ಸಣ್ಣ ಪ್ರಾಯದಲ್ಲೇ ತೀರಿಹೋದ ಕನ್ನಡದ ಅನನ್ಯ ಕವಯಿತ್ರಿ ನಾಗಶ್ರೀ ಶ್ರೀರಕ್ಷ ಬದುಕಿದ್ದರೆ ಇಂದಿಗೆ ಅವರಿಗೆ ಮೂವತ್ತೇಳರ ಹರಯ. ಕೆಂಡಸಂಪಿಗೆಯ ಉಪ ಸಂಪಾದಕಿಯೂ ಆಗಿದ್ದ ಅವರ ಚೇತೋಹಾರಿ ನೆನಪಿಗೆ ಅವರ ‘ನಕ್ಷತ್ರ ಕವಿತೆಗಳು’ ಸಂಕಲನದಿಂದ ಆಯ್ದ ಮೂರು ಕವಿತೆಗಳು.

ಚಿತ್ರಗಳು ಕುಳಿತಿವೆ ಅಲುಗಾಡದೆ

ಎಲ್ಲ ಅವಷ್ಟಕ್ಕೆ ಅವು
ನನ್ನಷ್ಟಕ್ಕೆ ನಾನು

ಹೀಗೆಲ್ಲ ಯಾಕಾಗಬೇಕು
ಎಲ್ಲಾ ಕೊಟ್ಟು ಏನೂ ಉಳಿಸದೆ ಬಿಟ್ಟು
ಹೇಗೆ ಬಂದೆನೋ ಹಾಗೇ ಹೋಗುವೆ
ಇವೆಲ್ಲ ಇರುವುದೇ ಹೀಗೆ
ಸುಖದಲ್ಲಿರಲಿ ಎಲ್ಲವೂ

ಮುಂದೆ ಏನೋ ಇರಬಹುದು
ಕನಸಲ್ಲಿ ಬಂದ ದ್ವೀಪ
ಕೋಮಲ ಕವಿತೆಗಳು, ಹೋಲಿಕೆಗಳು
ಹೀಗೆ ಮತ್ತೆ ಬೇಕಿರಲಿಲ್ಲ
ಈ ಒರಟು ಪದಗಳು
ತಲೆನೇವರಿಸುವುದು

ಒಂದು ದೊಡ್ಡ ಹಾಳೆಯಲ್ಲಿ
ಚಿತ್ರಗಳು ಕುಳಿತಿವೆ ಅಲುಗಾಡದೆ
ಗಂಡು ಹೆಣ್ಣು ಅದು ಇದು ಎಲ್ಲವೂ
ಗಾಳಿಬೀಸಿದರೂ ಯಾರೂ
ಕದಲುತ್ತಿಲ್ಲ ಹಾಗೆಯೇ ಇದ್ದ ಹಾಗೆಯೇ
ಅಲ್ಲಿಂದಲೇ ಎದ್ದು ಜೀವಂತವಾಗಿ
ಬಂದಿರುವೆ ನಾನು

ನಾನೀಗ ಮೂಗು ತುರಿಸುವುದು

ಈಗ ಮೂಗು ತುರಿಸುವಾಗ
ಯಾವುದೋ ಒಂದು ಗುಂಗಿನಲ್ಲಿ
ನನ್ನದಿರಬಹುದು ಅನ್ನಿಸುತ್ತದೆ

ನನಗೆ ಕೇಳಿಸುವ ಉಸಿರು
ಪುರಾತನ ಕಾಲದ
ಗುಹೆಯ ಬೂದಿಯಲ್ಲಿ
ಇನ್ನೂ ಅವರೆಲ್ಲರೂ ನಗುತ್ತಿದ್ದಾರೆ
ನನ್ನ ಅಕ್ಕಪಕ್ಕ ಗೊಂಬೆಗಳೂ
ಕೀಲು ಕೊಟ್ಟರೆ ಚಪ್ಪಾಳೆ ತಟ್ಟಿ
ನಗುವಂತಾಗಿದೆ

ಆಚೆ ಊರಿನಲ್ಲಿ ಚಪ್ಪಲಿ ಸಂದಿಗೆ
ಸಿಲುಕಿದ ಒಂದು ಕಲ್ಲು
ಇಷ್ಟು ದಿನ ಮಾತಾಡದೆ
ಈಚೆ ಊರಿನ ದೊಡ್ಡ ಬಂಡೆಯ
ಕೆಳಗೆ ಕೆಸರಿನಲ್ಲಿ ಉದುರಿತು

ನಾನೀಗ ಮೂಗು ತುರಿಸುವುದು
ಬೂದಿ, ಬಂಡೆಯ ತಪಸ್ಸಿನ ಫಲವಿರಬೇಕು
ನನ್ನ ಮತ್ತು ಅವರೆಲ್ಲರ
ನಗು ಉಸಿರಾಟಗಳು ಮತ್ತು
ಗೊಂಬೆ, ಕೀಲು ಚಪ್ಪಾಳೆಗಳು
ಮರೆಸುತ್ತಿದೆ ಎಲ್ಲದನ್ನೂ
ಬಹುಷಃ ನಾನಿರುವುದನ್ನೂ

ನನ್ನ ಕರೆಯುತ್ತಿದ್ದ ಗಾಳಿಗೆ ಒಳ ಬರುವಂತೆ ಹೇಳಿರುವೆ

ನನ್ನ ಖಾಲಿ ಕುರ್ಚಿಗಳು
ಈ ನಡುವೆ
ಎಷ್ಟು ಮಾತಾಡಲು ಕಲಿತುಬಿಟ್ಟಿವೆ
ನನ್ನ ಪ್ರಯಾಣದ ಎಲ್ಲಾ ಹೆಜ್ಜೆಗಳ
ಆತ್ಮಗಳು ಇಲ್ಲೇ ಸುಧಾರಿಸಿಕೊಳ್ಳುತ್ತಿವೆ
ಹಳೆಯ ಆಟದ ಮನೆಗಳು ಮೌನದಲ್ಲಿ
ನನಗೆ ಕಾಗದ ಬರೆದಿವೆ
ತುಂಬಾ ವರುಷದ ನಂತರ
ಅದೇ ಅದೇ
ನೆನಪುಗಳು ಸಾಕೆಂದು
ಈ ಮಳೆ
ಹೊಸ ನೆನಪುಗಳನ್ನು
ಕೊಡುವಂತೆ ಹೇಳಿದೆ
ಕಿಟಕಿಯ ಕಂಬಿಯಲ್ಲೇ
ನನ್ನ ಕರೆಯುತ್ತಿದ್ದ ಗಾಳಿಗೆ
ಒಳ ಬರುವಂತೆ ಹೇಳಿರುವೆ