ಯಕ್ಷಗಾನದಲ್ಲಿ ಈ ಪೂರ್ಣತೆಯ ಅರ್ಥವನ್ನೇ ಔಚಿತ್ಯ ಪಡೆದುಕೊಳ್ಳುವುದಾದರೂ, ಇಲ್ಲಿ ನಿತ್ಯದ ಸಮಾಜದೊಂದಿಗೆ ವ್ಯವಹರಿಸುವ ಯಕ್ಷಗಾನವು ಬದಲಾಗುತ್ತಿರುವ ತನ್ನ ಸುತ್ತಮುತ್ತಲಿನ ಸಮಾಜದ ಕ್ರಮಗಳ ಜೊತೆಗೆ ಚೌಕಾಶಿ ಮಾಡುತ್ತಾ ವ್ಯವಹರಿಸಬೇಕಾಗುತ್ತದೆ. ಅಂದರೆ ಹಿಂದಿನ ಜೀವನ ಕ್ರಮದ ನಡಾವಳಿಗೂ ಮತ್ತು ಈಗಿನ ಸಮಾಜದ ಕ್ರಮಗಳಿಗೂ ಕಲಾಪ್ರಕಾರಗಳು ಒಂದು ಸೇತುವೆಯನ್ನು ಕಟ್ಟಿಕೊಳ್ಳುತ್ತಾ ಹೋಗಬೇಕಾಗುತ್ತದೆ. ಯಕ್ಷಗಾನದ ‘ಮೂಲ ಉದ್ದೇಶ’ ಪುರಾಣದ ಪ್ರಸರಣವಾಗಿರಲಿ, ಅಥವಾ ಪ್ರಸಂಗ ಪಠ್ಯವನ್ನು ಗಾನ, ನೃತ್ಯ ಮಾತಿನಲ್ಲಿ ಪ್ರೇಕ್ಷಕರಿಗೆ ತೋರಿಸುವುದಷ್ಟೇ ಆಗಿರಲಿ, ಅದು ಈಗಿನ ಕಾಲಕ್ಕೆ ಸಂವಹನವಾಗಬಹುದಾದ ರೀತಿಯಲ್ಲೇ ಅರ್ಥೈಸಬೇಕಾಗುತ್ತದೆ.
‘ಯಕ್ಷಾರ್ಥ ಚಿಂತಾಮಣಿ’ಯಲ್ಲಿ ಕೃತಿ ಪುರಪ್ಪೇಮನೆ ಬರಹ

 

ಯಾವುದೇ ಕಲಾಪ್ರಕಾರವಾದರೂ ಅದರ ಸಂರಚನೆ, ಅದು ಬೆಳೆದು ಬಂದ ರೀತಿಯಿಂದಾಗಿಯೇ ಆ ಕಲಾಪ್ರಕಾರಕ್ಕೇ ನಿರ್ದಿಷ್ಟವಾದ ಮೀಮಾಂಸೆಯ ಪರಿಕಲ್ಪನೆಗಳಿರುತ್ತದೆ. ಯಕ್ಷಗಾನದಲ್ಲಿ ಅಂತದ್ದೊಂದು ಬಹು ಬಳಕೆಯಾಗುವ ಪದ ‘ಔಚಿತ್ಯ’. ಯಕ್ಷಗಾನದ ವಿಮರ್ಶೆಯಲ್ಲಿ ಬಳಸುವ ಅತ್ಯಂತ ಮುಖ್ಯ ಪರಿಕಲ್ಪನೆ ಇದು ಎಂದು ಹೇಳಬಹುದು. ಇಲ್ಲಿ ಔಚಿತ್ಯವು ಯೋಗ್ಯವಾದ, ಇಡಿಯಾಗಿ ಹೊಂದಿಕೊಳ್ಳುವ ಎನ್ನುವ ಅರ್ಥವನ್ನು ಸ್ಥೂಲವಾಗಿ ಪಡೆದುಕೊಳ್ಳುತ್ತದೆ. ಅಂದರೆ ಒಂದು ಯಕ್ಷಗಾನವು ಆನಂದಕರವಾಗಿದೆ, ಚೆನ್ನಾಗಿದೆ ಎಂದು ಹೇಳುವುದಕ್ಕೆ ಅದು ತಕ್ಕದ್ದೂ, ಯೋಗ್ಯವಾದದ್ದೂ ಆಗಿರುವುದು ಒಂದು ಮಾನದಂಡವಾಗಿ ಪ್ರಯೋಗಿಸಲ್ಪಡುತ್ತದೆ.

ಅದು ಒಂದು ಪ್ರದರ್ಶನದ ಕೆಲವು ಭಾಗಗಳಿಗೆ ಸಂಬಂಧಿಸಲ್ಪಟ್ಟರೂ, ಇಡೀ ಯಕ್ಷಗಾನಕ್ಕೆ ಅದನ್ನು ಅನ್ವಯಿಸುವುದರಿಂದ ಒಂದು ತೀರ್ಪಿನಂತೆ ಪ್ರಕಟವಾಗುತ್ತದೆ. ಬಿಡಿ ಭಾಗಗಳ ಬಗ್ಗೆ ಚರ್ಚಿಸುವಾಗ ಅದರ ಸಂದರ್ಭದ ಸಹಿತ, ಅಂದರೆ ಅದೊಂದು ಸ್ವಪೂರ್ಣ ಭಾಗವಾಗಿಯೇ ನೋಡಲ್ಪಡುತ್ತದೆ. ಉದಾಹರಣೆಗೆ ಒಂದು ಪಾತ್ರದ ಮಾತು ಔಚಿತ್ಯಪೂರ್ಣವಾಗಿದೆ ಎಂದಾಗ ಅದರ ಸಂದರ್ಭದೊಟ್ಟಿಗೆ ಅದನ್ನು ನೋಡಿರುವುದೆಂದರ್ಥ. ‘ಸಂದರ್ಭದೊಟ್ಟಿಗೆ’ ಎಂದು ಇರುವುದರಿಂದಲೇ ಔಚಿತ್ಯವು ವಿವರಣೆಗಲ್ಲದೆ ವ್ಯಾಖ್ಯಾನಕ್ಕೆ ಸಿಗುವುದು ಕಷ್ಟ. ಅದಕ್ಕಾಗಿಯೇ ಕೆಲವೊಮ್ಮೆ ಯಕ್ಷಗಾನ ಪ್ರದರ್ಶನದ ನಂತರ ಟೀ ಸ್ಟಾಲಿನಲ್ಲೊ, ಅಥವಾ ಸಾಮಾಜಿಕ ಮಾಧ್ಯಮಗಳಲ್ಲೋ ನಡೆಯುವ ಚರ್ಚೆಗಳಲ್ಲಿ, ಔಚಿತ್ಯವೊಂದು ವಿವಾದಾತ್ಮಕ ಅಂಶವಾಗುವುದಲ್ಲದೇ, ಯಕ್ಷಗಾನದ ಬೆಳವಣಿಗೆಯಲ್ಲಿ ಅತ್ಯಂತ ಅಗತ್ಯವಾದ ಅಂಶವೂ ಆಗಿದೆ.


ಔಚಿತ್ಯವು ಯೋಗ್ಯವಾದ, ಸರಿಯಾದ ಎನ್ನುವ ಅರ್ಥದಲ್ಲಿ ಬಳಸುವುದಕ್ಕಾಗಿಯೇ ಇದಕ್ಕೊಂದು ನೀತಿ ಸಂಹಿತೆಯ(ಮೊರಾಲಿಟಿಯ ಕಲ್ಪನೆ) ಲೇಪನವಿದೆ. ಮೇಲಿನ ಉದಾಹರಣೆಯಲ್ಲಿ ಆ ಪಾತ್ರಕ್ಕೆ ತಕ್ಕುದಾದ ಮಾತನಾಡಿದರು, ಆ ಪಾತ್ರದ ಘನತೆಗೆ ಯೋಗ್ಯವಾದ ಮಾತುಗಳನ್ನಾಡಿದರು ಇತ್ಯಾದಿ ಅರ್ಥಗಳನ್ನು ಔಚಿತ್ಯ ಒಳಗೊಳ್ಳುತ್ತದೆ.

ಯಕ್ಷಗಾನ ವಿಮರ್ಶಕ ಜಿ ಎಸ್ ಭಟ್ಟರು ಯಾವುದು ಯಕ್ಷಗಾನೀಯವಲ್ಲವೋ ಅದು ಔಚಿತ್ಯವಲ್ಲ ಅನ್ನುತ್ತಾರೆ. ಆದರೆ ಯಾವುದು ಯಕ್ಷಗಾನೀಯತೆ ಅನ್ನುವುದನ್ನು ನಿರ್ಧರಿಸುವುದು ಕಷ್ಟ ಎನ್ನುವುದನ್ನೂ ಹೇಳುತ್ತಾರೆ. ರಾಘವ ನಂಬಿಯಾರರು ಶುದ್ಧ ರಂಗಭೂಮಿ ಎನ್ನುವ ಪದ ಬಳಸುತ್ತಾರೆ. ಇಪ್ಪತ್ತನೇ ಶತಮಾನದ ಮೊದಲ ಭಾಗದಲ್ಲಿ ದೇವಸ್ಥಾನ ಮೇಳಗಳು ಆರಾಧನಾ ಕಲೆಯಾಗಿಯೇ ಇರುತ್ತಿದ್ದವು. ಈಗ ಅಂತಹ ಮೇಳಗಳು ಹರಕೆದಾರರ ದಿಕ್ಕುಚ್ಯುತಿಯಿಂದಾಗಿ ಜಾತ್ರೆಗಳಾಗುತ್ತಿವೆ ಎನ್ನುತ್ತಾರೆ. ಇವೆರಡೂ ಕಡೆಗಳಲ್ಲಿ ಔಚಿತ್ಯವು, ಯಕ್ಷಗಾನವೆಂದು ಗುರುತಿಸುವ ಎಲ್ಲ ಲಕ್ಷಣಗಳನ್ನು ಒಳಗೊಂಡಿರುವುದು ಅಥವಾ ಇಡಿಯಾಗಿ ಯಕ್ಷಗಾನವನ್ನು ನಿಯಂತ್ರಿಸುವ ತತ್ವಗಳು ಎನ್ನುವುದನ್ನು ಧ್ವನಿಸುತ್ತವೆ. ಆದರೆ ಆ ಲಕ್ಷಣಗಳು ಬದಲಾಗುತ್ತ ಇರುವುದರಿಂದಲೇ ಯಕ್ಷಗಾನೀಯತೆ ಎನ್ನುವುದು ಮತ್ತೆ ‘ಸಂದರ್ಭ ಸಹಿತ’ ವಿವರಿಸಬೇಕಾದ ವಿಷಯವಾಗುತ್ತದೆ. ಸಂದರ್ಭವು ಕೆಲವೊಮ್ಮೆ ಒಂದು ಯಕ್ಷಗಾನ ಪ್ರದರ್ಶನ ಮಾತ್ರವಾಗಿದ್ದರೆ, ಇಲ್ಲಿ ಸಂದರ್ಭವು ಆ ಯಕ್ಷಗಾನ ಪ್ರದರ್ಶನಗೊಂಡ ಕಾಲಮಾನವನ್ನೂ ಒಳಗೊಳ್ಳುತ್ತದೆ.

ಭಾರತೀಯ (ಹೆಚ್ಚು ಜನಪ್ರಿಯವಾಗಿರುವ) ಕಾವ್ಯ ಮೀಮಾಂಸೆಯಲ್ಲಿ, ರಸವನ್ನು ಸಹೃದಯರಲ್ಲಿ ಹುಟ್ಟಿಸುವುದೇ ಕಾವ್ಯದ ಆತ್ಯಂತಿಕ ಕೆಲಸವಾದ್ದರಿಂದ, ಒಂದು ಕಲೆಯ ಎಲ್ಲಾ ಭಾಗಗಳು, ಅದರ ಪೂರ್ಣತೆಯೆಡೆಗೆ ಕೆಲಸ ಮಾಡಿದರೆ ಅದು ಔಚಿತ್ಯ. ಅಥವಾ ಕಲೆಯ ಎಲ್ಲಾ ಬಿಡಿ ಭಾಗಗಳನ್ನೂ ಒಂದು ಪೂರ್ಣತೆಯ ದೃಷ್ಟಿಯಿಂದ ಔಚಿತ್ಯಪೂರ್ಣವಾಗಿ ತಂದರೆ ಆ ಕಲೆ ಅಥವಾ ಪ್ರದರ್ಶನ ಸಾರ್ಥಕವಾಯಿತು ಎನ್ನುವುದನ್ನು ಹೇಳುತ್ತದೆ. ಆದರೆ ಆ ಬಿಡಿ ಭಾಗಗಳಲ್ಲಿ, ಮತ್ತೆ ಅದೇ ಪರಂಪರೆಯಲ್ಲಿಯೇ ಯಾರು ಹೇಗೆ ಪಾತ್ರ ಮಾಡಬೇಕು ಮತ್ತು ಯಾವ ಪಾತ್ರಕ್ಕೆ ಏನು ನಡಾವಳಿ ಎನ್ನುವುದನ್ನು ವಿಸ್ತಾರವಾಗಿ ಹೇಳುತ್ತದೆಯಾದ್ದರಿಂದ ಇದು ಸಾಮಾಜಿಕ ಕ್ರಮವೂ ಹೌದು. ಉದಾಹರಣೆಗೆ ನಾಟ್ಯಶಾಸ್ತ್ರದಂತಹ ಪಠ್ಯವು ಅದನ್ನು ವಿಸ್ತಾರವಾಗಿ ವಿವರಿಸುತ್ತದೆ. ಹಾಗಾಗಿಯೇ ಕಲೆ ಮತ್ತು ಸಮಾಜದ ನೀತಿ, ನಡಾವಳಿ ಎರಡೂ ಒಟ್ಟಿಗೇ ಬಂದಂತೆನಿಸುತ್ತದೆ. ಉದಾಹರಣೆಗೆ, ರಾಜ ಮತ್ತು ದಾಸಿ ಹೇಗೆ ನಡೆದುಕೊಳ್ಳಬೇಕು ಮತ್ತು ಉಳಿದವರು ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಪಾತ್ರದ ಮೂಲಕವೇ ಸಮಾಜ ನಡೆದುಕೊಳ್ಳಬೇಕಾದ ನಿಯಮವಾಗಿ ತೋರಿಸುತ್ತಿರುತ್ತದೆ. ಅವು ಆ ಕಾಲದ ಸಮಾಜದ ನಡವಳಿಕೆಯ ಪ್ರತಿಫಲನವಾಗಿಯೂ, ಕೆಲವೊಮ್ಮೆ ಹೇಗೆ ನಡೆದುಕೊಳ್ಳಬೇಕೆಂದು ತೋರಿಸುವ ಆದರ್ಶವಾಗಿಯೂ ಬಂದಿರುವ ಸಾಧ್ಯತೆ ಇರುತ್ತದೆ. ನೀತಿಸಂಹಿತೆಯಂತೆ ಔಚಿತ್ಯ ಕಾಣುವುದು ಈ ಕಾರಣದಿಂದಲೇ. ಕಲೆ ಮತ್ತು ಸಮಾಜದ ಸಂಬಂಧವನ್ನು ನೋಡುವಾಗ ಇದರ ಬಗ್ಗೆ ಇನ್ನಷ್ಟು ವಿಸ್ತರಿಸಬಹುದು.

ಯಕ್ಷಗಾನದಲ್ಲಿ ಈ ಪೂರ್ಣತೆಯ ಅರ್ಥವನ್ನೇ ಔಚಿತ್ಯ ಪಡೆದುಕೊಳ್ಳುವುದಾದರೂ, ಇಲ್ಲಿ ನಿತ್ಯದ ಸಮಾಜದೊಂದಿಗೆ ವ್ಯವಹರಿಸುವ ಯಕ್ಷಗಾನವು ಬದಲಾಗುತ್ತಿರುವ ತನ್ನ ಸುತ್ತಮುತ್ತಲಿನ ಸಮಾಜದ ಕ್ರಮಗಳ ಜೊತೆಗೆ ಚೌಕಾಶಿ ಮಾಡುತ್ತಾ ವ್ಯವಹರಿಸಬೇಕಾಗುತ್ತದೆ. ಅಂದರೆ ಹಿಂದಿನ ಜೀವನ ಕ್ರಮದ ನಡಾವಳಿಗೂ ಮತ್ತು ಈಗಿನ ಸಮಾಜದ ಕ್ರಮಗಳಿಗೂ ಕಲಾಪ್ರಕಾರಗಳು ಒಂದು ಸೇತುವೆಯನ್ನು ಕಟ್ಟಿಕೊಳ್ಳುತ್ತಾ ಹೋಗಬೇಕಾಗುತ್ತದೆ. ಯಕ್ಷಗಾನದ ‘ಮೂಲ ಉದ್ದೇಶ’ ಪುರಾಣದ ಪ್ರಸರಣವಾಗಿರಲಿ, ಅಥವಾ ಪ್ರಸಂಗ ಪಠ್ಯವನ್ನು ಗಾನ, ನೃತ್ಯ ಮಾತಿನಲ್ಲಿ ಪ್ರೇಕ್ಷಕರಿಗೆ ತೋರಿಸುವುದಷ್ಟೇ ಆಗಿರಲಿ, ಅದು ಈಗಿನ ಕಾಲಕ್ಕೆ ಸಂವಹನವಾಗಬಹುದಾದ ರೀತಿಯಲ್ಲೇ ಅರ್ಥೈಸಬೇಕಾಗುತ್ತದೆ. ಅದು ಸಾಮಾಜಿಕ ಕ್ರಮವನ್ನು ಅನುಸರಿಸಿಯೇ ಆಗಬೇಕಾಗಿದ್ದು.

ಈಗಿನ ಕಾಲದ ಸಾಮಾಜಿಕ ಕ್ರಮವೂ ಏಕರೂಪದ್ದಲ್ಲ, ಜನರು ತಮ್ಮ ಮೇಲೆ ಪ್ರಭಾವ ಬೀರುವ ಹಲವು ವಿಷಯಗಳನ್ನು ಒಮ್ಮೊಮ್ಮೆ ಒಂದಕ್ಕೊಂದು ಸೇರಿಸಿ, ಒಮ್ಮೊಮ್ಮೆ ಒಂದಕ್ಕೊಂದು ವಿರುದ್ಧವಾಗಿ ಅಥವಾ ಒಂದನ್ನು ಅನ್ವಯಿಸಿಕೊಳ್ಳುವಾಗ ಇನ್ನೊಂದನ್ನು ನಿರ್ಲಕ್ಷಿಸಿ, ಹೀಗೆ ಹಲವು ರೀತಿಯಲ್ಲಿ ತಮ್ಮ ವ್ಯಕ್ತಿತ್ವಗಳನ್ನು, ಅಭಿರುಚಿಗಳನ್ನು ರೂಢಿಸಿಕೊಂಡಿರುತ್ತಾರೆ. ಹಾಗಾಗಿಯೇ ಔಚಿತ್ಯವೆಂದರೆ ಏನು ಎನ್ನುವುದು ಪ್ರೇಕ್ಷಕರು, ಕಲಾವಿದರು ಮತ್ತು ಸಂಘಟಕರು ಬೇರೆ ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡು ಮತ್ತು ಅದು ತಾವು ನಿಂತ ಸ್ಥಾನ, ಸಂದರ್ಭದ ಮೇಲೆ ಹಲವು ಅರ್ಥ, ಆಶಯ ಮತ್ತು ಹಂಬಲವಾಗಿ ಪ್ರಕಟಗೊಳ್ಳುತ್ತವೆ ಎನ್ನುವುದು ಅವರ ಸಂದರ್ಶನಗಳಲ್ಲಿ, ಮಾತುಗಳಲ್ಲಿ ನಮಗೆ ಕಾಣಿಸುತ್ತದೆ.

ಯಕ್ಷಗಾನದ ‘ಮೂಲ ಉದ್ದೇಶ’ ಪುರಾಣದ ಪ್ರಸರಣವಾಗಿರಲಿ, ಅಥವಾ ಪ್ರಸಂಗ ಪಠ್ಯವನ್ನು ಗಾನ, ನೃತ್ಯ ಮಾತಿನಲ್ಲಿ ಪ್ರೇಕ್ಷಕರಿಗೆ ತೋರಿಸುವುದಷ್ಟೇ ಆಗಿರಲಿ, ಅದು ಈಗಿನ ಕಾಲಕ್ಕೆ ಸಂವಹನವಾಗಬಹುದಾದ ರೀತಿಯಲ್ಲೇ ಅರ್ಥೈಸಬೇಕಾಗುತ್ತದೆ. ಅದು ಸಾಮಾಜಿಕ ಕ್ರಮವನ್ನು ಅನುಸರಿಸಿಯೇ ಆಗಬೇಕಾಗಿದ್ದು.

ಇವುಗಳನ್ನು ಸ್ಥೂಲವಾಗಿ ಎರಡು ಶೀರ್ಷಿಕೆಯ ಕೆಳಗೆ ವಿಂಗಡಿಸಬಹುದು.

ವೃತ್ತಿ ಮೇಳಗಳು ಮತ್ತು ಹಳೆ ಮಟ್ಟಿನ, ಹಳೆ ನಡೆಯ, ಮೂಲ ಕಥೆಯ ಔಚಿತ್ಯ:

ವೃತ್ತಿ ಮೇಳಗಳ ಆಟದ ವಿಮರ್ಶೆ ಮಾಡುವಾಗಲೆಲ್ಲ ಔಚಿತ್ಯವೆನ್ನುವುದು ಪೌರಾಣಿಕ ಪ್ರಸಂಗ ಮತ್ತು ಅದರ ಹಳೆನಡೆ ಎನ್ನುವುದು ಮತ್ತು ಅದು ಪ್ರಶ್ನಾತೀತವಾಗಿ ಒಪ್ಪಿಕೊಳ್ಳುವಂತದ್ದು ಎನ್ನುವ ಅರ್ಥ ಕಲಾವಿದರ ಮಾತುಗಳಲ್ಲಿ ಬರುತ್ತದೆ. ವೃತ್ತಿ ಮೇಳದಲ್ಲಿರುವವರು ಯಕ್ಷಗಾನಕ್ಕೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದಕ್ಕಾಗಿ ಹೊಸಪ್ರಸಂಗಗಳು, ಹೊಸ ರೀತಿಯ ಹಾಡುಗಾರಿಕೆ, ಪೌರಾಣಿಕ ಪ್ರಸಂಗದಲ್ಲಿ ಬರುವ ಹಾಸ್ಯ ಮುಂತಾದವುಗಳನ್ನು ತಂದರೂ, ಯಾರನ್ನು ಗಟ್ಟಿ ನಿಲ್ಲಿಸಿ ಕೇಳಿದರೂ, ಹಳೆ ನಡೆಯನ್ನು ಉಳಿಸಿಕೊಳ್ಳಬೇಕು. ಹಳೆ ಮಟ್ಟುಗಳು ಬೇಕು, ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳುತ್ತಾರೆ. ಹೊಸ ಪ್ರಸಂಗ ಮತ್ತು ಪೌರಾಣಿಕ ಪ್ರಸಂಗಗಳೆರಡನ್ನೂ ನೋಡುವ ಪ್ರೇಕ್ಷಕರೂ ಇಂತದ್ದೇ ಮಾತುಗಳನ್ನು ಆಡಿದ್ದಾರೆ. ಔಚಿತ್ಯವೆನ್ನುವುದು ಇಲ್ಲಿ ಹಳೆಯದನ್ನು ಮುಂದುವರೆಸಿಕೊಂಡು ಹೋಗುವುದು ಮತ್ತು ಅದು ಸರಿಯಾದ ಮಾರ್ಗ ಎನ್ನುವುದನ್ನು ಧ್ವನಿಸುತ್ತದೆ. ಅಂದರೆ ಈಗ ಔಚಿತ್ಯದ ಪ್ರಶ್ನೆ ಗಟ್ಟಿಯಾಗಿ ಕೇಳಲು ಆರಂಭಿಸಿದ್ದೇ ಯಕ್ಷಗಾನ ಹೊಸ ಪ್ರಸಂಗಗಳು ಮತ್ತು ಜನಪ್ರಿಯತೆಗೆ ತೆರೆದುಕೊಂಡ ಕಾಲದಿಂದ ಎನ್ನುವಂತೆ ಇಲ್ಲಿ ಕಾಣತೊಡಗುತ್ತದೆ.

ಹೊಸ ಪ್ರಸಂಗಗಳು ಹೊಸ ಪ್ರೇಕ್ಷಕರನ್ನು ತಂದವು ಎಂದು ಒಬ್ಬ ಪ್ರಸಿದ್ಧ ಭಾಗವತರು ಹೇಳಿದ್ದಾರೆ. ಈಗಿನ ಇನ್ನೊಬ್ಬ ಭಾಗವತರೂ ಕೂಡ ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳೋಕೆ ಆಗೋದಿಲ್ಲ. ಹಳೇ ಮಟ್ಟು ಬೇಕು ಅನ್ನುತ್ತಲೆ ನಾವು ಭಾವಗೀತೆ, ಜನಪದ ಗೀತೆ ಹಾಡಿದರೆ ಅದು ಕೆಲವೊಂದು ಪಾತ್ರಗಳಿಗೆ ಮಾತ್ರ. ಹೊಸದಾಗಲಿ, ಹಳೆಯ ಪ್ರಸಂಗವಾಗಲಿ ರಾಜ, ಮಂತ್ರಿ ಮುಂತಾದ ಪಾತ್ರಗಳಿಗೆ ಯಾವುದೊ ಜನಪ್ರಿಯ ಗೀತೆಯ ಧಾಟಿಯಲ್ಲಿ ಹಾಡಲು ಆಗುವುದಿಲ್ಲ ಮತ್ತು ಹಳೆಯ ಭಾಮಿನಿಯಲ್ಲಿ ಕೊನೆಯ ಆಲಾಪ ಎಲ್ಲಾ ರಾಗದಲ್ಲಿಯು ಒಂದೇ ಆಗಿತ್ತು. ಈಗ ಅದೆಲ್ಲವೂ ಬೇರೆ ಬೇರೆಯಾಗಿರುತ್ತದೆ. ಕಲಾವಿದರೂ ಈಗಿನವರು ಹೆಚ್ಚಿನ ಅಧ್ಯಯನ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ.

ಹೀಗೆ ಹೇಳಿದರೂ ತಮ್ಮ ನಡೆ ಹಳೆಯದರಂತೆ ಇದೆ, ಅಥವಾ ಹಳೆಯದನ್ನು ತಾವು ಬಿಡುವುದಿಲ್ಲ, ಬಿಡುವುದು ತಪ್ಪು ಎನ್ನುವಂತಹ ಮಾತುಗಳು ವೃತ್ತಿಪರ ಕಲಾವಿದರಲ್ಲಿ ಬಂದಿವೆ. ಇದು ತಾವು ಕಲಿತ ಹಳೆನಡೆಯ ಸೊಗಸನ್ನು ಗುರುತಿಸಿಯೂ, ಅದು ತಮ್ಮ ಮುಂದಿರುವ ಈಗಿನ ಪ್ರೇಕ್ಷಕರಿಗೆ ಪ್ರಸ್ತುತವಲ್ಲದ್ದನ್ನು ನೋಡಿಕೊಂಡೇ, ಹಳೆ ನಡೆಯನ್ನು ಸಮರ್ಥಿಸಿಕೊಳ್ಳುವುದು, ಮತ್ತು ಹಾಗೇ ಸಮರ್ಥಿಸುವುದು ಹಿಂದಿನ ತಲೆಮಾರಿಗೆ ಕೊಡುವ ಗೌರವವಾಗಿ ಮತ್ತು ಔಚಿತ್ಯವೆನ್ನುವುದು ಹಳೆನಡೆಯ ಸಮರ್ಥನೆಯಾಗಿ ಇಲ್ಲಿ ಪ್ರತಿಫಲನಗೊಳ್ಳುತ್ತದೆ.

ಔಚಿತ್ಯವು ಹಿಂದಿನಿಂದ ಬಂದ ರೂಢಿಗತ ಜ್ಞಾನವೆಂದು ಗುರುತಿಸುವುದರ ಜೊತೆಗೆ, ಅದರ ಬದಲಾವಣೆಯನ್ನು ಮಾಡುವಾಗ ಪೂರ್ಣತೆಗೆ ಭಂಗ ಬಾರದಂತೆ ಮಾಡಬೇಕೆನ್ನುವುದು ಹಲವರ ಸಂದರ್ಶನಗಳನ್ನು ಗಮನಿಸಿದಾಗ ಕಾಣುವಂತದ್ದು. ರೂಢಿಗತ ಜ್ಞಾನವು ಕಲಾವಿದರಿಗೆ ಅವರ ಯಕ್ಷಗಾನದ ಕಲಿಕೆಯಿಂದ ಮಾತ್ರ ಬಂದದ್ದಾಗಿರುವುದಿಲ್ಲ. ಮನುಷ್ಯ ಮತ್ತು ಯಕ್ಷಗಾನವೆರಡೂ ಸಮಾಜದಲ್ಲೇ ಹುಟ್ಟಿರುವುದು. ಜಾತಿ, ಲಿಂಗ, ಬೆಳೆದ ವಾತಾವರಣ, ಮತ್ತು ಇತರೇ ಪ್ರೇರಕಗಳು, ಕಲಾ ಪ್ರಕಾರಗಳು, ಸಾಮಾಜಿಕ ಮಾಧ್ಯಮಗಳು ಇವೆಲ್ಲವೂ ಕಲಾವಿದರಿಗೆ, ಪ್ರೇಕ್ಷಕರಿಗೆ ಹಲವು ರೀತಿಯ ತಿಳುವಳಿಕೆ, ಅನುಭವಗಳನ್ನು ಕೊಡುತ್ತಾ ಇರುತ್ತದೆ. ಅದು ಅವರ ಲೋಕದೃಷ್ಟಿ ಮತ್ತು ನೀತಿಯನ್ನು ರೂಪಿಸಿರುತ್ತದೆಯಾದ್ದರಿಂದ, ಔಚಿತ್ಯವು ಯಕ್ಷಗಾನದೊಳಗಿನ ರೂಢಿಗತ ವಿವೇಕಕ್ಕೆ ಸೇರಿಸಿಕೊಳ್ಳುತ್ತಾ ಹೋಗುವ ಅಥವಾ ಮರು ನಿರೂಪಿಸಿಕೊಳ್ಳುವ ವರ್ತಮಾನದ ಒಂದು ವಿದ್ಯಮಾನವಾಗುತ್ತದೆ.

ಇದರ ಜೊತೆಗೆ, ವರ್ತಮಾನ ಕಾಲದ ಎಲ್ಲ ಪ್ರಯೋಗವೂ, ಬದಲಾವಣೆಗಳೂ ಹಳೆಯದರ ಪರಿಷ್ಕರಣೆ ಮಾತ್ರ ಎನ್ನುವುದನ್ನೂ ಹೇಳುತ್ತಾ ಇರುವಂತೆ ನಮಗೆ ಇಲ್ಲಿ ಕಾಣಿಸುತ್ತದೆ. ಪರಂಪರೆಯಿಂದ ಬಂದ ಎಲ್ಲಾ ಕಲಾಪ್ರಕಾರಗಳಿಗೂ, ಆಚರಣೆಗೂ ಇದು ಅನ್ವಯಿಸುತ್ತದೆಯಾದ್ದರಿಂದ, ಪರಂಪರೆ, ಪದ್ಧತಿ, ರೂಢಿ, ನಿಯಮ, ಸಂಪ್ರದಾಯ ಎಂದೆಲ್ಲಾ ಕರೆಸಿಕೊಳ್ಳುವ ನಮ್ಮ ಜೀವನದ ಕ್ರಮಗಳನ್ನು ನೋಡುವುದು ಸದ್ಯ ಈ ಲೇಖನದ ಪರಿಧಿಯಿಂದ ಹೊರಗಿದೆ. ಆದರೆ ಪರಂಪರೆಯನ್ನು ಅರ್ಥಮಾಡಿಕೊಳ್ಳುವಲ್ಲಿ ನಮ್ಮ ದೃಷ್ಟಿಕೋನವು ತೆಗೆದುಕೊಳ್ಳುವ ಸಾಮಾನ್ಯ ನಿಲುವುಗಳನ್ನು ಇದು ಪ್ರತಿನಿಧಿಸುತ್ತಾ ಇದೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಇದಕ್ಕೇ ಹೊಂದಿಕೊಂಡು ಇನ್ನೊಂದು ವಿಷಯವೂ ನನ್ನ ಗಮನಕ್ಕೆ ಬಂದಿದೆ. ಸಂದರ್ಶನ ಮಾಡುವಂಥವರು, ಮತ್ತು ಹೆಚ್ಚಿನ ‘ವಿದ್ಯಾವಂತರು’ ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವುದು, ಯಕ್ಷಗಾನವನ್ನು ಸುಧಾರಿಸಿ ಉಳಿಸುವುದಕ್ಕೆ ಮತ್ತು ಈ ‘ವಿದ್ಯಾವಂತರ’ ಸುಧಾರಣೆಯು ಮೇಲ್ಮಟ್ಟದ್ದು ಹಾಗೂ ಅದು ಯಕ್ಷಗಾನದ ಒಟ್ಟೂ ಔಚಿತ್ಯವನ್ನು ಗಮನದಲ್ಲಿಟ್ಟುಕೊಂಡು ಮಾಡುವ ಸುಧಾರಣೆಗಳು, ಯಕ್ಷಗಾನದ ‘ಮೂಲ ಸತ್ವ’ವನ್ನು ಉಳಿಸುವ ಪ್ರಯೋಗಗಳು ಎನ್ನುವ ವಾತಾವರಣವು ಯಕ್ಷಗಾನದಲ್ಲಿದೆ. ಅವರು ಯಕ್ಷಗಾನದ ‘ಮೂಲ ಸತ್ವ’ ಮತ್ತು ‘ಔಚಿತ್ಯ’ವನ್ನು ಕಂಡುಕೊಳ್ಳುವುದು ಗ್ರಂಥಗಳಿಂದ(ಅದರಲ್ಲಿ ನಾಟ್ಯಶಾಸ್ತ್ರವೂ ಒಂದು) ಅಥವಾ ತಮ್ಮ ಪರಿಸರವನ್ನು ಮೀರಿರುವ ಸಂಪನ್ಮೂಲದಿಂದ ಎನ್ನುವ ನಂಬಿಕೆ ಹಲವರಲ್ಲಿ ಬೇರೂರಿರುವಂತೆ ಸಂದರ್ಶನಗಳಲ್ಲಿ ಕಂಡುಬಂತು. ಶಿವರಾಮ ಕಾರಂತರಿಂದ ಹಿಡಿದು, ಮಾಯಾರಾವ್ ಅವರಲ್ಲಿ ಕೋರಿಯೋಗ್ರಫಿ ಕಲಿತ ಶಂಭು ಹೆಗಡೆಯವರ ತನಕ ಬಂದ ‘ವಿದ್ಯಾವಂತ’ರ ದೃಷ್ಟಿಕೋನವನ್ನು ಯಕ್ಷಗಾನದ ಒಟ್ಟೂ ಸಮುದಾಯವೂ ಹಾಗೇಯೇ ಗ್ರಹಿಸಿದೆ ಎನ್ನುವುದಕ್ಕೆ ಹಲವು ಪುರಾವೆಗಳು ಇಂದಿನ ಸಾಮಾಜಿಕ ಮಾಧ್ಯಮಗಳಲ್ಲೂ ಸಿಗುತ್ತವೆ.

ಅಲ್ಲದೇ ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿಸಿಕೊಂಡವರ ಹೆಸರನ್ನು ಯಕ್ಷಗಾನ ಪ್ರದರ್ಶನದ ಕರಪತ್ರದಲ್ಲಿ ಕಾಣಿಸುವಾಗ ಫ್ರೊಫೆಸರ್, ಡಾಕ್ಟರ್ ಇತ್ಯಾದಿ ಅವರ ವೃತ್ತಿಯನ್ನು ಒಂದು ವಿಶೇಷಣದಂತೆ ಬಳಸುವುದು ಈಗಲೂ ಕಾಣುತ್ತೇವೆ. ‘ವಿದ್ಯಾವಂತರ’ ಎದುರು ವೃತ್ತಿ ಕಲಾವಿದರಿಗಿರುವ ಕೀಳರಿಮೆಯನ್ನು ಇದು ಕಾಣಿಸುತ್ತಿದೆಯೇ ಎನ್ನುವ ಪ್ರಶ್ನೆ ಸಂದರ್ಶನದ ಸಮಯದಲ್ಲಿ ನನ್ನನ್ನು ಕಾಡಿದೆ. ಸಂದರ್ಶನ ಮಾಡಲು ಭೇಟಿಯಾದಾಗ, ಹಳೆ ನಡೆ, ಮಟ್ಟುಗಳ ಬಲವಾದ ಸಮರ್ಥನೆ, (ಅವರು ರಂಗದಲ್ಲಿ ಅತ್ಯಂತ ಪ್ರಯೋಗಶೀಲರಾದ ಕಲಾವಿದರೇ ಆಗಿದ್ದರೂ, ಅಥವಾ ಅವರ ಪ್ರಯೋಗಶೀಲತೆಯು ಅವರ ಶೈಲಿಯಾಗಿ ಗುರುತಿಸಲ್ಪಟ್ಟವರೂ) ಮತ್ತು ಪ್ರಯೋಗಶೀಲತೆಯ ಅಗತ್ಯಗಳಿಗೆ ಅವರು ತಮ್ಮ ಸಂವಾದದಲ್ಲಿ ಆದ್ಯತೆಯನ್ನು ಕೊಡುವ ಕ್ರಮದಲ್ಲಿ, ನನ್ನನ್ನು ಸಮಾಜ ಗುರುತಿಸುವ ಅಸ್ಮಿತೆಗಳು – ಮೇಲ್ಜಾತಿ, ಅಂತಸ್ತು, ವಿದ್ಯಾವಂತೆ, ಮಹಿಳೆ ಅದರಲ್ಲೂ ಆಧುನಿಕ ಮಹಿಳೆ – ಅವರನ್ನು ಪ್ರಭಾವಿಸಿವೆ ಎಂದು ತೋರುತ್ತದೆ. ಹೆಚ್ಚಿನ ಪಾಲಿನ ಎಲ್ಲಾ ಸಂದರ್ಶನಗಳಲ್ಲೂ, ಯಕ್ಷಗಾನ ಹಾಳಾಗುತ್ತಿದೆ ಎನ್ನುವ ನೋಟವನ್ನಿಟ್ಟುಕೊಂಡೇ ನಾನು ಸಂದರ್ಶನ ಮಾಡಲು ಬಂದಿದ್ದೇನೆ ಎಂಬ ಪೂರ್ವನಿರ್ಧಾರಿತ ದೃಷ್ಟಿಕೋನವನ್ನು ಮೇಲೆ ಹೇಳಿದ ನನ್ನ ಅಸ್ಮಿತೆಯು ಕೊಟ್ಟಿದೆ ಎಂದು ನನಗನಿಸಿದೆ. ಹಾಗಾಗಿಯೇ ಮೂಲಕ್ಕೆ ಭಂಗ ಬರದಂತೆ ಮಾಡುವ ಪ್ರಯೋಗಗಳು ಎನ್ನುವುದಕ್ಕೆ ಕೊಡುವ ಒತ್ತು, ಮತ್ತು ಮೂಲವನ್ನು ಪ್ರಶ್ನೆ ಮಾಡುವಂತೆಯೇ ಇಲ್ಲ ಎನ್ನುವ ಧಾಟಿ ಸಂದರ್ಶನದುದ್ದಕ್ಕೂ ಹಲವು ಕಡೆ ಕಂಡಿದೆ.

ಮೂಲ ಕಥೆಗೆ ಭಂಗ ಬರಬಾರದು ಅನ್ನುವುದು ಕೂಡ ಯಕ್ಷಗಾನದ ಔಚಿತ್ಯದ ವಿಷಯವಾಗಿ ಕೆಲವು ಸಂದರ್ಶನಗಳಲ್ಲಿ ಬಂದಿದೆ. ಮೂಲ ಕಥೆಗೆ ಭಂಗ ಬರಬಾರದೆಂದಾಗ, ಯಕ್ಷಗಾನದಲ್ಲಿ ಶೂರ್ಪಣಕಿಗೆ ಮರುಮದುವೆಯೊ, ಅಥವಾ ಕರ್ಣನೇ ಕ್ಷತ್ರಿಯತ್ವ ಬೇಡ ಎಂದು ಸನ್ಯಾಸಿಯಾಗಿರುವ ಪ್ರಸಂಗಗಳಿವೆಯೇನೊ ಎಂದು ಹೊರಗಿನವರಿಗೆ ಕಾಣಬಹುದು. ಆದರೆ ಅಂತಹ ಪ್ರಸಂಗಗಳು ರಂಗದ ಮೇಲಿಲ್ಲ. ಹಾಗೇ ಬರುವುದು ಅನೌಚಿತ್ಯ ಅನ್ನುವುದು ಗಟ್ಟಿಯಾಗಿ ನೆಲೆಯೂರಿದ್ದಕ್ಕೇ ಅಂತಹ ಪ್ರಸಂಗಗಳನ್ನು ಹೊಸ ಪ್ರಸಂಗಕರ್ತರು ಬರೆಯದೇ ಮುಖ್ಯವಾಹಿನಿಯ ಪೌರಾಣಿಕ ಕತೆಯ ಸಹವಾಸವನ್ನೇ ಬಿಟ್ಟು ಹೊಸ ಕತೆಗಳ ಹೊಸ ಪ್ರಸಂಗಗಳನ್ನೇ ಬರೆಯುವುದಕ್ಕೂ ಒಂದು ಕಾರಣವಿರಬಹುದು. ಯಕ್ಷಗಾನದ ಮೂಲ ಉದ್ದೇಶವೇ ಪುರಾಣ ಪ್ರಸರಣ ಎನ್ನುವ ಆಲೋಚನೆಯೂ ಪ್ರಭಾವಿಸಿರಬಹುದು.

ಪಾತ್ರಗಳ ನಡಾವಳಿಯನ್ನು ವೇಷಧಾರಿಗಳು ನಿರ್ಧರಿಸುವಾಗಲೂ ಈ ಮೂಲ ಪಠ್ಯಕ್ಕೆ ಪಕ್ಕಾಗಿರುವ ಔಚಿತ್ಯ ಕೆಲಸ ಮಾಡುತ್ತದೆ. ಪ್ರಸಂಗ ಪಠ್ಯಗಳಲ್ಲಿ ಪಾತ್ರಗಳ ಎಲ್ಲಾ ವಿವರಗಳೂ ದಕ್ಕುವುದಿಲ್ಲ. ಹಾಗಿದ್ದಾಗ ದಕ್ಷನಿಗೆ ಎಷ್ಟು ಜನ ಹೆಣ್ಣುಮಕ್ಕಳು ಎನ್ನುವುದರಿಂದ ಹಿಡಿದು ಅಂಬೆಯು ಚಿತೆಗೆ ಹಾರುವಾಗಿನ ಕೊನೆಯ ಮಾತುಗಳ ತನಕ ಆಶುತ್ವದಲ್ಲಿ ಹುಟ್ಟಿ ಬೆಳೆದ ಪಾತ್ರ ನಡೆಗಳ ಔಚಿತ್ಯ ಆಗಾಗ ಪ್ರಶ್ನೆಯಾಗುತ್ತಾ ಬರುತ್ತದೆ.

(ಮುಂದುವರಿಯುವುದು)