ಮೂರು ವರ್ಷಗಳ ಈ ಪತ್ರ ವ್ಯವಹಾರದ ನಂತರ, ಇಬ್ಬರೂ ‘ಓಡಿಹೋಗುವುದು’ ಅಂತ ಓಲೆಗಳ ಮೂಲಕವೇ ತೀರ್ಮಾನವಾಗುತ್ತದೆ. ಕೃತಿಕಾರರೇ ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸುವಂತೆ, ಅದೆಷ್ಟೋ ದೂರ ‘ಓಡಿ’ ಬಂದ ಮೇಲೆ ಮೆವ್ಲುಟನಿಗೆ ತಾನು ಮನಸೋತ ಹುಡುಗಿ ಇವಳಲ್ಲ ಎಂಬುದು ತಿಳಿಯುತ್ತದೆ. ಮೆವ್ಲುಟನೇ ಹೇಳುವಂತೆ, ಈ ಓಡಿಹೋಗುವುದೆಂದರೆ ಮಹಾ ತಂತ್ರಗಾರಿಕೆಯ ವ್ಯವಹಾರವಾದುದರಿಂದ, ಅವನು ತನ್ನ ಅಂತರಂಗದ ಜ್ವಾಲಾಮುಖಿಯನ್ನು ಅದುಮಿಟ್ಟು, ಮುಖ್ಯವಾಗಿ ಅದನ್ನು ಹೊರಗೆ ತೋರಗೊಡದೇ ರಯಿಹಾಳೊಂದಿಗೇ ಸಂಸಾರ ಆರಂಭಿಸುತ್ತಾನೆ.
‘ಕಾವ್ಯಾ ಓದಿದ ಹೊತ್ತಿಗೆ’ಯಲ್ಲಿ ಒರ್ಹಾನ್ ಪಮುಕ್‌ರ ‘ದಿ ಸ್ಟ್ರೇಂಜ್‌ನೆಸ್ ಇನ್ ಮೈ ಮೈಂಡ್’ ಕಾದಂಬರಿಯ ಕುರಿತು ಬರೆದಿದ್ದಾರೆ ಕಾವ್ಯಾ ಕಡಮೆ
ಟರ್ಕಿಯ ಬರಹಗಾರ ಒರ್ಹಾನ್ ಪಮುಕ್‌ರ ಕಾದಂಬರಿ ಪ್ರಕಟವಾಯಿತೆಂದರೆ ಎಲ್ಲೆಡೆಯಿಂದ ಪುಸ್ತಕ ಪ್ರೇಮಿಗಳಿಗೆ ರೋಮಾಂಚನ. ಆರು ವರ್ಷಗಳ ಕಾಲ ಅವರಿಂದ ಬರೆಸಿಕೊಂಡ, 2014ರಲ್ಲಿ ಬಿಡುಗಡೆಯಾದ ಅವರ ಹೊಸ ಕಾದಂಬರಿ ‘ದಿ ಸ್ಟ್ರೇಂಜ್‌ನೆಸ್ ಇನ್ ಮೈ ಮೈಂಡ್,’ ಇಂಗ್ಲೀಷಿಗೆ ಅನುವಾದವಾಗಿ ಜಾಗತಿಕ ಓದುಗರ ಕೈ ಸೇರಿದ್ದು 2015ರ ಅಕ್ಟೋಬರ್‌ನಲ್ಲಿ. ಆರುನೂರು ಪುಟಗಳ ಈ ಕಾದಂಬರಿ ಒಂದು ಊರಿನ ಜೀವವನ್ನು ಕಟ್ಟುತ್ತಲೇ ಅಲ್ಲಿನ ವಲಸಿಗರ ಎದೆ ಬಡಿತವನ್ನೂ ಹಿಡಿಯಲು ಪ್ರಯತ್ನಿಸುತ್ತದೆ.
ಪಮುಕ್ ಬಹು ಸೂಕ್ಷ್ಮ ಕಲೆಗಾರ. ಇಲ್ಲಿಯವರೆಗೆ ಹದಿನೈದಕ್ಕಿಂಥ ಹೆಚ್ಚು ಕೃತಿಗಳನ್ನು ರಚಿಸಿದ ಅವರು ಇಂದಿಗೂ ಟರ್ಕಿಯಲ್ಲಿರುವ ತಾವು ಹುಟ್ಟಿದ ಮನೆಯಲ್ಲೇ ವಾಸಿಸುತ್ತಾರೆ. ರುಡ್ಯಾರ್ಡ್ ಕಿಪ್ಲಿಂಗ್‌ರ ನಂತರ ಅತಿ ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯದ ನೋಬೆಲ್ ಪಡೆದ ಖ್ಯಾತಿ ಇವರದ್ದು. ‘ದಿ ಸ್ಟ್ರೇಂಜ್‌ನೆಸ್ ಇನ್ ಮೈ ಮೈಂಡ್’ ಕಾದಂಬರಿಯಲ್ಲಿ ಪಮುಕ್ ಆಯ್ದುಕೊಂಡ ಕಥೆ ಮೆವ್ಲುಟ್ ಕರಾಟಸ್‌ನದ್ದು.
ಮೆವ್ಲುಟ್ ಕರಾಟಸ್ ತನ್ನ ಹದಿ ವಯಸ್ಸಿನಲ್ಲೇ ತಂದೆಯ ಜೊತೆ ಹಳ್ಳಿಯಿಂದ ಪಟ್ಟಣದ ಕನಸು ಹೊತ್ತು ಇಸ್ತಾನ್ಬುಲ್ ನಗರ ಸೇರಿದವನು. ಚಿಕ್ಕವನಿದ್ದಾಗ ಮುಂಜಾನೆ ಶಾಲೆಗೆ ಹೋಗಿ ಸಂಜೆ ತಂದೆಯ ಜೊತೆ ಇಸ್ತಾನಬುಲ್‌ನ ಬೀದಿಗಳಲ್ಲಿ ಮೊಸರು ಮತ್ತು ಬೋಝಾ ಪಾನಕ ಮಾರಿ ಅಜ್ಞಾತ ನಗರದ ತಿರುವುಗಳಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗಿದವನು. ಚಿಟಿಕೆ ದಾಲ್ಚಿನ್ನಿಯ ಪುಡಿ ಮತ್ತು ಹುರಿದ ಕಡಲೆಯ ಜೊತೆಗೆ ಕುಡಿವ ಈ ಬೋಝಾ ಪಾನಕದಲ್ಲಿ ಅತಿ ಕಡಿಮೆ ಮಾದಕ ಅಂಶವಿರುವ ಕಾರಣ ಪಾನ ನಿಷೇಧವಿದ್ದ ದೇಶಗಳಲ್ಲಿ ಇದು ಒಂದು ಕಾಲದಲ್ಲಿ ಜನಪ್ರಿಯವಾಗಿತ್ತು.
ಆದರೆ ಈಗ ಅವೇ ದೇಶಗಳ ರಾಜಕೀಯ ವಲಯದಲ್ಲಿ ಹೊಸ ಗಾಳಿ ಬೀಸಿ ಸರ್ಕಾರಗಳು ಪಾನ ನಿಷೇಧವನ್ನು ಹಿಂತೆಗೆದುಕೊಂಡ ಮೇಲೆ ಬೋಝಾ ಪಾನಕ ತನ್ನ ಜನಪ್ರಿಯತೆಯನ್ನು ಕಳೆದುಕೊಂಡು, ಬೀದಿಯಲ್ಲಿ “ಬೋಝಾ.. ಯಾರಿಗೆ ಬೇಕು ಒಳ್ಳೆಯ ಬೋಝಾ..” ಎಂದು ಕೂಗುತ್ತ ಮಾರುವ ಬೀದಿ ವರ್ತಕರ ಸಂಖ್ಯೆಯೂ ನಶಿಸಿಹೋಗುವ ಹಂತದಲ್ಲಿದೆ. ಈಗೇನಿದ್ದರೂ ‘ಬಾಟಲ್ ಬೋಝಾ’ದ ಕಾಲ. ನಮ್ಮ ನಾಯಕ ಮೆವ್ಲುಟ್, ಇಸ್ತಾನ್ಬುಲ್ಲಿನ ಬೀದಿಗಳಲ್ಲಿ ಏರು ದನಿಯಲ್ಲಿ ಕೂಗುತ್ತ ಬೋಝಾ ಮಾರುವ, ಈಗುಳಿದಿರುವ ಕೊನೆಯ ಕೆಲವೇ ಕೆಲವು ಮಂದಿ ಬೀದಿ ವರ್ತಕರಲ್ಲಿ ಒಬ್ಬ. ನೀವು ತುಸು ತನ್ಮಯರಾಗಿ ಕಿವಿಕೊಟ್ಟರೆ, ಒಂದು ಬಗೆಯ ನಿರುಪಾಯ ಖೇದ ಅವನ ದನಿಯಲ್ಲಿ ಕೇಳಿಸುತ್ತದೆ.
“ಬೋಝಾ ಮಾರಾಟಗಾರನ ದನಿಯೇ ನಿಜದಲ್ಲಿ ಅವನ ಬೋಝಾವನ್ನು ಮಾರುವುದು” ಎಂದು ತನ್ನ ತಂದೆ ಮುಸ್ತಾಫರಿಂದ ಅನುಭವದ ಪಾಠ ಕಲಿತು ಇದೇ ಇಸ್ತಾನ್ಬುಲ್ ಶಹರದ ಬೀದಿಗಳಲ್ಲಿ ಬಾಲ್ಯ, ಯೌವನ ಕಳೆದ ಮೆವ್ಲುಟ್ ತನ್ನ ದೊಡ್ಡಪ್ಪನ ಮಗನ ಮದುವೆಯಲ್ಲಿ ವಧುವಿನ ಇಬ್ಬರು ತಂಗಿಯರಲ್ಲಿ ಕಿರಿಯಳಾದ ಸಮಿಹಾಳ ರೂಪಕ್ಕೆ ಮನಸೋಲುತ್ತಾನೆ. ಅವಳ ನಿಜವಾದ ಹೆಸರನ್ನು ಗೊಂದಲದಲ್ಲಿ ತಪ್ಪು ತಿಳಿದು, ಸಮಿಹಾಳಿಗಿಂತ ಒಂದು ವರ್ಷ ದೊಡ್ಡವಳಾದ, ನೋಡಲು ಅಷ್ಟೇನೂ ರೂಪವತಿಯಲ್ಲದ (ಇದನ್ನು ಪಾಮುಕ್‌ರೇ ಒತ್ತಿ ಹೇಳಿದ್ದು) ರಯಿಹಾಳಿಗೆ ನೂರಾರು ಪತ್ರಗಳನ್ನು ಬರೆಯುತ್ತಾನೆ.
ಮೂರು ವರ್ಷಗಳ ಈ ಪತ್ರ ವ್ಯವಹಾರದ ನಂತರ, ಇಬ್ಬರೂ ‘ಓಡಿಹೋಗುವುದು’ ಅಂತ ಓಲೆಗಳ ಮೂಲಕವೇ ತೀರ್ಮಾನವಾಗುತ್ತದೆ. ಕೃತಿಕಾರರೇ ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸುವಂತೆ, ಅದೆಷ್ಟೋ ದೂರ ‘ಓಡಿ’ ಬಂದ ಮೇಲೆ ಮೆವ್ಲುಟನಿಗೆ ತಾನು ಮನಸೋತ ಹುಡುಗಿ ಇವಳಲ್ಲ ಎಂಬುದು ತಿಳಿಯುತ್ತದೆ. ಮೆವ್ಲುಟನೇ ಹೇಳುವಂತೆ, ಈ ಓಡಿಹೋಗುವುದೆಂದರೆ ಮಹಾ ತಂತ್ರಗಾರಿಕೆಯ ವ್ಯವಹಾರವಾದುದರಿಂದ, ಅವನು ತನ್ನ ಅಂತರಂಗದ ಜ್ವಾಲಾಮುಖಿಯನ್ನು ಅದುಮಿಟ್ಟು, ಮುಖ್ಯವಾಗಿ ಅದನ್ನು ಹೊರಗೆ ತೋರಗೊಡದೇ ರಯಿಹಾಳೊಂದಿಗೇ ಸಂಸಾರ ಆರಂಭಿಸುತ್ತಾನೆ.
ಚಿಕ್ಕವನಿದ್ದಾಗ ಮುಂಜಾನೆ ಶಾಲೆಗೆ ಹೋಗಿ ಸಂಜೆ ತಂದೆಯ ಜೊತೆ ಇಸ್ತಾನಬುಲ್‌ನ ಬೀದಿಗಳಲ್ಲಿ ಮೊಸರು ಮತ್ತು ಬೋಝಾ ಪಾನಕ ಮಾರಿ ಅಜ್ಞಾತ ನಗರದ ತಿರುವುಗಳಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗಿದವನು.
ಅದೆಷ್ಟೋ ವರ್ಷಗಳಾದ ಮೇಲೆ, ಏನೇನೋ ತಿರುವುಗಳ ನಂತರ ಸಮಿಹಾ ಮತ್ತೆ ಮೆವ್ಲುಟ್‌ನ ಬಾಳಿನಲ್ಲಿ ಬಂದಾಗ ಅವನಿಗೆ ‘ನಿಜವಾದ ಪ್ರೀತಿ’ಯ ಕುರಿತು ಗೊಂದಲ ಶುರುವಾಗುತ್ತದೆ. ಪವಿತ್ರವಾದ, ಆಳವಾದ, ಸತ್ಯವಾದ ಪ್ರೀತಿಯೆಂಬುದು ನಿಜದಲ್ಲಿ ಇದೆಯೇ? ಅಥವಾ ಅದು ಪ್ರೀತಿಯೆಂಬ ಭ್ರಮೆಯೇ ಎಂದು ನಗರದ ರಸ್ತೆಗಳಲ್ಲಿ ‘ಬೋಝಾ..’ ಕೂಗುಹಾಕುತ್ತ ಮೆವ್ಲುಟ್ ಪ್ರಶ್ನಿಸಿಕೊಳ್ಳುತ್ತಾನೆ. ಮೆವ್ಲುಟ್‌ನ ಪ್ರಕಾರ ಅವನಿಗೆ ಬೀದಿಯಲ್ಲಿ ನಡೆಯುವಾಗ ಮಾತ್ರ ಧ್ಯಾನಿಸಲು ಸಾಧ್ಯ, ಸ್ಪಷ್ಟವಾಗಿ ವಿಚಾರ ಮಾಡಲು ಸಾಧ್ಯ. ರಯಿಹಾ ಮತ್ತು ಸಮಿಹಾರ ಕುರಿತಾಗಿ ತನಗಿರುವ ಪ್ರೇಮದ ಬಗ್ಗೆ ತುಂಬಾ ಯೋಚಿಸುವ ಮೆವ್ಲುಟ್, ತನ್ನದೇ ಆದ ಧೋರಣೆಯೊಂದನ್ನು ಕಂಡುಕೊಳ್ಳಲು ಹೆಣಗುತ್ತಾನೆ. ಅವನ ದ್ವಂದ್ವಗಳು ಈ ಇಬ್ಬರು ಹೆಣ್ಣುಗಳ ಕುರಿತಾಗಿ ಮಾತ್ರ ಆಗಿರದೇ ತನ್ನ ಬದುಕಿನ ಬಗೆಗೂ ಆಗಿರುವುದು ಈ ಕಾದಂಬರಿಯ ವಿಶೇಷ. ಅವನಿಗೆ ಬದುಕಿನ ಬಗೆಗೂ, ಪ್ರೇಮದ ಬಗೆಗೂ ಕೊನೆಗೂ ಉತ್ತರ ಸಿಗದೇ ಇರುವುದು ಇನ್ನೊಂದು ವೈಶಿಷ್ಟ್ಯ.
ಪಮುಕ್ ನಮ್ಮ ಕಾಲದ ಬಹು ಮೇಧಾವಿ ಬರಹಗಾರ. ಈ ಕಾದಂಬರಿಯಲ್ಲಿ ಮೆವ್ಲುಟ್‌ನ ಜೀವನದ ಕುರಿತು ಚಿತ್ರಿಸುತ್ತಲೇ ಅವರು ಬಂಡವಾಳಶಾಹಿ ಆವರಣದಲ್ಲಿ ಶಹರವೊಂದು ಹೇಗೆ ಬದಲಾವಣೆಯ ಹೊಸಗಾಳಿಯಲ್ಲಿ ನಲುಗುತ್ತದೆ ಎಂಬ ಕಥೆಯನ್ನೂ ಹೇಳುತ್ತಾರೆ. ಆ ಕಾರಣಕ್ಕಾಗಿ ಇದು ಮೆವ್ಲುಟ್‌ನ ಕಥೆ ಎಷ್ಟೋ ಅಷ್ಟೇ ಬದಲಾಗುತ್ತಿರುವ ಇಸ್ತಾನ್ಬುಲ್‌ನ ಕತೆಯೂ ಆಗಿದೆ, ನಗರದ ಮೌಲ್ಯಗಳಲ್ಲಿ ನಂಬಿಕೆಯಿಟ್ಟು ವಲಸೆಬಂದ ಸಾವಿರಾರು ವಲಸಿಗರ ನೋವಿನ ಕಥೆಯೂ ಆಗಿದೆ.
ಬಡವರು ಬಡವಾರಾಗಿಯೇ ಇರುವ, ಶ್ರೀಮಂತರನ್ನು ಇನ್ನಷ್ಟು ಶ್ರೀಮಂತಗೊಳಿಸುವ ಬಂಡವಾಳ ವ್ಯವಸ್ಥೆಯ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ. ವಲಸಿಗರು ಮೊದಲು ಬಂದಾಗ ಕಟ್ಟಿಕೊಂಡ ‘ಗಿಸಿಕೊಂಡು’ ಮನೆಗಳು ಮರೆಯಾಗಿ ಆ ಜಾಗಗಳಲ್ಲಿ ಈಗ ಬಹುಮಹಡಿ ಕಟ್ಟಡಗಳು ತಲೆಯೆತ್ತಿ ನಿಂತಿವೆ. ಟೀವಿ, ಸಿನಿಮಾ, ಸಿಗಾರ್, ಮದುಪಾನ ಈಗ ವಿಶೇಷ ಸಂಗತಿಗಳಾಗಿ ಉಳಿದಿಲ್ಲ. ಮೊಸರು, ಬೋಝಾ ಪಾನಕ ಕೂಡ ಈಗ ಸೀಲ್ ಮಾಡಿದ ಬಾಟಲ್ಲುಗಳಲ್ಲಿ ದೊರೆಯುತ್ತಿವೆ. ಈ ವ್ಯವಸ್ಥೆಯಿಂದ ಕೆಲವು ಒಳ್ಳೆಯ ಲಕ್ಷಣಗಳೂ ಅನಾವರಣಗೊಂಡಿವೆ. ಹೆಣ್ಣುಮಕ್ಕಳು ತಮ್ಮ ತಲೆಯ ಸ್ಕಾರ್ಫನ್ನು ಅತಿ ಸಡಿಲವಾಗಿ ತೊಡಲು ಶುರು ಮಾಡಿದ್ದಾರೆ. ವಧುದಕ್ಷಿಣೆಯಿಲ್ಲದೇ ಮದುವೆಯಾಗುವುದು ಅತಿ ಸಾಮಾನ್ಯವಾಗಿದೆ.
‘ಎ ಸ್ಟ್ರೇಂಜ್‍ನೆಸ್ ಇನ್ ಮೈ ಮೈಂಡ್’ ಕಾದಂಬರಿಯ ನಿರೂಪಣೆ ಭಿನ್ನವಾಗಿದೆ. ಕೃತಿಕಾರರು ಪಾತ್ರಗಳ ‘ಧ್ವನಿ’ಗೆ ಇಲ್ಲಿ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಆಯಾ ಪಾತ್ರಗಳು, ಅವು ಎಷ್ಟೇ ಸಣ್ಣ ಪಾತ್ರಗಳಾದರೂ ಸರಿ ನಡುನಡುವೆ ಬಂದು ತಮ್ಮ ಸ್ವಂತ ದೃಷ್ಟಿಕೋನದಲ್ಲಿ ಕಥೆಯನ್ನು ಮುಂದುವರೆಸಿ ಹೋಗುತ್ತವೆ. ಒಂದು ಹಂತದಲ್ಲಿ ಕಥೆಯ ನಿರೂಪಕರಿಗಿಂತ ಈ ಪಾತ್ರಗಳೇ ಹೆಚ್ಚು ನಂಬಿಕೆಗೆ ಅರ್ಹವೇನೋ ಅಂತನಿಸಿಬಿಡುವುದು ಸುಳ್ಳಲ್ಲ. ಅದೇ ಈ ಕಾದಂಬರಿಯ ಗೆಲುವೂ ಹೌದು.
ಇಲ್ಲಿ ಬರುವ ದೃಢ ಸ್ತ್ರೀ ಪಾತ್ರಗಳು ಯಾವತ್ತಿಗೂ ನೆನಪಿನಲ್ಲುಳಿಯುವಂಥವು. ಈ ಬರಹದುದ್ದಕ್ಕೂ ಮೆವ್ಲುಟ್‌ನೇ ಆವರಿಸಿಕೊಂಡಿದ್ದರೂ ಇದು ತಕ್ಕಮಟ್ಟಿಗೆ ವೇದಿಹಾ, ರಯಿಹಾ, ಸಮಿಹಾ ಸೋದರಿಯರ ಬಂಧದ ಕಥೆಯೂ ಹೌದು. ಯಾವುದೇ ಸಂಘರ್ಷವನ್ನೂ ನಿರಾಯಾಸವಾಗಿ ಬಗೆಹರಿಸಬಲ್ಲ ವೇದಿಹಾ, ಅಸೂಯೆಯಲ್ಲಿ ಕುದಿಯುತ್ತ ತಾನು ಕಟುವಾಗಿ ಧ್ವೇಷಿಸುವ ಹರಿತ ಕಣ್ಣುಗಳ ಕಸೂತಿಯನ್ನು ಕಿಟಕಿಯ ಪರದೆಗಳ ಮೇಲೆ ಬರೆಯುವ ರಯಿಹಾ, ತನ್ನ ಸೌಂದರ್ಯದ ಅರಿವಿದ್ದು ಅದೊಂದೇ ಆಯುಧದಿಂದ ಇಡೀ ಜಗತ್ತನ್ನೇ ತನ್ನ ಸುತ್ತ ಸುತ್ತುವಂತೆ ಮಾಡುವ ಸಮಿಹಾ… ಇವೆಲ್ಲ ಎಂದಿಗೂ ಮನಸ್ಸಿನಲ್ಲಿ ಅಚ್ಚೊತ್ತಿ ಉಳಿಯುವ ಪಾತ್ರಗಳು.
ನಿರಂತರವಾಗಿ ಬದಲಾಗುತ್ತಲೇ ಇರುವ ಊರೊಂದರ ಹೃದಯ ಕವಾಟದೊಳಗೆ ಏಳುವ ಕಂಪನಗಳು, ಆ ಊರಿನದೇ ಬೀದಿಗಳನ್ನು ರಾತ್ರಿಯಿಡೀ ಸಂಚರಿಸುವ ಮನುಷ್ಯನೊಬ್ಬನ ತಲ್ಲಣಗಳೂ ಆಗಿವೆ. ಒಂದು ಊರೇ ಆಗಲಿ, ಓರ್ವ ವ್ಯಕ್ತಿಯೇ ಆಗಲಿ, ಒಂದು ಕಾಲದ ವೈಭವ ಮತ್ತು ಆ ನೆನಪುಗಳು ಉಕ್ಕಿಸುವ ಜೀವಂತ ನೋವನ್ನು ತಾಳಿಕೊಂಡು ಬಾಳುವುದು ಕಡುಕಷ್ಟ. ಈ ಕ್ರಿಯೆ ನಡೆವಾಗ ಭೂತ ವರ್ತಮಾನವಾಗುತ್ತದೆ, ಭವಿಷ್ಯತ್ತು ಭೂತವಾಗುತ್ತದೆ. ಈ ರೀತಿಯ ಕಲಸು ಮೇಲೋಗರದ ಒಗಟನ್ನು ಬಿಡಿಸಿಡಲು ಪಮುಕ್ ಮೆವ್ಲುಟ್‌ನ ಬಿಂಬವನ್ನು ಇಸ್ತಾಂಬುಲ್‌ನ ಕನ್ನಡಿಯಲ್ಲಿಟ್ಟು ಕಾಣಿಸಲು ಪ್ರಯತ್ನಿಸಿದ್ದಾರೆ.
ಓದುತ್ತೋದುತ್ತ ಈ ಕಾದಂಬರಿಯಲ್ಲಿ ಬರುವ ಕಥಾನಾಯಕ ಮೆವ್ಲುಟ್‌ನ ಬದುಕು ಮತ್ತು ಈ ದೀರ್ಘ ಬರಹದುದ್ದಕ್ಕೂ ಚಾಚಿಕೊಂಡ ಬದಲಾಗುತ್ತಲೇ ಇರುವ ಇಸ್ತಾನ್ಬುಲ್ ನಗರದ ಉದ್ದುದ್ದ ರಸ್ತೆಗಳು ಒಂದು ಹಂತದಲ್ಲಿ ಮಾಂತ್ರಿಕವಾಗಿ ಐಕ್ಯವಾಗುವುದನ್ನು ಕಾಣಲು ಸೋಜಿಗವೆನಿಸಿವುದು.
ಕಾವ್ಯಾ ಕಡಮೆ ಉತ್ತರ ಕನ್ನಡ ಜಿಲ್ಲೆಯ ಕಡಮೆಯವರು. ಸದ್ಯ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸ. ಧ್ಯಾನಕೆ ತಾರೀಖಿನ ಹಂಗಿಲ್ಲ, ಜೀನ್ಸು ತೊಟ್ಟ ದೇವರು (ಕವನ ಸಂಕಲನಗಳು) ಪುನರಪಿ (ಕಾದಂಬರಿ) ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು (ನಾಟಕಗಳು) ದೂರ ದೇಶವೆಂಬ ಪಕ್ಕದ ಮನೆ (ಪ್ರಬಂಧಗಳು.) ಮಾಕೋನ ಏಕಾಂತ (ಕಥಾ ಸಂಕಲನ) ಇವರ ಪ್ರಕಟಿತ ಕೃತಿಗಳು.