ಗಿಣಿಯೆಂದಾಗ ನೆನಪಾಯ್ತು ವಸುಧೇಂದ್ರರ ‘ಕೆಂಪುಗಿಣಿ’ ಪ್ರಾರಂಭದಲ್ಲಿ ಮೆಣಸಿನಕಾಯಿ ತಿಂದು ತೋಟದಲ್ಲಿ ಹಾರುತಿದ್ವು, ರೇಷ್ಮೆ ಲಂಗದ ಅಕ್ಕ ಮತ್ತು ಅವಳ ಪುಟ್ಟ ತಮ್ಮ ಹಿಡಿಯಲು ಹೋದಾಗ ಕೈಗೆ ಸಿಗದವು, ಮನುಷ್ಯ ಮುಟ್ಟಿದರೆ ತನ್ನ ಮೈಯನ್ನ ಸ್ವಚ್ಛ ಮಾಡಿಕೊಳ್ಳುವಂತವು, ಈ ನೆಲದಲ್ಲಿ ನಿಧಿಯಿದೆ; ಏಳು ಎಡೆಯ ಸರ್ಪ ಅದನ್ನ ಕಾಯ್ತಿದೆ ಎಂಬ ಅವರ ಈರಪ್ಪನ ಮಾತಿನ ಮೇಲಿನ ಅವರ ಎಳೆಯ ನಂಬಿಕೆ, ಅಂತ್ಯದಲ್ಲಿ ಸಮಯ ಕಳೆದಂತೆ ಬಳ್ಳಾರಿಯಲ್ಲಿನ ಗಣಿಗಾರಿಕೆಗೆ ಹಸಿರುಟ್ಟ ನೆಲವೆಲ್ಲ ಬರಡಾಗಿ ದಾರಿತುಂಬಾ ಧೂಳು ತುಂಬಿ, ಗಿಳಿಯಬಣ್ಣವೂ ಕೆಂಪಾಗಿಯೇ ಬಿಡುವ ಧಾರುಣ ವಾಸ್ತವದ ಕತೆ ನೆನಪಾಗುತ್ತೆ.
ಮಹಾಲಕ್ಷ್ಮೀ. ಕೆ. ಎನ್ ಬರಹ ನಿಮ್ಮ ಓದಿಗೆ

ಬೆಳ್-ಬೆಳ್ಗೆ ಏಕಾಂತದಲ್ಲಿ ತೋಟದಲ್ಲೋ ಕಾಡುದಾರಿಯಲ್ಲೋ ಹುಟ್ಟುವ ಸೂರ್ಯನಿಗೆ ಮೈಯೊಡ್ಡಿ ಹೆಜ್ಜೆಯಿಡಬೇಕು. ಅಲ್ಲಿ ಸರಿಗಮಪದನಿಸ ಸನಿದಪಮಗರಿಸ ಸರಳೆವರಸೆ ಜಂಟಿವರಸೆಗಳ ರಾಗ ತಾಳದ ಹಂಗಿಲ್ಲದೆ, ಗಾನ ಗಂಧರ್ವ ಲೋಕಕೆ ಸೆಳೆವ ಸಂಗೀತ ಕಛೇರಿ ಪ್ರಾರಂಭವಾಗಿರುತ್ತೆ ನೋಡಿ. ಹಕ್ಕಿಹಿಂಡು ಕೊರಲುಕ್ಕಿ ಚಿಲಿಪಿಲಿಗುಟ್ಟುತ್ತಾ ಹಾಡುತಿರುತ್ವೆ, ವ್ಹಾ…. ವಾಟ್ ಎ ಮೆಲೋಡಿಯಸ್ ಸಾಂಗ್ ಇಟ್ ಈಸ್! ಇದಕ್ಕಿಂತಾ ಸಂಗೀತ ಬೇಕಾ?! ಹಾಡಿಗೆ ಭಾಷೆಯ ಸಾಹಿತ್ಯವೇ ಬೇಕಾ?! ಹಕ್ಕಿಗಳು ಕಲಿಸುತ್ವೆ ಹೊಸ ಭಾಷೆಯನ್ನ ಅದರೊಳಗೊಂದು ಹೊಸ ಭಾವವನ್ನ ನಾವೂನು ಕಲಿಯುವ ಬಾರಾ …..

ತಣ್ಣಗೆ-ಸಣ್ಣಗೆ ಝರಿ ಹರಿಯುತ್ತೆ ಆಚೀಚೆ ಮರ ಬಳ್ಳಿಗಳಿರುತ್ತೆ. ನೀರಿನ ನಿನಾದದೊಟ್ಟಿಗೆ ಹಕ್ಕಿಗಳಿಂಚರವ ಆಲಿಸುವ. ನೀರಲ್ಲೇ ಮೀಯುವ ಬಾತುಕೋಳಿ, ಹಂಸ, ರಾಜಹಂಸ, ಬಿಳಿಯ ಕೊಕ್ಕರೆಯ ಕಾಣುವ. ಬಿಳಿ ಬೂದು ಬಣ್ಣದ ಪಾರಿವಾಳ, ದೊಡ್ಡ ಬಂಡೆ ಗೊರವ, ಬಿಳಿ ಕೆಂಬರಲು, ಲಾವಕ್ಕಿ, ಬುಲ್ ಬುಲ್, ಸಾಲಾಗಿ ಹಾರುವ ಬೆಳ್ಳಕ್ಕಿ ಸಾಲಿಗೆ ನಾವು ಸೇರುವ ಬಾರಾ.

ಉದ್ದ ಚುಂಚನ್ನ ಹೊಂದಿರುವ ಹಾರ್ನ್ ಬಿಲ್ ಹಕ್ಕಿ, ಸ್ವಚ್ಛಂದವಾಗಿ ಹಾರಾಡುವ ಬಾನಾಡಿಗಳು. ಮೈನಾ, ಸ್ಕೈಲಾರ್ಕ್‌ಗಳು, ಹೆಜ್ಜಾರ್ಲೆ, ಶಿಳ್ಳೆಬಾತು, ಹೆಮ್ಮಿಂಚುಳ್ಳಿ, ಗ್ರೇ ಹೆರಾನ್, ಮರಕುಟಿಕದ ಕೈಂಕರ್ಯ ನೋಡುವ ಬಾರಾ.

ಟಿಂಡಾಲ್ ಪರಿಣಾಮಕ್ಕೆ ಪ್ರಕಾಶಮಾನ ವೈಢೂರ್ಯದ ನೀಲಿಯಾಗಿದ್ದದ್ದು ಪಚ್ಚೆ ಹಸಿರಂತೆ ಕಾಣುವ ಗರಿಗಳು. ಮೀನು, ಕಪ್ಪೆಗಳ ಬೇಟೆಗೆಂದೇ ಮಾರ್ಪಾಡಾದ ಉದ್ದನೆಯ ಮೊನಚಾದ ಕೊಕ್ಕು, ನಿಶ್ಚಲವಾಗಿ ರೆಂಬೆಮೇಲೆಯೇ ಹೊಂಚು ಹಾಕ್ತಾ ಕುಳಿತು ಮರಿಮೀನನ್ನ ಗಪ್ಪನೆ ಹಿಡಿದುಬಿಡುವ, ಅರಣ್ಯ ಹೊಳೆಗಳ ಬಳಿ ಕಾಣುವ ಮಿಂಚುಳ್ಳಿ(ಜಾಲಗಾರ) ಹಕ್ಕಿಗಳ ಸುಮ್ಮನೆ ಕುಳಿತು ನೋಡುವ ಬಾರಾ. ಮಿಂಚುಳ್ಳಿಗೆ ಭಾರೀ ನಾಚಿಕೆಯಂತೆ. ಅವುಗಳಿಗೆ ಒಬ್ಬಳೇ ಸಂಗಾತಿಯಂತೇ, ನನಗಿಂತ ಅದೆಷ್ಟು ಸುಂದರಿ ನೀ ಹೇಳುವಂತೆ, ಕಂಡು ಬರುವ ಬಾರಾ.

ಕೆಂಪು ಬಾಗಿದ ಕೊಕ್ಕಿನ ಹಸಿರುಡುಗೆ ತೊಟ್ಟ ಗಿಳಿಗಳೊಡನೆ ಮಾತನಾಡಿ ಬರುವ, ತೀಕ್ಷ್ಣಮತಿ ಪಕ್ಷಿಗಳ ಗುಂಪಿಗೆ ಸೇರಿದ ಅವುಗಳು ನಮ್ಮ ಮಾತುಗಳನ್ನ ಅನುಕರಿಸುತ್ವೆ, ಅದೆಷ್ಟು ಅಂತ ಬರೀ ಮನುಷ್ಯನೊಟ್ಟಿಗಿನ ಮಾತು ಗಿಳಿಗಳೊಟ್ಟಿಗೆ ಹರಟೆಹೊಡೆದು ಬರುವ ಬಾರಾ.

ಗಿಣಿಯೆಂದಾಗ ನೆನಪಾಯ್ತು ವಸುಧೇಂದ್ರರ ‘ಕೆಂಪುಗಿಣಿ’ ಪ್ರಾರಂಭದಲ್ಲಿ ಮೆಣಸಿನಕಾಯಿ ತಿಂದು ತೋಟದಲ್ಲಿ ಹಾರುತಿದ್ವು, ರೇಷ್ಮೆ ಲಂಗದ ಅಕ್ಕ ಮತ್ತು ಅವಳ ಪುಟ್ಟ ತಮ್ಮ ಹಿಡಿಯಲು ಹೋದಾಗ ಕೈಗೆ ಸಿಗದವು, ಮನುಷ್ಯ ಮುಟ್ಟಿದರೆ ತನ್ನ ಮೈಯನ್ನ ಸ್ವಚ್ಛ ಮಾಡಿಕೊಳ್ಳುವಂತವು, ಈ ನೆಲದಲ್ಲಿ ನಿಧಿಯಿದೆ; ಏಳು ಎಡೆಯ ಸರ್ಪ ಅದನ್ನ ಕಾಯ್ತಿದೆ ಎಂಬ ಅವರ ಈರಪ್ಪನ ಮಾತಿನ ಮೇಲಿನ ಅವರ ಎಳೆಯ ನಂಬಿಕೆ, ಅಂತ್ಯದಲ್ಲಿ ಸಮಯ ಕಳೆದಂತೆ ಬಳ್ಳಾರಿಯಲ್ಲಿನ ಗಣಿಗಾರಿಕೆಗೆ ಹಸಿರುಟ್ಟ ನೆಲವೆಲ್ಲ ಬರಡಾಗಿ ದಾರಿತುಂಬಾ ಧೂಳು ತುಂಬಿ, ಗಿಳಿಯಬಣ್ಣವೂ ಕೆಂಪಾಗಿಯೇ ಬಿಡುವ ಧಾರುಣ ವಾಸ್ತವದ ಕತೆ ನೆನಪಾಗುತ್ತೆ. ಮಾತನಾಡುವ ಗಿಣಿಗಳ ಹಿಡಿಯುವಿಕೆ, ಪಳಗಿಸುವಿಕೆಗೆ, ಬೇಟೆಯಾಡುವಿಕೆಯಿಂದ, ಮನುಷ್ಯನ ಮನರಂಜನೆಗೆ ಇವುಗಳ ಸಂಖ್ಯೆ ಇಳಿಕೆಯಾಗ್ತಿವೆ. ಗುಬ್ಬಚ್ಚಿ ಸಂತತಿ ವಿದ್ಯುತ್ ತಂತಿಯಿಂದ ಕ್ಷೀಣಿಸುತ್ತಿರುವುದು ಅದೂ ಮನುಷ್ಯನ ದುರಾಸೆಯೇ. ಘಾಸಿಗೊಳಿಸಿದ್ದು ಸಾಕು. ನಾವು ಒಟ್ಟಿಗೆ ಗಿಡ ನೆಡುವ ಬಾರಾ… ಅವು ಬೆಳೆದು ಹೆಮ್ಮರವಾಗಿ ಹಕ್ಕಿಗಳಿಗೆ ಆಶ್ರಯವಾಗಲಿ, ಸಿಹಿ ಹಣ್ಣು ಕೊಟ್ಟು ಸಲಹಲಿ.

ಮನೆಯ ಹೆಂಚಿನ ಮೇಲೆ, ಮಹಡಿ ಮೇಲೆ, ಜಗಲಿಯ ಮೇಲೆ ಕಾಳು ಹೆಕ್ಕಿ ತಿನ್ನಲು ಬರುವ ಹಕ್ಕಿಗಳಿಗೆ ಕಾಯಿ ಗೆರಟೆಯಲ್ಲಿ ನೀರುತುಂಬಿ ಇಡುವ ಗುಬ್ಬಚ್ಚಿಗಳು ನಮ್ಮ ಮನೆಗೂ ಬರಲಿ, ಮುಂಬಾಗಿಲ ಜಗಲಿಯಲ್ಲಿ ಚೀಂವ್ ಚೀಂವ್ ಎನ್ನಲಿ. ನಾವು ಪ್ರಕೃತಿಯದೇ ಸೃಷ್ಟಿ ಆಕೆಯೊಟ್ಟಿಗೆ ಹಕ್ಕಿಗಳಂತೆ ತೆರೆದುಕೊಳ್ಳೋಣ ನೋಡು ದಿನವೂ ಹಬ್ಬದ ಸಂಭ್ರಮ ಕೊಡ್ತಾಳೆ ಪ್ರಕೃತಿ.

ಅತೀ ಚಿಕ್ಕಹಕ್ಕಿ ಮುದ್ದಾದ ಹಕ್ಕಿ ಹಮ್ಮಿಂಗ್ ಬರ್ಡ್ ನೋಡುವ, ಸರಲೆ ಹಕ್ಕಿಯೊಡನೆ ನಾವೂನು ಮಳೆಯನ್ನ ಕರೆಯುವ ಬಾರಾ. ಬೆಳಗ್ಗೆ ಬಿದ್ದಿರುವ ನವಿಲುಗರಿಗಳನ್ನ ಆಯೋಣ. ಮಯೂರನಿಂದ ನೃತ್ಯ ಕಲಿಯುವ. ಮೊದಲದಿನ ಭರತನಾಟ್ಯದ ತಟ್ಟಡವು ಥೈಯ್ಯಾಥೈ, ಎರಡನೇ ದಿನ ಮೆಟ್ಟಡವು ದಿತ್ತೈ-ದಿತ್ತೈ ಕಲಿವ ಬಾರಾ.

ಸಣ್ಣ ಪುಟ್ಟ ಕಡ್ಡಿಗಳು – ಹುಲ್ಲಿನ ಎಳೆಯನ್ನ ನಾರುಗಳನ್ನ ತಂದು ಗೀಜಗ ಹಕ್ಕಿ ಗೂಡು ಕಟ್ಟುವ ಪರಿಯ ಕಣ್ತುಂಬಿಕೊಳ್ಳುವ. ಗೀಜಗನ ಗೂಡುಗಳು ತೊಟ್ಟಿಲಿನಂತೆ ತೂಗಾಡುತ್ತಿದ್ದವು. ಹತ್ತನೇ ತರಗತಿಯಲ್ಲಿ ಕಲಿತ ಉಪಮಾಲಂಕಾರ ನೆನೆಯೋಣ. ಗೀಜುಗ ಗೂಡು ಕಟ್ಟಿ ತನ್ನ ರಾಜಕುಮಾರಿಯನ್ನ ಕರೆದು ತೋರುತ್ವೆ, ನಂತದ್ದು ಆ ರಾಣಿ ಮೊಟ್ಟೆ ಇಟ್ಟು ಮರಿಗೆ ಕಾವು ಕೊಡುತ್ತೆ ಗಂಡು ಹಕ್ಕಿ ಆಹಾರ ತರುತ್ತೆ. ಅವರು ದಿ ಎಕ್ಸ್ಟ್ರಾರ್ಡಿನರಿ ಆರ್ಟಿಸ್ಟಿಕ್ ಅಭಿಯಂತರರು, ಕಲಾತ್ಮಕ ನೇಕಾರರು, ಇಲ್ಲಿ ನಾವೂ ನಿಮ್ಮಂತೆಯೇ ಹೊಸ ಬಾಳನ್ನರಸಿ ಬಂದ ಜೋಡಿ ಇದ್ದೀವಿ ನಮಗೂ ಗೂಡು ಕಟ್ಟುವುದ ಕಲಿಸು ಗೀಜುಗ ಎಂದು ಕೇಳಿ ನೋಡುವ ಬಾರಾ.

ರೆಕ್ಕೆ ಬಲಿತವು ಮರಿಹಕ್ಕಿ ಬಾನಿಗೆ ಮೈಯೊಡ್ಡಿ ಹಾರುತ್ವೆ. ಅವಿರತ ಸತತ ಪರಿಶ್ರಮದಿಂದ ಮತ್ತೆಲ್ಲೋ ಸೌಕರ್ಯದ ಜಾಗದಲ್ಲಿ ಗೂಡು ಕಟ್ಟುತ್ವೆ ಅಲ್ಲಿ ಮತ್ತೊಂದು ಕನಸು ನನಸಾಗುತ್ತೆ ನೋಡು. ಜೀವವೊಂದು ಹೂವಿನಂತೆ ಅರಳುತ್ತೆ ಇಲ್ಲಿ. ಬದುಕೊಂದು ಬದುಕುತ್ತೆ ಇಲ್ಲಿ.

ಕೆ. ಎಸ್. ನ ಅವರ ‘ತೆರೆದ ಪಂಜರದೊಳಗಿನ ಗಿಳಿಯ ಸಾಕುವ’ ನಾವೂನೂ ಹಕ್ಕಿಗಳಂತೆ ಚಿಲಿಪಿಲಿಗುಟ್ಟುತ್ತಾ ಗರಿ ಬಿಚ್ಚಿ ಹಾರುವ ಅವುಗಳಂತೆ ಬದುಕಿಬಿಡುವ ಬಾರಾ. ನಾವೂನೂ ಹಕ್ಕಿಗಳಾಗೋಣ ಬಾರಾ…!

ಹಾ…. ರಾತ್ರಿ ಜಡಿ ಮಳೆ ನಿಂತು ಬೆಳಗ್ಗೆ ಸಣ್ಣ ಸೋನೇಲಿ ಮೆತ್ತಗೆ ಕಂಠ ತೆರೆದುಕೊಳ್ಳುತ್ತವಲ್ಲ ಹಕ್ಕಿಗಳು, ಬೆಚ್ಚಗೆ ತೊಟ್ಟಿಲಲ್ಲಿ ಮಲಗಿದ್ದ ಮಗು ನಿದ್ದೆ ಕಳೆದು ಎಚ್ಚರವಾಗಿದ್ದೇನೆ ಅಂತ ಸಣ್ಣಗೆ ಬಾಯ್ತೆರೆವ ರೀತಿ, ವೀಣೆಯ – ತಂಬೂರಿಯ, ವಯಲಿನ್ನಿನ – ಗಿಟಾರಿನ – ಸಿತಾರಿನ ತಂತಿಯನ್ನ ಮೀಟಿದಂತೆ.