ಆ ಬಾಲಕ ತನ್ನ ಕೆನ್ನೆಗೆ ಅಂಗೈ ಊರಿ ಹಾಗೇ ಯೋಚಿಸುತ್ತಾನೆ- ಗಾಂಧಿ ಇನ್ನೇನು ಬರ್ತಾ ಇದ್ದಾರೆ, ಕೆಲವೇ ಕ್ಷಣಗಳಲ್ಲಿ ಬಂದುಬಿಡ್ತಾರೆ, ಅವರು ಬರುವ ಹಾದಿ ಹೇಗಿರಬೇಕು ಹಾಗಾದ್ರೆ..?! ಯೋಚಿಸಿದಷ್ಟೂ ಅವನಿಗೆ ಹೊಸ ಹೊಸ ಆಲೋಚನೆಗಳು ಹೊಳೆಯುತ್ತವೆ. ಮನಸ್ಸು ಖುಷಿಯಾಗ್ತದೆ. ಹೊಳೆದಂಡೆಯಿಂದ ಮನೆಗೆ ಹಿಂತಿರುಗುತ್ತಾನೆ. ಅವತ್ತು ಪೂರಾ ಅವನದು ಅದೇ ಗುಂಗು.
ಮನೆಗೆ ಹೋಗ್ತಾ ಕಣ್ಣಿಗೆ ಸುಂದರವೆನ್ನಿಸಿದ ಹೂಗಳನ್ನೆಲ್ಲಾ ಬಿಡಿಸಿಕೊಳ್ಳುತ್ತಾ ಸಾಗುತ್ತಾನೆ. ಅವನ ಉತ್ಸಾಹಕ್ಕೆ ಆಕಾಶ ಕೆಂಪಗೆ ನಗು ಬೀರುತ್ತದೆ. ಜೀವ ಗಾಂಧಿಯನ್ನು ನೋಡಲು ಮೇರೆ ಮೀರಿ ಹಂಬಲಿಸುತ್ತಿದೆ. ಇದೊಂದು ರಾತ್ರಿ ಮುಗಿದುಬಿಟ್ಟರೆ…. ಅಂತ ಕ್ಷಣಕ್ಕೊಂದು ಬಾರಿ ಹಪಾಹಪಿಸುತ್ತಿದ್ದಾನೆ. ಕಲ್ಪನೆಗಳು ಗರಿಗೆದರುತ್ತಲೇ ಇವೆ. ಆ ಹೊತ್ತಿಗಾಗಲೇ ಆತ ಅದುವರೆಗೆ ಗಾಂಧಿಯ ಬಗ್ಗೆ ಕೇಳಿದ್ದು, ಓದಿದ್ದೆಲ್ಲವೂ ಬೆರೆತು ಅದೊಂದು ಸೊಗಸಾದ ಸನ್ನಿವೇಶವನ್ನು ಎದೆಯೊಳಗೆ ಹುಟ್ಟುಹಾಕಿದೆ.
ಎಂದಿನಂತಿಲ್ಲದ ತಮ್ಮನನ್ನು ಕಂಡು ಅಕ್ಕ ಮೆತ್ತಗೆ ಗದರುತ್ತಾಳೆ. ಅದೇ ಹೊತ್ತಿಗೆ ಅಮ್ಮ ನಾಳೆಗಾಗಿ ಆತ ಹಠ ಮಾಡಿ ತರಲಿಕ್ಕೆ ಹೇಳಿದ ಹೊಸ ಧಿರಿಸು ಸಿದ್ಧವಾಗಿದೆ ಎಂಬ ಸುದ್ಧಿ ತಿಳಿಸುತ್ತಾಳೆ. ‘ಇನ್ಮೂರು ತಿಂಗಳು ಹೊಸ ಬಟ್ಟೆ ಕೇಳಬೇಡ ಮಗನೇ….’ ಅನ್ನುತ್ತಾನೆ ಅಪ್ಪ. ಆದರೆ ಅವನಿಗೆ ಇವರೆಲ್ಲರೂ ಕಣ್ಣಿಗೆ ಕಾಣಿಸುತ್ತಿದ್ದಾರಷ್ಟೆ. ಮನಸ್ಸಿನ ತುಂಬಾ ಅದೇ ದುಂಡುಮೊಗದ ಗಾಂಧಿ. ಅವತ್ತು ಊಟ ಮಾಡಿದನೋ ಇಲ್ಲವೋ ಅನ್ನೋದೂ ಗೊತ್ತಿಲ್ಲ ಅವನಿಗೆ.
ಮಲಗುವ ಕೋಣೆಗೆ ಹೋಗಿ ಇನ್ನೇನು ಕಾಲುಚಾಚಬೇಕು ಅನ್ನುವಷ್ಟರಲ್ಲಿ ರಾತ್ರಿ ಹತ್ತರ ಅಗ್ರವಾರ್ತೆಯಲ್ಲಿ ‘ಗಾಂಧಿ’ ಶಬ್ದ ಕೇಳಿಸಿದಂತಾಗಿ ಎದ್ದು ಓಡುತ್ತಾನೆ. ಮೆಲ್ಲಗೆ ಅಕ್ಕನ ಬಳಿಸಾರಿ ಟಿ.ವಿ.ಗೆ ಮುಖ ಮಾಡಿದರೆ ಅಲ್ಲಿಯೂ ಅದೇ ವಿಷಯ. ಯಾವುದೋ ಕ್ಲಾಸಿನಲ್ಲಿ ಪ್ರೀತಿಯಿಂದ ಕೇಳಿದ್ದ ಕುವೆಂಪು ಅನ್ನೋ ಕವಿಯ ‘ಹಸುರತ್ತಲ್ ಹಸುರಿತ್ತಲ್ ಹಸುರೆತ್ತಲ್….’ ಅನ್ನೋ ಕವಿತೆ ನೆನಪಾಯ್ತು. ಅದನ್ನೇ ಗುನುಗುತ್ತಾ ಕಣ್ಮುಚ್ಚಿದವನಿಗೆ ನಿಜವಾಗಿಯೂ ಗಾಂಧಿ ಸಿಕ್ಕಿದ್ದರು. ಒಲವಿನಿಂದ ತಲೆ ನೇವರಿಸಿ ಮುಗುಳ್ನಕ್ಕಿದ್ದರು.
ಅವರ ಕೋಲು ಹಿಡಿದು ‘ಹೀಗೆ ಬನ್ನಿ ತಾತ.. ನಾವೆಲ್ರೂ ನಿಮಗೋಸ್ಕರವೇ ಕಾಯ್ತಿದ್ವಿ..’ ಎನ್ನುತ್ತಾ ತನ್ನ ಶಾಲೆಯ ಕಡೆಗೆ ಕರೆದೊಯ್ಯತೊಡಗಿದ. ಆ ಹಾದಿಯಲ್ಲಿ ನಡೆಯುತ್ತಾ ಸ್ವತಃ ಗಾಂಧಿ ಬೆರಗಾಗಿದ್ದರು. ಅಲ್ಲಿ ಕೋಮುವಾದವಿರಲಿಲ್ಲ. ಭ್ರಷ್ಟಾಚಾರವಿರಲಿಲ್ಲ. ಅಸಮಾನತೆ, ಹಿಂಸೆ, ಶೋಷಣೆ, ಅಪರಾಧಗಳಿರಲಿಲ್ಲ! ಮುಂಜಾನೆ ರೇಡಿಯೋ ಉಸುರುತ್ತಿದ್ದ ‘ನಾವು ಮಕ್ಕಳು.. ಶಾಂತಿ ಸ್ವರಗಳು/ಭಾರತಾಂಬೆ ಮಡಿಲ ಪಡೆದ ಜೀವಕಣಗಳು..’ ಅನ್ನೋ ಹಾಡಿನಿಂದ ಎಚ್ಚೆತ್ತು ಕಣ್ಣು ಬಿಟ್ಟವನಿಗೆ ಅರಿವಾಗಿತ್ತು- ತಾನು ಇಷ್ಟೊತ್ತಿಗಾಗಲೇ ಶಾಲೆಯಲ್ಲಿರಬೇಕಿತ್ತು! ಅಂದು ಅಕ್ಟೋಬರ್ ನ ಎರಡನೇ ದಿವಸವಾಗಿತ್ತು.