ಕನ್ನಡ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರಾದ, ಕೋ.ಚನ್ನಬಸಪ್ಪನವರು 1922 ಫೆಬ್ರುವರಿ 21 ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಮಡುಗು ಸಮೀಪದ ಆಲೂರು ಗ್ರಾಮದಲ್ಲಿ ಜನಿಸಿದ್ದರು.  ಊರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದರೆ, ಪ್ರೌಢಶಿಕ್ಷಣವನ್ನು ಬಳ್ಳಾರಿಯಲ್ಲಿ ಪಡೆದರು. ಕಾಲೇಜು ವಿದ್ಯಾಭ್ಯಾಸ ಅನಂತಪುರದಲ್ಲಿ ನಡೆಯಿತು.  ಕ್ವಿಟ್ ಇಂಡಿಯಾ ಚಳವಳಿಯಲ್ಲಿ ವಿದ್ಯಾರ್ಥಿ ಮುಖಂಡರಾಗಿ ಭಾಗಿಯಾಗಿ ಬಂಧನಕ್ಕೊಳಗಾಗಿದ್ದರು. ಬಿಡುಗಡೆಯ ನಂತರ ಬಿ.ಎ. ಪದವಿ, ಬೆಳಗಾವಿ ಕಾಲೇಜಿನಿಂದ ಲಾ ಪದವಿ,‌ ಚರಿತ್ರೆ ಮತ್ತು ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು.

ವಕೀಲರಾಗಿ, ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಅವರು, ಕರ್ನಾಟಕ ವಿಭಾಗದ ಅರವಿಂದಾಶ್ರಮ ಪ್ರಾರಂಭಿಸಿದ್ದರು.  ಸ್ವಾತಂತ್ರ್ಯ ಮಹೋತ್ಸವ, ಪ್ರಾಣಪಕ್ಷಿ, ಜೀವತೀರ್ಥ ಸೇರಿದಂತೆ ಐದು ಕವನ ಸಂಕಲನ,  ಗಡಿಪಾರು, ನಮ್ಮೂರ ದೀಪ, ಗಾಯಕನಿಲ್ಲದ ಸಂಗೀತ ಎಂಬ ಕಥಾಸಂಕಲನ ಹಾಗೂ  ಹಿಂದಿರುಗಿ ಬರಲಿಲ್ಲ, ನೊಗದ ನೇಣು, ರಕ್ತತರ್ಪಣ, ಬೇಡಿ ಕಳಚಿತು-ದೇಶ ಒಡೆಯಿತು ಸೇರಿದಂತೆ ಒಟ್ಟು ಒಂಭತ್ತು ಕಾದಂಬರಿಗಳನ್ನು ಬರೆದಿದ್ದಾರೆ.  ಶ್ರೀ ಅರವಿಂದರು, ಶ್ರೀ ಮಾತಾಜಿ, ಶ್ರೀ ಮೃತ್ಯುಂಜಯಸ್ವಾಮಿಗಳು  ಅವರು ಬರೆದ ಜೀವನಚರಿತ್ರೆ.  ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ, ದೃಢಪ್ರತಿಜ್ಞೆ, ಕುವೆಂಪು ವೈಚಾರಿಕತೆ  ಅವರ ಪ್ರಮುಖ ವಿಮರ್ಶಾ ಕೃತಿಗಳು.

ಅವರು ಬರೆದ ಅಯ್ ನ್ಸ್ ಟನ್ ಆತ್ಮ ಕವನ  ‘ಕಾವ್ಯ ಮಾಲೆಯ ಕಾಣದ ಕುಸುಮಗಳು’ ಸರಣಿಯಲ್ಲಿ ನಿಮ್ಮ ಓದಿಗಾಗಿ.

 

ಅಯ್‌ನ್ಸ್‌ಟನ್‌ ಆತ್ಮ

“ಶ್ರಾವಣ ಮಾಸದ ಬೆಳಗಿನ ಜಾವದಿ
ಮರವನು ಸುತ್ತುವಳಾರೀ ನಾರಿ?
ಒಣಗುವ ಮರವನು ಮತ್ತುವ ಜಲವನು
ಸುತ್ತುವ ಮೌಢ್ಯವೇ ಈ ಯುಗದಿ?”
ಎನ್ನುತ ಚೆನ್ನಿಗನೋರ್ವನು ನಡೆದನು
ಹೆಂಗೆಳೆಯ ಕಡು ಮೌಢ್ಯವ ಕಂಡು,
ಅಲ್ಲಿಯೇ ನಿಂತಿರ್ದೊಂದು,
ಇವನೀ ಗೊಣಗನು ಕೇಳಿದ, ಕತ್ತೆ
ತನ್ನೊಳೆ ಚಿಂತಿಸಿತಿಂದೆಂದು:
“ಹೌದೇನ್?
ನಿಜವೇನ್?
ಮರ ಒಣಗುವುದೇನ್?
ನೀರ್‌ ಬತ್ತುವುದೇನ್?
ಯಾರಿಗು ತಿಳಿಯದ ಅಗಾಧ ಸತ್ಯವ
ಶೋಧಿಸಿ ತೆಗೆದೀ ಜಾಣನ ಜಾಣ್ಮೆಗೆ
ಎಣೆಯುಂಟೇ?
ಈತನೇ ನ್ಯೂಟನ್‌!
ಇವನೇ ಐನ್‌ಸ್ಟನ್!!
ಬುದ್ಧಿವಂತನಿಗೆ ಶಹಬಾಸ್! ಶಹಬಾಸ್‌!!
ಆ ಜಾಣನ ನುಡಿಗೂ
ಕತ್ತೆಯ ಶಂಕೆಗೂ
ಕಿವಿಮನ ಕೊಡದಾ ಸಾಧ್ವಿ
ಬನ್ನಿಯ ಮರವನು ಸುತ್ತೀ ಸುತ್ತೀ
ಕುಳಿತಳು ಮರದಡಿ ಮಂಡಿಯನೂರಿ
ಸ್ತುತಿಗಳ ನುಡಿದಳು ಕಣ್ಮುಚ್ಚಿ:
“ರಕ್ಷಿಸಾ ಮಹಾಕಾಳಿ!
ಯಜ್ಞಗಳಿಗಾದಿಯಲಿ
ಅಗ್ನಿಯನು ನಿನ್ನಿಂದ
ಕಡೆದು ಪಡೆದರು ದೇವಿ;
ನಿನ್ನ ಗರ್ಭದೊಳಿರ್ದ
ಅವ್ಯಕ್ತ ಚಿಚ್ಛಕ್ತಿ
ಅಗ್ನಿರೂಪದೊಳಾಯ್ತು ವ್ಯಕ್ತ!
ಅವ್ಯಕ್ತ ಶಕ್ತಿಯನು
ಅಗ್ನಿ ರೂಪದಿ ವ್ಯಕ್ತ-
ಗೊಳಿಸಿದೀ ಮಹಾತಾಯೇ
ನಮೋ ನಿನಗೆ ಮಹಾ ಕಾಳೀ!
ನಿನ್ನ ಅಂಗಾಂಗದಲಿ
ಹರಿಯುತಿದೆ ಪರಶಕ್ತಿ
ನಿನ್ನೊಳಿದೆ ಆ ದೈವ ಮಲಗಿ!!
ನಮೋ! ನಮೋ! ನಮೋ!”
ಅಲ್ಲೆ ಎಲ್ಲಿಯೋ ಬನ್ನಿಮರದ ಕೊಂಬೆಗಳಲ್ಲಿ
ಸುತ್ತಿ ಸುಳಿಯುತಲಿದ್ದ ಐನ್ಸ್‌ಟನ್ನಿನಾತ್ಮ
ಸಾಧ್ವಿಯಾಡಿದ ಸ್ತುತಿಯ ಸೂಕ್ಷ್ಮಕಿವಿ ಕೇಳಿ
ಬೆರಳ ಕಚ್ಚಿತು ಬೆಚ್ಚಿ ಅಚ್ಚರಿಯಪೊಂದಿ!
ನಾ ಬಾಳ್ದೆ ಎಂಬತ್ತು ವರ್ಷಗಳ-ದೀರ್ಘಕಾಲ
ಈ ಸತ್ಯ ಅರಿಯಲೆಂದು!
ಆದರೇನೊ ಅರಿಯದೀಬಾಲೆ ಕಂಡಿಹಳು
ಜಡದೊಳಡಗಿದೆ ಶಕ್ತಿ, ಚೈತನ್ಯಮೆಂದು!