ಬೀಚಿ ಅವರ ವಿಡಂಬನೆಗಳಲ್ಲಿ ಬದುಕಿನ ಅಪಸವ್ಯಗಳ ಬಗೆಗೆ ಗಾಢ ವಿಷಾದ ಇರುತ್ತದೆ. ಅದನ್ನ ನಗೆಯಲ್ಲಿ ದಾಟಿಸಬೇಕಾದ ಅನಿವಾರ್ಯವನ್ನ ಅವರು ಸೃಷ್ಟಿಸಿಕೊಂಡಿದ್ದಾರೆ. ವಿಷಾದವನ್ನು ಅದರ ರೂಟ್ ಲೆವೆಲ್‌ನಲ್ಲಿ ಅರ್ಥೈಸಿಕೊಂಡವ ಮಾತ್ರ ಅವರ ವಿಡಂಬನೆಗೆ ನಗಬಲ್ಲ. ಬೀಚಿ ಅವರು ಬರೆದ ವಿಡಂಬನೆಗಳು ಅರ್ಥವಾಗಬೇಕು ಅಂದರೆ ಅವರ ಸಾಹಿತ್ಯವನ್ನು ಓದ್ತಾ ಇರುವವರ ಸುತ್ತ ಇರುವ ಮನುಷ್ಯರ ಕುತ್ಸಿತಗಳೂ ರೂಟ್ ಲೆವೆಲ್‌ನಿಂದ ಅರ್ಥಕ್ಕೆ ನಿಲುಕಬೇಕು. ಆಗ ಬೀಚಿ ಕನೆಕ್ಟ್ ಆಗ್ತಾರೆ.
ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ
ನಾಟಕ ತಂಡ ಕಟ್ಟಿಕೊಂಡು ಬೇರೆ ಊರಿಗೆ ಹೋಗಿ ಪ್ರದರ್ಶನ ನೀಡಿ ಕಾಲ ಆಗಿತ್ತು. ಸರಿಸುಮಾರು ಎರಡೂವರೆ ವರ್ಷಗಳಿಂದ ರಂಗದ ಎಲ್ಲ ಚಟುವಟಿಕೆಗಳೂ ಸ್ಥಗಿತಗೊಂಡಿದ್ದವು. ಕೋವಿಡ್‌ಗೆ ವ್ಯಾಕ್ಸಿನ್ ಬಂದು ಪರಿಸ್ಥಿತಿ ಕೊಂಚ ಸುಧಾರಿಸುತ್ತಿದೆ ಅನಿಸುವ ಹೊತ್ತಿಗೆ ರಂಗಮಂದಿರಗಳು ಪ್ರೇಕ್ಷಕರನ್ನು ಒಳಗೆ ಬಿಟ್ಟುಕೊಳ್ಳಲು ಆರಂಭಿಸಿದವು. ಅದೇ ವೇಳೆ ತುಮಕೂರಿನಲ್ಲಿ ಪ್ರದರ್ಶನ ನೀಡಲು ನಮ್ಮ ತಂಡಕ್ಕೆ ಅವಕಾಶ ಒದಗಿ ಬಂತು. ಎಲ್ಲರೂ ಕೊಂಚ ಹುರುಪುಗೊಂಡರು. ಆದರೆ ಹುರುಪುಗೊಂಡಾಕ್ಷಣ ಎಲ್ಲವೂ ತಟ್ಟನೆ ನಡೆದುಬಿಡುವುದಿಲ್ಲ. ಯಾಕೆಂದರೆ ರಂಗಭೂಮಿ ಇರುವುದೇ ಹಾಗೆ.
ಅದರಲ್ಲೂ ಹವ್ಯಾಸಿ ರಂಗ ತಂಡಗಳ ಪಡಿಪಾಟಲುಗಳ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ರಂಗಬದ್ಧತೆ, ರಂಗಶಿಸ್ತು ಇತ್ಯಾದಿ ಏನೆಲ್ಲಾ ಮಾತಾಡಿದರೂ, ತಾಲೀಮಿನ ಸಂದರ್ಭಗಳಲ್ಲಿ ಎಷ್ಟೇ ಸ್ಟ್ರಿಕ್ಟ್ ಮ್ಯಾನೇಜ್‌ಮೆಂಟ್ ಪಾಲಿಸಿದರೂ ನಾಟಕದವರು ಕಡೇ ಕ್ಷಣದ ಬದಲಾವಣೆಗಳಿಗೆ ಪಕ್ಕಾಗೇ ಇರಬೇಕು. ಮತ್ತು ಅದನ್ನು ದಾಟಿ ಮುಂದೆ ಹೆಜ್ಜೆ ಕದಲಿಸಬೇಕಾದ ಅನಿವಾರ್ಯತೆಯನ್ನು ಕಲಿತುಗೊಂಡಿರಬೇಕು. ಇಲ್ಲದಿದ್ದರೆ ಕಷ್ಟ. ಇದು ವೃತ್ತಿ ರಂಗ ತಂಡಗಳಂತೆ ಅಲ್ಲ. ಹವ್ಯಾಸಿಗಳ ಜೊತೆಗೂಡಿದಾಗ ಮೊದಲು ಪ್ರದರ್ಶನ ನೀಡುವ ದಿನದಂದು ತಂತಮ್ಮ ಲಭ್ಯತೆ ಇದೆಯೇ ಎಂದು ವಿಚಾರಿಸಿಕೊಳ್ಳಬೇಕು. ಒಂದು ತಂಡ ನಾಟಕವನ್ನೇನೋ ಸಿದ್ಧ ಮಾಡಿಕೊಂಡಿರುತ್ತದೆ. ಅಂದಮಾತ್ರಕ್ಕೆ ಯಾವಾಗ ಬೇಕಾದರೂ ಪ್ರದರ್ಶನ ನೀಡಲು ಸಿದ್ಧರಿದ್ದೇವೆ ಅಂತ ಅಲ್ಲ. ಇಂಥ ದಿನ ಪ್ರದರ್ಶನ ನಿಗದಿ ಆಗಿದೆ ಎಂದು ವಾಟ್ಸಾಪ್ ಗುಂಪಿನಲ್ಲಿ ಹಾಕುತ್ತಿದ್ದಂತೆ ಅಸಲೀ ಚಿತ್ರಗಳು ತೆರೆದುಕೊಳ್ಳಲು ಆರಂಭಿಸುತ್ತವೆ. ತಾವು ಆ ದಿನದಂದು ಲಭ್ಯ ಇಲ್ಲ ಎಂದು ಹೆಬ್ಬೆರಳುಗಳನ್ನು ಕೆಳಗೆ ತೋರಿಸಿ ಸುಮ್ಮನಾಗುತ್ತಾರೆ. ಈ ಸಲುವಾಗಿ ಯಾರನ್ನೂ ದೂಷಿಸಲು ಆಗುವುದಿಲ್ಲ. ಹಲವರ ಅನಿವಾರ್ಯತೆಗಳನ್ನೂ ಗೌರವಿಸಬೇಕು. ಅವರ ಜಾಗಕ್ಕೆ ಮತ್ತೆ ಯಾರನ್ನ ತಂದು ಪಾತ್ರ ಮಾಡಿಸಬೇಕು? ಅವರೂ ಲಭ್ಯರಿಲ್ಲದಿದ್ದರೆ ಮತ್ಯಾರು? ನಿರ್ದೇಶನದ ಹೊಣೆ ಹೊತ್ತವ ಇಂಥ ರಿಪೇರಿ ಕೆಲಸಗಳಿಗೆ ಅಣಿಯಾಗಿರಬೇಕು. ರಿಪೇರಿ ಮಾಡುವಾಗ ಗೊಣಗುವಂತಿಲ್ಲ. ಎಲ್ಲರ ಆತ್ಮ ಎಚ್ಚೆತ್ತಿರುತ್ತದೆ. ಅವರ ಅಹಂಗೆ ಕೊಂಚ ಕಿಡಿ ತಾಕಿತು ಅನಿಸಿದರೂ ಸಾಕು ಪ್ರದರ್ಶನದ ಚಿತ್ರ ಬದಲಾಗುತ್ತಲೇ ಹೋಗುತ್ತದೆ.
ಹಾಗೆಂದ ಮಾತ್ರಕ್ಕೆ ಎಲ್ಲರೂ ಅಶಿಸ್ತಿನ ಮೂಟೆಗಳು ಅಂತಲ್ಲ. ಎಂಥ ಅನಿವಾರ್ಯ ಸಂದರ್ಭದಲ್ಲೂ ಕೈಜೋಡಿಸಿ ನಿಲ್ಲುವವರೂ ಇದ್ದಾರೆ. ನಿರ್ದೇಶಕನ ಜೊತೆ ರಿಪೇರಿ ಕೆಲಸಕ್ಕೆ ಸಹಕರಿಸುವವರೂ, ಬಿಡಿಬಿಡಿ ಭಾಗಗಳನ್ನು ಬೇರೆ ತಂಡಗಳಿಂದ ಹೊಂದಿಸಿಕೊಂಡು ಬಂದು ನಮ್ಮ ತಂಡದ ಜೊತೆ ಕಸಿ ಮಾಡುವವರೂ ಇದ್ದಾರೆ. ಈ ಎಲ್ಲ ಪರಿಶ್ರಮ ಸೇರಿಯೇ ತಂಡ ಹಿಗ್ಗುತ್ತದೆ. ತಮಗೆ ಈ ತಂಡದ ಕೊಂಬೆಯ ಜೊತೆ ಕಸಿಯಾಗಲು ಸಾಧ್ಯವಿಲ್ಲ ಅನಿಸಿದವರು ಮತ್ತೆ ನಿರ್ಗಮಿಸುತ್ತಾರೆ. ಆಗ ತಂಡ ಕುಗ್ಗುತ್ತದೆ.
ಇಂಥ ಸಕಲೆಂಟು ಕಷ್ಟಗಳ ನಡುವೆ ಆಗಿರುವ ಒಂದು ತಂಡವನ್ನ ಕೋವಿಡ್ ಈ ಹಿಂದೆ ಚದುರಿಸಿತ್ತು. ಲಾಕ್‌ಡೌನ್ ಘೋಷಣೆಯಾಗಿ ವರ್ಕ್ ಫ್ರೌಂ ಹೋಮ್ ಆರಂಭವಾದಾಗ ತಂಡದ ಕೆಲವರು ಅವರವರ ಮೂಲ ಊರುಗಳಿಗೆ ತೆರಳಿದರು. ಹಾಗೆ ತುಮಕೂರಿಗೂ ನಮ್ಮ ತಂಡದ ಒಬ್ಬರು ಹೆಣ್ಣುಮಗಳು ಹೋಗಿ ಅಲ್ಲಿಂದಲೇ ಕೆಲಸ ಸಾಗಿಸುತ್ತಿದ್ದರು.
ಕೋವಿಡ್ ಬಿಡುವು ಕೊಟ್ಟು ನಮ್ಮ ತಂಡದ ಪ್ರದರ್ಶನಗಳು ಬೆಂಗಳೂರಿನಲ್ಲೇ ನಿಗದಿ ಆಗಲು ಆರಂಭಿಸಿದಾಗ ಪ್ರತಿ ಬಾರಿ ಆ ಹೆಣ್ಣುಮಗಳನ್ನು ತುಮಕೂರಿನಿಂದ ಕರೆಸಿ ಪ್ರದರ್ಶನ ನೀಡುವುದು ಹೇಗೆ? ಹಾಗಾಗಿ ಅವರ ಪಾತ್ರಕ್ಕೆ ಬೇರೆಯವರನ್ನು ಅಣಿಮಾಡಿಕೊಳ್ಳಬೇಕಾಯಿತು.
ಹೀಗೇ ನಮ್ಮ ತಂಡದ ನಾಟಕದ ಬಂಡಿ ಕೆಲಕಾಲ ಹಾಗೂ ಹೀಗೂ ಗುಡುಗುಡು ಎಂದು ಉರುಳುತ್ತಿದೆ ಅನ್ನುವ ಹೊತ್ತಿಗೆ ತುಮಕೂರಿನಿಂದಲೇ ಪ್ರದರ್ಶನಕ್ಕೆ ಬುಲಾವ್. ಒಂದು ಸ್ಪಾನ್ಸರ್ ಶೋ. ಹೋಗಿ ಪ್ರದರ್ಶನ ನೀಡಲೇನು ಅಡ್ಡಿ? ಸರಿ ಅಂದುಕೊಂಡು ಆ ದಿನ ಯಾರ್ಯಾರು ಲಭ್ಯ ಎಂದು ಕೇಳಿದರೆ ತುಮಕೂರಿನ ಹೆಣ್ಣುಮಗಳ ಪಾತ್ರಕ್ಕೆ ಪರ್ಯಾವಾಗಿ ಅಣಿಯಾಗಿದ್ದ ಹೆಣ್ಣು ಮಗಳು ಊರಿಗೆ ಹೊರಟಿದ್ದಳು. ಹೋಗಕೂಡದು ಎನ್ನುವುದು ಹೇಗೆ? ಸರಿ ಹೋಗಮ್ಮ ಎಂದು ಸಮ್ಮತಿಸಿದರೆ ಮತ್ತೆ ಆ ಪಾತ್ರಕ್ಕೆ ಬೇರೆ ಯಾರನ್ನ ಅಣಿಮಾಡುವುದು? ಒಂದು ಕಡೆ ಆ ಹೆಣ್ಣುಮಗಳು ಊರಿಗೆ ಹೋಗಲೇಬೇಕಾದ ಅನಿವಾರ್ಯ. ಮತ್ತೊಂದು ಕಡೆ ಕೆಲವು ಹೆಣ್ಣುಮಕ್ಕಳು ‘ಬೇರೆ ಊರಿಗೆ ಮನೇಲಿ ಕಳಿಸಲ್ಲ ಸರ್..’ ಎಂದು ಕಿರುನಗೆ ತುಳುಕಿಸಿ ನಡೆದುಬಿಟ್ಟರು. ನಿರ್ದೇಶಕ ಸ್ಪಾನರ್ ಹಿಡಿದು ನಿಂತೇ ಇರಬೇಕು. ಬೇರೆ ನಟನಟಿಯರನ್ನು ಆ ಜಾಗಕ್ಕೆ ಫಿಟ್ ಮಾಡಬೇಕು. ಜೊತೆಗೆ ಪಾತ್ರಗಳನ್ನೂ ಕೊಂಚ ಮಟ್ಟಿಗೆ ರಿಪೇರಿ ಮಾಡಬೇಕು. ಊರಿಗೆ ಹೊರಟ ಹೆಣ್ಣುಮಗಳನ್ನು ಬೀಳ್ಕೊಟ್ಟ ಮೇಲೆ ತುಮಕೂರಿನಲ್ಲೇ ನೆಲೆ ನಿಂತಿರುವ ಹೆಣ್ಣುಮಗಳಿಗೆ ‘ನಿಮ್ಮೂರಿಗೇ ಬಂದು ನಾಟಕ ಆಡ್ತಿದ್ದೀವಿ. ನಿಮ್ಮ ಪಾತ್ರ ಮಾಡ್ತಿದ್ದವರು ಬೇರೆ ಊರಿಗೆ ಹೊರಟಿದ್ದಾರೆ. ನಿಮ್ಮ ಲಭ್ಯತೆ ಹೇಗೆ? ಅಲ್ಲೇ ನಿಮ್ಮೂರಲ್ಲೇ ಸುಮ್ಮನೆ ಹಾಗೇ ಬಂದು ಪಾತ್ರ ಮಾಡ್ತೀರೇನು?’ ಎಂದು ಕೇಳುತ್ತಿದ್ದಂತೆ ಆ ಹೆಣ್ಣುಮಗಳು ‘ಎಸ್..’ ಅಂದುಬಿಡುವುದೇ! ಜೊತೆಗೆ ‘ಸರ್ ರಿಹರ್ಸಲ್ ಎಲ್ಲ…’ ಎಂದು ರಾಗ ತೆಗೆಯುತ್ತಿದ್ದಂತೆ ‘ಜೂಮು.. ಇತ್ಯಾದಿ ಇರೋದೆಲ್ಲ ಯಾಕೆ.?’ ಎಂದು ಉತ್ತೇಜಿಸಿ ಅವರ ದೃಶ್ಯಗಳಲ್ಲಿರುವವರ ಜೊತೆ ಮಾತಾಡಿ ಜೂಮ್ ಮೀಟ್‌ಗಳಿಗೆ ಅಣಿಮಾಡಿ ಉಫ್… ಎಂದು ಕೊಂಚ ಸುಧಾರಿಸಿಕೊಂಡು ಪ್ರದರ್ಶನ ನಿಗದಿಯಾಗಿರುವ ದಿನದವರೆಗೂ ಆಗುವ ಬದಲಾವಣೆಗಳಿಗೆ ಎಚ್ಚೆತ್ತುಕೊಂಡು ಕೂತದ್ದೂ ಆಯಿತು.
ಇಲ್ಲೇ ಪಕ್ಕದಲ್ಲೇ ಇರುವ ತುಮಕೂರಿಗೆ ಟಿಟಿ ಯಾಕೆ? ಕಾರುಗಳಲ್ಲೇ ಹೋದರಾಯಿತು ಅಂದುಕೊಂಡು ಯಾರ್ಯಾರ ಕಾರುಗಳಲ್ಲಿ ಯಾರ್ಯಾರು ಎಂದು ಪಟ್ಟಿ ಮಾಡಿ ಮಧ್ಯಾಹ್ನ ಇಂಥ ದಿನ ಹೊರಡುವುದು ಎಂದು ನಿಗದಿ ಮಾಡಿಕೊಂಡೆವು. ಆ ದಿನ ಬೆಳಗ್ಗೆ ತುಂತುರು ಮಳೆ ಶುರು. ಹೊರಡುವ ಮೊದಲು ದೇವಸ್ಥಾನಕ್ಕೆ ಹೋಗಿ ಒಂದು ಪ್ರದಕ್ಷಿಣೆ ಹಾಕಿಕೊಂಡು ಹೊರಡೋಣ ಅಂತ ನಮ್ಮ ತಂಡದ ನಟಿಯೊಬ್ಬರು ಅಂದಾಗ ಹೋಗಿ ದೇವಸ್ಥಾನದಲ್ಲಿ ಗರ್ಭಗುಡಿ ಎದುರು ಕೈಜೋಡಿಸಿ ಬಂದು ಇನ್ನೇನು ಕಾರು ಹತ್ತಬೇಕು ಅನ್ನುವಾಗ ಪುನೀತ್ ಸರ್ ತೀರಿಹೋದ ಸುದ್ದಿ ಬಂತು. ಮನಸ್ಸು ಖಾಲಿಖಾಲಿ. ಪೂರ ಮೌನ. ಇದೆಂಥ ಅನಿಶ್ಚಿತ ಬದುಕು ಭಗವಂತ ಅಂದುಕೊಳ್ಳುತ್ತಿರುವಾಗ ಪ್ರದರ್ಶನ ರದ್ದಾದ ಸುದ್ದಿ ಬಂತು. ಮನೆಗೆ ಹಿಂದಿರುಗುವಾಗ ಮೌನ. ಮನೆಯಲ್ಲಿ ಎಲ್ಲರೂ ಮೌನ. ಬೆಳಕು ಆರಿಹೋದ ವಾತಾವರಣ.
ಮಾರನೆಯ ವಾರ ತುಮಕೂರಿನಲ್ಲಿ ಮತ್ತೆ ಪ್ರದರ್ಶನ ನಿಗದಿ ಮಾಡಿದರು. ಅಂದು ಯಾರು ಲಭ್ಯ? ಸ್ಪಾನರ್ ಹಿಡಿದು ಕೇಳಬೇಕಾದ ಸರದಿ ನನ್ನದೇ. ಕೇಳಿದೆ. ವೀಕ್ ಡೇ ಆದ್ದರಿಂದ ಬಹುತೇಕರ ಹೆಬ್ಬೆರಳುಗಳು ನೆಲಕ್ಕೆ ಮುಖಮಾಡಿಬಿಟ್ಟವು. ‘ಆ ದಿನ ಆಗಲ್ಲಪ್ಪ..’ ಎಂದು ಆ ಪ್ರದರ್ಶನವನ್ನೂ ರದ್ದು ಮಾಡಲಾಯಿತು.
ಮತ್ತೊಂದು ದಿನ ನಿಗದಿ ಮಾಡಿಕೊಳ್ಳುವ ಹೊತ್ತಿಗೆ ಮಳೆ ಸೈಕ್ಲೋನನ್ನ ತನ್ನ ಬೆನ್ನಿಗೆ ಕಟ್ಟಿಕೊಂಡು ಒಂದೇ ಸಮನೆ ಅಳಲು ಆರಂಭಿಸಿತ್ತು. ಇವತ್ತು ಅಳು ನಿಲ್ಲುತ್ತದೆ.. ನಾಳೆ ನಿಲ್ಲುತ್ತದೆ ಅಂದುಕೊಂಡರೆ ಮಳೆ ರಚ್ಚೆ ಹಿಡಿದಂತೆ ಅಳುತ್ತಲೇ ಇತ್ತು. ಮಳೆಗೂ ನಾಟಕಕ್ಕೂ ಮೊದಲಿಂದಲೂ ಆಗಿಬಂದದ್ದೇ ಇಲ್ಲ. ಮೊದಲೇ ಕೋವಿಡ್ ಸಮಯ; ಜೊತೆಗೆ ಮಳೆ ಅಂದರೆ ಜನ ಮನೆಯಿಂದ ಹೊರಕ್ಕೆ ಹೆಜ್ಜೆ ಕದಲಿಸುವುದೇ ಇಲ್ಲ. ಜನ ಇಲ್ಲದ ಮೇಲೆ ನಾಟಕದ ಪ್ರದರ್ಶನ ಯಾರಿಗೆ? ನಾಟಕದ ಸಮಸ್ಯೆಗಳು ಒಂದಲ್ಲ, ನೂರು.
ಎಂಥ ಅನಿವಾರ್ಯ ಸಂದರ್ಭದಲ್ಲೂ ಕೈಜೋಡಿಸಿ ನಿಲ್ಲುವವರೂ ಇದ್ದಾರೆ. ನಿರ್ದೇಶಕನ ಜೊತೆ ರಿಪೇರಿ ಕೆಲಸಕ್ಕೆ ಸಹಕರಿಸುವವರೂ, ಬಿಡಿಬಿಡಿ ಭಾಗಗಳನ್ನು ಬೇರೆ ತಂಡಗಳಿಂದ ಹೊಂದಿಸಿಕೊಂಡು ಬಂದು ನಮ್ಮ ತಂಡದ ಜೊತೆ ಕಸಿ ಮಾಡುವವರೂ ಇದ್ದಾರೆ. ಈ ಎಲ್ಲ ಪರಿಶ್ರಮ ಸೇರಿಯೇ ತಂಡ ಹಿಗ್ಗುತ್ತದೆ.
ಇಂಥ ಮಳೆ ಭೀತಿಯ ನಡುವೆಯೇ ಪ್ರದರ್ಶನವನ್ನ ಮತ್ತೆ ತುಮಕೂರಿನಲ್ಲಿ ನಿಗದಿ ಮಾಡಲಾಯಿತು. ತುಮಕೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಪ್ರದರ್ಶನ. ಸಭಾಂಗಣದ ಎದುರಿಗೇ ಅಮಾನಿಕೆರೆ. ಪ್ರದರ್ಶನ ಇನ್ನೇನು ನಾಳೆ ಅನ್ನುವಾಗ ಮಳೆ ಹೆಚ್ಚಿ ಅಮಾನಿಕೆರೆ ಕೋಡಿ ಬಿದ್ದಿದೆ ಎಂಬ ಸುದ್ದಿ. ‘ಹೋಗತ್ಲಾಗಿ ತುಮಕೂರು ಯಾಕೋ ಆಗಿಬರ್ತಿಲ್ಲ’ ಅಂದುಕೊಂಡರೂ ನಾಳೆ ಹೊತ್ತಿಗೆ ಧೈರ್ಯ ಮಾಡಿ ಹೊರಟೇಬಿಟ್ಟೆವು. ಹೊರಟ ಕೊಂಚ ಹೊತ್ತಿಗೇ ಮಳೆ. ಆದರೆ ತುಮಕೂರು ಸಮೀಪಿಸುತ್ತಿದ್ದಂತೆ ಮಳೆ ಮಾಯ. ಜನ ಬಂದಷ್ಟು ಬರಲಿ, ಹೇಗೂ ಬಂದದ್ದು ಆಗಿದೆ… ಪ್ರದರ್ಶನ ನೀಡಿ ಮುಗಿಸೋಣ ಎನ್ನುವ ವಿಚಾರ ಎಲ್ಲರ ತಲೆಯಲ್ಲಿ ಸುಳಿ ತಿರುಗುತ್ತಲೇ ಇತ್ತು. ಆಯೋಜಕರು ತಿಂಡಿ ತರಿಸಿದ್ದರು. ಇಡ್ಲಿ ಮತ್ತು ದೋಸೆ. ಚಟ್ನಿ ಬೆಳ್ಳುಳ್ಳಿಮಯ. ಚಳಿಗೆ ಒಳ್ಳೆ ಕಾಂಬಿನೇಷನ್… ದೇಹ ಬೆಚ್ಚಗಿಡುತ್ತದೆ ಅಂದುಕೊಳ್ಳುತ್ತಲೇ ತಿಂದದ್ದು ಆಯಿತು. ಕೊಂಚ ಕಾಫಿ ಹೀರಿ ನಾನು ಲೈಟಿಂಗ್ ರೂಮ್ ಸೇರಿಕೊಂಡು ಮೊಬೈಲ್‌ನಲ್ಲಿ ಸಂಗೀತ ನೀಡಲು ಏನು ವ್ಯವಸ್ಥೆ ಇದೆ ಎಂದು ಪರಿಶೀಲಿಸುತ್ತಿದ್ದಾಗ ಪತ್ರಕರ್ತ ಮಿತ್ರ ರಾಜಶೇಖರ ಬಂದ.
ಅವನು ತುಮಕೂರಿನ ಸ್ಥಳೀಯ ಪತ್ರಿಕೆಯಲ್ಲಿ ಪತ್ರಕರ್ತನಾಗಿದ್ದ. ಬೆಂಗಳೂರಿನಲ್ಲಿದ್ದಾಗ ನಾವಿಬ್ಬರೂ ಜೊತೆಗೂಡಿ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದು ಈಗ ನೆನಪು. ನಂತರ ಅವನು ತುಮಕೂರಿಗೆ ಯಾವಾಗ ಹೊರಟು ಸೆಟಲ್ ಆದನೋ ಗೊತ್ತಿರಲಿಲ್ಲ. ನಂಟು ಬಿಟ್ಟುಹೋಗಿತ್ತು.
ಕಂಡದ್ದೇ ಗುರುತು ಸಿಕ್ಕು ‘ಅರೆರೆ.. ‘ ಎಂದು ಕೈಕುಲುಕಿ ಕೊಂಚ ಹರಟಲಿಕ್ಕೆ ಲೈಟಿಂಗ್ ರೂಮಲ್ಲೇ ಕೂತೆವು. ನಮ್ಮ ತಂಡದ ನಾಟಕದ ಪೋಸ್ಟರ್ ವಿವರಗಳು ಪತ್ರಿಕೆ ಕಛೇರಿ ತಲುಪಿ ಅದರಲ್ಲಿ ನನ್ನ ಹೆಸರು ಕಂಡು ಗೆಳೆಯ ರಾಜಶೇಖರ ನನ್ನನ್ನ ಹುಡುಕಿಕೊಂಡು ಬಂದಿದ್ದ. ಅದು ನಾನೇ ಇರಬಹುದು ಎನ್ನುವ ಊಹೆಯಲ್ಲಿ ಬಂದಿದ್ದ. ಅದು ನಾನೇ ಎಂದು ತಿಳಿಯುತ್ತಲೇ ಕೊಂಚ ಹುರುಪುಗೊಂಡ ರಾಜಶೇಖರ ನನ್ನನ್ನು ಪತ್ರಿಕೆಯಲ್ಲಿ ಚೆಂದವಾಗಿ ಬಿಂಬಿಸುವ ಖುಷಿ ಮತ್ತು ಭರದಲ್ಲಿ ‘ನಾಟಕದ ಬಗ್ಗೆ ಕೊಂಚ ಹೇಳು ಗುರುವೇ. ಜೊತೆಗೆ ನಿನ್ನನ್ನ ಇವತ್ತು ಸಂದರ್ಶನ ಮಾಡ್ತೀನಿ..’ ಎಂದ. ಅವನ ಉತ್ಸಾಹಕ್ಕೆ ನಗು ಬಂತು. ‘ಈ ಸಂದರ್ಶನವೆಲ್ಲ ಬೇಡ. ತುಂಬ ತೇಲಿಸಿ ತೇಲಿಸಿ ಮಾತನಾಡಬೇಕಾಗುತ್ತೆ. ಆಫ್ ದಿ ರೆಕಾರ್ಡ್ ಮಾತಾಡೋದಾದ್ರೆ ಮಾತಾಡ್ತೀನಿ. ಆಗ ನಿಜಗಳನ್ನ ಮಾತಾಡಿದ ನಿರಾಳತೆ ಕೊಂಚ ಇರುತ್ತೆ. ಹು ಅಂದರೆ ಮಾತಾಡ್ತೀನಿ’ ಅಂದೆ.
ನಾನು ಸಂದರ್ಶನ ಬೇಡ ಅಂದದ್ದು ಅವನಿಗೆ ಆಶ್ಚರ್ಯವಾಯಿತು. ಗೆಳೆಯನಾದ್ದರಿಂದ ನೋಟ್ ಪ್ಯಾಡ್ ಮುಚ್ಚಿಟ್ಟು ‘ಯಾಕೆ ಏನಾಯ್ತು..?’ ಅಂದ.
‘ಏನಿಲ್ಲ… ಸಂದರ್ಶನ ಕೊಡೋಕೆ ಮನಸ್ಸಿಲ್ಲ. ಅಷ್ಟು ದೊಡ್ಡವನೂ ಅಲ್ಲ. ಬೇರೆ ಮಾತಾಡೋಣ’ ಅಂದೆ.
ರಂಗಭೂಮಿಯ ಬಗ್ಗೆ ತಿಳಿಯದ ಅವನು ಥೇಟ್ ಪತ್ರಕರ್ತನ ಪರಿಭಾಷೆಯಲ್ಲೇ ‘ಯಾಕೆ ಇಲ್ಲೂ ರಾಜಕಾರಣಾನ..?’ ಅಂತ ನಗುತ್ತ ಕೇಳಿದ.
ನಾನೂ ನಕ್ಕು ‘ನೋ ನೋ ಪ್ಯೂರ್ ಪಾಲಿಟಿಕ್ಸ್ ರಂಗಭೂಮಿಗಿಂತ ಫಾರ್ ಬೆಟರ್. ರಾಜಕಾರಣಿಗಳು ಓಪನ್ ಸ್ಟೇಟ್ಮೆಂಟ್‌ಗಳಲ್ಲಿ ದಾಳಿ ಆರಂಭಿಸ್ತಾರೆ. ಅವೆಲ್ಲ ಸುದ್ದಿ ಆಗ್ತಾನೇ ಹೋಗ್ತಾವೆ. ಅವರೆಲ್ಲ ಭಂಡರೋ ಅಥವಾ ಧೀರೋದಾತ್ತರೋ ಅವೆಲ್ಲ ಆಮೇಲಿನ ಸಂಗತಿಗಳು. ಚೂರು ಕೆಲಸಾನೂ ಮಾಡ್ತಾರೆ.. ತಿಂದೂ ತಿಂತಾರೆ… ಅದು ಜನಕ್ಕೂ ಗೊತ್ತಿರುತ್ತೆ…. ಒಂದು ರೀತಿ ರಾಜಕಾರಣ ನಿಜಗಳನ್ನ ಬಯಲು ಮಾಡ್ತಲೇ ನಡೆಯೊ ನಾಟಕ. ಆದರೆ ನಾಟಕರಂಗ ಇದೆ ನೋಡು.. ದಿಸ್ ಈಸ್ ಮೋರ್ ಕಾಂಪ್ಲೆಕ್ಸ್..’ ಅಂದೆ.
ರಾಜಶೇಖರನ ಕೈ ಕಟ್ಟಿಹೋಗಿತ್ತು. ನಾನು ಆಫ್ ದಿ ರೆಕಾರ್ಡ್ ಎಂದು ಪೆನ್ನು ಹಿಡಿಯದಂತೆ ಮಾಡಿದ್ದೆ. ಆದರೆ ಅವನಲ್ಲಿ ಕುತೂಹಲ ಹೆಚ್ಚಿ ‘ಹೇಗೆ..?’ ಅಂದ.
‘ಹೇಗೆ ಅಂದರೆ ಇಲ್ಲಿನ- ಅಂದರೆ ರಂಗಭೂಮಿಯ ಮಂದೀನ ರಾಜಕಾರಣಿಗಳ ಹಾಗೆ ಓಪನ್ ಸ್ಟೇಟ್ಮೆಂಟ್‌ಗಳಲ್ಲಿ ಬೈಯೊಹಾಗಿಲ್ಲ. ಬೈಯಬಾರದೂ ಕೂಡ. ಬೈಯೋ ಮಾತು ದೂರ. ತಪ್ಪನ್ನೂ ತಿದ್ದಿ ಹೇಳಬಾರದು. ಹಾಗೆ ತಿದ್ದಿ ಹೇಳಿದ್ದನ್ನ ರೈಟ್ ಸ್ಪಿರಿಟ್‌ನಲ್ಲಿ ತಗೋಳ್ಳಕೆ ಗೊತ್ತಿರಲ್ಲ. ತಂಡದಲ್ಲೇ ಇರ್ತಾರೆ… ತಂಡದ ನಾಟಕದಲ್ಲೇ ಪಾತ್ರ ಕೂಡ ಮಾಡ್ತಿರತಾರೆ… ಹಾಗೆ ಮಾಡೋವಾಗೆಲ್ಲ ನಾಟಕದಲ್ಲಿ Flaw ಗಳು ಕಾಣೋದೇ ಇಲ್ಲ. ಅಥವಾ ಕಂಡರೂ ಪಾತ್ರ ಮಾಡ್ತಿರತಾರೆ. ಅದೇ ನಾನು ಅವರ ಕೆಲಸದ ಬಗ್ಗೆ ಕೊಂಚ ವಸ್ತುನಿಷ್ಠವಾದೆ ಅಂತಿಟ್ಕೊ.. ಆಗ ಅವರಿಗೆ ನಾನು ನಿರ್ದೇಶನ ಮಾಡಿದ ನಾಟಕದಲ್ಲಿನ Flaw ಗಳನ್ನ ಹೆಕ್ಕಿ ತೋರಿಸುವ ಉಮೇದು ಹುಟ್ಟಿಕೊಳ್ಳುತ್ತೆ. ಇದನ್ನು ಮುಖಾಮುಖಿ ಮಾತಾಡಿ ನಗೆಚಾಟಿಕೆಯಲ್ಲಿ ಜಗಳಕ್ಕೂ ನಿಲ್ಲುವುದಿಲ್ಲ. ನನ್ನ ಮಾತು ಅವರ ಆತ್ಮಕ್ಕೆ ಚುಚ್ಚಿದ ಮುಳ್ಳು ಎಂದು ಭಾವಿಸಿಕೊಂಡು ನಿಧಾನಕ್ಕೆ ಜಾರಿಕೊಳ್ಳುವ ಪ್ರಸಂಗಗಳನ್ನ ಸೃಷ್ಟಿಸ್ತಾರಲ್ಲ… ಅಲ್ಲಿದೆ ನೋಡು ನಾಟಕರಂಗದ ಅಸಲೀ ಮಜ…! ಆದ್ದರಿಂದ ಓ ಗೆಳೆಯಾ… ಇದು ಟೀಕೆಗಳನ್ನ, ತಿದ್ದುಪಡಿಗಳನ್ನ ವಸ್ತುನಿಷ್ಠವಾಗಿ ತೆಗೆದುಕೊಳ್ಳಲಿಕ್ಕೆ ಬಾರದೆ ಇರುವ ಲೋಕ. ಇವರ ನಡುವೇನೇ ಇದ್ದುಕೊಂಡು ಎಲ್ಲ ನಿಭಾಯಿಸೋದು ನಿಜವಾದ ಮೈಂಡ್ ಮ್ಯಾನೇಜ್ಮೆಂಟ್. ನಮ್ಮಿಂದ ನಾಜೂಕಾಗಿ ನುಸುಳಿಕೊಂಡು ಹೋಗೋವರಿಗೆ ಅಷ್ಟೇ ನಾಜೂಕಾಗಿ ಬೀಳ್ಕೊಟ್ಟು ಮತ್ತೆ ಸ್ಪಾನರ್ ಹಿಡೀಬೇಕು. ನನಗೆ ಬೀಚಿ ಅವರ ವಿಡಂಬನೆ ಹೆಚ್ಚು ಅರ್ಥವಾಗ್ತಿರೋದು ಇಂಥವರಿಂದಲೇ. ಇವತ್ತು ಸಾಧ್ಯವಾದರೆ ಮತ್ತು ಟೈಂ ಇದ್ದರೆ ನಾಟಕ ನೋಡು..’ ಎಂದೆ. ಆಗ ಸಮಯ ಸಂಜೆ ಆರಾಗುತ್ತಿತ್ತು.
ರಾಜಶೇಖರನಿಗೆ ನಾನು ಹೇಳಿದ್ದರ ತಲೆಬುಡ ಅರ್ಥವಾಗಿರಲಿಲ್ಲ. ಅದು ಅವನ ಕಣ್ಣುಗಳಲ್ಲೇ ಅರ್ಥವಾಗುತ್ತಿತ್ತು.
ನನ್ನ ತರಾತುರಿ ಕಂಡು ಎದ್ದು ‘ಬೀಚಿ ರಸಾಯನ’ ತುಂಬ ಸಕ್ಸಸ್‌ಫುಲ್ ನಾಟಕ ಅಂತ ಕೇಳಿದ್ದೆ. ನೀ ನೋಡಿದರೆ ಬೇರೇನೇ ಹೇಳ್ತಿದ್ಯಾ.. ಈ ಸಕ್ಸಸ್‌ಗೆ ಏನು ಕಾರಣ ಚೂರು ಹೇಳ್ತಿಯಾ..?’ ಎಂದು ಕೇಳಿದ.
‘ಬೀಚಿ ಅವರ ವಿಡಂಬನೆಗಳಲ್ಲಿ ಬದುಕಿನ ಅಪಸವ್ಯಗಳ ಬಗೆಗೆ ಗಾಢ ವಿಷಾದ ಇರುತ್ತೆ. ಅದನ್ನ ನಗೆಯಲ್ಲಿ ದಾಟಿಸಬೇಕಾದ ಅನಿವಾರ್ಯವನ್ನ ಅವರು ಸೃಷ್ಟಿಸಿಕೊಂಡಿದ್ದಾರೆ. ವಿಷಾದವನ್ನ ಅದರ ರೂಟ್ ಲೆವೆಲ್‌ನಲ್ಲಿ ಅರ್ಥೈಸಿಕೊಂಡವ ಮಾತ್ರ ಅವರ ವಿಡಂಬನೆಗೆ ನಗಬಲ್ಲ. ಬೀಚಿ ಅವರು ಬರೆದ ವಿಡಂಬನೆಗಳು ಅರ್ಥವಾಗಬೇಕು ಅಂದರೆ ಅವರ ಸಾಹಿತ್ಯವನ್ನ ಓದ್ತಾ ಇರುವವರ ಸುತ್ತ ಇರೊ ಮನುಷ್ಯರ ಕುತ್ಸಿತಗಳೂ ರೂಟ್ ಲೆವೆಲ್‌ನಿಂದ ಅರ್ಥಕ್ಕೆ ನಿಲುಕಬೇಕು. ಆಗ ಬೀಚಿ ಕನೆಕ್ಟ್ ಆಗ್ತಾರೆ. ನನ್ನ ಸುತ್ತ ಇರೋರಿಗೆ ನಾನು ಕನೆಕ್ಟ್ ಆಗ್ತಿದ್ದೀನಾದ್ದರಿಂದ ಸಕ್ಸಸ್ ಸಿಕ್ಕಿರಬಹುದು…’ ಅಂದೆ ನಗುತ್ತ.
‘ಇದು ಪಕ್ಕಾ ಸಂದರ್ಶನದ ಸ್ಟಫ್ ಗುರೂ.. ಎಲ್ಲ ಹಾಳುಮಾಡಿಬಿಟ್ಟೆ..’ ಎಂದು ಗೆಳೆಯಾ ಪೇಚಾಡಿದ.
‘ನನ್ನದೊಂದು ಫೋಟೊ ಹಾಕಿಸಿಕೊಂಡು ನಾನು ಹೇಳೋದೆಲ್ಲ ದಾಖಲಾಗಬೇಕು ಅನ್ನೋ ತೆವಲು ಎಲ್ಲ ಮಾಯ ಆಗಿ ಕಾಲ ಆಯ್ತು.. ನಡಿ ಗುರು ಸಾಕು..’ ಎಂದೆ.
ರಾಜಶೇಖರ ಹೊರಟ. ನಾನು ಮತ್ತೆ ಲೈಟಿಂಗ್ ರೂಮಲ್ಲಿ ಮೊಬೈಲ್‌ಗೆ ಹಾಕುವ ಜಾಕ್ ಹುಡುಕಿ ಟೆಸ್ಟಿಂಗ್ ಆರಂಭಿಸಿದೆ. ಪೂರಾ ವಾಲ್ಯೂಮ್ ಕಡಿಮೆ ಮಾಡಿದರೂ ಹಾಡು ಕೇಳಿಸುತ್ತಲೇ ಇತ್ತು. ನಗು ಬಂತು. ಇವತ್ತು ಮ್ಯೂಸಿಕ್ ಪ್ಲೇ ಮಾಡೋದು ಚಾಲೆಂಜಿಂಗ್ ಅಂದುಕೊಂಡು ಮಿಕ್ಕ ಕೆಲಸಗಳ ಕಡೆಗೆ ಗಮನ ಹರಿಸಿದೆ.
ನಾಟಕ ಮುಗಿಸಿ ಹೊರಟು ‘ನಮಸ್ತೆ ಬೆಂಗಳೂರು’ ಹೋಟಲಲ್ಲಿ ಎಲ್ಲ ಕಲೆತು ಊಟ ಮಾಡಿದೆವು. ನಂತರ ಮತ್ತೆ ಹೊರಟು ಡ್ರೈವ್ ಮಾಡುತ್ತಿದ್ದಾಗ ನಾಟಕದ Flaw ಗಳೂ, ಬಂಡೇಳುವ ಜೀವಿಗಳೂ ಎಲ್ಲ ಒಟ್ಟು ನೆನಪಾಗಿ ಒಳಗೊಳಗೇ ನಗುತ್ತ ಸ್ಟೇರಿಂಗ್ ತಿರುಗಿಸುತ್ತಿದ್ದೆ..
(ಚಿತ್ರಗಳು: ಸಾಂದರ್ಭಿಕ)
ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಕೆಲ ಕಾಲ ಕನ್ನಡ ಉಪನ್ಯಾಸರಾಗಿ ಹಾಗೂ ‘ಕನ್ನಡ ಪ್ರಭ’ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಣೆ. ಸಾಹಿತ್ಯ, ಸಂಗೀತ ಮತ್ತು ರಂಗಭೂಮಿ ಆಸಕ್ತಿಯ ಕ್ಷೇತ್ರಗಳು. ‘ಬೆಳಕು ಸದ್ದುಗಳನ್ನು ಮೀರಿ’, ‘ ಸರಸ್ವತಿ ಅಕಾಡಮಿ’ (ಕಥಾಸಂಕಲನ) ‘ ತಮ್ಮ ತೊಟ್ಟಿಲುಗಳ ತಾವೇ ಜೀಕಿ’ (ಕಾದಂಬರಿ) ಪ್ರಕಟಿತ ಕೃತಿಗಳು. ಪ್ರಸ್ತುತ ‘ಡ್ರಾಮಾಟ್ರಿಕ್ಸ್’ ಎಂಬ ರಂಗತಂಡದಲ್ಲಿ ನಾಟಕ ರಚನೆ ಮತ್ತು ನಿರ್ದೇಶನದಲ್ಲಿ ಸಕ್ರಿಯ.