ಅವನು ಶ್ರೀಧರ, ಅವಳು ಉಮಾ. ಎಲ್ಲಾ ಸ್ನೇಹದಂತೆ ಇವರ ಸ್ನೇಹ; ನದಿಯಂತೆ ಎನ್ನಿ. ಅದರ ಪ್ರಾರಂಭ ಏಕೆ, ಹೇಗೆ ಹೇಳುವುದು ಕಷ್ಟ ಅಲ್ಲವೆ? ಇವರ ಸ್ನೇಹವೂ ಹಾಗೆಯೇ. ಯಾವಾಗಲೋ, ಹೇಗೋ ಪ್ರಾರಂಭವಾಯಿತು, ಹೇಗೋ, ಮುಂದುವರೆಯಿತು. ಅವನ ಮಗಳು ಮೀರಾ ಮತ್ತು ಆಕೆಯ ಮಗಳು ನೀತು ಹತ್ತಾರು ವರ್ಷಗಳ ಹಿಂದೆ ಒಟ್ಟಿಗೆ ಭರತನಾಟ್ಯ ಕಲಿಯುತ್ತಿದ್ದರು. ಆ ಕ್ಲಾಸುಗಳಿಗೆ ಅವನು ತನ್ನ ಮಗಳನ್ನು ಕರೆದುಕೊಂಡು ಹೋಗುತ್ತಿದ್ದ. ಆಕೆ ಅವಳ ಮಗಳನ್ನು ಕರೆದುಕೊಂಡು ಬರುತ್ತಿದ್ದಳು. ಒಬ್ಬೊರನ್ನೊಬ್ಬರು ನೋಡಿ ಮುಗುಳ್ನಗುತ್ತಿದ್ದರು. ಆಕೆಯ ಮನೆ ಇವನ ಮನೆ ಹತ್ತಿರವೇ. ಒಮ್ಮೊಮ್ಮೆ ಇವನಿಗೆ ಮತ್ತಾವುದೋ ಕೆಲಸವಿದ್ದಾಗ ಆಕೆಯೇ ಮೀರಾಳನ್ನು ಮನೆಗೆ ಬಿಡುತ್ತಿದ್ದಳು. ಇವನು ಅವಳ ಮಗಳನ್ನು ಅವರ ಮನೆ ತಲಪಿಸಿದ್ದೂ ಉಂಟು. ನಂತರ ಅಲ್ಲಿ ಇಲ್ಲಿ ಸಿಕ್ಕರೆ ಹಲೋ ಹೇಳಿ ಮಾತನಾಡಿಸುತ್ತಿದ್ದ. ಅವಳೂ ನಗು ನಗುತ್ತಾ ಮಾತಾಡುತ್ತಿದ್ದಳು. ಅವನಿಗೆ ಇನ್ನೇನು ಬೇಕು, ಹೇಳಿ.
ಅವನೊಬ್ಬ ರಸಿಕ; ಯಾವುದೇ ಸುಂದರ ವಸ್ತು ಸಿಕ್ಕರೂ ಹತ್ತಿರ ಹೋಗುತ್ತಿದ್ದ, ಹೆಂಗಸರೂ ಸೇರಿದಂತೆ. ಅವರೊಡನೆ ಮಾತನಾಡಿ, ನಗಿಸಿ ಸಂತೋಷ ಪಡುತ್ತಿದ್ದ. ಇದು ಅವನಿಗೆ ಬಹಳ ಮೋಜು ಎನಿಸಿತ್ತು. ಆದರೆ ಅವನು ಸಭ್ಯ, ಯಾವುದೇ ದುರುದ್ದೇಶವಿರಲಿಲ್ಲ; ಮಾತುಕತೆ ಸ್ನೇಹ ಅಷ್ಟಕ್ಕೆ ಸೀಮಿತ.
ಒಂದು ನಿಜ. ಅವಳು ಸ್ಫುರದ್ರೂಪಿ. ರೂಪಕ್ಕೆ ಸರಿಯಾದ ಉಡುಗೆ ಕೂಡ. ಕೆಲವೊಮ್ಮೆ ಸರಳ, ಸೌಮ್ಯತೆ ಹೊರಸೂಸಿದಂತೆ. ಕೆಲವೊಮ್ಮೆ ಉದ್ರೇಕ ತರುವ ಉಡುಗೆ; ಯಾರಾದರೂ ಬಲೆ ಬೀಳುವಂತೆ. ಅವನು ಮನಸೋತಿದ್ದು ಸ್ವಾಭಾವಿಕ. ಅವಳೊಡನೆ ಮಾತಾಡುತ್ತಾ ಇರಬೇಕೆಂಬ ಹಂಬಲ, ಅವಳನ್ನೇ ನೋಡುತ್ತಿರುವ ಹಂಬಲ ಅವನಿಗೆ. ಹೀಗಾಗಿ ಬಲು ಬೇಗ ಅವಳು ಸಿಗಬಹುದಾದ ಜಾಗಗಳನ್ನು ಪತ್ತೆ ಹಚ್ಚಿದ. ಅವಳ ಮನೆ, ಹತ್ತಿರವಿದ್ದ ರೈಲ್ವೆ ಸ್ಟೇಷನ್, ವಾರದಲ್ಲಿ ನಾಲ್ಕಾರು ಬಾರಿಯಾದರೂ ಹೋಗಬೇಕಾಗಿದ್ದ ಶಾಪಿಂಗ್ ಇಲ್ಲೆಲ್ಲಾ ಅವಳನ್ನು ಹುಡುಕಿಕೊಂಡು ಹೋಗುತ್ತಿದ್ದ. ಕೆಲವೊಮ್ಮೆ ಸಿಗುತ್ತಿದ್ದಳು, ಕೆಲವೊಮ್ಮೆ ಇಲ್ಲ. ಸಿಕ್ಕಾಗ ಏನಾದರೂ ಮಾತುಕತೆ, ನಗೆ. ಅವಳಿಗೂ ಇದು ಬೇಕು ಅನ್ನಿಸಿರಬೇಕು.
ಅವನ ಮನೆಯಲ್ಲೋ ಅತಿ ವಿಚಿತ್ರ. ಅವನ ಹೆಂಡತಿ ಶೀಲಾ. ಇಪ್ಪತ್ತೈದು ವರ್ಷಗಳ ಹಿಂದೆಯೇ ಮದುವೆ ಆಗಿತ್ತು. ನಲ್ಮೆಯ ಸಂಸಾರವೂ ಸಾಗಿತ್ತು. ಆದರೆ ಮಗಳು ಮೀರಾ ಹುಟ್ಟಿದ ಮೇಲೆ ಅವಳ ಸ್ವಭಾವವೇ ಬೇರೆ ಆಯಿತು. ಅವಳಿಗೆ ಜೀವನವೇ ಬೇಡ ಅನ್ನಿಸಿತು. ಬದಲಾಗಿ ದೇವರ ಕಡೆ ಮನ ಹೊರಳಿತು. ಸಿಡ್ನಿಯಲ್ಲಿರುವ ಗುಡಿಗಳಿಗೆಲ್ಲಾ ಹೋಗುತ್ತಿದ್ದಳು. ಅಲ್ಲದೆ ರಾಮಕೃಷ್ಣಾಶ್ರಮ, ಚಿನ್ಮಯ ಮಿಷನ್, ಸಾಯಿಬಾಬಾ ಮಂದಿರ ಇವು ಬೇರೆ. ಹೋದ ಹಲವಾರು ವರ್ಷಗಳಿಂದ ಇದೇ ಅವಳ ಜೀವನ. ವಿಷ್ಣು ಸಹಸ್ರ ನಾಮ, ಲಲಿತಾ ಸಹಸ್ರ ನಾಮ, ಹನುಮಾನ್ ಚಾಲೀಸ, ಕೋಟಿ ಈ ಜಪ, ಕೋಟಿ ಆ ಜಪ, ಲೆಕ್ಕವಿಲ್ಲ. ಯಾರಾದರೂ ಸ್ವಾಮಿಗಳು, ಗುರುಗಳು ಸಿಡ್ನಿಗೆ ಬಂದರೆ ಶೀಲಾ ಮತ್ತು ಅವಳ ಗೆಳತಿಯರಿಗೆ ಎಲ್ಲಿಲ್ಲದ ಉತ್ಸಾಹ, ಸಂಭ್ರಮ ಮತ್ತು ಲವಲವಿಕೆ. ಅಲ್ಲಿ ಇಲ್ಲಿ ಅವರಿಗೆ ಪಾದ ಪೂಜೆ; ಸರಿ, ಇವಳು ಐವತ್ತು ಜನರಿಗೆ ಬೆಳಗಿನ ಉಪಹಾರ ತಿಂಡಿ, ಇಡ್ಲಿ, ದೋಸೆ ಮಾಡಿಕೊಂಡು ಹೊರಡಬೇಕು, ಅದೂ ಬೆಳಗ್ಗೆ ಆರಕ್ಕೆ. ಇನ್ನು ಮಧ್ಯಾಹ್ನ, ರಾತ್ರಿಯ ಪೂಜೆಗೆ ಎಲ್ಲಾ ಸೇರಿ ಅಡಿಗೆ ಮಾಡುವುದು. ನಂತರ ಸ್ವಾಮಿಗಳ ಪ್ರವಚನ- ಗೀತೆಯ ಬಗ್ಗೆ, ಭಾಗವತದ ಬಗ್ಗೆ. ಈ ಜನರೇ ಸ್ವಾಮಿಗಳ ಶ್ರೋತೃಗಳು. ಸುಸ್ತಾಗಿ ರಾತ್ರಿ ಮನೆಗೆ ಹಿಂದಿರುಗಿ ಸುಮ್ಮನಿರುತ್ತಾಳೆಯೇ? ಹೋದ ಕಡೆ ಆದ ಮಾತುಕತೆ, ಜಗಳಗಳನ್ನು ಕುರಿತು ತನ್ನ ಗೆಳತಿಯರೊಂದಿಗೆ ಗಂಟಾನುಗಟ್ಟಲೆ ಟೆಲಿಫ಼ೋನಿನಲ್ಲಿ ಪೋಸ್ಟ್ ಮಾರ‍್ಟಮ್. ಹೀಗಾಗಿ ಮನೆಯ ಕಡೆ, ಗಂಡನ ಕಡೆ ನಿಗ ಇಡಲು ಸಮಯವೇ ಇಲ್ಲ. ಈ ಕಾರ್ಯಕ್ರಮ ಇಲ್ಲದೇ ಹೋದಾಗ ಆಫೀಸಿಗೆ ಹೋಗಿ ಕೆಲಸ ಮಾಡುವುದು. ಬಂದ ಸಂಬಳವೆಲ್ಲಾ, ಈ ತರಹ ಸತ್ಕಾರ್ಯಗಳಿಗೆ ವಿನಿಯೋಗ, ಅಲ್ಲದೆ ಆಗಾಗ್ಗೆ ಭಾರತಕ್ಕೆ ತೀರ್ಥಯಾತ್ರೆ ಬೇರೆ! ಇದು ಶ್ರೀಧರನಿಗಷ್ಟೇ ಅಲ್ಲ, ಅವನ ಮಗಳು ಮೀರಾಳಿಗೂ ಬೇಸರ ತಂದಿತ್ತು. ಲಂಡನ್ನಿನಲ್ಲಿ ಯಾವುದೋ ಕೆಲಸ ಸಿಗುತ್ತಿದ್ದಂತೆ ಅವಳು ಅಲ್ಲಿಗೆ ಹೋಗಿಬಿಟ್ಟಳು. ಇನ್ನು ಅವಳ ಮದುವೆ ಪ್ರಶ್ನೆ, ಅವನೇ ಆಗಾಗ್ಗೆ ಅವಳಿಗೆ ಫ಼ೋನ್ ಮಾಡಿ ವಿಚಾರಿಸಿಕೊಳ್ಳುತ್ತಿದ್ದ- ‘ಸರಿಯಾದ ಹುಡುಗನನ್ನು ನಾನೇ ಹುಡುಕಿಕೊಳ್ಳುತ್ತೇನೆ’ ಎಂಬ ಖಾಯಂ ಉತ್ತರ!
ಅವನು ಕೆಲಸ ಮಾಡುವುದು ನಾರ್ತ್ ಸಿಡ್ನಿಯ ಟೇಫಿನಲ್ಲಿ; ಬಾರತದ ಪಾಲಿಟೆಕ್ನಿಕ್ ಇರುವ ಹಾಗೆ. ಉನ್ನತ ಹುದ್ದೆಯಲ್ಲೇ ಇರುವ ಅವನಿಗೆ ಅಂತಹ ಒತ್ತಡ ಏನೂ ಇಲ್ಲ. ಹೆಚ್ಚೂ ಕಡಿಮ ಸಲೀಸಾದ ಕೆಲಸ. ಹೋಗಿ ತನ್ನ ಪಾಠ, ಪ್ರವಚನ ಮಾಡಿ ಮನೆಗೆ ಬಂದುಬಿಡಬಹುದು. ಅಲ್ಲದೆ ಅವನು ಓದಿದವನು, ಅತಿ ಬುದ್ಧಿವಂತ.
ಮನೆಯಲ್ಲಿದ್ದ ಪ್ರತಿಕೂಲ ವಾತಾವರಣದಿಂದಾಗಿ ಅವನಿಗೆ ಉಮಾಳನ್ನು ನೋಡಿದರೆ ಏನೋ ಖುಷಿ, ಏನೋ ಸಮಾಧಾನ. ಮನೆಯಲ್ಲಿ ಸಿಗದ ಶಾಂತಿ ಅವಳನ್ನು ಮಾತನಾಡಿಸಿದಾಗ ಸಿಗುತ್ತಿತ್ತು. ವಾರಕ್ಕೆ ಒಮ್ಮೆಯಾದರೂ ಅವಳನ್ನು ನೋಡಬೇಕು. ಸಾಧ್ಯವಾಗದಿದ್ದರೆ ಪರಿತಪಿಸುತ್ತಿದ್ದ ಶ್ರೀಧರ. ಇನ್ನು ಆಕೆಯ ಬಗ್ಗೆ ಹೇಳಬೇಕಾದರೆ ಅವಳು ಮದರಾಸು ಅಥವ ಕೇರಳದ ಕಡೆಯವಳು, ಗಂಡ ರಾಮನಾಥನ್ ಇಮಿಗ್ರೇಷನ್ ಆಫೀಸಿನ ಉದ್ಯೋಗಿ, ಅವಳು ಬ್ಯಾಂಕ್ ಉದ್ಯೋಗಿ. ಇಬ್ಬರು ಮಕ್ಕಳು, ನವೀನ್ ಮತ್ತು ಅವನ ಮಗಳ ಜೊತೆಯ ನೀತು. ನವೀನ್ ಈಗ ಅಮೆರಿಕದಲ್ಲಿ ಕೆಲಸದಲ್ಲಿದ್ದಾನೆ, ನೀತು ಅವನ ಮಗಳ ಜತೆ ಲಂಡನ್ನಿನಲ್ಲಿದ್ದಾಳೆ. ಉಮಾ ಸ್ನೇಹಪರತೆಯನ್ನು ತೋರಿಸಿದರೆ ಅವಳ ಗಂಡ ತದ್ವಿರುದ್ಧ. ಅವನಿಗೆ ಯಾರ ಸ್ನೇಹವೂ ಬೇಡವೇನೋ! ಶ್ರೀಧರನನ್ನು ನೋಡಿದರೆ ಗುರ್ ಎನ್ನುತ್ತಿದ್ದ. ಅವನೇನು ಅದನ್ನು ಕೇರ್ ಮಾಡಲಿಲ್ಲ.
ಹೀಗೇ ಹತ್ತಾರು ವರ್ಷಗಳು ಉರುಳಿದವು. ಉಮಾ ಮತ್ತು ಶ್ರೀಧರನ ಮಧ್ಯೆ ಉಬ್ಬು ತಗ್ಗುಗಳು ಸಹಜವಾಗಿ ಇದ್ದವು. ಕೆಲವೊಮ್ಮೆ ನಗು ನಗುತ್ತಾ ಮಾತನಾಡಿಸುವ ಅವಳು ಕೆಲವೊಮ್ಮೆ ಮುಖ ತಿರುಗಿಸಿಕೊಂಡು ಹೋಗುತ್ತಿದ್ದಳು. ಇನ್ನು ಗಂಡ ಜೊತೆಗಿದ್ದರೆ ಬಾಯಿ ತೆಗೆಯುತ್ತಿರಲಿಲ್ಲ. ಇವನೇ ಮೇಲೆಬಿದ್ದು ಮಾತನಾಡಿಸುತ್ತಿದ್ದ. ಗಂಡ ಅವನಿಗೆ ಹಲೋ ಹೇಳುವುದಕ್ಕೇ ನಾಲ್ಕಾರು ವರ್ಷ ಹಿಡಿದವು.
ಈ ಸಂಬಂಧಕ್ಕೆ ತಿರುವು ಸಿಕ್ಕಿದ್ದು ಇತ್ತೀಚೆಗೆ, ಎರಡು ವರ್ಷಗಳ ಹಿಂದೆ. ಶ್ರೀಧರ ತನ್ನ ಡಯಾಬಿಟಿಸ್ ಚೆಕ್ ಅಪ್ ಗಾಗಿ ಆರ್‌ಪಿಏ ಆಸ್ಪತ್ರೆಗೆ ಹೋಗಿದ್ದ. ಸಿಡ್ನಿಯಲ್ಲಿ ಐವತ್ತು ವರ್ಷ ಸಮೀಪದ ಗಂಡಸರಿಗೆ ಇದು ಬಹಳ ಸಾಮಾನ್ಯವಾಗಿ ಬರುವ ಖಾಯಿಲೆ; ಅವನಿಗೂ ಬಂದಿತ್ತು. ತನ್ನ ಕೆಲಸವಾದ ನಂತರ ಕೆಳಗಿಳಿಯಲು ಎಂಟನೆ ಮಹಡಿಯಲ್ಲಿ ಲಿಫ಼್ಟ್ ಪ್ರವೇಶಿಸಿದ. ಆಶ್ಚರ್ಯವಾಯಿತು. ಅಲ್ಲಿ ಉಮಾ ಮತ್ತು ರಾಮನಾಥನ್ ಇದ್ದಾರೆ.
‘ಏನು, ಇಲ್ಲಿ?’ ಸ್ವಲ್ಪ ಗಾಬರಿಯಲ್ಲೇ ಕೇಳಿದ.
‘ಏನೂ ಇಲ್ಲ, ಬರೀ ಚೆಕ್ ಅಪ್ ಗೋಸ್ಕರ ಬಂದಿದ್ವಿ’, ಅಂದಳು ಆಕೆ.
ಇನ್ನು ಹೆಚ್ಚು ಮಾತನಾಡಲಿಲ್ಲ. ಲಿಫ಼್ಟ್ ಕೆಳಗೆ ಬಂದಾಗ ‘ಬೈ’ ಅಂದವರೇ ಇಬ್ಬರೂ ಎಲ್ಲೋ ಮಾಯವಾಗಿಬಿಟ್ಟರು.
ಮಿಲಿಮಿಲಿ ಒದ್ದಾಡಿದ, ಶ್ರೀಧರ- ‘ಯಾರಿಗೆ ಚೆಕ್ ಅಪ್ ಇದು? ಯಾರಿಗೆ ಏನಾಗಿದೆ? ಅದೂ ಈ ಆಸ್ಪತ್ರೆಗೆ ಬರುವುದಕ್ಕೆ! ನನಗೇಕೆ ಇದರ ಯಾವ ಸುಳಿವನ್ನೂ ಕೊಟ್ಟಿಲ್ಲ ಆಕೆ?’ ಅವರ ಮನೆಗೆ ಫ಼ೋನ್ ಮಾಡಿ ವಿಚಾರಿಸೋಣ ಅನ್ನಿಸಿತು. ‘ಆಕೆ ಫ಼ೋನ್ ತೆಗೆದುಕೊಂಡರೆ ಪರವಾಗಿಲ್ಲ. ಬದಲಾಗಿ ಆತ ತೆಗೆದುಕೊಂಡರೆ ಏನನ್ನುತ್ತಾನೋ ಏನೋ?’ ಅನ್ನಿಸಿತು. ಸುಮ್ಮನಾದ.
ಇದಾದ ಎರಡು ದಿನಗಳ ನಂತರ ಹತ್ತಿರವೇ ಇದ್ದ ವುಲ್ ವರ್ತ್ ಸ್ಟೋರಿನಲ್ಲಿ ಶ್ರೀಧರ ಅವಳನ್ನು ಕಂಡ. ಒಮ್ಮೊಮ್ಮೆ ಅವನನ್ನು ನೋಡಿ ಮತ್ತೆಲ್ಲೋ ಹೋಗುತ್ತಿದ್ದ ಉಮಾ ಅಂದು ಅವನ ಬಳಿಯೇ ಬಂದು ನಿಂತಳು. ಅವನು ಎಂದಿನಂತೆ ಮುಗುಳ್ನಕ್ಕು ಕೇಳಿದ ‘ಅವತ್ತು ಆರ್‌ಪಿಏನಲ್ಲಿ’
ಅವನು ಮಾತು ಮುಗಿಸುವ ಮುಂಚೆಯೇ ತಾನು ಆರಂಭಿಸಿದಳು,
‘ಒಂದು ಬ್ಯಾಡ್ ನ್ಯೂಸ್ ನಿಮಗೆ ಹೇಳಬೇಕಾಗಿದೆ.’
ಅವನಿಗೆ ನಿಜಕ್ಕೂ ಗಾಬರಿ ಆಯಿತು.
‘ರಾಮ್ ಕ್ಯಾನ್ಸರ್’ ಎನ್ನುತ್ತಿದ್ದಂತೇ ಅವಳಿಗೆ ಅಳು ಬಂದು ಮಾತೇ ಹೊರಡದಾಯಿತು.
‘ಧೈರ್ಯ ತೊಗೋಳಿ, ಎಲ್ಲಿ ಕ್ಯಾನ್ಸರ್ ಆಗಿರೋದು?’
ಆಗ ಗೊತ್ತಾಯಿತು ರಾಮನಾಥನ್ ನ ಅನ್ನನಾಳದಲ್ಲಿ ಕ್ಯಾನ್ಸರ್ ಆಗಿದೆ.
‘ಈಗೇನು, ಅದಕ್ಕೂ ಪರಿಹಾರ ಹುಡುಕಿದ್ದಾರೆ, ತುಂಬಾ ಗಾಬರಿ ಬೇಡವೇನೋ’
‘ನನಗೇನೂ ಗೊತ್ತಾಗುತ್ತಿಲ್ಲ. ನೀವೇ ಬಂದು ಅವರಿಗೆ ಧೈರ್ಯ ಹೇಳಿ’ ಅಂದವಳೇ ಹೊತ್ತಾಯಿತು ಎಂದು ಹೊರಟು ಹೋದಳು.
ಇದನ್ನು ಕೇಳಿ ಶ್ರೀಧರನಿಗೆ ಅಯ್ಯೋ ಪಾಪ ಅನ್ನಿಸಿತು. ಮನೆಗೆ ಬಂದು ಹೆಂಡತಿಗೆ ಹೇಳಿದ. ‘ಅವರಿವರ ಕ್ಯಾನ್ಸರ್ ಕಟ್ಟಿಕೊಂಡು ನಮಗೇನಾಗಬೇಕು’, ಎಂದುಬಿಟ್ಟಳು. ವರ್ಷಾನುಗಟ್ಟಲೆ ಮಾಡಿದ ವಿಷ್ಣುಸಹಸ್ರನಾಮದ ಫ಼ಲ ಇಷ್ಟೇನೇ ಎಂದುಕೊಂಡು ಸುಮ್ಮನಾದ.
ರಾಮನಾಥಂಗೆ ಬಂದ ಕ್ಯಾನ್ಸರಿನಿಂದ ಶ್ರೀಧರನಿಗೆ ಸ್ವಲ್ಪ ಅನುಕೂಲವೇ ಆಯಿತು ಎನ್ನಬಹುದು. ಅವಳ ಮನೆಗೆ ಹೋಗಲು ಅವನಿಗೆ ನೆವ ಸಿಕ್ಕಿತು. ಮೊದಮೊದಲು ಮನೆಗೆ ಹೋದಾಗ ರಾಮನಾಥನ್ ಇನ್ನೂ ಗುರ್ ಎನ್ನುತ್ತಲೇ ಇದ್ದ. ಉಮಾ ಹೇಳುತ್ತಿದ್ದಳು- ‘ಸುಮ್ಮನೇ ವಿಚಾರಿಸಿಕೊಂಡು ಹೋಗೋಕೆ ಬಂದಿದ್ದಾರೆ, ಮಾತಾಡಿ’ ಅಂತ. ಆತ ಹಲೋ ಎಂದು ಸುಮ್ಮನಾಗುತ್ತಿದ್ದ. ಶ್ರೀಧರ ಇವನ ಸ್ವಭಾವಕ್ಕೆ, ವಿವಿಧ ಮೂಡುಗಳಿಗೆ ಅನುಸರಿಸಿಕೊಳ್ಳುವುದನ್ನು ಕಲಿತ; ರಾಮನಾಥನಿಗೆ ತನ್ನ ಯಾವ ಪ್ರತಿಕ್ರಿಯೆಯನ್ನೂ ತೋರಿಸುತ್ತಿರಲಿಲ್ಲ; ಕಾರಣ ಅವಳು. ಅವಳಿಗೆ ನೋವಾಗುವ, ಕೋಪ ಬರುವ ಯಾವ ಮಾತನ್ನೂ ಆಡುವಂತಿಲ್ಲ! ನಿಜ ಹೇಳಬೇಕಾದರೆ, ಶ್ರೀಧರನಿಗೆ ಇವನ ಕ್ಯಾನ್ಸರ್, ಇವನ ಆರೋಗ್ಯ ಇವಾವುದರ ಬಗ್ಗೆಯೂ ಆಸಕ್ತಿ ಇರಲಿಲ್ಲ. ಅವನಿಗೆ ಬೇಕಾಗಿದ್ದು ಅವಳು, ಅವಳ ಸ್ನೇಹ, ಅವಳ ಜೊತೆ ಮಾತುಕತೆ, ಅವಳ ಸಂಗ. ಅವಳು ಸ್ನೇಹಪರತೆ ಆದರೂ ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸುತ್ತಿದ್ದಳು. ಅಡುಗೆಮನೆಯಲ್ಲಿ ಸೇರಿಕೊಂಡು ಹೊರಬರುತ್ತಿರಲಿಲ್ಲ, ಮಹಡಿಯ ಮೇಲೆ ಹೋಗಿ ಅಲ್ಲಿಯೇ ಇದ್ದುಬಿಡುತ್ತಿದ್ದಳು. ಶ್ರೀಧರ ಇವೆಲ್ಲವನ್ನೂ ಸಹಿಸಿಕೊಂಡು ಅವನ ಜತೆ ಅದೂ ಇದೂ ಮಾತನಾಡಿ ಹೊರಬರುತ್ತಿದ್ದ.
ಒಮ್ಮೆ ಆಕೆ ಫ಼ೋನ್ ಮಾಡಿ ‘ನಿಮಗಾದರೆ ದಯವಿಟ್ಟು ಮನೆಯ ಹತ್ತಿರ ಬನ್ನಿ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕು’, ಎಂದಳು. ಶ್ರೀಧರ ಖುಶಿಯಾಗಿಯೇ ಹೊರಟ. ಅಂದು ರಾಮನಾಥನ ಸ್ಥಿತಿ ಉಲ್ಬಣವಾಗಿತ್ತು. ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾಗಿತ್ತು. ಮೂವರೂ ಅವರ ಕಾರಿನಲ್ಲಿ ಹೊರಟರು; ಆಕೆಯೇ ಡ್ರೈವ್ ಮಾಡಿದಳು. ಆತ ಮುಂದಿನ ಸೀಟಿನಲ್ಲಿ ಕುಳಿತ್ತಿದ್ದ. ಶ್ರೀಧರ ಹಿಂದಿನ ಸೀಟಿನಲ್ಲಿ; ಅವಳನ್ನು ಮನಸಾರೆ ನೋಡಿ ಆನಂದ ಪಟ್ಟ; ಕತ್ತೆತ್ತಿದರೆ ಅವಳ ಮುಂದಿದ್ದ ಕನ್ನಡಿಯಲ್ಲಿ ಅವಳದೇ ಮುದ್ದು ಮುಖ. ಅರ್ಧ ಗಂಟೆಯ ಡ್ರೈವ್. ಶ್ರೀಧರನಿಗೆ ಮನಸ್ಸಿನಲ್ಲಿ ಕೆಟ್ಟ ಯೋಚನೆ ಹೊಳೆಯಿತು ‘ಇನ್ನೇನು ಸ್ವಲ್ಪ ದಿನಕ್ಕೆ ಇವನು ಸಾಯುತ್ತಾನೆ. ನಂತರ ನಮ್ಮಿಬ್ಬರ ಮಧ್ಯೆ ಯಾರೂ ಇರುವುದಿಲ್ಲ!’ ಅವನ ಅನ್ನಿಸಿಕೆಗೆ ಅವನೇ ತೆಗಳಿಕೊಂಡ. ‘ಏನು, ಆತನನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗಲೂ ಇಂತಹ ಯೋಚನೆಯೇ? ಎಂತಹ ನೀಚ ನಾನು!’
ಆಸ್ಪತ್ರೆಗೆ ಹೋಗಿ ವೈದ್ಯರನ್ನು ಕಂಡಿದ್ದಾಯಿತು. ಕ್ಯಾನ್ಸರ್ ಹರಡಿರುವುದು ಖಚಿತವಾಯಿತು. ಆಕೆಯ ಕೈಕಾಲುಗಳು ನಡುಗಲಾರಂಭಿಸಿದವು. ವಾಪಸ್ ಬರುವಾಗ ಶ್ರೀಧರನೇ ಕೇಳಿ ಕಾರಿನ ಕೀ ಪಡೆದು ಡ್ರೈವ್ ಮಾಡಿದ. ಆಕೆ ಹೇಳಿದಳು, ‘ಹೀಗಾಗಬಹುದು ಎಂಬ ಅನುಮಾನವಿತ್ತು ನನಗೆ. ಧೈರ್ಯಕ್ಕೆ ನಿಮ್ಮನ್ನ ಕರೆದೆ. ನಿಮಗೆ ತೊಂದರೆ ಕೊಟ್ಟೆ’ ‘ಇಂತಹ ಸಂದರ್ಭದಲ್ಲಿ ತೊಂದರೆ, ಕಷ್ಟ ಅಂತ ನೋಡ್ತಾರ? ನೀವು ಮಾಡಿದ್ದು ಒಳ್ಳೇದಾಯಿತು. ಯಾವಾಗ ಬೇಕಾದರೂ ನನ್ನನ್ನ ಕರೀರಿ.’
ಡ್ರೈವ್ ಮಾಡುವಾಗ ಮುಂದಿದ್ದ ಕನ್ನಡಿಯಲ್ಲಿ ಅವಳ ಮುಖ ಕಂಡಿತಾದರೂ ಶ್ರೀಧರ ಮತ್ತೆ ಅತ್ತ ನೋಡಲಿಲ್ಲ. ಅವಳು ಕಣ್ಣೀರು ಹಾಕುತ್ತಿದ್ದಳು, ಇವನಿಗೆ ನೋಡಲಾರದ ದೃಶ್ಯ.
ಮನೆಗೆ ಬಂದ ತಕ್ಷಣ ತನ್ನ ಹಾಸಿಗೆಯಲ್ಲಿ ಕುಸಿದು ಬಿದ್ದ ರಾಮನಾಥನ್ ಶ್ರೀಧರನ ಕೈ ಹಿಡಿದುಕೊಂಡು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ. ‘ನನಗೆ ಯಾರ ಸಹಾಯವೂ ಬೇಡ. ನನ್ನನ್ನು ನಾನೇ ನೋಡಿಕೊಳ್ಳುತ್ತೇನೆ ಅಂತ ಜಂಭ ಪಟ್ಟಿಕೊಂಡಿದ್ದೆ. ಈಗ ಏನಾಯಿತು ನೋಡಿ.’ ಶ್ರೀಧರ ಅವನಿಗೆ ಸಮಾಧಾನ ಹೇಳಿ ಹೊರಬಂದ.
ಕ್ಯಾನ್ಸರ್, ಇದರ ಬಗ್ಗೆ ಹೇಳಬೇಕಾಗಿಲ್ಲ. ಮನುಷ್ಯನನ್ನು ತಿಂದುಹಾಕಿ ಬಿಡುತ್ತದೆ. ರಾಮನಾಥನ್ ಕೆಲಸ ಬಿಡಬೇಕಾಗಿ ಬಂತು. ಇನ್ಷೂರೆನ್ಸ್ ಕಡೆಯಿಂದ ಸಾಕಷ್ಟು ಹಣ ಎರಡು ವಾರಕ್ಕೊಮ್ಮೆ ಬರುತ್ತಿತ್ತು, ಹಣಕಾಸಿನ ಬಗ್ಗೆ ಯೋಚಿಸುವ ಪ್ರಮೇಯವಿರಲಿಲ್ಲ. ಸಮಯ ಕಳೆಯುವುದು ನಿಜವಾದ ಸಮಸ್ಯೆ ಆಗಿತ್ತು. ಮನೆಯಲ್ಲೇ ಸದಾ ಇರುವುದು ಕಷ್ಟದ ಕೆಲಸ. ಶ್ರೀಧರನನ್ನು ಕೇಳಿಕೊಂಡ- ‘ದಿನಾ ಒಮ್ಮೆ ಬಂದು ಹೋಗಿ.’ ಇವನೋ ಸದಾ ಸಿದ್ಧ. ಹೋಗಿ ಬರುತ್ತಿದ್ದ, ಅವನಿಗೋಸ್ಕರವೋ, ಅವಳಿಗೋಸ್ಕರವೋ! ಆದರೆ ಅವನನ್ನು ಈ ಸ್ಥಿತಿಯಲ್ಲಿ ನೋಡಿ ಶ್ರೀಧರನಿಗೆ ಅವನ ಮೇಲೆ ಅಪಾರ ಕರುಣೆ ಬರಲಾರಂಭಿಸಿತು. ಅವನು ಕೇಳಿದ ಪುಸ್ತಕ, ಸೀಡಿ, ಡಿವಿಡಿಗಳನ್ನು ಎಲ್ಲಿಂದಾದರೂ ತಂದು ಒದಗಿಸುತ್ತಿದ್ದ. ಅವನು ಪುಸ್ತಕ ಓದುತ್ತಾ, ಸೀಡಿ ಕೇಳುತ್ತಾ, ಡಿವಿಡಿ ನೋಡುತ್ತಾ ಸಮಯ ಕಳೆಯುವುದು ಸುಲಭವಾಯಿತು, ತನ್ನ ಕ್ಯಾನ್ಸರ್ ಅಲ್ಲದೆ ಮಿಕ್ಕ ವಿಚಾರಗಳತ್ತ ಗಮನ ಹರಿಸುವುದು ಸಾಧ್ಯವಾಯಿತು. ವಿವೇಕಾನಂದರ ಜೀವನ ಚರಿತ್ರೆ, ಕೊಲೊಂಬೋ ಇಂದ ಆಲ್ಮೋರಾಕ್ಕೆ, ರಾಮಕೃಷ್ಣರ ಜೀವನ ಚರಿತ್ರೆ, ವಾರ್ ಅಂಡ್ ಪೀಸ್ ಇಂತಹ ಪುಸ್ತಕಗಳನ್ನು, ಎಂಎಸ್ ಸುಬ್ಬಲಕ್ಷ್ಮಿ ಮುಂತಾದವರ ಸೀಡಿಗಳನ್ನು, ಇಂಗ್ಲಿಷ್, ತಮಿಳು ಮತ್ತು ಹಿಂದಿ ಚಿತ್ರಗಳ ಡಿವಿಡಿಗಳನ್ನು ಸರಬರಾಜು ಮಾಡಿದ. ಶ್ರೀಧರನ ಮನೆಯಲ್ಲಿ ಭಕ್ತಿ, ಹಿಂದೂ ಧರ್ಮಕ್ಕೆ ಸಂಭಂದಿಸಿದ ಪುಸ್ತಕಗಳಿಗೆ ತೊಂದರೆ ಇರಲಿಲ್ಲ, ಯಥೇಚ್ಚವಾಗಿದ್ದವು. ರಾಮನಾಥನ್ ಮಲಗುತ್ತಿದ ಕೊಠಡಿಯಲ್ಲಿ ದೊಡ್ಡದಾದ ಮೊನಾಲೀಸಾ ಚಿತ್ರವಿತ್ತು. ಆತನಿಗೆ ಕಲೆಯಲ್ಲಿ ಸ್ವಲ್ಪ ಆಸಕ್ತಿ ಇದ್ದಂತಿತ್ತು. ಶ್ರೀಧರನಿಗೋ ಕಲೆಯಲ್ಲಿ ಅಪಾರ ಪರಿಶ್ರಮ. ಮೊನಾಲೀಸಾ, ಲಿಯೊನಾರ್ಡೋ ಡ ವಿಂಚಿ, ಮೈಕೇಲ್ ಆಂಜಲೊ ಕುರಿತು ಆಗಾಗ ಮಾತನಾಡುತ್ತಿದ್ದ. ಸಮಯ ಹೋಗಿದ್ದೇ ಗೊತ್ತಾಗುತ್ತಿರಲಿಲ್ಲ. ಕಾಲಕ್ರಮೇಣ ರಾಮನಾಥನ್ ಇಹದ ಮೇಲಿನ ಮಮತೆಯನ್ನು ಕಳೆದುಕೊಂಡ. ಮುಂದಿನದನ್ನು ನೆನಸಿಕೊಂಡು ಅಳುವುದು ಕಡಿಮೆ ಆಯಿತು.
ಈ ವಿಚಾರ ಬಂದಾಗಲೆಲ್ಲಾ, ಶ್ರೀಧರನ ಮನೆಯಿಂದ ಪುಸ್ತಕ ಮುಂತಾದುವುಗಳ ಸರಬರಾಜು ಆಗುವುದನ್ನು ಕಂಡಾಗಲೆಲ್ಲಾ ಶೀಲಾ ಕಿಡಿಕಾರುತ್ತಿದ್ದಳು- ‘ಹೋಗಿ ಅವರ ಮನೆ ಚಾಕರಿ ಮಾಡಿಬನ್ನಿ. ನಿಮಗೆ ಮಾಡೋದಕ್ಕೆ ಕೆಲಸ ಇಲ್ಲ’ ಈತ ಲೆಕ್ಕಿಸಲಿಲ್ಲ.
ಒಮ್ಮೊಮ್ಮೆ ಶ್ರೀಧರ ಮನೆಗೆ ಬಂದಾಗ ರಾಮನಾಥನ್ ಮಲಗಿರುತ್ತಿದ್ದ. ಆಗ ಇವನಿಗೆ ಉಮಾಳೊಡನೆ ಮಾತನಾಡುವ ಸಡಗರ. ಕೆಲವು ಸಲ ಅವಳು ಮುಖಕೊಟ್ಟು ಅವನೊಂದಿಗೆ ಮಾತನಾಡುತ್ತಿದ್ದಳು. ಇಲ್ಲದಿದ್ದರೆ ‘ಅವರು ಮಲಗಿದ್ದಾರೆ’ ಎಂದು ಬಾಗಿಲಲ್ಲೇ ಹೇಳಿ ಕಳುಹಿಸುತ್ತಿದ್ದಳು. ‘ಈ ಹೆಂಗಸರೇ ಹೀಗೆ. ನಗುನಗುತ್ತಾ ನನ್ನ ಜೊತೆ ಒಂದೆರಡು ಮಾತಾಡಿದರೆ ಇವಳಿಗೇನು ಹೋಗುತ್ತೆ?’ ಅಂದುಕೊಂಡು ಹಿಂತಿರುಗುತ್ತಿದ್ದ.
ಕೀಮೋ ಚಿಕಿತ್ಸೆ ಆಯಿತು, ಒಂದಲ್ಲ ಎರಡು ಬಾರಿ. ವ್ಯಕ್ತಿ ಮತ್ತಷ್ಟು ಬಡವಾದನೇ ಹೊರತು ಸುಧಾರಣೆ ಏನೂ ಕಾಣಲಿಲ್ಲ. ವೈದ್ಯರು ಹೇಳಿದರು, ‘ಈಗ ಕ್ಯಾನ್ಸರ್ ನಾಲ್ಕನೆ ಮಟ್ಟಕ್ಕೆ ಹೋಗಿದೆ. ಇನ್ನು ನಾಕು ದಿವಸದಲ್ಲಿ ಸಾವು ಬರಬಹುದು ಅಥವಾ ನಾಲ್ಕು ವರ್ಷದಲ್ಲಿ ಬರಬಹುದು.’
ತಕ್ಷಣ ಮಕ್ಕಳಿಗೆ ವಿಷಯ ತಿಳಿಸಲಾಯಿತು. ಇಬ್ಬರೂ ಒಮ್ಮೆಗೇ ಧಾವಿಸಿ ಬಂದರು. ಇಬ್ಬರೂ ಶ್ರೀಧರನನ್ನು ತಬ್ಬಿಕೊಂಡು, ‘ಅಂಕಲ್ ನೀವೇ ಎಲ್ಲಾ ನೋಡಿಕೋಬೇಕು’ ಎಂದು ಹೇಳಿದರು. ಒಂದು ವಾರ ಸಿಡ್ನಿಯಲ್ಲೇ ಇದ್ದು ಇಬ್ಬರೂ ವಾಪಸ್ ತಂತಮ್ಮ ಊರುಗಳಿಗೆ ಹೊರಟರು.
ಕ್ಯಾನ್ಸರ್ ತಗುಲಿದವರ ಬದುಕು ಜಾರೋ ಬಂಡೆಯಲ್ಲವೆ? ಈಗ ರಾಮನಾಥನ್ ದಿನೇ ದಿನೇ ಬದಲಾಗ ತೊಡಗಿದ. ಕೆಲವೊಮ್ಮೆ ಸುಮ್ಮನೆ ಅಳುತ್ತಾ ಕುಳಿತು ಬಿಡುತ್ತಿದ್ದ. ಶ್ರೀಧರನನ್ನು ನೋಡಿದಾಗ ಅಳು ಇನ್ನೂ ಹೆಚ್ಚಾಗುತ್ತಿತ್ತು. ‘ಏನೋ ದೇವರು ಕಳಿಸಿದ ಹಾಗೆ ನೀವು ಬಂದಿದ್ದೀರಿ. ನಾನು ಇಂದೋ ನಾಳೇನೋ ಹೋಗುವುದು ಗ್ಯಾರಂಟಿ. ನವೀನ್, ನೀತು ಇಬ್ಬರಿಗೂ ಮದುವೆ ಆಗಿಬಿಟ್ಟಿದ್ದರೆ ಚನ್ನಾಗಿರೋದು. ಯಾವುದೂ ನಮ್ಮ ಕೈಯ್ಯಲ್ಲಿ ಇಲ್ಲ. ನಾನು ಹೋದಮೇಲೆ ಇತ್ತ ಬರುವುದನ್ನ ನಿಲ್ಲಿಸಬೇಡಿ.’
ಶ್ರೀಧರ ಹೇಳಿದ, ‘ಯೋಚನೆ ಮಾಡಬೇಡಿ. ನಾನು ಆಗಾಗ ಬಂದು ಉಮಾನ ವಿಚಾರಿಸುತ್ತಿರುತ್ತೀನಿ, ನವೀನ್, ನೀತು ಅವರಿಗೂ ಫ಼ೋನ್ ಮಾಡುತ್ತಾ ಇರಿತ್ತೀನಿ.’
‘ಅಷ್ಟು ಮಾಡಿ, ದಮ್ಮಯ್ಯ’ ಅಂದ ಆತ. ಅವರಿಬ್ಬರೂ ಇಷ್ಟೆಲ್ಲಾ ಮಾತಾಡಿದರೂ ಉಮಾ ಮಾತ್ರ ತನ್ನ ರೂಮಿನಿಂದ ಹೊರಬರಲಿಲ್ಲ.
ಆ ದಿನವೂ ಬೇಗಲೇ ಬಂತು. ಮನೆಯಲ್ಲಿ ಕುಸಿದುಬಿದ್ದ ರಾಮನಾಥನನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮತ್ತೆ ಶ್ರೀಧರನೇ ಜೊತೆಗೆ ಹೋಗಿದ್ದ. ಅಷ್ಟೇನೂ ಮಾತನಾಡಲಿಲ್ಲ, ಉಮಾ. ಈ ವೇಳೆಗೆ ಆರ್‌ಪಿಏ ಆಸ್ಪತ್ರೆಯ ವೈದ್ಯರು, ನರ್ಸುಗಳು ಎಲ್ಲಾ ಶ್ರೀಧರನ ಪರಿಚಿತರಾಗಿಬಿಟ್ಟಿದ್ದರು. ಪ್ರಮುಖ ವೈದ್ಯರು ಅವನನ್ನು ಮತ್ತು ಉಮಾಳನ್ನು ತಮ್ಮ ಆಫ಼ೀಸಿಗೆ ಕರೆದು ಹೇಳಿದರು, ‘ಇಷ್ಟೇ ಇನ್ನು, ಮಕ್ಕಳನ್ನು ಕರೆಸಿಬಿಡಿ.’ ಎರಡು ದಿನಗಳಲ್ಲಿ ನವೀನ್ ಮತ್ತು ನೀತು ಬಂದರು, ಮೌನವಾಗಿ ಅಪ್ಪನ ಮುಂದೆ ನಿಂತರು. ಅಂದು ಸಂಜೆ ಉಮಾ ಮತ್ತು ಮಕ್ಕಳು ಶ್ರೀಧರನನ್ನು ಆಸ್ಪತ್ರೆಯಲ್ಲೇ ಇರುವಂತೆ ಹೇಳಿ, ದೇವರಿಗೆ ಕೈಮುಗಿದು ಬರುವುದಾಗಿ ದೇವಸ್ಥಾನಕ್ಕೆ ಹೋದರು. ಇತ್ತ ರಾಮನಾಥನ್ ಶ್ರೀಧರನ ಕೈ ಹಿಡಿದಿರುವಂತೆಯೇ ಕಣ್ಮುಚ್ಚಿದ. ಶ್ರೀಧರ ಹೊರಬಂದು ಕುಳಿತ. ಆಫ಼್ ಆಗಿದ್ದ ಮೊಬೈಲನ್ನು ಆನ್ ಮಾಡಿ ಉಮಾ ಮತ್ತು ಮಕ್ಕಳಿಗೆ ವಿಷಯ ತಿಳಿಸಬೇಕೇ? ಅವರು ಡ್ರೈವ್ ಮಾಡುತ್ತಾ ಇರುತ್ತಾರೆ ಬೇಡವೇನೋ ಎಂದೆಲ್ಲಾ ಯೋಚಿಸುತ್ತಿದ್ದಾಗ ಮೂರೂಜನ ಬಂದು ಅವನ ಮುಂದೆ ಪ್ರಶ್ನಾರ್ಥಕವಾಗಿ ನಿಂತರು. ಶ್ರೀಧರ ವಾರ್ಡಿನ ಕಡೆ ಕೈಮಾಡಿ ತೋರಿಸಿದ. ಒಳಗೆ ಹೋದ ಯಾರೂ ಹೆಚ್ಚು ಅಳಲಿಲ್ಲ. ನೀತು ಹೊರಬಂದು ಶ್ರೀಧರನನ್ನು ಕುರಿತು ಹೇಳಿದಳು, ‘ಡ್ಯಾಡಿ ಬೇಗ ಹೋಗಿಬಿಡಲಿ, ತುಂಬಾ ಸಫ಼ರ್ ಮಾಡುವುದು ಬೇಡ ಅಂತ ನಾವು ದೇವರಲ್ಲಿ ಬೇಡಿಕೊಂಡಿವಿ. ಒಂದು ರೀತೀಲಿ ಒಳ್ಳೆಯದೇ ಆಯಿತು.’ ಆದರೂ ಕಣ್ಣೀರು ಧಾರಾಕಾರವಾಗಿ ಹರಿದಿತ್ತು.
ಅವರನ್ನೆಲ್ಲಾ ಮನೆ ತಲುಪಿಸಿ ಶ್ರೀಧರ ಮನೆಗೆ ಹೋದಾಗ ಅಲ್ಲಿ ಶೀಲಾ ಅವನನ್ನು ದುರುಗುಟ್ಟಿಕೊಂಡು ನೋಡಿದಳು, ‘ಅಲ್ಲಾರೀ ನಾನು ಇವತ್ತು ಬ್ರಿಸ್ಬೇನ್ ನಿಂದ ಬರ್ತೀನಿ, ಸ್ವಾಮಿಗಳ ಪ್ರವಚನ ಮುಗಿಸಿಕೊಂಡು ಅಂತ ಹೇಳಿದೀನಿ. ಏರ್ಪೋರ‍್ಟಿಗೆ ಬಂದು ಪಿಕಪ್ ಮಾಡಿ ಅಂತ ಹೇಳಿದೀನಿ. ಎಲ್ಲಿ ಹೋಗಿದ್ರಿ ನೀವು? ಮೊಬೈಲ್ ಗೆ ಮಾಡಿದ್ರೂ ಉತ್ತರ ಇಲ್ಲ. ಏನು ಅವಳ ಮನೆ ಚಾಕರಿಗೆ ಹೋಗಿದ್ರ?’
‘ಆಸ್ಪತ್ರೇಲಿ ಮೊಬೈಲ್ ಆಫ಼್ ಮಾಡಬೇಕಾಯಿತು. ರಾಮನಾಥನ್ ಹೋಗ್ಬಿಟ್ಟ.’ ಸಾವಿನ ಸುದ್ದಿ ಕೇಳಿ ತಣ್ಣಗಾದಳು ಶೀಲಾ.
ಮಾರನೆ ದಿವಸ ಉಮಾ, ಮಕ್ಕಳು ಮತ್ತು ಶ್ರೀಧರನ ಮೀಟಿಂಗ್, ಮುಂದಿನ ವ್ಯವಸ್ಥೆ ಕುರಿತು. ‘ಗ್ರಾಂಡ್ ಫ಼್ಯೂನೆರಲ್ಸ್’ ಎಂಬ ಸಂಸ್ಥೆಯ ಇಬ್ಬರು ಅಧಿಕಾರಿಗಳು ಆಗಮಿಸಿದರು. ರಾಮನಾಥನ್ ಅವರಿಗೆ ವಿಶೇಷವಾದ ಬೀಳ್ಕೊಡುಗೆ ಕೊಡುವುದಾಗಿ ಆಶ್ವಾಸನೆ ನೀಡಿದರು. ಅವರ ಫ಼ೀಸು ಆರು ಸಾವಿರ ಡಾಲರ್. ಇದಕ್ಕೆ ರಾಮನಾಥನ್ ಹಿಂದೆಯೇ ಇನ್ಷೂರನ್ಸ್ ತೆಗೆದುಕೊಂಡಿದ್ದರಿಂದ ಯಾರಿಗೂ ಹೊರೆ ಆಗಲಿಲ್ಲ. ಸಂಸ್ಕಾರದ ಮೊದಲು ಶವಕ್ಕೆ ಯಾವ ಉಡುಪು ತೊಡಿಸಬೇಕು ಎಂಬ ಪ್ರಶ್ನೆ ಬಂತು. ಉಮಾ ಕೂಡಲೆ ಸೂಟು ಮತ್ತು ಟೈ ಇರಲಿ, ಅದು ಅವರಿಗೆ ಬಹಳ ಇಷ್ಟವಾದ ಡ್ರೆಸ್ಸು ಎಂದಳು. ಒಳಹೋಗಿ ಸೂಟು ಟೈ ಎಲ್ಲವನ್ನೂ ತಂದು ಅವರ ಮುಂದಿಟ್ಟಳು. ನಂತರ ಬಂದವರು ಜೋಯಿಸರು. ಇವರಾಗಲೇ ತಿಥಿ ನಕ್ಷತ್ರ ಎಲ್ಲವನ್ನೂ ನೋಡಿ ಬರುವ ಶನಿವಾರ ಸಂಸ್ಕಾರಕ್ಕೆ ಒಳ್ಳೇ ದಿನವೆಂದು ನಿಶ್ಚಯಿಸಿದ್ದರು. ಉಳಿದಿದ್ದ ಒಂದು ಪ್ರಶ್ನೆ ಶವವನ್ನು ಮನೆಗೆ ತರಬೇಕೆ ಅಥವ ಆಸ್ಪತ್ರೆಯಿಂದ ನೇರ ಚಿತಾಗಾರಕ್ಕೆ ಕೊಂಡೊಯ್ಯಬೇಕೆ? ಉಮಾ ‘ಮನೆಯಿಂದಲೇ ಅವರು ತೆರಳಬೇಕು, ಮೊದಲು ಬಾಡೀನ ಮನೇಗೆ ತರೋಣ, ಆಮೇಲೆ ಚಿತಾಗಾರ ಗೊತ್ತೇ ಇದೆ’ ಎಂದಳು. ಮಕ್ಕಳು ಇದಕ್ಕೆ ಒಪ್ಪಲಿಲ್ಲ. ‘ಡ್ಯಾಡಿಗೆ ಯಾವುದರಲ್ಲೂ ನಂಬಿಕೆ ಇರಲಿಲ್ಲ. ಈಗ ಈ ಮಂತ್ರ, ತಂತ್ರ ಏನೂ ಬೇಡ. ಗ್ರೇವ್ ಬಳಿ ಬಾಡೀನ ವ್ಯೂಇಂಗಿಗೆ ಇಟ್ಟು ಅಲ್ಲೇ ಬರ್ನ್ ಮಾಡೋಣ’, ಎಂದು ಹಟ ಹಿಡಿದರು. ಶ್ರೀಧರ ಉಮಾಳ ಪರ ವಕಾಲತ್ತು ವಹಿಸಿದ. ‘ನಿಮ್ಮ ಮಮ್ಮಿಯ ಆಸೆಗೂ ಸ್ವಲ್ಪ ಗೌರವ ಕೊಡಿ’ ಎಂದು ಹೇಳಿದ. ಉಮಾ ಮುಖಸನ್ನೆಯಲ್ಲೇ ಅವನಿಗೆ ಥ್ಯಾಂಕ್ಸ್ ಹೇಳಿದಳು. ಅವಳ ಆಸೆಯಂತೆಯೇ ಶವವನ್ನು ಅರ್ಧ ಗಂಟೆಯಷ್ಟು ಮನೆಗೆ ತರುವುದು, ನಂತರ ಚಿತಾಗಾರಕ್ಕೆ ಎಂಬ ತೀರ್ಮಾನವಾಯಿತು. ಮನೆಯಲ್ಲಿ ಶಾಸ್ತ್ರಕ್ಕೆ ಬೇಕಾದ ಸಾಮಾನೆಲ್ಲವನ್ನೂ ತಾವೇ ತರುವುದಾಗಿ ಜೋಯಿಸರು ತಿಳಿಸಿದರು.
ಶನಿವಾರ, ಸಂಸ್ಕಾರದ ದಿನ. ಶ್ರೀಧರನ ಬಲಾತ್ಕಾರದ ಮೇಲೆ, ಶೀಲಾ ಬಂದು ಭಾಗವಹಿಸಿದಳು. ಸೂಟು ಟೈ ತೊಟ್ಟ ರಾಮನಾಥನ್ ದೇಹ, ಸ್ವಲ್ಪ ಊದಿಕೊಂಡಂತಿತ್ತು. ಮನೆಯಲ್ಲಿ ಮೊಟಕುಗೊಳಿಸಿದ ಶಾಸ್ತ್ರ ಕರ್ಮಗಳೆಲ್ಲಾ ಜರುಗಿದವು. ಅಲ್ಲಿಂದ ಶವವನ್ನು ಚಿತಾಗಾರಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಅವನಿಗೆ ಬೀಳ್ಕೊಡುಗೆ. ಸುಮಾರು ಐವತ್ತು ಮಂದಿ ನೆರೆದಿದ್ದರು, ರಾಮನಾಥನ್ ಮತ್ತು ಉಮಾ ಅವರ ದೂರ ಸಂಬಂಧಿಗಳು, ಅವರಿಬ್ಬರ ಆಫ಼ೀಸಿನಿಂದ ಕೆಲವರು ಹೀಗೆ. ಶವಪೆಟ್ಟಿಗೆಯನ್ನು ವೇದಿಕೆಯ ಬಳಿ ಇಡಲಾಯಿತು. ನಂತರ ಅದರ ಮುಚ್ಚಲವನ್ನು ತೆರೆಯಲಾಯಿತು. ಜೋಯಿಸರಿಂದ ಕಿರು ಭಾಷಣ (ಅವರಿಗೆ ರಾಮನಾಥನ್ ಬಗ್ಗೆ ಏನೇನೂ ಗೊತ್ತಿಲ್ಲದಿದ್ದರೂ!), ನಂತರ ಮಕ್ಕಳು ನವೀನ್ ಮತ್ತು ನೀತು ಭಾಷಣ. ಧೈರ್ಯವಾಗಿಯೇ ಮಾತಾಡಿದರು. ಬಂದ ಜನರೆಲ್ಲಾ ಶವವನ್ನು ನೋಡಿ ಅಕ್ಕಿ ಹಾಕಿದಮೇಲೆ ಚಿತಾಗಾರದ ಸಿಬ್ಬಂದಿಗಳು ಪೆಟ್ಟಿಗೆ ಮುಚ್ಚಲ ಮುಚ್ಚಿದರು. ಜನರನ್ನು ಹೊರಕಳಿಸಲಾಯಿತು.
ಜೋಯಿಸರು ಶ್ರೀಧರನ ಬಳಿ ಬಂದು ‘ನೀವು ಒಳಗೆ ಬನ್ನಿ’ ಎಂದು ಪಕ್ಕದ ವಿಶಾಲವಾದ ಕೊಠಡಿಗೆ ಕೊಂಡೊಯ್ದರು. ಅದೇ ನಿಜವಾದ ಚಿತಾಗಾರ. ದೊಡ್ಡ ಕಿಟಕಿಯ ಮುಂದೆ ಶವದ ಪೆಟ್ಟಿಗೆಯನ್ನು ಕನ್ವೆಯರ್ ಮೇಲೆ ಇಡಲಾಗಿದೆ. ಅದರ ಸುತ್ತಾ ಜೋಯಿಸರು, ಶ್ರೀಧರ, ನವೀನ್ ಮತ್ತೆ ಯಾರೋ ಇಬ್ಬರು, ರಾಮನಾಥನ್ ಕಡೆಯವರಂತೆ. ಶವದ ಪೂಜೆ ಮಾಡಿಸಿದರು ಜೋಯಿಸರು. ಅಲ್ಲಿಯೇ ಒಂದು ಪ್ಯಾನೆಲ್ ಮೇಲೆ ನಾನಾ ಸೂಚಕಗಳು. ಒಂದು ಕುಲುಮೆಯ ಒಳಗಿನ ಉಷ್ಣಾಂಶ ಹೇಳುತ್ತಿತ್ತು. ಅದು ೭೫೦ ಡಿಗ್ರೀ ತೋರಿಸುತ್ತಿದ್ದಂತೇ ಅಲ್ಲಿಯ ಅಟೆಂಡರ್ ಜೋಯಿಸರ ಕಡೆ ನೋಡಿದ. ಅವರು ನವೀನನ ಕಡೆ ನೋಡಿದರು, ಅವನು ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಶ್ರೀಧರನ ಕಡೆ ನೋಡಿದರು. ಅವನು ‘ಸರಿ’ ಎಂಬ ಸೂಚನೆ ಕೊಟ್ಟ. ಆ ಸೂಚನೆ ಜೋಯಿಸರನ್ನು ತಲುಪಿ ಅಲ್ಲಿಂದ ಅಟೆಂಡರ್ ನನ್ನು ತಲುಪಿತು. ಕೂಡಲೆ ಅವನು ಒಂದು ಗುಂಡಿ ಒತ್ತಿದ. ಹಿಂದಿದ್ದ ಕಿಟಕಿ ತೆರೆದುಕೊಂಡಿತು, ಶವದ ಪೆಟ್ಟಿಗೆ ಮುಂದೆ ಚಲಿಸಿ ಕಾದು ಕೆಂಪಾಗಿದ್ದ ಕುಲುಮೆಯಲ್ಲಿ ದೊಪ್ಪನೆ ಬಿತ್ತು. ಒಂದೆರಡು ಸೆಕೆಂಡುಗಳಲ್ಲಿ ಪೆಟ್ಟಿಗೆ ಧಗ್ ಎಂದು ಉರಿಯಲಾರಂಭಿಸಿತು. ಕಿಟಕಿ ಹಾಕಿಕೊಂಡಿತು.
‘ಸೋಮವಾರ ಬಂದು ಬೂದಿ ತೆಗೆದುಕೊಳ್ಳಿ, ರೆಡಿ ಮಾಡಿರುತ್ತೀನಿ’ ಎಂದ ಅಟೆಂಡರ್ ಅಲ್ಲಿಂದ ಹೊರಟ. ಎಲ್ಲರೂ ಅಲ್ಲಿಂದ ನಿರ್ಗಮಿಸಿದರು. ಹೋದವಾರ ರಾಮಾನಾಥನ್ ಆಗಿದ್ದವನು ಇಂದು ಶವ ಆಗಿದ್ದ, ಈಗ ‘ಬೂದಿ’ ಆದ.
ಮತ್ತೆ ಮನೆಯಲ್ಲಿ ಮೀಟಿಂಗ್ ಆಯಿತು. ವೈಕುಂಠ ಸಮಾರಾಧನೆಯ ಬಗ್ಗೆ. ಜೋಯಿಸರು ಇದಕ್ಕೆ ದಿನವೊಂದನ್ನು ಸೂಚಿಸಿದ್ದರು. ಆದರೆ ಎಲ್ಲರೂ ಬಂದು ಭಾಗವಹಿಸುವಂತೆ ಅದನ್ನು ಭಾನುವಾರಕ್ಕೆ ಮುಂತಳ್ಳಲಾಯಿತು. ನವೀನ್ ಶ್ರೀಧರನ ಜೋಬಿನಲ್ಲಿ ಕೆಲವು ನೋಟುಗಳನ್ನಿರಿಸಿ ‘ಅಂಕಲ್ ಏನೂ ತಿಳಿದುಕೊಳ್ಳಬೇಡಿ. ದಯವಿಟ್ಟು ನೀವೇ ಎಲ್ಲಾ ಏರ್ಪಾಟನ್ನೂ ಮಾಡಿ. ನಮಗೇನೂ ಗೊತ್ತಾಗುವುದಿಲ್ಲ’ವೆಂದ. ಶ್ರೀಧರನಿಗೆ ಮನೆಯಲ್ಲಿ ಸಾಕಷ್ಟು ವಿರೋಧವಿದ್ದರೂ, ಒಪ್ಪಿಕೊಂಡ, ಉಮಾಳ ಮುಖ ನೋಡಿ! ಸುಮಾರು ನೂರು ಜನ ಆಗಮಿಸಿ ರಾಮನಾಥನನ್ನು ವೈಕುಂಠ ತಲುಪಿಸಿದರು. ಸ್ಥಳೀಯ ಚರ್ಚ್ ಒಂದರಲ್ಲಿ ಶ್ರೀಧರನೇ ವೈಕುಂಠದ ವ್ಯವಸ್ಥೆ ಮಾಡಿದ್ದ. ರುಚಿಯಾದ ಊಟ, ಬಂದ ಕೆಲವರ ಪ್ರಾಮಾಣಿಕ ಕಂಬನಿ, ಕೆಲವರ ಮೊಸಳೆ ಕಣ್ಣೀರು. ಮತ್ತೆ ಕೆಲವರು ಇದಾವುದೋ ಪಾರ್ಟಿ ಎಂಬಂತೆ ನಗುನಗುತ್ತಾ, ಗೇಲಿ ಮಾಡುತ್ತಾ ಕಾಲ ಕಳೆದರು. ಮಾರನೆಯ ದಿನ ನವೀನ್ ಮತ್ತು ನೀತು ಶ್ರೀಧರನ ಮನೆಗೆ ಬಂದು ಅವನಿಗೆ ಥ್ಯಾಂಕ್ಸ್ ಹೇಳಿ ತಬ್ಬಿಕೊಂಡು ಅತ್ತು ತಂತಮ್ಮ ಊರುಗಳಿಗೆ ಹೋದರು.
ಈ ನಡುವೆ ರಾಮನಾಥನ್, ಆಸ್ಪತ್ರೆ, ಸಾವು, ಸಂಸ್ಕಾರ ಇವುಗಳ ನಡುವೆ ಮಾಯವಾಗಿದ್ದ ಶ್ರೀಧರನ ಅಂತರಂಗದ ಭಾವನೆಗಳು ಮತ್ತೆ ಹೊರಬರಲಾರಂಬಿಸಿದವು. ಅವನಿಗೆ ಅನ್ನಿಸಿತು, ‘ಈಗ ನನ್ನ ಲೈನ್ ಕ್ಲಿಯರ್ ಆಯಿತೆ? ನಡುವೆ ಇದ್ದ ರಾಮನಾಥ ಮರೆಯಾದ. ಇನ್ನು ನನ್ನ ಮತ್ತು ಉಮಾಳ ಮಧ್ಯೆ ಏನೂ ಇಲ್ಲ, ಯಾರೂ ಇಲ್ಲ. ಈಗ ನನ್ನ ಮತವನ್ನ ಚಲಾಯಿಸಬಹುದೆ?’
ಅವಳ ಮಕ್ಕಳು ತೆರಳಿ ಎರಡು ವಾರಗಳು ಉರುಳಿದವು. ಅವಳಿಂದ ಏನು ಸುದ್ದಿಯೂ ಇಲ್ಲ. ‘ಹೋಗಿ ವಿಚಾರಿಸೋಣ, ಸಾಧ್ಯವಾದರೆ ಹಾಗೇ ಮಾತಾಡುತ್ತಾ ಕಾಲ ಕಳೆಯಬಹುದು’ ಎಂದು ಊಹಿಸಿ ಅವಳ ಮನೆಯ ಬಳಿ ಹೋದ. ಕಾರ್ ಹೊರಗೇ ಇತ್ತು. ಬೆಲ್ ಮಾಡಿ ಕಾದು ನೋಡಿದ. ಉತ್ತರವಿಲ್ಲ. ಆಶ್ಚರ್ಯವಾಯಿತು, ಒಳಗೆ ಟೀವಿಯ ಶಬ್ದ ಬರುತ್ತಿತ್ತು. ಏನೋ ಇಲ್ಲವೇನೋ ಅಂದುಕೊಂಡು ವಾಪಸ್ ಹೊರಟ. ಒಮ್ಮೆ ಫ಼ೋನ್ ಮಾಡಿನೋಡಿದ. ಉತ್ತರವಿಲ್ಲ. ಪ್ರಾಯಶಃ ಇವಳಿಗೆ ಏನೂ ಬೇಡವಾಗಿರಬೇಕು ಎಂದುಕೊಂಡು ಸುಮ್ಮನಾದ. ಒಮ್ಮೆ ಶಾಪಿಂಗ್ ಸೆಂಟರಿನಲ್ಲಿ ಅವಳನ್ನು ನೋಡಿದ. ಹೋಗಿ ಮಾತನಾಡಿಸುವಷ್ಟರಲ್ಲಿ ಮಾಯವಾಗಿ ಬಿಟ್ಟಿದ್ದಳು. ಹೇಗಾದರೂ ಇವಳನ್ನು ನೋಡಲೇಬೇಕು ಎಂಬ ಹಟ ದೃಢವಾಯಿತು. ಆದರೆ ಹೇಗೆ?
‘ಮುಂದೇನು ಮಾಡುವುದು? ಇವಳನ್ನು ಮರೆತುಬಿಟ್ಟು ಸುಮ್ಮನಿರಲೆ? ಅಥವ ಹೇಗೋ ಅವಳನ್ನು ಬೇಟಿಮಾಡಿ ಸ್ನೇಹವನ್ನು ನವೀಕರಿಸಲೆ?’, ಯೋಚಿಸತೊಡಗಿದ. ಒಮ್ಮೆ ಅನ್ನಿಸಿತು, ‘ಅವಳಾರೋ, ನಾನಾರೋ. ಮೇಲೆ ಬಿದ್ದುಕೊಂಡುಹೋಗಿ ಸಿಗುವುದಾದರೂ ಏನು?’ ಇಂತಹ ಯೋಚನೆಯನ್ನು ಶ್ರೀಧರ ಉಮಾಳ ಪರಿಚಯವಾದ ಮೇಲೆ ಹಲವಾರು ಬಾರಿ ಮಾಡಿದ್ದ. ಸದ್ಯಕ್ಕೆ ಸುಮ್ಮನಿರದೆ ಮಾರ್ಗವಿಲ್ಲ ಎನಿಸಿತು. ಆದರೆ ನವೀನ್ ಅವನಿಗೆ ಕೊಟ್ಟಿದ್ದ ಹಣಕ್ಕೆ ಸರಿಯಾದ ಲೆಕ್ಕ ಸಲ್ಲಿಸಿ ಮಿಕ್ಕಿದ್ದನ್ನು ವಾಪಸ್ ಕೊಡುವ ಕೆಲಸವೂ ಉಳಿದಿತ್ತು. ಪಾಪ ಆ ಹುಡುಗ ಗೊತ್ತಿಲ್ಲದೆ ಐದು ಸಾವಿರ ಡಾಲರ್ ಕೊಟ್ಟಿದ್ದ. ಖರ್ಚಾಗಿದ್ದು ಸಾವಿರದ ಐನೂರು ಮಾತ್ರ.
ಕೆಲದಿನಗಳ ನಂತರ ಅವಳ ಮನೆಯ ಮುಂದೆಯೇ ಹೋಗುತ್ತಿದ್ದ, ಯಾವುದೋ ಕೆಲಸದ ನಿಮಿತ್ತ. ಅವಳು ಎಲ್ಲಿಂದಲೋ ಕಾರಿನಲ್ಲಿ ಬಂದು ಇಳಿಯುತ್ತಿದ್ದಳು. ಅವನನ್ನು ನೋಡಿ ಮುಗುಳ್ನಕ್ಕು ನಿಂತಳು. ಸ್ವರ್ಗ ಸಿಕ್ಕಿದವನಂತೆ ಅವನೂ ನಕ್ಕು ನಿಂತ. ‘ನಿಮ್ಮನ್ನು ಸ್ವಲ್ಪ ನೋಡಬೇಕಾಗಿತ್ತು. ನಾಳೆ ಸಂಜೆ ಬರುವುದು ಸಾಧ್ಯವೇ?’ ಎಂದು ಕೇಳಿದಳು. ಇವನೆಂದ, ‘ಓಹೋ ಅದಕ್ಕೇನು ಬರುತ್ತೇನೆ.’ ‘ಸರಿ’, ಎಂದ ಅವಳು ಮನೆಯ ಒಳಗೆ ಹೋಗಿಬಿಟ್ಟಳು.
ಶ್ರೀಧರನಿಗೆ ರಾತ್ರಿಯೆಲ್ಲಾ ನಿದ್ದೆ ಇಲ್ಲ. ಏನು ಕಾರಣಕ್ಕೆ ಕರೆದಿರಬಹುದು? ‘ನಾನು ಅವಳನ್ನು, ಅವಳ ಸಂಗವನ್ನು ಬಯಸಿದಂತೆ, ಅವಳೂ ನನ್ನನ್ನು ಬಯಸಿದ್ದಾಳೆಯೆ? ಸಾಧ್ಯತೆ ಕಡಿಮೆ, ಆದರೂ ಹೇಳುವುದಕ್ಕೆ ಆಗುವುದಿಲ್ಲ. ಮತ್ತೇನಾದರೂ ನಿಗೂಢವಾದ ಸಮಾಚಾರವಿತ್ತೆ?’ ಬೆಳಿಗ್ಗೆ ಶೀಲಾಗೆ ಹೇಳಿದ. ಬಂದ ಉತ್ತರ ‘ಏನೋ ಜವಾನ ಚಾಕರಿ ಇರಬೇಕು. ಹೋಗಿ ಮಾಡಿ ಬನ್ನಿ. ಇನ್ನೇನು ಕೆಲಸ ನಿಮಗೆ! ಎಲ್ಲಾ ಗಂಡಸರ ತರ ಇರೋದಕ್ಕೆ ನಿಮಗೆ ಆಗಲ್ಲ ಅಂತ ಕಾಣ್ಸುತ್ತೆ. ಕೆಲಸ ಆಗಬೇಕು ಅಂದರೆ ಅವಳೇ ಮನೇಗೆ ಬರೋಕ್ಕೆ ಏನಂತೆ? ನಿಮ್ಮನ್ನ ಏನಕ್ಕೆ ಕರೀಬೇಕು? ನೀವುಂಟು, ಅವಳುಂಟು. ಏನಾದರೂ ಮಾಡಿಕೊಳ್ಳಿ. ಅವಳ ವಿಷಯ ನನ್ನ ಹತ್ತಿರ ತರಬೇಡಿ. ಅಲ್ಲದೆ ಇವತ್ತು ಸಂಜೆ ಟೌನ್ ಹಾಲಿನಲ್ಲಿ ಸ್ವಾಮಿಗಳು ಹನುಮಾನ್ ಚಾಲೀಸದ ಮೇಲೆ ಮಾತಾಡ್ತಾ ಇದಾರೆ. ನಾನು ಮನೇಲಿರೊದಿಲ್ಲ.’
ಒಂದು ರೀತಿಯಲ್ಲಿ ಶ್ರೀಧರನಿಗೆ ಇದು ಒಳ್ಳೆಯದೇ ಆಯಿತು. ಅವಳ ಮನೆಗೆ ಹೋಗುವ ಮುನ್ನ ಇವಳ ಮಾತುಗಳನ್ನು ಮತ್ತೆ ಕೇಳಬೇಕಾಗಿಲ್ಲ! ಇವಳ ಮುಖ ನೋಡಬೇಕಾಗಿಲ್ಲ. ಸಂಜೆ ಆಗುತ್ತಿದ್ದಂತೇ ಅವನು ಅವನಿಗೆ ಪ್ರಿಯವಾದ ಪ್ಯಾಂಟು, ಶರ್ಟು ಎಲ್ಲವನ್ನೂ ತೊಟ್ಟು, ಕನ್ನಡಿಯ ಮುಂದೆ ಕಾಲುಗಂಟೆ ತಲೆಬಾಚಿಕೊಂಡು ಹೊರಟ. ನಡೆದೇ ಹೋಗಬಹುದಾಗಿತ್ತು. ಆದರೂ ಕಾರಿನಲ್ಲಿ ಹೊರಟ.
ಬೆಲ್ ಮಾಡಿದ ತಕ್ಷಣ ಬಂದು ಬಾಗಿಲು ತೆಗೆದಳು. ಕುರ್ಚಿ ತೋರಿಸಿ ಕೂರ ಹೇಳಿ ತಾನೂ ಕುಳಿತಳು. ಶ್ರೀಧರ ನಿರೀಕ್ಷಿಸಿದ ಹಾಗೆ ಬಾಡಿದ ಮುಖವಿರಲಿಲ್ಲ, ತಲೆ ಕೆದರಿರಲಿಲ್ಲ. ಬದಲಾಗಿ ಪ್ಯಾಂಟ್ ತೊಟ್ಟು, ಅದಕ್ಕೆ ಸರಿಹೋಗುವ ಶರ್ಟನ್ನು ಧರಿಸಿದ್ದಳು. ಶ್ರೀಧರ ಪ್ರಾರಂಭಿಸಿದ,
‘ಹೀಗಾಗಿದ್ದು ತುಂಬಾ ಅನ್ಯಾಯ.’
‘ಹೌದು. ಆದರೆ ಅವರ ನರಳಾಟ ನೋಡೋದು ಕಷ್ಟ ಆಗೋದು.’
‘ನಿಮಗೆ ಯಾವ ರೀತಿಯ ಸಹಾಯ ಬೇಕಾದರೂ ಕೇಳಿ. ನನಗೇನೂ ತೊಂದರೆ ಆಗುವುದಿಲ್ಲ.’
‘ನನಗೆ ಚನ್ನಾಗಿ ಗೊತ್ತು ಅದು. ಪಾಪ ಅವರಿಗೆ ಬಹಳ ಮಾಡಿದಿರಿ ನೀವು. ಈಗಿನ ಕಾಲದಲ್ಲಿ ಸಂಬಂಧಿಗಳೂ ಅಷ್ಟು ಮಾಡೋದಿಲ್ಲ.’
ಶ್ರೀಧರನಿಗೆ ದುಡ್ಡಿನ ಜ್ಞಾಪಕ ಬಂತು. ಜೊತೆಯಲ್ಲೇ ತಂದಿದ್ದ.
‘ನವೀನ್ ನನಗೆ ಜಾಸ್ತೀನೇ ದುಡ್ಡು ಕೊಟ್ಟಿದ್ದ, ಆಗೋ ಖರ್ಚಿಗೆ ಅಂತ. ಉಳಿದಿರೋ ಹಣ ಇಲ್ಲಿದೆ’ ಎಂದು ಹೇಳಿ ಅಲ್ಲಿಯೇ ಇದ್ದೆ ಕಾಫಿ ಟೇಬಲ್ಲಿನ ಮೇಲಿಟ್ಟ.
‘ಸರಿಯಾಗಿ ನೋಡಿಕೊಳ್ಳಿ, ಸಾಕಷ್ಟು ಖರ್ಚಾಗಿರಬೇಕು. ದುಡ್ಡು ಮಿಕ್ಕಿದೆ ಅಂದರೆ ನಂಬೋದು ಕಷ್ಟ. ಹೇಗೆ ಸಾಧ್ಯ?’
ಶ್ರೀಧರ ವಿವರವಾಗಿ ವರ್ಣಿಸ ಹೋದ. ಆಕೆ ಕೇಳಿಸಿಕೊಳ್ಳಲಿಲ್ಲ.
‘ರಾಮ್ ಯಾವಾಗಲೂ ಹೇಳುತ್ತಿದ್ದರು. ಅವರ ರೂಮಿನಲ್ಲಿದ್ದ ಮೊನಾಲೀಸಾ ಚಿತ್ರವನ್ನು ನಿಮಗೆ ಕೊಡು ಅಂತ. ದಯವಿಟ್ಟು ತೆಗೆದುಕೊಂಡು ಹೋಗಿ. ತೆಗೆದು ಪ್ಯಾಕ್ ಮಾಡಿ ಇರಿಸಿದ್ದೇನೆ’ ಎಂದು ಹೇಳಿ ಒಂದು ದೊಡ್ಡ ಪಾರ್ಸೆಲ್ ತೋರಿಸಿದಳು.
‘ಬೇಡ, ಬೇಡ, ನಿಮ್ಮ ಮನೆಯಲ್ಲೇ ಅದು ಚನ್ನಾಗಿತ್ತಲ್ಲಾ’ ಅಂದೆ
‘ರಾಮ್ ಅವರ ಆಸೆ ಅದು. ಬೇಡ ಅನ್ನಬೇಡಿ. ಅಲ್ಲದೆ ನನಗೆ ಪೈಂಟಿಂಗ್ ಅಥವಾ ಯಾವುದೇ ಕಲೆಯಲ್ಲಿ ಆಸಕ್ತಿ ಇಲ್ಲ. ಈ ಚಿತ್ರ ನಿಮ್ಮ ಹತ್ತಿರ ಇದ್ದರೆ ಕ್ಷೇಮ.’
ಮಾತುಕತೆ ಎತ್ತಲೋ ಸಾಗುತ್ತಿದೆ; ಅವನಿಗೆ ಬೇಜಾರು ಆಗ ಹತ್ತಿತು. ‘ನನ್ನನ್ನು ಈಕೆ ಏಕೆ ಕರೆಸಿಕೊಂಡಿದ್ದಾಳೆ? ಆ ಪಾಯಿಂಟಿಗೇ ಬರಲಿಲ್ಲವಲ್ಲ.’ ಒಳಗೆ ಹೋಗಿ ಒಂದು ಲೋಟ ಕಾಫಿಯೊಡನೆ ಹಿಂದಿರುಗಿ ಅವನ ಮುಂದೆ ಇಟ್ಟಳು.
‘ನಾನು ನಿಮ್ಮನ್ನು ಬರಹೇಳಿದ್ದು ಇದಕ್ಕೆ. ನನಗೆ ಆಸ್ಟ್ರೇಲಿಯಾದಲ್ಲಿ ಮುಂದೆಯೂ ಇರುವ ಅವಶ್ಯಕತೆ ತೋರುತ್ತಿಲ್ಲ. ಇಲ್ಲಿಗೆ ಗಂಡನೊಡನೆ ಬಂದೆ, ಮಕ್ಕಳಾದುವು, ಕೆಲಸ ಆಯಿತು. ಮನೆ ಮಾಡಿಕೊಂಡೆವು, ಎಲ್ಲಾ ಚನ್ನಾಗಿಯೇ ಇತ್ತು. ಈಗ ಗಂಡ ಹೋಗಿಬಿಟ್ಟರು, ಮಕ್ಕಳು ಲಂಡನ್, ಅಮೆರಿಕಾ ಅಂತ ದೂರವಾದರು. ಅವರು ವಾಪಸ್ ಬರುವ ಸೂಚನೆ ಇಲ್ಲ. ಇಲ್ಲಿ ನಾನೊಬ್ಬಳಿದ್ದು ಏನು ಮಾಡಲಿ? ಮಧುರೆಯಲ್ಲಿ ಅಮ್ಮ ಒಬ್ಬಳೇ ಇದ್ದಾಳೆ ಈಗ. ಅವಳಿಗೆ ಎಂಭತ್ತೈದು ವರ್ಷ. ಮಗ ಸೊಸೆ ಜೊತೆ ಸರಿಹೋಗುತ್ತಿಲ್ಲ ಅಂತಾಳೆ. ನಾನೇ ಹೋಗಿ ಅವಳ ಜೊತೆ ಇದ್ದು ಬಿಟ್ಟರೆ ಇಬ್ಬರಿಗೂ ವಾಸಿ ಅನ್ನಿಸುತ್ತೆ.’
ಇಷ್ಟು ಹೇಳಿ ಅವನ ಮುಖ ನೋಡಿದಳು.‘ಇನ್ನು ಈ ಮನೆ ಏನು ಮಾಡುತ್ತೀರಾ?’
‘ಮಕ್ಕಳಿಗೆ ಬಿಟ್ಟ ಪ್ರಶ್ನೆ ಅದು. ನವೀನ್ ಗೆ ಹೇಳಿದ್ದೀನಿ ಎಲ್ಲಾ. ಅವನು ಇನ್ನು ಮೂರು ತಿಂಗಳಲ್ಲಿ ಬಂದು ಡಿಸೈಡ್ ಮಾಡ್ತಾನೆ- ಮಾರಿ ಬಿಡೋದಾ ಅಥವ ಬಾಡಿಗೆ ಕೊಡೋದ ಅಂತ. ನೀತೂಗೆ ಇದಾವುದರಲ್ಲೂ ಆಸಕ್ತಿ ಇಲ್ಲ. ಎಷ್ಟಾದರೂ ಹೆಣ್ಣು ಹುಡುಗಿ.’
‘ನಾನು ಹೇಳೋದು ಏನೂ ಇಲ್ಲ. ಎಲ್ಲಾ ನಿಮ್ಮ ನಿರ್ಧಾರ. ನನ್ನ ಸಹಾಯ ಏನು ಬೇಕು?’ ಎಂದ ಇವನು.
‘ಮನೆ ಬೀಗದ ಕೈ ನಿಮ್ಮ ಕೈಲಿ ಕೊಡುತ್ತೀನಿ. ಆಗಾಗ ಬಾಗಿಲು ತೆಗೆದು ಒಳ ಬಂದು ನೋಡ್ತಾ ಇರಿ. ಅಕಸ್ಮಾತ್ ಅಲಾರಂ ಆನ್ ಆದರೆ ಬಂದು ಏನು ಸಮಾಚಾರ ನೋಡಿ. ಮನೆ ಅಲಾರಂ ಪಿನ್ ನಂಬರ್ ಇಲ್ಲಿ ಬರೆದಿಟ್ಟಿದ್ದೀನಿ’ ಎಂದು ಅವನ ಮುಂದೆ ಬೀಗದಕೈ ಮತ್ತು ಒಂದು ಚೀಟಿಯನ್ನು ಇರಿಸಿದಳು.
‘ಅಲ್ಲದೆ ಮನೆ ಬಾಡಿಗೆ ಕೊಡೋದು ಅಥವಾ ಮಾರೋ ವಿಷಯದಲ್ಲಿ ನವೀನ್ ಗೆ ನಿಮ್ಮ ಸಹಾಯ ಬೇಕಾಗಬಹುದು. ಅವನು ನಿಮ್ಮನ್ನ ಕೇಳ್ತಾನೆ.’
‘ಅದಕ್ಕೇನೀಗ, ನನ್ನನ್ನ ಕೇಳಲಿ, ಎಲ್ಲಾ ಸಹಾಯ ಮಾಡ್ತೀನಿ. ನೀವು ಹೊರಡೋದು..?’
‘ಈ ಶನಿವಾರ ಹೊರಡ್ತಾ ಇದೀನಿ. ಶೀಲಾಗೂ ಹೇಳಿಬಿಡಿ. ಅವರ ಹತ್ತಿರ ಹೆಚ್ಚು ಮಾತಾಡೊದಕ್ಕೆ ಆಗಲೇ ಇಲ್ಲ.’
ಅವನಿಗೊ ಮುಂದೆ ಏನು ಹೇಳಬೇಕೋ ಗೊತ್ತಾಗಲಿಲ್ಲ.
‘ನಿಮ್ಮನ್ನ ಶನಿವಾರ ಏರ‍್ಪೋರ್ಟಿಗೆ ಡ್ರಾಪ್ ಮಾಡ್ಲಾ?’ ಎಂದ.
‘ಬೇಡ, ಬೇಡ. ನನ್ನ ಆಫೀಸಿನ ಸ್ನೇಹಿತರು ಕರೆದುಕೊಂಡು ಹೋಗ್ತಾ ಇದಾರೆ.’
‘ಸರಿ, ಆಲ್ ದಿ ಬೆಸ್ಟ್’
ಮೋನಾಲೀಸಾ ಚಿತ್ರದೊಡನೆ ಹೊರಬಂದ ಶ್ರೀಧರ. ಉಮಾ ಬೈ ಹೇಳಿ ಬಾಗಿಲು ಹಾಕಿಕೊಂಡಳು. ಎಂದೋ ಹುಟ್ಟಿದ ಸ್ನೇಹನದಿ ಇಂದು ಬತ್ತಿಹೋಯಿತೇ ಎಂದುಕೊಂಡು, ರಾಮನಾಥನ ಕೊನೆಯ ಉಡುಗೊರೆಯನ್ನು ಕಾರಿನಲ್ಲಿ ಇರಿಸಿಕೊಂಡು ಶ್ರೀಧರ ಅಲ್ಲಿಂದ ಹೊರಟ.