ಯಕ್ಷಗಾನದಲ್ಲಿ ಅಬ್ಬರ, ವೈಭವ, ರಂಪಾಟಗಳು ಬೇಕೋ ಬೇಡವೋ ಎಂಬ ಚರ್ಚೆಗಳೆಲ್ಲ ಔಪಚಾರಿಕ ವೇದಿಕೆಗಳಲ್ಲಿ ನಡೆಯುತ್ತಲೇ ಇರುತ್ತವೆ. ಇತ್ತ ಯಕ್ಷಗಾನ ಪ್ರದರ್ಶನಗಳೋ, ಪ್ರೇಕ್ಷಕರ ಪ್ರತಿಕ್ರಿಯೆಗಳನ್ನು ಗಮನಿಸುತ್ತಾ ಸ್ವತಃ ಬದಲಾವಣೆಗಳನ್ನು ಕಾಣುತ್ತಾ ನಡೆಯುತ್ತಿರುತ್ತವೆ. ಕಳೆದ ಮೇ ತಿಂಗಳಲ್ಲಿ ಲಾಕ್ ಡೌನ್ ಎಂಬ ತೆರೆಯ ಮರೆಯಲ್ಲಿ ಪ್ರದರ್ಶನಗಳನ್ನು ಸಮಾರೋಪಗೊಳಿಸಿದ ಮೇಳಗಳು ಇದೀಗ ಬಯಲಾಟಗಳ ಕನಸು ಹೊತ್ತು ಹೊರಡಲು ಸಜ್ಜಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ ಇಲ್ಲಿದೆ.

ಚಿತ್ರ 1

ವಿದ್ಯುದ್ದೀಪಾಲಂಕೃತ ಯಕ್ಷಗಾನ ರಂಗಸ್ಥಳದ ಮುಂದೆ ಬೃಹತ್ ಜನ ಸಾಗರ. ಆ ಊರಿನ ಗುಡ್ಡಗಳಿಗೆ ಅಪ್ಪಳಿಸುವ ಚೆಂಡೆಯ ಸದ್ದು, ಅದನ್ನು ಮೀರಿಸಲು ಹೊರಟ ಭಾಗವತಿಕೆಯ ಅನುರಣನ. ನಡುರಾತ್ರಿ ಮೀರುತ್ತಿರುವುದರಿಂದ ಆಕಾಶದಲ್ಲಿ ಚಂದ್ರನೂ ತುಸು ಹತ್ತಿರದಲ್ಲೇ ತಾರೆಯೊಂದನ್ನು ಜತೆಮಾಡಿಕೊಂಡು ನಡೆಯುತ್ತಿದ್ದ. ಆ ಬಯಲ ಪಕ್ಕ ಹಾದು ಹೋಗುವ ರಸ್ತೆಯಲ್ಲಿ ವಾಹನಗಳ ಓಡಾಟ ನಿಂತಿತ್ತು. ರಂಗಸ್ಥಳದ ಮೆಟ್ಟಿಲುಗಳ ಪಕ್ಕದಲ್ಲಿಯೇ ಕುರ್ಚಿಯ ಮೇಲೆ ಎರಡು ಕಾಲು ಮಡಚಿ ಕುಳಿತ ಪ್ರತಿಮಾ ಮತ್ತು ಶಾಲಿನಿಗೆ ಸುಸ್ಸೂ ಮಾಡಬೇಕು ಅನಿಸಿತು.

ಎಷ್ಟೋ ಹೊತ್ತಿನಿಂದ ಆಚೆ ಎಲ್ಲಾದರೂ ಹೋಗಬೇಕು ಅಂತ ಅನಿಸಿದ್ದರೂ, ಆಟದ ಕಥೆ ಮುಂದೇನು, ಮುಂದೇನು… ಎನ್ನುತ್ತಾ ಅವರಿಬ್ಬರೂ ಕಣ್ಣರಳಿಸಿ ಕುಳಿತಿದ್ದರು. ಆದರೆ ಈಗ ಪರಿಸ್ಥಿತಿ ಕೈಮೀರುತ್ತಿರುವಂತಿದೆ ಎನಿಸಿ ಇಬ್ಬರೂ ಕಿವಿಯಲ್ಲಿ ಮಾತಾಡಿಕೊಂಡು ಅಲ್ಲಿಂದ ಎದ್ದರು. ಎಲ್ಲಿ ಹೋಗುವುದು. ರಂಗಸ್ಥಳದ ಹಿಂದೆ ಚೌಕಿ. ಮುಂದೆ ಜನರ ದಂಡು. ಅಕ್ಕ ಪಕ್ಕ ಕಿತ್ತಳೆ, ಸೋಜಿ… ಕಡಲೆ.. ಚುರುಮುರಿ… ಪೋಲಿ ಹುಡುಗರು. ಮತ್ತಷ್ಟು ದೂರ ಹೋದರೆ ಕತ್ತಲು. ಇಬ್ಬರೂ ಧೈರ್ಯದಿಂದ ಚೌಕಿ ದಾಟಿ ಮತ್ತೂ ನಾಲ್ಕು ಹೆಜ್ಜೆ ಮುಂದೆ ನಡೆದರು. ಬೆಳದಿಂಗಳ ನೆರಳು ಹುಡುಕಿ ಇರೋಬರೋ ಧೈರ್ಯ ಕೂಡಿಸುವಷ್ಟರಲ್ಲಿ ಇಬ್ಬರಿಗೂ ಎದೆ ಧಡ್ ಧಡ್.

ಇಂತಹ ಪರಿಸ್ಥಿತಿಗಳು ಬರುತ್ತವೆ ಎಂಬುದಕ್ಕೋ ಏನೋ, ಅವರಿಗೆ ಮನೆಯಲ್ಲಿ ದೊಡ್ಡವರು ಅಹೋರಾತ್ರಿ ಯಕ್ಷಗಾನ ನೋಡಲು ಬಿಡುತ್ತಿರಲಿಲ್ಲ. ಆದರೂ ಈ ಬಾರಿ ಸ್ನೇಹಿತೆಯರಿಬ್ಬರೂ ಜೊತೆ ಮಾಡಿಕೊಂಡು, ಮನೆಯವರನ್ನು ಒಪ್ಪಿಸಿಕೊಂಡು ಬಂದಿದ್ದರು. ಈಗ ನೋಡಿದರೆ ಭಯವೇ ಮೂಟೆಯಾಗಿ ಅವರ ಗಂಟಲು “ಕಳ್’’ ಎನ್ನುತ್ತಿದೆ. ದೂರದ ಕತ್ತಲಿನಿಂದ ಹೊರಟ ಎರಡು ಬೇತಾಳಗಳು ನಡೆದು ಬರುತ್ತಿದ್ದುದನ್ನು ನೋಡಿ ಎದೆ ಝಲ್ ಅನಿಸಿ ಮಾತೇ ಹೊರಡಲಿಲ್ಲ. ಜೊತೆಗೆ ಬೆಂಕಿಯ ಕಿಡಿಯೊಂದು ಕತ್ತಲಲ್ಲಿ ಆಚೀಚೆ ಚಲಿಸಿದಂತೆ ಭಾಸವಾಗುತ್ತಿತ್ತು. ಎಲುಬಿನ ಗೂಡುಗಳೇ, ತಲೆಬುರುಡೆ ನೇತಾಡಿಸಿಕೊಂಡು ನಡೆದು ಬರುತ್ತಿದ್ದಂತೆ ಕಾಣಿಸಿ ಬೆಚ್ಚಿ ಕಿಟಾರನೆ ಕಿರುಚುತ್ತಾ ಇಬ್ಬರೂ ಕೈ ಹಿಡಿದುಕೊಂಡು ಓಡಲಾರಂಭಿಸಿದರು.

ಬೇತಾಳಗಳಾದರೂ ಏನು ಮಾಡಿಯಾವು. ಮಕ್ಕಳ ಮೇಲೆ ಕರುಣೆದೋರಿ ಮಾಯವಾಗೋಣ ಎಂದರೆ ಅವು ನಿಜವಾದ ಬೇತಾಳಗಳಲ್ಲ. ಸಮಾಧಾನ ಮಾಡೋಣ ಎಂದುಕೊಂಡು ಮಕ್ಕಳ ಬಳಿ ಹೋದರೂ.. ಭಯದಿಂದ ಮಕ್ಕಳ ಕಿರುಚಾಟ ಹೆಚ್ಚುವುದು. ಅಷ್ಟರಲ್ಲಿ ಸಭೆಯಲ್ಲಿದ್ದವರು ಬಂದು ಮಕ್ಕಳಿಬ್ಬರನ್ನೂ ಸಮಾಧಾನ ಮಾಡಿ ಕರೆದುಕೊಂಡು ಹೋದರು. ಬೇತಾಳಗಳು ತಪ್ಪಿತಸ್ಥರಂತೆ ಚೌಕಿಗೆ ಹೋದವು.

ಚಿತ್ರ ೨

ರಾಜಾ ನೃಪತುಂಗ ಬಯಲಾಟವೆಂದರೆ ಅದು ಇತಿಹಾಸದ ಕತೆಯನ್ನೇ ಆಧರಿಸಿದ ಆಟ ಇರಬೇಕು. ಅಂದಮೇಲೆ ನಮ್ಮ ಹಿಸ್ಟರಿ ಪಾಠಕ್ಕೆ ಪೂರಕ ಇರಬೇಕು ಎಂದುಕೊಂಡು ಸುಪ್ರಿಯಾ ಮಗನನ್ನು ರಮಿಸಿ, ಒಲಿಸಿ ಆಟಕ್ಕೆ ಕರೆದುಕೊಂಡು ಬಂದಿದ್ದಳು. ಆಕೆಯ ನಿರೀಕ್ಷೆ ಸುಳ್ಳಾಗಲಿಲ್ಲ. ಎಲ್ಲಕ್ಕೂ ಮುಖ್ಯವಾಗಿ ಕಲ್ಪನೆಯೋ, ಸುಳ್ಳೋ, ಮಗ ಸುಜಯ್ ಆಟದ ಕತೆಯೊಳಗೆ ಮುಳುಗಿಯೇ ಹೋಗಿದ್ದ. ಅದಕ್ಕೆ ಸರಿ ಎಂಬಂತೆ ಅವನ ಸ್ನೇಹಿತ ಆರನೇ ತರಗತಿಯ ಕೀರ್ತಿ ಕೂಡ ಆಟಕ್ಕೆ ಬಂದಿದ್ದರಿಂದ ಸುಜಯ್ ಗೆ ಖುಷಿಯಾಗಿತ್ತು.

ರಾಜಾ ನೃಪತುಂಗನ ಪ್ರವೇಶ, ನಂತರ ಆತನ ಮಗ ಕೃಷ್ಣನ ಪುಂಡು ವೇಷ, ರಾಜ ಧರಿಸಿದ್ದ ಬೆಳ್ಳಿಯ ಕಿರೀಟದ ಆಕರ್ಷಣೆ, ಸುಸ್ಪಷ್ಟವಾದ ಮಾತುಗಾರಿಕೆಯ ದೆಸೆಯಿಂದ ಸುಜಯನಿಗೆ ಆಟ ಹಿಡಿಸಿತು. ನಡು ನಡುವೆ ಅಮ್ಮನ ಜೊತೆ ಪ್ರಶ್ನೆಗಳನ್ನು ಕೇಳಿ ಕೇಳಿ, ಕತೆಯನ್ನು ಮನದಟ್ಟು ಮಾಡಿಕೊಳ್ಳುತ್ತಿದ್ದ. ಒಟ್ಟಿನಲ್ಲಿ ಬೆದರುವ ಮಕ್ಕಳ ಕಂಗೆಡಿಸುವ ರಕ್ಕಸನ ಪಾತ್ರವಿಲ್ಲದ ಪ್ರೇಮಕತೆಯದು. ಯಾರದ್ದೇ ಆಗಲಿ ನಿದ್ದೆ ಹಾರಿಹೋಗುವಂತಿತ್ತು ಕೃಷ್ಣನ ಶೃಂಗಾರ ವಿಲಾಸ. ವೇಶ್ಯೆಯೆಂದರೆ ಏನಂತ ಈ ಮಕ್ಕಳಿಬ್ಬರಿಗೆ ಅರ್ಥವಾಗುತ್ತಿರಲಿಲ್ಲ. ಆದರೂ ಅವಳೆಷ್ಟು ಚೆಂದ ಇದ್ದಳು. ಅವಳಮ್ಮನಿಗೆ ಯಾರೋ ಏನೋ ಹೇಳಿಕೊಟ್ಟರಲ್ಲಾ. ಅರರೆ ಪ್ರೇಯಸಿಯೇ ಆ ಕೃಷ್ಣನಿಗೆ ವಿಷ ನೀಡಲು ಒಪ್ಪಿದಳೇ. ಈಗಷ್ಟೇ ಇಬ್ಬರೂ ಎಷ್ಟು ಚೆಂದವಾಗಿದ್ದರಲ್ಲ! ಒಪ್ಪಿಯೇ ಬಿಟ್ಟಳಲ್ಲಾ.

ಸುಜಯ್ ಗೂ ಕೀರ್ತಿಗೂ ಭಾರೀ ಬೇಸರವಾಯಿತು. ರಂಗಸ್ಥಳದಲ್ಲಿ ಅವಳು ವಿಷ ಕೊಡಲು ಒಪ್ಪಿದ ಕೂಡಲೇ, ಇವರಿಬ್ಬರು ಎಷ್ಟು ತಬ್ಬಿಬ್ಬಾದರು ಅಂದರೆ, ‘ಅಮ್ಮ.. ಈಗ ಚೌಕಿ ಕಡೆ ಹೋಗಿ ಬರುತ್ತೇವೆ..’ ಎಂದು ಅಮ್ಮನ ಉತ್ತರಕ್ಕೂ ಕಾಯದೇ ಓಡಿದರು.

ಮುಂದಿನ ಸನ್ನಿವೇಶಕ್ಕಾಗಿ ರಂಗಸ್ಥಳ ಪ್ರವೇಶಿಸಲು ರಂಗಸ್ಥಳದ ಹಿಂದೆ ಒಂದು ಬೆಂಚಿನ ಮೇಲೆ ಕುಳಿತಿದ್ದ ಕೃಷ್ಣ. ಪುಂಡುವೇಷವೆಂದರೆ ಮಕ್ಕಳಿಗೆ ಆಪ್ಯಾಯಮಾನವಾದ ವೇಷ. ರಾಕ್ಷಸವೇಷದಂತೆ ಭಯ ಹುಟ್ಟಿಸುವುದಿಲ್ಲ. ಸುಜಯ್ ಗೆ ವೇಷದ ಹತ್ತಿರ ಹೋಗುತ್ತಲೇ ಮುಜುಗರವೆನಿಸುತ್ತಿತ್ತು. ಆದರೂ ವಿಷಯ ಹೇಳಲೇಬೇಕು ಎಂಬ ತುಡಿತ ಅವನ ಮನಸ್ಸಿನಲ್ಲಿ, ಧೈರ್ಯ ಹೇಳುವುದಕ್ಕೆ ಜೊತೆಗೆ ಕೀರ್ತಿ ಕೂಡಿ ಇದ್ದನಲ್ಲ! ಇಲ್ಲದೇ ಹೋದರೆ ಕೃಷ್ಣನಿಗೆ ಈ ಮೋಸ ಗೊತ್ತಾಗುವುದಾದರೂ ಹೇಗೆ.

ಅರೆಬರೆ ಕನ್ನಡದಲ್ಲಿ ಅವನು ಹೇಳಿದ: ಈಗ ಅವಳು ನಿಮಗೆ ವಿಷ ಕೊಡ್ತಾಳೆ. ಓ.. ಅಲ್ಲಿ ಭಾಗವತರ ಹತ್ತಿರ ಸ್ಟೀಲ್ ಲೋಟದಲ್ಲಿ ಇಟ್ಟಿದ್ದಾಳೆ ನೋಡಿ. ಅವಳ ಅಮ್ಮ ಒತ್ತಾಯ ಮಾಡಿದಳು ಅಂತ ನಿಮಗೆ ವಿಷ ಕೊಡಲಿಕ್ಕೆ ನಿಮ್ಮ ಗೆಳತಿ ಒಪ್ಪಿದ್ದಾಳೆ…
ಆ ಪಾತ್ರಧಾರಿಗೆ ಮಕ್ಕಳ ಮಾತು ಏನು ಅರ್ಥ ಆಯಿತೋ..ಇಲ್ಲವೋ.

“ಎಷ್ಟನೇ ಕ್ಲಾಸೂ…?” ಅಂತ ಕೇಳಿದ.

ನಾನು ಆರು, ಅವನು ಐದನೇ ಕ್ಲಾಸು.. ಎನ್ನುತ್ತಲೇ ತಮ್ಮ ಕೆಲಸವಾಯಿತೆಂದು ಇಬ್ಬರು ಅಲ್ಲಿಂದ ಓಡಿದರು. ಭಯ, ಉದ್ವೇಗದಲ್ಲಿಯೇ ಹೆಜ್ಜೆ ಹಾಕುತ್ತ, ತಮ್ಮ ಕುರ್ಚಿ ಹುಡುಕಿ ಕುಳಿತು ಅಮ್ಮನ ಮುಖ ನೋಡಿದರು.
ಅಷ್ಟರಲ್ಲಿ ರಂಗಸ್ಥಳಕ್ಕೆ ಕೃಷ್ಣನ ಪ್ರವೇಶ..

ಬೇತಾಳಗಳಾದರೂ ಏನು ಮಾಡಿಯಾವು. ಮಕ್ಕಳ ಮೇಲೆ ಕರುಣೆದೋರಿ ಮಾಯವಾಗೋಣ ಎಂದರೆ ಅವು ನಿಜವಾದ ಬೇತಾಳಗಳಲ್ಲ. ಸಮಾಧಾನ ಮಾಡೋಣ ಎಂದುಕೊಂಡು ಮಕ್ಕಳ ಬಳಿ ಹೋದರೂ.. ಭಯದಿಂದ ಮಕ್ಕಳ ಕಿರುಚಾಟ ಹೆಚ್ಚುವುದು. ಅಷ್ಟರಲ್ಲಿ ಸಭೆಯಲ್ಲಿದ್ದವರು ಬಂದು ಮಕ್ಕಳಿಬ್ಬರನ್ನೂ ಸಮಾಧಾನ ಮಾಡಿ ಕರೆದುಕೊಂಡು ಹೋದರು.

‘ಅಹಹಾ… ಎನ್ನರಸಾʼ ಎನ್ನುತ್ತಾ ಅವಳೆಷ್ಟು ರಮಿಸಿದಳು ಅವನ! ಅಕೋ ವಿಷದ ಲೋಟವನ್ನು ಹಾಲೆಂದು ಕೊಟ್ಟೇಬಿಟ್ಟಳಲ್ಲ. ನಾವು ಹೇಳಿದ್ದು ಕೇಳದೇ ಅವ ಅದನ್ನು ಕೈಗೆ ತೆಗೆದುಕೊಂಡ. ಛೇ.

ಇಬ್ಬರೂ ಹುಡುಗರು ಕುರ್ಚಿಯ ಮೇಲೆಯೇ ಕುಳಿತು ಮೊಣಕಾಲಿನ ಮೇಲೆ ಗಲ್ಲವಿರಿಸಿ ದಿಟ್ಟಿಗೆ ದಿಟ್ಟಿ ಇಟ್ಟು ನೋಡುತ್ತಿದ್ದರು. ಆದರೆ ಹೀಗೂ ಆಗುವುದೇ. ಇನ್ನೇನು ಕುಡಿಯಲಿದ್ದ ವಿಷದ ಲೋಟವನ್ನು ಅವನು ತೆಗೆದುಕೊಳ್ಳುತ್ತಿದ್ದಂತೆಯೇ, ಆಕೆಯೇ ಮರಳಿ ಕಿತ್ತುಕೊಂಡಳು, ಅರೆ ಅವಳೇ ಕುಡಿದಳಲ್ಲಾ.. ಅಯ್ಯೋ. ಇಬ್ಬರಿಗೂ ಜೋರು ಅಳು ಬಂತು. ತಬ್ಬಿಬ್ಬಾದ ಸುಪ್ರಿಯಾ, ಎಂತ ಮಕ್ಕಳೇ.. ಎನ್ನುತ್ತಾ ಅವರನ್ನು ಅಲ್ಲಿಂದ ಎಬ್ಬಿಸಿದಳು.

*****

ಕರಾವಳಿಯಲ್ಲಿ ಯಕ್ಷಗಾನಕ್ಕೂ ಮಕ್ಕಳಿಗೂ ಇರುವ ಸಂಬಂಧದ ಆಪ್ತವಾದುದು. ರಾತ್ರಿಯಿಡೀ ಆಟ ನೋಡುವ ಮಕ್ಕಳ ಮನಸ್ಥಿತಿ, ಕತೆಗಳು ಅವರ ಮನಸ್ಸಿನ ಮೇಲೆ ಬೀರುವ ಪರಿಣಾಮಗಳ ಕುರಿತು ಅಧ್ಯಯನ ನಡೆದರೆ ಹೊಸ ವಿಚಾರಗಳು ಬೆಳಕಿಗೆ ಬರಬಹುದೇನೋ. ಯಾಕೆಂದರೆ ರಾತ್ರಿ ಏರುತ್ತಾ ಹೋದಂತೆ, ಸುತ್ತಲೂ ಆವರಿಸುವ ನೀರವತೆ ಮತ್ತು ಅದನ್ನು ಸೀಳಿಕೊಂಡು ಕೇಳಿಸುವ ಭಾಗವತಿಕೆ, ಚೆಂಡೆಯ ಧ್ವನಿ, ಪಾತ್ರಧಾರಿಗಳ ಸಿಟ್ಟುಕೋಪ, ಪ್ರೇಮ ವಿರಹ, ಕರುಣೆಯ ಮಾತುಗಳು ಮಕ್ಕಳ ಏಕಾಗ್ರತೆಯನ್ನು ಸಂಪೂರ್ಣವಾಗಿ ಹಿಡಿದು ನಿಲ್ಲಿಸುತ್ತದೆ. ಅವರ ವಿಶ್ಲೇಷಣಾ ಸಾಮರ್ಥ್ಯವನ್ನೂ ವಿಸ್ತರಿಸುತ್ತವೆ.

ಇತ್ತೀಚೆಗಿನ ದಿನಗಳಲ್ಲಿ ರಾತ್ರಿಯಿಡೀ ಆಟ ನೋಡುವ ಪರಿಪಾಠ ಕಡಿಮೆಯಾಗಿದೆ ಎಂದರೂ ಗ್ರಾಮೀಣ ಪ್ರದೇಶದಲ್ಲಿ ಈಗಲೂ ರಾತ್ರಿಪೂರಾ ಆಟನೋಡುವ ರೂಢಿಯಿದೆ. ಅದರಲ್ಲಿಯೂ ‘ಶ್ರೀ ಶನೈಶ್ಚರ ಮಹಾತ್ಮ್ಯೆ’ ಪ್ರಸಂಗವಾದರೆ ಪ್ರೇಕ್ಷಕ ವರ್ಗ ಕದಲದೇ ಕುಳಿತು, ನೋಡಿದ ಆಟವನ್ನೇ ಮತ್ತೆ ಮತ್ತೆ ನೋಡುವುದುಂಟು.

ಇನ್ನು ತೆಂಕುತಿಟ್ಟಿನ ಯಕ್ಷಗಾನದಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ವೈಭವವೇ ಪ್ರಧಾನವಾಗಿಬಿಟ್ಟಿದೆ. ರಾಕ್ಷಸ ವೇಷಗಳ ಪ್ರವೇಶವನ್ನು ಆದಷ್ಟು ವಿಭಿನ್ನವಾಗಿಸಬೇಕು ಎಂದು ಆಯೋಜಕರು ಶ್ರಮಿಸುತ್ತಿರುತ್ತಾರೆ. ಎಷ್ಟೋಬಾರಿ, ಈ ರಂಪಾಟ ಎಲ್ಲ ಜಾಸ್ತಿಯಾಯಿತು, ಇದೆಲ್ಲ ಕತೆಗೆ ಪೂರಕವೇನಲ್ಲ ಎಂದು ಪ್ರೇಕ್ಷಕರು ರೇಗಿಕೊಳ್ಳುವುದುಂಟು. ಆದರೆ ತನ್ನ ಮಗನಿಗೆ ಯಕ್ಷಗಾನದ ಕುರಿತು ಒಲವು ಮೂಡುವಂತೆ ಮಾಡಲು ಈ ರಾಕ್ಷಸ ವೇಷಗಳ ಪ್ರವೇಶ ಸುಪ್ರಿಯಾಳಿಗೆ ಸಹಾಯ ಮಾಡಿದೆ. ಯಕ್ಷಗಾನವೆಂದರೆ ಕಿಟಾರನೇ ಕಿರುಚುತ್ತಿದ್ದ ಮಗ ಸುಜಯ.
‘ಒಂದು ಮಧ್ಯರಾತ್ರಿ ಬೆಂಕಿ ಹಿಡಿದು ನಡೆದುಕೊಂಡು ಹೋಗುವ ವೇಷ ನೋಡೋಣವೇ..’ ಎಂದು ಪ್ರಶ್ನಿಸಿದಳು. ವೇಷದ ಕುರಿತು ಬಣ್ಣಿಸಿ ಪುಸಲಾಯಿಸಿ ಆಟದ ಬಯಲಿನ ಬಳಿಗೆ ಕರೆದುಕೊಂಡು ಹೋದಳು. ರಂಗಸ್ಥಳಕ್ಕೆ ಇನ್ನೂ ಅರ್ಧಕಿಲೋಮೀಟರ್ ದೂರ ಇರುವ ಜಾಗವೊಂದರಲ್ಲಿ ಮಕ್ಕಳ ಸೈನ್ಯವೇ ರಸ್ತೆಯಿಕ್ಕೆಲಗಳಲ್ಲಿ ಕುಳಿತಿತ್ತು. ಅವರನ್ನು ತೋರಿಸುತ್ತ, ‘ನೋಡು ಇವರೆಲ್ಲ ಬೆಂಕಿವೇಷ ನೋಡಲು ಕಾಯುತ್ತಿದ್ದಾರೆ’ ಎಂದು ಪರಿಚಯಿಸಿದಳು. ಅಷ್ಟರಲ್ಲಿ, ಜೀಪಿನಿಂದ ಇಳಿದ ಮಹಿಷಾಸುರ, ತೆಂಗಿನ ಗರಿಯ ಸೂಡಿಯನ್ನು ಹಿಡಿದು, ಅದನ್ನು ಸೂಟೆಯನ್ನಾಗಿಸಿ, ಹೊರಡಲನುವಾಗುತ್ತಿರುವುದು ಕಂಡಿತು. ಜೊತೆಗೆ ಬ್ಯಾಂಡು ವಾದ್ಯಗಳ ಧ್ವನಿಗೆ, ಕ್ಷಣಮಾತ್ರದಲ್ಲಿ ಆ ರಸ್ತೆಯಂಚಿನ ದೃಶ್ಯವೇ ಬದಲಾಯಿತು. ಬೆಂಕಿಯ ಬಣ್ಣ ಅಷ್ಟು ಸುಂದರವಾಗಿರುತ್ತದೆ ಎಂಬುದನ್ನು ಗಮನಿಸಿ ಸುಜಯನಿಗೆ ಉತ್ಸಾಹ ಪುಟಿದೊಡೆಯಿತು. ತನ್ನ ಕಾರಿನಿಂದ ಚೆಂಗನೆ ಜಿಗಿದು, ಸ್ನೇಹಿತರೊಡನೆ ವೇಷದ ಹಿಂದೆ ಹಿಂದೆ ಹೆಜ್ಜೆ ಹಾಕುತ್ತ ಸಾಗಿದ. ಬೆಂಕಿಯ ಕಿಡಿಗಳನ್ನು ಬೆರಗಿನಿಂದ ನೋಡುತ್ತ ಹೆಜ್ಜೆ ಹಾಕುತ್ತಿದ್ದ ಸುಜಯನ ನೋಡುತ್ತ ಸುಪ್ರಿಯ ನಗುತ್ತಿದ್ದಳು.

ಸುಮಾರು ಅರ್ಧಗಂಟೆಯಷ್ಟು ಹೊತ್ತು ಮಹಿಷಾಸುರ ರಂಗಸ್ಥಳದ ಹೊರಗೇ ಆರ್ಭಟಿಸಿದ. ಬೆಂಕಿ, ಪಟಾಕಿಯ ಗದ್ದಲದಲ್ಲಿ ಎಲ್ಲರೂ ಅವನ ಕೊಂಬುಗಳನ್ನು ನೋಡುವವರೇ. ಕಟ್ಟಕಡೆಗೆ ಅವನು ರಂಗಸ್ಥಳಕ್ಕೆ ಕಾಲಿಡುವಾಗ ಸಭೆಯಲ್ಲಿದ್ದ ಒಂದು ಪಿಳ್ಳೆಯ ಬಳಿಯೂ ನಿದ್ದೆ ಉಳಿದಿರಲಿಲ್ಲ. ರಗ್‌ಡಾಂಗ್ರ ಡಾಂಗ್ರಡ ರಗ್‌ಡಾಂಗ್… ಪಟಾಕಿ ಸದ್ದು ಮೀರುವ ಚೆಂಡೆ ಸದ್ದಿಗೆ ಸುಜಯ್ ಹೊಂದಿಕೊಂಡ.

ಕರಾವಳಿ ಜಿಲ್ಲೆಗಳಲ್ಲಿ 40ಕ್ಕೂ ಹೆಚ್ಚು ಯಕ್ಷಗಾನ ಮೇಳಗಳು ಪ್ರದರ್ಶನ ನೀಡುತ್ತವೆ. ದೀಪಾವಳಿಯ ಒಂದೊಂದೇ ಯಕ್ಷಗಾನ ಮೇಳಗಳು ಬಯಲಾಟ ಪ್ರದರ್ಶನಕ್ಕೆ ಹೊರಡುತ್ತವೆ. ಸುಮಾರು 320 ಕೋಟಿಗೂ ಮಿಕ್ಕಿದ ವಹಿವಾಟು ನಡೆಯುವ ಈ ಕ್ಷೇತ್ರವು ರಾಜ್ಯದ ಸಾಂಸ್ಕೃತಿಕ ವಲಯದಲ್ಲೇ ಅತೀ ದೊಡ್ಡ ವಹಿವಾಟು ನಡೆಸುವ ಕಲಾಪ್ರಕಾರವೆನ್ನಬಹುದು. ಒಂದು ಮೇಳದಲ್ಲಿ ಹಿಮ್ಮೇಳ, ಮುಮ್ಮೇಳ ಕಲಾವಿದರು, ಕೆಲಸಗಾರರು ಮತ್ತು ಯಕ್ಷಗಾನ ಪ್ರೇಕ್ಷಕರನ್ನು ಹೊರತುಪಡಿಸಿದರೂ, ಹೂವಿನ ಮಾರುಕಟ್ಟೆ, ವಿದ್ಯುತ್ ಅಲಂಕಾರದ ಕೆಲಸ ಮಾಡುವ ಅಸಂಘಟಿತ ವಲಯ, ಉಡುಗೆ ತೊಡುಗೆ, ಅಲಂಕಾಲ ಸಾಮಗ್ರಿಗಳ ವಿಭಾಗ, ಶಾಮಿಯಾನ, ಯಕ್ಷಗಾನ ಬಯಲಿನಲ್ಲಿ ಫುಡ್ ಸ್ಟ್ರೀಟ್ ಮಾದರಿಯಲ್ಲಿ ತೆರೆದುಕೊಳ್ಳುವ ಅಂಗಡಿಗಳ ಮಾಲೀಕರು.. ಹೀಗೆ ಯಕ್ಷಗಾನದ ಒಟ್ಟಾರೆಯಾದ ಪ್ರತ್ಯಕ್ಷ ಲೋಕವು ನಮ್ಮ ಸೀಮಿತ ಅಂದಾಜಿಗಿಂತ ಬೃಹತ್ತಾಗಿದೆ.

ಯಕ್ಷಗಾನವನ್ನು ಒಂದು ಕಲಾತ್ಮಕ ಪ್ರಕಾರವಾಗಿ ಪರಿಗಣಿಸಿ ಅಪಾರ ಪ್ರಮಾಣದ ಅಧ್ಯಯನಗಳು ನಡೆದಿವೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ವಿಚಾರ ಮಂಡನೆ, ಆಗ್ರಹ, ಶಿಫಾರಸುಗಳಿಗೆ ಅಂಕಿ ಅಂಶ, ದತ್ತಾಂಶಗಳ ಬೆಂಬಲದ ಅಗತ್ಯವಿದೆ. ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಯುವ, ಕೋಟ್ಯಂತರ ಸಂಖ್ಯೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಪ್ರೇಕ್ಷಕರನ್ನು ಹೊಂದಿರುವ ಯಕ್ಷಗಾನ ಕ್ಷೇತ್ರದಲ್ಲಿ ಅಂತಹ ಅಧ್ಯಯನಗಳು ಹೆಚ್ಚು ನಡೆದಿಲ್ಲ. ವಿವಿಧ ವಿಭಾಗಗಳಿಗೆ ಸಂಬಂಧಿಸಿದ ಡೇಟಾ ಸಂಗ್ರಹ, ಉದ್ಯಮದ ಎಳೆ ಹಿಡಿದು, ಆ ಆಯಾಮದಲ್ಲಿ ವಹಿವಾಟುಗಳನ್ನು ವಿಶ್ಲೇಷಿಸುವ ಅಧ್ಯಯನಗಳು ನಡೆದುದು ಬಹಳ ಕಡಿಮೆ. ಮೌಲ್ಯಮಾಪನಗಳ ತಕ್ಕಡಿಯ ಒಂದು ಕಡೆಯಲ್ಲಿ ಹಣವೇ ಪ್ರಧಾನವಾಗಿಯೂ ಭಾರವಾಗಿಯೂ ಕುಳಿತಿರುವಾಗ, ಅದಕ್ಕೆ ತಕ್ಕಂತಹ ಪರಿಭಾಷೆಯ ವಿಶ್ಲೇಷಣೆಗಳೂ ಅಗತ್ಯವಾಗುತ್ತವೆ.

ಯಕ್ಷಗಾನದಲ್ಲಿ ಅಬ್ಬರ, ವೈಭವ, ರಂಪಾಟಗಳು ಬೇಕೋ ಬೇಡವೋ ಎಂಬ ಚರ್ಚೆಗಳೆಲ್ಲ ಔಪಚಾರಿಕ ವೇದಿಕೆಗಳಲ್ಲಿ ಸಾಗುತ್ತಲೇ ಇರುತ್ತವೆ. ಇತ್ತ ಯಕ್ಷಗಾನ ಪ್ರದರ್ಶನಗಳೋ, ಪ್ರೇಕ್ಷಕರ ಪ್ರತಿಕ್ರಿಯೆಗಳನ್ನು ಗಮನಿಸುತ್ತಾ ತಾನು ಬದಲಾಗುತ್ತಾ ಪ್ರತಿದಿನ ನಡೆಯುತ್ತಿರುತ್ತವೆ. ಪತ್ರಿಕೆಗಳಿಗೆ ಪ್ರತಿದಿನದ ಡೆಡ್ ಲೈನ್ ಇದ್ದಂತೆ ಕಲಾವಿದರಿಗೆ ಪ್ರದರ್ಶನದ ಡೆಡ್ ಲೈನ್ ಗಳಷ್ಟೇ.

ಇದೀಗ ದೀಪಾವಳಿಗೆ ಮುನ್ನ ಯಕ್ಷಗಾನ ಮೇಳಗಳು ಪ್ರದರ್ಶನಗಳ ದಿನಾಂಕಗಳನ್ನು ಗುರುತು ಹಾಕಿಕೊಳ್ಳುತ್ತಿವೆ. ಮೇಳಗಳು ಮಳೆಗಾಲದ ಸಂದರ್ಭದಲ್ಲಿ ತಿರುಗಾಟ ನಿಲ್ಲಿಸಿದಾಗ ಹಿಂದಿನ ಕಾಲದಲ್ಲಿ ಯಕ್ಷಗಾನ ಪ್ರದರ್ಶನಗಳೇ ಅಪರೂಪವಾಗಿರುತ್ತಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮಳೆಗಾಲದ ಬಿಡುವಿನ ಅವಧಿಯಲ್ಲಿ ಕಲಾವಿದರು ‘ಪುರುಸೊತ್ತಿಲ್ಲ’ ಎಂದು ಹೇಳುವುದನ್ನು ಕೇಳುತ್ತಿದ್ದೇವೆ.

ಕಳೆದೆರಡು ವರ್ಷ ಕೊರೊನಾ ಸೋಂಕು ತಡೆಗೆ ಹೇರಿದ ಲಾಕ್ ಡೌನ್ ನಿಂದಾಗಿ ಯಕ್ಷಗಾನಕ್ಕೆ ಹಿನ್ನಡೆಯಾಗಿರಬಹುದು. ಇದೀಗ ಮತ್ತೆ ದೀಪಾವಳಿ ಬಂದಿದೆ. ಬೆಳಕಿನ ಸೇವೆಗೋಸ್ಕರ ಹಚ್ಚುವ ದೀಪ ಆರದಿರಲಿ.