ಕೊಡಗಿನ ಬುಡಕಟ್ಟು ಜನರ ಒಂದು ವಿಶಿಷ್ಟವಾದ ಹಬ್ಬ ‘ಬೋಡ್ ನಮ್ಮೆ’  ಅಥವಾ ‘ಕುಂಡೆ’ ಹಬ್ಬ. ಈ ಹಬ್ಬದಲ್ಲಿ ಇವರು ವಿಚಿತ್ರ ವೇಷ ಭೂಷಣಗಳನ್ನು ಧರಿಸುತ್ತಾರೆ. ಕೆಲವರು ಮೈಯ್ಯನ್ನು ಸೊಪ್ಪಿನಿಂದ ಮುಚ್ಚಿ, ಇನ್ನು ಕೆಲವರು ನವೀನ ಪೋಷಾಕುಗಳ ಜೊತೆಗೆ, ಕಪ್ಪು ಕನ್ನಡಕ, ತಲೆಗೆ ಚಿತ್ರ ವಿಚಿತ್ರವಾದ ಟೋಪಿಗಳನ್ನು ಹಾಕಿಕೊಂಡು ವೇಷ ಕಟ್ಟುತ್ತಾರೆ. ಹಬ್ಬವೆಂದ ಮೇಲೆ ಕುಡಿತ ಕುಣಿತ, ತಿನಿಸುಗಳಿರಬೇಕಲ್ಲವೇ. ಆದರೆ ಈ ಹಬ್ಬಕ್ಕೆ ಸಂಬಂಧಿಸಿದ ಘಟನೆಯೊಂದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ. ಅಷ್ಟೇನೂ ಒಳ್ಳೆಯ ಘಟನೆಯಲ್ಲ ಅದು. ಹಬ್ಬ ತಂದಿಟ್ಟ ದುರಂತವು ಅನಾವರಣಗೊಳಿಸಿದ ಸತ್ಯಗಳನ್ನು ಡಾ. ಕೆ.ಬಿ. ಸೂರ್ಯಕುಮಾರ್ ‘ನೆನಪುಗಳ ಮೆರವಣಿಗೆ’ ಅಂಕಣದಲ್ಲಿ ಪ್ರಸ್ತುತಪಡಿಸಿದ್ದಾರೆ. 

 

ಸಿದ್ದ ಆಸ್ಪತ್ರೆಗೆ ಬಂದಾಗ ರಾತ್ರಿ ಹತ್ತು ಗಂಟೆಯ ಸಮಯ. ನೋವು ಎಂದು ಹೊಟ್ಟೆಯ ಬಲ ಬದಿಯನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ವಾಕರಿಕೆಯಿಂದ ಬಳಲಿ, ಸುಸ್ತಾಗಿ ಬಂದ ಆತನನ್ನು ತುರ್ತು ವಿಭಾಗದ ವೈದ್ಯರು ಪರೀಕ್ಷಿಸಿ, ನನ್ನ ಬಳಿಗೆ ಕಳುಹಿಸಿದ್ದರು. ಸಾಧಾರಣ ಎತ್ತರದ ನಲ್ವತ್ತು ಪ್ರಾಯದ ಆತ ನಿಜಕ್ಕೂ ಸುಸ್ತಾದಂತಿದ್ದ. ಕಣ್ಣಿನ ಗುಡ್ಡೆಗಳು ಒಳಗೆ ಇಳಿದಿದ್ದು, ದೇಹ ಒಣಗಿ ಬತ್ತಿಹೋದಂತೆ ಕಾಣುತ್ತಿದ್ದ. ಕೆಲವು ದಿನಗಳಿಂದ ತನಗೆ ಹೊಟ್ಟೆನೋವು, ವಾಂತಿ, ಸುಸ್ತು ಇದೆ ಎಂದ ಅವನನ್ನು ಪರೀಕ್ಷಿಸಲಾಗಿ, ಅತನ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿದ್ದು, ಹೊಟ್ಟೆಯ ಭಾಗವನ್ನು ಮುಟ್ಟುವಾಗ ಆತನಿಗೆ ನೋವಾಗುತ್ತಿತ್ತು. ಹಾಗಾಗಿ, ವಾರ್ಡಿಗೆ ದಾಖಲು ಮಾಡಿ ಗ್ಲೂಕೋಸ್, ಇಂಜೆಕ್ಷನ್ನು ಎಲ್ಲಾ ಬರೆದು ಕಳುಹಿಸಿದ್ದೆ. ಮರುದಿನ ಬೆಳಿಗ್ಗೆ ಸಿದ್ದನ ಬಳಿ ಬಂದಾಗ ಅಯ್ಯೋ ಅಮ್ಮಾ ನೋವು ಎಂದು ನರಳುತ್ತಿದ್ದ. ಆತನ ಹೊಟ್ಟೆಯನ್ನು ಪರೀಕ್ಷಿಸಲು ಹತ್ತಿರ ಹೊದಾಗಲೇ ವಾಕರಿಕೆ ಬರುವಂತಹ ದುರ್ವಾಸನೆ ಮೂಗಿಗೆ ಹೊಡೆಯುತ್ತಿದ್ದು,
“ಏನೋ ಇಂದು ಬೆಳಿಗ್ಗೆ ಕುಡಿದು ಬಂದಿದ್ದೀಯಾ” ಎಂದು ಕೇಳಿದಾಗ ಅವನಿಂದ ಬಂದ ಉತ್ತರ,
“ಇಲ್ಲ ಸರ್, ಮೊನ್ನೆ ಬೋಡ್ ನಮ್ಮೆ (ಬೇಡು ಹಬ್ಬ) ಇತ್ತು. ಹಾಗಾಗಿ ಸ್ವಲ್ಪ ಜಾಸ್ತಿ ಆಗಿತ್ತು, ಇವತ್ತು ಕುಡಿದಿಲ್ಲ” ಎಂದ.

ಸಿದ್ದ ಕೊಡಗಿನ ಒಂದು ಬುಡಕಟ್ಟು ಸಮುದಾಯಕ್ಕೆ ಸೇರಿದವನು. ಇವನದು ಅರಣ್ಯ ಪ್ರದೇಶಗಳಲ್ಲಿ ವಾಸ ಮಾಡುವ ಒಂದು ವಿಶಿಷ್ಠ ಜನಾಂಗ. ಗೋಡೆಗಳನ್ನು ಬಿದಿರಿನ ತಟ್ಟಿ ಇಲ್ಲಾ ಮಣ್ಣಿನಿಂದ ಕಟ್ಟಿದ ಹುಲ್ಲು ಹಾಸಿದ ಸೂರಿನ ಮನೆಗಳಲ್ಲಿ, ವಿದ್ಯುತ್, ಫೋನ್ ಇಂತಹ ಯಾವುದೇ ಸಂಪರ್ಕ ಇಲ್ಲದ ಜಾಗದಲ್ಲಿ, ಇವರ ತಾಣ. ಅಲ್ಲಿ ಇಲ್ಲಿ ಕೂಲಿನಾಲಿ ಮಾಡಿಕೊಂಡು, ಸಂಜೆ ಆಯಿತೆಂದರೆ ಗಡಂಗಿಗೆ ಹೋಗಿ ಸಾರಾಯಿ ಸೇವನೆ, ಇದು ಇವರ ನಿತ್ಯದ ಜೀವನ ಶೈಲಿ. ನಾಗರೀಕತೆಯಿಂದ ಬಹಳ ದೂರ ಇದ್ದ ಇವರದು ದಪ್ಪ ಮುಖ, ಅಗಲವಾದ ತುಟಿ ಕಪ್ಪು ಬಣ್ಣ. ತಮ್ಮದೇ ಆದ ಒಂದು ರೀತಿಯ ಕೊಡವ, ಕನ್ನಡ, ಮಲಯಾಳ ಮಿಶ್ರಿತವಾದ ಇವರ ಭಾಷೆ, ಬೇರೆಯವರಿಗೆ ಅರ್ಥವಾಗುವುದು ಸ್ವಲ್ಪ ಕಷ್ಟ. ಗೆಡ್ಡೆ ಗೆಣಸು ತಿಂದುಕೊಂಡು ಪ್ರಾಣಿಗಳನ್ನು ಬೇಟೆಯಾಡಿ ಜೀವಿಸುವ ಇವರು ತಮ್ಮ ರೋಗಗಳಿಗೆ ಬುಡಕಟ್ಟು ಜನರಿಂದಲೇ ನಾಟಿ ಔಷಧಿ ಮಾಡಿಸುತ್ತಾ ಇದ್ದರು.

ಇಂತಹ ಬುಡಕಟ್ಟು ಜನರ ಒಂದು ವಿಶಿಷ್ಟವಾದ ಹಬ್ಬ ಬೋಡ್ ನಮ್ಮೆ ( ‘ಬೇಡು ಹಬ್ಬ), ಅಥವಾ ‘ಕುಂಡೆ’ ಹಬ್ಬ. ಈ ಹಬ್ಬದಲ್ಲಿ ಇವರು ವಿಚಿತ್ರ ವೇಷ ಭೂಷಣಗಳನ್ನು ಧರಿಸುತ್ತಾರೆ. ಕೆಲವರು ಮೈಯ್ಯನ್ನು ಸೊಪ್ಪಿನಿಂದ ಮುಚ್ಚಿ, ಇನ್ನು ಕೆಲವರು ನವೀನ ಪೋಷಾಕುಗಳ ಜೊತೆಗೆ, ಕಪ್ಪು ಕನ್ನಡಕ, ತಲೆಗೆ ಚಿತ್ರ ವಿಚಿತ್ರವಾದ ಟೋಪಿಗಳನ್ನು ಹಾಕಿಕೊಂಡು ವೇಷ ಕಟ್ಟುತ್ತಾರೆ. ಮತ್ತೆ ಕೆಲವು ಗಂಡಸರು ಸ್ತ್ರೀಯರ ಒಳ ಉಡುಪುಗಳು ಮತ್ತು ಪೋಷಾಕುಗಳನ್ನು ಧರಿಸಿ ಸ್ರೀಯರಂತೆ ವೇಷ ಹಾಕುತ್ತಾರೆ. ಕೈಯಲ್ಲಿ ಒಣಗಿದ ಸೋರೆ ಕಾಯಿ ಬುರುಡೆಯ ಗಿಲಿ ಗಿಲಿ, ದೊಣ್ಣೆಗಳನ್ನು ಹಿಡಿದು, ಡಬ್ಬಗಳನ್ನು ಬಾರಿಸುತ್ತಾ ಪೀಪಿಗಳನ್ನು ಊದುತ್ತಾ ಮನೆ ಮನೆಗೆ ಹೋಗಿ ‘ಕುಂಡೆ’ ಕುಣಿತ ಕುಣಿದು ಹಣ ಬೇಡುವುದು ಅವರ ಈ ಹಬ್ಬದ ವೈಶಿಷ್ಟ್ಯ, ಸಂಭ್ರಮ.

ಆದರೆ ಎಲ್ಲಕ್ಕಿಂತ ಮಿಗಿಲಾಗಿ ಕಂಡವರನ್ನೆಲ್ಲ ಮತ್ತು ದೇವರನ್ನೂ ಅಶ್ಲೀಲ ಶಬ್ದಗಳಿಂದ ಬೈಯುತ್ತಾ ಹಣ ಕೇಳುವುದು ಅಂದಿನ ಇವರ ಇನ್ನೊಂದು ವಿಶೇಷತೆ! ಇದರಲ್ಲಿ ಸಣ್ಣ ಪುಟ್ಟ ಅಶ್ಲೀಲ ಶಬ್ದಗಳಿಂದ ಹಿಡಿದು ಮನುಷ್ಯನಾದವನು ಕೇಳಬಾರದ ಶಬ್ದಗಳೂ ಇರುತ್ತವೆ. ಹಣ ಕೊಟ್ಟವರಿಗೆ ಒಳ್ಳೆಯ “ಕುಂಡೆ” ಎನ್ನುವ ವೇಷದಾರಿಗಳು, ಹಣ ನೀಡದವರ ಮಾನ ಮರ್ಯಾದೆಯನ್ನು ಹರಾಜು ಹಾಕಿ ಬಿಡುತ್ತಾರೆ. ಸಂಜೆ, ಊರಿನ ಮುಖ್ಯಸ್ಥರ ಮುಂದಾಳತ್ವದಲ್ಲಿ ದೇವಾಲಯದ ಸಮೀಪದ ಅಂಬಲದಿಂದ ಭದ್ರಕಾಳಿ ಉತ್ಸವ ಮೂರ್ತಿಯನ್ನು, ಮರದ ಕುದುರೆಯ ಮೂಲಕ ಅಯ್ಯಪ್ಪ ದೇವಾಲಯಕ್ಕೆ ತಂದು ಪೂಜಾ ಕೈಂಕರ್ಯವನ್ನು ನೆರವೇರಿಸಲಾಗುತ್ತದೆ. ನಂತರ ಹರಕೆ ಹೊತ್ತ ಮಂದಿ, ಕೀಲು ಕುದುರೆ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ. ವೇಷಧಾರಿಗಳಾದ ಬುಡಕಟ್ಟು ಮಂದಿಯಲ್ಲಿ ಹೆಚ್ಚಿನವರು ವಸೂಲಿಯಾದ ಹಣದಲ್ಲಿ ಕಂಠಪೂರ್ತಿ ಕುಡಿದು ಎರಡು ದಿನಗಳ ಕಾಲ ಮಜಾ ಉಡಾಯಿಸಿ ತೂರಾಡುತ್ತ ದೇವಾಲಯವನ್ನು ತಲುಪುವ ಮುನ್ನವೇ ರಸ್ತೆಯ ಬದಿಯಲ್ಲಿಯೋ, ಚರಂಡಿಯಲ್ಲೋ ಬಿದ್ದು ಹೆಂಡದ ನಶೆ ಇಳಿದ ಬಳಿಕ ಸಂಜೆ ದೇವಾಲಯಕ್ಕೆ ತೆರಳಿ ದೇವರಿಗೆ ಹಾಗೂ ಜನರಿಗೆ ಬೈದುದಕ್ಕೆ ತಪ್ಪಾಯಿತೆಂದು, ತಪ್ಪನ್ನು ಮನ್ನಿಸುವಂತೆ ದೇವರ ಸನ್ನಿಧಿಯಲ್ಲಿ ಭದ್ರ ಕಾಳಿಯನ್ನು ಬೇಡಿ, ಕ್ಷಮೆ ಕೇಳಿ ಕೊಳ್ಳುತ್ತಾರೆ.

ಈ ವಿಚಿತ್ರ ಹಬ್ಬ ನೋಡಿದವರು ಕೆಲವರು ಇದೇನಪ್ಪಾ ಎಂದು ಒಂದು ಕ್ಷಣ ಆಶ್ಚರ್ಯ ಪಟ್ಟುಕೊಂಡರೆ ಮತ್ತೆ ಕೆಲವರು ಇದೆಂತಹ ಅನಾಗರೀಕ ರೀತಿಯ ವರ್ತನೆ ಎಂದು ಸಿಡಿಮಿಡಿಗೊಳ್ಳುವುದೂ ಉಂಟು. ಈ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಒಂದು ಪುರಾತನ ಕತೆ ಇದೆ.

ಹಿಂದಿನ ಕಾಲದಲ್ಲಿ ಈ ಬುಡಕಟ್ಟು ಮಂದಿಯನ್ನು ಬೇಟೆಗೆಂದು ಅಯ್ಯಪ್ಪ ದೇವರು ಕಾಡಿಗೆ ಕರೆದುಕೊಂಡು ಹೋಗಿದ್ದರಂತೆ. ಅಲ್ಲಿ ಸುತ್ತಾಡಿ ಬೇಟೆಯಾಡಿದ ಬುಡಕಟ್ಟು ಮಂದಿಗೆ, ಈಗ ಬರುತ್ತೇನೆ ಎಂದು ಹೇಳಿ ಕಾಡಿನಲ್ಲಿಯೇ ಬಿಟ್ಟು ಹೋದ ಅಯ್ಯಪ್ಪ ವಾಪಾಸು ಬರಲಿಲ್ಲವಂತೆ. ಆತನನ್ನು ಕಾದು ಸುಸ್ತಾದ ಬುಡಕಟ್ಟು ಮಂದಿ ಅಯ್ಯಪ್ಪ ಹೋದ ಹಾದಿಯಲ್ಲಿ ಆತನನ್ನು ಹುಡುಕುತ್ತಾ ಹೋದರಂತೆ. ಹೀಗೆ ಹೋದ ಬುಡಕಟ್ಟು ಮಂದಿಗೆ ಕಂಡಿದ್ದು, ಅಯ್ಯಪ್ಪ ಭದ್ರಕಾಳಿಯೊಂದಿಗೆ ಸರಸವಾಡುತ್ತಿರುವುದು. ಇದರಿಂದ ಕೋಪಗೊಂಡ ಅವರು ಅಯ್ಯಪ್ಪನನ್ನು ಬಾಯಿಗೆ ಬಂದಂತೆ ಬಯ್ಯುತ್ತಾ ದೊಣ್ಣೆ ಹಿಡಿದು ಅಟ್ಟಿಸಿಕೊಂಡು ಹೋದರಂತೆ. ಆಗ ಅಯ್ಯಪ್ಪ, ಬುಡಕಟ್ಟು ಜನರಿಗೆ ತನ್ನ ಹಿಂಭಾಗವನ್ನು ತೋರಿಸಿದ ಕಾರಣ, “ಕುಂಡೇ ಕುಂಡೆ” ಎಂದು ಅಯ್ಯಪ್ಪನನ್ನು ಹೀಯಾಳಿಸಿದ್ದು, ಅಂದಿನಿಂದ ಪ್ರತೀ ವರ್ಷವೂ ಈ ಹಬ್ಬದ ದಿನ ಅಯ್ಯಪ್ಪನ ಮೇಲೆ ತಮ್ಮ ಪೂರ್ವಜರಿಗೆ ಇದ್ದ ಅಸಮಾಧಾನವನ್ನು ಬಯ್ಯುತ್ತಾ ವ್ಯಕ್ತಪಡಿಸಿ ತೀರಿಸಿಕೊಳ್ಳುವುದಂತೆ!

ಇದೆಲ್ಲವೂ ವಿಚಿತ್ರ ಎನಿಸಿದರೂ, ಇದು ಮೇ ತಿಂಗಳ ಕೊನೆಯ ವಾರದಲ್ಲಿ ಕೊಡಗಿನ ದೇವರಪುರ ಎಂಬ ಗ್ರಾಮದಲ್ಲಿ ನಡೆಯುವ ಬುಡಕಟ್ಟು ಜನರ ಒಂದು ಹಬ್ಬ.

ಇನ್ನು ಈ ಹಬ್ಬ ಮಾಡಿದ ಸಿದ್ದ ಎಷ್ಟು ಕುಡಿದಿರಬಹುದು ಎಂಬುದನ್ನು ನೀವೇ ಊಹಿಸಿಕೊಳ್ಳಿ…

“ನಿನ್ನ ಉಸಿರಿನ ವಾಸನೆ ಇವತ್ತೇ ಹೀಗಿದ್ದರೆ ನೀನು ಬೇರೆಯ ದಿನ ಎಷ್ಟು ಕುಡಿಯುತ್ತಿರಬಹುದು” ಎಂದೆ.

“ಏನಿಲ್ಲಾ ಅಯ್ಯಾ… ಒಂದು ದಿನಕ್ಕೆ ಮೂರು “ತೊಟ್ಟೆ” ( ಪ್ಯಾಕೆಟ್ ) ಮಾತ್ರ” ಎಂಬ ಉತ್ತರ ಕೇಳಿ ನಾನು ದಂಗಾಗಿದ್ದೆ!

ಲಿವರ್ ಇರುವ ಜಾಗದಲ್ಲಿ ಊದಿಕೊಂಡು ತುಂಬಾ ನೋವು ಇದ್ದುದರಿಂದ ತೊಂದರೆ ಅಲ್ಲಿಯೇ ಇರಬೇಕು ಎಂದು ವಿವರಗಳನ್ನು ಕೇಸ್ ಶೀಟಿನಲ್ಲಿ ಬರೆದು, ಔಷಧಿಗಳನ್ನು ಹೇಗೆ ಕೊಡಬೇಕು ಎಂಬುದರ ಬಗ್ಗೆ ವಾರ್ಡಿನ ಸಿಸ್ಟರ್ ರಲ್ಲಿ ತಿಳಿಸಿದ ನಾನು ಮರುದಿನ ಹೋಗಿ ವಿಚಾರಿಸಿದಾಗ ನನಗೆ ಹೊಟ್ಟೆ ನೋವು ಕಡಿಮೆ ಇದೆ ಎಂದಿದ್ದ.

“ನಿನ್ನೆಯದೇ ಇಂಜೆಕ್ಷನ್ ಮಾತ್ರೆ ತೆಗೆದುಕೋ” ಎನ್ನುತ್ತಾ ಮುಂದೆ ಹೋದ ನಾನು ಮೂರನೇ ದಿನ ಬೆಳಿಗ್ಗೆ ಬರುವಷ್ಟರಲ್ಲಿ ಮತ್ತೆ ಹೊಟ್ಟೆ ಹಿಡಿದು ಕುಳಿತಿದ್ದ. ಅವನನ್ನ ಪರೀಕ್ಷೆ ಮಾಡಿದಾಗ ಮತ್ತೆ ಅದೇ ಘಮ್ಮೆನ್ನುವ ದುರ್ನಾತ. ಬೆಳ್ಳಂಬೆಳಗ್ಗೆ ವಾರ್ಡಿನಿಂದ ತಪ್ಪಿಸಿಕೊಂಡು ಹೋಗಿ ಕಾಫಿಯ ಬದಲು “ಕಾಟಿ” (ಆಗ ಸಿಗುತ್ತಿದ್ದ ಕಾಡೆಮ್ಮೆ ಚಿನ್ಹೆಯ ‘ಸರಕಾರಿ’ ಸಾರಾಯಿ) ಕುಡಿದು ಬಂದಿದ್ದ. ಈಗ ಅವನನ್ನು ಕಂಡ ನನಗೆ ಆಗಿದ್ದು ಕನಿಕರವಲ್ಲ, ಬದಲಿಗೆ ಸಿಟ್ಟು. ಮೊದಲೇ ಸ್ವಲ್ಪ ಮುಂಗೋಪಿ ನಾನು. ಹತ್ತು ನಿಮಿಷ ಅವನನ್ನು ವಾಚಾಮಗೋಚರವಾಗಿ ಬಯ್ದು ನಿನ್ನನ್ನು ಈಗಲೇ ಡಿಸ್ಚಾರ್ಜ್ ಮಾಡುತ್ತೇನೆ ಎಂದಾಗ, ಸಿದ್ದನಿಗೆ ಕುಡಿದಿದ್ದ ಸಾರಾಯಿ ಬೆವರಾಗಿ ಸುರಿದು, ತಲೆಯಿಂದ ಮತ್ತು ಇಳಿದಿತ್ತು. ನನ್ನ ಕಾಲನ್ನು ಹಿಡಿದು,
“ದಮ್ಮಯ್ಯ” ಒಂದು ಸರ್ತಿ ಮಾಫಿ ಮಾಡಿ. ಇನ್ನು ಮುಂದೆ ಖಂಡಿತ ಕುಡಿಯುವುದಿಲ್ಲ” ಎಂದ. ಯಾಕೋ ಮತ್ತೆ ಕನಿಕರ ಬಂದು ಇನ್ನೊಮ್ಮೆ ಕುಡಿದರೆ ನೋಡು, ಪೊಲೀಸರಿಗೆ ತಿಳಿಸುತ್ತೇನೆ ಎಂದು ಹೆದರಿಸಿ ಮುಂದೆ ಹೋಗಿದ್ದೆ.

ಅಂದು, ವಾರ್ಡಿನಲ್ಲಿದ್ದ ಇತರ ರೋಗಿಗಳನ್ನು ನಿಧಾನವಾಗಿ ನೋಡಿ, ಅಂದು ಬಂದಿದ್ದ ಒಂದು ಪೋಸ್ಟ್ ಮಾರ್ಟಂ ಕೂಡಾ ಮಾಡಿ ಮನೆಗೆ ಹೋಗಿ ತಲುಪಿದಾಗ, ಗಂಟೆ ಮೂರು. ಸುಸ್ತಾಗಿ ಮನೆಗೆ ಹೋಗಿ ‘ನನಗಂತೂ ತುಂಬಾ ಹೊಟ್ಟೆ ಹಸಿದಿದೆʼ ಎನ್ನುತ್ತಾ ಕೈತೊಳೆದು ಊಟಕ್ಕೆ ಕುಳಿತಾಗ ಪತ್ನಿಯಿಂದ ಒಂದು ಮಾತೂ ಇಲ್ಲ! ಬಡಿಸಿ ದೂರಕ್ಕೆ ಹೋದ ಹೆಂಡತಿಯನ್ನು ಕಂಡಾಗ ನನಗೆ ಏನೋ ಕಸಿವಿಸಿ. ಎಲ್ಲೋ ಏನೋ ತಪ್ಪಾಗಿದೆ ಎನ್ನುತ್ತಾ ಅರ್ಧ ಊಟ ಮಾಡುವಷ್ಟರಲ್ಲಿ ಹೊಸ ಬಟ್ಟೆ ಹಾಕಿ ಶಾಲೆಗೆ ಹೋದ ಮಗಳು ಬಂದು,
“ಏನಪ್ಪಾ ಎಷ್ಟು ಗಂಟೆಗೆ ಪಾರ್ಟಿ” ಎಂದಾಗಲೇ ಮಗಳ ಹುಟ್ಟು ಹಬ್ಬದ ನೆನಪು. ಸಂಜೆಗೆ ನನ್ನ ಇತರ ವೈದ್ಯ ಮಿತ್ರರನ್ನು ಕಾಫಿಗೆ ಕರೆದಿದ್ದದ್ದರಿಂದ ನಾನು ಮಾರ್ಕೆಟಿಗೆ ಹೋಗಿ ಕೆಲವು ತಿಂಡಿಗಳನ್ನು ಕಟ್ಟಿಸಿ ತರಬೇಕಿತ್ತು. ಕೆಟ್ಟೆನಲ್ಲಪ್ಪೋ ಎಂದು ಗಡಿಬಿಡಿಯಲ್ಲಿ ಪೇಟೆಗೆ ಹೋಗಿ ಬೇಕರಿಯಲ್ಲಿ ಸಿಕ್ಕಿದ್ದನ್ನು ಕಟ್ಟಿಸಿಕೊಂಡು ಬಂದಾಗ ಮಿತ್ರರು ಒಬ್ಬೊಬ್ಬರಾಗಿ ಬರುತ್ತಿದ್ದರು. ತಿಂಡಿ ತಿನ್ನುತ್ತಾ ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗಲೇ ಆಸ್ಪತ್ರೆಯಿಂದ ಕರೆಪುಸ್ತಕ ಹೊತ್ತು ವಾರ್ಡ್ ಬಾಯ್ ಬಂದಿದ್ದರು.

“ಸಿದ್ದನಿಗೆ ತುಂಬಾ ಸೀರಿಯಸ್, ಏನೇನೋ ಮಾಡುತ್ತಿದ್ದಾನೆ” ಎಂಬ ವಾರ್ಡಿನ ಸಿಸ್ಟರ್ ಅವರ ಕರೆ. ಕೂಡಲೇ ಇವನಿಗೆ ಮಾಡಲು ಬೇರೆ ಕೆಲಸವಿಲ್ಲ, ಮತ್ತೆ ಕುಡಿದಿರಬೇಕು ಎಂದು ಆಲೋಚಿಸುತ್ತಾ ಅಲ್ಲಿಗೆ ಓಡುತ್ತಾ ಹೋದ ನನಗೆ ಅವನ ಪರಿಸ್ಥಿತಿ ಕಂಡು ಸ್ವಲ್ಪ ಗಾಬರಿಯಾಗಿತ್ತು. ತುಂಬಾ ಸುಸ್ತಾಗಿದ್ದ ಅವನ ಶರೀರ ಪೂರ್ತಿ ಹಳದಿ ಬಣ್ಣಕ್ಕೆ ತಿರುಗಿತ್ತು.

“ಸಾರ್, ನನ್ನ ಹೊಟ್ಟೆ ಒಡೆದು ಹೋಗುತ್ತಿದೆ, ನೋವು ತಡೆಯಲು ಆಗುವುದಿಲ್ಲ. ಏನಾದರೂ ಮಾಡಿ. ಇದಕ್ಕೆಲ್ಲ ಆ ದಿನ ತಿಮ್ಮ ಹೊಡೆದದ್ದೇ ಕಾರಣ” ಎಂದಿದ್ದ. ಇದೇನಪ್ಪಾ ಹೊಸ ಕಥೆ ಎಂದು ಕೇಳಿದಾಗ ಅವನು ಹೇಳಿದ ವಿಷಯ ಇದು…

ಆಸ್ಪತ್ರೆಗೆ ದಾಖಲಾಗುವ ಇಪ್ಪತ್ತು ದಿವಸಗಳ ಹಿಂದೆ ಸಾರಾಯಿಯ ಗಡಂಗಿನಲ್ಲಿ ಇವನಿಗೂ, ಇವನ ಮಿತ್ರ ತಿಮ್ಮನಿಗೂ ಯಾವುದೋ ಹಳೆ ಸಾಲದ ಬಗ್ಗೆ ಜಗಳವಾಗಿ ಅವನು, ಇವನ ಕತ್ತಿನ ಪಟ್ಟಿ ಹಿಡಿದು ಕೆಳಗೆ ತಳ್ಳಿದ್ದ. ಆಗ ಸಿದ್ದನಿಗೆ ಹೊಟ್ಟೆಯಲ್ಲಿ ನೋವು ಆಗಿದ್ದರೂ ಅದನ್ನು ಮನಸ್ಸಿಗೆ ತೆಗೆದುಕೊಂಡಿರಲಿಲ್ಲ. ಈಗ ನೋವು ಜೋರಾದಾಗ ಅದು ನೆನಪಿಗೆ ಬಂದು, ಅವನು ತಳ್ಳಿದ್ದರಿಂದ ಹೊಟ್ಟೆಗೆ ನೋವಾಗಿದೆ ಎಂದು ನೆನಪಿಸಿಕೊಂಡಿದ್ದ. ದಾಖಲಾಗಿ ಮೂರು ದಿವಸದ ಬಳಿಕ ಹೊಡೆದಾಟದ ಬಗ್ಗೆ ಹೇಳುತ್ತಾನಲ್ಲಾ, ಇದು ಈಗ ಮೆಡಿಕೋ ಲೀಗಲ್ ಕೇಸ್ ಆಯ್ತು ಎನ್ನುತ್ತಾ ಅಪಘಾತ ವಿಭಾಗದಲ್ಲಿ ಇದ್ದ ಡ್ಯೂಟಿ ಡಾಕ್ಟರ್ಗೆ ಹೇಳಿ ಕಳಸಿ, ಈ ವಿವರವನ್ನು ಅಪಘಾತ ವಿಭಾಗದ ಪುಸ್ತಕದಲ್ಲಿ ಬರೆದುಕೊಂಡು ಪೊಲೀಸರಿಗೆ ತಿಳಿಸಲು ಹೇಳಿದೆ. ಆಗ ಜಿಲ್ಲೆಯಲ್ಲಿ ಎಲ್ಲೂ ಸ್ಕ್ಯಾನಿಂಗ್‌ಗೆ ವ್ಯವಸ್ಥೆ ಇರಲಿಲ್ಲ. ಆದ್ದರಿಂದ ಹೊಟ್ಟೆಯ ವಿಭಾಗದ ಎಕ್ಸ್ ರೇ ಮಾಡಿಸಿ, ಮುಂದಿನ ಚಿಕಿತ್ಸೆಯನ್ನು ಆರಂಭಿಸಿದ್ದೆ.

ಮನೆಯಲ್ಲಿ ನನ್ನನ್ನು ಕಾಯುತ್ತಾ ಕುಳಿತಿದ್ದ ಮಿತ್ರರು ಒಬ್ಬೊಬ್ಬರಾಗಿ ಹೊರಟು ಹೋಗಿದ್ದರು. ಹುಟ್ಟು ಹಬ್ಬದ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ್ದ ಮಗಳು, ನನ್ನನ್ನು ಕಾಯುತ್ತಾ ರಾತ್ರಿ ಊಟ ಮಾಡದೇ ಮಲಗಿ ನಿದ್ರಿಸಿದ್ದಳು.

ಗ್ರಾಮಾಂತರ ವಿಭಾಗದ ಪೊಲೀಸರು ವಿಷಯ ತಿಳಿದು ವಾರ್ಡಿಗೆ ಬಂದು ಸಿದ್ದನ ಹೇಳಿಕೆ ಪಡೆದು ಕೇಸು ದಾಖಲು ಮಾಡಿಕೊಂಡು ಹೋಗಿದ್ದರು. ಬೆಳಿಗ್ಗೆ ನಾನು ಹೋಗುವ ಸಮಯಕ್ಕೆ ಅವನ ಸ್ಥಿತಿ ತೀರಾ ಹದಗೆಟ್ಟಿತ್ತು. ಆತ ಶಸ್ತ್ರಚಿಕಿತ್ಸೆ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಏನು ಮಾಡಿದರೂ ಪರಿಸ್ಥಿತಿ ಸುಧಾರಿಸದೆ ಅಂದು ರಾತ್ರಿ, ಸಿದ್ದ ಕೊನೆಯುಸಿರು ಎಳೆದಿದ್ದ. ಎಂಎಲ್ಸಿ ಕೇಸು ಆದುದರಿಂದ ಸಾವಿನ ವಿಷಯವನ್ನು ಪೊಲೀಸರಿಗೆ ತಿಳಿಸಿ, ಅವರು ಬಂದು, ಶವವನ್ನು ಶವಾಗಾರದಲ್ಲಿ ಇರಿಸಿ, ಮೊಕದ್ದಮೆಯನ್ನು ಸೆಕ್ಷನ್ 302 ಗೆ ಬದಲಾಯಿಸಿಕೊಳ್ಳಲಾಗಿತ್ತು. ಮರುದಿನ ಬೆಳಿಗ್ಗೆ ಪೋಲೀಸಿನವರು ಹೋಗಿ ತಿಮ್ಮನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ, ತಾನು ಸಿದ್ದನನ್ನು ಹೊಡೆಯಲೇ ಇಲ್ಲ, ಮಾತಿನ ಭರದಲ್ಲಿ ತಳ್ಳಿದ್ದು ಮಾತ್ರ ಎಂಬ ಅವನ ಕೂಗು ಬರೇ ಅರಣ್ಯ ರೋಧನವಾಗಿತ್ತು. ಕಡತವನ್ನು ಪರೀಕ್ಷಿಸಿದ ನ್ಯಾಯಾಧೀಶರು ಅವನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದಾಗ, ಅಳುತ್ತಾ ತಿಮ್ಮ ಜೈಲಿಗೆ ಹೋಗಿದ್ದ.

ಪೊಲೀಸರು, ಅಲ್ಲಿದ್ದ ಪಂಚರ ಸಮಕ್ಷಮದಲ್ಲಿ ಶವದ ಮಹಜರು ನಡೆಸಿ ಶವಪರೀಕ್ಷೆಯನ್ನು ಕೋರಿ ದ್ವಿಪ್ರತಿ ಅರ್ಜಿಯನ್ನು ಆಸ್ಪತ್ರೆಗೆ ಸಲ್ಲಿಸಿದ್ದರು. ಈ ಒಂದು ಪ್ರಕರಣ ವಿಶೇಷವಾಗಿ ಇದ್ದದ್ದು ಎಂದು ಸ್ಥಾನೀಯ ವೈದ್ಯರು, ವಿಧಿ ವಿಜ್ಞಾನ ತಜ್ಞನಾದ ನನಗೆ ಮರಣೋತ್ತರ ಪರೀಕ್ಷೆ ಮಾಡಲು ಸೂಚಿಸಿದ್ದರು. ಪೋಲೀಸರು ಆ ಪತ್ರದಲ್ಲಿ, ಮೃತನ ‘ವಿಸೆರ’ವನ್ನು ಶೇಖರಿಸಿ ಕೊಡಬೇಕು ಎಂದು ಕೋರಿಕೊಂಡಿದ್ದರು. ಮರಣೋತ್ತರ ಪರೀಕ್ಷೆಯನ್ನು ಮಾಡಿ ಶರೀರದಲ್ಲಿನ ಎಲ್ಲ ಅಂಗಾಂಗಗಳ ಪರೀಕ್ಷೆಯನ್ನು ಮಾಡಿದ್ದೆ. ‘ವಿಸೆರ’ ವಿಶ್ಲೇಷಣೆ ನಡೆಯಬೇಕಿದ್ದ ಕಾರಣ, ಪ್ರಾಥಮಿಕ ವಿವರಗಳನ್ನು ಬರೆದು ಸಾವಿನ ಕಾರಣವನ್ನು “ರೀಸರ್ವೆಡ್. ಪೆಂಡಿಂಗ್ ಕೆಮಿಕಲ್ ಅನಾಲಿಸಿಸ್ ರಿಪೋರ್ಟ್ ಫ್ರಮ್ ಫಾರೆನ್ಸಿಕ್ ಸೈನ್ಸ್ ಲ್ಯಾಬ್ (ಅಂತಿಮ ವರದಿಯನ್ನು ಪ್ರಯೋಗಾಲಯದ ವರದಿಯ ನಂತರ ಕೊಡಲಾಗುವುದು)” ಎಂದು ಬರೆದು, ವರದಿಯನ್ನು ಆಸ್ಪತ್ರೆಯ ಆಫೀಸಿಗೆ ಅಂದೇ ಕಳುಹಿಸಿದ್ದೆ. ಸಿದ್ದನ ಕೆಲವು ಸಂಬಂಧಿಕರು ಬಂದವರೇ ದುಃಖದಿಂದ ಶವವನ್ನು ಮನೆಗೆ ತೆಗೆದುಕೊಂಡು ಹೋಗಿದ್ದರು.

ಈ ಹಬ್ಬದಲ್ಲಿ ಇವರು ವಿಚಿತ್ರ ವೇಷ ಭೂಷಣಗಳನ್ನು ಧರಿಸುತ್ತಾರೆ. ಕೆಲವರು ಮೈಯ್ಯನ್ನು ಸೊಪ್ಪಿನಿಂದ ಮುಚ್ಚಿ, ಇನ್ನು ಕೆಲವರು ನವೀನ ಪೋಷಾಕುಗಳ ಜೊತೆಗೆ, ಕಪ್ಪು ಕನ್ನಡಕ, ತಲೆಗೆ ಚಿತ್ರ ವಿಚಿತ್ರವಾದ ಟೋಪಿಗಳನ್ನು ಹಾಕಿಕೊಂಡು ವೇಷ ಕಟ್ಟುತ್ತಾರೆ.

ಇದಾದ ಕೆಲವು ದಿನಗಳ ಬಳಿಕ ಪೊಲೀಸರು ಬಂದು ‘ವಿಸೆರ’ವನ್ನು ತೆಗೆದುಕೊಂಡು ಹೋದರು. ಮರಣೋತ್ತರ ಪರೀಕ್ಷೆಯ ರಿಪೋರ್ಟ್ ಅನ್ನು ಪ್ರಥಮ ವರದಿಯ ಜೊತೆ ಸೇರಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ತಿನ್ನಲು ಗತಿಯಿಲ್ಲದೆ ಈಗಾಗಲೇ ಕ್ಷಯದಿಂದ ನರಳುತ್ತಾ ಕೂಲಿನಾಲಿ ಮಾಡಿ ತನ್ನ ಪುಟ್ಟ ಮೂರು ಮಕ್ಕಳು ಮತ್ತು ಹೆಂಡತಿಯ ಸಂಸಾರ ಸಾಗಿಸುತ್ತಿದ್ದ ತಿಮ್ಮನಿಗೆ ಲಾಯರ್ ಇಡಲು ಹಣವೆಲ್ಲಿಂದ ಬರಬೇಕು? ಗಳಿಸಿದ ಅಲ್ಪ ಸ್ವಲ್ಪ ಹಣವನ್ನು ಗಡಂಗಿಗೆ ಸುರಿಯಲಾಗಿತ್ತು. ಕೊನೆಗೆ ಸರಕಾರದ ವತಿಯಿಂದಲೇ ಲೀಗಲ್ ಸೆಲ್ ನಿಂದ ನೇಮಕವಾದ ಒಬ್ಬ ವಕೀಲರು ಇವನ ಕೇಸನ್ನು ನಡೆಸಿದ್ದರು. ನ್ಯಾಯದ ಚಕ್ರ ನಿಧಾನವಾಗಿ ಉರುಳುತ್ತಾ ಕೆಲವು ಎಡ್ಜರ್ಣಮೆಂಟ್ ಗಳನ್ನು ನೋಡುತ್ತಾ ಮುಂದೆ ಹೋಗಿತ್ತು.

ಆಗಿನ ಕಾಲದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ ‘ವಿಸೆರ’ಗಳ ವರದಿ ಬರಲು ಬಹಳ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದು, ಕೆಲವೊಮ್ಮೆ ಹಲವು ವರ್ಷಗಳೇ ಉರುಳಿ, ನಂತರ ಪೋಲೀಸಿನವರು ಕೇಸುಗಳನ್ನು ಬಿ ಶೀಟ್ ಮಾಡಿ, ಮುಚ್ಚಿದ ಘಟನೆಗಳು ಕೂಡ ಇವೆ.

ಹೀಗೆ ಜೈಲಿನಲ್ಲಿದ್ದ ತಿಮ್ಮ ಒಂದು ವರ್ಷದ ನಂತರ ಕ್ಷಯ ರೋಗ ಉಲ್ಬಣಗೊಂಡು ಕೆಲವು ದಿನ ಆಸ್ಪತ್ರೆಗೆ ದಾಖಲಾಗಿ, ಕೊನೆಗೆ ಅಲ್ಲೇ ಮರಣ ಹೊಂದಿದ್ದ. ಕೊಲೆಗಾಗಿ ಜೈಲಿಗೆ ಹೋದ ಗಂಡನ ಉಸಾಬರಿ ಯಾಕೆ ಎಂದು ಕೂಲಿ ಮಾಡುತ್ತಿದ್ದ ಹೆಂಡತಿ ತನ್ನ ಮಕ್ಕಳೊಂದಿಗೆ ಊರುಬಿಟ್ಟು ಇನ್ನೆಲ್ಲೋ ಹೋಗಿದ್ದಳು. ಜೈಲಿನಲ್ಲಿದ್ದು ಮೃತಪಟ್ಟದ್ದರಿಂದ ತಿಮ್ಮನ ಮರಣೋತ್ತರ ಪರೀಕ್ಷೆಯನ್ನು ಕೂಡಾ ನಾನೇ ಮಾಡಬೇಕಾಗಿ ಬಂದಿತ್ತು.

ಇದರಲ್ಲೂ ಒಂದು ವಿಶೇಷವಿತ್ತು. ಐದು ದಿನಗಳ ಹಿಂದೆಯಷ್ಟೇ ರಾಷ್ಟ್ರೀಯ ಮಾನವೀಯ ರಕ್ಷಣಾ ಆಯೋಗ ಒಂದು ಸುತ್ತೋಲೆ ಹೊರಡಿಸಿ, ಜೈಲಿನಲ್ಲಿ ಇರುವ ವ್ಯಕ್ತಿಗಳು ಮರಣ ಹೊಂದಿದರೆ ಅವರ ಮರಣೋತ್ತರ ಪರೀಕ್ಷೆಯನ್ನು ಸಂಪೂರ್ಣವಾಗಿ ವೀಡಿಯೋ ರೆಕಾರ್ಡ್ ಮಾಡಬೇಕು ಎಂದು ಆದೇಶಿಸಿದ್ದರು. ಜೈಲಿನಲ್ಲೇ ಇದ್ದು ಸಾವನಪ್ಪುವವರ ಸಂಖ್ಯೆ ಜಾಸ್ತಿ ಇಲ್ಲದೇ ಇರುವುದರಿಂದ, ಪೊಲೀಸರಿಗೆ ಸಿಕ್ಕಿದ ಮಾಹಿತಿಯಂತೆ, ಆ ಆದೇಶದ ನಂತರದ ಕರ್ನಾಟಕದಲ್ಲಿನ ಪ್ರಥಮ ಕೇಸ್ ಇದು. ಹಾಗಾಗಿ ಎಲ್ಲರಿಗೂ ಗಡಿಬಿಡಿ. ಮರಣೋತ್ತರ ಪರೀಕ್ಷೆಯನ್ನು ವಿಡಿಯೋ ರೆಕಾರ್ಡ್ ಮಾಡಲು ಸಾಧಾರಣ ಯಾವ ಛಾಯಾಗ್ರಾಹಕನೂ ಒಪ್ಪುವುದಿಲ್ಲ. ಒಂದಿಬ್ಬರನ್ನು ಸಂಪರ್ಕಿಸಿ, ಅವರು ಶವವನ್ನು ನೋಡಿದ ಕೂಡಲೇ ನನಗೆ ಈ ಕೆಲಸ ಬೇಡ ಎಂದು ವಾಪಾಸ್ ಹೋಗಿದ್ದರು. ಕೊನೆಗೂ ಯಾರೋ ಒಬ್ಬರನ್ನು ಕರೆದುಕೊಂಡು ಬಂದಾಗ, ಶವಾಗಾರದ ವಾಸನೆಯ ಅನುಭವ ಇಲ್ಲದ ಆ ಫೋಟೋಗ್ರಾಫರ್ ಮೂಗಿಗೆ ಮೂರು ಪಟ್ಟಿಯನ್ನು ಸುತ್ತಿಕೊಂಡು ಕಷ್ಟಕ್ಕೆ ಬಿದ್ದು ವಿಡಿಯೋ ತೆಗೆಯಲು ಒಪ್ಪಿ ಬಂದ ಅವನಿಂದ ಬಹಳ ಪ್ರಯತ್ನ ಪಟ್ಟು ವಿಡಿಯೋ ತೆಗೆಸಲಾಗಿತ್ತು.

ಸಾಧಾರಣವಾಗಿ ಆಗ ಎಲ್ಲಾ ಮರಣೋತ್ತರ ಪರೀಕ್ಷೆಯನ್ನು ಆಸ್ಪತ್ರೆಯ ಸಹಾಯಕರು ಮಾಡುತ್ತಾ, ವೈದ್ಯರು ಅದನ್ನು ನೋಡಿ ಬರೆದುಕೊಳ್ಳುತ್ತಿದ್ದರು. ಆದರೆ ಈ ಕೇಸಿನಲ್ಲಿ ವಿಡಿಯೋ ರಾಷ್ಟ್ರೀಯ ಮಾನವ ಆಯೋಗದ ದೆಹಲಿಯ ಕಚೇರಿಗೆ ಹೋಗುವುದರಿಂದ ಪರೀಕ್ಷೆಯಲ್ಲಿ ಮಾಡುವ ಸಣ್ಣ ತಪ್ಪು ಕೂಡಾ ಅವರ ಕಣ್ಣಿಗೆ ಬೀಳುವ ಸಾಧ್ಯತೆ ಇತ್ತು. ಹಾಗಾಗಿ ನಾನೇ ಕೈಗೆ ಗ್ಲವ್ಸ್ ಹಾಕಿ ಚಾಕುವನ್ನು ಹಿಡಿದು ಪರೀಕ್ಷೆಗೆ ತೊಡಗಿದ್ದೆ. ಪ್ರತಿಯೊಂದು ಅಂಗಾಂಗವನ್ನು ಹತ್ತಿರದಿಂದ ವಿಡಿಯೋಗ್ರಾಫರ್ ಗೆ ತೋರಿಸುತ್ತಾ, ಬಾಯಲ್ಲಿ ನಾನು ಏನನ್ನು ಮಾಡುತ್ತಾ ಇದ್ದೇನೆ ಎನ್ನುವ ವೀಕ್ಷಕ ವಿವರಣೆಯನ್ನು ಕೊಡುತ್ತಾ ಹೋಗುತ್ತಿದ್ದೆ. ಕೊನೆಗೆ ಆ ವಿಡಿಯೋದ ಕ್ಯಾಸೆಟ್ ಅನ್ನು, ಯಾವುದೇ ಎಡಿಟಿಂಗ್ ಗೆ ಆಸ್ಪದವಿಲ್ಲದಂತೆ ಅಲ್ಲಿಯೇ ಪ್ಯಾಕ್ ಮಾಡಿ, ಸೀಲ್ ಮಾಡಿ, ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಇದು ಆದೇಶದ ನಂತರದ ಮೊದಲ ಕೇಸ್ ಆದುದರಿಂದ ನಮಗೆಲ್ಲರಿಗೂ ಒಂದು ರೀತಿಯ ಉದ್ವೇಗ ಇದ್ದೇ ಇತ್ತು. ದೆಹಲಿಯಲ್ಲಿ ಕುಳಿತವರಿಂದ ಯಾವ ರೀತಿಯ ಪ್ರತಿಕ್ರಿಯೆ ಬರಬಹುದು ಎಂದು ಚಿಂತಿಸುತ್ತಿದ್ದ ನಮಗೆ, ಕೆಲವು ದಿನದ ನಂತರ ಪೊಲೀಸರಿಗೆ ಬಂದ ಒಂದು ಹೊಗಳಿಕೆಯ ಪತ್ರ ನೋಡಿದಾಗ, ಮಾಡಿದ್ದೆಲ್ಲಾ ಸಾರ್ಥಕವಾಯಿತು ಎಂದು ಅನಿಸಿತ್ತು.

ಶವ ಪರೀಕ್ಷೆ ಮುಗಿದು, ಯಾರೂ ಗತಿಯಿಲ್ಲದ ಹೆಣವನ್ನು ಆಸ್ಪತ್ರೆಯವರು ಮತ್ತು ಪೌರ ಕಾರ್ಮಿಕರು ಸೇರಿ ಮಣ್ಣು ಮಾಡಿದ್ದರು.

ಇದಾದ ಕೆಲವು ದಿನಗಳ ಬಳಿಕ ಬಂದ ‘ವಿಸೆರಾ’ ವರದಿಯಲ್ಲಿ ಯಾವುದೇ ವಿಷದ ಅಂಶಗಳು, ಗಾಯದ ಅಂಶಗಳು ಕಾಣದೇ, ಪತೋಲಜಿಗೆ ಕಳುಹಿಸಿದ್ದ ಭಾಗದಲ್ಲಿ ಒಂದು ರೋಗದ ವಿವರಣೆ ಇತ್ತು.

ಶವಪರೀಕ್ಷೆ ಮಾಡಿದಾಗ ಗಿಡ್ಡನ ಶರೀರದಲ್ಲಿ ನನಗೆ ಯಾವುದೇ ವಿಧವಾದ ಹೊರಗಿನ ಅಥವಾ ಒಳಗಿನ ಗಾಯಗಳಾಗಲೀ ಕಂಡು ಬಂದಿರಲಿಲ್ಲ. ಆದರೆ ಲಿವರ್ ಮಾತ್ರ ಮಾಮೂಲಿ ಗಾತ್ರಕ್ಕಿಂತ ದೊಡ್ಡದಿದ್ದು, ಒಂದು ಬದಿಯಲ್ಲಿ ಮೆತ್ತಗಾಗಿದ್ದು, ಕೆಂಪಾಗಿತ್ತು. ಅದನ್ನು ಛೇಧಿಸಿ ನೋಡಿದಾಗ ಅದರಲ್ಲಿ ಕಂಡದ್ದು ಒಂದು ರೀತಿಯ ಕೆಂಪು ಬಣ್ಣದ ಸುಮಾರು ಅರ್ಧ ಲೀಟರಿನಷ್ಟು ಕೀವು ಮಿಶ್ರಿತ ರಕ್ತ, ಮತ್ತು ಇದನ್ನು ಹೊಂದಿದ್ದ ಒಂದು ಸಣ್ಣ ಕವಚದ ಚೀಲ ಅಥವಾ ಸಿಸ್ಟ್. ಇದನ್ನು ವೈದ್ಯಕೀಯ ಭಾಷೆಯಲ್ಲಿ ಅಮೀಬಿಕ್ ಆಬ್ಸೆಸ್ ಎಂದು ಕರೆಯುತ್ತಾರೆ.

ಅಮೀಬಿಯಾಸಿಸ್ ಎಂಬುದು ಸಾಧಾರಣವಾಗಿ, ಒಂದು ಸೂಕ್ಷ್ಮಾಣುವಿಂದ ದೊಡ್ಡ ಕರುಳಿನಲ್ಲಿ ಬರುವ ರೋಗ. ಸಾಮಾನ್ಯವಾಗಿ ಇದು ಜನರಲ್ಲಿ ಯಾವುದೇ ಲಕ್ಷಣಗಳನ್ನು ತೋರದೆ, ಕ್ಯಾರಿಯರ್ ಸ್ಥಿತಿಯಲ್ಲಿ ಇರುತ್ತದೆ. ಕೆಲವೊಮ್ಮೆ ಆಮಶಂಕೆ ಆಗಿ ಮಲದಲ್ಲಿ ಕಫ, ರಕ್ತ ಹೋಗಬಹುದು, ಅಥವಾ ರಕ್ತದ ಮೂಲಕ ಇತರ ಅಂಗಾಂಗಗಳನ್ನು ಸೇರಬಹುದು. ಈ ರೋಗ ಪ್ರಪಂಚದಲ್ಲಿ ಹೆಚ್ಚಾಗಿ ಉಷ್ಣವಲಯದಲ್ಲಿ ಕಂಡುಬರುತ್ತದೆ. ಒಂದು ವರದಿಯ ಪ್ರಕಾರ ಪ್ರಪಂಚದಲ್ಲಿ ನಲ್ವತ್ತು ಮಿಲಿಯನ್ ಜನರು ಇದರಿಂದ ತೊಂದರೆಗೆ ಒಳಗಾಗಿ, ನಲ್ವತ್ತು ಸಾವಿರ ಜನ ಇದಕ್ಕೆ ಬಲಿಯಾಗುತ್ತಿದ್ದಾರೆ. ಭಾರತದ ಜನಸಂಖ್ಯೆಯ ಶೇಕಡ ಹತ್ತರಿಂದ ಹಿಡಿದು ಇಪ್ಪತ್ತು ಜನರಲ್ಲಿ ಇದು ಕಂಡು ಬರುತ್ತದೆ. ಈ ರೋಗವು ಮಲ-ಬಾಯಿಯ ಮಾರ್ಗದ ಮೂಲಕ ಹರಡುತ್ತದೆ. ರೋಗದ ಕ್ರಿಮಿ ಮಿಶ್ರಿತ ಆಹಾರ ಸೇವನೆ, ಮಲವಿಸರ್ಜನೆ ಮಾಡಿ ಸರಿಯಾಗಿ ಸೋಪ್ ಹಚ್ಚಿ ಕೈ ತೊಳೆಯದೆ ಆಹಾರವನ್ನು ತಯಾರಿಸುವುದರಿಂದ, ಆಹಾರವನ್ನು ಹಂಚುವುದರಿಂದ, ಹೋಟೆಲಿನಲ್ಲಿ ಕುಡಿಯುವ ನೀರಿನ ಲೋಟದಲ್ಲಿ ಬೆರಳನ್ನು ಇಟ್ಟು ತರುವುದರಿಂದ, ಬೆರಳಿನ ಉಗುರುಗಳನ್ನು ಬೆಳೆಸುವುದರಿಂದ ಇದು ಸುಲಭವಾಗಿ ಹರಡುತ್ತದೆ. ಮನೆಯಲ್ಲಿನ ಶುಚಿಯಾದ ಅಹಾರವನ್ನು ಬಿಟ್ಟು ಹೊರಗಡೆ ತಿನ್ನುವವರಿಗೆ ಈ ರೋಗ ಕಟ್ಟಿಟ್ಟ ಬುತ್ತಿ. ಈ ಕ್ರಿಮಿಗೆ ಒಂದು ಗಟ್ಟಿಯಾದ ಕವಚ ಇದ್ದು, ಇದು ಸಾಧಾರಣವಾದ ಬಿಸಿಲಿಗೆ, ಬಿಸಿಗೆ ಸಾಯುವುದಿಲ್ಲ. ಕೆಲವರಲ್ಲಿ ಯಾವಾಗಲೂ ತಾನು ತಣ್ಣೀರನ್ನು ಕುಡಿಯುವುದಿಲ್ಲ, ಬಿಸಿ ನೀರೇ ಬೇಕು ಎಂಬ ಭಾವನೆ ಇರುವವರಿಗೆ ಒಂದು ಕಿವಿಮಾತು. ನೀರನ್ನು ಬಿಸಿ ಮಾಡುವುದರಿಂದ ಯಾವುದೇ ಕ್ರಿಮಿಗಳು ಸಾಯುವುದಿಲ್ಲ. ಇವು ಸಾಯಲು ಐದರಿಂದ ಹತ್ತು ನಿಮಿಷವಾದರೂ ಕುದಿಸಲೇ ಬೇಕು. ಕರುಳಿಗೆ ಬಂದ ರೋಗ ಕೆಲವೊಮ್ಮೆ ಯಾವುದೇ ಲಕ್ಷಣ ಕೊಡದೆ ಬೆಳೆಯುತ್ತಾ, ತನ್ನ ಮೊಟ್ಟೆಗಳನ್ನು ಮಲದಲ್ಲಿ ವಿಸರ್ಜಿಸುತ್ತಾ ಇರುತ್ತದೆ.

ಲಕ್ಷಣಗಳು ತೊಡಗಿದಾಗ ಆಮಶಂಕೆಯ ಹೊಟ್ಟೆ ನೋವು, ಜ್ವರ, ಸುಸ್ತು ಇರಬಹುದು. ಕೆಲವೊಮ್ಮೆ ಈ ಮೊಟ್ಟೆ ರಕ್ತದ ಮೂಲಕ ಸಾಗಿ ಮೆದುಳು ಮತ್ತು ಚರ್ಮದ ಕೆಳಗೆ ಸೇರಿ ತೊಂದರೆಗಳಿಗೆ ಕಾರಣವಾಗಬಹುದು. ಇಂತಹ ತೊಂದರೆಗಳಲ್ಲಿ ಒಂದು, ಲಿವರ್ ಹುಣ್ಣು. ಈ ಹುಣ್ಣು ಸಾಧಾರಣವಾಗಿ ಮಧ್ಯ ವಯಸ್ಕರಲ್ಲಿ ಕಂಡು ಬಂದು ನಿಧಾನವಾಗಿ ಬೆಳೆಯುತ್ತಿರುತ್ತದೆ. ಕೆಲವೊಮ್ಮೆ ಚಳಿಜ್ವರ, ಹೊಟ್ಟೆಯ ಬಲಭಾಗದಲ್ಲಿ, ಹೆಗಲಿನ ಕೆಳಬಾಗದಲ್ಲಿ ಬಂದಂತಹ ನೋವು, ಗಡ್ಡೆ ಶ್ವಾಸಕೋಶದ ಹತ್ತಿರದಲ್ಲಿದ್ದರೆ ಕೆಮ್ಮು, ಎದೆನೋವು, ಕಫದಲ್ಲಿ ರಕ್ತ ಕೂಡಾ ಕಾಣಬಹುದು. ಊದುತ್ತಿರುವ ಲಿವರ್ ನಿಂದಾಗಿ ಕಾಮಾಲೆ ಅಥವಾ ಜಾಂಡಿಸ್ ನಂತೆ ಕಾಣಬಹುದು. “ಜಾಂಡಿಸ್” ರೋಗದಲ್ಲಿ ಕಂಡು ಬರುವ ಹಳದಿ ಬಣ್ಣದಲ್ಲಿ ಅನೇಕ ವಿಧಗಳು ಇದ್ದು, ವೈರಸ್ಸಿನಿಂದ ಬರುವ ಒಂದು ವಿಧಾನವನ್ನು ಮಾತ್ರ ಸುಲಭವಾಗಿ ಗುಣ ಡಿಸಬಹುದು. ಕಾಮಾಲೆಗೆ ನಾಟಿ ಮದ್ದು ಮಾಡುವ, ಮಾಡಿಸುವ ಎಲ್ಲರಿಗೂ ಈ ವಿಷಯ ತಿಳಿದಿರುವುದು ಬಹಳ ಅವಶ್ಯಕ. ಲಿವರ್ ನ ಹುಣ್ಣಿನಿಂದ, ಹೆಪಟೈಟಿಸ್ ಬಿ, ಕ್ಯಾನ್ಸರ್, ಸಿರೋಸಿಸ್ ಇತ್ಯಾದಿಗಳಲ್ಲಿ ಕಂಡುಬರುವ ಜಾಂಡೀಸಿಗೂ ಕಾಮಾಲೆಗೂ ಬಹಳ ವ್ಯತ್ಯಾಸವಿದೆ. ಈ ಹುಣ್ಣುಗಳಲ್ಲಿ ಕೆಲವೊಮ್ಮೆ ಬ್ಯಾಕ್ಟೀರಿಯಾಗಳು ಸೇರಿದರಂತೂ ಜೀವಕ್ಕೇ ಹಾನಿ ಆಗಬಹುದು.

ಸಿದ್ದನ ವಿಷಯದಲ್ಲಿ ಆದದ್ದೂ ಇದೇ. ಕೆಲವು ದಿನಗಳಿಂದ ಇದ್ದ ನೋವನ್ನು ಕುಡಿತ ಮರೆ ಮಾಡಿತ್ತು. ಕಣ್ಣು ಹಳದಿ ಬಣ್ಣಕ್ಕೆ ತಿರುಗಿದಾಗ ಹೋಗಿ ನಾಟಿ ಔಷಧಿ ಮಾಡಿಸಿದ್ದ. ನೋವನ್ನು ಸಹಿಸಲು ಅಸಾಧ್ಯ ಆದಾಗ ಏಟು ತಿಂದದ್ದು ನೆನಪಾಗಿತ್ತು. ಕಾಗೆ ಕೂತದ್ದೂ ಟೊಂಗೆ ಮುರಿದದ್ದು ಒಂದೇ ಸಮಯದಲ್ಲಿ ಎಂಬಂತೆ ಆಗಿ, ಗಡ್ಡೆ ಬೆಳೆದು ಜೀವಕ್ಕೆ ಅಪಾಯ ಬಂದ ಸಮಯದಲ್ಲಿ ಹೊಟ್ಟೆಗೆ ತಾಗಿದ ಏಟು ನೆನಪಾಗಿ, ಅದರಿಂದ ತಿಮ್ಮ ಜೈಲಿಗೆ ಹೋಗಬೇಕಾಯಿತು. ಹಾಗೆ ಹೋದವ, ಕೊನೆಗೆ ತನ್ನದೇ ಆದ ಹಳೆಯ ಕ್ಷಯ ರೋಗದಿಂದ ಮರಣ ಹೊಂದಿದ್ದ.

ಕೊನೇ ಹನಿ…… ಕೆಲವು ದಿನಗಳ ಬಳಿಕ ಒಂದು ಗಡಂಗಿನಲ್ಲಿ ಎಲ್ಲರ ಬಾಯಲ್ಲಿ ಸಿದ್ದ, ತಿಮ್ಮರ ಹರಿಕಥೆ ನಡೆಯುತ್ತಿದ್ದು, ಅದರ ಮುಕ್ತಾಯದ ಹೇಳಿಕೆ ಮಾತ್ರ ಯಾವಾಗಲೂ ಹೀಗೆಯೇ:

“ಜೈಲಿನಲ್ಲಿ ಪೊಲೀಸರು ತಿಮ್ಮನಿಗೆ ಸರಿಯಾಗಿ ಹೊಡೆದು, ಅವನಿಗೆ ಸುಸ್ತಾದಾಗ ಅಸ್ಪತ್ರೆಗೆ ದಾಖಲು ಮಾಡಿ, ಆತ ಕ್ಷಯ ರೋಗದಿಂದ ಸತ್ತ ಅಂಥ ಸುಳ್ಳು ವರದಿ ಬರೆಸಿದ್ದಾರೆ”. ಹೇಗಿದೆ ನೋಡಿ… ಇದೊಳ್ಳೇ ಕರ್ಮ ನಮ್ಮದು!!!