ಸುಬ್ಬಿ ಈಗ ಇದ್ದಿದ್ದರೆ ಏನು ಹೇಳುತ್ತಿದ್ದಳು? ಈ ಪುಟ್ಟ ಲಲಿತೆಯನ್ನು ಆ ದೇವ್ರುವಿನ ಎದುರಿಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದರೆ ಏನನ್ನಬಹುದು? ಹುಟ್ಟಾ ನೋಡೇ ಇರದ ಮನುಷ್ಯನನ್ನು ಅಣ್ಣ ಎಂದು ಹೇಳಿದರೆ ಒಪ್ಪಿಕೊಳ್ಳಬಹುದೇ? ದೇವ್ರು ಇವಳನ್ನು ನೋಡಿ ಹೇಗೆ ಪ್ರತಿಕ್ರಿಯಿಸಬಹುದು? ಹೀಗೆ ಹತ್ತು ಹಲವು ಆಲೋಚನೆಗಳು ಮನಸಲ್ಲಿ ಸುಳಿಯುತ್ತಲೇ ಇದ್ದವು. “ಅವ್ನ ಮತ್ತೆ ನನ್ನ ಋಣ ತೀರಿದೆ. ಇನ್ಮೇಲೆ ಅವ್ನಾಗೇ ಎದ್ರಿಗೆ ಬಂದ್ರೂ ನಾನು ಮಾತಾಡಿಸ್ಬಾರ್ದು. ಹುಬ್ಬಳ್ಳಿಲೇ ಇದ್ರೂ ಇಷ್ಟು ವರ್ಷದಲ್ಲಿ ಒಮ್ಮೆಯಾದರೂ ನಮ್ಮನ್ನು ನೋಡಬೇಕು ಅಂತ ಅನಿಸ್ಲಿಲ್ವಲ್ಲಾ…
ಪದ್ಮನಾಭ ಭಟ್ ಶೇವ್ಕಾರ ಹೊಸ ಕಾದಂಬರಿ ‘ದೇವ್ರು’ ಇಂದ ಕೆಲವು ಪುಟಗಳು ನಿಮ್ಮ ಓದಿಗೆ
ಬಂದಾನೋ ಬಾರನೋ ಹೋದವ…
‘ಪ್ರದ್ಯುಮ್ನನಿಗೆ ದೇವ್ರು ಹುಬ್ಬಳ್ಳಿಯಲ್ಲಿ ಕಂಡನಂತೆ’ ಎಂಬ ಸುದ್ದಿ ನಾರಾಣನ ಬಾಯಿಂದ ಕೇಳುವಾಗ, ಮುರಿದು ಹೋಗಿದ್ದ ತೋಟದ ಬೇಲಿ ಸರಿಪಡಿಸುವ ಕೆಲಸದಲ್ಲಿದ್ದ ನಾಣ್ಯ. ಗುಟ್ಟ ಕಡಿಯಲು ಎತ್ತಿದ ಕೈಯನ್ನು ಬೀಸದೆ ಹಾಗೇ ಕೆಳಗೆ ಇಳಿಸಿ, ನಾರಾಣನ ಮುಖವನ್ನೇ ದಿಟ್ಟಿಸಿದ. ನಂತರ ಸಣ್ಣಗೆ ನಕ್ಕು ಮತ್ತೆ ಗುಟ್ಟ ಕಡಿಯಲು ಶುರುಮಾಡಿದ. ಮೊದಲಿಗಿಂತ ವೇಗದಲ್ಲಿ ಅವನ ಕೈ ಬೀಸುತ್ತಿದ್ದದ್ದು, ಒಂದೊಂದು ಹೊಡೆತಕ್ಕೂ ಹೂಂ ಹೂಂ ಎಂಬ ಉಸಿರು ಬಿಡುತ್ತಿದ್ದುದನ್ನು ಗಮನಿಸಿದ ನಾರಾಣನಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಈಗ ಏನು ಹೇಳಿದರೂ ಅದು ಕರೆಕರೆಯಾಗಬಹುದು ಎಂದು ಎಣಿಸಿ ನಾಣ್ಯನೊಬ್ಬನನ್ನೇ ಬಿಟ್ಟು ಮನೆಗೆ ಬಂದುಬಿಟ್ಟ.
ಸಂಜೆ ಕೆಲಸ ಮುಗಿಸಿ ಬಂದ ನಾಣ್ಯ ಎಂದಿಗಿಂತ ಹೆಚ್ಚು ದಣಿದಿದ್ದ. ಮುಖ ಬಾಡಿತ್ತು. ಎಷ್ಟೋ ವರ್ಷಗಳ ನಂತರ ದೇವ್ರುವಿನ ಸುದ್ದಿ ಕೇಳಿ ದಿಕ್ಕೆಟ್ಟಿದ್ದಾನೆ ಎಂದು ನಾರಾಣನಿಗೆ ಗೊತ್ತಾಯಿತು. ಸಾಮಾನ್ಯವಾಗಿ ಕೆಲಸ ಮುಗಿಸಿ ಬಂದು, ಕೈಕಾಲು ತೊಳೆದುಕೊಂಡು, ಕೆಲಸದ ಬಟ್ಟೆ ಬದಲಿಸಿ, ಕತ್ತಿ ಜಗುಲಿಯಲ್ಲಿಟ್ಟು ಹೊರಟುಬಿಡುವುದು ವಾಡಿಕೆ. ಆದರೆ ಇಂದು ಬಟ್ಟೆ ಬದಲಿಸಿ ಬಂದು ಜಗುಲಿಯಲ್ಲಿ ಸುಮ್ಮನೇ ಕೂತ. ತುಸು ಹೊತ್ತು ಬಿಟ್ಟು ಸಣ್ಣನೆ ಧ್ವನಿಯಲ್ಲಿ, ‘ಅಲಾ ಭಟ್ರೆ… ಶಣ್ ಭಟ್ರು ಕಂಡಿದ್ದು ನನ್ ಮಗ್ನೇಯಾ? ಎಂತಕ್ ಕೇಳ್ದಿದ್ದೇನೆ ಅಂದ್ರೆ, ಹಿಂಗೆ ಅಲ್ ಕಂಡೆ ಇಲ್ ಕಂಡೆ ಅಂತ ಹೇಳಿದ್ ಕೇಳ್ಕೊಂಡು ತಿರುಗಾಡಿ ತಿರುಗಾಡಿ ಸಾಕಾಗೋಗಿದೆ ನಂಗೆ’ ಎಂದ.
‘ಗೊತ್ತಿಲ್ಲ ನಾಣ್ಯ, ಮಾಣಿ ಅವ್ನ ನೋಡಿರೂದೂ ಹತ್ತಾರು ವರ್ಷಗಳ ಮೇಲೆ ಅಲ್ವೇನ? ಅವ್ನಿಗೆ ತಾನು ನೋಡಿದ್ದು ದೇವ್ರು ಅಂತ ಅನ್ಸಿದೆ. ಆದ್ರೆ ಮಾತಾಡಿಸ್ಲಿಲ್ಲ. ಹಂಗಾಗಿ ಗ್ಯಾರಂಟಿ ಇಲ್ಲ. ಅದ್ಕೇ ನಿಂಗ್ ವಿಷಯ ಹೇಳ್ಬೇಕೋ ಬೇಡ್ವೋ ಅಂತ ನಂಗೂ ಗೊಂದಲ ಇತ್ತು. ಆದ್ರೆ ಅವ್ನು ನಿಜವಾಗ್ಲೂ ದೇವ್ರೂನೇ ಆದ್ರೆ ನಿನ್ ಮಗನ ನೋಡೂ ಅವಕಾಶ ನಾನೇ ತಪ್ಪಿಸ್ದಂಗಾಗ್ತದೆ ಅಂತ ಹೇಳ್ದೆ ಅಷ್ಟೆ. ನಿಂಗ್ ನಂಬ್ಕೆ ಇಲ್ಲ ಅಂದ್ರೆ ಸುದ್ದಿ ಬಿಡು…’ ಎಂದ.
ನಾಣ್ಯನ ಕಣ್ಣಲ್ಲಿನ ಗೊಂದಲ ಹಾಗೇ ಇತ್ತು. ಏನೂ ಮಾತಾಡದೆ ಮನೆಗೆ ಹೋದ. ಅಂದು ರಾತ್ರಿಯಿಡೀ ನಿದ್ದೆಯಾಗಲಿಲ್ಲ ಅವನಿಗೆ. ದೇವ್ರು ಮನೆ ಬಿಟ್ಟು ಹೋದಮೇಲೆ ನಡೆದ ಒಂದೊಂದೇ ದುರಂತಗಳು ಕಣ್ಮುಂದೆ ಬಂದು ಜೀವ ಹಿಂಡತೊಡಗಿದವು. ಎಂದಿನಂತೆ ಮಲಗುವಾಗ ಲಲಿತೆಗೆ ಕಥೆ ಹೇಳಲಿಲ್ಲ. ಕತ್ತು ಹಿಡಿದುಕೊಂಡು ಪೀಡಿಸಿದಾಗ, ‘ಸುಮ್ನೆ ಮಲ್ಕಾ… ದಿನಾ ಕಥೆ ಹೇಳ್ಲಿಕ್ಕೆ ನಾನೇನ್ ಕಥೆ ಗಿಡ ನೆಟ್ಟಿದೀನಾ?’ ಎಂದು ಗದರಿದ. ಲಲಿತೆ ಕಣ್ಣಲ್ಲಿ ನೀರು ಕತ್ತಿನ ನರ ಉಬ್ಬಿಸಿ ಮಲಗಿದಳು. ನಾಣ್ಯನಿಗೆ ಪಾಪ ಅನಿಸಿತು. ಅವಳನ್ನು ಬಾಚಿ ಇತ್ತ ಎಳೆದುಕೊಂಡು ‘ಈವತ್ ಯಾವ ಕಥೆನೂ ಇಲ್ಲ… ನಾಳೆ ಹೊಸ ಕಥೆ ಹೇಳ್ತೇನೆ ಆಯ್ತಾ?’ ಎಂದು ಮುದ್ದಿಸಿ ಮಲಗಿಸಿದ. ಅವನ ಹೊಟ್ಟೆಯ ಮೇಲೆ ಕಾಲು ಹಾಕಿ ಮಲಗಿ ನಿದ್ದೆಹೋದಳು. ಆದರೆ ನಾಣ್ಯನಿಗೆ ಮಾತ್ರ ನಿದ್ರೆ ಹತ್ತಿರ ಸುಳಿಯಲಿಲ್ಲ.
ಸುಬ್ಬಿ ಈಗ ಇದ್ದಿದ್ದರೆ ಏನು ಹೇಳುತ್ತಿದ್ದಳು? ಈ ಪುಟ್ಟ ಲಲಿತೆಯನ್ನು ಆ ದೇವ್ರುವಿನ ಎದುರಿಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದರೆ ಏನನ್ನಬಹುದು? ಹುಟ್ಟಾ ನೋಡೇ ಇರದ ಮನುಷ್ಯನನ್ನು ಅಣ್ಣ ಎಂದು ಹೇಳಿದರೆ ಒಪ್ಪಿಕೊಳ್ಳಬಹುದೇ? ದೇವ್ರು ಇವಳನ್ನು ನೋಡಿ ಹೇಗೆ ಪ್ರತಿಕ್ರಿಯಿಸಬಹುದು? ಹೀಗೆ ಹತ್ತು ಹಲವು ಆಲೋಚನೆಗಳು ಮನಸಲ್ಲಿ ಸುಳಿಯುತ್ತಲೇ ಇದ್ದವು. “ಅವ್ನ ಮತ್ತೆ ನನ್ನ ಋಣ ತೀರಿದೆ. ಇನ್ಮೇಲೆ ಅವ್ನಾಗೇ ಎದ್ರಿಗೆ ಬಂದ್ರೂ ನಾನು ಮಾತಾಡಿಸ್ಬಾರ್ದು. ಹುಬ್ಬಳ್ಳಿಲೇ ಇದ್ರೂ ಇಷ್ಟು ವರ್ಷದಲ್ಲಿ ಒಮ್ಮೆಯಾದರೂ ನಮ್ಮನ್ನು ನೋಡಬೇಕು ಅಂತ ಅನಿಸ್ಲಿಲ್ವಲ್ಲಾ… ಅವನಿಗೇ ಬೇಡವಾದ್ದು ನಂಗ್ಯಾಕೆ?’ ಎಂದೆಲ್ಲ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಲು ಯತ್ನಿಸಿದರೂ ಅದು ಹಳಿತಪ್ಪಿ ಹೊಯ್ದಾಡುತ್ತಿತ್ತು. ‘ಲಲಿತೆಗೆ ಒಮ್ಮೆ ಅಣ್ಣನನ್ನು ನೋಡ್ಲಿಕ್ಕಾಗ್ತದೆ ಅಂದ್ರೆ ನಾನ್ಯಾಕೆ ತಪ್ಪಿಸ್ಬೇಕು? ಅವನಿಗೆ ಮನೆಗೆ ಬರುವುದೇ ಇಷ್ಟವಿರಬಹುದು. ಅದರ ಸೂಚನೆ ಕೊಡ್ಲಿಕ್ಕೆ ಅಂತಾನೇ ಶಣ್ ಭಟ್ರಿಗೆ ಕಾಣಿಸಿಕೊಂಡಿರ್ಬೇಕು’ ಎಂದೆಲ್ಲ ಮತ್ತೊಂದು ದಿಕ್ಕಿಗೆ ಆಲೋಚನೆ ಜಗ್ಗಿ, ಯಾವ ಕಡೆಯೂ ಪಾದ ಊರಲಾಗದೆ ಒದ್ದಾಡುತ್ತಿದ್ದ.
ಬೆಳಗಿನ ಜಾವದ ಹೊತ್ತಿಗೆ ಅವನ ಮನಸ್ಸು ಒಂದು ನಿರ್ಧಾರಕ್ಕೆ ಬಂದಿತ್ತು. ನಸುಕಿಗೇ ಎದ್ದು ಸ್ನಾನ ಮಾಡಿದ. ಇನ್ನೂ ನಿದ್ದೆಗಣ್ಣಲ್ಲೇ ಇದ್ದ ಲಲಿತೆಯನ್ನೂ ಎತ್ತಿಕೊಂಡು ಹೋಗಿ ಮೀಯಿಸಿದ. ಹಾಗೆ ಅವಳಿಗೆ ಹೊಸ ಬಟ್ಟೆ ತೊಡಿಸಿದ. ತಾನೂ ಇದ್ದಿದ್ದರಲ್ಲೇ ಚೊಕ್ಕ ಲುಂಗಿಯುಟ್ಟು, ಷರ್ಟು ತೊಟ್ಟು, ಹೆಗಲಿಗೆ ಟವೇಲ್ ಏರಿಸಿದ. ಮನೆಯಲ್ಲಿ ಇದ್ದಷ್ಟೂ ದುಡ್ಡನ್ನು ಒಂದು ಪ್ಲ್ಯಾಸ್ಟಿಕ್ ಕವರಿನಲ್ಲಿ ಹಾಕಿ ಸೊಂಟಕ್ಕೆ ಸಿಕ್ಕಿಸಿಕೊಂಡ.
‘ಎಲ್ಲಿಗೆ ಹೋಗೂದು ಅಪ್ಪಾ?’ ಎಂದು ಕೇಳುತ್ತಿದ್ದ ಲಲಿತೆಯನ್ನು ಎತ್ತಿಕೊಂಡೇ ನಾರಾಣ ಭಟ್ಟನ ಮನೆಗೆ ಬಂದಾಗ ಆಗಿನ್ನೂ ಆರು ಗಂಟೆ. ಆಗಷ್ಟೇ ಎದ್ದ ಗಿರಿಜೆ, ಬಚ್ಚಲ ಒಲೆಗೆ ಬೆಂಕಿ ಹಾಕುತ್ತಿದ್ದಳು. ಎದ್ದು ಪಾಯಖಾನೆಗೆ ಹೋಗುತ್ತಿದ್ದ ನಾರಾಣ, ಗೇಟಿನ ಬಳಿಯಲ್ಲಿ ಇವರನ್ನು ನೋಡಿ ಅಚ್ಚರಿಯಿಂದ ನಿಂತ.
‘ಭಟ್ರೆ, ಯಾವ್ದಕ್ಕೂ ಹೋಗೇ ಬಂದ್ಬಿಡ್ವಾ ಅಂದ್ಕೊಂಡೆ. ನಾಳೆ ಅದೇ ಒಂದು ಕೊರಗಾಗಿ ಉಳ್ಕೊಳೂದು ಬ್ಯಾಡ ಅಂತ…’
‘ಹುಬ್ಬಳ್ಳಿಗಾ? ಈಗ್ಲೇನಾ?’
‘ಹೌದು ಭಟ್ರೆ, ಸಮಾಧಾನ ಇರೂದಿಲ್ಲ ಇಲ್ದಿದ್ರೆ’
‘ಆ ಹುಡ್ಗೀನಾದ್ರೂ ಇಲ್ಲೇ ಬಿಟ್ ಹೋಗೋ… ನಿಂಗೂ ತ್ರಾಸು ಅಡ್ಡಾಡ್ಲಿಕ್ಕೆ’
‘ಇಲ್ಲ… ಅವ್ನು ಸಿಕ್ಕಿದ್ರೂ ಮನೆಗೆ ಬರ್ತಾನಾ ಇಲ್ವಾ ಯಾರಿಗೆ ಗೊತ್ತು? ಆ ಭಗವಂತ ಅಡ್ಡಿಲ್ಲ ಅಂದ್ರೆ ಅಣ್ಣನ ಒಂದ್ಸಲ ನೋಡ್ಕಂಡ್ಬಿಡ್ಲಿ ಕಣ್ಣಲ್ಲಿ…’
ನಾರಾಣನಿಗೆ ಮುಂದೆ ಏನು ಹೇಳೂದು ತಿಳಿಯದಾಯ್ತು. ಒಳಗೆ ಹೋಗಿ ಒಂದಿಷ್ಟು ದುಡ್ಡು ತಂದು ಕೈಯಲ್ಲಿಟ್ಟ. ನಾಣ್ಯ, ಅವನ ಬಳಿ ಪ್ರದ್ಯುಮ್ನನ ಹಾಸ್ಟೇಲ್ ನಂಬರ್, ದೇವ್ರೂನ ಅವನು ನೋಡಿದ ಜಾಗದ ಹೆಸರು ಎಲ್ಲವನ್ನೂ ಒಂದು ಹಾಳೆಯ ಮೇಲೆ ಬರೆಸಿಕೊಂಡ. ‘ಹತ್ ನಿಮಿಷ, ದನ ಕರೆದ ಕೂಡ್ಲೇ ಚಾ ಮಾಡಿ, ದೋಸೆ ಎರೆದು ಕೊಡ್ತೇನೆ. ತಿಂದ್ಕೊಂಡು ಹೋಗಿ. ಆ ಕೂಸನ ಹಸಿ ಹೊಟ್ಟೇಲಿ ಕರ್ಕೊಂಡೋಗ್ಬೇಡ್ವೋ’ ಎಂದು ಗಿರಿಜೆ ಒಳಗಿನಿಂದಲೇ ಕೂಗಿದಳು. ಆದರೆ ನಾಣ್ಯನಿಗೆ ಅಷ್ಟು ವ್ಯವಧಾನ ಇರಲಿಲ್ಲ.
‘ಬೇಗ ಹೋಗಿ ಬಿಡ್ತೇವೆ ಭಡ್ತೇರೆ… ಅಲ್ಲೇ ಏನಾದ್ರೂ ತಿನ್ಲಿಕ್ಕಾಗ್ತದೆ’ ಎಂದು ಹೊರಟೇಬಿಟ್ಟ. ‘ಹುಡ್ಗಿ ಹುಶಾರೋ… ಪೇಟೆ ಅದು… ಕೈ ಬಿಟ್ಟು ಬಿಡ್ಬೇಡ…’ ಎಂದು ಮತ್ತೆ ಕೂಗಿದಳು.
ಲಲಿತೆಯನ್ನು ಹೆಗಲ ಮೇಲೆ ಹೊತ್ತು ಗುಳ್ಳಾಪುರಕ್ಕೆ ಬಂದು, ಬಸ್ಸು ಹತ್ತಿ, ಹುಬ್ಬಳ್ಳಿ ಬಸ್ ಸ್ಟ್ಯಾಂಡಿನಲ್ಲಿ ಇಳಿದಾಗ ಗಂಟೆ ಹತ್ತು ದಾಟಿತ್ತು. ಬಿಸಿಲು ಚುರುಕು ಹೆಚ್ಚಿಸಿಕೊಳ್ಳುತ್ತಿತ್ತು.
ನಾಣ್ಯ ಎಷ್ಟೋ ವರ್ಷಗಳ ಹಿಂದೊಮ್ಮೆ ಬಂದಿದ್ದು ಬಿಟ್ಟರೆ ಹುಬ್ಬಳ್ಳಿ ಅವನಿಗೆ ಪರಿಚಿತವೇನಲ್ಲ. ಲಲಿತೆಯಂತೂ ಇಷ್ಟು ದೊಡ್ಡ ನಗರವನ್ನು ನೋಡಿದವಳೇ ಅಲ್ಲ. ಬಸ್ಸಿನಿಂದ ಇಳಿದು ಬೆರಗಿನಿಂದ ಸುತ್ತಮುತ್ತಲೆಲ್ಲ ನೋಡುತ್ತ ನಿಂತಿದ್ದ ಅವಳನ್ನು ಕೈ ಹಿಡಿದು ಬಸ್ ಸ್ಟ್ಯಾಂಡ್ ಪಕ್ಕದ ಗೂಡಂಗಡಿಗೆ ಕರೆದೊಯ್ದು ಒಂದು ಚಿತ್ರಾನ್ನ ಕೊಡಿಸಿದ. ತಾನು, ಅವಳು ತಿಂದು ಉಳಿಸಿದ್ದ ಚಿತ್ರಾನ್ನವನ್ನು ತಿಂದು ಚಾ ಕುಡಿದ. ಅಲ್ಲೇ ಅಂಗಡಿಯವನ ಹತ್ತಿರ ‘ನವನಗರಕ್ಕೆ ಹೋಗೂ ಬಸ್ಸು ಎಲ್ಲಿ ನಿಲ್ತದೆ?’ ಕೇಳಿದ. ಅವನು ತೋರಿಸಿದ ಕಡೆಯಲ್ಲಿ ಹೋಗಿ ನಿಂತರು. ಸ್ವಲ್ಪ ಹೊತ್ತಿನಲ್ಲಿಯೇ ಒಂದು ಬಸ್ ಬಂದು ನಿಂತಿತು. ಕಂಡಕ್ಟರನನ್ನು ಕೇಳಿ ಹತ್ತಿ ಕೂತರು.
ಲಲಿತೆಯ ಮಾತೇ ಬಂದ್ ಆಗಿತ್ತು. ಎಷ್ಟು ನೋಡಿದರೂ ಬರಿದಾಗದ ಜನ, ಗಾಡಿಗಳು, ಸಾಲು ಸಾಲು ಅಂಗಡಿಗಳು, ಕಿರ್ರನೇ ಸದ್ದು ಮಾಡುತ್ತ ಹೊಗೆಯುಗುಳುತ್ತ ಸಾಗುವ ಆಟೊಗಳು, ಕರ್ಕಶ ಹಾರನ್‌ಗಳು… ಹೀಗೆ ನೋಡಿದಷ್ಟೂ ಬರಿದಾಗದ ನಗರ ಆ ಪುಟ್ಟ ಕಣ್ಣುಗಳಲ್ಲಿ ಆತಂಕ ಬೆರಗನ್ನು ಸೇರಿಸಿ ಸುರಿಯುತ್ತಿತ್ತು. ನಾಣ್ಯನ ಮನಸ್ಸಿನ ಉದ್ವೇಗವೂ ಕ್ಷಣದಿಂದ ಕ್ಷಣಕ್ಕೆ ಹೆಚ್ಚುತ್ತಲೇ ಹೋಗುತ್ತಿತ್ತು. ಮನೆಯಿಂದ ಹೊರಟಾಗ ಇದ್ದ ಧೈರ್ಯ ಈಗ ಉಳಿದಿರಲಿಲ್ಲ. ಅವನನ್ನು ಹೈರಾಣುಗೊಳಿಸಲು ಪಣತೊಟ್ಟಂತೆ ಮನಸಲ್ಲಿ ಒಂದರ ಹಿಂದೊಂದು ಆಲೋಚನೆಗಳು ಎದ್ದು ದಿಕ್ಕೆಡಿಸುತ್ತಿದ್ದವು. ಬಸ್ಸು ಇನ್ನೂ ಸ್ವಲ್ಪ ನಿಧಾನಕ್ಕೆ ಹೋಗಲಿ, ನವನಗರ ತಡವಾಗಿಯೇ ಬರಲಿ ಎಂದು ಮನಸ್ಸು ಬಯಸುತ್ತಿತ್ತು.
ನವನಗರದ ಬಸ್ ಸ್ಟ್ಯಾಂಡಿನಲ್ಲಿ ಲಲಿತೆ ಮತ್ತು ನಾಣ್ಯ ಇಳಿದಾಗ ಇಡೀ ಬಸ್ ಸ್ಟ್ಯಾಂಡ್ ಖಾಲಿ ಹೊಡೆಯುತ್ತಿತ್ತು. ನಾವು ತಪ್ಪಿ ಬೇರೆ ಎಲ್ಲಾದರೂ ಬಂದುಬಿಟ್ಟೆವಾ ಎಂಬ ಅನುಮಾನ ಕಾಡುವಷ್ಟರಲ್ಲಿ ಲಲಿತೆ ಬಸ್ ಸ್ಟ್ಯಾಂಡಿನ ‘ನವನಗರ ಬಸ್ ನಿಲ್ದಾಣʼ ಎಂಬ ಫಲಕವನ್ನು ಅಕ್ಷರಕ್ಷರ ಹೆಕ್ಕಿ ಓದಿದಳು. ಬಂದಿದ್ದೇನೋ ಬಂದಿದ್ದಾಯ್ತು, ಮುಂದೆ ಏನು ಮಾಡಬೇಕು ಎಂದು ನಾಣ್ಯನಿಗೆ ಗೊತ್ತಾಗಲಿಲ್ಲ. ಹೆದ್ದಾರಿಯಲ್ಲಿ ಸಾಲಾಗಿ ಹೋಗುತ್ತಿರುವ ಗಾಡಿಗಳು… ಅಕ್ಕಪಕ್ಕದಲ್ಲಿನ ಅಂಗಡಿಗಳು, ಒಳರಸ್ತೆಗಳಲ್ಲಿ ಹೊರಳುವ ಸೈಕಲ್‌ಗಳನ್ನೆಲ್ಲ ನೋಡುತ್ತ ತುಸು ಹೊತ್ತು ಕಳೆದ. ಗೆರೆ ಕೊರೆದಂತಿರುವ ಎಷ್ಟೊಂದು ಅಡ್ಡರಸ್ತೆಗಳು, ಅದಕ್ಕೆ ಹೊಂದಿಕೊಂಡ ಎಷ್ಟೊಂದು ಮನೆಗಳು… ಇಲ್ಲಿ ದೇವ್ರುವನ್ನು ಹೇಗೆ ಹುಡುಕುವುದು? ಯಾವ ಗಲ್ಲಿಯ ಯಾವ ಮನೆಯ, ಯಾವ ಖೋಲಿಯಲ್ಲಿ ಅವನು ಇರಬಹುದು? ಪ್ರದ್ಯುಮ್ನನಿಗೆ ಫೋನ್ ಮಾಡುವುದೇ ಎಂದು ಯೋಚಿಸಿದ. ಆದರೆ ಅವನಿಗೆ ಫೋನ್ ಮಾಡಿ ಗೊತ್ತಿರಲಿಲ್ಲ. ಟೆಲಿಪೋನ್ ಚಿತ್ರವಿದ್ದ ಆ ಚಿಕ್ಕ ಗೂಡಿನೊಳಗೆ ನಿಂತು ನಂಬರ್ ಹೊಡೆದು ಫೋನ್ ಮಾಡುವುದೆಲ್ಲ ಸಾಧ್ಯವೇ ಇಲ್ಲ ಅನಿಸಿತು. ದಿಕ್ಕೆಟ್ಟು ನಿಂತವನ ಕೈಯನ್ನು ಲಲಿತೆಯೇ ಹಿಡಿದು ಜಗ್ಗಿದಳು.
‘ಅಪ್ಪಾ, ಎಲ್ ಹೋಗೂದು ಈಗ? ಇಲ್ಲಿಗೆ ಯಾಕ್ ಬಂದ್ವಿ?’ ಕೇಳಿದಳು. ನಾಣ್ಯನಿಗೆ ಏನು ಹೇಳಬೇಕು ಗೊತ್ತಾಗಲಿಲ್ಲ. ‘ನಿಂಗೇ ಗೊತ್ತಾಗ್ತದೆ ಸ್ವಲ್ಪ ಇರು’ ಎಂದು ಪಕ್ಕದ ಅಡ್ಡರಸ್ತೆಯಲ್ಲಿ ಅವಳ ಕೈ ಹಿಡಿದು ನಡೆಯತೊಡಗಿದ. ಆ ರಸ್ತೆ ಮುಗಿಯುತ್ತಿದ್ದ ಹಾಗೆಯೇ ಮತ್ತೊಂದು ರಸ್ತೆಗೆ ಹೊರಳಿಕೊಳ್ಳುತ್ತಿದ್ದ. ರಸ್ತೆಯಲ್ಲಿ ದೂರದಲ್ಲಿ ಯಾರಾದರೂ ಬರುತ್ತಿರುವುದು ಅಸ್ಪಷ್ಟವಾಗಿ ಕಾಣಿಸಿದರೆ ಅವನ ಎದೆ ಡವಡವ ಹೊಡೆದುಕೊಳ್ಳಲು ಶುರುವಾಗುತ್ತಿತ್ತು. ಅವನು ದೇವ್ರುವೇ ಆಗಿದ್ದರೆ ಹೇಗೆ ಎದುರಿಸುವುದು ಎಂಬ ಭಯದಲ್ಲಿ ಕಾಲುಗಳು ಸೋಲುತ್ತಿದ್ದವು. ಹತ್ತಿರ ಬಂದಾಗ ಬೇರೆ ಯಾರೋ ಎಂದು ಗೊತ್ತಾಗಿ ಮನಸ್ಸು ಕ್ಷಣಕಾಲ ನಿರಾಳವಾಗುತ್ತಿತ್ತು. ಹಾಗೆಯೇ ಹೀಗೆಯೇ ದೇವ್ರು ನಡೆದುಕೊಂಡು ಬರುವಾಗ ಸಿಕ್ಕಿಬಿಡಲಿ ಎಂದೂ ಆಸೆಯಾಗುತ್ತಿತ್ತು. ಅಲ್ಲೇ ಕಂಡ ಒಂದಿಬ್ಬರ ಬಳಿ, ‘ಇಲ್ಲಿ ದೇವ್ರು ಅಂತ ಇದಾನಾ?’ ಅಂತೆನೋ ಅಸ್ಪಷ್ಟವಾಗಿ ಕೇಳಿದ. ಅವರು, ‘ದೇವ್ರಾ? ಅಂದ್ರೆ ದೇವಸ್ಥಾನನಾ? ಇಲ್ಲೇ ಮುಂದೆ ಹೋಗಿ ಎಡಕ್ಕೆ ತಿರುಗಿ ಹನುಮಂತ ದೇವಸ್ಥಾನ ಇದೆ’ ಎಂದೆಲ್ಲ ಉತ್ತರ ಕೊಟ್ಟಾಗ ಕೇಳುವುದನ್ನು ನಿಲ್ಲಿಸಿದ.
ರಸ್ತೆಯಿಂದ ರಸ್ತೆ ದಾಟಿಕೊಳ್ಳುತ್ತ ಎಷ್ಟು ದೂರ ಬಂದುಬಿಟ್ಟಿದ್ದರೋ, ಇಬ್ಬರೂ ಬೆವರಿನಿಂದ ತೊಯ್ದು ತೊಪ್ಪೆಯಾಗಿದ್ದರು. ‘ಅಪ್ಪಾ, ನಂಗ್ ನಡೀಲಿಕ್ಕಾಗೂದಿಲ್ಲ’ ಎಂದು ರಸ್ತೆ ಪಕ್ಕದ ಚಪ್ಪಡಿ ಕಲ್ಲ ಮೇಲೆ ಕೂತುಬಿಟ್ಟಳು ಲಲಿತೆ. ಅವಳ ಬಾಡಿದ ಮುಖ ನೋಡಿ ನಾಣ್ಯನ ಕರುಳು ಚುರ್ ಅಂತು. ‘ನನ್ನ ಮುಕ್ಳಿಸೊಕ್ಕಿಗೆ ಈ ಎಳೆ ಕೂಸನ್ನು ಎಷ್ಟೆಲ್ಲ ದಣಿಸಿಬಿಟ್ನಲ್ಲಾ’ ಎಂದು ಒಳಗೊಳಗೇ ಹಳಹಳಿಸಿಕೊಂಡ. ಟವೇಲು ತೆಗೆದು ಅವಳ ಮುಖ ಒರೆಸಿ, ಎತ್ತಿ ಹೆಗಲ ಮೇಲೆ ಕೂಡಿಸಿಕೊಂಡ. ‘ಅಪ್ಪಾ ನಿನ್ ತಲೆ ಎಷ್ಟು ಬಿಸಿ ಆಗಿದೆ. ಕುತ್ಗೆ ಪೂರ್ತಿ ಒದ್ದೆ’ ಎಂದಳು. ಸುಮ್ಮನೆ ನಕ್ಕು ಅವರಿವರ ಬಳಿ ಬಸ್ ಸ್ಟ್ಯಾಂಡಿಗೆ ಹೋಗುವ ದಾರಿ ಕೇಳಿ ನಡೆಯತೊಡಗಿದ.
ಬಸ್ ಸ್ಟ್ಯಾಂಡಿಗೆ ಮರಳುವಷ್ಟರಲ್ಲಿ ನಾಣ್ಯನೂ ಸಾಕಷ್ಟು ಹೈರಾಣಾಗಿದ್ದ. ಲಲಿತೆ ಸುಸ್ತಾಗಿ ಅವನ ಹೆಗಲ ಮೇಲೆಯೇ ನಿದ್ದೆಹೋಗಿದ್ದಳು. ಮೆತ್ತಗೆ ಇಳಿಸಿಕೊಂಡ. ಹುಬ್ಬಳ್ಳಿ ಕಡೆಗೆ ಹೋಗುವ ಬಸ್ ಏರಿ ಸೀಟು ಹಿಡಿದು ಲಲಿತೆಯನ್ನು ತೊಡೆಯ ಮೇಲೆ ಮಲಗಿಸಿಕೊಂಡ. ಹೊರಗಿನ ಉರಿಬಿಸಿಲಿನ ಧಗೆಯನ್ನು ಮೀರಿಸುವ ನಿರಾಸೆ ಮನಸೊಳಗೆ ಕೊತಕೊತ ಕುದಿಯುತ್ತಿತ್ತು.
ನಾಣ್ಯನ ಕಣ್ಣಲ್ಲಿನ ಗೊಂದಲ ಹಾಗೇ ಇತ್ತು. ಏನೂ ಮಾತಾಡದೆ ಮನೆಗೆ ಹೋದ. ಅಂದು ರಾತ್ರಿಯಿಡೀ ನಿದ್ದೆಯಾಗಲಿಲ್ಲ ಅವನಿಗೆ. ದೇವ್ರು ಮನೆ ಬಿಟ್ಟು ಹೋದಮೇಲೆ ನಡೆದ ಒಂದೊಂದೇ ದುರಂತಗಳು ಕಣ್ಮುಂದೆ ಬಂದು ಜೀವ ಹಿಂಡತೊಡಗಿದವು.
ಎಲ್ಲೋ ಯಾರು ಯಾರಿಗೋ ಕಣ್ಣಿಗೆ ಬಿದ್ದು ಮಾಯವಾಗುವ ಈ ದೇವ್ರು ನನ್ನ ಕಣ್ಣಿಗೆ ಮಾತ್ರ ಯಾಕೆ ಬೀಳೂದಿಲ್ಲ? ನಾನೇನು ತಪ್ಪು ಮಾಡಿದ್ದೇನೆ? ನಾನೇನು ಅವನ ಮನೆ ಬಿಟ್ಟು ಓಡ್ಸಿಲ್ಲ… ಸಿಕ್ಕರೆ ಅಟ್ಟಾಡಿಸಿಕೊಂಡು ಹೊಡೀತೇನೆ ಅನ್ನೂ ಹಾಗೂ ಇಲ್ಲ. ಒಂದ್ಸಲ, ಒಂದೇ ಒಂದ್ಸಲ ಸಿಕ್ಕಿ, ‘ಅಪ್ಪಾ ನೀನು ಅಯೋಗ್ಯ, ನಿನ್ ಸಂಗ್ತೀಗೆ ಬದೂಕ್ಲಿಕ್ಕಾಗೂದಿಲ್ಲ’ ಅಂತ್ಹೇಳಿ ಮುಖಕ್ಕೆ ಹೊಡ್ದಂಗೆ ಹೇಳಿ ಹೋಗಿದ್ರೂ ಸಾಕಿತ್ತು. ಮಗ ಎಲ್ಲೋ ಆರಾಮಾಗಿದಾನೆ ಅಂದ್ಕೊಂಡು ಇರ್ಬೋದಿತ್ತು. ಈ ತುದಿಮೊದಲಿಲ್ಲದ ಹುಡುಕಾಟನಾದ್ರೂ ಮುಗೀತಿತ್ತು. ತಾನು ಹೀಗೆ ಸಂಕಟದಲ್ಲಿ ಬೇಯಲಿ ಎಂದೇ ಕಣ್ಣಿಗೆ ಬೀಳದೇ ಆಟ ಆಡಿಸುತ್ತಿದ್ದಾನೆಯೇ?
ದೇವ್ರು ಇಲ್ಲೇ ಎಲ್ಲೋ ಅವಿತು ಕೂತು ತನ್ನನ್ನು ಎಡಬಿಡದೆ ನೋಡುತ್ತಿದ್ದಾನೆ ಎಂದು ನಾಣ್ಯನಿಗೆ ತೀವ್ರವಾಗಿ ಅನಿಸತೊಡಗಿತು. ಅವನ ದೃಷ್ಟಿ ತನ್ನ ಬೆನ್ನ ಮೇಲೆಲ್ಲ ಹರಿದಾಡುತ್ತಿರುವ ಅನುಭವವಾಗಿ ಸರಕ್ಕನೆ ಹಿಂತಿರುಗಿದ. ಹಿಂದಿನ ಸೀಟಿನಲ್ಲಿದ್ದ ಕಾಲೇಜು ಹುಡುಗ ಒಮ್ಮೆ ಇವನನ್ನೇ ನೋಡಿ, ಮತ್ತೆ ತಿರುಗಿ ಕಿಟಕಿಯಿಂದ ಹೊರಗೆ ನೋಡತೊಡಗಿದ. ಕಾಲ ಮೇಲಿದ್ದ ಲಲಿತೆ ಒಮ್ಮೆ ಕೊಸರಿ ಮತ್ತೆ ಮಲಗಿದಳು.
ತಾನು ಇತ್ತ ತಿರುಗಿದ್ದೇ ಅತ್ತ ಅವಿತುಕೊಂಡು, ಅತ್ತ ತಿರುಗಿದ್ದೇ ಇತ್ತ ಅವಿತುಕೊಂಡು ದೇವ್ರು ತನ್ನನ್ನು ನೋಡುತ್ತಿದ್ದಾನೆ ಎಂಬ ಭಾವ ನಾಣ್ಯನಲ್ಲಿ ವಿಚಿತ್ರ ರೊಚ್ಚು ಹುಟ್ಟಿಸಿತು. ಮುಖದ ಬೆವರು ಒರೆಸಿಕೊಂಡು ನೆಟ್ಟಗೆ ಕೂತ. ಬಸ್ಸು ಹುಬ್ಬಳ್ಳಿ ಬಸ್ ಸ್ಟ್ಯಾಂಡಿನಲ್ಲಿ ಬಂದು ನಿಂತಿತು. ಲಲಿತೆಯನ್ನು ಎತ್ತಿ ಹೆಗಲಿಗೆ ಹಾಕಿಕೊಂಡು ಗತ್ತಿನಿಂದಲೇ ಕೆಳಗಿಳಿದ. ಯಾರೋ ತನ್ನನ್ನು ಗಮನಿಸುತ್ತಿದ್ದಾರೆ ಎಂಬ ಸಂಗತಿಯೇ ಅವನ ನಡೆಯನ್ನು ಬದಲಿಸಿಬಿಟ್ಟಿತ್ತು. ಮೀಸೆಯಂಚಲ್ಲಿ ಹಮ್ಮಿನ ನಗು ಮೂಡಿತ್ತು. ಬೆಳ್ಳಗಾಗುತ್ತಿದ್ದ ಮೀಸೆಯನ್ನೊಮ್ಮೆ ಸವರಿಕೊಂಡ. ಇದುವರೆಗಿನ ಹಿಂಜರಿಕೆ ಅಲ್ಲೇ ಬಿಚ್ಚಿಟ್ಟು, ತಲೆಯೆತ್ತಿ, ಎದೆಯುಬ್ಬಿಸಿ ಗಟ್ಟಿ ಹೆಜ್ಜೆಯಿಟ್ಟು ನಡೆಯತೊಡಗಿದ.
ಲಲಿತೆ ಎಚ್ಚರಗೊಂಡು ಕಣ್ಣುಜ್ಜತೊಡಗಿದಳು. ಕೆಳಗಿಳಿಸಿ ಕೈ ಹಿಡಿದು ನಡೆಸಿಕೊಂಡು ಹೊರಟ. ‘ಅಪ್ಪಾ, ಇಲ್ ಹೇಗ್ ಬಂದ್ವಿ ನಾವು? ನಂಗೆ ಗೊತ್ತೇ ಆಗ್ಲಿಲ್ಲ… ಬಸ್ಸಲ್ಲಿ ಏನೂ ನೋಡ್ಲಿಕ್ಕೆ ಆಗ್ಲಿಲ್ಲ’ ಎಂದೆಲ್ಲ ಚಟಪಟ ಮಾತಿಗೆ ತೊಡಗಿದ ಲಲಿತೆ, ಅಪ್ಪನ ಗಂಭೀರ ಮುಖ ನೋಡಿ ತೆಪ್ಪಗಾದಳು.
ಈ ಸಲ ರಸ್ತೆ ಬದಿಯ ಅಂಗಡಿಯ ಕಡೆಗೆ ಕಣ್ಣನ್ನೂ ಹಾಯಿಸದೆ, ರಸ್ತೆ ದಾಟಿ ಬಸ್ ಸ್ಟ್ಯಾಂಡ್ ಎದುರಿಗಿದ್ದ ‘ಹೋಟೆಲ್ ಅಯೋಧ್ಯೆ’ ಹೊಕ್ಕ. ಹೊರಗಿನಿಂದ ಸರಿಯಾಗಿ ಕಾಣಿಸುವಂಥ ಜಾಗವನ್ನು ನೋಡಿ ಕುರ್ಚಿ ಹಿಡಿದು ಕೂತು ಎರಡು ಊಟಕ್ಕೆ ಆರ್ಡರ್ ಮಾಡಿದ.
ಲಲಿತೆ ಅರ್ಧ ಊಟ ಮಾಡಿ, ‘ನಂಗೆ ಹೊಟ್ಟೆ ತುಂಬ್ತು’ ಎಂದಳು. ನಾಣ್ಯ ತನ್ನ ಊಟ ಮುಗಿಸಿ, ‘ಅನ್ನ ಹಾಳ್ ಮಾಡ್ಲಿಕ್ಕಾಗಾ ಮಗಾ’ ಎನ್ನುತ್ತ ಅವಳ ತಟ್ಟೆಯಲ್ಲಿ ಉಳಿದಿದ್ದನ್ನೂ ಉಂಡು ಮುಗಿಸಿದ. ನಂತರ ಐಸ್ ಕ್ರೀಮ್ ತರಿಸಿಕೊಂಡರು. ಇದನ್ನು ಮಾತ್ರ ಲಲಿತೆ ಅಪ್ಪನ ಪಾಲಿನದ್ದನ್ನೂ ತಾನೇ ತಿಂದಳು.
ಹೊಟ್ಟೆ ತುಂಬಿದಾಗ ನಾಣ್ಯನ ಕಣ್ಣು ಎಳೆಯತೊಡಗಿತು. ಲಲಿತೆ ಈಗಷ್ಟೇ ನಿದ್ದೆ ಮುಗಿಸಿ ಎದ್ದಿದ್ದರಿಂದ ಉತ್ಸಾಹದಲ್ಲಿದ್ದಳು. ಇಬ್ಬರು ಹೋಟೆಲಿನಿಂದ ಹೊರಬಿದ್ದು ರಸ್ತೆ ಬದಿಗೆ ನಡೆಯತೊಡಗಿದರು. ನಾಣ್ಯ ಸರಕ್ಕನೆ ಆಗಾಗ ತಿರುಗಿ ನೋಡುತ್ತಿದ್ದ. ಹಾಗೆ ನೋಡಿದಾಗೆಲ್ಲ ಯಾರೋ ತನ್ನ ಕಣ್ಣಳತೆಯಿಂದ ತಪ್ಪಿಸಿಕೊಂಡು ಎಲ್ಲೋ ಅಡಗಿಕೊಂಡ ಹಾಗೆ ಅವನಿಗೆ ಭಾಸವಾಗುತ್ತಿತ್ತು.
ನಡೆಯುತ್ತ ತುಸು ದೂರದಲ್ಲಿದ್ದ ಸವಿತಾ ಥಿಯೇಟರ್ ಎದುರಿಗೆ ಬಂದರು. ಯಾವುದೋ ಸಿನಿಮಾದ ದೊಡ್ಡ ಪೋಸ್ಟರ್ ಹಾಕಿದ್ದರು. ಲಲಿತೆಯ ಕೈ ಹಿಡಿದು ಒಳಹೊಕ್ಕ. ಟಿಕೆಟ್ ಕೊಡವ ಜಾಗದಲ್ಲಿ ಸಣ್ಣ ಕ್ಯೂ ಇತ್ತು. ಅಲ್ಲಿ ಹೋಗಿ ನಿಂತ. ಕ್ಯೂನಲ್ಲೂ ತನಗಿಂತ ತುಸು ಹಿಂದೆ ನಿಂತು ಯಾರೋ ತನ್ನನ್ನು ನೋಡುತ್ತಿದ್ದಾರೆ ಅನಿಸುತ್ತಿತ್ತು. ಲಲಿತೆ ‘ಅಪ್ಪಾ ಇಲ್ಯಾಕೆ ಬಂದ್ವಿ?’ ಕೇಳಿದಳು. ‘ಇದರಲ್ಲಿ ದೊಡ್ಡ ದೊಡ್ಡ ಮನುಷ್ಯರಿರ್ತಾರೆ. ಪಿಚ್ಚರು ಹಾಕ್ತಾರೆ’ ಎಂದ. ಲಲಿತೆಯ ಕಣ್ಣುಗಳು ಖುಷಿಯಿಂದ ಅಗಲವಾದವು. ‘ಹ್ಮೂ… ನಂಗೊತ್ತು. ದಿವ್ಯಕ್ಕ ಯಲ್ಲಾಪುರದಲ್ಲಿ ನೋಡಿದ್ಲಂತೆ’ ಎಂದು ನಿಂತಲ್ಲೇ ಕುಣಿದಾಡಿದಳು.
ತನ್ನ ಸರತಿ ಬಂದಾಗ ಬಾಯಿತಪ್ಪಿ ‘ಮೂರು ಟಿಕೆಟ್’ ಎಂದು ಬಂದದ್ದನ್ನು ನಾಲಿಗೆ ಕಚ್ಚಿ, ‘ಎರಡು’ ಎಂದು ಸರಿಪಡಿಸಿಕೊಂಡ. ಸಿನಿಮಾ ಆಗಲೇ ಶುರುವಾಗಿತ್ತು. ಚಿತ್ರಮಂದಿರದ ಒಳಗೆ ಪೂರ್ತಿ ಕತ್ತಲಿತ್ತು. ಬಾಗಿಲ ಬಳಿ ನಿಂತಿದ್ದ ಹುಡುಗ ಟಾರ್ಚ್ ತೆಗೆದುಕೊಂಡು ಹೋಗಿ ಅವರನ್ನು ಸೀಟಿನಲ್ಲಿ ಕೂಡಿಸಿ ಬಂದ.
ದೊಡ್ಡ ಧ್ವನಿ, ದೊಡ್ಡ ದೊಡ್ಡ ಚಿತ್ರಗಳು, ಸುತ್ತಲೆಲ್ಲ ಹುಚ್ಚೆದ್ದು ಕುಣಿಯುವ ಜನರನ್ನು ನೋಡಿ ಲಲಿತೆಗೆ ಭಯವಾಯ್ತು. ನಾಣ್ಯನ ಮಡಿಲಲ್ಲಿ ಮುಖ ಹುದುಗಿಸಿ, ಇಷ್ಟಿಷ್ಟೇ ಕಣ್ಣು ತೆರೆದು ನೋಡುತ್ತಿದ್ದಳು. ಅವಳ ಎರಡೂ ಕೈಗಳು ಕಿವಿಗಳನ್ನು ಮುಚ್ಚಿಕೊಂಡಿದ್ದವು.
ಇಂಟರ್ವಲ್‌ನಲ್ಲಿ ಇಬ್ಬರೂ ಹೊರಬಂದು ಮಸಾಲೆ ಶೇಂಗಾ ತೆಗೆದುಕೊಂಡು ತಿಂದರು. ನಾಣ್ಯ ಹಾಪ್ ಚಾ ಕುಡಿದ. ‘ಅಪ್ಪಾ, ಮತ್ತೆ ಒಳಗೆ ಹೋಗೂದು ಬ್ಯಾಡ. ಎದೆ ಡವಡವ ಆಗ್ತದೆ’ ಎಂದಳು ಲಲಿತೆ. ನಾಣ್ಯನಿಗೂ ಪಿಚ್ಚರು ಸಾಕು ಎನಿಸಿತ್ತು. ಇಬ್ಬರೂ ಹೊರಬಿದ್ದು ಮತ್ತೆ ಬಸ್ ಸ್ಟ್ಯಾಂಡಿನ ಕಡೆಗೆ ಬಂದರು. ಬಿಸಿಲಿನ್ನೂ ಇಳಿದಿರಲಿಲ್ಲ. ನಾಣ್ಯನಿಗೆ ಈಗಲೂ ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಅಂತಲೇ ಅನಿಸುತ್ತಿತ್ತು. ಅದು ದೇವ್ರುವೇ ಎಂದು ಅವನ ಮನಸ್ಸು ಖಚಿತವಾಗಿ ಹೇಳುತ್ತಿತ್ತು. ‘ಮನೆಗೆ ವಾಪಸ್ ಹೋಗ್ತೇವೆ ಎಂದು ಅಂದುಕೊಂಡಿರ್ತಾನೆ’ ಎಂದು ತನಗೆ ತಾನೇ ಸಣ್ಣದಾಗಿ ಹೇಳಿಕೊಂಡ. ಅದರ ಹಿಂದೆಯೇ ಅವನ ತಲೆಯಲ್ಲಿ ವಿಚಿತ್ರವಾದ ಆಲೋಚನೆಯೊಂದು ಹೊಳೆದುಹೋಯ್ತು.
ಬಸ್ ಸ್ಟ್ಯಾಂಡಿಗೆ ಬಂದು ಅಲ್ಲೇ ನಿಂತಿದ್ದ ಒಂದು ಮಿನಿ ಬಸ್ ಎದುರಿಗೆ ಹೋಗಿ ಕಂಡಕ್ಟರ್ ಬಳಿ, ‘ಎಲ್ಲಿಗೆ ಹೋಗ್ತದೆ ಇದು?’ ಕೇಳಿದ. ‘ನೃಪತುಂಗ ಬೆಟ್ಟʼ ಎಂದ. ‘ಎಷ್ಟೊತ್ತಾಗ್ತದೆ?’ ಮತ್ತೊಂದು ಪ್ರಶ್ನೆ ಕೇಳಿದ. ‘ಹದಿನೈದು ನಿಮಿಷ’ ಎಂಬ ಉತ್ತರ ಬಂದಿದ್ದೇ ಹಿಂದು ಮುಂದು ನೋಡದೆ ಲಲಿತೆಯ ಕೈ ಹಿಡಿದು ಬಸ್ ಹತ್ತಿ ಕೂತುಬಿಟ್ಟ. ತನ್ನ ಹಿಂಬಾಲಿಸುತ್ತಿರುವ ದೇವ್ರುಗೆ ಈಗ ಎಂಥ ಕಕ್ಕಾವಿಕ್ಕಿಯಾಗಿರಬಹುದು ಎಂದು ಯೋಚಿಸಿಯೇ ನಗು ಬಂತು.
ಮತ್ತೆ ಇಪ್ಪತ್ತು ನಿಮಿಷದಲ್ಲಿ ಅವರು ನೃಪತುಂಗ ಬೆಟ್ಟದ ತುದಿಯಲ್ಲಿದ್ದರು. ಆಗಲೇ ಸೂರ್ಯ ಪಶ್ಚಿಮಕ್ಕೆ ಬಾಗಿ, ಬಿಸಿಲಿನ ಪ್ರಖರತೆ ಕುಂದಲಾರಂಭಿಸಿತ್ತು.
ಬೆಟ್ಟ ಏರುವ ಹಾದಿಯಲ್ಲಿ ಮೊದಲಿಗೆ ಒಂದು ಕಮಾನಿತ್ತು. ಅದರ ಕೆಳಗೇ ಟಿಕೆಟ್ ಕೌಂಟರಿತ್ತು. ನಾಣ್ಯ ಐದು ರೂಪಾಯಿ ಕೊಟ್ಟು ಟಿಕೆಟ್ ತೆಗೆದುಕೊಂಡ. ಲಲಿತೆಗೆ ಉಚಿತವಾಗಿ ಒಳಬಿಟ್ಟರು.
ದಾರಿಯುದ್ದಕ್ಕೂ ದೀಪಗಳಲ್ಲಿ ಅಲಂಕರಿಸಿದ್ದರು. ಮೇಲಿನಿಂದ ಮೈಕಿನಲ್ಲಿ ಭಕ್ತಿಗೀತೆ ಕೇಳಿಸುತ್ತಿತ್ತು. ಒಪ್ಪವಾಗಿ ಕತ್ತರಿಸಿದ ಗಿಡಗಳನ್ನು ಸವರುತ್ತ ಲಲಿತೆ ಓಡಾಡಿದಳು. ನಾಣ್ಯ, ನಡೆಯುತ್ತಲೇ ರಸ್ತೆಯಂಚಿಗೆ ಜರುಗಿ ಕಣ್ಣು ಹಾಯಿಸಿದ. ಇಡೀ ಹುಬ್ಬಳ್ಳಿ ವಿಶಾಲ ವಸ್ತ್ರದ ಮೇಲೆ ಚಿಕ್ಕ ಚಿಕ್ಕ ಬೆಂಕಿಪೊಟ್ಟಣಗಳನ್ನು ಉದುರಿಸಿ ಬಿಟ್ಟಂತೆ ಕಾಣಿಸುತ್ತಿತ್ತು. ಬೆಟ್ಟದ ಬುಡದಲ್ಲಿ ಬೈತಲೆ ತೆಗೆದ ಹಾಗೆ ಹಾದು ಹೋದ ರೈಲು ಹಳಿ, ಅತ್ತಲಿಗೆ, ಸೂರ್ಯನ ಸಂಜೆಬೆಳಕಲ್ಲಿ ಮಿರಿಮಿರಿ ಹೊಳೆಯುತ್ತಿರುವ ಕೆರೆ, ಹಾವು ಹರಿದಂಥ ರಸ್ತೆಯಲ್ಲಿ ಮೆಲ್ಲಗೆ ತೆವಳುತ್ತಿರುವ ವಾಹನಗಳು… ನಾಣ್ಯನಿಗೆ ಮತ್ತೊಂದೇ ಜಗತ್ತಿಗೆ ಬಂದಂತೆ ಭಾಸವಾಯ್ತು.
ಈ ಲಕ್ಷ ಲಕ್ಷ ಕಡ್ಡಿ ಪೆಟ್ಟಿಗೆಗಳಲ್ಲಿ ಯಾವುದೋ ಒಂದರಲ್ಲಿ ನನ್ನ ದೇವ್ರು ರಾತ್ರಿ ಹಾಸಿಗೆ ಬಿಡಿಸಿ ಮಂಡಿ ನಡುವೆ ಕೈಯಿಟ್ಟುಕೊಂಡು ಮಲಗುತ್ತಾನೆ. ಬೆಳಿಗ್ಗೆ ಎದ್ದು ಗಡಿಬಿಡಿಯಲ್ಲಿ ಸಿದ್ಧನಾಗಿ, ಅಜ್ಜಿಯ ಬಿಳಿ ಕೂದಲಂಥ ರಸ್ತೆಯಲ್ಲಿ ಆಮೆಯಂತೆ ಹರಿಯುತ್ತಿರುವ ಯಾವುದೋ ಬಸ್ಸು ಹಿಡಿದು ಇನ್ನೆಲ್ಲೋ ಇಳಿಯುತ್ತಾನೆ. ಶಿಸ್ತಾಗಿ ಯಾರ ಜೊತೆಗೋ ಮಾತಾಡುತ್ತ, ಯಾರ ಜೊತೆಗೋ ಊಟ ಮಾಡುತ್ತ, ನಗೆಯಾಡುತ್ತ ತನ್ನ ಕಣ್ಣೆದುರಿನ ಈ ವೃತ್ತದಲ್ಲಿಯೇ ಅವನು ಬದುಕಿದ್ದಾನೆ ಎಂಬ ಸಂಗತಿಯೇ ನಾಣ್ಯನ ಮನಸಲ್ಲಿ ಭಾವುಕ ಝರಿ ಉಕ್ಕಿಸಿತು. ಅವನು ಎಷ್ಟೇ ತಪ್ಪಿಸಿಕೊಂಡು ಅಡ್ಡಾಡಿದರೂ ಇಲ್ಲಿಂದ ನಾನು ನೋಡಿಯೇ ನೋಡಿರುತ್ತೇನೆ ಎಂಬ ಭಾವದಲ್ಲಿ ಮನಸ್ಸು ಭಾರವಾಯ್ತು.
ಪಕ್ಕ ಬಂದು ಕೈ ಜಗ್ಗುತ್ತಿದ್ದ ಲಲಿತೆಯನ್ನೂ ಹಿಡಿದು ಎತ್ತಿ ತೋರಿಸಿದ. ‘ಅಯ್ಯೋ… ಅಪ್ಪಾ… ಎಲ್ಲಾ ಎಷ್ಟು ಸಣ್ಣ ಸಣ್ಣ…’ ಎಂದು ಖುಷಿಯಿಂದ ಕೇಕೆ ಹಾಕಿದಳು. ನಾಣ್ಯ ಅವಳ ಕಣ್ಣಿನಲ್ಲಿ ಮೂಡಿನಿಂತಿದ್ದ ವಿಸ್ಮಯವನ್ನೇ ಮನಸೊಳಗೆ ಇಳಿಬಿಟ್ಟುಕೊಳ್ಳುತ್ತ ನಿಂತ.
ನಾಣ್ಯ ಎತ್ತಿ ಹಿಡಿದಾಗಲೇ ಲಲಿತೆಗೆ ತುಸು ದೂರದಲ್ಲಿದ್ದ ಕಿಂಡರ್ ಗಾರ್ಡನ್ ಕಾಣಿಸಿತು. ‘ಅಪ್ಪಾ ಜೋಕಾಲಿ’ ಎಂದು ಚೀರಿದಳು. ನಾಣ್ಯ ಅವಳನ್ನು ನಿಧಾನಕ್ಕೆ ಇಳಿಸಿ, ಅತ್ತ ಕೊಂಡೊಯ್ದ. ಅಲ್ಲಿ ಸುಮಾರು ಮಕ್ಕಳು ಆಟ ಆಡುತ್ತಿದ್ದರು. ಲಲಿತೆ ಅವರ ಆಟವನ್ನು ಆಸೆಗಣ್ಣಿನಿಂದ ನೋಡುತ್ತ ನಿಂತಳು. ಒಂದು ಹುಡುಗಿ ಇವಳತ್ತ ನೋಡಿ ಕೈಬೀಸಿ ಕರೆದಳು. ಲಲಿತೆ ಅಪ್ಪನನ್ನು ನೋಡಿದಳು. ನಾಣ್ಯ, ‘ಹೋಗು… ಆಡು’ ಎಂದು ಹೆಗಲು ತಟ್ಟಿದ. ಮೆಲ್ಲಗೆ, ‘ಯಾರೂ ಬೈಯೂದಿಲ್ವ?’ ಕೇಳಿದಳು. ‘ಇಲ್ಲ ಹೋಗು’ ಎಂದ. ನಿಧಾನಕ್ಕೆ ಒಳಗೆ ಹೆಜ್ಜೆ ಇಟ್ಟು ಹೋಗಿ ಒಂದು ಜೋಕಾಲಿಯಲ್ಲಿ ಕೂತು ತೂಗಿದಳು. ಮುಖ ಖುಷಿಯಿಂದ ಅಗಲವಾಯ್ತು. ಮೆಲ್ಲಗೆ ನಗುತ್ತ, ಕಾಲಲ್ಲಿ ಜೀಕುತ್ತಲೇ ಹೋದಳು.
ನಾಣ್ಯ ಅವಳ ಖುಷಿಯನ್ನು ಕಣ್ತುಂಬಿಕೊಂಡು ನಿಂತ. ಬೆಳಕು ಮೆಲ್ಲಮೆಲ್ಲಗೆ ತೆಳುವಾಗತೊಡಗಿತ್ತು.
ತುಸು ದೂರದಲ್ಲಿ ಒಂದು ವೇದಿಕೆ ಹಾಕಲಾಗಿತ್ತು. ಅದರಲ್ಲಿ ಚಿಕ್ಕ ವಯಸ್ಸಿನ ಹುಡುಗರು ಭಕ್ತಿಗೀತೆ ಹೇಳುತ್ತಿದ್ದರು. ಅದರ ಮುಂದೆ ನೂರಾರು ಕುರ್ಚಿ ಹಾಕಿದ್ದರೂ ನಾಲ್ಕೈದು ಜನರು ಮಾತ್ರ ಕೂತಿದ್ದರು. ನಾಣ್ಯನಿಗೂ ನಿಂತು ನಿಂತು ಕಾಲು ನೋಯತೊಡಗಿತು. ಲಲಿತೆಗೆ, ‘ಅಲ್ಲಿ ಕೂತಿರ್ತೇನೆʼ ಎಂದು ಸನ್ನೆ ಮಾಡಿ ಹೇಳಿ, ವೇದಿಕೆಯ ಎದುರಿನ ಕುರ್ಚಿಗಳಲ್ಲಿ ಕೊನೆಯ ಸಾಲಿಗೆ ಹೋಗಿ ಕೂತ. ಯಾರೋ ಬಂದು, ‘ಮುಂದೆ ಬನ್ನಿ… ಮುಂದೆ ಬನ್ನಿ…’ ಎಂದು ಕರೆದರು. ನಾಣ್ಯ, ಟವೆಲು ತೆಗೆದು ಕೈಯಲ್ಲಿ ಹಿಡಿದು ತುಸು ಬಾಗಿ ನಿಂತು, ‘ಬ್ಯಾಡ ವಡ್ಯಾ… ಇಲ್ಲೇ ಚಲೋ ಕಾಣ್ತದೆ’ ಎಂದು ಕೂತ.
ತುಸು ಹೊತ್ತಿಗೆ ಆ ಹುಡುಗರು ಅಲ್ಲಿಂದ ಹೋಗಿ ವೃದ್ಧ ಹೆಂಗಸೊಬ್ಬಳು ಬಂದು ಕೂತಳು. ಅವಳ ಪಕ್ಕ ಇಬ್ಬರು ಹೆಂಗಸರು ತಂಬೂರಿ ಹಿಡಿದು ಕೂತರು. ಅತ್ತಿತ್ತ ಹಾರ್ಮೋನಿಯಂ, ತಬಲಾದವರೆಲ್ಲ ಬಂದು ಆ ಹೆಂಗಸಿಗೆ ನಮಸ್ಕರಿಸಿ ಕೂತರು.
ಆ ಹೆಂಗಸನ್ನು ನೋಡಿದಾಗ ನಾಣ್ಯನಿಗೆ ಗುಲಾಬಜ್ಜಿ ನೆನಪಾಯ್ತು. ಕವಳ ಹಾಕಿದ ಬಾಯಿ, ಕಿಟ್ಟುಗಟ್ಟಿದ ಹಲ್ಲುಗಳು, ತಲೆಕೂದಲು ಕೆದರಿದ್ದು ಲಕ್ಷ್ಯವೇ ಇಲ್ಲದಂತೆ ವೇದಿಕೆ ಎದುರಿನ ಶೂನ್ಯದಲ್ಲಿ ಏನೋ ಕಾಣುತ್ತಿರುವಂತೆ ದಿಟ್ಟಿಸುತ್ತಿದ್ದಳು. ಸುಕ್ಕುಗಟ್ಟಿದ ಮುಖದಲ್ಲಿ ದೊಡ್ಡದಾಗಿ ಕಾಣುವ ಕುಂಕುಮ, ಜೋತುಬಿದ್ದ ಮೂಗಿನಲ್ಲಿ ಹೊಳೆಯುವ ನತ್ತು, ಕಿವಿಯಲ್ಲಿ ಓಲಾಡುವ ಓಲೆಗಳು….
ನಿಧಾನಕ್ಕೆ ಧ್ವನಿ ತೆಗೆದು ಆಲಾಪವೆತ್ತಿದಳು. ಅವಳ ಧ್ವನಿ ಕೇಳಿದ್ದೇ ಏನಾಯಿತೋ ಗೊತ್ತಾಗಲಿಲ್ಲ. ಯಾರೋ ಎದೆಯ ಒಳಗೇ ಕೈ ಹಾಕಿದಂತಾಗಿ ಕಲುಕಿಹೋದ. ತುಂಬಿದ ಹೊಂಡದಿಂದ ನೀರು ಇಷ್ಟಿಷ್ಟೇ ಉಕ್ಕಿ ಹರಿಯುವಂತೆ ಶುರುವಾದ ಧ್ವನಿ ರಭಸ ಹೆಚ್ಚಿಸಿಕೊಳ್ಳುತ್ತ ಹೋಯಿತು. ನಾಣ್ಯ ಎದೆ ತಳಮಳಿಸತೊಡಗಿತು. ಅಲ್ಲಿಂದ ಎದ್ದು ಓಡಿಹೋಗೋಣ ಅನಿಸಿತು. ಆದರೆ ಕಾಲು ಎತ್ತಿಡಲೇ ಸಾಧ್ಯವಾಗಲಿಲ್ಲ. ಎದೆಯನ್ನು ಬಗೆದು ನೋವಿನ ಪದರಗಳನ್ನೆಲ್ಲ ಒಂದೊಂದಾಗಿ ಸುಲಿದು ತೆಗೆದ ಹಾಗೆ, ಸಂಕಟ ತಡೆಯಲಾಗದೆ ಕೂತಲ್ಲೇ ಕೈಕಾಲು ಗಟ್ಟಿಸಿಕೊಂಡ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಮತ್ತೆ ಸರ್ರನೆ ಮೇಲಕ್ಕೆ ಅಷ್ಟೇ ವೇಗವಾಗಿ ನೆಲಕ್ಕೆ… ಮುದುಕಿಯ ಕೈಯ ಚಲನೆಯ ಹಾಗೇ ಹರಿಯುತ್ತಿದ್ದ ಧ್ವನಿ ನಾಣ್ಯನನ್ನು ಸೆಳೆದುಕೊಂಡು ಎಲ್ಲೆಲ್ಲೋ ತೇಲಾಡತೊಡಗಿತು. ಏನಿದು? ಯಾಕೆ ಹೀಗಾಗುತ್ತಿದೆ? ನನಗೇನಾಗುತ್ತಿದೆ ಎಂಬಿತ್ಯಾದಿ ಯಾವ ಪ್ರಶ್ನೆಯನ್ನೂ ಎತ್ತುವ ಶಕ್ತಿ ಇಲ್ಲದೆ, ಛಿದ್ರವಾಗಿ ಬಿದ್ದ ರೋಗಿ ವೈದ್ಯರಿಗೆ ಪೂರ್ತಿ ತನ್ನ ತಾನು ಒಪ್ಪಿಸಿಕೊಳ್ಳುವ ಹಾಗೆ ನಾಣ್ಯ ಆ ಧ್ವನಿಗೆ ತನ್ನನ್ನು ತಾನು ಒಪ್ಪಿಸಿಕೊಂಡ. ಕಣ್ಣಿಂದ ದಳ ದಳ ನೀರು ಸುರಿಯತೊಡಗಿತು. ಎದೆಯಲ್ಲಿ ಶತಮಾನಗಳಿಂದ ಕಟ್ಟಿದ್ದ ಗಂಟುಗಳೆಲ್ಲ ಒಂದೊಂದಾಗಿ ಬಿಚ್ಚಿಕೊಳ್ಳುತ್ತ ಹೋದ ಹಾಗೆ ಹಗುರಾದ. ತನಗಾಗುತ್ತಿರುವುದು ನೋವೇ ಖುಷಿಯೇ ಎಂದೇ ತಿಳಿಯದಾಯಿತು. ಕಣ್ಣು ಮುಚ್ಚಿ ಮುದುಕಿಯ ಧ್ವನಿಯ ಚುಂಗು ಹಿಡಿದು ಹಾರಾಡತೊಡಗಿದ.
ಆಕಾಶದಲ್ಲಿ ಹಾರಾಡುತ್ತಿದ್ದ ಹಕ್ಕಿಯೊಂದು ಮೆಲ್ಲನಿಳಿದು ಗೂಡಿರುವ ಕೊಂಬೆಗೆ ಕೂರುವಂತೆ ಗಿರಕಿ ಹೊಡೆಯುತ್ತ ಹೊಡೆಯುತ್ತ ಮುದುಕಿ ಗಾಯನ ಮುಗಿಸಿದಾಗ ನಾಣ್ಯ ಕಣ್ತೆರೆದ. ಸುತ್ತಲೆಲ್ಲ ಕತ್ತಲಾಗಿತ್ತು. ಒಬ್ಬನೇ ಕೂತಿದ್ದ ಸಾಲಿನಲ್ಲಿ ಈಗ ಕಿಕ್ಕಿರಿದು ಜನ ಸೇರಿದ್ದರು. ಕುರ್ಚಿಯಲ್ಲಿ ಜಾಗ ಸಾಲದೆ ಹಿಂದೆ ನಿಂತು ನೋಡುತ್ತಿದ್ದರು. ಎಷ್ಟು ಹೊತ್ತಿಗೋ ಲಲಿತೆ ಆಟ ಮುಗಿಸಿ ಬಂದು ನಾಣ್ಯನ ಪಕ್ಕ ಕೂತಿದ್ದಳು. ಈ ಯಾವವೂ ನಾಣ್ಯನ ಪರಿವೆಯೇ ಬಂದಿರಲಿಲ್ಲ. ಕಳೆದ ಕೆಲವು ಕಾಲ ಅವನು ಎಲ್ಲಿದ್ದ, ಏನು ಅನುಭವಿಸಿದ ಎಂದು ಹೇಳಲು ಅವನಲ್ಲಿ ಮಾತುಗಳಿರಲಿಲ್ಲ. ಮುದುಕಿ ಕೂತಲ್ಲೇ ಕೈ ಮುಗಿದಳು. ಜನರ ಚಪ್ಪಾಳೆ ಆಕಾಶ ಮುಟ್ಟಿತು.
ನಾಣ್ಯನ ಕಣ್ಣ ತೇವವಿನ್ನೂ ಆರಿರಲಿಲ್ಲ. ಲಲಿತೆಯ ಕೈ ಹಿಡಿದು, ಜನರ ನಡುವೆ ದಾರಿ ಮಾಡಿಕೊಂಡು ರಸ್ತೆಗೆ ಬಂದು ನಿಂತ. ‘ಅಪ್ಪಾ… ಅಲ್ನೋಡು…’ ಲಲಿತೆ ಹೆಚ್ಚುಕಮ್ಮಿ ಚೀರಿಯೇ ಬಿಟ್ಟಳು. ನಾಣ್ಯ ನೋಡಿದ. ಹಗಲಲ್ಲಿ ಬೆಂಕಿಪೊಟ್ಟಣ ಚೆಲ್ಲಿದಂತೆ ಕಾಣುತ್ತಿದ್ದ ಜಾಗದಲ್ಲೀಗ ಲಕ್ಷ ಲಕ್ಷ ಬೆಂಕಿಕಡ್ಡಿಗಳು ಒಟ್ಟೊಟ್ಟಿಗೇ ಹೊತ್ತಿ ಉರಿಯುತ್ತಿರುವಂತೆ ಕಾಣುತ್ತಿದ್ದವು. ಸೂಡಿಯ ಕಿಡಿಗಳು ಸುತ್ತೆಲ್ಲ ಉದುರಿದಂತೆ, ತೆಳ್ಳಗೆ ಚಲಿಸುತ್ತಿರುವ ವಾಹನಗಳೂ ಕಿಡಿಯ ಸೂಡಿ ಹಿಡಿದು ಹೊರಟಿರುವಂತೆ, ಈ ದೃಶ್ಯವನ್ನು ಚಂದ್ರನೂ ಮಂಕಾಗಿ ನೋಡುತ್ತಿರುವಂತೆ… ನಾಣ್ಯ ಮತ್ತು ಲಲಿತೆ ಇಬ್ಬರೂ ಮಾತೇ ಇಲ್ಲದೆ ಸುತ್ತೆಲ್ಲ ನೋಡಿಯೇ ನೋಡಿದರು… ಆ ದಿನ, ಆ ಕ್ಷಣ ಇನ್ಯಾವತ್ತೂ ಬರಲಾರದು ಎಂಬಂತೆ, ಲಲಿತೆಗೂ ನಾಣ್ಯನಿಗೂ ಯಾವ ವ್ಯತ್ಯಾಸವೂ ಇಲ್ಲವೆಂಬಂತೆ ಬೆರಗಿನಲ್ಲಿ ನೋಡಿದರು.
ಕೊನೆಗೆ ಎಚ್ಚರಿಸಿದ್ದು ಲಲಿತೆಯೇ. ‘ಅಪ್ಪಾ, ಈವತ್ತು ಮನೆಗೆ ಹೋಗೂದಿಲ್ವ? ರಾತ್ರಿ ಆಯ್ತಲ್ವಾ?’ ಎಂದಳು. ನಾಣ್ಯ ನಕ್ಕು ಅವಳ ಕೈ ಹಿಡಿದು ಹೊರಟ. ಹೊರಗೆ ಮಿನಿಬಸ್ಸು ಕಾಯುತ್ತಿತ್ತು. ಹತ್ತಿ ಕೂತರು. ಮತ್ತರ್ಧ ಗಂಟೆಯಲ್ಲಿ ಬಸ್ಸು ಇವರಿಬ್ಬರನ್ನೂ ಬಸ್ ಸ್ಟ್ಯಾಂಡಿನಲ್ಲಿ ಇಳಿಸಿ ಹೋದರೂ ಅವರ ಕಣ್ಣಲ್ಲಿನ್ನೂ ತಾವು ಕಂಡ ದೃಶ್ಯದ ಬೆರಗು ಉಳಿದಿತ್ತು. ಪಕ್ಕದ ಗೂಡಂಗಡಿಯಲ್ಲಿ ಮಂಡಕ್ಕಿ- ಮಿರ್ಚಿ ತಿಂದರು. ‘ಹಾ… ಹಾ…’ ಎಂದು ಖಾರಕ್ಕೆ ಉಸಿರುಬಿಡುತ್ತಿದ್ದ ಲಲಿತೆಗೆ ಲಸ್ಸಿ ಕುಡಿಸಿ ತಾನು ಚಾ ಕುಡಿದ.
‘ಕಾರವಾರ್ ಕಾರವಾರ್’ ಎಂದು ಬಸ್ಸಿನ ಕಂಡಕ್ಟರ್ ಕೂಗುತ್ತಿರುವುದು ಕೇಳಿಸಿತು. ಲಗುಬಗೆಯಿಂದ ದುಡ್ಡುಕೊಟ್ಟು ಅತ್ತ ಓಡಿದರು. ಇವರನ್ನು ಹತ್ತಿಸಿಕೊಳ್ಳಲಿಕ್ಕಾಗಿಯೇ ಎಂಬಂತೆ ನಿಂತಿದ್ದ ಬಸ್ಸು, ಇವರು ಹತ್ತಿ ಕೂತಿದ್ದೇ ಬಸ್ ಸ್ಟ್ಯಾಂಡ್ ಬಿಟ್ಟು ಹೊರಟಿತು.
ದೇವ್ರು ತಮ್ಮನ್ನು ಕಳಿಸಿಕೊಡ್ಲಿಕ್ಕಾಗಿ ಇಲ್ಲೇ ಎಲ್ಲೋ ಬಂದಿದ್ದಾನೆ, ನಮ್ಮನ್ನು ನೋಡುತ್ತಿದ್ದಾನೆ ಎಂದು ನಾಣ್ಯನಿಗೆ ಮತ್ತೆ ತೀವ್ರವಾಗಿ ಅನಿಸತೊಡಗಿತು. ಆದರೆ ಥಟ್ಟನೆ ತಾನು ತಿರುಗಿ ನೋಡಿ ಅವನನ್ನು ಇಕ್ಕಟ್ಟಿಗೆ ಸಿಕ್ಕಿಸಲು ಮನಸಾಗಲಿಲ್ಲ. ಲಲಿತೆಯನ್ನು ತೊಡೆಯ ಮೇಲೆ ಕೂಡಿಸಿಕೊಂಡು ಮೆಲ್ಲಗೆ ಕಿಟಕಿಯ ಬಳಿ ಸರಿದ. ಅವಳ ಕೈಯನ್ನು ತನ್ನ ಕೈಗೆ ತೆಗೆದುಕೊಂಡು ಕಿಟಕಿಯಿಂದ ಹೊರಗೆ ಹಾಕಿ ಟಾಟಾ ಮಾಡಿಸಿದ. ಬಸ್ಸು ವೇಗ ಹೆಚ್ಚಿಸಿಕೊಂಡು ಮುಂದೆ ಸಾಗಿತು. ಕಿಟಕಿಯಲ್ಲಿ ತಲೆ ಇಣುಕಿ ನೋಡಿದ ಲಲಿತೆ, ‘ಅಪ್ಪಾ, ಯಾರೋ ತಿರುಗಿ ಟಾಟಾ ಮಾಡಿದ್ರು’ ಅಂದಳು ಖುಷಿಯಿಂದ. ಥಟ್ಟನೆ ನಾಣ್ಯನ ಕಣ್ಣಿಂದ ಹನಿಯೊಂದು ಕೆಳಗುದುರಿತು. ಅದು ಲಲಿತೆಗೆ ಕಾಣಬಾರದು ಎಂದು ಕಣ್ಮುಚ್ಚಿ ಹಿಂದಕ್ಕೆ ಸೀಟಿಗೊರಗಿದ.
(ಕೃತಿ: ದೇವ್ರು (ಕಾದಂಬರಿ), ಲೇಖಕರು: ಪದ್ಮನಾಭ ಭಟ್ ಶೇವ್ಕಾರ, ಪ್ರಕಾಶಕನ: ಅಂಕಿತ ಪ್ರಕಾಶನ, ಬೆಲೆ: 350/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ