ಜೋಸೆಫ್ ಕಾಲೇಜಿನ ಕನ್ನಡ ಸಂಘದಿಂದ ಪ್ರಕಟಗೊಂಡಿದ್ದ ಪುಸ್ತಕ ‘ನಡೆನುಡಿ’. ಜಿ.ಕೆ. ಗೋವಿಂದ ರಾವ್ ಅವರು ಹಲವು ಪತ್ರಿಕೆಗಳಲ್ಲಿ ಬರೆದ ಲೇಖನಗಳನ್ನ ಒಟ್ಟು ಮಾಡಿ ಎಚ್.ಎಸ್.ವಿ. ಸರ್ ಕಾಲೇಜಿನ ಕನ್ನಡ ಸಂಘದಿಂದ ಪ್ರಕಟಿಸಿದ್ದರು. ‘ಅರೆರೆ ಇವರು ಟಿವಿಯಲ್ಲಿ ಕಾಣಿಸಿಕೊಳ್ತಾರಲ್ಲ..’ ಎನ್ನುವ ಕುತೂಹಲದಲ್ಲೇ ಪುಸ್ತಕ ತೆರೆದೆ. ಅಲ್ಲಿಂದಾಚೆಗೆ ಜಿಕೆಜಿ ಸರ್ ನನಗೆ ಸ್ಪಷ್ಟವಾಗಲು ಆರಂಭಿಸಿದರು. ಅವರ ಬರವಣಿಗೆಗಳು ನನ್ನಲ್ಲಿ ಹೊಸ ಆಲೋಚನಾ ಕ್ರಮವನ್ನು ರೂಪಿಸಿಕೊಳ್ಳಲು ನೆರವಾದವು.
‘ರಂಗ ವಠಾರ’ ಅಂಕಣದಲ್ಲಿ ಎನ್. ಸಿ. ಮಹೇಶ್ ಲೇಖನ.
ಹಾಗೆ ನೋಡಿದರೆ ನಾನು ಈ ಸಲದ ಅಂಕಣದಲ್ಲಿ ಬೇರೇನೋ ಬರೆಯಬೇಕೆಂದುಕೊಂಡಿದ್ದೆ. ಅಷ್ಟರಲ್ಲಿ ಫ್ರೊಫೆಸರ್ ಜಿ.ಕೆ ಗೋವಿಂದ ರಾವ್ ತೀರಿಹೋದರೆಂಬ ಸುದ್ದಿ ಬಂತು. ನಾನು ಒಮ್ಮೆಯೂ ಅವರನ್ನು ಭೇಟಿಯಾಗಿ ಮಾತಿಗೆ ನಿಲುಕಿಸಿಕೊಂಡಿರಲಿಲ್ಲ. ಧಾರಾವಾಹಿ, ಸಿನಿಮಾಗಳಲ್ಲಿ ಅವರು ಮೊದಲಿಗೆ ನಟರಾಗಿ ನನಗೆ ಪರಿಚಿತರಾದವರು. ನಂತರ ಅವರು ಮೇಷ್ಟ್ರು ಅಂತ ಗೊತ್ತಾದದ್ದು. ಈ ಎಲ್ಲದರ ಆಚೆಗೆ ಅವರ ವಿಚಾರದ ಪ್ರತಿಪಾದನೆ ಇತ್ಯಾದಿ ಇತ್ಯಾದಿ ಬಗ್ಗೆ ಆಗಾಗ ತಿಳಿಯುತ್ತಿದ್ದೆ. ಇಷ್ಟರ ಹೊರತಾಗಿ ಅವರನ್ನು ರಂಗದ ಮೇಲೆ ‘ಕಿಂಗ್ ಲಿಯರ್’ ಆಗಿ ಕಂಡಿದ್ದೆ. ತೆರೆ ಮೇಲೆ ಕಂಡದ್ದಕ್ಕಿಂತ ರಂಗದ ಮೇಲೆ ಅವರನ್ನು ಕಂಡದ್ದು ಒಂದು ಚೆಂದದ ಅನುಭವವಾಗಿ ನನ್ನಲ್ಲಿ ಉಳಿದಿತ್ತು. ಆಮೇಲೆ ನಾನು ಏನೇನೋ ಅತಂತ್ರಗಳಲ್ಲಿ ಸಿಕ್ಕಿಕೊಳ್ಳುತ್ತ ಎಲ್ಲ ಮರೆವಿಗೆ ಸಂದುತ್ತಿದ್ದ ವೇಳೆ ‘ಸುದ್ದಿ ಗೊತ್ತಾಯ್ತಲ್ಲ. ಜಿಕೆಜಿ ಇನ್ನಿಲ್ಲ. ಮುಂದಿನ ನಿಮ್ಮ ಅಂಕಣದಲ್ಲಿ ಅವರ ಬಗ್ಗೇನೇ ಬರೀತೀರಿ ಅಂತ ಗೊತ್ತು. ಯಾಕೆಂದರೆ ಅವರೂ ರಂಗನಟರಾಗಿದ್ದರು. ನಿಮಗೆ ಗೊತ್ತೇ ಇರುತ್ತೆ’ ಅಂತ ಹಿರಿಯರೊಬ್ಬರು ಮಾತು ಆರಂಭಿಸಿದರು.
‘ಇಲ್ಲ ನಾನು ಅವರ ಬಗ್ಗೆ ಬರೀಲಾರೆ. ಯಾಕೆಂದರೆ ನನಗೆ ಅವರ ಬಗ್ಗೆ ಅಷ್ಟು ತಿಳಿದಿಲ್ಲ..’ ಅಂತ ಆ ಹಿರಿಯರಿಗೆ ಹೇಳಲೂ ಮಾತು ಹೊರಡಲಿಲ್ಲ. ಏನು ಹೇಳುವುದೊ ತಿಳಿಯದೆ ಸುಮ್ಮನಿದ್ದೆ. ನನ್ನ ಮೌನ ಕಂಡು ಆ ಹಿರಿಯರೂ ಸುಮ್ಮನಾದರು.
ಆದರೆ ಅಲ್ಲಿಂದಾಚೆಗೆ ಕೆಲವು ಚಿತ್ರಗಳು ನನ್ನ ಕಣ್ಮುಂದೆ ಸುಳಿಯಲು ಆರಂಭಿಸಿದವು. ಜಿಕೆಜಿ ಅವರು ಬದುಕಿದ್ದಾಗ ಕೆಲವು ಸಂಗತಿಗಳು ಒಮ್ಮೆಯೂ ನನ್ನಲ್ಲಿ ನೆನಪಿಗೆ ನಿಲುಕಿರಲಿಲ್ಲ. ಆದರೆ ಅವರು ತೀರಿಹೋದ ಹೊತ್ತು ಮನಸ್ಸಿನಲ್ಲಿ ಏನೋನೊ ಚಿತ್ರಗಳ ಕದಲುವಿಕೆ ಶುರುವಾಯಿತು.
‘ಬಾಬರಿ ಮಸೀದಿ ಕೆಡವಿದರು’ ಎನ್ನುವ ಸುದ್ದಿ ಬಂದಾಗ ನಾನು ಎಂಟನೆ ಕ್ಲಾಸು ಓದುತ್ತಿದ್ದೆ ಎಂದು ನೆನಪು. ಇಡೀ ದೇಶದಲ್ಲಿ ಬಿಗುವಿನ ವಾತಾವರಣ. ಎಲ್ಲೆಲ್ಲೂ ಜೋರುಜೋರು ಚರ್ಚೆ. ಆದರೆ ಪ್ರಾಯ ಕಾವು ತಂದುಕೊಂಡು ಸುಡಲು ಆರಂಭಿಸಿದ್ದ ಆ ದಿನಗಳಲ್ಲಿ ನನಗೆ ಆ ಯಾವ ಚರ್ಚೆಯೂ ಗಂಭೀರ ಅನಿಸುತ್ತಿರಲಿಲ್ಲ. ನಾನು ಕನ್ನಡ ಭಾಷೆಯ ಸೌಂದರ್ಯಕ್ಕೆ ಮಾರುಹೋಗಿ ಜೊತೆಗಿನ ಹುಡುಗರಿಗೆ ಕವಿತೆಗಳನ್ನ ಹೇಳಿ ತಲೆಚಿಟ್ಟು ಹಿಡಿಸುತ್ತಿದ್ದ ಕಾಲಘಟ್ಟ ಅದು. ಹುಡುಗರು ಹುಡುಗಿಯರನ್ನು ಇನ್ನಿಲ್ಲದಂತೆ ಆಕರ್ಷಿಸಲು ವಿಚಿತ್ರ ರೀತಿಯಲ್ಲಿ ಕಸರತ್ತುಗಳನ್ನು ನಡೆಸುತ್ತಿದ್ದ ಕಾಲ ಅದು. ಕ್ಲಾಸಲ್ಲಿ ಪ್ರತಿಯೊಬ್ಬರೂ ಒಂದಿಲ್ಲೊಂದು ಬಗೆಯಲ್ಲಿ ಪ್ರೇಮ ನಿವೇದನೆಯನ್ನು ದೊಡ್ಡದು ಮಾಡಿಕೊಂಡು ಮಾತಿನ ಪುಳಕ ಅನುಭವಿಸುತ್ತಿದ್ದ ಘಟ್ಟ ಅದು. ಹುಡುಗರು ಹುಡುಗಿಯರ ಆಯ್ಕೆ ಪ್ರಕ್ರಿಯೆ ಆರಂಭಿಸಿ, ಆ ಹುಡುಗಿಯರು ತಮ್ಮ ಪ್ರತಿಕ್ರಿಯೆಯನ್ನು ತೆಳು ನಗುವಿನ ಮೂಲಕ, ಸಿಡುಕಿನ ಮೂಲಕ ಪ್ರಕಟಪಡಿಸುತ್ತಿದ್ದ ಸಮಯ ಅದು. ‘ಎಲ್ಲರೂ ಒಬ್ಬೊಬ್ಬರನ್ನು ಹೊಂಚಿಕೊಂಡಿರುವಾಗ ನೀ ಯಾಕ ಖಾಲಿ ಕೂತಿ?’ ಎಂದು ಗೆಳೆಯರು ನನ್ನ ಕೇಳುತ್ತಿದ್ದರು. ಅದಕ್ಕೆ ನಾನು ಅವರೆಲ್ಲರಿಗೆ ಬೇರೆಯಾಗಿ ಉತ್ತರಿಸುತ್ತಿದ್ದೆ. ‘ಆಕೆ ನಿನಗೆ ಒಲಿದೇ ಬಿಟ್ಟಿದ್ದಾಳೆ ಅಂತ ನಿನಗೆ ಹೇಗೆ ಗೊತ್ತು..? ನಿನ್ನದೆಲ್ಲ ಬರೀ ಕಲ್ಪನೆ. ಅದು ಹೇಗೆ ಗೊತ್ತಾ..? ‘ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ.. ಮಸೆದ ಗಾಳಿ ಪಕ್ಕ ಪಡೆಯುತ್ತಿತ್ತು ಸಹಜ ಪ್ರಾಸ.. ಮಿಂಚಿ ಮಾಯವಾಗುತ್ತಿತ್ತು ಒಂದು ಮಂದಹಾಸ..’ ಎಂದು ಬೇಂದ್ರೆ ಅವರ ಪದ್ಯ ಹೇಳಿದ್ದೆ.
ಹುಡುಗರು ತಲೆಚಚ್ಚಿಕೊಂಡು ನಡೆದಿದ್ದರು. ಹುಡುಗಿಯರು ನಕ್ಕಿದ್ದರು. ಪ್ರೇಮಕ್ಕೆ ಸಿಲುಕಿಕೊಂಡು ದುಗುಡ ಅನುಭವಿಸಲೇಬೇಕು ಅಂತ ನಿಯಮ ಹಾಕಿಕೊಂಡು ದುಃಖಕ್ಕೆ ಜಾರುತ್ತಿದ್ದಂತೆ ಇದ್ದ ಹುಡುಗಿಯರು ನನ್ನ ಬಳಿ ಬಂದು ಸಪ್ಪಗೆ ಮುಖ ಮಾಡಿ ನಿಲ್ಲುತ್ತಿದ್ದರು. ಮನೆಯಲ್ಲಿ ಅಪ್ಪ ಬಾಬ್ರಿ ಮಸೀದಿ ಬಗ್ಗೆ ಮಾತಾಡುತ್ತಿದ್ದರು. ಪೇಪರುಗಳ ತುಂಬ ಅದೇ ಸುದ್ದಿ, ಜೋರು ಚರ್ಚೆ. ಆದರೆ ನಾನು ನನ್ನ ಬಳಿ ದುಗುಡ ತುಂಬಿಕೊಂಡು ಬಂದ ಹುಡುಗಿಗೆ ‘ಹಳ್ಳದ ದಂಡ್ಯಾಗ ಮೊದಲೀಗೆ ಕಂಡಾಗ ಏಸೊಂದು ನಗಿ ಇತ್ತ.. ಏಸೋಂದು ಮುದ ಇತ್ತ.. ಈ ನಗೀ ಹೋಗೇತಿ ಎತ್ತೆತ್ತ..?’ ಎಂದು ಹೇಳಿ ಆಕೆಗೆ ತಲೆಚಿಟ್ಟು ಹಿಡಿಸಿದ್ದೆ. ಅವಳು ತಲೆಘಟ್ಟಿಸಿಕೊಂಡು ನಡೆದಿದ್ದಳು.
ಮನೆಗೆ ಬಂದರೆ ಬಾಬ್ರಿ ಮಸೀದಿ ವಿಚಾರ! ಹೊರಗೆ ಬಾಬ್ರಿ ಮಸೀದಿ ವಿಚಾರ! ಆ ಕ್ಷಣ ನನ್ನನ್ನ ನಾನೇ ಕೇಳಿಕೊಂಡಿದ್ದೆ- ‘ನನ್ನ ಜೀವನ ಟ್ರ್ಯಾಕ್ ತಪ್ಪಿದೆಯೇ? ಏನಿದು ಬಾಬ್ರಿ ಮಸೀದಿ ಗಲಾಟೆ? ಎಲ್ಲರೂ ಅದರ ಬಗ್ಗೆಯೇ ಮಾತಾಡುವಾಗ ನಾ ಯಾಕೆ ಇವರ ಪ್ರೇಮನಿವೇದನೆ ಮತ್ತು ದುಃಖದ ನಡುವೆ ಮಾತ್ರ ಸಿಕ್ಕಿಕೊಂಡಿದ್ದೇನೆ?’
ಆದರೆ ಅಂದು ಉತ್ತರ ಕಂಡುಕೊಳ್ಳಲು ಆಗಿರಲಿಲ್ಲ. ಆ ಸಂದರ್ಭಗಳೂ ಯಾಕೋ ಸಹಕರಿಸಲೂ ಇಲ್ಲ. ಆದರೆ ಮನಸ್ಸಿನಲ್ಲಿ ಈ ಬಾಬ್ರಿ ಮಸೀದಿಯ ವಿಚಾರ ಬೆಳೆಯುತ್ತಲೇ ಹೋಯಿತು.
ಎಸ್.ಎಸ್.ಎಲ್.ಸಿ ಮುಗಿಸಿದೆ. ಪಿಯುಸಿಗೆ ವಿಜಯ ಕಾಲೇಜು ಸೇರಿದೆ. ಓದಿಗಿಂತ ಹೆಚ್ಚಿಗೆ ಸ್ಪರ್ಧೆಗಳಲ್ಲಿ ಭಾಗಿಯಾಗಿ ಬಹುಮಾನಗಳನ್ನು ಗಿಟ್ಟಿಸಬೇಕೆನ್ನುವ ಉಮೇದು ಹೆಚ್ಚು ಇದ್ದ ದಿನಗಳವು. ಹೀಗೇ ಹಲವು ಕಾಲೇಜುಗಳಿಗೆ ವಿವಿಧ ಸ್ಪರ್ಧೆಗಳಿಗೆ ಅಂತ ಹೋದ ಹಾಗೇ ಒಮ್ಮೆ ಸಂತ ಜೋಸೆಫ್ ಕಾಮರ್ಸ್ ಕಾಲೇಜಿಗೂ ಹೋದೆ. ಅಲ್ಲಿ ಪ್ರಬಂಧ ಸ್ಪರ್ಧೆಯೋ ಅಥವಾ ರಸಪ್ರಶ್ನೆಯೋ ಸರಿಯಾಗಿ ನೆನಪಿಲ್ಲ. ನನಗೆ ಬಹುಮಾನವಂತೂ ಬಂತು. ಒಂದಷ್ಟು ಪುಸ್ತಕಗಳನ್ನ ನನ್ನ ಪ್ರೀತಿಯ ಕವಿ ಎಚ್.ಎಸ್.ವಿ ಸರ್ ಕೊಟ್ಟರು. ಅವರು ಆ ಹೊತ್ತು ಅದೇ ಕಾಲೇಜಿನಲ್ಲಿ ಕನ್ನಡದ ಮೇಷ್ಟ್ರಾಗಿದ್ದರು. ಪುಸ್ತಕಗಳನ್ನ ತಂದು ಮನೆಯಲ್ಲಿ ಒಂದೊಂದೇ ಹೀಗೇ ನೋಡುತ್ತಿದ್ದಾಗ ‘ನಡೆ- ನುಡಿ’ ಎನ್ನುವ ಪುಸ್ತಕ ಕಂಡಿತು. ಜೋಸೆಫ್ ಕಾಲೇಜಿನ ಕನ್ನಡ ಸಂಘದಿಂದ ಪ್ರಕಟಗೊಂಡಿದ್ದ ಪುಸ್ತಕ. ಜಿಕೆಜಿ ಸರ್ ಹಲವು ಪತ್ರಿಕೆಗಳಲ್ಲಿ ಬರೆದ ಲೇಖನಗಳನ್ನ ಒಟ್ಟು ಮಾಡಿ ಎಚ್.ಎಸ್.ವಿ. ಸರ್ ಕಾಲೇಜಿನ ಕನ್ನಡ ಸಂಘದಿಂದ ಪ್ರಕಟಿಸಿದ್ದರು. ‘ಅರೆರೆ ಇವರು ಟಿವಿಯಲ್ಲಿ ಕಾಣಿಸಿಕೊಳ್ತಾರಲ್ಲ..’ ಎನ್ನುವ ಕುತೂಹಲದಲ್ಲೇ ಪುಸ್ತಕ ತೆರೆದೆ. ಅಲ್ಲಿಂದಾಚೆಗೆ ಜಿಕೆಜಿ ನನಗೆ ಸ್ಪಷ್ಟವಾಗಲು ಆರಂಭಿಸಿದರು.
ಆ ಪುಸ್ತಕದಲ್ಲಿ ‘ಡಿಸೆಂಬರ್ ಆರರ ನಂತರ’ ಎಂದೊಂದು ಚೆಂದದ ಲೇಖನ ಇತ್ತು. ನನ್ನ ಎಂಟನೆ ಕ್ಲಾಸು, ಸುಡುವ ಪ್ರಾಯದ ದಿನಗಳಲ್ಲಿ ಕವಿತೆಗಳ ಗುಂಗು- ಈ ಎಲ್ಲದರ ನಡುವೆ ಬಾಬ್ರಿ ಮಸೀದಿ ಧ್ವಂಸದ ಹಿಂದಿರುವ ವಿಚಾರಗಳ ಬಗ್ಗೆ ನನ್ನಲ್ಲಿ ಸ್ಪಷ್ಟತೆ ಇರಲಿಲ್ಲ. ಸರಿಸುಮಾರು ಎರಡು ವರ್ಷ ಕಳೆದ ಮೇಲೆ ಮತ್ತು ಒಂದಿಷ್ಟು ಓದುವ ಮನಸ್ಥಿತಿ ರೂಢಿಯಾಗಿದ್ದ ಹೊತ್ತಲ್ಲಿ ಜಿಕೆಜಿ ಸರ್ ಅವರ ಲೇಖನ ಕಣ್ಣಿಗೆ ನಿಲುಕಿತ್ತು. ಆದರೆ ಓದುತ್ತಾ ಹೋದ ಹಾಗೆ ಏನೊ ಒಂದು ಬಗೆಯ ಸ್ಪಷ್ಟತೆ ದಕ್ಕಿದಂತೆ ಅನಿಸುತ್ತಿತ್ತು. ಹಾಗೇ ಅಲ್ಲಲ್ಲಿ ಅರ್ಥಕ್ಕೆ ನಿಲುಕದ ಸಂಗತಿಗಳೂ ಇದ್ದವು. ಕೇಳಿ ತಿಳಿಯಲು ಸುಡುವ ಪ್ರಾಯದ ಗ್ರಾಫ್ ಬಿಟ್ಟಿರಲಿಲ್ಲ. ಆದರೆ ಅಲ್ಲೀವರೆಗೆ ನಾನು ಅಥವಾ ನಾವು ರೂಢಿಸಿಕೊಂಡು ಬಂದಿದ್ದ ಚಿಂತನೆಗಳನ್ನ ಮತ್ತು ಬದುಕಿನ ನೋಟಕ್ರಮಗಳನ್ನ ಜಿಕೆಜಿ ಸರ್ ಬುಡಮೇಲು ಮಾಡುತ್ತಿದ್ದಾರೆ ಎಂದೇನೋ ಅನಿಸಿತ್ತು. ಆದರೆ ಹುಡುಗಿಯೊಬ್ಬಳು ಮಾತಲ್ಲಿ ತಾಕಿದರೂ ಸಾಕು ಏನೊ ಪುಳಕವೇಳುತ್ತಿದ್ದ ಆ ದಿನಗಳಲ್ಲಿ ಯಾಕೋ ಬಾಬ್ರಿ ಮಸೀದಿ ವಿಚಾರ ಹಿಂದೆ ಸರಿಯಿತು.
ನಾನು ಕನ್ನಡ ಭಾಷೆಯ ಸೌಂದರ್ಯಕ್ಕೆ ಮಾರುಹೋಗಿ ಜೊತೆಗಿನ ಹುಡುಗರಿಗೆ ಕವಿತೆಗಳನ್ನ ಹೇಳಿ ತಲೆಚಿಟ್ಟು ಹಿಡಿಸುತ್ತಿದ್ದ ಕಾಲಘಟ್ಟ ಅದು. ಹುಡುಗರು ಹುಡುಗಿಯರನ್ನು ಇನ್ನಿಲ್ಲದಂತೆ ಆಕರ್ಷಿಸಲು ವಿಚಿತ್ರ ರೀತಿಯಲ್ಲಿ ಕಸರತ್ತುಗಳನ್ನು ನಡೆಸುತ್ತಿದ್ದ ಕಾಲ.
ಇಷ್ಟಾಗಿಯೂ ಜಿಕೆಜಿ ಅವರ ‘ನಡೆನುಡಿ’ ಪುಸ್ತಕದಲ್ಲಿ ಬೇರೆ ಕೆಲವು ಲೇಖನಗಳು ಓದುವಂತೆ ನನ್ನನ್ನು ಒತ್ತಾಯಿಸುತ್ತಿದ್ದವು. ಆ ಹೊತ್ತಿಗೆ ಮತ್ತು ಈ ಹೊತ್ತಿಗೂ ನಾನು ಹಿಂದಿ ಸಿನಿಮಾರಂಗದ ಶೋಮ್ಯಾನ್ ರಾಜ್ ಕಪೂರ್ ಅವರ ಅಭಿಮಾನಿ. ಆದರೆ ಜಿಕೆಜಿ ಅವರು ರಾಜ್ ಕಪೂರ್‌ರನ್ನು ಕಟ್ಟಿಕೊಟ್ಟ ರೀತಿ ಓದುತ್ತ ನನ್ನಲ್ಲಿ ಒಂದು ಹೊಸ ಆಲೋಚನಾ ಕ್ರಮ ಶುರುವಾಗಿತ್ತು. ನನಗೆ ಆ ಹೊತ್ತು ರಾಜ್‍ಕಪೂರ್‌ರಲ್ಲಿ ಚಾರ್ಲಿ ಚಾಪ್ಲಿನ್ ಛಾಪು ಢಾಳಾಗಿ ಕಾಣುತ್ತಿತ್ತು. ಅದನ್ನು ಎಂಜಾಯ್ ಮಾಡುತ್ತಿದ್ದೆ. ಆದರೆ ಜಿಕೆಜಿ ಅವರ ಲೇಖನ ಬೇರೆಬೇರೆ ಸಂಗತಿಗಳ ಕಡೆಗೆ ಗಮನ ಸೆಳೆಯಿತು. ಜಿಕೆಜಿ ಅವರು ರಾಜ್‌ಕಪೂರ್ ಅವರನ್ನ ನೆಹರೂಗೆ ಹೋಲಿಸುತ್ತ ಮಾತು ಮುಂದುವರೆಸಿದ್ದರು. ನೆಹರು ಹೇಗೆ ಕನೆಕ್ಟ್ ಆಗುತ್ತಾರೆ ರಾಜ್ ಕಪೂರ್‍ಗೆ ಎಂಬುದು ನನ್ನ ಆ ಹೊತ್ತಿನ ಪ್ರಶ್ನೆಯಾಗಿತ್ತು. ಆದರೆ ಕಾಲಕ್ರಮದಲ್ಲಿ ರಾಜ್‌ಕಪೂರ್ ಸಿನಿಮಾಗಳನ್ನ ಅಭ್ಯಾಸದ ದೃಷ್ಟಿಯಿಂದ ನೋಡಲು ಆರಂಭಿಸಿದಾಗ ಜಿಕೆಜಿ ಮಾತುಗಳು ಸ್ಪಷ್ಟವಾಗುತ್ತಿದ್ದವು. ಆದರೆ ಈ ಎಲ್ಲ ಲೇಖನಗಳಿಗಿಂತ ನಾನು ಹೆಚ್ಚು ಆಸ್ಥೆ ವಹಿಸಿ ಓದಲು ಆರಂಭಿಸಿದ್ದು ಅವರ ‘ನನ್ನ ಕಾಲೇಜು’ ಎಂಬ ಲೇಖನ.
ಎರಡು ದಶಕಕ್ಕೂ ಹೆಚ್ಚು ಕಾಲ ಸಂತ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಮೇಷ್ಟ್ರಾಗಿ ಪಾಠ ಹೇಳಿದ್ದರ ಬಗ್ಗೆ ಅವರು ಬರೆದಿದ್ದರು. ಏನೊ ಚೆಂದದ ಮತ್ತು ರೋಚಕ ಅನುಭವಗಳಿರುತ್ತವೆ ಎಂದು ನಾನು ಓದಲು ಆರಂಭಿಸಿದ್ದೆ. ಅದು ನಾನು ಪ್ರಥಮ ಪಿಯುವಿನಲ್ಲಿ ಓದುತ್ತಿದ್ದ ಕಾಲ. ಆದರೆ ಜಿಕೆಜಿ ಅವರು ಮೇಷ್ಟ್ರತನದ ತಾತ್ವಿಕತೆಗಳ ಬಗ್ಗೆ ಮಾತು ಆರಂಭಿಸಿದ್ದರು. ನನ್ನದು ಮತ್ತೆ ಅದೇ ಸಮಸ್ಯೆ. ಆ ಲೇಖನ ಅರ್ಥಕ್ಕೆ ನಿಲುಕುತ್ತಿದೆ ಅಂತಲೂ ಅನಿಸುತ್ತಿತ್ತು. ಆದರೆ ಒಳಮನಸ್ಸು ‘ಇಲ್ಲ ಇನ್ನೂ ಏನೋ ಇದೆ…’ ಎಂದು ಹೇಳುತ್ತಿತ್ತು.
ಸಿನಿಮಾಗಳ ಬಗ್ಗೆ ಅಂದಿನಿಂದಲೂ ಒಲವು ನನ್ನಲ್ಲಿ ಇತ್ತು. ಹಾಗಾಗಿ ರಾಜ್ ಕಪೂರ್ ವಿಚಾರ ಕೊಂಚ ಅರ್ಥವಾಯಿತು. ಉಳಿದ ಬಾಬ್ರಿ ಮಸೀದಿ, ಕಾಲೇಜಿನ ತಾತ್ವಿಕತೆ ಇವೆಲ್ಲ ನನ್ನನ್ನು ಆ ಹೊತ್ತು ಅಷ್ಟು ತಾಕಲಿಲ್ಲ. ಪಟ್ಟುಹಿಡಿದು ಕೂತು ಓದಿದ್ದರೆ ಅರ್ಥವಾಗುತ್ತಿತ್ತೇನೋ. ಆದರೆ ನನ್ನ ಮನಸ್ಥಿತಿ ಆ ಹೊತ್ತು ಬೇರೆ ಇತ್ತು. ನಾನೂ ಸುಮ್ಮನಾದೆ. ನಂತರ ಮರೆತೂ ಹೋಯಿತು.
ಮೊದಲಿಂದ ನಾಟಕ ನೋಡುವ ಚಾಳಿ ಇದ್ದೇ ಇದ್ದದ್ದರಿಂದ ಜಿಕೆಜಿ ನನಗೆ ರಂಗದ ಮೇಲೆ ಕಾಣಿಸಿದರು. ಅದೂ ನಾನು ಅತ್ಯಂತ ಇಷ್ಟಪಡುವ ‘ಕಿಂಗ್ ಲಿಯರ್’ ನಾಟಕದಲ್ಲಿ ಅವರು ಲಿಯರ್! ಆ ಹೊತ್ತಿಗೆ ಎಷ್ಟು ವರ್ಷಗಳು ಕಳೆದಿದ್ದವೋ ನೆನಪಿಲ್ಲ. ಯಾವುದೇ ನಾಟಕ ನೋಡಬೇಕಾದರೂ ಕೊಂಚವಾದರೂ ಅದರ ಬಗ್ಗೆ ಓದಿ ತಿಳಿದು ನಂತರ ನೋಡಲು ಸಿದ್ಧವಾಗಬೇಕು ಎನ್ನುವ ಘಟ್ಟ ತಲುಪಿದ್ದೆ. ಶೇಕ್ಸ್‌ಪಿಯರ್ ನಾಟಕಗಳ ಬಗ್ಗೆ ಒಂದು ತೆಳುವಾದ ಅಂದಾಜು ಇದ್ದರೂ ಪ್ರದರ್ಶನ ಅಂದ ಕೂಡಲೇ ಮತ್ತೆ ಒಮ್ಮೆ ಓದಿಯೇ ಹೋಗಬೇಕೆಂದು ಇಂದಿಗೂ ಮನಸ್ಸು ಒತ್ತಾಯಿಸುತ್ತದೆ. ಅಂದೂ ಅದೇ ಕೆಲಸ ಮಾಡಿ ಜಿಕೆಜಿ ಅವರು ಲಿಯರ್ ಪಾತ್ರ ನಿರ್ವಹಿಸಿದ ನಾಟಕ ನೋಡಲು ಹೋಗಿದ್ದೆ. ಈ ಎಲ್ಲಕ್ಕೂ ಮೊದಲು ಲಿಯರ್ ಪಾತ್ರವನ್ನು ತುಂಬ ಅದ್ಭುತ ರೀತಿಯಲ್ಲಿ ಹಲವರು ಇಂಗ್ಲಿಷ್‌ನಲ್ಲಿ ಪಾತ್ರ ನಿರ್ವಹಿಸಿದ್ದನ್ನು ಕಂಡಿದ್ದೆ. ಕನ್ನಡದಲ್ಲಿ ಕೆಲವು ನಟರು ಲಿಯರ್ ಪಾತ್ರವನ್ನು ಅತಿ ಭಾವಾತೀರೇಕದಲ್ಲಿ ನಟಿಸಿ ರೇಜಿಗೆ ಹುಟ್ಟಿಸಿದ್ದನ್ನೂ ನೋಡಿ ಆಗಿತ್ತು. ಬಾಬ್ರಿ ಮಸೀದಿ ಮತ್ತು ರಾಜ್ ಕಪೂರ್ ವಿಚಾರದಲ್ಲಿ ಚೂರು ನನ್ನವರೆಗೂ ಬಂದು ಹಿಂದಕ್ಕೆ ಸರಿಯುತ್ತಿದ್ದಂತೆ ತೋರುತ್ತಿದ್ದ ಜಿಕೆಜಿ ಅವರು ರಂಗದ ಮೇಲೆ ಹೇಗೆ ಪ್ರಕಟಗೊಳ್ಳುತ್ತಾರೆ ಎನ್ನುವ ಕುತೂಹಲ ನನ್ನಲ್ಲಿ ಇದ್ದೇ ಇತ್ತು. ಹೋಗಿ ನೋಡಿದೆ. ಆ ಹೊತ್ತು ನನಗೆ ಅನಿಸಿದ್ದು- ನಿರ್ದೇಶಕ ಹೇಳಿಕೊಡುವುದು ಬೇರೆ ಸಂಗತಿ. ಆದರೆ ಅದು ನಟರ ಮನಸ್ಸಲ್ಲಿ ತಿಳಿಯಾಗಿ ಇಳಿದು ಆ ಪಾತ್ರದ ಸಾರಸರ್ವ ವ್ಯಕ್ತವಾಗಬೇಕಾದರೆ ನಟ ಹಲವು ಹಂತಗಳನ್ನ ದಾಟಿ ಪಾತ್ರದ ಒಳಹೊಗುವ ಕೆಲಸ ಮಾಡಬೇಕಾಗುತ್ತದೆ. ಆದರೆ ಜಿಕೆಜಿ ಅವರು ದಶಕಗಳ ಕಾಲ ಇಂಗ್ಲಿಷ್ ಸಾಹಿತ್ಯ ಬೋಧಿಸಿದವರು. ಅದರಲ್ಲೂ ಶೇಕ್ಸ್‌ಪಿಯರ್ ನಾಟಕಗಳ ಬಗೆಗೆ ಅಧಿಕೃತವಾಗಿ ಮಾತಾಡಬಲ್ಲವರು.
ನಾಟಕಗಳನ್ನು ಬೋಧಿಸುವಾಗ ಅವರು ಅರ್ಥೈಸಿಕೊಂಡಿರುವ ಕ್ರಮ ಲಿಯರ್ ಪಾತ್ರವನ್ನು ಅಭಿನಯಿಸುವಾಗ ಸಾಕಷ್ಟು ನೆರವು ನೀಡಿದೆ ಎನ್ನುವುದು ಪ್ರತಿಹಂತದಲ್ಲಿ ಸ್ಪಷ್ಟವಾಗುತ್ತಿತ್ತು. ನಿರ್ದೇಶಕ ಒಮ್ಮೆ ಹೇಳಿದ್ದನ್ನು ಕೇಳಿಸಿಕೊಂಡು ನಟಿಸುವುದು ಬೇರೆ ಸಂಗತಿ. ಆದರೆ ದಶಕಗಳ ಕಾಲ ಬೋಧಿಸಿ ಒಂದು ಟೆಕ್ಸ್ಟ್ ಅರ್ಥೈಸಿಕೊಂಡು ನಟಿಸುವುದಕ್ಕೂ ವ್ಯತ್ಯಾಸ ಕಾಣುತ್ತದೆ. ಅದು ಅಂದು ಜಿಕೆಜಿ ಅವರ ಅಭಿನಯದಲ್ಲಿ ಕಂಡಿತು. ಹುಚ್ಚನ್ನು ಅತಿರೇಕಕ್ಕೆ ತಿರುಗಿಸಿಕೊಂಡಂತೆ ನಟಿಸಬಾರದು ಎನ್ನುವ ಎಚ್ಚರ ನಿರ್ದೇಶಕನ ತಿದ್ದುವಿಕೆಯಿಂದ ಸುಧಾರಿಸಬಹುದು; ಆದರೆ ಸ್ವತಃ ಮನನ ಮಾಡಿಕೊಂಡಿರುವವರು ನಟಿಸುವಾಗ ನಟನೆಗೆ ಒಂದು ಸರಾಗ ದಕ್ಕಿಬಿಡುತ್ತದೆ. ಜಿಕೆಜಿ ಅವರು ಇದನ್ನು ರಂಗದ ಮೇಲೆ ಲಿಯರ್ ಪಾತ್ರದಲ್ಲಿ ಸಾಧಿಸಿಕೊಂಡಿದ್ದರು.
ಆಮೇಲೆ ಅಲ್ಲಿಗೆ ಮುಗಿಯಿತು. ಮತ್ತೆ ಜಿಕೆಜಿ ಮರೆವಿಗೆ ಸಂದರು. ಅಲ್ಲೊಂದು ಇಲ್ಲೊಂದು ಅವರ ಖಂಡನಾ ಹೇಳಿಕೆಗಳು, ಅದು ಹುಟ್ಟುಹಾಕುತ್ತಿದ್ದ ಕಾಂಟ್ರವರ್ಸಿಗಳು ಕಣ್ಣುಕಿವಿಗೆ ನಿಲುಕುತ್ತಿದ್ದವು ಅಷ್ಟೇ. ಆದರೆ ನಾನು ಓದಿರುವ ಜಿಕೆಜಿ ಅವರ ವಿಚಾರಧಾರೆಗಳಲ್ಲಿರುವ ವೈಶಿಷ್ಟ್ಯವೆಂದರೆ ಅವು ಕಾಲದೊಂದಿಗೆ ನಮ್ಮ ಜೊತೆ ಪ್ರಯಾಣಿಸುತ್ತಲೇ ವಾಸ್ತವವನ್ನು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಸಲು ಆರಂಭಿಸುತ್ತವೆ. ಮುಖ್ಯವಾಗಿ ನಾವು ಅವುಗಳನ್ನು ಮನಸ್ಸಿನಲ್ಲಿ ದಾಖಲಿಸಿಕೊಳ್ಳುವಷ್ಟು ಸ್ಪಷ್ಟವಾಗಿ ಒಮ್ಮೆ ಓದಿಕೊಂಡಿದ್ದರೆ ಸಾಕು. ಮುಂದೆ ನಮ್ಮೊಂದಿಗೆ ಪ್ರಯಾಣ ಹೊರಡುವ ಕೆಲಸವನ್ನು ಅವು ಮಾಡುತ್ತವೆ.
ಇದೇ ಸಂಗತಿಯನ್ನು ನಾನು ಆ ಹಿರಿಯರಿಗೆ ಹೇಳಿದೆ. ‘ನೋಡಿ ‘ಡಿಸೆಂಬರ್ ಆರರ ನಂತರ’ ಎನ್ನುವ ಅವರ ಲೇಖನ ಇಂದಿಗೆ ಓದಿ ನೋಡಿ. ಧರ್ಮ ಮತ್ತು ರಾಜಕಾರಣದಲ್ಲಿ ಇರುವ ಢೋಂಗಿತವನ್ನ ಜಿಕೆಜಿ ವಿವರಿಸಿರುವ ಬಗೆ ಇಂದಿಗೂ ವಾಸ್ತವ ಅನಿಸಲಿಕ್ಕೆ ಶುರುವಾಗುತ್ತದೆ. ಹಾಗೇ ರಾಜ್ ಕಪೂರ್ ನಿಜಕ್ಕೂ ನಲ್ವತ್ತರ ಹೊತ್ತಿಗೆ ನಿಜಕ್ಕೂ ಖಾಲಿಯಾಗಿ ಹೋದರೆ ಎಂದು ಅವರ ಸಿನಿಮಾಗಳನ್ನು ಕ್ರಾಸ್ ಚೆಕ್ ಮಾಡುವ ಸಲುವಾಗಿಯಾದರೂ ನೋಡಬೇಕು ಅನಿಸುತ್ತದೆ. ‘ನನ್ನ ಕಾಲೇಜು’ ಲೇಖನ ನಾನು ಮೇಷ್ಟ್ರಾಗಿ ಪಾಠ ಹೇಳಲು ನಿಂತ ಹಲವು ವರ್ಷಗಳ ಮೇಲೆ ಹೆಚ್ಚು ಸ್ಪಷ್ಟವಾಗಿ ಅರ್ಥವಾಗಲು ಶುರುವಾಯಿತು. ಪಿಯುಸಿ ಓದುವಾಗ ಅರ್ಥವಾಗದೇ ಹೋಗಿದ್ದ ಮೇಷ್ಟ್ರುತನದ ತಾತ್ವಿಕತೆ ಈ ಹೊತ್ತು ಹೆಚ್ಚು ಸ್ಪಷ್ಟ ಆದಂತೆ ಅನಿಸ್ತಿದೆ. ಆದರೆ ಇದೇ ಅಂತಿಮ ಅಂತಲೂ ನನಗೆ ಅನಿಸುತ್ತಿಲ್ಲ. ಇನ್ನು ಕೆಲವು ವರ್ಷ ಬಿಟ್ಟು ಓದಿದರೂ ಅಂದು ಮತ್ತಷ್ಟು ಸ್ಪಷ್ಟವಾಗುವ ಮಾದರಿಯ ಲೇಖನಗಳು ಅವು..’ ಎಂದೆ.
‘ನಿಮ್ಮ ಕಾಲೇಜು ಯಾವುದು ಹೇಳಿ?’ ಎಂದು ಅವರು ಕೇಳಿದರು. ‘ಬಸವನಗುಡಿಯ ನ್ಯಾಷನಲ್ ಕಾಲೇಜು. ಡಿಗ್ರಿ ಓದಿದ್ದು ಅಲ್ಲೇ. ಕೆಲವು ವರ್ಷಗಳು ಪಾಠ ಹೇಳಿದ್ದೂ ಅಲ್ಲೇ’ ಅಂದೆ. ‘ನಿಮ್ಮ ಕಾಲೇಜು ನಾಟಕಗಳನ್ನ ಮಾಡೋದರಲ್ಲಿ ಬಹಳ ಫೇಮಸ್ಸು ಅಲ್ವೇ..?’ ಅಂತ ಆ ಹಿರಿಯರು ಮತ್ತೆ ಕೇಳಿದರು. ‘ತಪ್ಪು. ನಾಟಕಗಳನ್ನ ಮಾಡೋದರಲ್ಲಿ ಅಲ್ಲ. ನಾಟಕ ಪ್ರದರ್ಶನಗಳನ್ನ ಮಾಡೋದರಲ್ಲಿ..’ ಅಂತ ನಕ್ಕು ವಿವರಿಸಿದೆ. ಅವರೂ ನಕ್ಕು ‘ಮತ್ತೆ ನೀವೂ ‘ನನ್ನ ಕಾಲೇಜು’ ಅಂತ ಬರೀರಿ. ನೀವಿದ್ದಾಗ ಅಲ್ಲಿದ್ದ ನಾಟಕದ ವಾತಾವರಣದ ಬಗ್ಗೆ ಬರೀರಿ. ಏನು ಮುಂದಿನ ಅಂಕಣದಲ್ಲಿ ಬರೀತೀರಾ?’ ಎಂದು ಕೇಳಿದರು.
ನಾನು ಮತ್ತೆ ನಕ್ಕೆ. ನ್ಯಾಷನಲ್ ಕಾಲೇಜಿನ ಬಗೆಗೆ ನನ್ನಲ್ಲಿರುವ ಆಪ್ತತೆ ಎಂಥದ್ದು ಎಂದು ನನ್ನ ಹತ್ತಿರದವರಿಗೆ ತಿಳಿದಿದೆ. ಅಲ್ಲಿ ನಾನು ಮೇಷ್ಟ್ರಾಗಿ ಪಾಠ ಆರಂಭಿಸಿದ ದಿನಗಳಲ್ಲಿ ನನ್ನ ಮನಸ್ಸು ಎಷ್ಟು ಸಂತೋಷದಿಂದ ಕೂಡಿತ್ತು ಎನ್ನುವುದನ್ನು ನಾನು ನನಗೆ ತೀರಾ ಹತ್ತಿರವಾಗಿರುವವರ ಜೊತೆ ಸಾಕಷ್ಟು ಸಲ ಹಂಚಿಕೊಂಡಿದ್ದೇನೆ. ಮೇಷ್ಟ್ರಾಗಿ ಪಾಠ ಹೇಳುವುದು ಮತ್ತು ನಾಟಕದ ಚಟುವಟಿಕೆಗಳಲ್ಲಿ ಭಾಗಿಯಾಗುವುದು ನನ್ನ ಆತ್ಮಕ್ಕೆ ನಾನು ತಗುಲಿಸಿಕೊಂಡಿರುವ ಮಧುರವಾದ ಸೋಂಕು. ಇದನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ. ಇಂಥ ನ್ಯಾಷನಲ್ ಕಾಲೇಜಿನಲ್ಲಿ ನಾಟಕಗಳ ಕುರಿತಂತೆ ನನ್ನಲ್ಲಿ ಸಾಕಷ್ಟು ನೆನಪುಗಳಿವೆ. ಬಹುಪಾಲು ಚೆಂದ. ಮತ್ತು ಒಂದೋ ಎರಡೋ ಕಹಿ ಸಂಗತಿಗಳೂ ಇವೆ. ಚೆಂದದ ನೆನಪುಗಳು ಕೆಲವರಿಗೆ ತಿಳಿದಿದೆ. ಆದರೆ ಮನಸ್ಸಿನಲ್ಲೇ ಮುಳ್ಳುಮುರಿದು ಆಗಾಗ ಚುಚ್ಚುತ್ತ ನೋವು ತರುತ್ತಿರುವ ಸಂಗತಿ?
ಇದು ಯಾರಿಗೂ ಗೊತ್ತಿಲ್ಲ. ನಾನು ಹೇಳಿಯೂ ಇಲ್ಲ. ಎಲ್ಲ ಎಲ್ಲ ಚೆಂದವಿದ್ದ ಕಾಲದಲ್ಲೇ ನಾಟಕಗಳ ಸಲುವಾಗಿಯೇ ನನ್ನ ಮೇಷ್ಟ್ರುತನ ಬಗ್ಗೆ ಬೇಸರ ಹುಟ್ಟಿಕೊಂಡ ವಿಚಾರ ಹಾಗೇ ಉಳಿದುಬಿಟ್ಟಿದೆ. ಇಂದಿಗೂ ನ್ಯಾಷನಲ್ ಕಾಲೇಜಿನ ಒಳಗೆ ಹೆಜ್ಜೆ ಕದಲಿಸಬೇಕಾಗಿ ಬಂದಾಗ ಚೆಂದದ ಹಲವು ನೆನಪುಗಳು ನನ್ನನ್ನು ಮುತ್ತಿಕೊಳ್ಳುವಂತೆ ಮನಸ್ಸಿಗೆ ಘಾಸಿ ಮಾಡಿದ ಅದೊಂದು ಕ್ಲಾಸು, ಅಂತರ ತರಗತಿ ನಾಟಕ ಸ್ಪರ್ಧೆಯಲ್ಲಿ ಆ ಕ್ಲಾಸಿನ ಹುಡುಗರು ಮಾಡಿದ ನಾಟಕ, ಮತ್ತು ಆ ಒಬ್ಬ ಅದೊಂದು ದಿನ…
ಮುಂದಿನ ಅಂಕಣದಲ್ಲಿ ಈ ಬಗ್ಗೆ ಬರೆಯುತ್ತೀನಾ..? ಡೋಂಟ್ ನೋ…
ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಉಪನ್ಯಾಸರಾಗಿ ಹಾಗೂ ‘ಕನ್ನಡ ಪ್ರಭ’ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಣೆ. ಸಾಹಿತ್ಯ, ಸಂಗೀತ ಮತ್ತು ರಂಗಭೂಮಿ ಆಸಕ್ತಿಯ ಕ್ಷೇತ್ರಗಳು. ‘ಬೆಳಕು ಸದ್ದುಗಳನ್ನು ಮೀರಿ’, ‘ ಸರಸ್ವತಿ ಅಕಾಡಮಿ’ (ಕಥಾಸಂಕಲನ) ‘ ತಮ್ಮ ತೊಟ್ಟಿಲುಗಳ ತಾವೇ ಜೀಕಿ’ (ಕಾದಂಬರಿ) ಪ್ರಕಟಿತ ಕೃತಿಗಳು. ಪ್ರಸ್ತುತ ‘ಡ್ರಾಮಾಟ್ರಿಕ್ಸ್’ ಎಂಬ ರಂಗತಂಡದಲ್ಲಿ ನಾಟಕ ರಚನೆ ಮತ್ತು ನಿರ್ದೇಶನದಲ್ಲಿ ಸಕ್ರಿಯ.
ಜಿಕೆಜಿ ರಾಜಕಪೂರ್ ಹುಡುಗ ಹುಡುಗಿ ಬಾಬ್ರಿ ಮಸ್ಜಿದಿ ನ್ಯಾಷನಲ್ ಕಾಲೇಜು ಎಲ್ಲಾ ಕೊಲಾಜ್ ಸೇರಿಸೋ ಪ್ರಯತ್ನದ ಜೊತೆ ನಿಮ್ಮೊಳಗಿರುವ ತವಕ ಚೆನ್ನಾಗಿದೆ ???ಹೆಪ್ಪುಗಟ್ಟಿದ ಮೊಡ ಮಳೆ ಸುರಿಸಿ ಹಗುರಾಬೇಕು….. ಬರಲಿ ನಿಮ್ಮ ಬರಹ ಕಾಲೇಜಿನ ಡ್ರಾಮಾ ಸಂಬಂಧಪಟ್ಟಿದ್ದು…. ಆದರೆ ನಾನೂ ಆಯೋಜಿಸಿದ್ದ ಡ್ರಾಮಾದ ಪಡಿಪಾಟಲು ಬಗ್ಗೆ ಈಗ ಸದ್ಯಕ್ಕೆ ಬೇಡ… ನಾನೇ ಬರೆದು ಹಗುರಾಗುತ್ತೇನೆ ????