ಕಣ್ಣು ಮುಚ್ಚಿಕೊಂಡು ಓದುವ ಹಾಗಿದ್ದರೆ ಸಿನೆಮಾ ನೋಡಬೇಕಾಗಿಲ್ಲ ಅನ್ನುವಷ್ಟು ಕಣ್ಣಿಗೆ ಕಟ್ಟುವ ಬರವಣಿಗೆಗಳು ಇವು. ಬರೀ ಕಣ್ಣಿಗೆ ಮಾತ್ರವಲ್ಲ. ಸಿನೆಮಾದ ಸದ್ದುಗಳನ್ನು ಕಿವಿಗೆ, ಭಾವಗಳನ್ನು ಮನಸ್ಸಿಗೆ, ಕ್ಯಾಮರಾದ ಕೋನಗಳನ್ನು ಮಿದುಳಿಗೆ ಮತ್ತು ಸಿನೆಮಾ ಕೊನೆಗೆ ಉಂಟುಮಾಡುವ ತರ್ಕಗಳನ್ನು ವೈಚಾರಿಕತೆಗೆ ಅಕ್ಷರಗಳಲ್ಲೇ ದಾಟಿಸಿಬಿಡುತ್ತಿದ್ದರು. ಎಲ್ಲೂ ತರ್ಕಗಳಿಲ್ಲ, ತಪ್ಪುವ ಎಳೆಗಳಿಲ್ಲ. ಸಿನೆಮಾ ಹೇಳುವುದನ್ನು ಪರದೆ ಎಳೆದ ಹಾಗೆ ಕ್ವಚಿತ್ತಾಗಿ ಹೇಳಿ ಮುಗಿಸಿ ಮುಂದಿನ ಹದಿನೈದು ದಿನಗಳಿಗಾಗಿ ಕಾಯುವಂತೆ ಮಾಡುತ್ತಿದ್ದರು. ಸಂಪಾದಕನೂ, ಓದುಗರೂ ಏಕಪ್ರಕಾರವಾಗಿ ಕಾಯುತ್ತಿದ್ದ ಕೆಲವೇ ಬರವಣಿಗೆಗಳಲ್ಲಿ ಸಂಧ್ಯಾರಾಣಿ ಅವರದ್ದೂ ಒಂದಾಗಿತ್ತು.
ಎನ್. ಸಂಧ್ಯಾರಾಣಿ ಬರೆದ ‘ಸಿನಿ ಮಾಯಾಲೋಕ’ ಪುಸ್ತಕಕ್ಕೆ ಅಬ್ದುಲ್ ರಶೀದ್ ಬರೆದ ಮುನ್ನುಡಿ
ಸುಮಾರು ಹನ್ನೆರೆಡು ವರ್ಷಗಳ ಹಿಂದೆ ಇರಬೇಕು. ಕೆಂಡಸಂಪಿಗೆಯ ಮೊದಲ ಆವೃತ್ತಿಯ ಉತ್ತುಂಗದ ದಿನಗಳು. ಆಗ ಅಲ್ಲಿ ಬರೆಯಲು ಶುರುಮಾಡಿದ್ದ ಸಂಧ್ಯಾರಾಣಿಯವರ ಪರಿಚಯ ಚೇತೋಹಾರಿಯಾಗಿತ್ತು. ‘ವರ್ಕಿಂಗ್ ವುಮನ್. ಓದಿದ್ದು ಇತಿಹಾಸ ಎಂ ಎ. ಇಷ್ಟಪಟ್ಟು ಓದೋದು ಸಾಹಿತ್ಯ. ಹಳೆ ಹಾಡುಗಳು, ಗಜಲ್ ಗಳು, ಭಾವಗೀತೆಗಳು ಇಷ್ಟ. ವಾಸ ಜಯನಗರ, ಬೆ೦ಗಳೂರು’. ಬಹುಶಃ ಅದು ಅವರೇ ಇಷ್ಟಪಟ್ಟಿದ್ದ ಅವರ ಪರಿಚಯದ ಶೈಲಿ. ವರ್ಕಿಂಗ್ ವುಮನ್ನಿಗೂ, ಇತಿಹಾಸಕ್ಕೂ, ಭಾವಗೀತೆಗಳಿಗೂ ನಡುವೆ ಒಂದು ಸಾವಯವ ಜೀವ ಸಂಬಂಧ ಇರುವುದು ಎನ್ನುವ ಹಾಗೆ ಆಗಲೇ ಸಂಧ್ಯಾ ಬರೆಯುತ್ತಿದ್ದರು. ಅದಾಗಿ ಸುಮಾರು ಎಂಟತ್ತು ವರ್ಷಗಳ ನಂತರ ಅವರು ಬರೆದ ‘ಸಂಧ್ಯಾ ಟಾಕೀಸ್’ ಸಿನೆಮಾ ಲೇಖನಗಳ ಸರಣಿಗಾಗಿ ಹದಿನೈದು ದಿನಗಳಿಗೊಮ್ಮೆ ನಾನೂ ಕಾಯುತ್ತಿದ್ದೆ. ಶಿಸ್ತಿನ ದುಡಿಯುವ ಮಹಿಳೆಯಂತೆ ಕಟ್ಟುನಿಟ್ಟಾಗಿ, ಇತಿಹಾಸದ ವಿದ್ಯಾರ್ಥಿಯಂತೆ ಖಚಿತವಾಗಿ ಮತ್ತು ಗಜಲೊಂದರ ಸಖಿಯ ಹಾಗೆ ತೀವ್ರ ಭಾವಗೀತಾತ್ಮಕವಾಗಿ ಸಂಧ್ಯಾ ಬರೆದು ಕಳಿಸುತ್ತಿದ್ದರು. ಅದರ ಮೊದಲ ಓದುಗನಾಗುವ ಭಾಗ್ಯ ನನ್ನದಾಗಿತ್ತು. ಕಣ್ಣು ಮುಚ್ಚಿಕೊಂಡು ಓದುವ ಹಾಗಿದ್ದರೆ ಸಿನೆಮಾ ನೋಡಬೇಕಾಗಿಲ್ಲ ಅನ್ನುವಷ್ಟು ಕಣ್ಣಿಗೆ ಕಟ್ಟುವ ಬರವಣಿಗೆಗಳು ಅವು. ಬರೀ ಕಣ್ಣಿಗೆ ಮಾತ್ರವಲ್ಲ. ಸಿನೆಮಾದ ಸದ್ದುಗಳನ್ನು ಕಿವಿಗೆ, ಭಾವಗಳನ್ನು ಮನಸ್ಸಿಗೆ, ಕ್ಯಾಮರಾದ ಕೋನಗಳನ್ನು ಮಿದುಳಿಗೆ ಮತ್ತು ಸಿನೆಮಾ ಕೊನೆಗೆ ಉಂಟುಮಾಡುವ ತರ್ಕಗಳನ್ನು ವೈಚಾರಿಕತೆಗೆ ಅಕ್ಷರಗಳಲ್ಲೇ ದಾಟಿಸಿಬಿಡುತ್ತಿದ್ದರು. ಎಲ್ಲೂ ತರ್ಕಗಳಿಲ್ಲ, ತಪ್ಪುವ ಎಳೆಗಳಿಲ್ಲ. ಸಿನೆಮಾ ಹೇಳುವುದನ್ನು ಪರದೆ ಎಳೆದ ಹಾಗೆ ಕ್ವಚಿತ್ತಾಗಿ ಹೇಳಿ ಮುಗಿಸಿ ಮುಂದಿನ ಹದಿನೈದು ದಿನಗಳಿಗಾಗಿ ಕಾಯುವಂತೆ ಮಾಡುತ್ತಿದ್ದರು. ಸಂಪಾದಕನೂ, ಓದುಗರೂ ಏಕಪ್ರಕಾರವಾಗಿ ಕಾಯುತ್ತಿದ್ದ ಕೆಲವೇ ಬರವಣಿಗೆಗಳಲ್ಲಿ ಸಂಧ್ಯಾರಾಣಿ ಅವರದ್ದೂ ಒಂದಾಗಿತ್ತು.
ನಾವು ಸಣ್ಣವರಿರುವಾಗ ಸಿನೆಮಾಗಳನ್ನು ನೋಡಲು ನಮಗೆ ಅನುಮತಿ ಇರಲಿಲ್ಲ. ಅನುಮತಿ ಕೊಡಬೇಕಾಗಿದ್ದ ನನ್ನ ತಂದೆಯವರಿಗೂ ಸಿನೆಮಾಗಳನ್ನು ನೋಡಲು ಅನುಮತಿ ಇರಲಿಲ್ಲ. ಸಿನೆಮಾ, ನೃತ್ಯ, ನಾಟಕ, ಮದ್ಯ ಇತ್ಯಾದಿಗಳು ವಧ್ಯವಾಗಿದ್ದ ಬಾಲ್ಯ ನಮ್ಮದು. ಅದೇ ಸಮಯದಲ್ಲಿ ಮಕಾದಲ್ಲಿ ನಡೆಯುತ್ತಿದ್ದ ಪವಿತ್ರ ಹಜ್ ಯಾತ್ರೆಯ ಕುರಿತು ಒಂದು ಸಿನೆಮಾ ನಮ್ಮೂರಿನ ಟಾಕೀಸಿಗೆ ಬಂದಿತ್ತು. ಯಾರಿಗೂ ಗೊತ್ತಾಗದ ಹಾಗೆ ಆ ಸಿನೆಮಾವನ್ನು ಕದ್ದು ನೋಡಲು ನಮ್ಮ ತಂದೆಯವರು ಮುಖವನ್ನು ಮಫ್ಲರ್ ನಲ್ಲಿ ಮರೆಸಿಕೊಂಡು ಟಾಕೀಸಿನಲ್ಲಿ ಹೋಗಿ ಕುಳಿತಿದ್ದರು. ನೋಡಿದರೆ ಅವರ ಹಾಗೆಯೇ ಮಫ್ಲರಿನಲ್ಲಿ ಮರೆಸಿಕೊಂಡಿದ್ದ ಹಲವು ವಯಸ್ಕರ ಮುಖಗಳು. ಅವರೆಲ್ಲರೂ ನೋಡುತ್ತಿದ್ದುದು ಇಸ್ಲಾಮಿನ ಪವಿತ್ರ ಕಾರ್ಯಗಳಲ್ಲಿ ಒಂದಾದ ಹಜ್ ಯಾತ್ರೆಯ ಕುರಿತ ಸಿನೆಮಾ. ಆದರೂ ಅದು ಸಿನೆಮಾ ಆಗಿದ್ದರಿಂದ ಅವರು ಕದ್ದುಮುಚ್ಚಿ ನೋಡುತ್ತಿದ್ದರು. ಅವರೆಲ್ಲರೂ ಕದ್ದು ಮುಚ್ಚಿನೋಡುತ್ತಿದ್ದ ಸಿನೆಮಾವನ್ನು ನಾವಿದ್ದ ಕಾಫಿ ತೋಟದಲ್ಲಿ ಹಸುಕರು ಮೇಯಿಸುತ್ತಿದ್ದ ನನ್ನ ಬಾಲ್ಯಸ್ನೇಹಿತ ಅಬೂಬಕರ್ ಎಂಬಾತ ರಾಜಾರೋಷವಾಗಿ ನೋಡುತ್ತಿದ್ದ. ಅವನು ಅದನ್ನು ಮಾತ್ರವಲ್ಲ. ಎಂಜಿಆರ್, ಶಿವಾಜಿ ಗಣೇಶನ್, ವಿಷ್ಣುವರ್ಧನ್, ಅಮಿತಾಬ್ ಬಚ್ಚನ್ ಹೀಗೆ ಎಲ್ಲರ ಸಿನೆಮಾಗಳನ್ನೂ ನೋಡುತ್ತಿದ್ದ. ಅವನಿಗೆ ಟಾಕೀಸಿನ ಕತ್ತಲಿನಲ್ಲಿ ಒಂದಿಷ್ಟು ವಯಸ್ಕರು ಮುಖ ಮರೆಸಿಕೊಂಡು ಸಿನೆಮಾ ನೋಡುವುದು ನಗು ತರಿಸಿತ್ತು. ಟಾಕೀಸಿನೊಳಗೆ ನಡೆದಿದ್ದನ್ನು ನಗುತ್ತಾ ನಮಗೂ ಹೇಳಿದ್ದ. ಆದರೆ ಆ ನಗುವಿನ ವ್ಯಂಗ್ಯ ಆಗ ನಮಗೆ ಗೊತ್ತಾಗಿರಲಿಲ್ಲ. ನಾವು ಆತನ ಮಾತಿಗೆ ಬೆಲೆಕೊಡುತ್ತಿದ್ದುದು ಆತ ಸಿನೆಮಾ ನೋಡಿ ಬಂದು ನೋಡಿದ ಆ ಸಿನೆಮಾವನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸುತ್ತಿದ್ದ ರೀತಿಗಾಗಿ. ಭಾನುವಾರ ಮಧ್ಯಾಹ್ನದ ಮ್ಯಾಟಿನೀ ಸಿನೆಮಾ ಮುಗಿಸಿ ಆತ ಬರುವುದನ್ನು ನಾವು ಕಾಯುತ್ತಿದ್ದೆವು. ಬಹುಶಃ ಆತ ಸಿನೆಮಾ ನೋಡುವಾಗ ಅದನ್ನು ಕಣ್ಣಿಗೆ ಕಟ್ಟುವ ಹಾಗೆ ನಮಗೆಲ್ಲ ಹೇಗೆ ಹೇಳಬಹುದು ಎಂಬುದನ್ನು ಮನಸಿನಲ್ಲಿಟ್ಟುಕೊಂಡೇ ನೋಡುತ್ತಿದ್ದ ಅನಿಸುತ್ತದೆ. ಕಥೆ ಓಟಕ್ಕೆ ಅಡ್ಡವಾಗುವ ಯಾವುದೇ ಅಡೆತಡೆಗಳನ್ನು ಆತ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಆಮೇಲೆ ಸ್ವಲ್ಪ ಕಾಮೆಡಿ ಅನ್ನುತ್ತಿದ್ದ. ಕಾಮೆಡಿ ಅಂದರೆ ಪ್ರಣಯದ ದೃಶ್ಯಗಳು, ಆಮೇಲೆ ಸ್ವಲ್ಪ ಸ್ಟೋರಿ ಅನ್ನುತ್ತಿದ್ದ. ಸ್ಟೋರಿ ಅಂದರೆ ಅಳುವ -ದುಃಖದ ದೃಶ್ಯಗಳು. ಅವೆಲ್ಲವನ್ನೂ ವಿವರಿಸದೆ ಆತ ನೇರವಾಗಿ ಚಿತ್ರಗಳ ಓಟವನ್ನು ನಿರೂಪಿಸುತ್ತಿದ್ದ. ನನಗೆ ಈಗ ಅನಿಸುವ ಹಾಗೆ ಆತ ಒಬ್ಬ ಅದ್ಬುತ ನಿರೂಪಕ. ನಾನು ಈಗಲೂ ಅಷ್ಟೇ ಚಿತ್ರಗಳನ್ನು ನೋಡುವಾಗ ಸ್ವಲ್ಪ ಅವನ ಹಾಗೆಯೇ ನೋಡುವುದು.
ಆದರೆ ಸಂಧ್ಯಾರಾಣಿಯವರು ನಮ್ಮ ಹಾಗಲ್ಲ. ಅವರ ಅದ್ಭುತ ನಿರೂಪಣೆ ಅಲ್ಲಿಗೇ ನಿಲ್ಲುವುದಿಲ್ಲ. ಉದಾಹರಣೆಗೆ ಇರಾನಿನ ನಿರ್ದೇಶಕ ಅಸ್ಗರ್ ಫರ್ಹಾದಿಯ About Elli ಚಿತ್ರದ ಬಗ್ಗೆ ಬರೆಯುತ್ತಾ, “ಚಿತ್ರ ಮುಗಿದಾಗ ‘ಯಾರ ಲೀಲೆಗೋ ಯಾರೋ ಏನೋ ಗುರಿ ಇರದೆ ಬಿಟ್ಟ ಬಾಣ’ದಂತೆ, ಮನೆಯ ಮುಂದೆ ನಿಂತಿದ್ದ ಕಾರಿನ ಚಕ್ರಗಳು ಸಮುದ್ರ ದಂಡೆಯ ಮೇಲಿನ ಉಸುಕಿನಲ್ಲಿ ಹೂತು ಹೋಗಿವೆ. ಎಲ್ಲರೂ ಅದನ್ನು ಹೊರ ತೆಗೆಯಲು ಪ್ರಯತ್ನಿಸಿದರೂ, ಸುಳ್ಳೆಂಬ ಉಸುಕು ಅದನ್ನು ಇನ್ನೂ ಇನ್ನೂ ತನ್ನೊಳಗೆ ಎಳೆದುಕೊಳ್ಳುತ್ತಲೇ ಇದೆ. ಒಂದು ಸಿನಿಮಾ ಹೇಗಿರಬೇಕು ಎಂದು ಮಾತನಾಡುತ್ತಾ ಫರ್ಹಾದಿ ಒಂದೆಡೆ, ‘ಒಂದು ಚಿತ್ರ ಅದನ್ನು ವೀಕ್ಷಿಸುವವರು ತಮ್ಮನ್ನು ತಾವೇ ಪರಿಶೀಲಿಸಿಕೊಳ್ಳಲು ಅನುವಾಗುವ ತಾವೊಂದನ್ನು ಕಟ್ಟಿಕೊಡಬೇಕು. ಅದು ಅವರನ್ನು ಕೇವಲ ‘ಗ್ರಾಹಕ’ರಾಗುವುದರಿಂದ ತಪ್ಪಿಸಿ, ಸ್ವತಂತ್ರ್ಯ ಚಿಂತಕರನ್ನಾಗಿ ಮಾಡಲು ಪ್ರಯತ್ನಿಸಬೇಕು’ ಎಂದು ಹೇಳುತ್ತಾನೆ. ಈ ಚಿತ್ರದ ಮಟ್ಟಿಗಂತೂ ಅದು ಸಂಪೂರ್ಣ ಸತ್ಯ.” ಎನ್ನುತ್ತಾರೆ. ಎಲ್ಲಿಯ ಇರಾನಿನ ಅಸ್ಗರ್ ಫರ್ಹಾದಿ ಮತ್ತು ಮತ್ತು ಎಲ್ಲಿಯ ನಮ್ಮ ಅಡಿಗರ ‘ಯಾರ ಲೀಲೆಗೋ ಯಾರೋ..’ ಕವಿತೆ.
ಇಂತಹದೇ ಇನ್ನೊಂದು ವಿವರಣೆ ಇಂಡೋನೇಷಿಯನ್ ಸಿನೆಮಾ Letters from Prague ದ ಕುರಿತ ಬರಹದಲ್ಲೂ ಬರುತ್ತದೆ. ಚಿತ್ರದ ಕೊನೆಯಾದಾಗ ಲೇಖಕಿಗೆ ಚದುರಂಗರ ಕವಿತೆಯೊಂದರ ನೆನಪಾಗುತ್ತದೆ..
“ಆಳದ ಬಾವಿಯಿಂದ/ನೀರು ಸೇದುವ/ಗರ್ಭಿಣಿ/ಹೆಂಗಸು. ನೀರು ತುಂಬಿ/ದುಮುದುಮಿಸುವ/ಕಣ್ಣಿನ/ಕೊಡಗಳು. ಯಾವ ದೇಶದ ಯಾವ ಭಾಷೆಯ ಎಂತಹ ಚಿತ್ರವಾದರೂ ಸರಿ ಅವು ನಮ್ಮ ಮನಸ್ಸನ್ನು ಹೊಕ್ಕುವುದು ಪರಿಚಿತ ಪ್ರತಿಮೆಗಳಿಂದಲೇ ಅಲ್ಲವೇ? ಸಂಧ್ಯಾ ಇನ್ನೂ ಮುಂದಕ್ಕೆ ಹೋಗಿ ಕನ್ನಡದ ಬನಿಯ ಸುಪರಿಚಿತ ಸಾಲುಗಳ ಮೂಲಕವೇ ತಾವು ನೋಡಿದ ಚಿತ್ರವನ್ನು ನಮ್ಮ ಮುಂದಿರಿಸುತ್ತಾರೆ. ಅವರು ಚಿತ್ರವೊಂದನ್ನು ನೋಡಿದ ನಂತರ ಕನ್ನಡದ ಕವಿತೆಯೊಂದನ್ನು ಉದ್ಧರಿಸಿದ ಮಾತ್ರಕ್ಕೆ ಅವರದ್ದು ಓರ್ವ ಭಾವುಕ ಸಿನೆಮಾ ನೋಡುಗಳ ಮಾತುಗಳು ಅನಿಸುವುದಿಲ್ಲ, ಅವರದು ಒಬ್ಬಳು ಗಂಭೀರೆಯೂ, ಸಿನೆಮಾ ತಂತ್ರಜ್ಞಳೂ ಆದವಳ ವಿನಯದ ಮಾತುಗಳು.
ಕೊನೆಗೂ ಸಿನೆಮಾವೊಂದು ನಮ್ಮ ಒಳಗಿಳಿಯುವುದು ಹೀಗೆ ಕಣ್ಣಮುಂದಿನ ಪರದೆಯಲ್ಲಿ ನಡೆಯುತ್ತಿರುವುದನ್ನು ನಮ್ಮ ಒಳಗೇ ನಡೆಯುತ್ತಿರುವುದರ ಜೊತೆಗೆ ಕೂಡಿಸುತ್ತಾ ಕಳೆಯುತ್ತ ಚಿತ್ರಮಂದಿರದ ಕತ್ತಲ ಏಕಾಂತದ ಒಳಗಿಂದ ಗಿಜಿಗುಡುವ ಬೀದಿಯೊಳಕ್ಕೆ ಇಳಿಯುವುದಲ್ಲವೇ? ಹಿಂದಿ ಚಿತ್ರ PIKUವನ್ನು ನೋಡಿದಾಗ ಸಂಧ್ಯಾಗೆ ಅನ್ನಿಸಿದ್ದು ‘ತಾಯ್ತನ ಬಹಿರಂಗವಲ್ಲ, ಅಂತರಂಗ. ಅದು ಹೂವಿನ ರಂಗಲ್ಲ, ರೂಪಲ್ಲ, ಅದು ಹೂವಿನ ಪರಿಮಳದಂತೆ ಕಾಣಿಸದೆಯೂ ಇರುವಂಥಾದ್ದು, ಅರಿವಿಗೆ ಮಾತ್ರ ನಿಲುಕುವಂಥಾದ್ದು. ಅದು ಅನುಭವಕ್ಕೆ ಮಾತ್ರ ದಕ್ಕುವ ಗಂಧ.’ Memoirs of a Geisha ಎಂಬ ಚಿತ್ರ ನೋಡಿದ ಮೇಲೆ ಲೇಖಕಿಯ ಎದೆಯೊಳಗೆ ಉಳಿಯುವುದು ಜಪಾನಿನ ಗೇಶಾಗಳು ಮಾತ್ರವಲ್ಲ, ನಮ್ಮಲ್ಲಿನ ದೇವದಾಸಿಗಳು, ಉತ್ತರಭಾರತದ ಉಮ್ರಾವ್ ಜಾನ್… ಜಗತ್ತಿನ ಎಷ್ಟೆಲ್ಲಾ ಮೂಲೆಗಳು, ಆದರೆ ಕಥೆ ಮಾತ್ರ ಒಂದೇ. ಫೆಮಿನಿಸಂ ಬಗ್ಗೆ ನಂಬಿ ಮಾತನಾಡುವ ಅದರ ಆಚರಣೆಗಾಗಿ ಹೊಡೆದಾಡುವ ದಿನಮಾನದಲ್ಲಿ ಈ ಚಿತ್ರ ಇನ್ನೊಂದು ಬಗೆಯ ಪ್ರಶ್ನೆಗಳನ್ನು ನನ್ನಲ್ಲಿ ಬಿತ್ತಿತ್ತು. ಆ ಪದ್ಧತಿ ಮುಗಿಯಿತು ಎಂದು ನಿರಾಳವಾಗಿ ನಿಟ್ಟುಸಿರಿಡಲು ಸಾಧ್ಯವೆ? ಮತ್ತ್ಯಾವುದೋ ರೂಪದಲ್ಲಿ ಇದೇ ವ್ಯವಸ್ಥೆಯನ್ನು ನಾವು ಪೋಷಿಸುತ್ತಿಲ್ಲವೆ? ಹೆಣ್ಣಿನ ಲೈಂಗಿಕ ವಿಮೋಚನೆಯ ಫಲವನ್ನು ಉಣ್ಣುತ್ತಿರುವವರು ಯಾರು? ಈ ಪುಸ್ತಕದ ಇನ್ನೂ ಹಲವು ಕಡೆ ಸಂಧ್ಯಾ ಇಂತಹ ಹಲವು ಪ್ರಶ್ನೆಗಳನ್ನು ಎತ್ತುತ್ತಾರೆ. ಈ ಪುಸ್ತಕದ ಎಲ್ಲ ಕಡೆಯೂ ಅದೇ ಭಾವುಕವಾದ ಆದರೆ ಅದರಲ್ಲೇ ಕಳೆದು ಹೋಗದ ಎಚ್ಚರ. ಕಥೆ ಎಲ್ಲಿಗೆ ತೆರಳಿ ಹೋಗುತ್ತಿದ್ದರೂ ಮತ್ತೆ ನಮ್ಮನ್ನು ಅಲ್ಲಿಗೇ ತಂದು ಬಿಡುವ ಪ್ರಶ್ನೆಗಳು.
ಹೀಗೆ ಹೇಳುತ್ತಾ ಹೇಳುತ್ತಾ ಈ ಪುಸ್ತಕವನ್ನು ಮರು ಪರಿಶೀಲನೆಗೆ ಒಡ್ಡುವ ಅಥವಾ ವಿಮರ್ಶೆಯ ಕಟಕಟೆಗೆ ನಿಲ್ಲಿಸುವ ಯಾವ ಹುನ್ನಾರವೂ ನನಗಿಲ್ಲ ಮತ್ತು ಸಂಧ್ಯಾ ಅವರ ಬರಹಗಳಿಗೆ ಅದರ ಹಂಗೂ ಬೇಕಾಗಿಲ್ಲ. ಸಂಧ್ಯಾ, ಲೋಕ ಸಿನೆಮಾ ಎಂಬ ಟಾಕೀಸಿನ ಗಂಭೀರ ಪ್ರೇಕ್ಷಕಿ. ಆದರೆ ಈ ಗಾಂಭೀರ್ಯವನ್ನು ಅಷ್ಟೇ ಗಹನವಾಗಿ ಹೇಳಿದರೆ ಒಣ ವೇದಾಂತವಾಗಬಹುದು ಎನ್ನುವ ಸಹಜ ತಿಳುವಳಿಕೆಯನ್ನೂ ಹೊಂದಿರುವ ಕನ್ನಡದ ಬರಹಗಾರ್ತಿ. ಹಾಗಾಗಿ ಅವರ ಈ ಬರಹಗಳು ಸರಳವಾಗಿ ಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ಹಾಗಾಗಿಯೇ ಅವು ನನಗೂ ಇಷ್ಟವಾಗುತ್ತದೆ. ಹೀಗೆ ಇಷ್ಟಪಟ್ಟಿದ್ದೇ ಈ ಸಾಲುಗಳನ್ನು ಬರೆಯಲು ಕಾರಣ. ಹುಚ್ಚುಗಟ್ಟಿದಂತೆ ದಿನಕ್ಕೆ ನಾಲ್ಕಾರರಂತೆ ತಿಂಗಳುಗಟ್ಟಲೆ ಲೋಕ ಸಿನೆಮಾಗಳೊಳಗೆ ಮುಳುಗಿ ಹೋಗುವುದು ಮಾತ್ರ ನನಗೆ ಗೊತ್ತು. ಅದರಿಂದ ಹೊರಬಂದು ಕೆಲಕಾಲದ ನಂತರ ಏನೂ ನೆನಪಿರುವುದಿಲ್ಲ. ಈ ಪುಸ್ತಕದ ಮೂಲಕ ಅಂತಹ ಕೆಲವು ಸಿನೆಮಾಗಳೊಳಕ್ಕೆ ಮತ್ತೆ ಮುಳುಗಿಸಿದ ಈ ಪುಸ್ತಕಕ್ಕಾಗಿ ಸಂಧ್ಯಾರಿಗೆ ನಾನು ಕೃತಜ್ಞ.
(ಕೃತಿ: ಸಿನಿ ಮಾಯಾಲೋಕ, ಲೇಖಕರು: ಎನ್. ಸಂಧ್ಯಾರಾಣಿ, ಪ್ರಕಾಶಕರು: ಸಾವಣ್ಣ ಪ್ರಕಾಶನ, ಬೆಲೆ: 200/-)
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.
Super