಸಿದಾಗ ನಮ್ಮ ಮನದಲ್ಲೂ ಅನುದ್ವೇಗ, ಕರುಣೆ ಮನೆಮಾಡುತ್ತದೆ.ಭಗವಾನ್ ಬುದ್ಧನ ಅಂತಃಕರಣದ ಕಿರು ಕಿರಣ ನಮ್ಮಲ್ಲೂ ನೆಲೆಸಲಿ.
(ಕೃತಿ: ಬುದ್ಧ ಚರಣ, ಲೇಖಕರು: ಎಚ್.ಎಸ್. ವೆಂಕಟೇಶಮೂರ್ತಿ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 350/-)
ಮಂಗಳೂರಿನ ಪೆರ್ಮಂಕಿಯವರಾದ ಕೃಷ್ಣಪ್ರಕಾಶ ಉಳಿತ್ತಾಯ ಉದ್ಯೋಗ ಕರ್ಣಾಟಕ ಬ್ಯಾಂಕ್ ಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಅಗರಿ ಮಾರ್ಗ’ ಮತ್ತು ‘ಸುಘಾತ’ ಅವರ ಪ್ರಕಟಿತ ಕೃತಿಗಳು. ಯಕ್ಷಗಾನ ಹಿಮ್ಮೇಳ ಚೆಂಡೆ ಮದ್ದಳೆ, ಯಕ್ಷಗಾನ ನಾಟ್ಯಾಭ್ಯಾಸ, ಮತ್ತು ಮೃದಂಗವಾದನದಲ್ಲಿ ಆಸಕ್ತಿ ಹೊಂದಿದ್ದಾರೆ.