ಕೆ.ಎಸ್. ನರಸಿಂಹ ಸ್ವಾಮಿ ಅವರು ಪ್ರೇಮಕವಿ ಎಂದೇ ಸುಪ್ರಸಿದ್ಧರಾದರೂ ಅವರು ಬದುಕಿನ ಜಿಜ್ಞಾಸೆಗಳ ಬಗ್ಗೆ, ಅಧ್ಯಾತ್ಮದ ಕುರಿತು, ಇತರ ಸಂದಿಗ್ಧಗಳ ಕುರಿತು ಎಷ್ಟೊಂದು ಕವಿತೆಗಳನ್ನು ಬರೆದಿದ್ದಾರೆ. ಅವರ ಕಾವ್ಯ ಸರಳವಾಗಿತ್ತು, ರಮ್ಯವಾಗಿತ್ತು, ಕನಸುವಂತಿತ್ತು… ಎಲ್ಲಿಯವರೆಗೆ? ಶಿಲಾಲತೆಯವರೆಗೆ. ಅಲ್ಲಿಂದ ನರಸಿಂಹಸ್ವಾಮಿ ಕಠಿಣರಾಗುತ್ತಾ ಹೋದರು, ಪ್ರತಿಮೆಗಳಲ್ಲಿ ಮಾತನಾಡಲಾರಂಭಿಸಿದರು. ಅವರ ಜನ್ಮದಿನವಾದ ಇಂದು, ಅವರ ಬಹು ಪ್ರಸ್ತಾಪಿತ ಕವನಗಳನ್ನು ಬಿಟ್ಟು ‘ಶಿಲಾಲತೆ’ಯ ನಲವತ್ತರ ಚೆಲುವೆಯ ಬಗ್ಗೆ ವಿಶ್ಲೇಷಣಾ ಬರಹ ಬರೆದಿದ್ದಾರೆ ಲೇಖಕಿ ಮಾಲಿನಿ ಗುರುಪ್ರಸನ್ನ.
ನರಸಿಂಹ ಸ್ವಾಮಿಯವರು ಪ್ರೇಮ ಕವಿ. ಆದರೆ ಅವರ ಕಾವ್ಯನಡಿಗೆ ಅಷ್ಟಕ್ಕೇ ನಿಂತಿಲ್ಲ ಎನ್ನುವುದನ್ನೂ ಗಮನಿಸಬೇಕು. ‘ಇಡದಿರು ನನ್ನ, ನಿನ್ನ ಸಿಂಹಾಸನದ ಮೇಲೆ’ ಎಂಬ ಸಾಲಲ್ಲಿ ಅವರದು ಅದೆಷ್ಟು ಗಟ್ಟಿತನ, ಅದೆಷ್ಟು ಸಮಾಧಾನ, ಖಡಕ್ ಭಾವ. ನನ್ನ ನಿನ್ನ ಸಾಮ್ರಾಜ್ಯಗಳೇ ಬೇರೆ ಬೇರೆ, ಒಬ್ಬರ ಸಿಂಹಾಸನ ಮತ್ತೊಬ್ಬರಿಗೆ ಸಲ್ಲದು ಎಂದು ಕವಿ ನಕ್ಕ ಬಗೆ ಜಗತ್ತಿನ ಅನೇಕ ಪ್ರಶ್ನೆಗಳಿಗೆ ಉತ್ತರವಾಗಬಲ್ಲದು.
“ಮುಪ್ಪಿರದ ಸಾವಿರದ ನಿನ್ನ ದೊರೆತನವೆಂದು
ಮುಗಿದೀತು ಎಂದು ಕಾದಿಲ್ಲ ನಾನು .
ಬೆಳೆದ ಮಗ ಹೊರಲಿ ನೊಗ ಕೇಳಿಬಿಡುವೆನೆಂದು
ಭ್ರಮೆಗೊಂಡು ಬಂದಿರುವೆ ನೀನು!”
ಎಂಥಾ ಚಾಟಿ ಬೀಸುವ ಸಾಲುಗಳಂತಿವೆ ಇವು. ಅವರ ಜನ್ಮದಿನದ ಸಂದರ್ಭದಲ್ಲಿ ಅದೇಕೋ ಅವರ ಅನೇಕ ಬಹು ಪ್ರಸ್ತಾಪಿತ ಕವನಗಳನ್ನು ಬಿಟ್ಟು ಶಿಲಾಲತೆಯ ನಲವತ್ತರ ಚೆಲುವೆಯ ಬಗ್ಗೆ ಹೇಳಬೇಕೆನ್ನಿಸುತ್ತದೆ.
ಹೆಣ್ಣಿನ ಬಗ್ಗೆ, ಅವಳು ಅನುಭವಿಸುತ್ತಿರುವ ಇಂತಹ ತೊಳಲಾಟಗಳ ಬಗ್ಗೆ ನರಸಿಂಹ ಸ್ವಾಮಿಯವರು ಇಂತಹಾ ಕವನವನ್ನೂ ಬರೆಯಬಲ್ಲರಾ ಎಂದು ಅನಿಸುವಂತಿದೆ ಶಿಲಾಲತೆಯ ಸಾಲುಗಳು. ಇಪ್ಪತ್ತರ ಬೆಡಗಿಯಾಗಿದ್ದ ನವಿಲೂರಿನ ಹುಡುಗಿ, ಮೂವತ್ತರ ಹೊನ್ನೂರಿನ ಗೃಹಿಣಿ ತುಂಬು ಸೊಬಗಿ ಪದುಮ ಕಾಲ ಕಳೆದಂತೆ ಹಿಡಿಗೂದಲ, ಬತ್ತಿದ ಕೆನ್ನೆಯ, ಸುಕ್ಕಿನ ಮಂದಹಾಸ ಹೊತ್ತ ನಲವತ್ತರ ಚೆಲುವೆ ಯಾದ ಪರಿ ವಿಸ್ಮಯ, ಅಚ್ಚರಿ.
ಹೆಸರೇ ಹೇಳಿಬಿಡುತ್ತದೆ ಇವಳೊಬ್ಬ ಹೆಣ್ಣು, ನಲವತ್ತರ ಹೊಸ್ತಿಲು. ಚೆಲುವೆಯೆನ್ನಲು ಅದಾವ ಸಾಕ್ಷಿಯಿದೆಯೋ ಏನೋ, ಉಡುವುದು ಮಾತ್ರ ಹೊಸ ಹೊಸ ಸೀರೆಗಳನ್ನು, ಉಟ್ಟ ಮಾದರಿಯೋ ಯಾರೋ ಸಿನೆಮಾ ತಾರೆಯ ರೀತಿ.. ಮತ್ತಾರನ್ನೋ ಅನುಕರಿಸುವ ಪ್ರಯತ್ನ, ತಾನೂ ಹಾಗಾಗಬೇಕೆಂಬ ಬಯಕೆ. ಇಷ್ಟೆಲ್ಲಾ ಮಾಡಲು, ಚೆಂದ ಕಾಣಲು ಪ್ರಯತ್ನಿಸಲು ಇವಳು ನರ್ತಕಿಯಾ.. ಭುವಿಗಿಳಿದು ಬಂದ ರತಿಯಾ? ಅಲ್ಲವೇ ಅಲ್ಲ. ಗೃಹಿಣಿ, ಮದುವೆಯಾಗಿ ಮಕ್ಕಳಿರುವವಳು, ಗರತಿ. ಕರ್ತವ್ಯದಲ್ಲಿ, ಯೋಚಿಸಲೂ ಸಮಯ ಸಿಗದ ಜವಾಬ್ದಾರಿಗಳ ಒತ್ತಡದಲ್ಲಿ ದಶಕಗಳಷ್ಟು ಕಾಲ ಸಾಗಿ ಹೋಗಿದೆ. ಜವಾಬ್ದಾರಿಗಳೆಲ್ಲಾ ಒಂದು ಹಂತಕ್ಕೆ ಬಂದು ನಿಂತಿದೆ. ಮಕ್ಕಳು ಬೆಳೆದಿದ್ದಾರೆ, ನಲವತ್ತಾಗಿದೆ, ಪುರುಸೊತ್ತು ಸಿಕ್ಕಿದೆ. ಈಗ ಇವಳಿಗೆ ಹೊಸ ಪ್ರಾಯ ಮತ್ತೆ ಮೈಗೂಡಿದ ಹಾಗೆ, ಕನಸುಗಳ ಕದ ಮತ್ತೆ ತೆರೆದ ಹಾಗೆ. ಹಳ್ಳಿಯ ಚೆಲುವೆಗೆ ಈಗ ನಗರದ ರಂಗುರಂಗಿನ ಬದುಕಿನ ಬಗ್ಗೆ, ಅವುಗಳಲ್ಲಿ ಕುಣಿಯುತ್ತಿರುವ ಆಮಿಷಗಳ ಬಗ್ಗೆ ಆಕರ್ಷಣೆ. ಅವುಗಳ ಸೆಳೆತಕ್ಕೆ, ಸೆಳೆಯುತ್ತಿರುವ ಪರಿಗೆ ಶರಣಾಗಿದ್ದಾಳೆ, ಬಾಯಾರಿದ್ದಾಳೆ. ತಾನೆಂದೂ ಕಾಣದ, ಅನುಭವಿಸದ ಬದುಕನ್ನು ಬೊಗಸೆಯಲ್ಲಿ ಮೊಗೆಮೊಗೆದು ಕುಡಿಯಲು ಯತ್ನಿಸುತ್ತಿದ್ದಾಳೆ, ದಾಹ ನೀಗುತ್ತಿಲ್ಲ, ಬೊಗಸೆಯೊಳಗೆ ನೀರು ನಿಲ್ಲುತ್ತಿಲ್ಲ. ಮತ್ತೆ ಮತ್ತೆ ಬೇಕೆನ್ನಿಸುವಷ್ಟು ನೀರಡಿಕೆ. ಅವಳಿಗೆ ಸ್ಪಷ್ಟವಾಗಿ ಅರಿವಿದೆ, ಇನ್ನೂ ಬಹಳ ಕಾಲ ತನ್ನ ತಾರುಣ್ಯ ಉಳಿಯುವುದಿಲ್ಲ, ಈಗ ಬಿಟ್ಟರೆ ತನಗೆ ಇಂತಹಾ ಬದುಕು ಮತ್ತೆ ಸಿಕ್ಕುವುದೇ ಇಲ್ಲ. ಹಾಗೆಂದೇ ತೀರದ ದಾಹ ಅವಳಿಗೆ. ಇಷ್ಟು ವರ್ಷಗಳ ಕಾಲ ತನ್ನ ಸಂಸಾರವೇ ಸರ್ವಸ್ವವೆಂದು ನಂಬಿದ್ದವಳಿಗೆ, ಸಂಸಾರಕ್ಕೆ ತನ್ನನ್ನು ಒಪ್ಪಿಸಿಕೊಂಡವಳಿಗೆ ಆ ಸಾತ್ವಿಕ ಸಂಸಾರದ ಸಾಧಾರಣ ಸರಕು ಸಾಲುತ್ತಿಲ್ಲ, ನೀರಸವೆನಿಸುತ್ತಿದೆ.
ಆಕರ್ಷಣೀಯವೆನ್ನಿಸಲು ಆ ಸಂಸಾರದಲ್ಲಿ ಉಳಿದಿರುವುದಾದರೂ ಏನು? ಗಂಡ ಮುದುಕನಾಗಿದ್ದಾನೆ. ಇವಳ ಬಗ್ಗೆ ಸೆಳೆತವಿಲ್ಲ, ಉತ್ಸಾಹವಿಲ್ಲ. ಆಕರ್ಷಣೆಯೂ ಉಳಿದಿಲ್ಲ. ಹಳೆಯ ಕಾಲದ ಹಳೆಯ ಗಂಡಸಿನಂತೆ ಬದಲಾಗಿದ್ದಾನೆ. ನಿರ್ಲಿಪ್ತನಾಗಿದ್ದಾನೆ. ತನ್ನಪ್ಪ, ಅಜ್ಜ, ಮುತ್ತಜ್ಜರಂತೆ ವರ್ತಿಸುತ್ತಿದ್ದಾನೆ, ಗಂಡನಾಗುವುದನ್ನು ಮರೆತಿದ್ದಾನೆ. ಇವಳೊಂದಿಗೆ ಯಾವ ಭಾವನಾತ್ಮಕ ನಂಟನ್ನೂ ಉಳಿಸಿಕೊಂಡಿಲ್ಲ. ಮಕ್ಕಳು ಬೆಳೆದಿದ್ದಾರೆ, ಸಹಜವಾಗಿಯೇ ತಾಯಿಯನ್ನು ಎಲ್ಲಕ್ಕೂ ಅಶ್ರಯಿಸುವುದನ್ನು ನಿಲ್ಲಿಸಿದ್ದಾರೆ. ಗಂಡ ದೂರ ನಿಂತೇ ಮಾತನಾಡುತ್ತಿದ್ದಾನೆ. ಕಂಗಾಲಾಗಿದ್ದಾಳೆ. ಇವಳನ್ನು ದೂರವಿರಿಸಿ ಅವನು ಮಾಡುತ್ತಿರುವ ಮಹತ್ಕಾರ್ಯವಾದರೂ ಏನು? ಮನೆಯ ಹಿತ್ತಲಿನಲ್ಲಿ ತೆಂಗಿನ ಮರದ ಬುಡ ಅಗೆಯುತ್ತಿದ್ದಾನೆ. ಅಥವಾ ಮನೆಯ ಮುಂದೆ ಜಗುಲಿಯಲ್ಲಿ ಕುಳಿತು ಬೀದಿಯ ನಾಯಿಗೆ ಬೆತ್ತ ತೋರಿಸುತ್ತಾ ಓಡಿಸುತ್ತಿದ್ದಾನೆ. ಹಿತ್ತಲು ಮತ್ತು ಜಗುಲಿಯ ಮಧ್ಯದಲ್ಲಿರುವ ಮನೆಯಲ್ಲಿರುವ ತನ್ನ ಮಡದಿಯ ಬಗ್ಗೆ ಗಮನವಿಲ್ಲ. ಮನೆಯೊಳಗಿರಲು ಅವನಿಗೆ ಮರೆವಾ, ಮನ ಒಪ್ಪುತ್ತಿಲ್ಲವಾ? ಅನುಮಾನ. ಅವಳು ಒಂಟಿಯಾಗಿದ್ದಾಳೆ.
ಒಂದು ವೇಳೆ ಹಿತ್ತಲು, ಜಗುಲಿಯ ಕಾರಬಾರು ಬಿಟ್ಟು ಇವಳಿರುವ ಮನೆಯೊಳಗೆ ಒಂದೊಮ್ಮೆ ಹೊಕ್ಕರೆ ಅವನು ಮಾಡುವುದಾದರೂ ಏನು? ಅವಳೊಡನೆ ಒಂದೆರಡು ಮಾತು? ಒಲವಿನ ನೋಟ? ಇಲ್ಲವೇ ಇಲ್ಲ. ತನ್ನ ಯಾವುದೋ ಹಾಕಲು ಸಾಧ್ಯವಿಲ್ಲದ ಹಳೆಯ ಷರಾಯಿಯನ್ನು ಕತ್ತರಿಸಿ ಕೈಚೀಲ ಹೊಲೆಯುತ್ತಿದ್ದಾನೆ. ಹಳೆಯದಾದರೇನು ಎಸೆಯಲಾರ. ಕೈಚೀಲವಾಗಿ ಉಪಯೋಗಿಸಲಾಗದೇ? ಅದೇನು ಹೆಂಡತಿಯೇ, ಹಳೆಯದಾದ ಮೇಲೆ ಕಣ್ಣೆತ್ತಿ ನೋಡದಿರಲು? ಮಕ್ಕಳು ಮಾತು ಮೀರಿದರೆ ತಡೆದು ಕೊಳ್ಳಲಾರ, ಸಮಾಧಾನದಿಂದ ಬುದ್ಧಿ ಹೇಳಲಾರ. ಹೂಂಕರಿಸುತ್ತಾನೆ, ರೇಗುತ್ತಾನೆ. ತಾನು ಯಜಮಾನನೆಂಬ ದರ್ಪ, ಯಜಮಾನನ ರೀತಿ ನಡೆದು ಕೊಳ್ಳುವ ಪ್ರಯತ್ನ.. ಇದೆಷ್ಟರ ಮಟ್ಟಿಗೆಂದರೆ ಹೆಂಡತಿಯನ್ನು ಹತ್ತಿರ ಬರಲೂ ಬಿಡಲಾರ, ಸಲಿಗೆ ಕೊಡಲಾರ. ಇವನ ಹೂಂಕಾರಕ್ಕೆ ಅವಳು ಬೆದರಬೇಕು, ದೂರವೇ ನಿಲ್ಲಬೇಕು. ಹಾಗೆ ನಿಂತೇ ಮಾತನಾಡಬೇಕು. ಇಂತಹಾ ಮನೆಯ ವಾತಾವರಣದಲ್ಲಿ ಅವಳಿಗೆ ಯಾವ ಆಕರ್ಷಣೆಯೂ ಉಳಿದಿಲ್ಲ. ಹೋರಾಡುತ್ತಿದ್ದಾಳೆ ಹಲ್ಲು ಕಚ್ಚಿ. ಸಾಕಾಗಿ ಹೋಗಿದೆ ಮನೆಯೊಳಗಿನ ಬದುಕು. ಹೊರಗಿನ ರಂಗುರಂಗಿನ ಪ್ರಪಂಚ ಕೈ ಬೀಸಿ ಕರೆಯುತ್ತಿದೆ.ಬಾಯಾರಿದ್ದಾಳೆ. ಅವಳಿಗೀಗ ಹೊಸ ಹೊಸ ಬಯಕೆಗಳು, ಕನಸುಗಳು. ತನ್ನ ವಯಸ್ಸು ನೆನಪಾಗುತ್ತಿಲ್ಲ. ಪ್ರಾಯದ ಹುಡುಗರನ್ನು ಕಂಡರೆ ಹುಡುಗಿಯಂತಾಡುವ ಮನಸ್ಸು, ಹಾಗೇ ವರ್ತಿಸುತ್ತಿದ್ದಾಳೆ ಕೂಡಾ. ಅವರ ಗಮನ ಸೆಳೆಯಲು ಯತ್ನಿಸುತ್ತಿದ್ದಾಳೆ. ಕಣ್ಣೋಟದಿಂದಲ್ಲ, ಬಸ್ಸು ಹತ್ತುವ ನೆಪದಲ್ಲಿ ಸೆರಗು ಜಾರಿಸುತ್ತಿದ್ದಾಳೆ, ಆಹ್ವಾನ ನೀಡುತ್ತಿದ್ದಾಳೆ. ಈ ಮೂಲಕವಾದರೂ ತಾನು ಯಾರನ್ನಾದರೂ ಸೆಳೆಯಲಾದೀತೇ ಎಂದು ಹಂಬಲಿಸುತ್ತಿದ್ದಾಳೆ.
ಬತ್ತಿಹೋದ ಕೆನ್ನೆ ಆಕರ್ಷಕವಾಗಿ ಉಳಿದಿಲ್ಲ. ರಂಗು ಹೆಚ್ಚಿಸಲು ಮುಖಚೂರ್ಣ ( ಪೌಡರ್) ಹಚ್ಚುತ್ತಾಳೆ. ಕನ್ನಡಕದ ಮರೆಯಲ್ಲಿರುವ ನೀರಸ ಕಂಗಳು ಏನನ್ನು ಬಿಂಬಿಸಲೂ ವಿಫಲವಾಗುತ್ತಿವೆ. ಇಳಿಯುತ್ತಿರುವ ವಯಸ್ಸು ಅವಳ ಅಂದಚೆಂದವನ್ನೆಲ್ಲ ನುಂಗಿ ಹಾಕಿದೆ. ಆದರೂ ಅವಳಿಗೆ ಹರೆಯದ ಕನಸು. ತಂಗಳು ಕನಸು, ಇಷ್ಟರಲ್ಲೇ ಹಳಸಬಹುದಾದ ಕನಸು. ಬಣ್ಣ ಹಚ್ಚಿದ ತುಟಿಗಳ ಹಿಂದೆ ಅಡಗಿರುವುದು ಉದುರಿಹೋದ ಹಲ್ಲಿನ ಜಾಗದಲ್ಲಿರುವ ಕಟ್ಟಿಸಿದ ಚಿನ್ನದ ಹಲ್ಲು. ಅವಳಲ್ಲೀಗ ಯಾವ ಆಕರ್ಷಣೆ? ಆದರೂ ಹುಬ್ಬು ಹಾರಿಸುತ್ತಾಳೆ, ಹುಡುಗರನ್ನು ಹತ್ತಿರ ಕರೆಯುವಂತೆ ವರ್ತಿಸುತ್ತಿದ್ದಾಳೆ. ಅವಳ ತುರುಬಿನಲ್ಲೀಗ ಉಳಿದಿರುವುದು ಒಂದು ಹಿಡಿಯಲ್ಲಷ್ಟೇ ಬಂಧಿಸಬಹುದಾದ ಬಿಳಿಯ ಕೂದಲುಗಳು, ಮಲ್ಲಿಗೆಯ ಮಾಲೆಯ ನೆರಳಿನಂತೆ. ಮುಡಿಯನ್ನು ಅಲಂಕರಿಸಿರುವುದು ಮೃದುತ್ವವಿಲ್ಲದ ಪರಿಮಳ ಸೂಸದ ಹೊಸ ಚಿನ್ನದ ಗುಲಾಬಿ. ಮುಖ ಜೀರ್ಣವಾಗಿ ಮಂದಹಾಸವೆಂಬುದು ಸುಕ್ಕಿದ ಸುಪ್ಪತ್ತಿಗೆಯಾಗಿದೆ. ಅಲ್ಲಿರುವ ನಗೆ ಮನದಾಳದ್ದಲ್ಲ ಮೋಸದ ಕೃತಕ ಮಂದಹಾಸ.
ಕೊರಗು ಮೈಮನ ವ್ಯಾಪಿಸಿದ್ದಕ್ಕೋ, ಯಾರನ್ನೂ ಸೆಳೆಯಲಾಗದ ತನ್ನ ದುರ್ದೆಶೆಗೊ ಕೃಶಳಾಗಿದ್ದಾಳೆ. ಮೂಳೆಗಳು ಎದ್ದು ಕಾಣುತ್ತಿರುವ ಕತ್ತಿನಲ್ಲಿ ಚಿನ್ನದ ಸರ ಅಣಕಿಸುತ್ತಿದೆ. ಬಡಕಲು ಕೈಗಳಲ್ಲಿ ಸಡಿಲ ಬಳೆಗಳು.ಬತ್ತಿದ ಮೂಗಿನ ಮೂಗುತಿ, ಜೋತ ಕಿವಿಯಲ್ಲಿ ದೃಢವಾಗಿ ನಿಲ್ಲಲು ಸೋಲುತ್ತಿರುವ ಬೆಂಡೋಲೆ. ಇವಳಿರುವ ರೀತಿಗೂ, ಇವಳ ಕನಸಿಗೂ ತಾಳ ಮೇಳವೇ ಇಲ್ಲ. ಪತಿ ಇವಳನ್ನು ದೂರವಿಟ್ಟಿದ್ದಾನೆ ( ಅಥವಾ ಇವಳಿಗೇ ಅವನು ಬೇಡವಾಗಿದ್ದಾನೆ), ಬೀದಿಯ ಜನ ಇವಳನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ. ಇವಳಿಗೆ ಕೊರಗಾ? ಕಳವಳವಾ? ಯಾರಿಗೂ ಅದರ ಬಗ್ಗೆ ಕಾಳಜಿಯಿಲ್ಲ. ಯಾರೂ ಇವಳನ್ನು ಸಂತೈಸುತ್ತಿಲ್ಲ. ಕೇಳುತ್ತಿಲ್ಲ. ಹೊಸ್ತಿಲಲ್ಲಿ ನಿಂತಿದ್ದಾಳೆ, ಯಾರಾದರೂ ಕಣ್ಣು ಹಾಯಿಸುತ್ತಾರಾ? ಯಾರೂ ಇವಳತ್ತ ನೋಡುತ್ತಿಲ್ಲ, ಇವಳ ಬಗ್ಗೆ ಆಕರ್ಷಣೆ ಹುಟ್ಟುತ್ತಿಲ್ಲ, ನೋಡನೋಡುತ್ತಿದ್ದಂತೆ ಬೀದಿಯ ಗೆರೆ ದಾಟಿ ಕಣ್ಮರೆಯಾಗುತ್ತಿದ್ದಾರೆ. ಈ ನಲವತ್ತರ ಚೆಲುವೆ ಅತ್ತ ಮನೆಯೊಳಗೂ ನಿಲ್ಲುತ್ತಿಲ್ಲ, ಇತ್ತ ಬೀದಿಯಲ್ಲೂ ಸಲ್ಲುತ್ತಿಲ್ಲ. ಇದು ನಲವತ್ತರ ಚೆಲುವೆಯ ವ್ಯಥೆ, ಕಥೆ.
ದಾಂಪತ್ಯ ರಥವನ್ನು ಉರುಳಿಸುತ್ತಾ ಬಂದ ಹೆಣ್ಣು ಜೀವದ ಋತು ಚಕ್ರ ನಲವತ್ತರ ಹೊಸ್ತಿಲಲ್ಲಿ ನಿಲುಗಡೆಯ ಹಂತಕ್ಕೆ ಬಂದಿದೆ ಎಂದು ಸೂಚ್ಯವಾಗಿ ಹೇಳುವ ಮೂಲಕ, ನರಸಿಂಹ ಸ್ವಾಮಿಯವರು, ಆಗ ತಾನೇ ದಾಂಪತ್ಯದ ರಥವೇರಿ ಮುಡಿ ತುಂಬಾ ಮಲ್ಲಿಗೆಯ ಹೂ ಮುಡಿದು ನಸುನಕ್ಕ ಪದುಮಳ ಕಳವಳವನ್ನು ಚಿತ್ರಿಸುತ್ತಿದ್ದಾರೆ ಎಂದುಕೊಳ್ಳಬಹುದೇ?
ಈ ಕವನದಲ್ಲಿ ಹೆಣ್ಣಿನ ಜೀವನದ ಪ್ರಮುಖ ಘಟ್ಟಗಳಲ್ಲೊಂದಾದ ಋತುಚಕ್ರದ ನಿಲುಗಡೆಯ ವಯಸ್ಸು ಅವಳನ್ನು ಮನೆಯೊಳಗೂ, ಹೊರಗೂ ಎರಡೂ ಕಡೆ ಸಲ್ಲದವಳನ್ನಾಗಿ ಮಾಡುವಷ್ಟು ಪ್ರಭಾವಶಾಲಿ. ಈ ರೀತಿಯ ಹೆಣ್ಣಿಗೆ ತಳಮಳ, ಕಳವಳ, ವ್ಯಥೆ, ಒಂಟಿತನ ಎಲ್ಲವೂ ಕಾಡುತ್ತಿದ್ದರೂ ಈಕೆ ನರಸಿಂಹ ಸ್ವಾಮಿಯವರ ಕಾವ್ಯದ ಹೆಣ್ಣಾ ಎಂದು ಒಮ್ಮೆ ಅನ್ನಿಸಿಬಿಡುತ್ತದೆ.
ಅವರು ಕಂಡ, ಚಿತ್ರಿಸಿದ ಹೆಣ್ಣಿನ ಮೊದಲ ಚಿತ್ರಣಗಳನ್ನೇ ಗಮನಿಸಿ. ಅಲ್ಲಿರುವ ಪದುಮ ತುಂಬು ಒಲವಿನ ಮುಗ್ಧೆ, ಕೈ ಹಿಡಿದ ಗಂಡನ ಪ್ರೀತಿಯನ್ನು ಪರಿಪೂರ್ಣವಾಗಿ ಅನುಭವಿಸುತ್ತಾ, ಅವನನ್ನೇ ಸರ್ವಸ್ವ ಎಂದು ಭಾವಿಸುತ್ತಾ, ಮನೆಯೊಳಗಿನ ಬದುಕಿನಲ್ಲಿ ಸಕಲ ಸುಖ ಸಂತೋಷಗಳನ್ನೂ ಕಂಡುಕೊಳ್ಳಬಲ್ಲ, ಅನುಭವಿಸಬಲ್ಲ ಹೆಣ್ಣು. ಹಾಗೆಂದು ಗಂಡ ಹೇಳಿದ್ದಕ್ಕೆಲ್ಲ ಕೋಲೆಬಸವನಂತೆ ತಲೆಯಾಡಿಸುವ ಅಪ್ರಬುದ್ಧೆಯಲ್ಲ, ಅಲ್ಲೂ ತನ್ನ ಸ್ವಂತಿಕೆಯನ್ನು ಉಳಿಸಿಕೊಂಡು ಗಂಡನನ್ನು ಭಾವನಾತ್ಮಕವಾಗಿ ಕಟ್ಟಿಹಾಕಬಲ್ಲವಳು. ರೈಲು ತಪ್ಪಿಸಿಕೊಂಡು ಹಿಂತಿರುಗಿ ಬರುವ ಪತಿಯನ್ನು ‘ತಿಂಗಳಾಯಿತೇ’ ಎಂದು ಛೇಡಿಸಬಲ್ಲವಳು, ‘ತೌರ ಸುಖದೊಳಗೆ ಮರೆತಿಹಳು ಎನ್ನದಿರಿ, ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು’ ಎಂದು ತಿಳಿ ಹೇಳುವವಳು, ‘ನಿಮ್ಮೂರೇ ನಮ್ಮೂರಿಗಿಂತ ಸುಖವಾದುದು ಪ್ರಶ್ನಿಸದಿರಿ.. ಸುಮ್ಮನಿರಿ’ ಎಂದು ಒಲವಿನಿಂದ ಮಾರುತ್ತರ ನೀಡುವವಳು, ಕಣ್ಣಲ್ಲೇ ಸಂದೇಶ ಕಳಿಸಬಲ್ಲವಳು.ಇಂತಹಾ ಪದುಮ ನಲವತ್ತಕ್ಕೆ ಬಂದಾಗ ಹೇಗಿರಬೇಕಿತ್ತು? ಹರೆಯದ ಮಲ್ಲಿಗೆಯ ಬಳ್ಳಿ ಫಲ ಬಿಟ್ಟ ತುಂಬು ಬಾಳೆಯ ಮರದ ರೀತಿ ಬದಲಾಗಬೇಕಿತ್ತು, ದಶಕಗಳ ದಾಂಪತ್ಯಕ್ಕೆ ಮಾಗಬೇಕಿತ್ತು, ತನ್ನ ಹುಡುಗಾಟ ಕಳೆದುಕೊಂಡು ಗಾಂಭೀರ್ಯದ ಹಿನ್ನೆಲೆಯಲ್ಲಿ ಪ್ರೌಢ ಪ್ರೇಮಕ್ಕೆ ತಿರುಗಬೇಕಿತ್ತು, ಸಭ್ಯತೆಯ ಎಲ್ಲೆ ಮೀರದ ಸಂಯಮಪೂರಿತ ಶೃಂಗಾರ ಅರಳಬೇಕಿತ್ತು, ನಲವತ್ತಕ್ಕೂ ಒಂದು ಪ್ರೌಢ ಚೆಲುವಿದೆ.
ಗೃಹಿಣಿ, ಮದುವೆಯಾಗಿ ಮಕ್ಕಳಿರುವವಳು, ಗರತಿ. ಕರ್ತವ್ಯದಲ್ಲಿ, ಯೋಚಿಸಲೂ ಸಮಯ ಸಿಗದ ಜವಾಬ್ದಾರಿಗಳ ಒತ್ತಡದಲ್ಲಿ ದಶಕಗಳಷ್ಟು ಕಾಲ ಸಾಗಿ ಹೋಗಿದೆ. ಜವಾಬ್ದಾರಿಗಳೆಲ್ಲಾ ಒಂದು ಹಂತಕ್ಕೆ ಬಂದು ನಿಂತಿದೆ.. ಮಕ್ಕಳು ಬೆಳೆದಿದ್ದಾರೆ, ನಲವತ್ತಾಗಿದೆ, ಪುರುಸೊತ್ತು ಸಿಕ್ಕಿದೆ. ಈಗ ಇವಳಿಗೆ ಹೊಸ ಪ್ರಾಯ ಮತ್ತೆ ಮೈಗೂಡಿದ ಹಾಗೆ, ಕನಸುಗಳ ಕದ ಮತ್ತೆ ತೆರೆದ ಹಾಗೆ.
ಆದರೆ ಇಲ್ಲಿ ಅದಾವುದೂ ಆಗಿಲ್ಲ. ನಲವತ್ತರ ಘಟ್ಟದಲ್ಲಿ ಆಕೆ ಕಳೆದು ಹೋಗುತ್ತಿರುವ ತನ್ನ ಪ್ರಾಯವನ್ನು ಮತ್ತೆ ಹುಡುಕುತ್ತಿದ್ದಾಳೆ ಎಂದು ಅವರ ಕವನಗಳು ಹೇಳುತ್ತವೆ.
ಅವಳು ಮೈಮನಗಳ ಬಯಕೆಗಳ ಸುಳಿಯಲ್ಲಿ ಒದ್ದಾಡುತ್ತಿದ್ದಾಳೆ, ಹಳ್ಳಿಯ ಸೊಬಗು ಮರೆತು ನಗರ ಜೀವನದ ಆಕರ್ಷಣೆಗೆ ಸಿಲುಕಿದ್ದಾಳೆ, ಹುಡುಗರನ್ನ ಕಂಡರೆ ಕೆರಳುತ್ತಿದ್ದಾಳೆ. ಅವಳ ಹುಡುಕಾಟ ಪ್ರೀತಿಗಾಗಿ ಅಲ್ಲ, ಯಾರು ಸಿಕ್ಕರೂ ಪ್ರಸಾದವೆಂಬಂತೆ. ಈ ಯಾವ ಅಂಶಗಳೂ ನರಸಿಂಹಸ್ವಾಮಿಯವರ ಕಾವ್ಯಧರ್ಮಕ್ಕೆ ಒಗ್ಗದ ಅಂಶಗಳು, ಈ ಕವನದ ಆತ್ಮ ಕೂಡಾ.
ಹದಿಹರೆಯದ, ಮದುವೆಯ ಹೊಸತರಲ್ಲಿನ ದಾಂಪತ್ಯದ ರಮ್ಯ ಚಿತ್ರಣ ಕಟ್ಟಿಕೊಟ್ಟ ನರಸಿಂಹಸ್ವಾಮಿಯವರು ನಲವತ್ತರ ಬಗ್ಗೆ ಬರೆದರೆ ಅದರ ಬಗ್ಗೆ ಯಾರ ತಕರಾರೂ ಇರಲಾರದು. ನಲವತ್ತರ ಘಟ್ಟದಲ್ಲಿ ಆಕೆ ನಿಂತಿದ್ದಾಳೆ, ತನ್ನ ಸ್ತ್ರೀತನದ ಕೋಮಲತೆಯನ್ನು ಕಳೆದುಕೊಳ್ಳುತ್ತಿದ್ದಾಳೆ, ಮರುಗುತ್ತಿದ್ದಾಳೆ, ಮರಳಿ ಪಡೆಯಲು ಹರಸಾಹಸ ಪಡುತ್ತಿದ್ದಾಳೆ, ಸೆಳೆಯಲು ಯತ್ನಿಸುತ್ತಿದ್ದಾಳೆ, ಅದಕ್ಕಾಗಿ ಇನ್ನಿಲ್ಲದ ಅವಸ್ಥೆ ಪಡುತ್ತಿದ್ದಾಳೆ, ಸೆರಗು ಬೀಸುವಂತಹಾ ತರತರಹೇವಾರಿ ಪ್ರಯತ್ನಗಳನ್ನು ಮಾಡುತ್ತಿದ್ದಾಳೆ. ಇವಿಷ್ಟೂ ಹೇಳಲಾಗದ್ದಲ್ಲ, ಹೇಳಬಾರದ್ದೂ ಅಲ್ಲ. ಎಷ್ಟೋ ಸ್ತ್ರೀಯರು ಅಂತಹ ತಳಮಳವನ್ನು ಅನುಭವಿಸಿರುತ್ತಾರೆ, ಹೇಳಲಾರದೆ ಒದ್ದಾಡುತ್ತಿರುತ್ತಾರೆ. ಹೆಣ್ಣಿಗೆ ಹೀಗೂ ಒಂದು ಸ್ಥಿತಿಯಿದೆ ಎಂದು ಹೇಳಹೊರಡುವುದೇನೋ ಸರಿಯೆ. ಆದರೆ ಹೇಳಿದ ಕವಿ, ಕವಿಯ ಕವನಗಳ ಸ್ಥಾಯೀ ಭಾವ ಈ ಕವನವನ್ನು ಗ್ರಹಿಸುವಾಗ ಓದುಗನಿಗೆ ಸಖೇದಾಶ್ಚರ್ಯವನ್ನು ಉಂಟು ಮಾಡುತ್ತದೆ.
ಅವಳನ್ನು ಚಿತ್ರಿಸಿರುವ ರೀತಿ ಹೇಗಿದೆಯೆಂದರೆ ಅವಳು ನಲವತ್ತರ ಹೆಣ್ಣು ಅನ್ನಿಸುತ್ತಿಲ್ಲ. ನಲವತ್ತಕ್ಕೆ ಆ ಪರಿಯ ಮುಪ್ಪು ಬರುವುದೂ ಇಲ್ಲ. ಸುಕ್ಕು ಚರ್ಮದ, ತಲೆಯಲ್ಲಿ ಬಿಳಿಯಾದ ಹಿಡಿಕೂದಲು ಹೊಂದಿರುವ, ಬತ್ತಿದ ಕೆನ್ನೆಯ ಬಡಕಲು ಮೈಯ್ಯ ಎಪ್ಪತ್ತರ ಸನಿಹದ ಮುಪ್ಪಿನ ಮುದುಕಿಯಂತೆ ವರ್ಣಿಸಿದ್ದಾರೆ. ಅವಳ ಗಂಡನನ್ನೂ ಎಪ್ಪತ್ತರ, ಅಸಹನೆಯೇ ಜೀವಾಳವಾಗಿರುವ ಹೆಂಡತಿಯನ್ನು ದೂರವಿಟ್ಟು ಮಾತನಾಡಿಸುವ ಮುದುಕನಂತೆ ಚಿತ್ರಿಸಿದ್ದಾರೆ. ಅವನು ಮಾಡುವ ಕೆಲಸವಾದರೋ ನಯಾ ಪೈಸೆ ಪ್ರಯೋಜನವಿಲ್ಲದ್ದು. ತೆಂಗಿನ ಬುಡ ಅಗೆಯುವುದು, ಮನೆಯ ಮುಂದಿನ ನಾಯಿಯನ್ನು ಓಡಿಸುವುದು. ಅವಳಿಗೆ ಸಾತ್ವಿಕ ಸಂಸಾರದ ಸರಕು ಸಾಕಾಗುತ್ತಿಲ್ಲ ಎಂಬ ವಾಕ್ಯಕ್ಕೆ ಪೂರಕವಾದ ಸಾತ್ವಿಕ ಸಂಸಾರದ ಕುರುಹಿರಲಿ , ಅಸಲಿಗೆ ಅಲ್ಲಿ ಸಂಸಾರವೇ ಇಲ್ಲ, ಸಾತ್ವಿಕದ ಮಾತು ಬಿಟ್ಟುಬಿಡೋಣ. ಹೀಗೊಂದು ಕವನವನ್ನು ಬರೆಯಬೇಕಾದ ಅನಿವಾರ್ಯತೆ ಅವರಿಗೆ ಬಂದಿದ್ದಾದರೂ ಏಕೆ ಎಂದು ಅಚ್ಚರಿಪಟ್ಟಿದ್ದೇನೆ.
ಈ ಕವನವನ್ನು ಅವರ ಒಟ್ಟಾರೆ ಕಾವ್ಯದ ಮುಂದುವರಿಕೆಯಾಗಿ ನೋಡದೆ ಒಂದು ಬಿಡಿ ಕವನವನ್ನಾಗೇ ಪರಿಗಣಿಸಬೇಕಾ? ಅವರ ಕಾವ್ಯದ ಮೂಲಧರ್ಮವಾದರೂ ಏನು ಎಂದು ಚಕಿತಳಾಗಿದ್ದೇನೆ.
ಅವರ ಕವನಗಳನ್ನು ಪರಿಶೀಲಿಸಿದರೆ ಪ್ರೇಮವನ್ನು ಹುಡುಕುವುದು ಅವರ ಕವನಗಳ ಸ್ಥಾಯಿ. ಕಡೆಗಾಲದ ದಿನಗಳಲ್ಲೂ ಇನ್ನೂ ಪ್ರೇಮವನ್ನು ಅರಸುತ್ತಿದ್ದೇನೆ, ಹುಡುಕುತ್ತಿದ್ದೇನೆ, ಜೊತೆಜೊತೆಯಲ್ಲಿ ಅನುಭವಿಸುತ್ತಿದ್ದೇನೆ ಎಂಬ ತೀವ್ರತೆಯುಳ್ಳ ಕವಿ.
ಒಲುಮೆಯೊಳಗೊಂದು ನಾವು, ನಮಗಿಲ್ಲ ನೋವು, ಸಾವು ಎಂದು ಹಾಡಿದ ಕವಿ , ಮೈಸೂರು ಮಲ್ಲಿಗೆಯ ಚೆಲುವಿನ ಬಳ್ಳಿ, ನಲವತ್ತಕ್ಕೆ ಶಿಲಾಲತೆಯಾಗಿದ್ದಾದರೂ ಏಕೆ? ಅಂದುಕೊಳ್ಳುವಾಗ, ಹೀಗೆ ಪರಿಭಾವಿಸುವ ಮೊದಲು ಮೈಸೂರು ಮಲ್ಲಿಗೆ ಅರಳಿದ, ಶಿಲಾಲತೆ ಹೊರಳಿದ ಸಾಹಿತ್ಯಾತ್ಮಕ ಕಾಲಘಟ್ಟದ ಕಡೆ ಗಮನ ಹರಿಸುವ ಅಗತ್ಯ ಖಂಡಿತಾ ಇದೆಯೇನೋ ಅನ್ನಿಸಿತು. ಏಕೆಂದರೆ ನರಸಿಂಹಸ್ವಾಮಿಯವರು ಇದೊಂದೇ ಪದ್ಯದಲ್ಲಿ ಮಾತ್ರ ಹೆಣ್ಣನ್ನು ಈ ರೀತಿ ಚಿತ್ರಿಸಿರುವುದು. ಈ ರೀತಿಯ ಚಿತ್ರಣ ಅವರ ಜಾಯಮಾನದ್ದಲ್ಲವೇ ಅಲ್ಲ.
ಆಗಿನ ಸಂದರ್ಭದ ಹಿನ್ನೆಲೆಯಲ್ಲಿ
ಮೈಸೂರು ಮಲ್ಲಿಗೆ ಅರಳಿದ ಸಮಯದಲ್ಲಿ ಅವರ ಕವನಗಳನ್ನು ಯಾರ ಹಂಗೂ ಇಲ್ಲದೇ ಅರ್ಥ ಮಾಡಿಕೊಳ್ಳಬಹುದಿತ್ತು. ‘ನನ್ನವಳು ನನ್ನೆದೆಯ ಹೊನ್ನಾಡನಾಳುವಳು’ ಎಂಬ ಸಾಲನ್ನು ಯಾವ ದಿಕ್ಕಿನಿಂದ ಓದಿದರೂ ಒಂದೇ ಭಾವ, ಒಂದೇ ಅರ್ಥ. ಅಲ್ಲಿ ನಾಗರಕುಚ್ಚಿನ ನಿಡುಜಡೆಯವಳ, ತನ್ನೊಲುಮೆಯಿಂದ ಬಾಳು ಬೆಳಗಿಸಿದ ಚಂದ್ರಮುಖಿಯ ರಮ್ಯ ಚಿತ್ರಣವಿತ್ತು. ಆ ಸಾಲುಗಳು ಕಟ್ಟಿ ಕೊಡುವ ಲೋಕದಲ್ಲಿ ಮೈಮರೆತು ವಿಹರಿಸಬಹುದಿತ್ತೇ ವಿನಹಾ ಅದರಾಚೆ ಯೋಚಿಸುವ, ಅರ್ಥ ಹುಡುಕುವ ಪ್ರಮೇಯವೇ ಇರಲಿಲ್ಲ. ಈ ಮಾತು ಅವರಿಗಷ್ಟೇ ಅಲ್ಲ, ಆ ಸಮಯದ ಹಲವಾರು ಕವಿಗಳಿಗೂ ಅನ್ವಯವಾಗುತ್ತಿತ್ತು. ನರಸಿಂಹ ಸ್ವಾಮಿಯವರ ಕಾವ್ಯ ಸರಳವಾಗಿತ್ತು, ರಮ್ಯವಾಗಿತ್ತು, ಕನಸುವಂತಿತ್ತು. …. ಎಲ್ಲಿಯವರೆಗೆ? ಶಿಲಾಲತೆಯವರೆಗೆ. ಅಲ್ಲಿಂದ ನರಸಿಂಹಸ್ವಾಮಿ ಕಠಿಣರಾಗುತ್ತಾ ಹೋದರು, ಪ್ರತಿಮೆಗಳಲ್ಲಿ ಮಾತನಾಡಲಾರಂಭಿಸಿದರು.
ಆ ಸಮಯಕ್ಕಾಗಲೇ ನವ್ಯರ ಪ್ರಾಬಲ್ಯ ಹೆಚ್ಚಾಗಿತ್ತು. ಅಡಿಗರು ವಿಜೃಂಭಿಸುತ್ತಿದ್ದರು. ನವ್ಯರ ಕಾಲದಲ್ಲಾಗಲೇ ಆಧುನಿಕತೆ ಬಂದುಬಿಟ್ಟಿತ್ತು, ನಗರ ಜೀವನದ ಬೆಳಕಿತ್ತು, ತಳಮಳಗಳಿದ್ದವು, ಹಿಂದೆಂದೂ ಸಾಹಿತ್ಯದಲ್ಲಿ ಅಷ್ಟಾಗಿ ಸ್ಥಾನ ಪಡೆಯದ ವೈಯಕ್ತಿಕ ಬದುಕಿನ ಸಂಕಟವಿತ್ತು. ಸಮಷ್ಟಿಗಿಂತ ವ್ಯಷ್ಟಿ ಪ್ರಜ್ಞೆ ಹಾಸುಹೊಕ್ಕಾಗಿತ್ತು, ಸ್ವತಃ ಪ್ರಮಾಣವನ್ನು ನಂಬುವ ಅನುಭವಗಳ ಹಸಿಹಸಿ ಚಿತ್ರಣವಿತ್ತು, ದ್ವಂದ್ವವಿತ್ತು. ಕುಟುಂಬ ಪ್ರಜ್ಞೆಯನ್ನೊಂದೇ ಧ್ಯಾನಿಸದ ನವ್ಯರ ಕ್ಯಾನ್ವಾಸ್ ಬಹಳ ವಿಸ್ತಾರವಾಗಿತ್ತು. ಹೆಣ್ಣಿನ ತ್ಯಾಗ, ಪ್ರೇಮ ಇಂತಹ ಭಾವನೆಗಳಿಗಿಂತ ಅವಳ ಮನಸ್ಸಿನ ತೊಳಲಾಟಗಳ ಚಿತ್ರಣ ನವ್ಯರಿಗೆ ಮಹತ್ವದ್ದಾಯಿತು. ಆದರ್ಶದ ಸ್ಥಿತಿಯಿಂದ ವಾಸ್ತವದ ನೆಲೆಗಟ್ಟಿಗೆ ಕಾವ್ಯ ಸರಿಯಬೇಕಾಯಿತು. ವೈಯಕ್ತಿಕ ಬದುಕಿನ ಕಷ್ಟನಷ್ಟಗಳನ್ನು ಅವಗಣಿಸಿ ಆದರ್ಶವನ್ನು ಎತ್ತಿಹಿಡಿಯುವ ನವೋದಯ ಕವಿಗಳಿಗೆ ವ್ಯತಿರಿಕ್ತವಾಗಿ, ಸ್ವತಃ ಪ್ರಮಾಣವನ್ನು ನಂಬುವ, ವೈಯಕ್ತಿಕ ತೊಳಲಾಟಗಳಿಗೆ ಆದ್ಯತೆ ಕೊಡುವ, ರಮ್ಯತೆಯನ್ನು ನಿರಾಕರಿಸುವ ಸಾಹಿತ್ಯ ನವ್ಯರದ್ದಾಗಿತ್ತು.
ಇಂತಹಾ ಕಾಲಘಟ್ಟದಲ್ಲಿ ನರಸಿಂಹಸ್ವಾಮಿಯವರಿಗೆ ಬಂದೊದಗಿದ್ದು ತಮ್ಮ ಕಾವ್ಯಧರ್ಮವನ್ನು ಪರಿಸ್ಥಿತಿಗನುಗುಣವಾಗಿ ಬದಲಾಯಿಸಿಕೊಳ್ಳಲೇಬೇಕಾದ ಅನಿವಾರ್ಯತೆ. ಮೈಸೂರು ಮಲ್ಲಿಗೆಯ ಮದುವಣಗಿತ್ತಿ, ಚೆಲುವೆಯಾದ ಅವರ ಕಾವ್ಯ ಕನ್ನಿಕೆ, ಕಾವ್ಯ ಶಕ್ತಿ ಹಳಹಳಿಸುತ್ತಾ ನವ್ಯರ ಪ್ರಚಂಡ ಪ್ರವಾಹದಲ್ಲಿ ನಲವತ್ತರ ಚೆಲುವೆಯಾಗಿ ಬದಲಾಗಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾದ ಬಗ್ಗೆ ಹೇಳುತ್ತಿದ್ದಾರೆ ಎಂದುಕೊಳ್ಳಬಹುದಾದರೆ ೧೯೪೨ರಲ್ಲಿ ಮಲ್ಲಿಗೆ ಅರಳಿದ ಕಾಲದಲ್ಲಿ ಕಂಪುಸೂಸುವ ಬಳ್ಳಿಯಾಗಿದ್ದ ತಮ್ಮ ಕಾವ್ಯಕನ್ನಿಕೆಯನ್ನೇ ನರಸಿಂಹಸ್ವಾಮಿಯವರು ೧೯೫೮ರಲ್ಲಿ ಶಿಲಾಲತೆಯಾದ ನಲವತ್ತರ ಚೆಲುವೆಗೆ ಹೋಲಿಸುತ್ತಿದ್ದಾರೆ ಎಂದು ತೀರ್ಮಾನಿಸಿಬಿಡಬಹುದು . ಆದರೆ…
ಮೂಲತಃ Romantism, ಸರಸ ದಾಂಪತ್ಯ ನರಸಿಂಹ ಸ್ವಾಮಿಯವರ ಕಾವ್ಯಧರ್ಮ. ಆದರೆ ಅವರು ಶಿಲಾಲತೆ ಬರೆದ ಕಾಲದಲ್ಲಿ ನವ್ಯರ ಜೊತೆಗೇ ಇದ್ದವರು. ಯುವಪೀಳಿಗೆಯನ್ನು ಆಕರ್ಷಿಸಲು ನವ್ಯಕ್ಕೆ ಹೊರಳಿದ ರೀತಿಯೇ, ಮುಖಕ್ಕೆ ಸರಸವೆಂಬ ಅರಿಶಿನದ ಬದಲು ಹೊರಗಿನಿಂದ ತಂದು ಹಚ್ಚಿಕೊಂಡ ಮುಖಚೂರ್ಣ(ಪೌಡರ್) ? ಅವರನ್ನು ಆಕರ್ಷಿಸಲು ಅವರಂತೆ ಬರೆದು ಸೆರಗು ಬೀಸುತ್ತಿದ್ದೇನೆ ಎಂಬ ತುಮುಲ? ಇಷ್ಟೆಲ್ಲ ಮಾಡಿದರೂ ಮೈಸೂರು ಮಲ್ಲಿಗೆಯ ಚೆಲುವೆಯ ಮುಂದೆ ತನ್ನ ಈ ಹೊಸ ಚೆಲುವೆಯನ್ನು ಯಾರೂ ನೋಡುತ್ತಿಲ್ಲ, ನೋಡುವುದೂ ಇಲ್ಲ ಎಂದು ತನಗೆ ತಾನೇ ಮಾಡಿಕೊಳ್ಳುವ ಲೇವಡಿ ?
ಈ ನಲವತ್ತರ ಚೆಲುವೆ ಎಂಬ ಮಾತಿನಲ್ಲೇ ಲೇವಡಿ ಇದೆ. ಅಲ್ಲಿ ಅವಳು ಚೆಲುವೆಯೇ ಅಲ್ಲ ಎಂಬುದಕ್ಕೆ ಹಲವು ಸಾಲುಗಳ ಪುರಾವೆಯಿದೆ. ಇಡೀ ಕವನದುದ್ದಕ್ಕೂ ಅವಳ ಬಗ್ಗೆ, ಅವಳ ಯಜಮಾನನ ಬಗ್ಗೆ ಲೇವಡಿ ತಾಂಡವವಾಡುತ್ತಿದೆ.
“ಮನೆಯೊಳಗೇನಿದೆ ? ಗಂಡನೋ, ಮುದುಕನೇ? ಅವನಿಗೆ ತಕಲಿ
ಹಿಂದಿನ ವಾರದ ‘ಹಿಂದೂ’ , ಹಿಂದಿನ ಕಾಲದ ನಕಲಿ
ಬೇಸರವಾಗಿದೆ ಇನ್ನೂ. – ತೆಂಗಿನ ಬುಡ ಅಗೆಯುವುದು,
ಬೀದಿಯ ನಾಯಿಗೆ ಬೆತ್ತವನೆತ್ತರಿಸುತ ನೆಗೆಯುವುದು” ಹಿಂದಿನ ವಾರದ ಹಿಂದೂ ಎನ್ನುವ ಸಾಲಿನಲ್ಲಿ ಅದು ಹಳೆಯ ಹಿಂದು ಪತ್ರಿಕೆ ಎಂದಿರಬಹುದಾದರೂ, ಹಿಂದಿನ ಕಾಲದ ನಕಲಿ ಎಂಬ ಸಾಲಲ್ಲಿ ಆ ಭಾವವನ್ನು ಮುಂದುವರಿಸಿದ್ದಾರೆ. ಈಗ ಹಾಕಿರುವ ಪಾಶ್ಚ್ಯಾತ್ಯ ವೇಷ ನವ್ಯವಾದರೂ ನೀವೂ ಹಿಂದಿನ ವಾರ ಅದೇ ಆಗಿದ್ದವರುಎಂದು ಹೇಳುತ್ತಿದ್ದಾರೆ.
“ಹಳೆಯ ಶರಾಯನು ತುಂಡರಿಸಿ ಕೈಚೀಲವ ರಚಿಸುವುದು,
ಮಾತನು ಮೀರುವ ಮಕ್ಕಳ ನಡತೆಗೆ ಹ್ಞೂಕರಿಸುವುದು ,
ಮಡದಿಯ ಕಂಡರೆ ದೂರವೇ ಮಾತಾಡಿಸಿ ಮುಗಿಸುವುದು..
ಅವನೊಂದಿಗೆ ಹೋರಾಟವೆ ಇವಳಿಗೆ ಸಾಕಾಗಿಹುದು”
ನಿಮ್ಮ ಕೈಚೀಲ ಹಳೆಯ ಶರಾಯಿಯದ್ದೇ .. ಹೊಸತೇನಿದೆ ಎಂದು ನಗುವ ನರಸಿಂಹ ಸ್ವಾಮಿಯವರು ಅವಳನ್ನು ವರ್ಣಿಸಿರುವ ರೀತಿ ನೋಡಿ
ತೆಳು ಬಲೆಯಲಿ ತುಂಬಿರಿಸಿದ ಒಂದೇ ಹಿಡಿ ಹೆರಳು
ಬಿಳಿಕೂದಲು ಎಷ್ಟೊಂದಿವೆ? ಬಿಳಿ ಹೂಗಳ ನೆರಳು
ತೊಡಕನ್ನು ಅರೆಮರೆಮಾಡಿದೆ ಹೊಸ ಚಿನ್ನದ ರೋಸ
ಸುಕ್ಕಿದ ಸುಪ್ಪತ್ತಿಗೆಯಾಗಿದೆ ಮಂದಹಾಸ ; ಓ ಮೋಸ !
ಪುಟ್ಟ ಬಲೆಯಲ್ಲಿ ಹಿಡಿದಿಡಬಹುದಾದ ಬಿಳಿ ಕೂದಲುಗಳ ಬಗ್ಗೆ ಹೇಳುತ್ತಾ ಅಲ್ಲಿರುವುದು ಬಿಳಿ ಹೂಗಳ ನೆರಳು ಎನ್ನುತ್ತಾರೆ. ಅಂದರೆ ಅದು ಮೈಸೂರು ಮಲ್ಲಿಗೆಯ ನೆರಳೂ ಇರಬಹುದು . ನೆರಳು ಎಂದರೆ ನಿಜವಲ್ಲದ್ದು. ನವ್ಯರ ಪ್ರಭಾವಕ್ಕೆ ಸಿಕ್ಕು ಬದಲಾದ ಓದುಗನ ಸಹೃದಯತೆಯೇ ಕೈಲಾಗದ ಮುಪ್ಪಿನ ಗಂಡ ಅಥವಾ ಇಂತಹಾ ಕಾವ್ಯಕನ್ನಿಕೆಯನ್ನು ಸೃಷ್ಟಿಸಿದ ಕವಿಯೇ ಮುಪ್ಪಿನ ಮುದುಕನಿರಬಹುದು ಎಂಬ ದೃಷ್ಟಿಯಿಂದ ಈ ಕವನವನ್ನು ಮತ್ತೆ ಓದಿದಾಗ ಬೇರೆಯೇ ಅರ್ಥಗಳು ಸ್ಫುರಿಸುತ್ತವೆ. ಇವರ ಕಾವ್ಯಕನ್ನಿಕೆ ಮೊದಲಿನ ಮುಗ್ಧತೆಯನ್ನು ಕಳೆದು ಕೊಂಡಿದ್ದಾಳೆ., ಹೊನ್ನೂರಿನ ಹಳ್ಳಿಯ ಪತಿಯ ಮುದ್ದಿನ ಮಡದಿ ಗಂಡನಿಗೆ ಬೇಡದವಳಾಗಿ ನಗರದ ಅಚ್ಚರಿಯ ಬೆಳಕಿಗೆ ಬದುಕಿಗೆ ಬಾಯಾರಿದ್ದಾಳೆ., ಮನೆಯಿಂದ ಮನೆಗೆ ಅಲೆಯುತ್ತಿದ್ದಾಳೆ, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಎಲ್ಲರನ್ನೂ ಆಕರ್ಷಿಸಲು ಹರ ಸಾಹಸ ಪಡುತ್ತಿದ್ದಾಳೆ. ಕೆನ್ನೆಗೆ ಹಚ್ಚುತ್ತಿದ್ದ ಅರಿಶಿನದ ಬದಲು ನವ್ಯವೆಂಬ ಮುಖಚೂರ್ಣ ಹಚ್ಚಿಕೊಳ್ಳುತ್ತಿದ್ದಾಳೆ. ಮೈಸೂರು ಮಲ್ಲಿಗೆ ತಂಗಳು ಕನಸಾಗಿದೆ. ಅವರ ಕಾವ್ಯದ ಉಸಿರು ಮನೆಯೊಳಗಿಲ್ಲ, ಅದು ಹಿತ್ತಲಲ್ಲಿ ತೆಂಗಿನ ಬುಡ ಅಗೆಯುತ್ತಾ, ಹೊರಗೆ ಬೀದಿಯ ನಾಯಿಗೆ ಬೆತ್ತವನೆತ್ತರಿಸುತ್ತಾ ನೆಗೆಯುತ್ತಿದೆ. ಹೆಂಡತಿಗೆ ತಾನೇ ಸಿಪಾಯಿ, ಅವಳಿದ್ದರೆ ಕೋಟಿ ರೂಪಾಯಿ ಎನ್ನುತ್ತಿದ್ದವನು ಈಗ ಮಡದಿಯನ್ನು ದೂರ ನಿಲ್ಲಿಸಿ ಮಾತನಾಡಿಸುವ ಅನಿವಾರ್ಯತೆಗೆ ಸಿಲುಕಿದ್ದಾನೆ. ಈ ಕವಿಯೊಂದಿಗಿನ ಹೋರಾಟ ಆ ಕಾವ್ಯ ಕನ್ನಿಕೆಗೂ ಸಾಕಾಗಿ ಹೋಗಿದೆ. ಮನೆಯೊಳಗಿನ ಸಭ್ಯ ಬದುಕಾಗಿ ಅವರ ಕವನದ ವಸ್ತು ಉಳಿದಿಲ್ಲ. ಬೀದಿಗಿಳಿದಿದೆ. ಅವಳ ಮಂದಹಾಸ ಸುಕ್ಕಿದ ಸುಪ್ಪತ್ತಿಗೆಯಾಗಿದೆ. ಮೋಸದ ನಗೆಯಾಗಿದೆ . ಮುಡಿದಿರುವುದು ಘಮಗುಟ್ಟುವ ಮಲ್ಲಿಗೆಯಲ್ಲ, ಚಿನ್ನದ ರೋಸ. ಇಷ್ಟಾದರೂ ಅವಳನ್ನು ಯಾರೂ ನೋಡುತ್ತಿಲ್ಲ, ಕೇಳುತ್ತಿಲ್ಲ. ಬೀದಿಯ ಗೆರೆ ದಾಟುತ್ತಿದ್ದಾರೆ..ಮಾಯವಾಗುತ್ತಿದ್ದಾರೆ.
ಅವರ ಹೊಸ ಕಾವ್ಯಕನ್ನಿಕೆ ಚೆಲುವೆಯಾಗಲೇ ಇಲ್ಲ. ಅವಳ ಮೂಲಸ್ವಭಾವವೇ ಇದಲ್ಲವಾದ ಕಾರಣ ಅವಳಿಗೆ ಈ ಮಾದಕತೆ ಒಗ್ಗುತ್ತಿಲ್ಲ. ಅವಳನ್ನು ನರಸಿಂಹ ಸ್ವಾಮಿಯವರು ಮನೆಯೊಳಗೂ ಇರಿಸಲಾರರು, ಸರಾಗವಾಗಿ ಹೊಸಿಲನ್ನೂ ದಾಟಿಸಲಾರರು. ನವ್ಯರಿಗೆ ಹಾಗಲ್ಲ, ಅವರು ಅವರ ಕಾವ್ಯಕನ್ನಿಕೆಯನ್ನು ಅತ್ಯಂತ ಸಹಜವಾಗಿ, ವಸ್ತುಸ್ಥಿತಿಗನುಗುಣವಾಗಿ, ಸರಾಗವಾಗಿ ಹೊಸ್ತಿಲು ದಾಟಿಸಬಲ್ಲರು. ಆ ಅನುಭವವನ್ನು ಅನನ್ಯವಾಗಿ ಕಟ್ಟಿಕೊಡಬಲ್ಲರು. ಬೀದಿಗೆ ಬಂತು ಬೇರಿಂಗ್ ಬ್ಯೂಟಿ ಸಾಲುಗಳ ಶಕ್ತಿ, ಅಲ್ಲಿದ್ದ ವಾಸ್ತವತೆ ಇವರ ಕಾವ್ಯಧರ್ಮದ ವಾಸ್ತವವಾಗಲಾರದು. ಎಷ್ಟೇ ಆಧುನಿಕತೆಯತ್ತ ಹೊರಳಿದರೂ ಅವರು ಅವಳನ್ನು ಬೇರಿಂಗ್ ಬ್ಯೂಟಿ ಮಾಡಲಾರರು ಅವರು ಸೀರೆಯನ್ನೇ ಉಡಿಸುತ್ತಾರೆ, ಸೆರಗನ್ನು ಬೀಸುವಂತೆ ಮಾಡುತ್ತಾರೆ. ಬಂಗಾರವಿಲ್ಲದ ಬೆರಳಿನ, ಕರಿಮಣಿ ತುಂಬಿದ ಕೊರಳಿನ ತುಂಬು ಚೆಲುವೆ ಗೃಹಿಣಿ, ಮೈಗೆ ಒಡವೆ ತೊಡಿಸಿದರೂ ಇಲ್ಲಿ ಚೆಲುವೆಯಾಗಲಾರಳು. ಬಳುಕುವ ಕಂಪು ಸೂಸುವ ಚೆಲುವಿನ ಕೋಮಲ ಬಳ್ಳಿ ಗರ ಬಡಿದು ಶಿಲಾಲತೆಯಾಗಿದ್ದಾಳೆ. ಕಾವ್ಯಲತೆ ಕಲ್ಲಾಗಿ ಹೋಗುವ ಇಂತಹಾ ಶೀರ್ಷಿಕೆಯೇ ಈ ಕವನವನ್ನು ನಿರ್ದೇಶಿಸುತ್ತಿರಬಹುದಾ? ಈ ದಿಕ್ಕಿನಿಂದ ಓದಿದಾಗ ಇದ್ದ ನೂರು ತಕರಾರುಗಳು ಮಾಯವಾಗಿ ಪದುಮ ಕೇವಲ ಹೆಣ್ಣಲ್ಲ. ನರಸಿಂಹ ಸ್ವಾಮಿಯವರ ಕಾವ್ಯಶಕ್ತಿ, ಕಾವ್ಯಧರ್ಮವೇ ಅವಳೇನೋ ಅನ್ನಿಸುವುದು ಸುಳ್ಳಲ್ಲ. ಹಾಗಾಗಿಯೇ ಶಿಲಾಲತೆಯಾಗಿ ಸ್ತಬ್ದರಾದವರು ಮತ್ತೆ ಪದುಮಳನ್ನೇ ಆಶ್ರಯಿಸಿದರಾ? ಮತ್ತೆ ದುಂಡುಮಲ್ಲಿಗೆಗೆ ಶರಣಾದರಾ?
ನಲ್ವತ್ತರ ಚೆಲುವೆ ಎಂಬ ರೂಪಕ
ಇನ್ನೂ ಒಂದು ಆಯಾಮದಲ್ಲಿ ನೋಡುವುದಾದರೆ ಅವರೆಲ್ಲೋ ನವ್ಯರನ್ನೇ ನಲವತ್ತರ ಚೆಲುವೆ ಎನ್ನುತ್ತಿದ್ದಾರಾ ಅನ್ನಿಸುವುದು ಸುಳ್ಳಲ್ಲ. ಕಮೂ, ಕಾಫ್ಕ, ಸಾರ್ತ್ರೆ ಇವರುಗಳೇ ಅರಿಶಿನದ ಬದಲು ಹೊರಗಿನಿಂದ ಆಮದು ಮಾಡಿಕೊಂಡ ಮುಖಚೂರ್ಣ? ನಿಮ್ಮ ಕಾವ್ಯಕನ್ನಿಕೆ ನಲವತ್ತರ ಹೆಣ್ಣು, ಅವಳನ್ನು ಯಾರೂ ನೋಡುತ್ತಿಲ್ಲ, ನಗರದ ಆಕರ್ಷಣೆಯ ಬಾಯಾರಿದ ಬದುಕು ನಿಮ್ಮ ಕಾವ್ಯದ ವಸ್ತು , ಸಾತ್ವಿಕ ಸಂಸಾರದ ಸರಕು ನಿಮ್ಮ ಕಾವ್ಯಕ್ಕೆ ಸಾಕಾಗುತ್ತಿಲ್ಲ , ಮನೆಯೊಳಗೆ ಇರಲಿಚ್ಚಿಸದ ಹೊರಗೇ ಕಾಲ ಕಳೆವ ಮನಸ್ಥಿತಿ , ಮಡದಿಯನ್ನು ದೂರವಿಟ್ಟು ಮಾತನಾಡಿಸುವುದೇ ನಿಮ್ಮ ಜಾಯಮಾನ , ನಿಮ್ಮ ಕಾವ್ಯಕನ್ನಿಕೆ ಮೈತೋರಿಸಿ ಸೆಳೆಯಬೇಕಾಗಿದೆ ಎಂದೂ, ಪ್ರಯೋಜನವಿಲ್ಲದೆ ಹಿತ್ತಲು,ಜಗುಲಿಯಲ್ಲಿ ಕಾಲಕಳೆಯುತ್ತಿದ್ದೀರಿ ಎಂದು ಲೇವಡಿ ಮಾಡಿದ್ದಾರಾ? ನವ್ಯರಿಗೆ ನವ್ಯರ ಚಾಟಿಯಿಂದಲೇ ಉತ್ತರಿಸುತ್ತಿದ್ದಾರಾ?
ನರಸಿಂಹ ಸ್ವಾಮಿಯವರನ್ನು ಕೇವಲ ಪ್ರೇಮ ಕವಿ ಎನ್ನುವವರು ಇಂತಹ ಪದ್ಯಗಳನ್ನು ಓದಬೇಕು. ಅವರ ಕಾವ್ಯಶಕ್ತಿಯ ಮತ್ತೊಂದು ಮಗ್ಗುಲನ್ನು ಬೆರಗಿನಿಂದ ಸ್ಪರ್ಶಿಸಬಹುದು.
(ಕಲಾಕೃತಿಗಳು: ರಾಜಾ ರವಿವರ್ಮ)
ಬೆಂಗಳೂರು ವಾಸಿಯಾದ ಮಾಲಿನಿ ಗುರುಪ್ರಸನ್ನ ಗೃಹಿಣಿ ಮತ್ತು ಲೇಖಕಿ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ.
ಮೇಡಮ್, ನಲವತ್ತರ ಚೆಲುವೆಯ ವ್ಯತೆ, ಕಥೆ ತುಂಬ ಚೆನ್ನಾಗಿ ಮೂಡಿ ಬಂದಿದೆ. ಕವಿತೆಯನ್ನು ಅದ್ಬುತವಾಗಿ, ವಿವರಿಸಿದ್ದೀರಿ, ನಿಮ್ಮ ಸಾಹಿತ್ಯ ಆಸಕ್ತಿಗೆ ಅಭಿನಂದನೆಗಳು.
ನಲ್ವತ್ತರ ನಂತರದ ಜೀವನದಲ್ಲಿ ಇರುವ ತವಕ ತಲ್ಲಣ ಇನ್ನು ಇಳಿ ಸಂಜೆಯ ಚಿತ್ರಣಗಳ ಅದ್ಬುತ ??
ಹೌದಲ್ಲ
ಚಿಂತನೆಗೆ ಹಚ್ಚುವ ವಿಶ್ಲೇಷಣೆ. Thank you, ಕೆಂಡಸಂಪಿಗೆ. Thank you, ಮಾಲಿನಿ.
ಕುಸುಮಾ, ಕುಶಾಲ್ ಧನ್ಯವಾದಗಳು.
ಅಹಲ್ಯಾ ಪ್ರತಿಬಾರಿ ಕಾವ್ಯದ ಕುರಿತು ಬರೆವಾಗ ನೆನಪಾಗುವವರಲ್ಲಿ ನೀವೂ ಒಬ್ಬರು. ಥ್ಯಾಂಕ್ಸು