ಎಲ್ಲರಿಗೂ ಸಮನಾಗಿ ಸಿಗುವ ಇಪ್ಪತ್ನಾಲ್ಕೇ ಘಂಟೆಗಳನ್ನು ಇವರೆಲ್ಲ ತಡೆದು ನಿಲ್ಲಿಸಿದರು ಹೇಗೆ? ಜೀವನಕ್ಕೆ ಬೇಕಾದ ಹಣ ಸಂಪಾದಿಸಿದರು ಹೇಗೆ? ಮನೆಯನ್ನು ತೂಗಿಸಿದರು ಹೇಗೆ? ಅರೆ ಹೊಟ್ಟೆ ಉಂಡೇ ಎಷ್ಟು ರಾತ್ರಿ ಕಳೆದರು? ಅಷ್ಟಾಗಿಯೂ ಒಂದೊಳ್ಳೆಯ ಪುಟ ಬರೆದ ಮೇಲೆ ಅವರ ತುಟಿಯ ಮೇಲೆ ಮೂಡಿದ ಮುಗುಳೆಂಥದು? ಅಪಹಾಸ್ಯಕ್ಕೊಳಗಾದರೇ? ಪ್ರೀತಿಸುವವರಿಂದ ದೂರವಾದರೇ? ಅವರು ತಮ್ಮ ಬರವಣಿಗೆಗಾಗಿ ತೆತ್ತ ಬೆಲೆಯೆಂಥದು? ಕಲೆಯಿಂದ ಸಿಗುವ ಸುಖ ಈ ಎಲ್ಲವನ್ನೂ ಮೀರಿದ್ದೇ?
“ಕಾವ್ಯಾ ಓದಿಗೆ ಹೊತ್ತಿಗೆ” ಅಂಕಣದಲ್ಲಿ ಬರವಣಿಗೆಯ ಕುರಿತು ಬರೆದಿದ್ದಾರೆ ಕಾವ್ಯಾ ಕಡಮೆ
ಬರವಣಿಗೆ ಸುಲಭವಲ್ಲ. ಅದು ಶಿಸ್ತು, ಶ್ರದ್ಧೆ, ಸಂಯಮ ಬೇಡುವ ಕೆಲಸ. ಕಡೆಯಲ್ಲಿ ಲೌಕಿಕವಾಗಿ ಮಾನ್ಯ ಮಾಡುವ ಯಾವ ಲಾಭವನ್ನೂ ಅದು ನೀಡುವುದಿಲ್ಲ. ಯಾವ ಭಾಷೆಯಲ್ಲೂ ನೀಡುವುದಿಲ್ಲ. ಆದರೂ ಬರಹಗಾರರು, ಕಲಾವಿದರು ಹಗಲು, ರಾತ್ರಿಯೆನ್ನದೇ ಜೀವ ಕೊಡುವಂಥ ಉತ್ಕಟತೆಯಲ್ಲಿ ಬರವಣಿಗೆ ಮತ್ತು ಇತರ ಕಲೋಪಾಸನೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಯಾಕದು? ಅವರನ್ನು ಅದೃಶ್ಯವಾಗಿ ಬೆನ್ನುಕೊಟ್ಟು ಸಲಹುವ ಶಕ್ತಿ ಯಾವುದು? ಈ ಪ್ರಶ್ನೆಗಳಿಗೆಲ್ಲ ಉತ್ತರ ಕಂಡುಕೊಳ್ಳಲು ತೊಡಗಿದಾಗ ಲೇಖಕ ಮೇಸನ್ ಕರ್ರಿ ಅವರಿಂದ ರೂಪಗೊಂಡ ಪುಸ್ತಕ ಈ ಡೈಲಿ ರಿಚುವಲ್ಸ್.
ಈ ಪುಸ್ತಕದಲ್ಲಿ ಜಗತ್ತಿನ ಬರಹಗಾರರು, ಸಂಗೀತಗಾರರು, ಕಲಾವಿದರು, ನೃತ್ಯಗಾರರು, ನಾಟಕಕಾರರು, ಕವಿಗಳು, ತತ್ವಜ್ಞಾನಿಗಳು, ಶಿಲ್ಪಿಗಳು, ಸಿನಿಮಾ ನಿರ್ದೇಶಕರು ಮತ್ತು ವಿಜ್ಞಾನಿಗಳು ತಮ್ಮ ದಿನಚರಿಯನ್ನು ಓದುಗರ ಮುಂದೆ ತೆರೆದಿಡುತ್ತ ಹೋಗುತ್ತಾರೆ. ಮೇಸನ್ ಕರ್ರಿ ಒಬ್ಬ ಬರಹಗಾರರಾಗಿರುವುದರಿಂದ ಬರವಣಿಗೆಯೆಂಬ ಕಲೆಯ ಮೇಲೆಯೇ ಈ ಪುಸ್ತಕ ಜಾಸ್ತಿ ಒತ್ತು ಕೊಡುತ್ತದೆ.
ಎಲ್ಲರಿಗೂ ಸಮನಾಗಿ ಸಿಗುವ ಇಪ್ಪತ್ನಾಲ್ಕೇ ಘಂಟೆಗಳನ್ನು ಇವರೆಲ್ಲ ತಡೆದು ನಿಲ್ಲಿಸಿದರು ಹೇಗೆ? ಜೀವನಕ್ಕೆ ಬೇಕಾದ ಹಣ ಸಂಪಾದಿಸಿದರು ಹೇಗೆ? ಮನೆಯನ್ನು ತೂಗಿಸಿದರು ಹೇಗೆ? ಅರೆ ಹೊಟ್ಟೆ ಉಂಡೇ ಎಷ್ಟು ರಾತ್ರಿ ಕಳೆದರು? ಅಷ್ಟಾಗಿಯೂ ಒಂದೊಳ್ಳೆಯ ಪುಟ ಬರೆದ ಮೇಲೆ ಅವರ ತುಟಿಯ ಮೇಲೆ ಮೂಡಿದ ಮುಗುಳೆಂಥದು? ಅಪಹಾಸ್ಯಕ್ಕೊಳಗಾದರೇ? ಪ್ರೀತಿಸುವವರಿಂದ ದೂರವಾದರೇ? ಅವರು ತಮ್ಮ ಬರವಣಿಗೆಗಾಗಿ ತೆತ್ತ ಬೆಲೆಯೆಂಥದು? ಕಲೆಯಿಂದ ಸಿಗುವ ಸುಖ ಈ ಎಲ್ಲವನ್ನೂ ಮೀರಿದ್ದೇ?
“Time is short, my strength is limited, the office is a horror, the apartment is noisy, and if a pleasant, straightforward life is not possible then one must try to wriggle through by subtle maneuvers” ಎನ್ನುತ್ತಾರೆ ಕಾಫ್ಕಾ ತಮ್ಮ ಸ್ನೇಹಿತೆ ಫೆಲೀಸ್ ಬಾವಳ್‌ರಿಗೆ ಬರೆದ ಪತ್ರವೊಂದರಲ್ಲಿ. ನಮಗೇನು ಮುಖ್ಯ ಎಂಬುದನ್ನು ಕಂಡುಕೊಂಡುಬಿಟ್ಟರೆ ಉಳಿದೆಲ್ಲವನ್ನೂ ಆ ದಿಕ್ಕಿನಲ್ಲೇ ಆಯೋಜಿಸಿಕೊಳ್ಳಬಹುದು ಎಂಬುದನ್ನು ಕಾಫ್ಕಾ ಈ ಮಾತುಗಳಲ್ಲಿ ಹೇಳಲು ಇಚ್ಛಿಸಿರಬಹುದೇನೋ. ಹೆಣ್ಣೊಬ್ಬಳು ಬರೆಯುವುದಕ್ಕೆ ಆಕೆಗೆ ಸ್ವಂತ ಹಣ ಮತ್ತು ತನ್ನದೇ ಆದ ಸ್ವಂತ ಕೋಣೆಯೊಂದು ಅತ್ಯವಶ್ಯಕ ಎಂಬ ವರ್ಜಿನಿಯಾ ವೂಲ್ಫ್ ಹೇಳಿದ ಮಾತು ಇದೇ ಸಂಗತಿಯ ಕುರಿತು ಬೆಳಕು ಚೆಲ್ಲುತ್ತದೆ.
ಡಬ್ಲ್ಯೂ ಎಚ್ ಆಡನ್
ಬ್ರಿಟಿಷ್ ಅಮೆರಿಕನ್ ಕವಿ ಆಡನ್ ದಿನಚರಿಯನ್ನ ಶಿಸ್ತಿನಿಂದ ಪಾಲಿಸುತ್ತಿದ್ದರು. “ಬರವಣಿಗೆಯಲ್ಲಿ ತೀವ್ರವಾಗಿ ತೊಡಗಿಕೊಳ್ಳಬೇಕಾದರೆ ಸಮಯವನ್ನು ಶಿಸ್ತಾಗಿ ಪಾಲಿಸುವುದನ್ನು ಕಲಿಯಬೇಕು. ದಿನವೊಂದರಲ್ಲಿ ಯಾವ ಹೊತ್ತಿಗೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸಿ ಮತ್ತು ದಿನವೂ ಅದೇ ಕೆಲಸವನ್ನು ಅದೇ ಸಮಯಕ್ಕೆ ಮಾಡಿ. ಆಗ ತೀವ್ರತೆ (ಪ್ಯಾಷನ್) ನಿಮಗೆ ಯಾವ ತೊಂದರೆಯನ್ನೂ ಕೊಡದೇ ಒಲಿಯುತ್ತದೆ” ಎನ್ನುತ್ತಾರೆ ಅವರು. ಮುಂಜಾನೆ ಆರಕ್ಕೆದ್ದು ಏಳರಿಂದ ಹನ್ನೊಂದೂವರೆಯವರೆಗೆ ಬರವಣಿಗೆಯಲ್ಲಿ ತೊಡಗುತ್ತಿದ್ದರಂತೆ. ರಾತ್ರಿ ಕುಳಿತು ಬರೆಯುವವರನ್ನು ಗುಮಾನಿಯಿಂದ ನೋಡುತ್ತಿದ್ದರಂತೆ. ಜಗತ್ತಿನ ಹಿಟ್ಲರ್‌ಗಳಷ್ಟೇ ರಾತ್ರಿ ಕೆಲಸ ಮಾಡುವವರು ಎನ್ನುವುದು ಅವರದೇ ಮಾತು.
ಬರಹಗಾರರು, ಕಲಾವಿದರು ಹಗಲು, ರಾತ್ರಿಯೆನ್ನದೇ ಜೀವ ಕೊಡುವಂಥ ಉತ್ಕಟತೆಯಲ್ಲಿ ಬರವಣಿಗೆ ಮತ್ತು ಇತರ ಕಲೋಪಾಸನೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಯಾಕದು? ಅವರನ್ನು ಅದೃಶ್ಯವಾಗಿ ಬೆನ್ನುಕೊಟ್ಟು ಸಲಹುವ ಶಕ್ತಿ ಯಾವುದು?
ಸಿಮೋನ್ ದಿ ಬುಹ್ವಾ
ಇಪ್ಪತ್ತನೆಯ ಶತಮಾನದ ಫ್ರಾನ್ಸಿನ ಪ್ರಗತಿಪರ ಚಿಂತಕರ ಯಾದಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲವವರು ಜೀನ್ ಪಾಲ್ ಸಾತ್ರ ಮತ್ತು ಸಿಮೋನ್ ದಿ ಬುಹ್ವಾ. 1965ರಲ್ಲಿ ಪ್ರಾರಿಸ್ ರಿವ್ಯೂ ಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲಿ ಸಿಮೋನ್, “ಬೆಳಿಗ್ಗೆ ಎದ್ದ ತಕ್ಷಣ ಚಹ ಕುಡಿದು ಹತ್ತು ಘಂಟೆಯಿಂದ ಒಂದು ಘಂಟೆಯ ತನಕ ಕೆಲಸ ಮಾಡುತ್ತೇನೆ. ಆ ನಂತರ ಸ್ನೇಹಿತರನ್ನು ಕಾಣುವುದು. ಐದು ಘಂಟೆಗೆ ಮತ್ತೆ ಶುರು ಮಾಡಿದ ಬರವಣಿಗೆ ರಾತ್ರಿ ಒಂಬತ್ತರ ತನಕ ಸಾಗುತ್ತದೆ. ಮಧ್ಯಾಹ್ನ ಬಿಟ್ಟ ಎಳೆ ಅಷ್ಟೇನೂ ಕಷ್ಟಪಡದೇ ಸಿದ್ಧಿಸುತ್ತದೆ” ಎನ್ನುತ್ತಾರೆ. ಬುಹ್ವಾ ಸಾತ್ರರ ಜೊತೆಗೆ ನಿರಂತರ ಸಾಹಚರ್ಯದಲ್ಲಿದ್ದರೂ ಇಬ್ಬರೂ ಎಷ್ಟು ಜನ ಪ್ರೇಮಿಗಳ ಸಂಗದಲ್ಲಿಯೂ ಇರಬಹುದು ಎಂಬ ಒಪ್ಪಂದದಲ್ಲಿದ್ದರು. ಕೆಲಕಾಲ ಸಿಮೋನ್‌ರ ಪ್ರೇಮಿಯಾದ ಕ್ಲೌಡ್ ಲ್ಯಾಂಜ್‌ಮನ್ ಒಂದೆಡೆ ಹೀಗೆ ಹೇಳಿದ್ದಾರೆ “ಸಿಮೋನ್‌ರ ಬದುಕಿನಲ್ಲಿ ಮುಗಿಯದ ಪಾರ್ಟಿಗಳಿರಲಿಲ್ಲ, ರಿಸೆಪ್ಶನ್‌ಗಳಿರಲಿಲ್ಲ, ಬೂಜ್ರ್ವಾ ಮೌಲ್ಯಗಳ ನಿರ್ವಹಣೆಗೆ ಅವರ ಬದುಕಿನಲ್ಲಿ ಜಾಗವಿರಲಿಲ್ಲ. ಯಾವುದು ಅತ್ಯವಶ್ಯಕವೋ ಅದಷ್ಟೇ ಇತ್ತು ಬದುಕಿನಲ್ಲಿ. ಕೋಲಾಹಲ, ಗೊಂದಲ, ಗಡಿಬಿಡಿಯಿಲ್ಲದ ಈ ಬದುಕು ಅವರಿಗೆ ಕೆಲಸ ಮಾಡುವ ಸರಾಗವನ್ನು ಒದಗಿಸಿಕೊಡುತ್ತಿತ್ತು.”
ಸೋಮರ್‍ಸೆಟ್ ಮೊಗ್ಹಮ್
ಮೊಗ್ಹಮ್‌ರಿಗೆ ಬರವಣಿಗೆಯೂ ಕುಡಿತದಂತೆಯೇ. ಒಮ್ಮೆ ರೂಢಿಯಾಗಿಬಿಟ್ಟರೆ, ಹಾಗೆಲ್ಲ ಸುಲಭವಾಗಿ ಈ ಚಾಳಿ ಬಿಟ್ಟು ಹೋಗುವುದಿಲ್ಲ ಅಂತ ನಂಬಿದ್ದರು. ಬದುಕಿದ್ದ ತೊಂಬತ್ತೆರಡು ವರ್ಷಗಳಲ್ಲಿ ಎಪ್ಪತ್ತೆಂಟು ಪುಸ್ತಕಗಳನ್ನು ರಚಿಸಿದ ಇವರು ಬರವಣಿಗೆಯನ್ನು ಹವ್ಯಾಸವೆನ್ನುವುದಕ್ಕಿಂತ ಚಟವೆನ್ನುವುದೇ ಸರಿಯೇನೋ ಎಂದಿದ್ದಾರೆ. ಮೊಗ್ಹಮ್ ಮುಂಜಾನೆಯೆದ್ದು ಮೂರರಿಂದ ನಾಲ್ಕು ತಾಸು ಬರೆಯುತ್ತಿದ್ದರು. ಒಂದರಿಂದ ಒಂದೂವರೆ ಸಾವಿರ ಶಬ್ದಗಳ ದಿನದ ಮಿತಿಯನ್ನು ತಮ್ಮ ಮೇಲೆ ಹೊರಿಸಿಕೊಂಡಿದ್ದರು. ಮುಂಜಾನೆ ಸ್ನಾನ ಮಾಡುತ್ತ ಅಂದು ಬರೆಯಲಿರುವ ಮೊದಲೆರಡು ವಾಕ್ಯಗಳನ್ನು ಯೋಚಿಸುತ್ತಿದ್ದರಂತೆ. ಆ ನಂತರ ಡೆಸ್ಕಿಗೆ ಹೋಗಿ ಆ ಎರಡು ಸಾಲುಗಳನ್ನು ಬರೆದಾಗ ಅದನ್ನು ಮುಂದುವರೆಸಲು ಅವರಿಗೆ ಏನೇನೂ ಕಷ್ಟವಾಗುತ್ತಿರಲಿಲ್ಲ. “ಬರವಣಿಗೆಯಿಲ್ಲದಿದ್ದರೆ ಬದುಕು ಒಂಟಿಯೇ” ಎಂದು ನಂಬಿದವರು.
ಆದರೂ ಈ ಪುಸ್ತಕದ ನೂರಾರು ಜನ ಸಾಧಕರಲ್ಲಿ ಹೆಣ್ಣುಮಕ್ಕಳ ಹೆಸರುಗಳು ಇಪ್ಪತ್ತಕ್ಕಿಂಥ ಕಡಿಮೆ ಎನ್ನುವುದು ತುಸು ವಿಚಲಿತಗೊಳಿಸುವ ಸಂಗತಿ. ಚರಿತ್ರೆಯಲ್ಲೂ ಹಾಗೆಯೇ ಅಲ್ಲವೇ? ಇದಕ್ಕೆ ಉತ್ತರವೆಂಬಂತೆ ಮೇಸನ್ ಕರ್ರಿ ಈ ಪುಸ್ತಕದ ನಂತರ ವಿಮೆನ್ ಅಟ್ ವರ್ಕ್ ಎಂಬ ಇನ್ನೊಂದು ಪುಸ್ತಕವನ್ನೂ ಪ್ರಕಟಿಸಿದರು. ಈ ಎರಡನೆಯ ಪುಸ್ತಕದಲ್ಲಿ ನೂರಾರು ಸಾಧಕಿಯರ ದಿನಚರಿಗಳನ್ನು ಓದಲು ಸಿಗುತ್ತದೆ. ಓದುತ್ತ ಒಂದು ಹಂತವಾದ ಮೇಲೆ, ಪತ್ರಕರ್ತರಿಗೆ ಈ ಸಾಧಕರು ಅರ್ಧಸತ್ಯವನ್ನು ಮಾತ್ರ ತಿಳಿಸುತ್ತಿದ್ದಾರೇನೋ ಎಂಬ ಸಂಶಯವೂ ಬರುತ್ತದೆ. ಬರವಣಿಗೆಯ ಬಗೆಗೆ ಈ ಲೇಖಕರಿಗಿರುವ ತೀವ್ರವಾದ ತಹತಹ, ಒಂದಿಷ್ಟು ಖಾಸಗೀ ಸಂಗತಿಗಳ ಅನಾವರಣ ಈ ಪುಸ್ತಕವನ್ನು ಅತಿ ಸಾಧಾರಣ ಸೆಲ್ಫ್ ಹೆಲ್ಪ್ ಪುಸ್ತಕವಾಗುವುದರಿಂದ ತಪ್ಪಿಸಿವೆ. ಈ ಎರಡೂ ಪುಸ್ತಕಗಳ ಎಷ್ಟೊಂದು ಬಿಡಿ ಬರಹಗಳು dailyroutines.typepad.com ಈ ಬ್ಲಾಗ್‌ನಲ್ಲಿ ಲಭ್ಯವಿವೆ.
ವಿ ಎಸ್ ಪ್ರಿಚೆಟ್ ಎಂಬ ಬ್ರಿಟಿಷ್ ಬರಹಗಾರ ತಮ್ಮ ಒಂದು ಪುಸ್ತಕದಲ್ಲಿ “the great men turn out to be all alike. They never stop working. They never lose a minute. It is very depressing” ಎಂದು ಬರೆಯುತ್ತಾರೆ. ತಕ್ಷಣದ ಪ್ರಸಿದ್ಧಿಯನ್ನು ಆರಾಧಿಸುತ್ತಿರುವ ಈ ದಿನಗಳಲ್ಲಿ ಪ್ರಿಚೆಟ್‌ರ ಈ ಮಾತು ವಿಚಿತ್ರವಾದ ನೆಮ್ಮದಿಯೊಂದನ್ನು ಕರುಣಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಇದು ಈ ಸರಣಿಯ ನನ್ನ ಕೊನೆಯ ಅಂಕಣ. ಕಳೆದೊಂದು ವರ್ಷದಿಂದ ಈ ಬರಹಗಳನ್ನು ಓದಿ ಪತ್ರಿಸಿದ ಸ್ನೇಹಿತರಿಗೆ, ತಿದ್ದಿದ ಹಿರಿಯರಿಗೆ ನನ್ನದೊಂದು ನಲ್ಮೆಯ ಸಲಾಮನ್ನು ಈ ಮೂಲಕ ಅರ್ಪಿಸುತ್ತಿದ್ದೇನೆ.
ಕಾವ್ಯಾ ಕಡಮೆ ಉತ್ತರ ಕನ್ನಡ ಜಿಲ್ಲೆಯ ಕಡಮೆಯವರು. ಸದ್ಯ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸ. ಧ್ಯಾನಕೆ ತಾರೀಖಿನ ಹಂಗಿಲ್ಲ, ಜೀನ್ಸು ತೊಟ್ಟ ದೇವರು (ಕವನ ಸಂಕಲನಗಳು) ಪುನರಪಿ (ಕಾದಂಬರಿ) ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು (ನಾಟಕಗಳು) ದೂರ ದೇಶವೆಂಬ ಪಕ್ಕದ ಮನೆ (ಪ್ರಬಂಧಗಳು.) ಮಾಕೋನ ಏಕಾಂತ (ಕಥಾ ಸಂಕಲನ) ಇವರ ಪ್ರಕಟಿತ ಕೃತಿಗಳು.