‘ಜಬ್ ವಿ ಮೆಟ್’ ಸಿನೆಮಾ ನೋಡಿದಾಗಲಿಂದ ಕೂಡ ಆ ಕರೀನ ಕಪೂರ್‌ಳ ಸ್ಟೈಲ್‌ನಲ್ಲೇ ಶಾಹಿದ್‌ನಂತಹ ಬೆಣ್ಣೆ ಹುಡುಗನೊಬ್ಬನ ಜೊತೆ ಒಂದು ರಾತ್ರಿ ಹಳ್ಳಿಯೊಂದರಲ್ಲಿ ಎಗ್ಸ್ಯಾಕ್ಟ್ಲೀ ಹಾಗೇ ಕಳೆಯಬೇಕೆನ್ನುವ ಬಯಕೆ ಉಂಟಾಗಿದ್ದದ್ದು ಸುಳ್ಳಲ್ಲ. ಅದೇ ಆಸೆಯಲ್ಲಿ ಹೊಕ್ಕೆ ರತ್ನಾಲ್ ಎನ್ನುವ ಹಳ್ಳಿಯೊಂದನ್ನು. ಕಚ್ ಎನ್ನುವ ಬಿಳಿ ಮರಳುಗಾಡಿನ ಪುಟ್ಟದಾದ ಚೊಕ್ಕವಾದ ಹಳ್ಳಿಯದು. ಆ ಬೆಳದಿಂಗಳಲ್ಲಿ ಸಿನೆಮಾದಲ್ಲಿ ಆಗೋ ಹಾಗೆ ಬೆಂಕಿಗೆ ಬೆಣ್ಣೆ ಕರಗಲೇ ಇಲ್ಲ, ಕಾರಣ ನನ್ನ ವಾಚಾಳಿತನ! ಕಂಡಕಂಡವರ ಬಳಿ ಮಾತನಾಡುತ್ತಾ ಕಳೆದ ಆ ರಾತ್ರಿಯಲ್ಲಿ ಹೃದಯ ಕಲಕುವ ವಿಷಯ ತಿಳಿದುಕೊಂಡಿದ್ದನ್ನು ಹಂಚಿಕೊಳ್ಳದಿದ್ದರೆ ಹಗುರಾದೇನು ಹೇಗೆ?
“ಕಂಡಷ್ಟೂ ಪ್ರಪಂಚ” ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ ನಿಮ್ಮ ಓದಿಗೆ.

 

ಜೋಳಿಗೆಯಲ್ಲಿ ಕೈಯಾಡಿಸುತ್ತಿದ್ದೆ. ಕಥೆಯಾದ ಮೂವರು ಹುಡುಗಿಯರು “ನಮ್ಮನ್ನು ಹೊರತೆರೆಯೇ” ಎನ್ನುತ್ತಿದ್ದರು. ಇನ್ನೇನು ಅವರ ಧ್ವನಿಗೆ ಅಕ್ಷರವಾಗಿಯೇ ಬಿಡಬೇಕು ಎನ್ನುವ ಹೊತ್ತಿನಲ್ಲಿ ಮೂರು ಹಳ್ಳಿಗಳು ಕೈ ತಡವಿದವು. ಹೂಂ, ಹುಡುಗೀರ ಕಥೆ ಎಂದೂ ಇದ್ದದ್ದೇ ಅದಕ್ಕೆ ನನಗೀಗ ಹಳ್ಳಿಗಳ ಕಥೆ ಹೇಳುವುದೇ ಸೂಕ್ತ ಅನ್ನಿಸಿತು.

ಒಂದ್ನಾಲ್ಕು ವರ್ಷಗಳ ಹಿಂದೆ ರಾಜಸ್ಥಾನದ ಬಿಕನೇರ್ ಜಿಲ್ಲೆಯ ಕುಗ್ರಾಮವೊಂದಕ್ಕೆ ಹೋಗಿದ್ದೆ. ಹದಿನಾರು ಮನೆಗಳಲ್ಲಿ ಎಲ್ಲಾ ವಯೋಮಾನದ ಎಪ್ಪತ್ತಾರು ಜನ, ಹತ್ತಾರು ಒಂಟೆಗಳು. ಆ ಮರಳುಗಾಡನ್ನು ಹಳ್ಳಿಯನ್ನಾಗಿಸಿಕೊಂಡಿದ್ದರು. ವಿದ್ಯುತ್ ಇಲ್ಲ, ನೀರಿಲ್ಲ, ಅಂಗಡಿ ಮುಂಗಟ್ಟಿಲ್ಲ, ರಸ್ತೆಯೂ ಇಲ್ಲ. ಗುಡುಗುಡು ಹುಕ್ಕಾ ಹಾಕುತ್ತಿದ್ದ ಒಂದ್ನಾಲ್ಕು ವೃದ್ಧರೊಂದಿಗೆ ನನ್ನ ಕುಶಲೋಪರಿ ಸಾಂಪ್ರತ. ಏನೇನೂ ಮೂಲಭೂತ ಸೌಲಭ್ಯಗಳಿಲ್ಲದೆ ಬದುಕುವುದಾದರೂ ಹೇಗೆ ಎನ್ನುವ ನನ್ನ ಪ್ರಶ್ನೆಗೆ ಅವರೆಲ್ಲರ ಒಕ್ಕೊರಲ ಉತ್ತರ:

“ಕರೆಂಟ್ ಬಂದರೆ ಟೀವಿ ಬರುತ್ತೆ. ಅಡುಗೆ ಮನೆಯ ಸವಲತ್ತುಗಳು ಬರುತ್ತೆ. ಯುವಕರು ಹೆಂಗಸರು ಸೋಮಾರಿಗಳಾಗಿ ಹಾಳಾಗಿಬಿಡುತ್ತಾರೆ. ಆಮೇಲೆ ಓದೋದು ಬರೆಯೋದು ಅಂತ ಸಿಟಿ ಸೇರಿಕೊಂಡು ನಿರ್ನಾಮವಾಗ್ತಾರೆ. ಈಗ ಮೈಬಗ್ಗಿಸಿ ದುಡೀತಿದ್ದಾರೆ. ಅದಕ್ಕೆ ಆರೋಗ್ಯವೂ ಇದೆ. ಆರೋಗ್ಯ ಇದ್ದ್ಮೇಲೆ ರಸ್ತೆ ಯಾಕೆ ?!”.

ಇದ್ಯಾವ ತರ್ಕವೋ ನನಗೆ ಅರಿವಾಗದ್ದು! ನಂತರದ ದಿನಗಳಲ್ಲಿ ಬೇಸಾಯ ತೊರೆದು ಹಳ್ಳಿಗರೆಲ್ಲಾ ಶಹರಿಗಳಾಗುತ್ತಿರುವುದನ್ನು ನೋಡಿದಾಗಲೆಲ್ಲಾ ತರ್ಕಹೀನರಂತೆ ಕಂಡಿದ್ದರೂ ಆ ಹಿರಿಯರು ಹೇಳಿದ ವಿಷಯವೂ ಇದಕ್ಕೇ ಕಾರಣವಿರಬಹುದೇ ಅಂತ ಯೋಚಿಸುತ್ತಿದ್ದೆ. ರೀಫೈನ್ಡ್ ಊಟವನ್ನು ಚಮಚ ಫೋರ್ಕ್‍ಗಳಲ್ಲಿ ತಿಂದು ಬೆಳೆದವಳಿಗೆ ಹಳ್ಳಿಯ ಬಗ್ಗೆ ಏನೇನೋ ತಿಳಿದಿಲ್ಲ ಸತ್ಯ. ಆದರೂ ಅವರುಗಳ ಮಾತುಗಳನ್ನು ಮನಸ್ಸು ಒಪ್ಪುತ್ತಿರಲಿಲ್ಲ. ಈ ಜಿಜ್ಞಾಸೆಯೊಂದಿಗಿನ ಪಯಣದಲ್ಲೇ…

ನೋಡಿದ ಮತ್ತೊಂದು ಹಳ್ಳಿ ಚೋದ್ವಾಡ್. ದೀರು ಭಾಯಿ ಅಂಬಾನಿಯ ಹುಟ್ಟು ಹಳ್ಳಿ. ಗುಜರಾತ್‌ನಲ್ಲಿದೆ. ದಿನಸಿ ಅಂಗಡಿಯಲ್ಲಿ ಒಂದೊಮ್ಮೆ ಐದು ರೂಪಾಯಿ ಸಾಲ ಬರೆಸಿದ್ದ ಅಂಬಾನಿ ಇವತ್ತು ಈ ಭೂಗೋಳದ ದಂತಕಥೆ. ತಾನಿದ್ದ ಮನೆಯನ್ನು ದೊಡ್ಡ ಬಂಗಲೆಯನ್ನಾಗಿಸಿ ಇಡೀ ಹಳ್ಳಿಯನ್ನು ಗ್ಲೋಬಲೈಸ್ಡ್ ಮಾಡಿದ್ದಾರೆ ಅಂಬಾನಿ ಕುಟುಂಬದವರು. ಅಂಬಾನಿ ಯಶೋಗಾಥೆಯ ಮೆಮೋರಿಯಲ್, ಹೈಟೆಕ್ ಆಸ್ಪತ್ರೆ, ಥಳಥಳ ಹೊಳೆಯುವ ರಸ್ತೆ, ಅಂತರಾಷ್ಟ್ರೀಯ ಮಟ್ಟದ ವಿದ್ಯಾಭ್ಯಾಸದ ವ್ಯವಸ್ಥೆ, ಸುಸಜ್ಜಿತಗೊಂಡ ವ್ಯವಸಾಯ ಮಾರುಕಟ್ಟೆ ಮತ್ತು ಇನ್ನೂ ಏನೇನೋ ನುಣುಪಾದ ಅನುಕೂಲಗಳು. ಆದರೂ ಇಲ್ಲಿನ ಮುಖ್ಯ ಉದ್ಯೋಗ ವ್ಯವಸಾಯ. ತೆಂಗಿನ ತೋಟಕ್ಕೆ ಹೆಸರುವಾಸಿ ಈ ಊರು. ಉನ್ನತ ವ್ಯಾಸಂಗ ಮಾಡಿಯೂ ಅಲ್ಲಿನ ಯುವಕರು ಆರಂಭದಲ್ಲೇ ತೊಡಗಿಕೊಳ್ಳುತ್ತಿದ್ದಾರೆ. ಕೃಷಿವಿರೋಧಿ ಮನಸ್ಸಿಲ್ಲದ ಚೋದ್ವಾಡ್, ಕಣ್ಣಿಗೆ ಮತ್ತು ಮನಸ್ಸಿಗೆ ನಿಜಾರ್ಥದಲ್ಲಿ ಒಂದು ಹಬ್ಬವಿದ್ದಂತೆ. ಮೂಲಭೂತ ಸೌಕರ್ಯಗಳೆಲ್ಲ ಇದ್ದರೂ ಹಳ್ಳಿ ಎನ್ನುವುದನ್ನು ಹೇಗೆ ಸಂಭ್ರಮವನ್ನಾಗಿಸಿಕೊಳ್ಳಬಹುದು ಅನ್ನುವುದನ್ನು ಇಲ್ಲಿ ನೋಡಿ ಕಲಿಯಬೇಕು. ಇಷ್ಟಾದರೂ ನನ್ನನ್ನು ಚಕಿತಗೊಳಿಸಿದ ಈ ಊರಿನ ಅಂಶ ಏನು ಗೊತ್ತಾ? ಅಲ್ಲಿನ ಜನರಿಗೆ ಅಂಬಾನಿಯರ ನಡುವೆ ಪಾಲಿಗಾಗಿ ನಡೆದ ವ್ಯಾಜ್ಯದ ಬಗ್ಗೆ ತಿಳಿದೇ ಇಲ್ಲ. ಅವರಿಗೆ ಅಲ್ಲಿ ಈಗಲೂ ಕೂಡ ಅಂಬಾನಿ ಎಂದರೆ ಅಂಬಾನಿ ಮಾತ್ರ. ನಾವು ತಿಳಿದುಕೊಂಡಿರುವ ಹಾಗೆ ಅಂಬಾನಿ ಎಂದರೆ ಅಪ್ಪ ಮಾಡಿಟ್ಟ ಆಸ್ತಿಯನ್ನು ಕೋರ್ಟ್‌ನಲ್ಲಿ ಹಂಚಿಕೊಂಡ ಸಹೋದರರಲ್ಲ. ಬಹುಶಃ ಇದಕ್ಕೇ ಇರಬೇಕು ಸುಸಜ್ಜಿತಗೊಂಡಿದ್ದರೂ ಹಳ್ಳಿಯೊಂದು ಭರಪೂರ ಉಸಿರಾಡುತ್ತಿದೆ ಅಲ್ಲಿ ಹಳ್ಳಿಯಾಗಿಯೇ. ಹೀಗಂದುಕೊಂಡು ಮುಂದುವರೆಸಿದ್ದ ಪಯಣದಲ್ಲಿ. . .

(ಧೀರೂಭಾಯಿ ಅಂಬಾನಿ ಹುಟ್ಟಿದ ಮನೆ)

“ಕರೆಂಟ್ ಬಂದರೆ ಟೀವಿ ಬರುತ್ತೆ. ಅಡುಗೆ ಮನೆಯ ಸವಲತ್ತುಗಳು ಬರುತ್ತೆ. ಯುವಕರು ಹೆಂಗಸರು ಸೋಮಾರಿಗಳಾಗಿ ಹಾಳಾಗಿಬಿಡುತ್ತಾರೆ. ಆಮೇಲೆ ಓದೋದು ಬರೆಯೋದು ಅಂತ ಸಿಟಿ ಸೇರಿಕೊಂಡು ನಿರ್ನಾಮವಾಗ್ತಾರೆ. ಈಗ ಮೈಬಗ್ಗಿಸಿ ದುಡೀತಿದ್ದಾರೆ. ಅದಕ್ಕೆ ಆರೋಗ್ಯವೂ ಇದೆ. ಆರೋಗ್ಯ ಇದ್ದ್ಮೇಲೆ ರಸ್ತೆ ಯಾಕೆ ?!”.

‘ಜಬ್ ವಿ ಮೆಟ್’ ಸಿನೆಮಾ ನೋಡಿದಾಗಲಿಂದ ಕೂಡ ಆ ಕರೀನ ಕಪೂರ್‌ಳ ಸ್ಟೈಲ್‌ನಲ್ಲೇ ಶಾಹಿದ್‌ನಂತಹ ಬೆಣ್ಣೆ ಹುಡುಗನೊಬ್ಬನ ಜೊತೆ ಒಂದು ರಾತ್ರಿ ಹಳ್ಳಿಯೊಂದರಲ್ಲಿ ಎಗ್ಸ್ಯಾಕ್ಟ್ಲೀ ಹಾಗೇ ಕಳೆಯಬೇಕೆನ್ನುವ ಬಯಕೆ ಉಂಟಾಗಿದ್ದದ್ದು ಸುಳ್ಳಲ್ಲ. ಅದೇ ಆಸೆಯಲ್ಲಿ ಹೊಕ್ಕೆ ರತ್ನಾಲ್ ಎನ್ನುವ ಹಳ್ಳಿಯೊಂದನ್ನು. ಕಚ್ ಎನ್ನುವ ಬಿಳಿ ಮರಳುಗಾಡಿನ ಪುಟ್ಟದಾದ ಚೊಕ್ಕವಾದ ಹಳ್ಳಿಯದು. ಆ ಬೆಳದಿಂಗಳಲ್ಲಿ ಸಿನೆಮಾದಲ್ಲಿ ಆಗೋ ಹಾಗೆ ಬೆಂಕಿಗೆ ಬೆಣ್ಣೆ ಕರಗಲೇ ಇಲ್ಲ ಕಾರಣ ನನ್ನ ವಾಚಾಳಿತನ! ಕಂಡಕಂಡವರ ಬಳಿ ಮಾತನಾಡುತ್ತಾ ಕಳೆದ ಆ ರಾತ್ರಿಯಲ್ಲಿ ಹೃದಯ ಕಲಕುವ ವಿಷಯ ತಿಳಿದುಕೊಂಡಿದ್ದನ್ನು ಹಂಚಿಕೊಳ್ಳದಿದ್ದರೆ ಹಗುರಾದೇನು ಹೇಗೆ?

(ಭುಜ್ ಹಳ್ಳಿಯ ಬಳಿಯಿರುವ ಪಾಕಿಸ್ತಾನೀ ಮಹಿಳೆ)

ಈಗಲೂ ಅತೀ ಹೆಚ್ಚಿನ ಸಂಖ್ಯೆಯ ಬಾಲ್ಯ ವಿವಾಹಕ್ಕೆ ಕುಖ್ಯಾತಿ ಹೊಂದಿರುವ ಈ ಹಳ್ಳಿಯ strength ಏನು ಗೊತ್ತಾ? ಅಲ್ಲಿನ ಹೆಂಗಸರು. ಶೇಕಡ ಅರವತ್ತಕ್ಕೂ ಮೀರಿ ಇರುವ ಗಂಡನನ್ನು ಕಳೆದುಕೊಂಡ ಹೆಂಗಸರದೇ ಅಲ್ಲಿ ಕಾರುಬಾರು. ಇವರೆಲ್ಲರೂ transport ವ್ಯಾಪಾರದಲ್ಲಿ ಸಿದ್ಧಹಸ್ತರು. ದೇಶದೆಲ್ಲೆಡೆ ಇಂದಿಗೂ ಓಡಾಡುತ್ತಿರುವ ಟ್ರಕ್‌ಗಳಲ್ಲಿ ಸಾವಿರದಿನ್ನೂರಕ್ಕೂ ಮಿಗಿಲಾದ ಟ್ರಕ್‌ಗಳು ಇಲ್ಲಿನ ಮಹಿಳೆಯರ ಖಾತೆಯಲ್ಲಿದೆ. ಇವರೆಲ್ಲಾ ಇಷ್ಟಪಟ್ಟೇ ಈ ಕೆಲಸಕ್ಕೆ ಬಂದವರಲ್ಲ. ಗಂಡಂದಿರು ಟ್ರಕ್ ಓಡಿಸುತ್ತಲೇ ಅಪಘಾತದಲ್ಲಿ ಮೃತಪಟ್ಟು ಕುಟುಂಬಕ್ಕೆ ತಂದೊಡ್ಡಿದ ಅಸಹಾಯಕತೆಯನ್ನು ಬದುಕಾಗಿಸಿಕೊಳ್ಳಲು ಅನಿವಾರ್ಯವಾಗಿ ಜಗತ್ತಿಗೆ ದುಮುಕಿದ ಹೆಣ್ಣುಮಕ್ಕಳಿವರು. ತಾವೇ ಶಾಲೆ ಕಟ್ಟಿಕೊಂಡಿದ್ದಾರೆ. ರಸ್ತೆ ಮಾಡಿಕೊಂಡಿದ್ದಾರೆ. ಬ್ಯಾಂಕ್ ಅನ್ನು ವ್ಯವಸ್ಥಿತಗೊಳಿಸಿಕೊಂಡಿದ್ದಾರೆ. ಖಾಲಿ ಬೆನ್ನಿನ ರವಿಕೆ ತೊಡುವ ಇಲ್ಲಿನ ಹೆಂಗಸರು ಗಂಡುಜಗತ್ತಿನ ಕ್ರೌರ್ಯಕ್ಕೆ ಬೆನ್ನು ಹಾಕಿ ಗಟ್ಟಿಯಾಗಿ ನಿಂತಿದ್ದಾರೆ. ಹಳ್ಳಿಯ ಬಾಳನ್ನು ತೂಗಿಸುತ್ತಿದ್ದಾರೆ. ಹೆಂಗಸು ಅನ್ನುವುದನ್ನು ದೇಹದಿಂದ ಆಚೆಗೆ ವಿಸ್ತಾರವಾಗಿ ನೋಡಬೇಕಾದರೆ ರತ್ನಾಲ್‌ನ ಹೆಣ್ಣು ಮಕ್ಕಳನ್ನು ಭೇಟಿ ಆಗಲೇ ಬೇಕೊಮ್ಮೆ. ಇವರೊಡನೆ ಮಾತನಾಡಿ, ಕುಳಿತು, ನಿಂತು, ಉಂಡು ಮನಸ್ಸು ನಿಶ್ವಾಸವಾಗುತ್ತಿರುವ ಹೊತ್ತಿನಲ್ಲೇ ನೆನಪಾಯಿತು ಪತ್ರಕರ್ತ ಮಿತ್ರರೊಬ್ಬರು ಹೇಳುತ್ತಲೇ ಇರುವ ಮಾತು.

ನಮ್ಮೂರಿಗೇ ಆತುಕೊಂಡತಿರುವ ಒಂದು ಹಳ್ಳಿಯಲ್ಲಿ ಗಂಡ ತೀರಿಕೊಂಡ ಕೂಡಲೇ ಹೆಣ್ಣನ್ನು ಮಾರಾಟಕ್ಕಿಡುತ್ತಾರೆ ಅಂತ. ಕಲ್ಪನೆಯೆಂಬ ಸ್ಮಶಾನದಲ್ಲಿ ಗುಲಾಬಿ ಗುಚ್ಛಕ್ಕಾಗಿ ಕಾಯುತ್ತಿರುವ ವಾಸ್ತವಿಕತೆ ಎನ್ನುವ ಗೋರಿಗಳಂತೆ ಇಂತಹ ಹಳ್ಳಿಗಳು, ಅಲ್ಲಿನ ನಮ್ಮವರು. ಛೇ, ಮಾನವೀಯತೆಯು ಮಾರಾಟಕ್ಕಿರುವ ಹಳ್ಳಿಗಳಿಗೂ ರತ್ನಾಲ್‌ನ ಭೂತ ಒಮ್ಮೆ ಹೊಕ್ಕಿ ಬಿಡಬಾರದೇ ಅನ್ನಿಸುತ್ತಿರುವ ಹೊತ್ತಿನಲ್ಲಿ. . . .

*****

(ಗಫೂರು ಕುಟುಂಬದ ರೋಗನ್ ಕಲೆ)

ಇದೀಗ ಜೋಳಿಗೆಯಲ್ಲಿ ನಾಲ್ಕನೆಯ ಹಳ್ಳಿಯೊಂದು “ನನ್ನ ಕಥೆಯೂ ಹೇಳಿಬಿಡು” ಅಂತ ದುಂಬಾಲು ಬೀಳುತ್ತಿದೆ. ಇಕ್ಕೊಳ್ಳಿ ನಿರೋಣಿ ಎನ್ನುವ ಹಳ್ಳಿಕಥೆ. ಅದೆ ರೋಗನ್ ಕಲೆಗೆ ಪ್ರಸಿದ್ಧಿ ಪಡೆದಿದೆಯಲ್ಲ, ಹೌದು ಹೌದು ಅದೇ ಹಳ್ಳಿ. ವಿಶ್ವಖ್ಯಾತಿಯ ಗಫೂರ್ ಭಯ್ಯ ವಂಶದ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಎಂಟನೇ ಜೆನೆರೇಷನ್. ಪ್ರಪಂಚದಲ್ಲಿ ರೋಗನ್ ಕಲೆ ಇದೊಂದೇ ಹಳ್ಳಿಯಲ್ಲಿ ನೋಡಲು ಸಿಗುವುದಂತೆ. ಇವರ ಕುಟುಂಬದವರು ಮಾತ್ರ ಮಾಡುವುದಂತೆ. ಸಹೋದರ ಸಮೀರ್ ಕಲೆಯನ್ನು ಮಾಡುತ್ತಾ, ತೋರಿಸುತ್ತಾ ವಿವರ ಕೊಡುತ್ತಿದ್ದರು. ಎಲ್ಲವನ್ನೂ ಒಪ್ಪುತ್ತಾ ಕುಳಿತಿದ್ದೆ.

ಹದಿನೇಳು ಜನರ ಒಟ್ಟು ಕುಟುಂಬದಲ್ಲಿ ಅಲ್ಲಿಯೇ ತಲೆಮೇಲೆ ಸೆರಗು ಹೊದ್ದು ಓಡಾಡುತ್ತಿದ್ದ ಮನೆಯ ಹೆಂಗಸರಲ್ಲಿ ನನ್ನ ದೃಷ್ಟಿ ನೆಟ್ಟಿತ್ತು. ಕೇಳಿಯೇ ಬಿಟ್ಟೆ “ನೀವೂ ಮಾಡುತ್ತೀರಾ?” ತಕ್ಷಣ ಗಫೂರ್ “ಇಲ್ಲ ಅವರುಗಳಿಗೆ ಮನೆ ಕೆಲಸದಿಂದಲೇ ಪುರುಸೊತ್ತು ಸಿಕ್ಕೋಲ್ಲ. ಅದಕ್ಕೆ ಕಲಿಸಿಕೊಟ್ಟಿಲ್ಲ ಆದರೆ ಊರಿನ ಬೇರೆ ಹೆಣ್ಣು ಮಕ್ಕಳಿಗೆ ಈಗೀಗ ಕಲಿಸಿಕೊಡುತ್ತಿದ್ದೇವೆ” ಅಂದರು. ಹೌದು, “ಹಿತ್ತಲ ಗಿಡ ಮದ್ದಲ್ಲ” ಈ ನೆಲದ್ದೇ ಗಾದೆ ಮಾತು ತಾನೆ ಅಂದುಕೊಂಡು ಹೊರಬಿದ್ದ ನನ್ನ ಮನದ ಕೆರೆ ದಡದಲ್ಲಿ ಕಪ್ಪೆಗಳ ವಟವಟ ಸಾಗುತ್ತಲೇ ಇತ್ತು.