ಯಕ್ಷಗಾನಕ್ಕೆ ಲಕ್ಷಣಗ್ರಂಥವಿಲ್ಲ, ಪ್ರಪಂಚದ ಹಲವು ಪ್ರದರ್ಶನ ಕಲೆಗಳಿಗೂ ಶಾಸ್ತ್ರ ಹೇಳುವ ‘ಪಠ್ಯ’ಗಳಿಲ್ಲ. ನಾಟ್ಯಶಾಸ್ತ್ರ, 11 ನೇ ಶತಮಾನದಲ್ಲಿ ಕ್ಷೇಮೆಂದ್ರ ಬರೆದ ‘ಔಚಿತ್ಯ ವಿಚಾರ ಚರ್ಚಾ’ ಇತ್ಯಾದಿ ಗ್ರಂಥಗಳಿದ್ದರೂ ಆ ಕಾಲದಲ್ಲೇ ಕಲಾಪ್ರಕಾರಗಳು ಅವುಗಳನ್ನು ಎಷ್ಟು ಅನುಸರಿಸುತ್ತಿದ್ದವೊ ಗೊತ್ತಿಲ್ಲ. ಆದರೆ ಪಠ್ಯಗಳು ಒಂದಕ್ಕೊಂದು ಪ್ರತಿಕ್ರಿಯಿಸುತ್ತಾ, ಒಂದನ್ನೊಂದು ವ್ಯಾಖ್ಯಾನಿಸುತ್ತಾ ತಮ್ಮದನ್ನು ಸೇರಿಸುವ ‘ಅಂತರ್ ಪಠ್ಯೀಯತೆ’ಯು ಪಠ್ಯ ಮತ್ತು ಪ್ರಯೋಗಕ್ಕೂ ಅನ್ವಯಿಸುತ್ತದೆ.  ‘ಗೊತ್ತಿರುವುದು-ಆಲೋಚಿಸುವುದು’ ಮತ್ತು ‘ಪ್ರಯೋಗಿಸುವುದು-ಮಾಡುವುದು’ ಇವುಗಳ ಮಧ್ಯ ಇರುವ ಅಂತರಗಳೇನು ಎಂಬುದು  ಮುಖ್ಯ. ಕೃತಿ ಆರ್. ಪುರಪ್ಪೇಮನೆ ಬರೆಯುವ ‘ಯಕ್ಷಾರ್ಥ  ಚಿಂತಾಮಣಿ’ ಸರಣಿಯಲ್ಲಿ ಯಕ್ಷಗಾನ ಔಚಿತ್ಯದ ಕುರಿತ ಲೇಖನ. 

 

ಈ ಲೇಖನದ ಮೊದಲಿನ ಭಾಗಕ್ಕೆ (ಯಕ್ಷಗಾನದ ವಿಮರ್ಶೆಯಲ್ಲಿ ‘ಔಚಿತ್ಯ’ದ ಪ್ರಯೋಗಗಳು) ಬಂದ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಒಂದು ವಿಷಯ ಸ್ಪಷ್ಟ ಮಾಡಬೇಕಾಗಿದೆ. ಈ ಲೇಖನದ ಉದ್ದೇಶ ಯಕ್ಷಗಾನದಲ್ಲಿ ಔಚಿತ್ಯ ಯಾವುದು ಎನ್ನುವುದನ್ನು ಫಿಕ್ಸ್ ಮಾಡುವುದಲ್ಲ, ಬದಲಿಗೆ ಔಚಿತ್ಯವೆನ್ನುವುದು, ಶಾಸ್ತ್ರ ಸಂಪ್ರದಾಯ, ರೂಢಿಗಳ ಒಂದು ‘ಕಲ್ಪಿತ ಆವರಣ’ ಮತ್ತು ಆ ಕಲ್ಪನೆಯು ಆಯಾ ಕಾಲದ ಚಾರಿತ್ರಿಕ ಸನ್ನಿವೇಶಗಳಿಗೆ, ಸಾಮಾಜಿಕ ವಾಸ್ತವಗಳಿಗೆ ಹೇಗೆ ಹೊಂದಿಕೊಂಡಿದೆಯೆಂದು ನೋಡುವುದು.

ಚರಿತ್ರೆಯಲ್ಲಿ ಬೇರೂರಿವುದರಿಂದಲೇ ಅದು ಕಾಲ ಕಾಲಕ್ಕೆ ಬದಲಾಗುವಂತದ್ದು ಮತ್ತು ನಿತ್ಯ ನೂತನವಾಗುವಂತದ್ದು. ಪೂರ್ವಿಕ ಮತ್ತು ನೂತನ ಎನ್ನುವುದು ವೇದಕಾಲದಲ್ಲೇ ಬಳಸಿದ ಪದವಂತೆ. ವೇದಕ್ಕೇ ‘ಪೂರ್ವಿಕ’ಕ್ಕಿಂತ ಬೇರೆಯಾಗಿ ಗುರುತಿಸಬಹುದಾದ ‘ನೂತನ’ವು ಕಾಣುವುದಾದರೆ ಯಕ್ಷಗಾನದ ಸಮುದಾಯಕ್ಕೆ ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಲಿಕ್ಕಿಲ್ಲ.

ಸಾಮಾಜಿಕ ವಾಸ್ತವಕ್ಕೆ ಅಂಟಿಕೊಂಡಿರುವುದರಿಂದಲೇ ಔಚಿತ್ಯ ಆಯಾಕಾಲದ ನೈತಿಕ ಸಂಕಥನಗಳ ಜೊತೆ ಸಂವಾದ ನಡೆಸುತ್ತದೆ. ಅಂದರೆ ಅದು ಜನರು ಹೇಗೆ ‘ಯೋಚಿಸುತ್ತಾರೆ’, ಹೇಗೆ ‘ಪ್ರಯೋಗಿಸುತ್ತಾರೆ’, ಮತ್ತು ಅವರ ಬದುಕಿನ ವಿಶಾಲ ನಿಲುವುಗಳೇನು ಎನ್ನುವುದರೊಟ್ಟಿಗೆ ಥಳುಕು ಹಾಕಿಕೊಂಡಿದೆ. ಯಕ್ಷಗಾನದ ಒಂದು ಭಂಗಿಯನ್ನೋ, ಆಲಾಪವನ್ನೋ ಔಚಿತ್ಯಪೂರ್ಣವಾಗಿದೆÉ ಅಥವಾ ಅನೌಚಿತ್ಯ ಎಂದಾಗ ಅದು ಬರೀ ಯಕ್ಷಗಾನದ ರಂಗಕ್ರಿಯೆಯ ಸಂಪ್ರದಾಯದ ತಿಳುವಳಿಕೆಯಿಂದ ಮಾತ್ರ ನಿರ್ಧಾರವಾಗುವುದಲ್ಲ, ಆ ಸಂಪ್ರದಾಯವನ್ನೇ ನಾವು ಈಗ ಹೇಗೆ ಗ್ರಹಿಸಿದ್ದೇವೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಅದಕ್ಕಾಗಿಯೇ ‘ಯೋಗ್ಯವಾಗಿದ್ದು’, ‘ತಕ್ಕುದಾಗಿರುವುದು’ ಕಾಲ ಕಾಲಕ್ಕೆ ಬದಲಾಗುತ್ತಿರುವುದಷ್ಟೇ ಅಲ್ಲ, ಆ ಬದಲಾವಣೆಯು ಆ ಕಾಲದ ಸಮಷ್ಟಿ ಪ್ರಜ್ಞೆ ‘ಒಪ್ಪುವ‘ ನೀತಿಯನ್ನು ಆಧರಿಸಿದೆ.

ಎರಡು: ಅರೆ ವೃತ್ತಿಪರ, ಹವ್ಯಾಸಿ ತಂಡಗಳು ಮತ್ತು ಜಾಲತಾಣಗಳ ಸುತ್ತಮುತ್ತ ಔಚಿತ್ಯ
ಔಚಿತ್ಯದ ಬಗ್ಗೆ ಹೆಚ್ಚು ಚರ್ಚೆಯಾಗಿರುವುದು ಹವ್ಯಾಸಿ ತಂಡಗಳಲ್ಲಿ ಮತ್ತು ಅರೆ ವೃತ್ತಿಪರರಲ್ಲಿ. ಯಕ್ಷಗಾನದ ಹವ್ಯಾಸಿ ಕಲಾವಿದರು, ಬೇರೆ ಬೇರೆ ಕಡೆಗಳಲ್ಲಿ ನೆಲೆಸಿರುವ, ಯಕ್ಷಗಾನವನ್ನು ಪೋಷಿಸುವ, ಪ್ರೊತ್ಸಾಹಿಸುವ, ಯಕ್ಷಗಾನದ ಹಲವು ಸ್ತರದ ಪ್ರೇಕ್ಷಕರು ಜಾಲತಾಣಗಳಲ್ಲಿ ಭಾಗವಹಿಸುವುದರಿಂದ ಸುಮಾರು 250 ರಿಂದ 300 ವಾಟ್ಸಾಪ್ ಯಕ್ಷಗಾನ ಗುಂಪುಗಳಲ್ಲಿ, ಮತ್ತು ಫೇಸ್‌ಬುಕ್‌ಗಳಲ್ಲಾಗುವ ಚರ್ಚೆಗಳಲ್ಲೂ ಔಚಿತ್ಯವನ್ನೊಳಗೊಂಡ ಯಕ್ಷಗಾನ ಪ್ರದರ್ಶನದ ಮೇಲಿನ ಮಾತುಕತೆಗಳು ನಡೆಯುತ್ತವೆ.

ಒಂದು ತಿಟ್ಟಿನ ದಾಖಲೀಕರಣದ ಸಮಯಕ್ಕೆ ನಡೆದ ಚರ್ಚೆಯಲ್ಲಿ, ನಮ್ಮ ಯಕ್ಷಗಾನಕ್ಕೂ ಸಾವು ಬಂದರೆ, ಅಂದರೆ ಕಥಕ್ಕಳಿಯ ಹಾಗಾಗಿದ್ದರೆ, ಯಕ್ಷಗಾನವನ್ನು ಉಳಿಸಬಹುದು, ಆಗಲಾದರೂ ಮೇಳಗಳು ಮನೋರಂಜನೆಗೆ ಬೇಕುಬೇಕಾದ್ದನ್ನೆಲ್ಲ ತಂದು ಯಕ್ಷಗಾನವನ್ನು ಹಾಳುಮಾಡದೇ, ಶುದ್ಧ ರಂಗಭೂಮಿಯನ್ನಾಗಿ ಉಳಿಸಬಹುದು ಎನ್ನುವುದು ಒಬ್ಬ ಕಲಾವಿದರ ಆಶಯವಾಗಿತ್ತು. ಕಲಿಕಾ ಕೇಂದ್ರಗಳಲ್ಲಿ ಮತ್ತು ಸೆಮಿನಾರುಗಳಲ್ಲಿ ಯಕ್ಷಗಾನದ ಸತ್ವ, ಮೂಲ ಸತ್ವ ಮತ್ತು ಔಚಿತ್ಯ ಅದಲುಬದಲಾಗಿ ಉಪಯೋಗಿಸಲ್ಪಟ್ಟಿದೆ. ಇಲ್ಲೆಲ್ಲ ಔಚಿತ್ಯವೆನ್ನುವುದು ಇಡೀ ಯಕ್ಷಗಾನ ಕಲೆಗೇ ಅನ್ವಯಿಸಿದೆ. ಯಕ್ಷಗಾನ ಶುದ್ಧವಾಗಿದ್ದರೆ ಮೂಲ ಸತ್ವಕ್ಕೆ ಅಪಚಾರವಾಗುವುದಿಲ್ಲ ಮತ್ತು ಅದರ ಆಧಾರದ ಮೇಲಿರುವ ಪ್ರದರ್ಶನ ಔಚಿತ್ಯಪೂರ್ಣವಾಗಿರುತ್ತದೆ ಎನ್ನುವುದನ್ನು ಇದು ಹೇಳುತ್ತಿದೆ. ಈ ರೀತಿಯ ಅರ್ಥೈಸುವಿಕೆಯ ಪ್ರತಿನಿಧಿಯಾಗಿ ಮಾತ್ರ ಮೇಲಿನ ಸಾಲನ್ನು ಉಲ್ಲೇಖ ಮಾಡಿರುವುದಾದರೂ ಇಂತಹದ್ದೆ ಧ್ವನಿ ಇರುವ ಹಲವು ಬರಹಗಳು ಮತ್ತು ಚರ್ಚೆಗಳು ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಬಂದಿವೆ.

ಕಲಿಕಾ ಕೇಂದ್ರಗಳಲ್ಲಿ ಮತ್ತು ಸೆಮಿನಾರುಗಳಲ್ಲಿ ಯಕ್ಷಗಾನದ ಸತ್ವ, ಮೂಲ ಸತ್ವ ಮತ್ತು ಔಚಿತ್ಯ ಅದಲುಬದಲಾಗಿ ಉಪಯೋಗಿಸಲ್ಪಟ್ಟಿದೆ. ಇಲ್ಲೆಲ್ಲ ಔಚಿತ್ಯವೆನ್ನುವುದು ಇಡೀ ಯಕ್ಷಗಾನ ಕಲೆಗೇ ಅನ್ವಯಿಸಿದೆ. ಯಕ್ಷಗಾನ ಶುದ್ಧವಾಗಿದ್ದರೆ ಮೂಲ ಸತ್ವಕ್ಕೆ ಅಪಚಾರವಾಗುವುದಿಲ್ಲ ಮತ್ತು ಅದರ ಆಧಾರದ ಮೇಲಿರುವ ಪ್ರದರ್ಶನ ಔಚಿತ್ಯಪೂರ್ಣವಾಗಿರುತ್ತದೆ ಎನ್ನುವುದನ್ನು ಇದು ಹೇಳುತ್ತಿದೆ.

ಶುದ್ಧವು ವ್ಯಾಖ್ಯಾನಗೊಳ್ಳುವುದು ಇಲ್ಲಿ ಈಗ ಪ್ರಚಲಿತದಲ್ಲಿರುವ ವೃತ್ತಿ ಮೇಳಗಳ, ದೇವಸ್ಥಾನ ಮೇಳಗಳ ಯಕ್ಷಗಾನದ ಜೊತೆ ತುಲನೆಯ ಮೂಲಕ. ವೃತ್ತಿ ಮೇಳಗಳಲ್ಲಿಲ್ಲದ್ದು ಶುದ್ಧ. ಯಕ್ಷಗಾನಕ್ಕೇ ಮೀಸಲಿಟ್ಟಿರುವ ಯಾವುದೇ ಪತ್ರಿಕೆಯನ್ನು ತೆಗೆದರೂ ಈ ದೃಷ್ಟಿಕೋನ ಢಾಳಾಗಿ ಕಾಣುತ್ತದೆ. ಉದಾಹರಣೆಗೆ ಒಂದು ಯಕ್ಷಗಾನ ಪತ್ರಿಕೆಯ ಮುಖಪುಟದಲ್ಲಿ ಕಂಸ ಪಾತ್ರದ ಮೇಲೆ ಮಾಡಿರುವ ಏಕವ್ಯಕ್ತಿ ಯಕ್ಷಗಾನ, ಕಂಸಾಲಾಪ-ಒಂದು ಗಂಭೀರ ಪ್ರಯೋಗದ ಬಗೆಗೆ- ಎಂಬ ತಲೆಬರಹದಲ್ಲಿ ಮತ್ತು ಪತ್ರಿಕೆಯ ಒಳಗಡೆ ಸ್ಪಂದನ ಪುಟದಲ್ಲಿ – ಮೇಳದಲ್ಲೊಬ್ಬ ಸರ್ಕಸ್ ಕಲಾವಿದ, ಹದಮೀರಿದ ಪ್ರದರ್ಶನ- ಎನ್ನುವ ಲೇಖನ. ಪತ್ರಿಕೆ ಓದುವ ವರ್ಗ, ಮಧ್ಯಮ, ಮೇಲ್ಮಧ್ಯಮ ವರ್ಗ ಯಾವುದನ್ನು ಅರ್ಥಪೂರ್ಣ ಪ್ರಯೋಗ ಯಾವುದು ಅಲ್ಲ ಅನ್ನುವುದನ್ನು ಗುರುತಿಸಿಕೊಂಡಿದ್ದು ಕಾಣಿಸುತ್ತದೆ. ಒಂದು ವೃತ್ತಿ ಮೇಳ, ಮತ್ತು ಅದರ ಪ್ರಯೋಗಗಳು ಜನರಂಜನೆಗಾಗಿ ಯಕ್ಷಗಾನವನ್ನು ಸರಕಾಗಿಸಿದೆ ಎನ್ನುವುದನ್ನು ಅಂತರ್ಗತವಾಗಿ ಇಂತಹ ಬರಹಗಳು ಧ್ವನಿಸುತ್ತವೆ.

ಮೇಲಿನ ಭಾವಾನುವಾದಿತ ಉಲ್ಲೇಖದಲ್ಲಿಯೂ ಜನರ ಮನೋರಂಜನೆಗಾಗಿ ಮಾಡಿರುವುದು ಮತ್ತು ಕಲೆಯನ್ನು ಉಳಿಸುವುದಕ್ಕಾಗಿ ಮಾಡುವುದು, ಇವೆರಡೂ ಒಂದಕ್ಕೊಂದು ವಿರುದ್ಧವಾಗಿರುವಂತದ್ದು ಎನ್ನುವುದರ ಸೂಚನೆಯಿದೆ. ಅಂದರೆ ಶುದ್ಧವಾಗಿರುವ ಯಕ್ಷಗಾನಕ್ಕೆ ಬೇಕಾಗಿರುವ ಪೂರ್ವಷರತ್ತು ವೃತ್ತಿ ಮೇಳಗಳ ಪ್ರದರ್ಶನಗಳ ಹಾಗಿಲ್ಲದಿರುವುದು. ಔಚಿತ್ಯವು ಯಕ್ಷಗಾನದ ಕಲೆಗೇ ಅನ್ವಯಿಸಲ್ಪಟ್ಟಾಗ, ಸಮಾಜದಲ್ಲಿ ಕಲೆಯ ಸ್ಥಾನ, ಅದು ಮಾಡಬೇಕಾಗಿರುವ ಕೆಲಸ, ಮತ್ತು ಸಮಾಜದೊಟ್ಟಿಗಿನ ಅದರ ಸಂಬಂಧ – ಇವೆಲ್ಲದರ ಮೇಲಿನ ತನ್ನ ನಿಲುವುಗಳನ್ನು ಸ್ಷಷ್ಟಪಡಿಸುತ್ತಾ ಇರುತ್ತವೆ. ಈ ನಿಲುವುಗಳು ಇವತ್ತು ಸಮಾಜ ಒಪ್ಪುವ ಅಥವಾ ಆದರಿಸುವ ಕಲೆ ಮತ್ತು ಮನುಷ್ಯರ ಸಂಬಂಧದ ವ್ಯಾಖ್ಯಾನಕ್ಕೆ ಅನುಗುಣವಾಗಿರುತ್ತದೆ. ಇದರ ಚರ್ಚೆ ಮುಂದೆ ಮತ್ತೆ ಬರಲಿದೆ.
ಆಲೋಚಿಸುವ, ಚರ್ಚಿಸುವ, ಹೊಸ ಅರಿವನ್ನು ಪಡೆಯುವ ಒಂದು ಮುಕ್ತ ಅವಕಾಶವಿದ್ದ ಸ್ಥಳದಲ್ಲಿ ಬರೆದು ಹಂಚಿಕೊಳ್ಳುವ ಕ್ರಿಯೆಯನ್ನು ಈಗಿನ ನಮ್ಮ ಕಾಲದ ಸಾಮಾಜಿಕ ಮಾಧ್ಯಮಗಳು (ಸಮಷ್ಟಿ ಪ್ರಜ್ಞೆ ಒಪ್ಪಿದ ನೀತಿ!) ಸಂಕುಚಿತಗೊಳಿಸಿದ್ದರಿಂದ ನಿರ್ದಿಷ್ಟ ಸನ್ನಿವೇಶಗಳ, ಪಾತ್ರ, ವೇಷ, ಕುಣಿತದ ಔಚಿತ್ಯದ ಚರ್ಚೆಗಳನ್ನು ಇಲ್ಲಿ ಪ್ರಸ್ತಾಪಿಸಿಲ್ಲ. ಆದರೆ ಇಂತಹ ಚರ್ಚೆಗಳು ತೋರಿಸುವ ಕೆಲವು ಔಚಿತ್ಯದ ಬಗೆಗಿನ ಹೊಳಹುಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ಯಕ್ಷಗಾನದ ವಿಮರ್ಶೆ ಅತ್ಯಂತ ಉತ್ಸಾಹದಿಂದ ನಡೆಯುವುದು ಜಾಲತಾಣಗಳು ಮತ್ತು ಯಕ್ಷಗಾನ ಪ್ರದರ್ಶನದ ನಂತರದ ಮಾತುಕತೆಗಳಲ್ಲಿ.

ಆಗಾಗ ಕೆಲವೊಂದು ದೃಶ್ಯದ ವಿಡಿಯೊಗಳು ವೈರಲ್ ಅಗಿ, ಅದರ ಮೇಲಿನ ಅಭಿಪ್ರಾಯಗಳು ಎಲ್ಲೆಡೆ ಹರಿದಾಡಿದರೂ ಅವೆಲ್ಲವೂ ‘ಸಮಷ್ಟಿ ನೀತಿ’ ಒಪ್ಪಿದ ಔಚಿತ್ಯವನ್ನು ಮಾತ್ರ ಒಳಗೊಳ್ಳುತ್ತವೆ.‘ನಮ್ಮ ಪರಂಪರೆ ದೊಡ್ಡದು’, ‘ಯಕ್ಷಗಾನಕ್ಕೇ ಅವಮಾನ’, ‘ಕಲಾವಿದರಿಗೆ ಬದ್ಧತೆ ಇಲ್ಲ’. ಇಂತಹ ಧ್ವನಿ ಇರುವ ಅಭಿಪ್ರಾಯಗಳು, ವಿಡಿಯೋಗಳು ಮೇಲೆ ಉಲ್ಲೇಖಿತವಾದದ್ದಕ್ಕಿಂತ ಭಿನ್ನವಾದ ನಿಲುವುಗಳನ್ನೇನು ಪ್ರತಿಪಾದಿಸುವುದಿಲ್ಲ. ಎಲ್ಲಾ ಪ್ರದರ್ಶನಗಳಿಗೂ ಆವರಣವಿದೆ. ಅದರ ತುಣುಕುಗಳು, ಪದ್ಯಗಳು, ಮಾತುಗಳು ಸಂದರ್ಭರಹಿತವಾಗಿ ನೋಡಿದಾಗ ಮಾಡಿದ ಚರ್ಚೆಗಳು, ಇಡೀ ಪ್ರದರ್ಶನದೊಳಗೆ ಆ ಬಿಡಿ ಭಾಗ ಹೇಗೆ ಕಾಣುತ್ತಿದೆ ಎನ್ನುವ ಔಚಿತ್ಯವನ್ನು ಬಿಟ್ಟೇ ಮಾಡಬೇಕಾಗುತ್ತದೆ. ಆದರೆ ಮನುಷ್ಯರು (ಕಲಾವಿದರನ್ನೊಳಗೊಂಡು) ಜಾಲತಾಣದಲ್ಲಿ ಕಂಡ ತುಣುಕುಗಳಷ್ಟೇ ಅಲ್ಲ. (ಈ ತಕ್ಷಣದ ಬಿಡಿ ಅಭಿಪ್ರಾಯಗಳ ಭರಾಟೆ ಎಷ್ಟಿದೆ ಎಂದರೆ ಕೊರೊನಾ ಕಾಲದಲ್ಲಿ ಆಟಗಳು ಜಾಲತಾಣದಲ್ಲಿ ಲೈವ್ ಆಗುವಾಗ, ಆಟದ ಬಗ್ಗೆ ವಿಮರ್ಶೆಗಳಿದ್ದರೆ ದಯವಿಟ್ಟು ನಮಗೇ ಬಂದು ಹೇಳಿ, ನಾವು ತಿದ್ದಿಕೊಳ್ಳುತ್ತೇವೆ, ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಳ್ಳಬೇಡಿ ಎಂದು ಕೆಲವೊಂದು ಮೇಳಗಳು ಘೋಷಣೆ ಮಾಡುವಷ್ಟರ ತನಕ ತಲುಪಿದೆ. ಈ ಬೆಳವಣಿಗೆಯು ಒಂದು ಕಲೆಗೆ ಬೇಕಾದ ಸೃಜನಶೀಲತೆಯ ಸ್ವಾತಂತ್ರದ ಆವರಣವನ್ನು ಕಸಿದುಕೊಂಡು ಪ್ರದರ್ಶನವನ್ನು ಪೇಲವವಾಗಿಸುವ ಸಾಧ್ಯತೆ ಇರುತ್ತದೆ. ಮೊದಲಿನ ಉಲ್ಲೇಖದಲ್ಲಿ ಕಥಕ್ಕಳಿಯ ಹಾಗೆ ಸಾಯುವುದು ಅಂದರೆ ಅದೇ ಇರಬಹುದು.)
ಇಂತವುಗಳನ್ನು ಬಿಟ್ಟು, ಜಾಲತಾಣಗಳಲ್ಲಿ ಮತ್ತು ಪ್ರದರ್ಶನಗಳ ನಂತರ ನಡೆಯುವ ಚರ್ಚೆಗಳನ್ನು ಗಮನಿಸುವಾಗ ಸಮಷ್ಟಿ ಪ್ರಜ್ಞೆ ಒಪ್ಪುವ ನೀತಿಯಿಂದ ತಪ್ಪಿಸಿಕೊಂಡು ಔಚಿತ್ಯ ಬದಲಾಗುವ, ಅಥವಾ ಸಮಾಜದ ಸಮಷ್ಟಿ ನೀತಿಯೆ ಬದಲಾಗುವುದು ಹೇಗೆ ಎನ್ನುವುದಕ್ಕೆ ಪುರಾವೆಗಳು ಸಿಗುತ್ತವೆ. ಮತ್ತು ಕಲೆಯ ಶಕ್ತಿಯೂ ಅದೇ ಇರಬಹುದು.

ಕೆಲವೊಂದು ದೃಶ್ಯದ ವಿಡಿಯೊಗಳು ವೈರಲ್ ಅಗಿ, ಅದರ ಮೇಲಿನ ಅಭಿಪ್ರಾಯಗಳು ಎಲ್ಲೆಡೆ ಹರಿದಾಡಿದರೂ ಅವೆಲ್ಲವೂ ‘ಸಮಷ್ಟಿ ನೀತಿ’ ಒಪ್ಪಿದ ಔಚಿತ್ಯವನ್ನು ಮಾತ್ರ ಒಳಗೊಳ್ಳುತ್ತವೆ.‘ನಮ್ಮ ಪರಂಪರೆ ದೊಡ್ಡದು’, ‘ಯಕ್ಷಗಾನಕ್ಕೇ ಅವಮಾನ’, ‘ಕಲಾವಿದರಿಗೆ ಬದ್ಧತೆ ಇಲ್ಲ’. ಇಂತಹ ಧ್ವನಿ ಇರುವ ಅಭಿಪ್ರಾಯಗಳು, ವಿಡಿಯೋಗಳು ಮೇಲೆ ಉಲ್ಲೇಖಿತವಾದದ್ದಕ್ಕಿಂತ ಭಿನ್ನವಾದ ನಿಲುವುಗಳನ್ನೇನು ಪ್ರತಿಪಾದಿಸುವುದಿಲ್ಲ.

ಯಕ್ಷಗಾನಕ್ಕೆ ಲಕ್ಷಣಗ್ರಂಥವಿಲ್ಲ, ಪ್ರಪಂಚದ ಹಲವು ಪ್ರದರ್ಶನ ಕಲೆಗಳಿಗೂ ಶಾಸ್ತ್ರ ಹೇಳುವ ‘ಪಠ್ಯ’ಗಳಿಲ್ಲ. ನಾಟ್ಯಶಾಸ್ತ್ರ, 11 ನೇ ಶತಮಾನದಲ್ಲಿ ಕ್ಷೇಮೆಂದ್ರ ಬರೆದ ‘ಔಚಿತ್ಯ ವಿಚಾರ ಚರ್ಚಾ’ ಇತ್ಯಾದಿ ಗ್ರಂಥಗಳಿದ್ದರೂ ಆ ಕಾಲದಲ್ಲೇ ಕಲಾಪ್ರಕಾರಗಳು ಅವುಗಳನ್ನು ಎಷ್ಟು ಅನುಸರಿಸುತ್ತಿದ್ದವೊ ಗೊತ್ತಿಲ್ಲ. ಆದರೆ ಪಠ್ಯಗಳು ಒಂದಕ್ಕೊಂದು ಪ್ರತಿಕ್ರಿಯಿಸುತ್ತಾ, ಒಂದನ್ನೊಂದು ವ್ಯಾಖ್ಯಾನಿಸುತ್ತಾ ತಮ್ಮದನ್ನು ಸೇರಿಸುವ ‘ಅಂತರ್ ಪಠ್ಯೀಯತೆ’ಯು ಪಠ್ಯ ಮತ್ತು ಪ್ರಯೋಗಕ್ಕೂ ಅನ್ವಯಿಸುತ್ತದೆ. ಅಥವಾ ‘ಗೊತ್ತಿರುವುದು-ಆಲೋಚಿಸುವುದು’ ಮತ್ತು ‘ಪ್ರಯೋಗಿಸುವುದು-ಮಾಡುವುದು’ ಇವುಗಳ ಮಧ್ಯ ಇರುವ ಅಂತರಗಳೇನು ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.

ಜ್ಞಾನವು ಬೆಳೆಯುವ, ದಾಖಲೆಗೊಳ್ಳುವ ಮತ್ತು ಅದನ್ನು ಪ್ರಯೋಗಿಸುವಲ್ಲಿ ಮನುಷ್ಯನ ಸಾಧ್ಯತೆಗಳಿಗೆ, ಮಿತಿಗಳು, ವ್ಯಕ್ತಿತ್ವದ ಲಕ್ಷಣಗಳು, ಪ್ರಯೋಗಿಸುವಾಗ ದಿನನಿತ್ಯದ ಹಲವು ವ್ಯತ್ಯಯವಾಗಬಲ್ಲ ಅಂಶಗಳು ಸೇರಿಕೊಳ್ಳುತ್ತವೆ.

ಉದಾಹರಣೆಗೆ ಯಕ್ಷಗಾನದ ಕಲಿಕೆಯನ್ನು -ಮೌಖಿಕವಾಗಿ ಪ್ರಸರಣಗೊಂಡು, ನೆನಪುಗಳಲ್ಲಿ ಬೆಳೆದು ಬಂದ ಜ್ಞಾನದ ವರ್ಗಾವಣೆ- ಎಂದು ಸ್ಥೂಲವಾಗಿ ಹೇಳಬಹುದು. ಮೌಖಿಕವಾಗಿ ಬಂದದ್ದೂ ಒಂದು ರೀತಿಯ ಪಠ್ಯವೇ. ಹಾಗೆ ವರ್ಗಾಯಿಸಲ್ಪಡುವಾಗ ಕಲಿತದ್ದೆಷ್ಟೊ ಅಷ್ಟೇ ಕಲ್ಪನೆಗಳು, ಭೂತ ಮತ್ತು ಭವಿಷ್ಯದ ಬಗೆಗಿನ ದೃಷ್ಟಿಕೋನಗಳು ಇದರಲ್ಲಿ ಸೇರಿಕೊಂಡಿರುತ್ತದೆ. ಅಂದರೆ ಒಂದು ತೆರೆದ ಸಾಂಸ್ಕೃತಿಕ ಹಿನ್ನೆಲೆಯನ್ನು ಗುರು ತನ್ನ ಶಿಷ್ಯಳಿಗೆ ವರ್ಗಾಯಿಸುತ್ತಾರೆ. ಅದು ಒಂದು ರೀತಿಯ ಮಾರ್ಪಾಡು. ಕಲಿತದ್ದನ್ನು ಪ್ರದರ್ಶನದ ಅಗತ್ಯತೆಗಳ ಆವರಣಕ್ಕೆ ವರ್ಗಾಯಿಸುವಾಗ ಯಾವುದು ‘ಹೇಗಿರಬೇಕೆಂದು ಗೊತ್ತಿರುವುದು’ ಮತ್ತು ಅದು ಅಲ್ಲಿ ‘ಪ್ರಯೋಗಿಸುವುದರ’ ಸಂಬಂಧಗಳು ಸಂಕೀರ್ಣವೂ ಮತ್ತು ಕ್ರಿಯಾತ್ಮಕವಾಗಿಯೂ ಇರುವಂತದ್ದು. ಹಾಗೆಯೇ ಪ್ರದರ್ಶನದ ನಂತರದ ಔಚಿತ್ಯದ ಚರ್ಚೆಗಳಲ್ಲಿ, ಪ್ರೇಕ್ಷಕರು ಅವರ ದಿನನಿತ್ಯದ ಜೀವನವು ಅವರನ್ನು ರೂಪಿಸಿದ ಹಲವು ಪ್ರೇರಣೆಗಳು ಮತ್ತು ನೋಡಿದ ಹಲವು ಪ್ರದರ್ಶನಗಳ ನೆನಪಿನಿಂದ ಅವತ್ತು ನೋಡಿದ ಪ್ರದರ್ಶನದ ಒಳಗಿಳಿಯುತ್ತಾರೆ. ಇದರ ಸಂಬಂಧವೂ ಸೃಜನಶೀಲವಾದದ್ದು. ಒಂದು ಕಡಿಮೆ ವಿವಾದಕ್ಕೊಳಗಾಗಿರುವ ಉದಾಹರಣೆ ಕೊಡಬಹುದು. ಒಂದು ‘ಸತ್ಯ ಹರಿಶ್ಚಂದ್ರ’ ಪ್ರದರ್ಶನದಲ್ಲಿ ವನವಿಹಾರದ ಚಂದ್ರಮತಿ ಮತ್ತು ಹರಿಶ್ಚಂದ್ರನೊಂದಿಗೆ ರಾಜ್ಯ ಬಿಟ್ಟು ಹೋಗುವ ಚಂದ್ರಮತಿಯ ಪಾತ್ರವನ್ನು ಇಬ್ಬರು ಕಲಾವಿದರು ಮಾಡಿದ್ದರು. ಮೊದಲಿನ ಚಂದ್ರಮತಿ ವನವಿಹಾರದ ಪದ್ಯಕ್ಕೆ ಕುಣಿದಿದ್ದು ಮತ್ತು ಸ್ವಲ್ಪ ಹಿರಿಯ ಕಲಾವಿದರು ಮಾಡಿದ ನಂತರದ ಚಂದ್ರಮತಿಯ ಪಾತ್ರಚಿತ್ರಣಕ್ಕೂ ಬಹಳ ವ್ಯತ್ಯಾಸವಿತ್ತು.

ತಾಯಿಯಾಗಿರುವ ಚಂದ್ರಮತಿಯಾಗಿ ಹಾಗೆ ಕುಣಿಯಬಾರದಿತ್ತು, ಅದು ಅನೌಚಿತ್ಯ ಎಂದು ಕೆಲವರು, ಮತ್ತೆ ಕೆಲವರು ಅದು ವನವಿಹಾರವಾದ್ದರಿಂದ ಗಂಡನೊಟ್ಟಿಗೆ ಆ ಸನ್ನಿವೇಶಕ್ಕೆ ಹೆಚ್ಚು ಲವಲವಿಕೆಯಿಂದ ಇರುವುದು ಸರಿಯಾಗಿಯೇ ಇದೆ ಎಂದು ಪ್ರೇಕ್ಷಕರು ಪ್ರದರ್ಶನದ ನಂತರದ ಚರ್ಚೆಯಲ್ಲಿ ತೊಡಗಿಕೊಂಡಿದ್ದರು. ಹಿರಿಯ ಚಂದ್ರಮತಿ ಮಾಡಿರುವ ಕಾಲಕ್ಕೂ ಮತ್ತು ಇವತ್ತಿನ ಕಾಲಕ್ಕೂ, ತಾಯಿಯಾದವಳು ಹೇಗಿರಬೇಕು ಎನ್ನುವುದರ ಸಾಮಾಜಿಕ ನೀತಿ ಬದಲಾಗುತ್ತಿರುವುದರ ಸೂಚನೆ ಇದು. ಇದರರ್ಥ ಇಲ್ಲಿ ಒಬ್ಬರನ್ನು ಇನ್ನೊಬ್ಬರು ಒಪ್ಪಿಕೊಂಡರೆಂದಲ್ಲ. ಆದರೆ ಚರ್ಚೆಗೆ ತೆರೆದುಕೊಳ್ಳುವ ಜಾಗವನ್ನು ಈ ವಿಷಯ ಸಂಪಾದಿಸಿತ್ತು.

ಮುಖ್ಯವಾಗಿ ಯಕ್ಷಗಾನದ ಸತ್ವವನ್ನು ಬರೀ ಅದರ ತಾಂತ್ರಿಕತೆಯಿಂದ ಗುರುತಿಸುವುದು, ‘ಶುದ್ಧರಂಗಭೂಮಿ’ಯು ಔಚಿತ್ಯವಾಗುವುದರ ಮೇಲಿರುವ ಚರ್ಚೆಗಳ ಪ್ರಮುಖ ಸಮಸ್ಯೆ ಅನ್ನಿಸುತ್ತದೆ. ಯಕ್ಷಗಾನದ ನೋಡುವಿಕೆಯ ರೀತಿಯಾಗಲಿ, ಅದು ಜನಜೀವನದಲ್ಲಿ ಯಾವ ರೀತಿಯ ಪಾತ್ರ ವಹಿಸುತ್ತದೆಯೆನ್ನುವುದಾಗಲಿ, ಒಟ್ಟು ಸಮುದಾಯಕ್ಕೆ ಅದರಲ್ಲಿ ತೊಡಗಿಸಿಕೊಳ್ಳುವುದರ ಅನುಭವವಾಗಲಿ ಯಕ್ಷಗಾನದ ಸತ್ವವಲ್ಲ. ಬದಲಿಗೆ ಕೆಲವು ರೀತಿಯ ಕುಣಿತ, ಅಂಗ ಮುದ್ರೆ, ಕೆಲವೊಂದು ರಾಗಗಳು, ಆಭರಣ, ಬಟ್ಟೆ ಇವುಗಳು ಮಾತ್ರ ಸತ್ವವಾಗಿ ಕಾಣುತ್ತವೆ.